ಸಾಳುವ ಮನೆತನ 1485-1505 ಮತ್ತು ತುಳುವ ಮನೆತನದ ಆಡಳಿತ ಆರಂಭ

       ಸಾಳುವ ಮನೆತನದ ಸಂಕ್ಷಿಪ್ತ ರಾಜಕೀಯ ಇತಿಹಾಸ


   ಈ ಮನೆತನದ ಮೂವರು ಅರಸರು ಆಳಿದರು. ಸ್ಥಾಪಕನಾದ  ಸಾಳುವ ನರಸಿಂಹನು ಸಾಳುವ ಗುಂಡನ ಮಗ. ಸಾಳುವಾಭ್ಯುದಯಂ ಇವನ ಸಾಧನೆಗಳನ್ನು ತಿಳಿಸುತ್ತದೆ. ಇವನು ಚಂದ್ರಗಿರಿಯ ಮಾಂಡಲೀಕನಾಗಿದ್ದನು. ಸಮರ್ಥ ಸೇನಾನಿ. ಇಮ್ಮಡಿ ದೇವರಾಯನ ಮರಣಾನಂತರ ರಾಜಧಾನಿಯ ಘಟನೆಗಳ ಮೇಲೆ ನಿಗಾ ವಹಿಸಿದ್ದನು. ಮಲ್ಲಿಕಾರ್ಜುನನ ಕಾಲದಲ್ಲಿ ಗಜಪತಿಗಳು ಗೆದ್ದಿದ್ದ ಉದಯಗಿರಿ ಮತ್ತು ಕೊಂಡವೀಡುಗಳನ್ನು ಕ್ರಮವಾಗಿ ೧೪೬೯ ಮತ್ತು ೧೪೮೦ ರಲ್ಲಿ ಅವರಿಂದ ಗೆದ್ದುಕೊಂಡನು. ೧೪೮೧ ರಲ್ಲಿ ಕಂಚಿಯವರೆಗೆ ಮುನ್ನುಗ್ಗಿದ್ದ ಬಹಮನಿ ಸೈನ್ಯವನ್ನು ಕಂದಕೂರು ಬಳಿ ಸೋಲಿಸಿ ಹಿಂದಕ್ಕಟ್ಟಿದ್ದನು. ತನ್ನ ಸೇನಾನಿ ತುಳುವ ಈಶ್ವರನ ಮೂಲಕ ನಾಗಮಂಗಲ, ಬೆಂಗಳೂರು ಮತ್ತು ಶ್ರೀರಂಗಪಟ್ಟಣಗಳನ್ನು ಗೆದ್ದುಕೊಂಡನು. ಸಂಗಮರ ದುರ್ಬಲ ಅರಸು ವಿರೂಪಾಕ್ಷನ ಸಾವಿನ ನಂತರ ರಾಜಧಾನಿಯ ಮುತ್ತಿಗೆಗೆ ತುಳುವ ನರಸನಾಯಕನ ನೇತೃತ್ವದಲ್ಲಿ ಸೈನ್ಯ ಕಳುಹಿಸಿದನು. ಇದರಿಂದ ಪ್ರೌಢದೇವರಾಯ ರಾಜಧಾನಿಯಿಂದ ಪಲಾಯನ ಮಾಡಿದನು. ಮುಂದೆ ಸಾಳುವ ನರಸಿಂಹನು ಪಟ್ಟವೇರಿದನು.

ನೇರ ಆಡಳಿತ: ೧೪೮೫-೯೧: ಆರು ವರ್ಷಗಳ ಆಡಳಿತ. ಸಂಧಿಗ್ದ ಪರಿಸ್ಥಿತಿಯಲ್ಲಿ ರಾಜ್ಯದ ರಕ್ಷಣೆ ಮಾಡಿದನು. ಇವನ ವಿರುದ್ಧ ವಿವಿಧ ಮಾಂಡಲೀಕರು ಬಂಡಾಯ ಹೂಡಿದರು. ೧೪೯೧ ರಲ್ಲಿ ಗಜಪತಿಗಳ ಕಪಿಲೇಂದ್ರನು ಉದಯಗಿರಿಯನ್ನು ಗೆದ್ದುಕೊಂಡನು. ಉಮ್ಮತ್ತೂರು, ಕಾರ್ಕಳದ ಸಂತರರು ಮತ್ತು ಕರಾವಳಿಯ ಇತರ ಅರಸರು ಪ್ರಮುಖರು. ಅರಬ್ಬರೊಂದಿಗೆ ವ್ಯಾಪಾರ ಸಂಬಂಧಗಳ ಮೂಲಕ ಅಶ್ವಸೇನೆಯನ್ನು ಬಲಪಡಿಸಿದನು. ರಾಜನಾಥ ಡಿಂಡಿಮ ಇವನ ಆಶ್ರಿತ. ಶ್ರೀಪಾದ ರಾಯರು ಇವನ ಗುರುಗಳು. ೧೪೯೧ರ ಆದಿಭಾಗದಲ್ಲಿ ತನ್ನಿಬ್ಬರು ಅಪ್ರಾಪ್ತ ಮಕ್ಕಳನ್ನು ತುಳುವ ನರಸನಾಯಕನ ರಕ್ಷಣೆಗೆ ಬಿಟ್ಟು ಮರಣ ಹೊಂದಿದನು.

ಸಾಳುವ ತಿಮ್ಮ ಭೂಪ: ನರಸನಾಯಕನ ಕೈಯಲ್ಲಿ ಆಡಳಿತದ ಸೂತ್ರಗಳು. ಅವನಿಗೆ ಅಪಕೀರ್ತಿ ತರಲು ತಿಮ್ಮ ನಾಯಕನೆಂಬ ದಂಡನಾಯಕನು ಅರಸು ತಿಮ್ಮ ಭೂಪನನ್ನು ಕೊಂದನು. ಪರಿಣಾಮ ಸಾಳುವ ನರಸಿಂಹನ ಎರಡನೆ ಮಗ ಇಮ್ಮಡಿ ಸಾಳುವ ನರಸಿಂಹನು ಅಧಿಕಾರಕ್ಕೆ ಬಂದನು.

ಇಮ್ಮಡಿ ಸಾಳುವ ನರಸಿಂಹ: ಇವನು ನರಸನಾಯಕನ ರಕ್ಷಣೆಯಲ್ಲಿದ್ದನು. ಆದರೆ ತನ್ನ ಸೋದರನ ಕೊಲೆಗಾರ ತಿಮ್ಮ ದಂಡನಾಯಕನ ಜೊತೆ ಹೆಚ್ಚಿನ ವಿಶ್ವಾಸದಿಂದ ಇದ್ದನು. ಜೊತೆಗೆ ತುಳುವ ನರಸನಾಯಕನ ವಿರುದ್ಧ ದನಿ ಎತ್ತಿದನು. ಇದರಿಂದ ನರಸನಾಯಕನು ಪೆನುಗೊಂಡೆಯಿಂದ ಸೈನ್ಯ ತರಲು ಇಮ್ಮಡಿ ನರಸಿಂಹನು ತಿಮ್ಮ ದಂಡನಾಯಕನ ಶಿರಚ್ಛೇದಕ್ಕೆ ಆದೇಶ ನೀಡಿದನು. ಮುಂದೆ ಅಧಿಕಾರವು ನರಸನಾಯಕನ ಕೈಯಲ್ಲಿ ಮುಂದುವರಿಯಿತು.

   ನರಸನಾಯಕನು ವಿಜಾಪುರದವರು ಮತ್ತು ಗಜಪತಿಗಳ ದಾಳಿಗಳನ್ನು ಯಶಸ್ವೀಯಾಗಿ ತಡೆದನು. ೧೫೦೩ ರಲ್ಲಿ ಅವನ ಮರಣಾನಂತರ ಮಗ ತುಳುವ ವೀರ ನರಸಿಂಹನು ಅಧಿಕಾರದ ಸೂತ್ರಗಳನ್ನು ಹಿಡಿದನು. ೧೫೦೫ ರಲ್ಲಿ ಸಾಳುವ ಇಮ್ಮಡಿ ನರಸಿಂಹನು ಪೆನುಗೊಂಡೆಯ ಸೆರೆಮನೆಯಲ್ಲಿ ಕೊಲೆಯಾದನು. ಇದರಿಂದ ಸಾಳುವ ವಂಶ ಕೊನೆಗೊಂಡು ತುಳುವ ವಂಶದ ನೇರ ಆಡಳಿತ ಆರಂಭವಾಯಿತು.

ತುಳುವ ಮನೆತನ: ತುಳುವ ವೀರ ನರಸಿಂಹನು ಆದವಾನಿ ಮತ್ತು ಕರ್ನೂಲುಗಳನ್ನು ಗೆಲ್ಲಲು ಬಂದ ವಿಜಾಪುರದ ಆದಿಲ್‌ ಶಾಹಿಗಳನ್ನು ಸೋಲಿಸಿ ಹಿಂದಕ್ಕಟ್ಟಿದನು. ಇವನು ಪೋರ್ಚುಗೀಸರೊಂದಿಗೆ ಉತ್ತಮ ಸಂಬಂಧಗಳನ್ನು ಹೊಂದಿದ್ದನು. ಇವನ ಆಡಳಿತದ ಬಹುಕಾಲವು ದಂಗೆಯೆದ್ದ ಮಾಂಡಲೀಕರನ್ನು ನಿಯಂತ್ರಿಸುವುದರಲ್ಲಿಯೇ ಕಳೆಯಿತು. ೧೫೦೯ ರಲ್ಲಿ ಇವನ ಮರಣಾನಂತರ ಇವನ ಮಲಸೋದರ ಕೃಷ್ಣದೇವರಾಯನು  ಅಧಿಕಾರಕ್ಕೆ ಬಂದನು. 

Comments

Popular posts from this blog

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಸಾಹಿತ್ಯಾಧಾರಗಳು - Literary Sources