ನೊಳಂಬ-ಪಲ್ಲವರು - ರಾಜಕೀಯ ಇತಿಹಾಸ
ಪೀಠಿಕೆ :- ಕರ್ನಾಟಕದ ಈಗಿನ ಚಿತ್ರದುರ್ಗ ಜಿಲ್ಲೆ ಮತ್ತು ಅದರ ಸುತ್ತ ಮುತ್ತಣ ಪ್ರದೇಶವನ್ನೊಳಗೊಂಡಿದ್ದ ನೊಳಂಬಳಿಗೆ ಸಾಸಿರ ಎಂಬ ಪ್ರಾಂತ್ಯದ ಅಧಿಪತಿಗಳಾಗಿ 8 ನೆಯ ಶತಮಾನದಲ್ಲಿ ಆಳ್ವಿಕೆಯನ್ನಾರಂಭಿಸಿ , ಮುಂದಿನ ಎರಡು ಶತಮಾನಗಳಲ್ಲಿ ಪ್ರಾಬಲ್ಯಗಳಿಸಿ , ಈಗಿನ ಚಿತ್ರದುರ್ಗ , ತುಮಕೂರು , ಕೋಲಾರ , ಬೆಂಗಳೂರು , ಜಿಲ್ಲೆಗಳನ್ನೂ ನೆರೆಯ ಅನಂತಪುರ , ಚಿತ್ತೂರು , ಧರ್ಮಪುರಿ ಜಿಲ್ಲೆಗಳನ್ನೂ ಒಳಗೊಂಡಿದ್ದ ನೊಳಂಬವಾಡಿ 32000 ಪ್ರಾಂತ್ಯದ ಪ್ರಭುಗಳಾಗಿ 11 ನೆಯ ಶತಮಾನದ ಮಧ್ಯದವರೆಗೆ ಆಳ್ವಿಕೆ ನಡೆಸಿದ ಸಾಮಂತ ರಾಜರ ಮನೆತನ . ಶಾಸನಗಳು : ನೊಳಂಬರ ಶಾಸನಗಳು ಕರ್ನಾಟಕದ ಬಳ್ಳಾರಿ , ಚಿತ್ರದುರ್ಗ , ಕೋಲಾರ , ತುಮಕೂರು , ಬೆಂಗಳೂರು ಜಿಲ್ಲೆಗಳಲ್ಲೂ ಆಂಧ್ರಪ್ರದೇಶದ ಅನಂತಪುರ , ಚಿತ್ತೂರು ಜಿಲ್ಲೆಗಳಲ್ಲೂ ತಮಿಳು ನಾಡಿನ ಧರ್ಮಪುರಿ ಜಿಲ್ಲೆಯಲ್ಲೂ ದೊರೆತಿವೆ . ಇವರ ಶಾಸನಗಳು ಸು . 800-1100 ರ ಕಾಲಕ್ಕೆ ಸೇರಿದವು . ಇವರ ಶಾಸನಗಳ ಭಾಷೆ ಮುಖ್ಯವಾಗಿ ಸಮಕಾಲೀನ ಕನ್ನಡ . ಸಂಸ್ಕೃತ ಮತ್ತು ಕನ್ನಡ ಬೆರೆಕೆ ಇರುವ ಶಾಸನಗಳೂ ವಿರಳವಲ್ಲ . ಇವುಗಳಲ್ಲಿ ಗದ್ಯ , ಪದ್ಯ , ಮತ್ತು ಇವೆರಡರ ಮಿಶ್ರಣ ಇರುತ್ತವೆ . ಎಲ್ಲ ಶಾಸನಗಳೂ ಸಮಕಾಲೀನ ಕನ್ನಡ - ತೆಲುಗು ಲಿಪಿಯಲ್ಲಿ ಬರೆಯಲ್ಪಟ್ಟಿವೆ . ತಾವು ಪಲ್ಲವ ವಂಶಜರೆಂದು ನೊಳಂಬರು ಹೇ...