ಕರ್ನಾಟಕದಲ್ಲಿ ಸಶಸ್ತ್ರ ಬಂಡಾಯಗಳು [ಬ್ರಿಟಿಷರ ವಿರುದ್ಧ: 1800-1859]
ಭಾರತದ ಸ್ವಾತಂತ್ರ್ಯ ಹೋರಾಟದ ಚಳವಳಿಯು ದೇಶದ ಉದ್ದಗಲಕ್ಕೂ ಹೋರಾಟದ ಜ್ವಾಲೆಯನ್ನು ಹರಡಿತ್ತು. ಅರ್ವಾಚೀನ ಕಾಲದಿಂದಲೂ ಭಾರತದ ತನುಜಾತೆಯಾಗಿರುವ ಕರ್ನಾಟಕವು ಈ ಜ್ವಾಲೆಯಿಂದ ಹೊರಗುಳಿಯಲು ಹೇಗೆ ತಾನೇ ಸಾಧ್ಯ? ಹೊಸ ಜಲಮಾರ್ಗದ ಅನ್ವೇಷಣೆಯ ನಂತರ ಯೂರೋಪಿಯನ್ನರು ಭಾರತದ ನೆಲಕ್ಕೆ ಮೊದಲು ಕಾಲಿಟ್ಟದ್ದು ದಕ್ಷಿಣ ಭಾರತದಲ್ಲಿಯೇ! ಅದರಲ್ಲೂ “ದೇವರ ನಾಡು” ಎಂದೇ ಹೆಸರಾಗಿರುವ ಕೇರಳದ ಕಲ್ಲಿಕೋಟೆಯಲ್ಲಿ. ಅಲ್ಲಿಂದ ಅವರು ಕರ್ನಾಟಕ ಪ್ರವೇಶಿಸುವುದು ಬಹಳ ತಡವೇನೂ ಆಗಲಿಲ್ಲ. ಹೀಗೆ ಕರ್ನಾಟಕದ ನೆಲದ ಮೇಲೆ ದಾಳಿಯಿಡಲು ಬಂದ ಯೂರೋಪಿಯನ್ನರನ್ನು [ಪೋರ್ಚುಗೀಸರು] ನಮ್ಮ ನೆಲದಲ್ಲಿ ಮೊದಲು ಎದುರಿಸಿದವರು ಕಡಲತಡಿಯಲ್ಲಿನ ಉಲ್ಲಾಳ ಎಂಬ ಸಣ್ಣ ನಾಡನ್ನು ಆಳುತ್ತಿದ್ದ ರಾಣಿ ಅಬ್ಬಕ್ಕ ಎಂಬುದು ಇತಿಹಾಸದ ಹಿಮದಲ್ಲಿ ಹೂತಿರುವ ಸತ್ಯ. ನಂಬಿಕೆದ್ರೋಹಕ್ಕೆ ಒಳಗಾಗಿ ದ್ರೋಹಿ ಪೋರ್ಚುಗೀಸರಿಂದ ಸೋತರೂ ಅಬ್ಬಕ್ಕನ ಹೆಸರು ಇತಿಹಾಸದಲ್ಲಿ ಅಜರಾಮರ! ಇನ್ನು ಮುಂದಿನ ಗಣನೀಯ ಪ್ರತಿಭಟನೆ ಎದುರಾದದ್ದು ಬ್ರಿಟಿಷರಿಗೆ. ಫ್ರೆಂಚರನ್ನು ಮೂಲೆಗೊತ್ತಿ ದಕ್ಷಿಣದಲ್ಲಿ ರಾಜಕೀಯ ಪ್ರಾಬಲ್ಯ ಪಡೆಯುವಲ್ಲಿ ಯಶಸ್ವಿಯಾದ ಅವರನ್ನು ಪರ್ಯಾಯ ದ್ವೀಪದ ದಕ್ಷಿಣದಲ್ಲಿ ಸಿಂಹಸ್ವಪ್ನವಾಗಿ ಕಾಡಿದ್ದು ಮೈಸೂರು ಎಂಬುದು ಇಂದಿನ ಕನ್ನಡಿಗರಿಗೆ ಮತ್ತೊಂದು ಹೆಮ್ಮೆಯ ಗರಿ! ಹದಿನೆಂಟನೆ ಶತಮಾನದ ಉತ್ತರಾರ್ಧದಲ್ಲಿ ಮೈಸೂರಿನ ಸರ್ವಾಧಿಕಾರಿಗಳಾಗಿ ಮೆರೆದ ಹುಟ್ಟು ಹೋರಾಟಗಾರ ಹೈದರಾಲಿ...