ಅನುಭವ ಮಂಟಪದ ಸ್ಥಾಪನೆಯ ಹಿನ್ನೆಲೆ ಮತ್ತು ಅನುಭಾವದ ಸಂಕ್ಷಿಪ್ತ ಅರ್ಥ ವಿವರಣೆ

ಅನುಭವ ಮಂಟಪ

ಲೇಖನ: ಶ್ರೀ ಜಗದೀಶ್‌ ಕೊಡೆಕಲ್

   ಹನ್ನೆರಡನೆ ಶತಮಾನದಲ್ಲಿ ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದ ಕಲ್ಪನೆ ಅಭೂತಪೂರ್ವವಾದದ್ದು. ಅನುಭವ ಮಂಟಪದ ಉದ್ದೇಶ ಹಾಗೂ ಶರಣರು ಅದನ್ನು ಬಳಸಿಕೊಂಡ ರೀತಿಯನ್ನು ನೋಡುವುದಕ್ಕೂ ಮೊದಲು “ಅನುಭಾವ”  ಎಂಬುದನ್ನು ತಿಳಿಯುವುದು ಅವಶ್ಯಕ. ಅನುಭಾವದ ಅರ್ಥ ಅತ್ಯಂತ ವಿಶಾಲವಾಗಿದ್ದು, ಅದರ ಪರಿಭಾಷೆಯನ್ನು ಒಂದು ಸೂತ್ರದ ಅಡಿಯಲ್ಲಿ ಹಿಡಿದಿಡುವುದು ಅಸಾಧ್ಯವಾದರೂ ಅದರ ಪ್ರಮುಖವಾದ ಅಂಶಗಳನ್ನು ಕೆಳಕಂಡಂತೆ ಹೇಳಬಹುದು.

೧. ದೇಹದ ಸುಪ್ತ ಶಕ್ತಿಗಳನ್ನು ಎಚ್ಚರಗೊಳಿಸಿ, ಆ ಎಚ್ಚರದಿಂದ ತೆರೆದ ಒಳಗಣ್ಣಿನ ಮೂಲಕ ಸತ್ಯದ ಸ್ವರೂಪವನ್ನು ಪ್ರತ್ಯಕ್ಷವಾಗಿ ಸಾಕ್ಷಾತ್ಕರಿಸಿಕೊಳ್ಳುವುದು.

೨. ಅನುಭಾವವೆಂದರೆ, ಸತ್ಯದ ಕೊನೆಯ ಸ್ವರೂಪವನ್ನು ಪ್ರತ್ಯಕ್ಷವಾಗಿ ಇಲ್ಲವೇ ಪರೋಕ್ಷವಾಗಿ ಕಂಡು ಅನುಭವಿಸುವುದು.

   ಹಾಗಂದ ಮಾತ್ರಕ್ಕೆ ಅನುಭವ ಮಂಟಪವು ಒಂದು ಯೋಗಶಾಲೆಯಾಗಲಿ ಅಥವಾ ಧ್ಯಾನಮಂದಿರವಾಗಿ ಇರದೇ ಬ್ರಹ್ಮ ಜಿಜ್ಞಾಸೆಯೊಂದಿಗೆ ಸಮಾಜ ಮತ್ತು ಪ್ರತಿಜೀವಿಯ ಉದ್ಧಾರದ ಉದ್ದೇಶವನ್ನು ಹೊಂದಿತ್ತು. ಲೌಕಿಕ ಬದುಕಿನಲ್ಲಿ ಹಾಸು-ಹೊಕ್ಕಾಗಿ ಬೆರೆತ ದೇವ-ದೇವರುಗಳ ಬಡಿದಾಟ, ಜಾತಿ-ಜಾತಿಗಳ ಗೊಂದಲ, ಶ್ರೀಮಂತ-ಬಡವರೆಂಬ ವ್ಯತ್ಯಾಸ, ಹೆಣ್ಣು-ಗಂಡೆಂಬ ತಾರತಮ್ಯ, ಸ್ಪೃಶ್ಯ-ಅಸ್ಪೃಶ್ಯರೆಂಬ ಭೇದ-ಭಾವ, ನಾನೆಂಬ ಅಹಂಕಾರ ಮುಂತಾದ ಜಾಡ್ಯಗಳನ್ನು ತೊಡೆದುಹಾಕಿ, ಕಲ್ಯಾಣ ರಾಜ್ಯವನ್ನು ಮಾಡುವುದು ಶರಣರ ಗುರಿಯಾಗಿತ್ತು.

   ಮಾನವನ ಬದುಕು ಸಾರ್ಥಕತೆಯನ್ನು ಪಡೆಯಲು ಅದಕ್ಕೆ ಆಧ್ಯಾತ್ಮದ ಸ್ಪರ್ಶ ಬೇಕೇ ಬೇಕು. ಅದಿಲ್ಲದ ಬದುಕು ಗಂಧವಿಲ್ಲದ ಕುಸುಮದಂತೆ! ಜೀವವಿಲ್ಲದ ದೇಹದಂತೆ! ಇದನ್ನರಿತು ಶರಣರು ಪರಮಾತ್ಮನ ಅನುಭಾವದ ಕುರಿತು ಚಿಂತನೆ ನಡೆಸಿದರು. ಏಕಾಂಗಿಯಾಗಿ ಶರಣನು ತನ್ನ ಮನೆಯಲ್ಲಿ ಎಷ್ಟೇ ಆಡಂಬರದ ಪೂಜೆ-ಆರಾಧನೆ ಮಾಡಿದರೂ ಕೂಡಾ ಪರಮಾತ್ಮನ ಅನುಭವ ಪಡೆಯುವುದು ಕಷ್ಟಸಾಧ್ಯ. ಅದಕ್ಕಾಗಿ ಶರಣರು ಸಮಾನಮನಸ್ಕರ ವೇದಿಕೆಯೊಂದರ ಅವಶ್ಯಕತೆಯನ್ನು ಮನಗಂಡು “ಅನುಭವ ಮಂಟಪ” ಎಂಬ ಹೆಸರಿನ ವೇದಿಕೆಯನ್ನು ಕ್ರಿ.ಶ. ೧೧೬೦, ವಿಕ್ರಮನಾಮ ಸಂವತ್ಸರದಲ್ಲಿ ಸ್ಥಾಪಿಸಿದರು. ಅದು ಸು. ೭೭೦ ಶರಣ ಸದಸ್ಯರನ್ನು ಒಳಗೊಂಡ ಜಗತ್ತಿನ ಪ್ರಪ್ರಥಮ ಪ್ರಜಾಪ್ರತಿನಿಧಿ ಸಭೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅದರಲ್ಲಿ ೬೦ ಮಂದಿ ಮಹಿಳೆಯರು ಮತ್ತು ೩೦ ಮಂದಿ ವಚನಕಾರ್ತಿಯರು ಇದ್ದರು.

   ಅನುಭವ ಮಂಟಪದ ಅಧ್ಯಕ್ಷರಾಗಿ ಅಲ್ಲಮಪ್ರಭುಗಳು ಮತ್ತು ಕಾರ್ಯದಶಿಯಾಗಿ ಹಡಪದ ಅಪ್ಪಣ್ಣನವರು ಕಾರ್ಯನಿರ್ವಹಿಸುತ್ತಿದ್ದುದಾಗಿ ಕೆಲ ಐತಿಹ್ಯಗಳಿಂದ ತಿಳಿಯಬಹುದಾಗಿದೆ.

   ಮನುಷ್ಯನು ಏಕಾಂಗಿಯಾಗಿ ಚಿಂತಿಸುವುದಕ್ಕಿಂತ ಒಂದು ಸಮೂಹದಲ್ಲಿ ಚಿಂತನೆ ನಡೆಸಿದರೆ ಹೆಚ್ಚು ಪರಿಣಾಮಕಾರಿಯಾದ ಅನುಭವ ಪಡೆಯಬಹುದಾಗಿದೆ. ಅದನ್ನೇ ಬಸವಣ್ಣನವರು ಒಂದು ವಚನದಲ್ಲಿ “ಕೂಡಲಸಂಗಮ ದೇವನ ಅರಿವಡೆ ಶರಣರ ಸಂಗವೇ ಮೊದಲು” ಎಂದಿದ್ದಾರೆ. ಅಕ್ಕಮಹಾದೇವಿಯು ಕೂಡ ವಚನವೊಂದರಲ್ಲಿ “ಆಡುವುದು, ಹಾಡುವುದು, ಹೇಳುವುದು-ಕೇಳುವುದು ನೀ ಕೊಟ್ಟ ಆಯುಷ್ಯವುಳ್ಳನ್ನಕ್ಕ ಶರಣರ ಸಂಗದಲ್ಲಿ” ಎಂದು ಹೇಳಿ  ಶರಣರ ಸಾನ್ನಿಧ್ಯದ, ಶರಣರ ಸನ್ನಿಧಾನದ ಮಹತ್ವ ಹೇಳಿದ್ದಾಳೆ.

   ಅನುಭವ ಮಂಟಪದಲ್ಲಿ ಕೇವಲ ಧಾರ್ಮಿಕ ಚಿಂತನೆಗಳಲ್ಲದೇ ಸಾಮಾಜಿಕ ಚಿಂತನೆಗಳಿಗೂ ಹೆಚ್ಚು ಮಹತ್ವ ನೀಡಲಾಗುತ್ತಿತ್ತು. ಪ್ರತಿದಿನವೂ ನಿರ್ದಿಷ್ಟ ಸಮಯದಲ್ಲಿ ಸಭೆ ಸೇರಿ ಅಂದಂದಿನ ಸಾಮಾಜಿಕ, ಧಾರ್ಮಿಕ ಚಿಂತನೆಗಳು ಚರ್ಚಿಸಲ್ಪಡುತ್ತಿದ್ದವು. ಶರಣನೊಬ್ಬನು ತನ್ನ ನಿತ್ಯದ ಬದುಕಿನಲ್ಲಿ ಎದುರಾದ ಸಮಸ್ಯೆಗಳನ್ನಾಗಲೀ, ಅನುಭವವನ್ನಾಗಲೀ ಹೇಳಿ ಅದಕ್ಕೆ ಪರಿಹಾರಗಳನ್ನು ಸಭೆಯ ನಿರ್ಣಯದೊಂದಿಗೆ ಪಡೆಯುತ್ತಿದ್ದ. ಒಂದುವೇಳೆ ಸಮಸ್ಯೆಯನ್ನನು ವಚನ ರೂಪದಲ್ಲಿ ಪ್ರಸ್ತುತ ಪಡಿಸಿದ್ದರೆ, ವಚನದ ವಿಷಯವು ಸಾಮಾಜಿಕವಾಗಿದ್ದರೆ ಅದಕ್ಕೆ ಪರಿಹಾರವನ್ನು ಸಾಮಾನ್ಯವಾಗಿ ಬಸವಣ್ಣನವರು, ವಚನದ ವಿಷಯವು ಧಾರ್ಮಿಕವಾಗಿದ್ದರೆ ಸಾಮಾನ್ಯವಾಗಿ ಚನ್ನಬಸವಣ್ಣನವರು ಮತ್ತು ವಿಷಯವು ಅನುಭಾವದ್ದಾಗಿದ್ದರೆ ಅಲ್ಲಮಪ್ರಭುಗಳು ಗಮನಿಸಿ ಅವಶ್ಯಕತೆಯಿದ್ದಲ್ಲಿ ತಿದ್ದಿ ಅದನ್ನು ವಚನವೆಂದು ಸ್ವೀಕರಿಸಿ ಸಂಗ್ರಹಿಸಲಾಗುತ್ತಿತ್ತು.

   ಅನುಭವ ಮಂಟಪದ ಮುಖಾಂತರ ಶರಣರು ನಡೆಸಿದ ಚಿಂತನೆಗಳನ್ನು ಪ್ರಮುಖವಾಗಿ ೩ ಭಾಗವಾಗಿ ವಿಂಗಡಿಸಬಹುದು.

೧. ತಾತ್ವಿಕ ಚಿಂತನೆಗಳು

೨. ಸಾಮಾಜಿಕ ಚಿಂತನೆಗಳು

೩. ಆರ್ಥಿಕ ಚಿಂತನೆಗಳು.

೧. ತಾತ್ವಿಕ ಚಿಂತನೆಗಳು:- ಅ. ದೇವರು: ಒಂದು ಇಲ್ಲದ ಬಿಂದುವ, ತಂದೆ ಇಲ್ಲದ ಕಂದನ, ಮಾತೆ ಇಲ್ಲದ ಜಾತನ, ಗಮನವಿಲ್ಲದ ಗಮ್ಯನ, ಮೂವರರಿಯದ ಮುಗ್ಧನ ಕುರುಹು ಹೇಳ ಗುಹೇಶ್ವರನ – ಈ ರೀತಿ ನಿರ್ಗುಣ-ನಿರಾಕಾರ ವಸ್ತುವನ್ನು ತಿಳಿದುಕೊಳ್ಳುವುದು ಹೇಗೆ? ಮನವು ಮುಟ್ಟದ, ಮಾತಿಗೆ ನಿಲುಕದ ಪರವಸ್ತುವನ್ನು ಕಂಡುಕೊಳ್ಳುವುದೇ ಅನುಭಾವ. ಪರಮಾತ್ಮ ತತ್ವವು ಬುದ್ಧಿಯ ತರ್ಕಕ್ಕೆ ನಿಲುಕದು; ಹೃದಯದ ಅನುಭಾವಮಾತ್ರದಿಂದಲೇ ತಿಳಿಯಲ್ಪಡುತ್ತದೆ. ಅಂತಲೇ ಬಸವಣ್ಣನವರು ಸ್ಥಾಪಿಸಿದ ಮಂಟಪಕ್ಕೆ “ಅನುಭವ ಮಂಟಪ” ವೆಂಬ ಅರ್ಥಪೂರ್ಣ ಹೆಸರಿನಿಂದ ಕರೆದರು.

ಆ. ಬ್ರಹ್ಮಾಂಡವು ಶಿವಶಕ್ತಿಯ ಸಂಪುಟ; ಅಲ್ಲಮಪ್ರಭುಗಳು ಒಂದು ವಚನದಲ್ಲಿ ಈ ರೀತಿ ಹೇಳಿದ್ದಾರೆ; “ಲೀಲೆಯಾದಡೆ ಉಮಾಪತಿ, ಲೀಲೆ ಅಡಗಿದಡೆ ಸ್ವಯಂಭೂ ಗುಹೇಶ್ವರ”. ಬ್ರಹ್ಮಾಂಡ ನಿರ್ಮಾಣದ ಪ್ರಸಂಗದಲ್ಲಿ ಶಕ್ತಿಯಿಂದ ಕೂಡಿದ ಪರಮಾತ್ಮನು ಲೀಲೆ ಮುಗಿದಾಗ ಆ ಶಕ್ತಿಯನ್ನು ತನ್ನಲ್ಲಿ ಅಡಗಿಸಿಕೊಂಡು ಸ್ವಯಂಭೂ ಆಗುತ್ತಾನೆ. ಅಂತಲೇ ಶರಣರು ಶಿವ ಮತ್ತು ಶಕ್ತಿ ಇಬ್ಬರನ್ನೂ ಉಪಾಸಿಸುತ್ತಾರೆ.

ಇ. ಏಕದೇವೋಪಾಸನೆ: ಹಾಳು ಮರಡಿ, ಊರ ದಾರಿ, ಕೆರೆ-ಬಾವಿ ಗ್ರಾಮಮಧ್ಯದಲ್ಲಿ ಇರಿಸಿದ ಕಲ್ಲುಗುಂಡುಗಳಾಗಲಿ, ಮರ-ಗಿಡಗಳಾಗಲಿ ದೇವರಲ್ಲ, ದೇವನೊಬ್ಬನೇ ನಮ್ಮ ಕೂಡಲಸಂಗಮದೇವ – ಎಂದು ಅನೇಕ ದೇವರನ್ನು ಅಲ್ಲಗಳೆದು ಸೃಷ್ಟಿಕರ್ತನೊಬ್ಬನೇ ದೇವನೆಂದು ಬೋಧಿಸಿದರು.

            ಪರಮಾತ್ಮನನ್ನು ಓದಿ ತಿಳಿಯುವುದಲ್ಲ; ಕೇಳಿ ತಿಳಿಯುವುದಲ್ಲ; ತರ್ಕ ಮಾಡಿ ತಿಳಿಯುವುದಲ್ಲ; ಉಪಾಸಿಸಿ ತಿಳಿಯುವುದಲ್ಲ; ಕೇವಲ ಅನುಭಾವ ಮಾತ್ರದಿಂದ ತಿಳಿಯಲು ಸಾಧ್ಯ. ಅದನ್ನು ಸಾಧಿಸುವುದೇ ಅನುಭವ ಮಂಟಪದ ಉದ್ದೇಶವಾಗಿತ್ತು.

೨. ಸಾಮಾಜಿಕ ಚಿಂತನೆಗಳು:- ಅ. ಜಾತಿಯ ತಾರತಮ್ಯ; ಶರಣರು ಚಾತುರ್ವರ್ಣ ವ್ಯವಸ್ಥೆಯನ್ನು ಖಂಡಿಸಿದರು. ಉದಾ:- ಗುಣದಿಂದ ಹಾರುವನಾಗುವನಲ್ಲದೇ ಅಗಣಿತ ವಿದ್ಯಾಭ್ಯಾಸದಿಂದ ಹಾರುವನಲ್ಲ, ಹಾರಬೇಕು ಮಲತ್ರಯಂಗಳ, ಹಾರಬೇಕು ಸೃಷ್ಟಿ, ಸ್ಥಿತಿ, ಲಯಂಗಳ – ಎನ್ನುವ ಮೂಲಕ ಯಾರೂ ಕೂಡಾ ಹುಟ್ಟಿನಿಂದ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರನಾಗಲಾರ.

ಆ. ಸ್ತ್ರೀ-ಪುರುಷ ಸಮಾನತೆ; ವಚನ ೧:- ಸತಿ-ಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ. ವಚನ ೨-  ಮೊಲೆ-ಮುಡಿ ಬಂದರೆ ಹೆಣ್ಣೆಂಬರು, ಗಡ್ಡ-ಮೀಸೆ ಬಂದರೆ ಗಂಡೆಂಬರು, ನಡುವೆ ಸುಳಿವಾತ್ಮನು ಹೆಣ್ಣೂ ಅಲ್ಲ, ಗಂಡೂ ಅಲ್ಲ ಕಾಣಾ ರಾಮನಾಥ – ಎನ್ನುವ ಮೂಲಕ ಸಮಾಜದಲ್ಲಿದ್ದ ಸ್ತ್ರೀ ಶೋಷಣೆಯನ್ನು ಅಖಂಡವಾಗಿ ಪ್ರತಿಭಟಿಸಿದರು.

ಇ. ಅಗ್ರಾಹ್ಯ ನಂಬಿಕೆಗಳಾದ ೧. ಸ್ವರ್ಗ, ೨. ಜೋತಿಷ್ಯ, ೩. ವ್ರತಗಳು, ೪. ಸೂತಕಗಳು ೫. ಮಂತ್ರ-ತಂತ್ರಗಳು, ೬. ತೀರ್ಥಕ್ಷೇತ್ರಗಳ ನಂಬಿಕೆಗಳನ್ನು ಅಲ್ಲಗಳೆದರು.

೩. ಆರ್ಥಿಕ ಚಿಂತನೆಗಳು:- ಕಾಯಕ ಮತ್ತು ದಾಸೋಹ ತತ್ವಗಳು. ಶರಣರು ಮಾಡಿದ ಸಾಮಾಜಿಕ ಪರಿವರ್ತನೆಗಳಲ್ಲಿ ಕಾಯಕ ಮತ್ತು ದಾಸೋಹಗಳು ಅತ್ಯಂತ ಪ್ರಮುಖವಾದವುಗಳು. ಸಾಮಾಜಿಕ ಸಮತೆಯನ್ನು ನಿರ್ಣಾಯಕವಾಗಿ ನಿರ್ಮಿಸುವ ತತ್ವಗಳು ಇವು.

ಅ. ಕಾಯಕ:- ಸತ್ಯ ಶುದ್ಧವಾಗಿ ದೈವೀಸಮರ್ಪಣಾ ಭಾವದಿಂದ ಫಲಾಪೇಕ್ಷೆಯಿಲ್ಲದೇ ಮಾಡುವ ಕೆಲಸವೇ ಕಾಯಕ ಎನಿಸಿಕೊಳ್ಳುತ್ತದೆ. ಕಾಯಕದ ಮಹತ್ವ ಹೇಳುವ ಈ ವಚನ ಗಮನಿಸಿ

“ಕಾಯಕದಲ್ಲಿ ನಿರತನಾದಡೆ ಗುರು ದರ್ಶನವಾದರೂ ಮರೆಯಬೇಕು, ಲಿಂಗಪೂಜೆಯಾದರೂ ಮರೆಯಬೇಕು, ಜಂಗಮ ಮುಂದಿದ್ದರೂ ಹಂಗು ಹರಿಯಬೇಕು, ಕಾಯಕವೇ ಕೈಲಾಸವಾದ ಕಾರಣ ಅಮರೇಶ್ವರ ಲಿಂಗವಾದರೂ ಕಾಯಕದೊಳಗು” ಎಂದು ಕಾಯಕದ ಮಹತ್ವವನ್ನು ವಚನವು ಹೇಳುತ್ತದೆ.

ಆ. ದಾಸೋಹ:- ಸತ್ಯ ಶುದ್ಧ ಕಾಯಕದಿಂದ ಬಂದ ಆದಾಯದಲ್ಲಿ ಕೆಲವು ಭಾಗವನ್ನು ಸಮಾಜಕ್ಕಾಗಿ ಮತ್ತು ದುರ್ಬಲರಿಗಾಗಿ ಕೊಡುವುದೇ ದಾಸೋಹವೆನಿಸುತ್ತದೆ.

   ಅನುಭವ ಮಂಟಪದ ಮೂಲಕ ಶರಣರು ಇತಿಹಾಸದಲ್ಲಿ ಚಿರಸ್ಥಾಯಿಯಾದ ಸಮಗ್ರ ಸಮಾಜದ ಪರಿವರ್ತನಾ ಕ್ರಾಂತಿಯನ್ನು ಕೈಗೊಂಡರು. ಅದು ಹಿಂದೆಂದಿಗಿಂತಲೂ ಇಂದು ಹಾಗೂ ಎಂದೆಂದಿಗೂ ಪ್ರಸ್ತುತವಾಗಿದೆ!

ಆಕರಗಳು

ಲಿಂಗಾಯಿತ ಧರ್ಮ ಪರಿಚಯ- ಡಾ. ಎನ್. ಜಿ. ಮಹಾದೇವಪ್ಪ

ಕನ್ನಡದಲ್ಲಿ ಅನುಭಾವ ಸಾಹಿತ್ಯ – ಹೆಚ್. ತಿಪ್ಪೆರುದ್ರಸ್ವಾಮಿ.

ಶರಣರು ಕಂಡ ಅನುಭಾವ – ಪ್ರೊ. ಕೆ. ಎಸ್. ಮಠ. ಎಮ್.ಎ.

**********

Comments

Popular posts from this blog

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧

ಸಾಹಿತ್ಯಾಧಾರಗಳು - Literary Sources

ಕರ್ನಾಟಕದ ಭೌಗೋಳಿಕ ಲಕ್ಷಣಗಳು ಮತ್ತು ಇತಿಹಾಸದ ಮೇಲೆ ಅವುಗಳ ಪ್ರಭಾವ