Part 09 ನಾನು ಶಿಕ್ಷಕನಾದುದು ಹೇಗೆ ಗೊತ್ತಾ?

   ಅವರಿವರಿಂದ ಹತ್ತಿರದಲ್ಲಿ ಊಟ ಸಿಗುವ ಸುಲಭ ದರದ ಮನೆಹೋಟೇಲುಗಳ ಮಾಹಿತಿ ಸಂಗ್ರಹಿಸಿದ್ದ ನಾವಿಬ್ಬರು (ಜೊತೆಗಾರ ರಫಿ) ಬಹುಶಃ ಮೊದಲನೆ ದಿನ ಶಾಲೆಯಲ್ಲಿದ್ದ ಭಾಗಶಃ ದೃಷ್ಟಿಯುಳ್ಳ ವಿದ್ಯಾರ್ಥಿಯೊಬ್ಬನ (ಹೆಸರು ನೆನಪಿಲ್ಲ) ಸಹಾಯದಿಂದ ಶಾಲಾ ಕಟ್ಟಡದಿಂದ ಕೆಲವು ನೂರು ಮೀಟರುಗಳಷ್ಟು ದೂರದಲ್ಲಿದ್ದ ಮನೆಯೊಂದಕ್ಕೆ ಊಟಕ್ಕೆ ಹೋದೆವು. ಆ ಸುತ್ತಲಿನ ಸ್ಥಳದಲ್ಲಿ ಮನೆಯಲ್ಲಿದ್ದ ಮಹಿಳೆಯರು ಕುಟುಂಬದ ಸದಸ್ಯರ ನೆರವಿನಿಂದ ಮನೆಯಲ್ಲಿಯೇ ಮೆಸ್‌ ರೀತಿಯ ಹೋಟೇಲುಗಳನ್ನು ನಡೆಸುವ ವ್ಯವಸ್ಥೆ ಇತ್ತು. ಅದು ಊಟ ಮಾಡುವವರಿಗೆ ಮತ್ತು ಊಟ ನೀಡುವವರಿಗೆ ಇಬ್ಬರಿಗೂ ತುತ್ತಿನ ಚೀಲದ ಮಾರ್ಗವಾಗಿತ್ತೇನೋ ಎನಿಸುತ್ತದೆ ನನಗಿಂದು. ದಕ್ಷಿಣ ಕರ್ನಾಟಕದ ಸಾಂಪ್ರದಾಯಿಕ ಊಟವಾದ ಮುದ್ದೆ, ಅನ್ನ ಸಾರುಗಳು ಮಧ್ಯಾಹ್ನ ಮತ್ತು ರಾತ್ರಿಗೆ ನಮಗಲ್ಲಿ ಸಿಗುತ್ತಿದ್ದವು. ಇನ್ನು ಬೆಳಗಿನ ಉಪಹಾರದ ವ್ಯವಸ್ಥೆ ಬೇರೆಯದೇ ಆಗಿತ್ತು. ಒಂದು ಕೋಣೆಯ ಚಿಕ್ಕ ಹೋಟೆಲುಗಳು ಅಂಧರ ಶಾಲೆಯ ಸುತ್ತಲೂ ಅಲ್ಲಲ್ಲಿ ಸಿಗುತ್ತಿದ್ದವು. ಉತ್ತಮವಾದ ಹೋಟೇಲುಗಳು ಶಾಲೆಯ ಎದುರಿದ್ದ ಸಯ್ಯಾಜಿರಾವ್‌ ರಸ್ತೆಯಲ್ಲಿದ್ದರೂ ಅಲ್ಲಿನ ಊಟದ ದರಗಳ ವೆಚ್ಚವನ್ನು ಭರಿಸುವ ಶಕ್ತಿ ನಮಗಿರಲಿಲ್ಲ ಅಂದಿಗೆ. ಹಾಗಾಗಿ ಕೇವಲ 10 ರಿಂದ 12 ರೂಪಾಯಿಗಳಲ್ಲಿ ಹೊಟ್ಟೆ ತುಂಬುವಷ್ಟಲ್ಲದಿದ್ದರೂ ಹಸಿವನ್ನು ಸಮಾಧಾನಪಡಿಸುವಷ್ಟು ಅನ್ನಬ್ರಹ್ಮ ನಮಗಲ್ಲಿ ಸಿಗುತ್ತಿದ್ದ. ನಾವು ದಿನವೂ ಊಟ ಮಾಡುತ್ತಿದ್ದ ಮನೆಯೊಡತಿಗೆ ಮೂವರು ಹೆಣ್ಣುಮಕ್ಕಳು ಮತ್ತು ಒಬ್ಬನೇ ಗಂಡುಮಗನೆಂಬುದು ನನ್ನ ಹರಕು ನೆನಪು. ಊಟಕ್ಕೆ ಹೋದಾಗ ಅವರಲ್ಲಿ ಒಬ್ಬರು ಮೌಖಿಕವಾಗಿ ನೀಡುತ್ತಿದ್ದ ಸೂಚನೆಗನುಸಾರವಾಗಿ ನಾವೇ ಊಟದ ಚಾಪೆಯ ಮೇಲೆ ಕುಳಿತುಕೊಳ್ಳಬೇಕಾಗುತ್ತಿತ್ತು. ಊಟಕ್ಕೆ ಕೂರುತ್ತಿದ್ದ ನಡುಮನೆ ಅಷ್ಟು ದೊಡ್ಡದಾಗಿರದ ಕಾರಣ ಒತ್ತೊತ್ತಾಗಿ ಕೂರುವುದು ಅನಿವಾರ್ಯವಾಗಿತ್ತು. ಕ್ರಿಕೆಟ್‌ ಚೆಂಡಿನ ಗಾತ್ರದ ರಾಗಿಮುದ್ದೆ, ಅದಕ್ಕೊಂದು ಸಾರು, ಮೇಲಿಷ್ಟು ಅನ್ನ ಇದಿಷ್ಟರ ಸೇವನೆಯ ನಂತರ ಕಿರಿದಾದ ಮನೆಯ ಮುಂದಿನ ಕಾಂಪೌಂಡಿನ ಮೂಲೆಯೊಂದರಲ್ಲಿ ಕೈತೊಳೆದರಾಯಿತು ನಮ್ಮ ಆ ಹೊತ್ತಿನ ಹಸಿವಿನ ಸಮಾಧಾನ. ಬಡಿಸುವ ಊಟವು ಕೆಲವೊಮ್ಮೆ ರುಚಿಯಾಗಿರುತ್ತಿತ್ತು, ಇನ್ನು ಕೆಲವೊಮ್ಮೆ ಅನಿವಾರ್ಯವಾಗಿ ರುಚಿಯಾಗಿದೆ ಎಂದುಕೊಳ್ಳಬೇಕಾಗುತ್ತಿತ್ತು. ಮೊದಲ ರಾತ್ರಿಯ, ಮದುವೆಯ ನಂತರದ್ದಲ್ಲ; ಮೈಸೂರಿನಲ್ಲಿ ಕಳೆದ ಮೊದಲ ರಾತ್ರಿ, ನಿದ್ದೆ ಹೇಗಾಯಿತೋ ತಿಳಿಯದು. ಹಿಂದಿನ ರಾತ್ರಿ ಬಸ್ಸಿನಲ್ಲಿ ನಿದ್ದೆಯಿಲ್ಲದೇ ಕಳೆದಿದ್ದು ಮತ್ತು ಇಡೀ ದಿನದ ಸುತ್ತಾಟದ ಆಯಾಸವೂ ಸೇರಿ ಒಳ್ಳೆಯ ನಿದ್ದೆ ಬಂದಿತ್ತು. ನೆಲದ ಮೇಲೆ ಹಾಸಲು ಮತ್ತು ಹೊದೆಯಲು ನಾವೇ ತಂದಿದ್ದ ಹೊದಿಕೆಗಳನ್ನು ಬಳಸಿದ್ದಾಯಿತು. ಮರುದಿನ ಬೆಳಿಗ್ಗೆ ಬೇಗನೇ ಏಳುವ ಧಾವಂತದ ನಡುವೆಯೂ ಮೊದಲ ದಿನದ ನಿದ್ದೆಯಾಗಿತ್ತು. ಒಂದರಿಂದ ಹತ್ತನೇ ತರಗತಿಯವರೆಗೆ ಓದುತ್ತಿದ್ದ ಸುಮಾರು 70 ಕ್ಕೂ ಹೆಚ್ಚು ಬಾಲಕರಿದ್ದ ಅಂಧರ ಶಾಲೆ ಅದು. ಅವರು ಏಳುವ ಮುನ್ನವೇ ನಾವೆದ್ದು, ಮಡಿಯಾಗಿ, ನಮ್ಮ ಬಟ್ಟೆಗಳೂ ಮಡಿಯಾಗಿ, ಉಪಹಾರಕ್ಕೆ ಹೋಗಿ ಬಂದು ಬೆಳಗಿನ 10ಕ್ಕೆ ತರಗತಿಗಳಿಗೆ ಹಾಜರಾಗಬೇಕಾಗುತ್ತಿತ್ತು. ಇಲ್ಲವಾದಲ್ಲಿ ಎಲ್ಲವೂ ಲೇಟು, ಅವಸರ! ಹಾಗಾಗಿ ಅನಿವಾರ್ಯವಾಗಿ ಬೆಳಗಿನ ಐದರ ಆಸು-ಪಾಸಿಗೆ ಏಳುವ ಅನಿವಾರ್ಯತೆ ನಮಗಿತ್ತು.

    ತರಬೇತಿ ಕೇಂದ್ರದಲ್ಲಿ ಇಬ್ಬರು ಉಪನ್ಯಾಸಕರಿದ್ದರು. ಆನಂದ್‌ ಸರ್‌ ಮತ್ತು ಗೀತಾ ಮೇಡಂ. ಅವರಲ್ಲಿ ಗೀತಾ ಮೇಡಂ ನಮ್ಮ ಹಿಂದಿನ ತಂಡದ ತರಬೇತಿಯಲ್ಲಿ ಪ್ರಶಿಕ್ಷಣ ಪಡೆದವರು. ಆದರೆ ಅದಾಗಲೇ ಅಂಧ ಬಾಲೆಯರ ಶಾಲೆಯಲ್ಲಿ ಬೋಧನೆ ಮಾಡಿದ ಅನುಭವ ಅವರಿಗಿತ್ತು. ಜೊತೆಗೆ ಸಾಮಾನ್ಯರಿಗೆ ನೀಡುವ B.Ed. ತರಬೇತಿಯೂ ಅದಕ್ಕೂ ಮೊದಲೇ ಮುಗಿದಿತ್ತು. ಆನಂದ್ ಸರ್‌ರವರದು ಅದೇ ತೆರನಾದ ಅರ್ಹತೆಯ ಹಿನ್ನೆಲೆ. ಇನ್ನು ಶಾಲೆಯ ಅಧೀಕ್ಷಕರಾಗಿದ್ದ ಶ್ರೀ H. ಬಲರಾಂ ಸರ್‌ರವರು ತರಬೇತಿಯ ಮುಖ್ಯಸ್ಥರಾಗಿದ್ದರು. ಹಿಂದಿನವರ್ಷವಷ್ಟೇ (2000-01) ಆರಂಭವಾಗಿದ್ದ ಆ ತರಬೇತಿ ಕೇಂದ್ರದ ಆಡಳಿತಾತ್ಮಕ ಜವಾಬ್ದಾರಿಯನ್ನು ತರಬೇತಿ ಕೇಂದ್ರವು ನಡೆಯುತ್ತಿದ್ದ ಶಾಲೆಯ ಅಧೀಕ್ಷಕರಾಗಿದ್ದ ಬಲರಾಂ ಸರ್‌ರವರಿಗೆ ವಹಿಸಲಾಗಿತ್ತು. ಅವರೂ ಸಹಾ ಅಂಧರ ಬೋಧನಾ ಕ್ಷೇತ್ರದಲ್ಲಿ ವಿಶೇಷ ತರಬೇತಿ ಪಡೆದಿದ್ದ ಮತ್ತು ಅಂಧರೊಂದಿಗೆ ದೀರ್ಘಕಾಲದ ಒಡನಾಟದ ಅನುಭವವುಳ್ಳವರು. ಮೃದು ಸ್ವಭಾವದ ಮಿತಭಾಷಿ.

   ಪದ್ಧತಿಯಂತೆ ಪರಸ್ಪರರ ಪರಿಚಯ, ಪಠ್ಯಕ್ರಮದ ಪರಿಚಯ, ತರಬೇತಿಯ ರೂಪು-ರೇಷೆಗಳ ಪರಿಚಯ, ದೂರ-ದೂರದ ಊರುಗಳಿಂದ ಬಂದಿದ್ದ ನಮಗೆ ಭರವಸೆಯ ಮತ್ತು ಪ್ರೋತ್ಸಾಹದ ನುಡಿಗಳ ನಂತರ ನಮ್ಮ ಮೊದಲ ದಿನದ ತರಬೇತಿಯ ಚಟುವಟಿಕೆಗಳು ಮುಗಿದಿದ್ದವು. ಕರ್ನಾಟಕದ ವಿವಿಧ ಭಾಗಗಳಿಂದ ಬಂದಿದ್ದ ಪ್ರಶಿಕ್ಷಣಾರ್ಥಿಗಳು ಅಲ್ಲಿದ್ದರು. ಬೀದರ್‌, ಕಲಬುರ್ಗಿ (ಅಂದಿನ ಗುಲ್ಬರ್ಗಾ), ಬಳ್ಳಾರಿ, ಚಿತ್ರದುರ್ಗ, ತುಮಕೂರು, ಹಾಸನ, ಧಾರವಾಡ, ಬೆಳಗಾವಿ, ಗದಗ ಮತ್ತು ಶಿವಮೊಗ್ಗಗಳಿಂದ ಬಂದವರಿದ್ದರೂ ಮೈಸೂರಿನವರದ್ದೇ ಸಿಂಹಪಾಲು.

   ಅಂದಿಗೆ ಸಾಮಾನ್ಯರಿಗೆ ನೀಡುತ್ತಿದ್ದ ಶಿಕ್ಷಕ ತರಬೇತಿಯಾಗಿದ್ದ Diploma in Education ಗೆ ಸಮಾನಾಂತರವಾಗಿ ಅಂಧ ಮಕ್ಕಳ ಶಿಕ್ಷಣಕ್ಕಾಗಿ ನುರಿತ ಶಿಕ್ಷಕರನ್ನು ಸಿದ್ಧಪಡಿಸುವ ಸಲುವಾಗಿ ಉತ್ತರ ಪ್ರದೇಶದ ಡೆಹ್ರಾಡೂನ್‌ನಲ್ಲಿದ್ದ National Institute of Visually Handicapped (NIVH) ಸಂಸ್ಥೆಯು, ಭಾರತ ಸರ್ಕಾರದ ಸ್ವಾಯತ್ತ ಸಂಸ್ಥೆಯಾಗಿದ್ದು, ವಿಶೇಷ ಚೇತನರ ಪುನಶ್ಚೇತನಕ್ಕಾಗಿ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸುವ  Rehabilitation Council of India, Delhi, ಅವರು ನಿಗದಿಗೊಳಿಸಿದ  ಪಠ್ಯಕ್ರಮವನ್ನು ಈ ತರಬೇತಿಗೆ ಅಳವಡಿಸಿ ರೂಪಿಸಿದ ತರಬೇತಿ ಅದಾಗಿತ್ತು. ಬೋಧನಾ ಕಲೆ, ತಂತ್ರಗಳು, ಶೈಕ್ಷಣಿಕ ಮನೋವಿಜ್ಞಾನ, ಕಲಿಕಾ ನ್ಯೂನತೆಗಳು ಮೊದಲಾದ ಸಿದ್ಧಾಂತದ ವಿಷಯಗಳಲ್ಲದೇ ಬ್ರೈಲ್‌ ಬೋಧನೆ, ಗಣಿತದ ಕಲಿಕೆ, ಚಲನ-ವಲನ ತರಬೇತಿ ಮತ್ತು ಬೋಧನಾ ತರಬೇತಿಗಳಂತಹ ಪ್ರಾಯೋಗಿಕ ವಿಷಯಗಳೂ ಪಠ್ಯಕ್ರಮದಲ್ಲಿದ್ದವು. ಒಟ್ಟು 1200 ಅಂಕಗಳನ್ನು ಒಳಗೊಂಡ ಸಮಗ್ರ ತರಬೇತಿ ಅದಾಗಿತ್ತು. ಅಂದಿಗೆ ಒಟ್ಟು ಹತ್ತು ತಿಂಗಳ ತರಬೇತಿ ಅವದಿಯಲ್ಲಿ ಎರಡು ಬಾರಿ ಬೋಧನಾ ತರಬೇತಿ ತರಗತಿಗಳ ಜೊತೆಗೆ, ಕ್ಷೇತ್ರಕಾರ್ಯ, ಪ್ರಕರಣ ಅಧ್ಯಯನ (Case study), ಪಾಠೋಪಕರನಗಳ ತಯಾರಿ, ದತ್ತಕಾರ್ಯಗಳು, ಪಾಠ ಯೋಜನೆಗಳ ಬರಹ ಹೀಗೆ ಹಲವು ಬೌದ್ಧಿಕ ಕಸರತ್ತುಗಳ ಚಟುವಟಿಕೆಗಳಿಂದ ಕೂಡಿದ ತರಬೇತಿ ಅದಾಗಿತ್ತು. ಪಾಠ ಯೋಜನೆಗಳನ್ನು ಸಾಮಾನ್ಯರ ಕೈಬರಹದಲ್ಲಿ ಬರೆಸುವ ಮತ್ತು ವಿವಿಧ ವಿಷಯಗಳ ಪಾಠಗಳ ಪರಿಕಲ್ಪನೆಗಳಿಗೆ ಪಾಠೋಪಕರಣಗಳನ್ನು ಸಿದ್ಧಪಡಿಸುವ ಸಮಸ್ಯೆಗಳು ನಮಗೆ ಬಹುವಾಗಿ ಕಾಡಿದ್ದವು. ಆದರೆ, ಎರಡು ತಿಂಗಳ ನಂತರ ಹಿಂದುಳಿದ ವರ್ಗಗಳ ವಸತಿನಿಲಯದಲ್ಲಿ ನನಗೆ ಉಚಿತ ಸೀಟು ಲಭ್ಯವಾದ ಕಾರಣ ಅಲ್ಲಿ ಪರಿಚಿತರಾದ ಇತರೆ ಸ್ನೇಹಿತರು ಮತ್ತು ಆಕಸ್ಮಿಕವಾಗಿ ರಸ್ತೆಯಲ್ಲಿ ಪರಿಚಯಕ್ಕೆ ಸಿಕ್ಕಿದ ಉತ್ತರ ಕನ್ನಡ ಜಿಲ್ಲೆಯ ಶ್ರೀ ದಿನೇಶ್‌ ಅವರ ನೆರವನ್ನು ನಾವೆಂದಿಗೂ ಮರೆಯುವಂತಿಲ್ಲ. ನನ್ನ ಮತ್ತು ರಫಿ ಇಬ್ಬರ ಪಾಠೋಪಕರಣಗಳನ್ನು ಕಿಂಚಿತ್ತು ಬೇಸರವಿಲ್ಲದೇ ತಯಾರಿಸಿಕೊಟ್ಟಿದ್ದರು ಅವರು. ಇನ್ನು ಸಿಟಿ ಬಸ್ಸಿನಲ್ಲಿ ಪರಿಚಿತರಾದ ಡಾ. ಪ್ರವೀಣ್‌ ಮತ್ತವರ ಸ್ನೇಹಿತ (ಅವರ ಹೆಸರು ನೆನಪಿಲ್ಲ) ನಮಗೆ ತರಬೇತಿಯ ನಂತರದ ದಿನಗಳಲ್ಲೂ ಸಹ ಸಹಾಯದ ಹಸ್ತ ನೀಡಿದ್ದರು. BCM ಹಾಸ್ಟೆಲ್ಲಿನಲ್ಲಿ ನಮಗೆ ಕೋಣೆಯ ಜಾಗವನ್ನು ಹುಡುಕಿಕೊಟ್ಟ ದಕ್ಷಿಣ ಕನ್ನಡ ಜಿಲ್ಲೆಯ ಲೋಕೇಶ್‌ ನಮ್ಮ ವೈಯುಕ್ತಿಕ ಕಾಳಜಿಯ ಜೊತೆಗೆ ಕೆಲವೊಮ್ಮೆ ನಮ್ಮ ಹಣದ ಜವಾಬ್ದಾರಿಯನ್ನೂ ತೆಗೆದುಕೊಳ್ಳುತ್ತಿದ್ದರು.

   ಇನ್ನು ತರಬೇತಿ ಅವಧಿಯ ಕೆಲವು ಮರೆಯದ ಘಟನೆಗಳೆಂದರೆ, ತಮಿಳುನಾಡು ಮತ್ತು ಬೆಂಗಳೂರಿನ ಕೆಲವು ಸಂಸ್ಥೆಗಳಿಗೆ ನೀಡಿದ ಶೈಕ್ಷಣಿಕ ಪ್ರವಾಸದ ಭೇಟಿಗಳು. ಮಾರ್ಚ್‌-ಎಪ್ರಿಲ್‌ ತಿಂಗಳ ಬೇಸಿಗೆಯಲ್ಲಿ ಕೊಯಮತ್ತೂರು, ಚೆನ್ನೈ  ಮತ್ತು ಮಧುರೈಗಳಿಗೆ ನೀಡಿದ ಭೇಟಿಯಲ್ಲಿ ಅಲ್ಲಿನ ಬಿಸಿಲಿನ ಅನುಭವದ ಜೊತೆಗೆ ವಿಶೇಷ ಶಿಕ್ಷಣ ಕ್ಷೇತ್ರದಲ್ಲಿ ಅಲ್ಲಿನ ಪ್ರಗತಿ ಮತ್ತು ತಂತ್ರಜ್ಞಾನದ ಬಳಕೆಗಳು ನಮ್ಮ ಅರಿವಿಗೆ ಬಂದವು. ಮಧುರೈನಲ್ಲಿನ ಮೀನಾಕ್ಷಿ ದೇವಾಲಯದ ನಿರ್ಮಾಣದ ಅಗಾಧತೆ ನನ್ನಲ್ಲಿ ಬೆರಗು ಮೂಡಿಸಿತ್ತು. ಕೊಯಮತ್ತೂರಿನ ಹೋಟೆಲೊಂದರಲ್ಲಿ ಮೊಟ್ಟಮೊದಲ ಸಲ ತಿಂದ ಪೇಪರ್‌ ದೋಸೆಯ ಸವಿಯಂತೂ ಇನ್ನೂ ನನ್ನ ನೆನಪಿನಲ್ಲುಳಿದಿದೆ. ಜೊತೆಗೆ ಚೆನ್ನೈನಲ್ಲಿದ್ದ ಸ್ನೇಕ್‌ ಪಾರ್ಕಿನ ಭೇಟಿಯ ನೆನಪು ಸಹಾ ಅಷ್ಟೇ ಹಸಿರಾಗಿದೆ.

   ನಾವು ತರಬೇತಿ ಮಾಡುತ್ತಿದ್ದ ವರ್ಷದಲ್ಲಿಯೇ ಮೈಸೂರಿನ ಅಂಧರ ಶಾಲೆಯ ಶತಮಾನೊತ್ಸವ ನಡೆದಿತ್ತು. ಅದರ ಸವಿನೆನಪಿಗೆ ಶಾಲೆಯ ಮುಂದಿನ ಜಾಗದಲ್ಲಿ ಬ್ರೈಲ್‌ ಲಿಪಿ ಅಭಿವೃದ್ಧಿಪಡಿಸಿದ ಮಹಾಪುರುಷ ಲೂಯಿ ಬ್ರೈಲ್‌ರವರ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಆ ಮೂರ್ತಿಯನ್ನು ಕೈಯಾರೆ ಸ್ಪರ್ಶಿಸಿ ಬ್ರೈಲ್‌ ಮಹಾಶಯನ ಮುಖಭಾವದ ಚಿತ್ರವನ್ನು ನನ್ನ ಮನಸ್ಸಿನಲ್ಲಿ ಮೂಡಿಸಿಕೊಂಡಿದ್ದೆ.

   ಮತ್ತೊಂದು ಘಟನೆಯೆಂದರೆ ಮೈಸೂರಿನಿಂದ ಚಿತ್ರದುರ್ಗಕ್ಕೆ KSRTC ಬಸ್ಸಿನಲ್ಲಿ ಪಯಣಿಸುವಾಗ ನಡೆದ ಘಟನೆ. ಸಾಮಾನ್ಯವಾಗಿ ವಾರಾಂತ್ಯದಂದು (ಶನಿವಾರ) ನಮಗೆ ಅರ್ಧ ದಿನದ ತರಗತಿಗಳು ಇರುತ್ತಿದ್ದ ಕಾರಣ ಆಗಾಗ್ಗೆ ನಾನು ಊರಿಗೆ ಹೋಗಿ ಬರುವ ಅಭ್ಯಾಸವಿತ್ತು. ಮೈಸೂರಿನಿಂದ ನೇರ ಚಿತ್ರದುರ್ಗಕ್ಕೆ ಹೋಗುವ ಮೈಸೂರು-ದಾವಣಗೆರೆ ಮಾರ್ಗದ ಬಸ್ಸಿನಲ್ಲಿ ಒಂದು ಶನಿವಾರ ಪಯಣಿಸುವಾಗ ಬಸ್ಸು ಚನ್ನರಾಯಪಟ್ಟಣದಲ್ಲಿ ಕೆಲಕಾಲದ ನಿಲುಗಡೆ ಪಡೆಯಿತು. ನಿಸರ್ಗ ಕರೆಗೆಂದು ಕೆಳಗಿಳಿಯಬಯಸಿದ ನಾನು ನನ್ನ ಬ್ಯಾಗನ್ನು ಬಸ್ಸಿನಲ್ಲಿಯೇ ಬಿಟ್ಟು ಪಕ್ಕದ ಪಯಣಿಗರಿಗೆ ನನ್ನ ಆತುರದ ಕಾರಣ ತಿಳಿಸಿ ಕಂಡಕ್ಟರ್‌ ಬಂದರೆ ನಾನು ಕೆಳಗಿಳಿದಿರುವುದನ್ನು ತಿಳಿಸಲು ಹೇಳಿ ಶೌಚಾಲಯದೆಡೆಗೆ ಅವರಿವರ ಸಹಾಯ ಪಡೆದು ತೆರಳಿದೆ. ಕಾರ್ಯ ಮುಗಿಸಿ ಬಂದಾಗ ನಾನು ಹತ್ತುವ ಬಸ್ಸು ಅಲ್ಲಿಯೇ ನಿಂತಿತ್ತು. ಆದರೆ ಅದರೊಳಕ್ಕೆ ನನ್ನನ್ನು ಹತ್ತಿಸಲು ಸಾರ್ವಜನಿಕರ ನೆರವು ಕೇಳಿದರೂ ಸಮಯಕ್ಕೆ ಸರಿಯಾಗಿ ಯಾರೂ ಸಹಕರಿಸದ ಕಾರಣ ಕೈಯಳತೆಯ ದೂರದಲ್ಲಿದ್ದ ಬಸ್ಸು ಹೊರಟು ಹೋಯಿತು. ನನ್ನ ಬ್ಯಾಗು ಅದರಲ್ಲಿಯೇ ಹೋಯಿತು! ನನ್ನ ಅಭ್ಯಾಸದ ನೋಟ್ಸ್‌ಗಳು, ಪಾಠ ಯೋಜನೆಯ ಪುಸ್ತಕಗಳು ಮತ್ತು ಅಂಧರು ಬಳಸುವ ಕೆಲವು ವಿಶೇಷ ಬರವಣಿಗೆಯ ಸಾಮಗ್ರಿಗಳು ಅದರಲ್ಲಿದ್ದವು. ಮುಂದೇನು ಮಾಡುವುದು ಎಂದು ತೋಚದ ನಾನು ದುಃಖ, ನೋವು, ಅಳು, ಅಲ್ಲಿನ ಸಾರ್ವಜನಿಕರ ಮೇಲೆ ಕೋಪ ಹೀಗೆ ಹಲವು ಭಾವನೆಗಳನ್ನು ಒಮ್ಮೆಲೇ ಅನುಭವಿಸಿದರೂ ಕೆಲ ಕ್ಷಣಗಳ ನಂತರ ಸಾವರಿಸಿಕೊಂಡು ಆಗಿರುವುದನ್ನು ನನ್ನ ಮನೆಗೆ ತಿಳಿಸಿ ಒಂದೊಮ್ಮೆ ನನ್ನ ಬ್ಯಾಗು ಚಿತ್ರದುರ್ಗಕ್ಕೆ ಸುರಕ್ಷಿತವಾಗಿ ತಲುಪಿದರೆ ಅದನ್ನು ತೆಗೆದುಕೊಳ್ಳುವಂತೆ ಹೇಳಲು ತೀರ್ಮಾನಿಸಿದೆ. ಆದರೆ ನನ್ನ ಮನೆಯಲ್ಲಿ ಫೋನ್‌ ಸೌಲಭ್ಯವಿರಲಿಲ್ಲ ಅಂದಿಗೆ. ನಾವು ವಾಸಿಸುತ್ತಿದ್ದ   ನೆರೆ ಮನೆಯವರ ದೂರವಾಣಿ ಸಂಖ್ಯೆಗಳಿದ್ದ  ಬ್ರೈಲ್‌ ಕೈಪಿಡಿಯೂ ಸಹಾ ಬಸ್ಸಿನಲ್ಲಿದ್ದ ಬ್ಯಾಗಿನಲ್ಲಿಯೇ ಇತ್ತು. ಆದರೆ ನಾವು ಹಿಂದೆ ವಾಸವಾಗಿದ್ದ ಊರಿನ ಗೆಳೆಯನೊಬ್ಬನ ಮನೆಯ ಸಂಖ್ಯೆ ನನಗೆ ಚೆನ್ನಾಗಿ ನೆನಪಿತ್ತು. ಕೂಡಲೇ ಅವರ ಮನೆಗೆ ಫೋನ್‌ ಮಾಡಿದೆ, ಸ್ನೇಹಿತನಿರಲಿಲ್ಲ; ಅವರ ಮನೆಯವರಿಗೆ ವಿಷಯ ತಿಳಿಸಿ, ನಮ್ಮ ಮನೆಗೆ ವಿಷಯ ಮುಟ್ಟಿಸಲು ಹೇಳಿ ಸ್ವಲ್ಪ ಸಮಾಧಾನದ ನಿಟ್ಟುಸಿರು ಬಿಟ್ಟಿದ್ದೆ. ಅಂದಿನ ಕಾಲಕ್ಕೆ ಕೇವಲ ಸ್ಥಿರ ದೂರವಾಣಿಗಳು ಇದ್ದುದರಿಂದ ಮತ್ತು ಚನ್ನರಾಯಪಟ್ಟಣದಿಂದ ಚಿತ್ರದುರ್ಗಕ್ಕೆ STD ಕರೆಗಳನ್ನು ಮಾಡಬೇಕಾದ ಕಾರಣ ನನ್ನ ಬಳಿ ಇದ್ದ ಕೆಲವೇ ರುಪಾಯಿಗಳು ಕೇವಲ ದೂರವಾಣಿ ಕರೆ ಮಾಡುವುದಕ್ಕೇ ಖಾಲಿಯಾಗಿದ್ದವು. ಇನ್ನು ಅಲ್ಲಿಂದ ಚಿತ್ರದುರ್ಗಕ್ಕೆ ಹೋಗುವ ಬಸ್ಸುಗಳ ಬಗ್ಗೆ ವಿಚಾರಿಸಿದಾಗ ಮರುದಿನ ಬೆಳಿಗ್ಗೆಯವರೆಗೂ ಚಿತ್ರದುರ್ಗಕ್ಕೆ ನೇರ ಬಸ್ಸುಗಳಿಲ್ಲವೆಂತಲೂ, ಹುಳಿಯಾರಕ್ಕೆ ಹೋಗಿ ಅಲ್ಲಿಂದ ಖಾಸಗಿ ಬಸ್ಸಿನಲ್ಲಿ ಚಿತ್ರದುರ್ಗಕ್ಕೆ ಹೋಗಬಹುದೆಂದು ಮಾಹಿತಿ ಲಭ್ಯವಾಯಿತು. ಆದರೆ ನನ್ನ ಬಳಿಯಲ್ಲಿದ್ದ ಸ್ವಲ್ಪ ಹಣವೂ ದೂರವಾಣಿ ಕರೆ ಮಾಡಲು ಖರ್ಚಾಗಿದ್ದನ್ನು ಮೊದಲೇ ಹೇಳಿದ್ದೇನೆ. ಇನ್ನು ಅಂದು ರಾತ್ರಿ ಕಳೆದು ಬೆಳಗಾಗುವ ತನಕ ಚನ್ನರಾಯಪಟ್ಟಣದ ಬಸ್‌ಸ್ಟ್ಯಾಂಡಿನಲ್ಲಿ ಕಾಲ ಕಳೆಯುವುದಷ್ಟೇ ನನಗುಳಿದ ದಾರಿ, ಅದೂ ಹೊಟ್ಟೆಗಿಲ್ಲದೇ ಮತ್ತು ರಾತ್ರಿ ಮಲಗಲು ಜಾಗವಿಲ್ಲದೇ! ಇಷ್ಟಾಗುವ ಹೊತ್ತಿಗೆ ಸಂಜೆಯ ಆರು ಮೀರಿತ್ತು. ಆ ಸಂಧಿಗ್ದ ಸಮಯದಲ್ಲಿ ನನ್ನ ತಳಮಳ ಕಂಡು ನನಗೆ ಭರವಸೆಯ ಹಸ್ತ ನೀಡಿದವರು ಅದುವರೆಗೆ ದೂರವಾಣಿ ಕರೆ ಮಾಡಲು ಸಹಾಯ ಮಾಡಿದ್ದ ಹತ್ತಿರದ ಹಳ್ಳಿಯ ITI ಓದುತ್ತಿದ್ದ ವಿದ್ಯಾರ್ತಿಯೊಬ್ಬ. ಅವನ ಆಹ್ವಾನದ ಮೇರೆಗೆ ಆ ಹುಡುಗನ ಜೊತೆಯಲ್ಲಿ ಅವರ ಊರಿನ ಬಸ್ಸನ್ನೇರಿ ಅಡ್ಡಹಾದಿಯಲ್ಲಿ ಇಳಿದು, ಹೊಲಗಳ ನಡುವಣದ ಕಾಲುದಾರಿಯಲ್ಲಿ ನಡೆದು ಅವರ ಮನೆ ತಲುಪಿದಾಗ ರಾತ್ರಿ ಏಳನ್ನು ದಾಟಿತ್ತು. ಅಪರಿಚಿತನಾದ ನನಗೆ ರಾತ್ರಿಯ ಊಟ ಮತ್ತು ವಸತಿಯ ಜೊತೆಗೆ ಮರುದಿನ ಬೆಳಿಗ್ಗೆ ಉಪಹಾರವಾದ ನಂತರ ಪುನಃ ಚನ್ನರಾಯಪಟ್ಟಣಕ್ಕೆ ಕರೆತಂದು ನನ್ನನ್ನು ಚಿತ್ರದುರ್ಗಕ್ಕೆ ಹೋಗುವ ಬಸ್ಸನ್ನು ಹತ್ತಿಸಿದ ಆ ಹುಡುಗ ಕೈಗೆ ನೂರರ ನೋಟೊಂದನ್ನು ಕೊಟ್ಟು ಅದನ್ನು ಖರ್ಚಿಗೆಂದು ಇಟ್ಟುಕೊಳ್ಳಲು ಹೇಳಿದಾಗ ನನಗೆ ಕಣ್ಣಂಚಲ್ಲಿ ನೀರು ಬರುವುದೊಂದೇ ಬಾಕಿಯಿತ್ತು. ಎಷ್ಟು ಬೇಡವೆಂದರೂ ಹಣವನ್ನು ಕೈಗಿತ್ತ ಆತ ಬಸ್‌ ಹೊರಡುವ ತನಕ ಜೊತೆಯಲ್ಲಿದ್ದು ವಿದಾಯ ಹೇಳಿ ಕಳುಹಿಸಿದ್ದ. ಕೈತಪ್ಪಿ ಹೋಗಿದ್ದ ನನ್ನ ಬ್ಯಾಗ್‌ ಅದೇ ದಿನ ಸಂಜೆ ಚಿತ್ರದುರ್ಗದ ಬಸ್‌ಸ್ಟ್ಯಾಂಡಿಗೆ ಸಮಯಕ್ಕೆ ಸರಿಯಾಗಿ ಬಂದಿದ್ದ ನನ್ನ ತಂದೆ ಮತ್ತು ತಂಗಿಯರ ಕೈಗೆ ಅದೃಷ್ಟವಶಾತ್‌ ದೊರೆತ ಸುದ್ದಿ ಹಿಂದಿನ ದಿನವೇ ನಾನು ಉಳಿದುಕೊಂಡಿದ್ದ ಮನೆಯ ದೂರವಾಣಿಗೆ ಊರಿನಿಂದ ಬಂದಿದ್ದ ಕರೆ ತಿಳಿಸಿದ್ದರಿಂದ ನನ್ನ ಮನಸ್ಸಿನ ಭಾರವನ್ನು ಕಡಿಮೆ ಮಾಡಿತ್ತು. ಆದರೆ ಇಂದಿಗೆ ಅಂದು ಸಹಾಯ ಮಾಡಿದ ಆ ಹುಡುಗ, ಅವನ ಊರು, ಮನೆಯವರ ವಿವರಗಳೊಂದೂ ನನಗೆ ನೆನಪಿಲ್ಲದಿದ್ದರೂ ಅವರ ಬಗೆಗಿನ ಕೃತಜ್ಞತಾ ಭಾವವಂತೂ ಇನ್ನೂ ಹಸಿಯಾಗಿದೆ.

   ಶೈಕ್ಷಣಿಕ ಪ್ರವಾಸ ಮುಗಿಸಿ ಒಂದೆರಡು ದಿನಗಳ ರಜೆಯ ಮೇಲೆ ಸ್ವಗ್ರಾಮಗಳಿಗೆ ಹೋಗಿ ಬಂದ ನಾವು ತರಬೇತಿಯ ಅಂತಿಮ ಪರೀಕ್ಷೆಗಳಿಗೆ ತಯಾರಿ ನಡೆಸಿದೆವು. ಪರೀಕ್ಷೆ ಬರೆಯಲು ಬರವಣಿಗೆ ಸಹಾಯಕರನ್ನು ಹುಡುಕುವುದು ನಮಗೆ ಮತ್ತೊಮ್ಮೆ ಸವಾಲಿನ ಕೆಲಸವಾಗಿತ್ತು. ಆದರೆ ನಮ್ಮ ವಸತಿ ನಿಲಯದಲ್ಲೇ ಇದ್ದ ಲಕ್ಷ್ಮಣನೆಂಬ ಪಿ.ಯೂ.ಸಿ ವಿಜ್ಞಾನದ ವಿದ್ಯಾರ್ಥಿ ನನಗೂ ಮತ್ತು ಮೈಸೂರಿನಲ್ಲಿದ್ದ ನಮ್ಮೂರಿನ ಪರಿಚಿತರ ಮಗನೊಬ್ಬ ರಫಿಗೂ ಪರೀಕ್ಷೆ ಬರೆಯಲು ಒಪ್ಪಿಕೊಳ್ಳುವ ಮೂಲಕ ಆ ಸವಾಲಿಗೆ ಉತ್ತರವೊಂದು ದೊರೆತಂತಾಗಿತ್ತು. ಪರೀಕ್ಷೆಗೆ ಸಾಕಷ್ಟು ಪೂರ್ವತಯಾರಿ ನಡೆಸಿದ್ದ ನಾವು ಉತ್ತಮವಾಗಿ ಅವುಗಳನ್ನು ಎದುರಿಸಿದ್ದೆವು.

   ಪರೀಕ್ಷೆಯ ಕೊನೆಯ ದಿನ ತರಬೇತಿ ಮುಖ್ಯಸ್ಥರಾದ ಶ್ರೀ ಬಲರಾಂ ಸರ್‌ರವರು ನಮಗೆಲ್ಲಾ ಹತ್ತಿರದ ಹೋಟೆಲೊಂದರಲ್ಲಿ ಸಂಜೆಯ ಉಪಹಾರ ಮತ್ತು ಚಹಾದ ವ್ಯವಸ್ಥೆ ಮಾಡಿ ಅವರ ಹೃದಯ ಶ್ರೀಮಂತಿಕೆ ಮೆರೆದಿದ್ದರು. ನಂತರದ ಕೆಲಸ ಮೈಸೂರಿಗೆ ವಿದಾಯ ಹೇಳುವುದು. ತರಬೇತಿ ಅವಧಿಯಲ್ಲಿ ಕೆಲವು ಅಹಿತಕರ ಘಟನೆಗಳು ನಡೆದಿದ್ದರೂ ಅವುಗಳ ಪ್ರಸ್ತಾಪ ಇಲ್ಲಿ ಅಪ್ರಸ್ತುತ ಮತ್ತು ಅವುಗಳ ನೆನಪೂ ಸಹ ಇಂದಿಗೆ ಸರಿಯಾಗಿ ಉಳಿದಿಲ್ಲ. ಆದರೆ, ಹೊಸದಾಗಿ ಬ್ರೈಲ್‌ ಲಿಪಿ ಓದಲು ಮತ್ತು ಬರೆಯಲು ಕಲಿತಿದ್ದ ನಾನು ತರಬೇತಿ ಶಿಕ್ಷಕರು ನೋಟ್ಸ್‌ ಹೇಳುವಾಗ ಬರೆದುಕೊಳ್ಳುವ ವೇಗ ಸಾಲದೇ ಒದ್ದಾಡಿದ್ದು, BCM ಹಾಸ್ಟೆಲ್‌ ದೊರೆತ ನಂತರ ಬೆಳಿಗ್ಗೆ ಮತ್ತು ಸಂಜೆ ಎರೆಡೆರಡು ಬಸ್‌ ಬದಲಿಸಿ ತರಬೇತಿ ಕೇಂದ್ರ ಮತ್ತು ಹಾಸ್ಟೆಲ್ಲಿಗೆ ಓಡಾಡುವ ಕಷ್ಟ, ಬ್ರೈಲ್‌ ನೋಟ್ಸ್‌ ಓದುವಾಗ ಓದುವ ವೇಗ ಸಾಲದೇ ಓದಿದ್ದು ನೆನಪಿನಲ್ಲಿ ಉಳಿಯುತ್ತಿರದುದು ಹೀಗೆ ಹಲವು ಸಮಸ್ಯೆಗಳಿದ್ದರೂ ಎಲ್ಲವನ್ನೂ ಇಷ್ಟಪಟ್ಟು ಸಹಿಸಿದ್ದೆ.

   ಮೈಸೂರಿನಿಂದ ಹೊರಡುವ ದಿನ ಬೆಳಿಗ್ಗೆ ಬಸ್‌ಸ್ಟ್ಯಾಂಡಿಗೆ ಡಾ. ಪ್ರವೀಣ್‌ ಬಂದಿದ್ದರು. ಊರಿನಿಂದ ಬಂದಿದ್ದ ರಫಿಯವರ ತಮ್ಮನೂ ಜೊತೆಯಲ್ಲಿದ್ದರು. ಬೆಂಗಳೂರಿನ ಮೂಲಕ ನಮ್ಮ ಸ್ವಗ್ರಾಮಗಳಿಗೆ ಹೋಗಲು ತೀರ್ಮಾನಿಸಿದ ನಾವು ಪ್ರವೀಣ್‌ರವರಿಂದ ಬೀಳ್ಕೊಂಡು ಮೈಸೂರಿಗೆ ವಿದಾಯ ಹೇಳಿದ್ದೆವು. ನಂತರದ ಕೆಲವು ದಿನಗಳಲ್ಲಿ ನಮ್ಮ ಫಲಿತಾಂಶವೂ ಪ್ರಕಟಗೊಂಡಿತ್ತು. ನನಗೆ ಅತ್ಯಂತ ಖುಷಿಯ ದಿನವದು; ಕಾರಣ ಒಟ್ಟು 23 ಪ್ರಶಿಕ್ಷಣಾರ್ಥಿಗಳಲ್ಲಿ (ನಾಲ್ವರು ದೃಷ್ಟಿಯುಳ್ಳವರೂ ಸೇರಿದಂತೆ) ನಾನೇ ಮೊದಲ ಸ್ಥಾನವನ್ನು ಪಡೆದಿದ್ದೆ. ಈ ಫಲಿತಾಂಶದ ಹಿಂದೆ ನನ್ನ ಹತ್ತು ತಿಂಗಳ ಶ್ರಮ, ಮನೆಯವರ ಆರ್ಥಿಕ ಮತ್ತು ನೈತಿಕ ಬೆಂಬಲ, ಸ್ನೇಹಿತರ ನೆರವು, ತರಬೇತಿ ಕೇಂದ್ರದ ಗುರುಗಳ ಮಾರ್ಗದರ್ಶನಗಳ ಜೊತೆಗೆ ದೈವೆಚ್ಛೆಯೂ ಸೇರಿತ್ತು ಎಂಬುದು ಇಂದಿಗೆ ನನ್ನ ಅಭಿಪ್ರಾಯ.

   ತರಬೇತಿ ಮುಗಿಸಿದ ನಂತರದಲ್ಲಿ ನಾನು ಕೆಲಸಕ್ಕಾಗಿ ಪರಿತಪಿಸಿದ್ದು ನನ್ನ ಜೀವನದ ಮತ್ತೊಂದು ಮರೆಯಲಾಗದ ಅಧ್ಯಾಯ. ಅದರ ವಿವರಣೆ ಮುಂದಿನ ದಿನಗಳಲ್ಲಿ. . .

(ಮುಂದುವರಿಯುತ್ತದೆ) 

Comments

  1. Happiness is behind the every hard try

    ReplyDelete
  2. ನಿಮಗೆ ಬಸ್ ಹತ್ತೋದಕ್ಕೆ ಸಹಾಯ ಮಾಡದ ಜನರನ್ನು ದ್ವೇಷಿಸಬೇಕೋ, ಅಥವಾ ನಿಮಗೆ ದೇವರ ರೂಪದಲ್ಲಿದ್ದ ಆ ಅಪರಿಚಿತ ಹುಡುಗನನ್ನು ಪರಿಚಯ ಮಾಡಿಕೊಟ್ಟ ಅವರಿಗೆ ಕೃತಜ್ಞತೆ ಹೇಳಬೇಕೋ ಒಂದೂ ತಿಳಿಯಲಿಲ್ಲ ಸರ್. ಕಷ್ಟದಲ್ಲಿಯೂ ಇಷ್ಟಪಟ್ಟು ಓದಿದ ನೀವು ಕಾಲೇಜಿಗೆ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದು ನಮಗೆಲ್ಲಾ ಸ್ಪೂರ್ತಿ ಸರ್🙏🙏🙏

    ReplyDelete
    Replies
    1. ಅಂತಹ ಜನಗಳಿಂದ ನನಗೆ ಸಹನೆಯ ಗುಣ ವೃದ್ಧಿಯಾಗಿದೆ, ಅವರನ್ನೇಕೆ ದ್ವೇಷಿಸಲಿ?

      Delete
  3. ನೀವು ಅಷ್ಟೇಲ್ಲಾ ಸಮಸ್ಯೆ ಗಳನ್ನು ಎದುರಿಸಿ ಪ್ರಥಮ ಸ್ಥಾನ ಪಡೆದಿದ್ದೆ ನಮಗೆ ಸ್ಪೂರ್ತಿ ಸರ್ ನೀವು

    ReplyDelete

Post a Comment

Popular posts from this blog

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಸಾಹಿತ್ಯಾಧಾರಗಳು - Literary Sources