ವಿಜಯನಗರದ ಕಾಲದಲ್ಲಿ ನಗರೀಕರಣ; ರಾಜಧಾನಿಯ ಸುತ್ತಲಿನ ನಗರೀಕರಣದ ಕುರಿತಂತೆ.
ವಿಜಯನಗರ ಪಟ್ಟಣ ಮತ್ತು ಅದರ ಉಪನಗರಗಳು ಹಂಪಿ ಸಂಪುಟ : ಭಾಗ ೩ – ಕೌಶಲ : ೨೯ . ದಕ್ಷಿಣ ಭಾರತದ ಮಧ್ಯಕಾಲೀನ ಇತಿಹಾಸದಲ್ಲಿ ವಿಜಯನಗರ ಸಾಮ್ರಾಜ್ಯವು ಪ್ರಸಿದ್ಧಿಯನ್ನು ಪಡೆದ ಅರಸು ಮನೆತನಗಳಲ್ಲಿ ಒಂದು . ಮಧ್ಯಕಾಲೀನ ಐತಿಹಾಸಿಕ ನೆಲೆಗಳಾದ ಚಂಪಾನೀ ಮತ್ತು ಫತೇಪು ಸಿಕ್ರಿ ( ಅಗ್ರಾ ) ಸಹ ವಿಜಯನಗರ ಸಾಮ್ರಾಜ್ಯದ ಸಮಕಾಲೀನ ನೆಲೆಗಳಾಗಿದ್ದರೂ ವಿಜಯನಗರ ಸಾಮ್ರಾಜ್ಯವು ತನ್ನದೇ ಆದ ವೈಶಿಷ್ಟ್ಯಗಳನ್ನು ಹೊಂದಿರುವುದು ಗಮನಾರ್ಹ . ಬಳ್ಳಾರಿ ಜಿಲ್ಲೆಯಲ್ಲಿರುವ ಹಂಪಿಯನ್ನು ರಾಜಧಾನಿಯನ್ನಾಗಿ ಮಾಡಿಕೊಂಡಿದ್ದ ವಿಜಯನಗರದ ಅರಸರು ಇಡೀ ದಕ್ಷಿಣ ಭಾರತವನ್ನೇ ಸುಮಾರು ಮೂರು ಶತಮಾನಗಳಿಗೂ ಅಧಿಕವಾಗಿ ತಮ್ಮ ಅಧೀನದಲ್ಲಿಟ್ಟುಕೊಂಡಿದ್ದರು . ಪ್ರಾಚೀನ ಭಾರತದ ಅರಸು ಮನೆತನಗಳು ತಮ್ಮ ರಾಜ್ಯಗಳನ್ನು ಶ್ರೇಣೀಕೃತ ವಿಭಾಗಗಳನ್ನಾಗಿ ವಿಭಜಿಸಿ ಆಡಳಿತವನ್ನು ನಡೆಸಿದಂತೆಯೇ ವಿಜಯನಗರದ ಅರಸರು ಸಹಾ ತಮ್ಮ ರಾಜ್ಯವನ್ನು ವಿಭಾಗಿಸಿ ಆ ಳಿದುದು ಇತಿಹಾಸಕಾರರು ಬಲ್ಲ ವಿಷಯವಷ್ಟೆ . ಇಂತಹ ಶ್ರೇಣೀಕೃತ ವಿಭಾಗದ ಒಂದು ವಿಭಾಗವೇ ನಗರ ಅಥವಾ ಪಟ್ಟಣ . ಈ ಲೇಖನದಲ್ಲಿ ವಿಜಯನಗರ ಸಾಮ್ರಾಜ್ಯದ ರಾಜಧಾನಿಯನ್ನು ಮತ್ತು ಅದರೊಂದಿಗೆ ಸಾವಯವ್ಯ ಸಂಬಂಧಗಳನ್ನು ಹೊಂದಿದ್ದಂತಹ ಉಪನಗರಗಳನ್ನು ಕುರಿತು ಚರ್ಚಿಸಲಾಗುವುದು . ...