Part 8:ಸಾಂಸ್ಕೃತಿಕ ನಗರಿಗೆ ಪಯಣ
ಅದೊಂದು ದಿನ ಮನೆಯಲ್ಲಿ ರೇಡಿಯೊ ಕೇಳುತ್ತಾ ಕುಳಿತಿದ್ದ ನನಗೆ ನಮ್ಮ ಮನೆಯಿಂದ 250 ಮೀಟರುಗಳಷ್ಟು ದೂರದಲ್ಲಿದ್ದ ಅಂಗಡಿಯ ಮನೆಯಿಂದ ಕರೆ ಬಂದಿತ್ತು. ಅಂಗಡಿಯ ಮಾಲಿಕ ತಿಪ್ಪಣ್ಣನೆಂಬುದು ನನ್ನ ನೆನಪು. ಅದಾಗಲೇ ನಾಲ್ಕೈದು ಸಲ ದೂರವಾಣಿ ಕರೆ ಬಂದಿತ್ತು. ಅಂಗಡಿಯ ವ್ಯಾಪಾರದಲ್ಲಿ ತೊಡಗಿದ್ದ ಅವರಿಗೆ ನನಗೆ ದೂರವಾಣಿ ಕರೆ ಬಂದದ್ದನ್ನು ತಿಳಿಸಲು ಬಹಳವೇ ಸಮಯ ಹಿಡಿದಿತ್ತು. ಅಂದಿಗೆ ನಮ್ಮ ಮನೆಯಲ್ಲಿ ಸ್ಥಿರ ದೂರವಾಣಿ ಸಂಪರ್ಕವಿಲ್ಲದ ಕಾರಣ ನೆರೆ-ಹೊರೆಯವರ ದೂರವಾಣಿ ಸಂಖ್ಯೆಗಳನ್ನು ಸ್ನೇಹಿತರಿಗೆ ಮತ್ತು ಅಗತ್ಯವಿದ್ದಲ್ಲಿ ನೀಡುವುದು ನನಗೆ ಅನಿವಾರ್ಯವಾಗಿತ್ತು. ಆದರೆ ತಿಪ್ಪಣ್ಣನವರ ಮನೆ ದೂರವಿದ್ದುದರಿಂದ ಹಾಗೂ ಅವರ ನಂಬರ್ ನನಗೆ ತಿಳಿಯದಿದ್ದುದರ ಕಾರಣ ಅವರ ಸಂಖ್ಯೆಯನ್ನು ನಾನು ಯಾರಿಗೂ ನೀಡಲು ಸಾಧ್ಯವಿರಲಿಲ್ಲ. ಆಶ್ಚರ್ಯ ಮತ್ತು ಕುತೂಹಲದಿಂದಲೇ ಇತರರ ಸಹಾಯದಿಂದ ನಾನವರ ಅಂಗಡಿಗೆ ಹೋದೆ. ಚಲನ-ವಲನ ತರಬೇತಿ ಮುಗಿಸಿ ಅದಾಗಲೇ ಸ್ವತಂತ್ರನಾಗಿ ಬಿಳಿಕೋಲಿನ ಸಹಾಯದಿಂದ ಒಬ್ಬನೇ ಓಡಾಡಬಹುದಾಗಿದ್ದರೂ ಹಳ್ಳಿಯ ಮಣ್ಣಿನ ರಸ್ತೆಗಳ ಮತ್ತು ಹೆಜ್ಜೆಗೊಂದು ಬಚ್ಚಲ ನೀರಿನ ತೋಳುಚರಂಡಿಗಳ ಕಾರಣ ಸಲೀಸಾಗಿ ನಡೆಯುವ ತೊಂದರೆ ಇದ್ದುದರಿಂದ ನಾನು ಇನ್ನೊಬ್ಬರನ್ನು ಆಶ್ರಯಿಸಬೇಕಾಗುತ್ತಿತ್ತು. ಅಂಗಡಿಗೆ ಹೋದ ಕೆಲಸಮಯದ ನಂತರ ಫೋನು ರಿಂಗಣಿಸಿ ಅತ್ತಲಿಂದ ನನಗೆ ಬೇಡಿಕೆ ಬಂದಾಗ ರಿಸೀವರ್ ನನ್ನ ಕೈಗೆ ಬಂದಿತು. ನನ್ನ ಪ್ರವರ ಕೇಳಿದ ನಂತರ “ನಿಮಗೆ ಅ...