ಪ್ರಾಮಾಣಿಕತೆ
ಅದೊಂದು ದಿನ ಸಂಜೆ ಎಂದಿನಂತೆ ನಾನು ಮತ್ತು ಹಿತೇಶ್ ಬೈಕನ್ನೇರಿ ಹೊರಟೆವು. ಡಬಲ್ ರಸ್ತೆಯ ದೀಪಕ್ ಸ್ಟೋರ್‌ನಲ್ಲಿ ಒಂದೆರಡು ದಿನನಿತ್ಯದ ಬಳಕೆಗೆಂದು ಕೆಲ ವಸ್ತುಗಳನ್ನು ಕೊಳ್ಳಬೇಕಾಗಿದ್ದುದರಿಂದ ಗಾಡಿ ಅತ್ತ ತಿರುಗಿತ್ತು. ಸಂಜೆಯಾದ್ದರಿಂದ ಅಂಗಡಿಯಲ್ಲಿ ಐದಾರು ಜನರಿದ್ದರು; ಜೊತೆಗೆ ಒಂದೆರಡು ಚಿಕ್ಕಮಕ್ಕಳು. ತೀರಾ ದೊಡ್ಡದಲ್ಲದ ಅಂಗಡಿಯಲ್ಲಿ ಅಷ್ಟು ಜನರೇ ಅಧಿಕವಾಗಿ ಕಾಣಿಸುತ್ತಿದ್ದರು. ದಿನಸಿಯ ವಸ್ತುಗಳನ್ನುಳಿದು ಕರ್ಚೀಫಿನಿಂದ ಕತ್ತರಿಯವರೆಗೆ, ಗುಂಡುಪಿನ್ನಿನಿಂದ ಪೆನ್ನಿನವರೆಗೆ, ಬೆಳ್ಟಿನಿಂದ ಬೀಗದವರೆಗೆ ಹೀಗೆ ಅವರವರಿಗೆ ಬೇಕಾದ ವಸ್ತುಗಳು ಅಲ್ಲಿ ಲಭ್ಯ. ಹಾಗಾಗಿ ಅಂಗಡಿ ಚಿಕ್ಕದಾಗಿದ್ದರೂ ಒಂದಿಷ್ಟೂ ಜಾಗವನ್ನು ಖಾಲಿ ಬಿಡದೇ ಮಾರಾಟದ ವಸ್ತುಗಳು ಕೊಳ್ಳುವವರ ಕಣ್ಣಿಗೆ ಕಾಣುವಂತೆ ಇಲ್ಲವೇ ಅಂಗಡಿಯವರ ಕೈಗೆ ಸಿಗುವಂತೆ ಪೇರಿಸಿರುವುದರಿಂದ ಯಾವ ವಸ್ತುಗಳು ಎಲ್ಲಿರುತ್ತವೆ ಎಂಬುದನ್ನು ಕೆಲಕ್ಷಣಗಳವರೆಗಾದರೂ ಹುಡುಕದೇ ಯಾವ ವಸ್ತುಗಳೂ ಸಿಗುತ್ತಿರಲಿಲ್ಲ. ಗ್ರಾಹಕರಿಗಲ್ಲ; ಸ್ವತಃ ಅಂಗಡಿಯವರಿಗೂ. ಇವರದೇ ದೊಡ್ಡದಾದ ಅಂಗಡಿಯೊಂದು ಊರಾಚೆಯ ರಸ್ತೆಯ ಪಕ್ಕದಲ್ಲಿ ಡೊಡ್ಡನಗರಿಗಳಂತಹ ಮಾಲ್ ಗಾತ್ರದಲ್ಲದಿದ್ದರೂ ಗಜೇಂದ್ರಗಡದ ಮಟ್ಟಿಗೆ ಸಾಕಾಗುವಷ್ಟು ಅಂಗಡಿಯೊಂದು ವ್ಯಾಪಾರದ ವಿಸ್ತರಣೆಯ ಭಾಗವಾಗಿ ತಲೆಯೆತ್ತಿದ್ದರೂ ಅಲ್ಲಿಗೆ ಹೋಗುವ ಸೋಮಾರಿತನದಿಂದಾಗಿ ನಾವು ಊರೊಳಗಿನ ಕಿಷ್ಕಿಂಧೆಯಂತಹ ಅಂಗಡಿಯೊಳಗೆ ನುಗ್ಗಿದ್ದೆವು. ನಮಗೆ ಬ...