ಕರ್ನಾಟಕದಲ್ಲಿ ಸಶಸ್ತ್ರ ಬಂಡಾಯಗಳು [ಬ್ರಿಟಿಷರ ವಿರುದ್ಧ: 1800-1859]

    ಭಾರತದ ಸ್ವಾತಂತ್ರ್ಯ ಹೋರಾಟದ ಚಳವಳಿಯು ದೇಶದ ಉದ್ದಗಲಕ್ಕೂ ಹೋರಾಟದ ಜ್ವಾಲೆಯನ್ನು ಹರಡಿತ್ತು. ಅರ್ವಾಚೀನ ಕಾಲದಿಂದಲೂ ಭಾರತದ ತನುಜಾತೆಯಾಗಿರುವ ಕರ್ನಾಟಕವು ಈ ಜ್ವಾಲೆಯಿಂದ ಹೊರಗುಳಿಯಲು ಹೇಗೆ ತಾನೇ ಸಾಧ್ಯ? ಹೊಸ ಜಲಮಾರ್ಗದ ಅನ್ವೇಷಣೆಯ ನಂತರ ಯೂರೋಪಿಯನ್ನರು ಭಾರತದ ನೆಲಕ್ಕೆ ಮೊದಲು ಕಾಲಿಟ್ಟದ್ದು ದಕ್ಷಿಣ ಭಾರತದಲ್ಲಿಯೇ! ಅದರಲ್ಲೂ “ದೇವರ ನಾಡು” ಎಂದೇ ಹೆಸರಾಗಿರುವ ಕೇರಳದ ಕಲ್ಲಿಕೋಟೆಯಲ್ಲಿ. ಅಲ್ಲಿಂದ ಅವರು ಕರ್ನಾಟಕ ಪ್ರವೇಶಿಸುವುದು ಬಹಳ ತಡವೇನೂ ಆಗಲಿಲ್ಲ. ಹೀಗೆ ಕರ್ನಾಟಕದ ನೆಲದ ಮೇಲೆ ದಾಳಿಯಿಡಲು ಬಂದ ಯೂರೋಪಿಯನ್ನರನ್ನು [ಪೋರ್ಚುಗೀಸರು] ನಮ್ಮ ನೆಲದಲ್ಲಿ ಮೊದಲು ಎದುರಿಸಿದವರು ಕಡಲತಡಿಯಲ್ಲಿನ ಉಲ್ಲಾಳ ಎಂಬ ಸಣ್ಣ ನಾಡನ್ನು ಆಳುತ್ತಿದ್ದ ರಾಣಿ ಅಬ್ಬಕ್ಕ ಎಂಬುದು ಇತಿಹಾಸದ ಹಿಮದಲ್ಲಿ ಹೂತಿರುವ ಸತ್ಯ. ನಂಬಿಕೆದ್ರೋಹಕ್ಕೆ ಒಳಗಾಗಿ ದ್ರೋಹಿ ಪೋರ್ಚುಗೀಸರಿಂದ ಸೋತರೂ ಅಬ್ಬಕ್ಕನ ಹೆಸರು ಇತಿಹಾಸದಲ್ಲಿ ಅಜರಾಮರ! ಇನ್ನು ಮುಂದಿನ ಗಣನೀಯ ಪ್ರತಿಭಟನೆ ಎದುರಾದದ್ದು ಬ್ರಿಟಿಷರಿಗೆ. ಫ್ರೆಂಚರನ್ನು ಮೂಲೆಗೊತ್ತಿ ದಕ್ಷಿಣದಲ್ಲಿ ರಾಜಕೀಯ ಪ್ರಾಬಲ್ಯ ಪಡೆಯುವಲ್ಲಿ ಯಶಸ್ವಿಯಾದ ಅವರನ್ನು ಪರ್ಯಾಯ ದ್ವೀಪದ ದಕ್ಷಿಣದಲ್ಲಿ ಸಿಂಹಸ್ವಪ್ನವಾಗಿ ಕಾಡಿದ್ದು ಮೈಸೂರು ಎಂಬುದು ಇಂದಿನ ಕನ್ನಡಿಗರಿಗೆ ಮತ್ತೊಂದು ಹೆಮ್ಮೆಯ ಗರಿ! ಹದಿನೆಂಟನೆ ಶತಮಾನದ ಉತ್ತರಾರ್ಧದಲ್ಲಿ ಮೈಸೂರಿನ ಸರ್ವಾಧಿಕಾರಿಗಳಾಗಿ ಮೆರೆದ ಹುಟ್ಟು ಹೋರಾಟಗಾರ ಹೈದರಾಲಿ ಮತ್ತು ಅವನ ಯೋಗ್ಯ ಮಗ ಟಿಪ್ಪು ಬ್ರಿಟಿಷರನ್ನು ನಿರಂತರ ೩೨ ವರ್ಷಗಳ ಕಾಲ ಕಾಡಿದರು. ಟಿಪ್ಪುವಿನ ಕಳೇಬರದ ಮುಂದೆ ನಿಂತ ಜನರಲ್‌ ಹ್ಯಾರಿಸ್‌ “ನಾವಿಂದು ಭಾರತವನ್ನು ಗೆದ್ದೆವು” ಎಂಬ ಉದ್ಗಾರ ತೆಗೆಯಲು ಈ ಇಬ್ಬರು ಹೋರಾಟಗಾರರ ಾರ್ಭಟವೇ ಕಾರಣ. ತಂದೆ-ಮಗನ ಕೆಲವು ನೀತಿಗಳ ಕುರಿತು ಇತಿಹಾಸದಲ್ಲಿ ಅನೇಕ ದ್ವಂದ್ವಗಳು ಇದ್ದರೂ ಬ್ರಿಟಿಷರನ್ನು ಕರ್ನಾಟಕ ಪ್ರವೇಶಿಸದಂತೆ ೩೨ ವರ್ಷ ತಡೆಹಿಡಿದದ್ದು ಇವರೇ ಅಲ್ಲವೇ? ನಂತರದ ಹೋರಾಟ ದೋಂಡಿಯ ವಾಘನದು! ಸಾಮಾನ್ಯ ಮರಾಠಾ ಕುಟುಂಬವೊಂದರಲ್ಲಿ ಜನಿಸಿ ಮಿರ್ಜಿ ಮತ್ತು ಕೊಲ್ಹಾಪುರಗಳಲ್ಲಿ ಸೈನಿಕನಾಗಿ ದುಡಿದ ಇವನು ನಾಲ್ಕನೇ ಆಂಗ್ಲೋ-ಮೈಸೂರು ಯುದ್ಧಾನಂತರ ಕರ್ನಾಟಕದ ಉದ್ದಗಲಕ್ಕೂ ಸಂಚರಿಸಿ ಾಂಗ್ಲರಿಗೆ ಮತ್ತೊಮ್ಮೆ ಭಾರತೀಯರ ಹೋರಾಟದ ಕೆಚ್ಚಿನ ಪರಿಚಯ ಮಾಡಿಸಿದವನು ದೋಂಡಿಯ ವಾಘ! ಕಾಲ: 1800. ದಕ್ಷಿಣ ಭಾರತದ ಅನೇಕ ರಾಜಮನೆತನದ ಮುಖಂಡರೊಂದಿಗೆ ಸಂಪರ್ಕ ಹೊಂದಿ ಬ್ರಿಟಿಷರನ್ನು ಕಡೆಪಕ್ಷ ಎರಡು ವರ್ಷಗಳಿಗೂ ಹೆಚ್ಚು ಕಾಡಿದವನು ಹಾಗೂ ಮತ್ತೊಮ್ಮೆ ಶಸ್ತ್ರಸಜ್ಜಿತ ಸೈನ್ಯ ಕಟ್ಟಿದವನು ಇವನೇ. ರಾಯಚೂರಿನ ಬಳಿ ಇವನ ಹೋರಾಟ ಅಂತ್ಯ ಕಂಡುದು ವಿಪರ್ಯಾಸ. ಮುಂದಿನ ಹೋರಾಟ ಉತ್ತರದಿಂದ ಕಂಡುಬಂತು. ಅದು ಕೊಪ್ಪಳದ ಜಮೀನುದಾರ ವೀರಪ್ಪನದು; ಕೊಪ್ಪಳದ ಕೋಟೆಯನ್ನು ತನ್ನ ವಶಕ್ಕೆ ಪಡೆದು ಸಶಸ್ತ್ರ ಬಂಡಾಯ ಹೂಡಿದ  ಇವನ ಬಂಡಾಯ ಸ್ಮರಣೀಯ. ಕಾಲ: ೧೮೧೯. ನಂತರದ ಹೋರಾಟ ಕನ್ನಡಿಗರು ಎಂದೆಂದಿಗೂ ಮರೆಯಲಾಗದ ಕಿತ್ತೂರಿನ ಕಲಿಗಳ ಚಾರಿತ್ರಿಕ ಹೋರಾಟ. ರಾಣಿ ಚನ್ನಮ್ಮನ ನೇತೃತ್ವದಲ್ಲಿ ಕಿತ್ತೂರಿನ ಕಲಿಗಳು ಧಾರವಾಡದ ಕಲೆಕ್ಟರ್‌ ಥ್ಯಾಕರೆಯನ್ನು ಕೊಂದು ಅವನ ಕುಟುಂಬವನ್ನು ಸೆರೆಹಿಡಿದದ್ದು ಸಣ್ಣ ಸಂಸ್ಥಾನವೊಂದರ ದೊಡ್ಡ ಸಾಧನೆಯೇ ಸರಿ. ಮುಂದಿನದು ನಮಗೆಲ್ಲಾ ತಿಳಿದಿರುವ ಇತಿಹಾಸವೇ! ನಂಬಿಕೆದ್ರೋಹಿಗಳ ಕುತಂತ್ರಕ್ಕೆ ಬಲಿಯಾಗಿ ಕಿತ್ತೂರು ಾಂಗ್ಲರ ವಶವಾಯಿತು ಮತ್ತು ರಾಣಿ ಚನ್ನಮ್ಮ ಬೈಲಹೊಂಗಲದ ಸೆರೆಮನೆಯಲ್ಲಿ ಬಂಧಿಯಾಗಿ ಸ್ವಾತಂತ್ರ್ಯದ ಕನಸು ಕಾಣುತ್ತಲೇ ಕೊನೆಯುಸಿರೆಳೆದಳು. ಕಾಲ: 1829. ಕಿತ್ತೂರಿನ ನೆಲದ ಉಪ್ಪುಂಡ ನಿಷ್ಠಾವಂತ ಸೇವಕ ಸಂಗೋಳ್ಳಿ ರಾಯಣ್ಣನದು ಸುವರ್ಣಾಕ್ಷರಗಳಲ್ಲಿ ಬರೆದಿಡಬಹುದಾದ ಕೆಚ್ಚೆದೆಯ ಹೋರಾಟ! ಸಾಮಾನ್ಯ ಓಲೆಕಾರನೊಬ್ಬ ತನ್ನ ಸಂಘಟನಾ ಚಾತುರ್ಯ ಮತ್ತು ಧೈರ್ಯಗಳಿಂದ ಆಂಗ್ಲರ ಎದೆ ನಡುಗಿಸಿದ್ದು ರೋಚಕ ಕಥಾನಕ. ಕುತಂತ್ರಿಗಳ ಮೋಸಕ್ಕೆ ಬಲಿಯಾಗಿ ನಡು ಬಯಲಿನಲ್ಲಿ ಗಲ್ಲಿಗೇರಿದ ರಾಯಣ್ಣನ ಹುತಾತ್ಮ ಕಥೆಯನ್ನು ಇಂದಿಗೂ ನಂದಘಡದ ಆಲದ ಮರ ಜಗತ್ತಿಗೆ ಸಾರಿ ಹೇಳುತ್ತಿದೆ. ಇವನಿಂದ ಸ್ಪೂರ್ತಿಗೊಂಡ ಅನೇಕರು ಕಿತ್ತೂರಿನ ಹೋರಾಟದ ಕಿಡಿಯನ್ನು 1837-38 ರವರೆಗೆ ಆರದೇ ಉಳಿಸಿಕೊಂಡು ಬಂದದ್ದು ಎಷ್ಟೋ ಕನ್ನಡಿಗರಿಗೆ ಮರೆತೇ ಹೋಗಿದೆ. ಕೊಡಗನ್ನು ಸುಳ್ಳುನೆಪ ಹೂಡಿ ಚಿಕ್ಕವೀರರಾಜೇಂದ್ರನಿಂದ ಕಿತ್ತುಕೊಂಡ ಆಂಗ್ಲರ ನೀತಿಯ ವಿರುದ್ಧ ಸ್ವಾಮಿ ಅಪರಾಂಪರ, ಕಲ್ಯಾಣಸ್ವಾಮಿ ಮತ್ತು ಅವನ ನಂತರ ಪುಟ್ಟಬಸಪ್ಪ  ನಿರಂತರ ಬಂಡಾಯವನ್ನು ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ನಡೆಸಿದರು. ಮೊದಲಿಬ್ಬರ ಬಂಧನ ಮತ್ತು ಕೊನೆಯವನ ನೇಣಿನೊಂದಿಗೆ 1837 ರಲ್ಲಿ ಈ ಬಂಡಾಯ ಕೊನೆಗೊಂಡಿತು. ಇನ್ನು ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ವೇಳೆಯಲ್ಲಿನ ಕನ್ನಡಿಗರ ಇತಿಹಾಸದ ಪುಟಗಳು ಖಾಲಿ ಉಳಿದಿಲ್ಲ. ಆಂಗ್ಲರಡಿ ತಾಲ್ಲೂಕು ಅಧಿಕಾರಿಯಾದ ಮುಂಡರಗಿ ಭೀಮರಾಯ ಪದಚ್ಯುತಿಯ ನಂತರ ಹೆಮ್ಮಿಗೆಯ ಕೆಂಚನಗೌಡನ ಜೊತೆ ಸೇರಿ ಸಶಸ್ತ್ರ ಬಂಡಾಯಕ್ಕಿಳಿದು ಕೊಪ್ಪಳದ ಕೋಟೆಯನ್ನು ವಶಪಡಿಸಿಕೊಂಡು ಹೋರಾಡುತ್ತಲೇ ಆಂಗ್ಲರ ಗುಂಡಿನೇಟಿಗೆ ಎದೆಯೊಡ್ಡಿದ ವೀರಾಗ್ರಣಿ! ಈ ಘಟನೆಯಲ್ಲಿ ಸೆರೆ ಸಿಕ್ಕವರಲ್ಲಿ ಒಟ್ಟು 75 ಜನರಿಗೆ ಗಲ್ಲುಶಿಕ್ಷೆಯಾಗಿದ್ದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಇನ್ನು ಅನಕ್ಷರಸ್ತ ಮುಧೋಳದ ಬಳಿಯ ಹಲಗಲಿಯ ಬೇಡರ ಸ್ವಾಭಿಮಾನದ ಹೋರಾಟ ಮರೆಯಲಾದೀತೇ? ಶಸ್ತ್ರಾಸ್ತ್ರ ನಿಷೇಧ ಕಾಯ್ದೆಯ ವಿರುದ್ಧ ಶಸ್ತ್ರವನ್ನೇ ಹಿಡಿದು ಹೋರಾಡಿದ ಹಲಗಲಿಯ ಸ್ವಾಭಿಮಾನಿಗಳು ನಡೆಸಿದ ಹೋರಾಟ ರಕ್ತ-ಸಿಕ್ತ ಅಧ್ಯಾಯದ ಪುಟಗಳಲ್ಲೊಂದು. ನಾಯಕ ನಿಂಬಾಳ್ಕರ್‌ ಮೊದಲಾದವರು ಹೋರಾಡುತ್ತಲೇ ಮಡಿದರು; ಸೆರೆ ಸಿಕ್ಕ 290 ಮಂದಿಯಲ್ಲಿ 19 ಜನರಿಗೆ ಗಲ್ಲುಶಿಕ್ಷೆ! ಇದೇ ಕಾಲಕ್ಕೆ ನಾನಾಸಾಹೇಬನ ಯೋಜನೆಯಿಂದ ಸ್ಪೂರ್ತಿ ಪಡೆದು ಆಂಗ್ಲರ ವಿರುದ್ದ ಕರ್ನಾಟಕದಲ್ಲಿ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಕಹಳೆ ಮೊಳಗಿಸಿದ ಸುರಪುರದ ವೆಂಕಟಪ್ಪ ನಾಯಕ ಆತ್ಮಗೌರವವನ್ನು ಬಲಿಕೊಟ್ಟು ಬದುಕಲಿಚ್ಚಿಸದೇ ಹುತಾತ್ಮನಾದಾಗ ಕೇವಲ 24ರ ಹರಯದ ತರುಣ! ನರಗುಂದದ ಬಾಬಾಸಾಹೇಬನ ಹೋರಾಟವೇನು ಕಡೆಗಣಿಸುವಂತದ್ದಲ್ಲ; ಮ್ಯಾನ್ಸನ್‌ ಎಂಬ ಬ್ರಿಟಿಷ್‌ ಅಧಿಕಾರಿಯ ಶಿರಚ್ಛೇದ ಮಾಡಿದ ಇವನ ಸೈನಿಕರು ಕಿತ್ತೂರಿನವರಂತೆ ಮತ್ತೊಂದು ದಾಖಲೆಯನ್ನೇ ಬರೆದರು. ಮುಂದೆ ಬಾಬಾಸಾಹೇಬ ಬೆಳಗಾವಿಯಲ್ಲಿ ಗಲ್ಲಿಗೇರಿ ಹುತಾತ್ಮನಾದನು.

   ಇಷ್ಟೇ ಅಲ್ಲದೇ, ಬೀದರ್‌, ಬಿಜಾಪುರ, ಬಾದಾಮಿ ಮತ್ತು ಸೂಪಾಗಳಲ್ಲಿ ನಡೆದ ಬಂಡಾಯಗಳು ಇಲ್ಲಿ ಉಲ್ಲೇಖಾರ್ಹ. 1799 ರಿಂದ 1759 ರವರೆಗೆ ಕರ್ನಾಟಕದ ಒಂದಿಲ್ಲೊಂದು ಭಾಗದಲ್ಲಿ ಬ್ರಿಟಿಷರಿಗೆ ಕೆಚ್ಚೆದೆಯ ಕನ್ನಡಿಗರು ಬಂಡಾಯದ ಬಿಸಿ ಮುಟ್ಟಿಸಿದರೂ ವಿಶ್ವಾಸದ್ರೋಹಿಗಳ ಕಾರಣದಿಂದ ಅವು ವಿಫಲವಾದದ್ದು ನಮ್ಮ ಇತಿಹಾಸದ ವಿಪರ್ಯಾಸ. ಆ ದಶಕಗಳ ಅಂತಹ ಹೋರಾಟಗಳೆ ಮುಂದಿನ ಶತಮಾನದಲ್ಲಿ ಹೋರಆಟ ನಡೆಸಿದ ಸ್ವಾತಂತ್ರ್ಯ ವೀರರಿಗೆ ಸ್ಪೂರ್ತಿ ಆದವು ಎಂದರೆ ತಪ್ಪಾಗಲಾರದು.

ಮಾಹಿತಿ ಕೃಪೆ:- ಸಂಕ್ಷಿಪ್ತ ಕರ್ನಾಟಕದ ಇತಿಹಾಸ; ಲೇಖಕರು:- ಡಾ. ಸೂರ್ಯನಾಥ ಕಾಮತ್.

[ಹೆಚ್ಚಿನ ವಿವರಗಳಿಗೆ ಮೇಲಿನ ಪುಸ್ತಕ         ಗಮನಿಸಿ        ]

Comments

Popular posts from this blog

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಸಾಹಿತ್ಯಾಧಾರಗಳು - Literary Sources