Part 09 ನಾನು ಶಿಕ್ಷಕನಾದುದು ಹೇಗೆ ಗೊತ್ತಾ?
ಅವರಿವರಿಂದ ಹತ್ತಿರದಲ್ಲಿ ಊಟ ಸಿಗುವ ಸುಲಭ ದರದ ಮನೆಹೋಟೇಲುಗಳ ಮಾಹಿತಿ ಸಂಗ್ರಹಿಸಿದ್ದ ನಾವಿಬ್ಬರು (ಜೊತೆಗಾರ ರಫಿ) ಬಹುಶಃ ಮೊದಲನೆ ದಿನ ಶಾಲೆಯಲ್ಲಿದ್ದ ಭಾಗಶಃ ದೃಷ್ಟಿಯುಳ್ಳ ವಿದ್ಯಾರ್ಥಿಯೊಬ್ಬನ (ಹೆಸರು ನೆನಪಿಲ್ಲ) ಸಹಾಯದಿಂದ ಶಾಲಾ ಕಟ್ಟಡದಿಂದ ಕೆಲವು ನೂರು ಮೀಟರುಗಳಷ್ಟು ದೂರದಲ್ಲಿದ್ದ ಮನೆಯೊಂದಕ್ಕೆ ಊಟಕ್ಕೆ ಹೋದೆವು. ಆ ಸುತ್ತಲಿನ ಸ್ಥಳದಲ್ಲಿ ಮನೆಯಲ್ಲಿದ್ದ ಮಹಿಳೆಯರು ಕುಟುಂಬದ ಸದಸ್ಯರ ನೆರವಿನಿಂದ ಮನೆಯಲ್ಲಿಯೇ ಮೆಸ್ ರೀತಿಯ ಹೋಟೇಲುಗಳನ್ನು ನಡೆಸುವ ವ್ಯವಸ್ಥೆ ಇತ್ತು. ಅದು ಊಟ ಮಾಡುವವರಿಗೆ ಮತ್ತು ಊಟ ನೀಡುವವರಿಗೆ ಇಬ್ಬರಿಗೂ ತುತ್ತಿನ ಚೀಲದ ಮಾರ್ಗವಾಗಿತ್ತೇನೋ ಎನಿಸುತ್ತದೆ ನನಗಿಂದು. ದಕ್ಷಿಣ ಕರ್ನಾಟಕದ ಸಾಂಪ್ರದಾಯಿಕ ಊಟವಾದ ಮುದ್ದೆ, ಅನ್ನ ಸಾರುಗಳು ಮಧ್ಯಾಹ್ನ ಮತ್ತು ರಾತ್ರಿಗೆ ನಮಗಲ್ಲಿ ಸಿಗುತ್ತಿದ್ದವು. ಇನ್ನು ಬೆಳಗಿನ ಉಪಹಾರದ ವ್ಯವಸ್ಥೆ ಬೇರೆಯದೇ ಆಗಿತ್ತು. ಒಂದು ಕೋಣೆಯ ಚಿಕ್ಕ ಹೋಟೆಲುಗಳು ಅಂಧರ ಶಾಲೆಯ ಸುತ್ತಲೂ ಅಲ್ಲಲ್ಲಿ ಸಿಗುತ್ತಿದ್ದವು. ಉತ್ತಮವಾದ ಹೋಟೇಲುಗಳು ಶಾಲೆಯ ಎದುರಿದ್ದ ಸಯ್ಯಾಜಿರಾವ್ ರಸ್ತೆಯಲ್ಲಿದ್ದರೂ ಅಲ್ಲಿನ ಊಟದ ದರಗಳ ವೆಚ್ಚವನ್ನು ಭರಿಸುವ ಶಕ್ತಿ ನಮಗಿರಲಿಲ್ಲ ಅಂದಿಗೆ. ಹಾಗಾಗಿ ಕೇವಲ 10 ರಿಂದ 12 ರೂಪಾಯಿಗಳಲ್ಲಿ ಹೊಟ್ಟೆ ತುಂಬುವಷ್ಟಲ್ಲದಿದ್ದರೂ ಹಸಿವನ್ನು ಸಮಾಧಾನಪಡಿಸುವಷ್ಟು ಅನ್ನಬ್ರಹ್ಮ ನಮಗಲ್ಲಿ ಸಿಗುತ್ತಿದ್ದ. ನಾವು ದಿನವೂ ಊಟ ಮಾಡುತ್ತಿದ್ದ ಮನೆಯೊಡತಿಗೆ ಮೂವ...