Part 8:ಸಾಂಸ್ಕೃತಿಕ ನಗರಿಗೆ ಪಯಣ
ಅದೊಂದು ದಿನ ಮನೆಯಲ್ಲಿ ರೇಡಿಯೊ ಕೇಳುತ್ತಾ ಕುಳಿತಿದ್ದ ನನಗೆ ನಮ್ಮ
ಮನೆಯಿಂದ 250 ಮೀಟರುಗಳಷ್ಟು ದೂರದಲ್ಲಿದ್ದ ಅಂಗಡಿಯ ಮನೆಯಿಂದ ಕರೆ ಬಂದಿತ್ತು. ಅಂಗಡಿಯ ಮಾಲಿಕ ತಿಪ್ಪಣ್ಣನೆಂಬುದು
ನನ್ನ ನೆನಪು. ಅದಾಗಲೇ ನಾಲ್ಕೈದು ಸಲ ದೂರವಾಣಿ ಕರೆ ಬಂದಿತ್ತು. ಅಂಗಡಿಯ ವ್ಯಾಪಾರದಲ್ಲಿ ತೊಡಗಿದ್ದ
ಅವರಿಗೆ ನನಗೆ ದೂರವಾಣಿ ಕರೆ ಬಂದದ್ದನ್ನು ತಿಳಿಸಲು ಬಹಳವೇ ಸಮಯ ಹಿಡಿದಿತ್ತು. ಅಂದಿಗೆ ನಮ್ಮ ಮನೆಯಲ್ಲಿ
ಸ್ಥಿರ ದೂರವಾಣಿ ಸಂಪರ್ಕವಿಲ್ಲದ ಕಾರಣ ನೆರೆ-ಹೊರೆಯವರ ದೂರವಾಣಿ ಸಂಖ್ಯೆಗಳನ್ನು ಸ್ನೇಹಿತರಿಗೆ ಮತ್ತು
ಅಗತ್ಯವಿದ್ದಲ್ಲಿ ನೀಡುವುದು ನನಗೆ ಅನಿವಾರ್ಯವಾಗಿತ್ತು. ಆದರೆ ತಿಪ್ಪಣ್ಣನವರ ಮನೆ ದೂರವಿದ್ದುದರಿಂದ
ಹಾಗೂ ಅವರ ನಂಬರ್ ನನಗೆ ತಿಳಿಯದಿದ್ದುದರ ಕಾರಣ ಅವರ ಸಂಖ್ಯೆಯನ್ನು ನಾನು ಯಾರಿಗೂ ನೀಡಲು ಸಾಧ್ಯವಿರಲಿಲ್ಲ.
ಆಶ್ಚರ್ಯ ಮತ್ತು ಕುತೂಹಲದಿಂದಲೇ ಇತರರ ಸಹಾಯದಿಂದ ನಾನವರ ಅಂಗಡಿಗೆ ಹೋದೆ. ಚಲನ-ವಲನ ತರಬೇತಿ ಮುಗಿಸಿ
ಅದಾಗಲೇ ಸ್ವತಂತ್ರನಾಗಿ ಬಿಳಿಕೋಲಿನ ಸಹಾಯದಿಂದ ಒಬ್ಬನೇ ಓಡಾಡಬಹುದಾಗಿದ್ದರೂ ಹಳ್ಳಿಯ ಮಣ್ಣಿನ ರಸ್ತೆಗಳ
ಮತ್ತು ಹೆಜ್ಜೆಗೊಂದು ಬಚ್ಚಲ ನೀರಿನ ತೋಳುಚರಂಡಿಗಳ ಕಾರಣ ಸಲೀಸಾಗಿ ನಡೆಯುವ ತೊಂದರೆ ಇದ್ದುದರಿಂದ
ನಾನು ಇನ್ನೊಬ್ಬರನ್ನು ಆಶ್ರಯಿಸಬೇಕಾಗುತ್ತಿತ್ತು. ಅಂಗಡಿಗೆ ಹೋದ ಕೆಲಸಮಯದ ನಂತರ ಫೋನು ರಿಂಗಣಿಸಿ
ಅತ್ತಲಿಂದ ನನಗೆ ಬೇಡಿಕೆ ಬಂದಾಗ ರಿಸೀವರ್ ನನ್ನ ಕೈಗೆ ಬಂದಿತು. ನನ್ನ ಪ್ರವರ ಕೇಳಿದ ನಂತರ “ನಿಮಗೆ
ಅಪಾಯಿಂಟ್‌ಮೆಂಟ್ ಆಗಿದೆ ಕಣ್ರಿ, ಕಂಗ್ರ್ಯಾಟ್ಸ್” ಎಂಬ ಅತ್ತಲಿನ ದನಿ ಕೇಳಿ ನನಗೆ ಬೆರಗು ಮೂಡಿತ್ತು. ಅದುವರೆಗೂ ಯಾವುದೇ
ಕೆಲಸಕ್ಕೆ ಅರ್ಜಿ ಹಾಕಲು ಅರ್ಹತೆ ಇಲ್ಲದ ನನಗೆ ಯಾವ ಕೆಲಸ ಸಿಕ್ಕೀತು? ಜೊತೆಗೆ ನಾನು ಯಾವುದೇ ಕೆಲಸಕ್ಕೆ
ಅರ್ಜಿ ಹಾಕಿರಲಿಲ್ಲ ಅದುವರೆಗೂ, ಹತ್ತನೆ ತರಗತಿಯನ್ನು ಮೊದಲ ದಂಡಯಾತ್ರೆಯಲ್ಲಿ ಪಾಸಾದಾಗ ಜಿಲ್ಲಾ
ಉದ್ಯೋಗ ವಿನಿಮಯ ಕಛೇರಿಯಲ್ಲಿ ಹೆಸರು ನೋಂದಾಯಿಸಿದ್ದನ್ನು ಬಿಟ್ಟರೆ. ಅದೂ ನವೀಕರಣವಿಲ್ಲದೆ ಬೆಲೆ
ಕಳೆದುಕೊಂಡ ನೋಂದಣಿಯಾಗಿತ್ತು ಅಂದಿಗೆ. ಮತ್ಯಾವ ಕೆಲಸ ಎಂದು ತಲೆ ಕೆರೆದುಕೊಂಡು ಕ್ಷಣ ಯೋಚಿಸುತ್ತಲೇ
“ನಿಮಗೆ ಯಾರು ಹೇಳಿದ್ದು ಈ ವಿಷಯ” ಎಂದು ಕೇಳಿದೆ. ಅತ್ತಲಿನ ದನಿ “ನಿಮಗೆ ಟೆಲಿಗ್ರಾಂ ಬಂದಿದೆ, ಮೈಸೂರಿನಿಂದ”
ಎಂದಿತು. ಆಗಲೇ ನನಗೆ ಹೊಳೆದದ್ದು ಬೆಂಗಳೂರಿನ ಒಂದು ವರ್ಷದ ತರಬೇತಿಯ ಅಂತ್ಯಕಾಲದಲ್ಲಿ ಮೈಸೂರಿನಲ್ಲಿ
ಹೊಸದಾಗಿ ಆರಂಭವಾಗಿದ್ದ ಶಿಕ್ಷಕರ ತರಬೇತಿಗೆ ಪ್ರವೇಶ ಪರೀಕ್ಷೆ ಬರೆದದ್ದು. ಟೆಲಿಗ್ರಾಂ ಒಕ್ಕಣೆ ಓದಲು
ಕೇಳಿದ ನನಗೆ ಆ ಕಡೆಯ ವ್ಯಕ್ತಿಗೆ ಇಂಗ್ಲೀಷ್ ಸರಿಯಾಗಿ ಓದಲು ಬಾರದೇ, ಅವರು ಓದಿದ್ದು ನನಗೆ ಅರ್ಥವಾಗದೇ
ಕಡೆಗೆ ಚಿತ್ರದುರ್ಗದ ಮುಖ್ಯ ಅಂಚೆ ಕಛೇರಿಯ ಪಕ್ಕದಲ್ಲಿದ್ದ ಟೆಲಿಗ್ರಾಂ ಇಲಾಖೆಯ ಡಿ ದರ್ಜೆ ನೌಕರ
ನನ್ನೊಂದಿಗೆ ಮಾತನಾಡುತ್ತಿರುವುದುಉ ಎಂಬುದನ್ನು ದೂರವಾಣಿಯಲ್ಲಿಯೇ ಕೇಳಿ ತಿಳಿದುಕೊಂಡು ಅದೇ ದಿನ
ಸಂಜೆ ಆತನನ್ನು ಕಛೇರಿಯಲ್ಲಿ ಭೇಟಿ ಮಾಡಲು ಅಪಾಯಿಂಟ್‌ಮೆಂಟ್ ಆಗದಿದ್ದ ನಾನು ಆ ಡಿ ದರ್ಜೆ ನೌಕರನಲ್ಲಿ
ಅಪಾಯಿಂಟ್‌ಮೆಂಟ್ ತೆಗೆದುಕೊಂಡು ಅಪ್ಪ ಮನೆಗೆ ಬಂದ ನಂತರ ಗೆಳೆಯ ರಾಮಾಂಜನೇಯನೊಂದಿಗೆ ಚಿತ್ರದುರ್ಗದ
ಬಸ್ಸು ಏರಿದೆ. ಕಛೇರಿ ತಲುಪಿದಾಗ ಕರೆ ಮಾಡಿದ ಆತನನ್ನು ಭೇಟಿ ಮಾಡಿ ಟೆಲಿಗ್ರಾಂ ಕೊಡಲು ಕೇಳಿದೆವು.
ಆತ ನನಗೆ ಬಂದಿದ್ದ ತಂತಿ ಸಂದೇಶ ರಾಜರಹಸ್ಯವೆಂಬಂತೆ “ಇಲ್ಲಿ ಬೇಡ” ೆಂದು ನಮ್ಮನ್ನು ಹೊರಕ್ಕೆ ಕರೆದು
ಹತ್ತಿರದ ಹೋಟೆಲೊಂದರ ಒಳಕ್ಕೆ ಕರೆದೊಯ್ದ. ಕುಳಿತಾಯಿತು, ಇನ್ನೂ ನನ್ನ ಅಪಾಯಿಂಟ್‌ಮೆಂಟ್ ಆರ್ಡರ್
ಹೊರಕ್ಕೆ ಬರಲೇ ಇಲ್ಲ! ಆ ಮಾತು, ಈ ಮಾತು ಮುಗಿದ ನಂತರ ನಾನೇ “ಟೆಲಿಗ್ರಾಂ ಕೊಡಿ” ಎಂದೆ. ಮೆಲ್ಲನೇ
ಟೆಲಿಗ್ರಾಂನ ತುಣುಕು ಕಾಗದವನ್ನು ತೆಗೆದ ಆತ ಅದನ್ನು ತಂದೆಯವರ ಕೈಗೆ ಕೊಟ್ಟ. ಗೆಳೆಯ ರಾಮಾಂಜನೇಯನಿಂದ
ಅದರ ಒಕ್ಕಣೆಯನ್ನು ಓದಿಸಿಕೊಂಡ ನಾನು ಎದುರಿಗಿದ್ದ ಟೆಲಿಗ್ರಾಂ ಕೊಟ್ಟ ವ್ಯಕ್ತಿಗೆ “ನನಗೆ ಕೆಲಸ ಸಿಕ್ಕಿಲ್ಲ,
ಮೈಸೂರಿನಲ್ಲಿರುವ ಶಿಕ್ಷಕರ ತರಬೇತಿಗೆ ಆಯ್ಕೆ ಆಗಿದ್ದೇನೆ. ಅದು ಮುಗಿದ ಮೇಲೆ ಕೆಲಸ ಹುಡುಕಬೇಕಾಗುತ್ತದೆ.
ನಮಗೆ ಸರ್ಕಾರಿ ನೌಕರಿ ಸಿಗುವುದು ಅಷ್ಟು ಸುಲಭದ ಮಾತಲ್ಲ” ಎಂದು ಹೇಳಿ ಹೋಟೆಲಿನ ಮಾಣಿ ತಂದಿಟ್ಟ ಚಹಾ
ಕುಡಿದು, ನಮ್ಮಿಂದ ಏನನ್ನೋ ನಿರೀಕ್ಷಿಸುತ್ತಿದ್ದ ಆತನಿಗೊಂದು ಶುಷ್ಕ ಧನ್ಯವಾದ ಹೇಳಿ ಬಸ್‌ಸ್ಟ್ಯಾಂಡಿನ ಕಡೆ ಮೂವರೂ ಹೆಜ್ಜೆ ಹಾಕಿದೆವು.
ಮನೆಗೆ ಬಂದ ನಾನು ಮೈಸೂರಿಗೆ ಹೊರಡುವ ತಯಾರಿ
ಮಾಡತೊಡಗಿದೆ. ಬೆಂಗಳೂರಿನಂತೆಯೇ ಮೈಸೂರು ಸಹಾ ನನಗೆ ಅರಿಯದ ಊರಾಗಿತ್ತು. ವಿಶ್ವಪ್ರಸಿದ್ದವಾದ ಆ ಊರನ್ನು
ಜೀವನದಲ್ಲಿ ಮೊದಲ ಸಲ ನೋಡುವ ಭಾಗ್ಯ ನನ್ನದಾದರೂ ಮನಸ್ಸಿನ ಮೂಲೆಯಲ್ಲೆಲ್ಲೋ ಸಣ್ಣ ಭಯವೊಂದು ಮೂಡತೊಡಗಿತ್ತು.
ಬೆಂಗಳೂರಿನ ತರಬೇತಿಯಲ್ಲಿ ನಮಗೆ ವಸತಿ ನಿಲಯದ ಸೌಲಭ್ಯವಿದ್ದು, ಊಟ-ುಪಚಾರಗಳ ಕೊರತೆಯಿರಲಿಲ್ಲ. ಆದರೆ,
ಮೈಸೂರಿನಲ್ಲಿ ತರಬೇತಿಯಷ್ಟೇ ಉಚಿತ; ಊಟ-ವಸತಿಯ ವ್ಯವಸ್ಥೆ ನಮ್ಮದೇ. ಅಂತೂ ಅಪ್ಪನ ಜೊತೆ ರಾತ್ರಿಯ
ಬಸ್ಸನ್ನೇರಿ ಮೈಸೂರಿನಲ್ಲಿ ಇಳಿದಾಗ ಬೆಳಗಿನ ಜಾವ ಮೂರರ ಸಮಯವಿರಬಹುದು. ಬಸ್‌ಸ್ಟ್ಯಾಂಡಿನಿಂದ ನಾವು
ಹೋಗಬೇಕಾದ ಸರ್ಕಾರಿ ಅಂಧರ ಪಾಠಶಾಲೆಯ ವಿಳಾಸ ತಿಳಿದುಕೊಂಡು ಹತ್ತಿರವಿದ್ದ ರೈಲ್ವೆ ನಿಲ್ದಾಣದಲ್ಲಿ
ಉಳಿದ ಸಮಯ ಕಳೆಯಲು ಹೋದೆವು. ಅಲ್ಲಿನ ಫ್ಲಾಟ್‌ಫಾರ್ಮಿನಲ್ಲಿ ಬೆಳಿಗ್ಗೆ ಜಾಡಮಾಲಿ ಬಂದು ಏಳಿಸುವವರೆಗೆ
ಮಲಗಿದ್ದು, ಅಲ್ಲಿಯೇ ಇದ್ದ ನಲ್ಲಿಯಲ್ಲಿ ಮುಖ ತೊಳೆದು ಶಾಲೆಯ ದಾರಿ ಹಿಡಿದೆವು.
ಅವರಿವರನ್ನು ವಿಚಾರಿಸಿ ನಾವು ಹೋಗಬೇಕಾದ
ಸರ್ಕಾರಿ ಅಂಧಮಕ್ಕಳ ಶಾಲೆ ಹತ್ತಿರದಲ್ಲೇ ಇದ್ದ ಕಾರಣ ನಡೆದೇ ಅತ್ತ ಕಡೆ ಹೆಜ್ಜೆ ಹಾಕಿದೆವು. ಶಾಲೆ
ತಲುಪುವ ವೇಳೆಗಾಗಲೇ ನನ್ನಂತೆಯೇ ತರಬೇತಿಗೆ ಆಯ್ಕೆ ಆದವರು ಒಬ್ಬೊಬ್ಬರಾಗಿ ಬರುತ್ತಿದ್ದರು. ಹಾಗೆ
ಬಂದ ಒಬ್ಬಿಬ್ಬರ ಪರಿಚಯವಾದ ನಂತರ ಶಾಲೆಯ ಎದುರಿಗಿದ್ದ ಹೋಟೆಲೊಂದರಲ್ಲಿ ಅವರ ಜೊತೆಗೂಡಿ ಬೆಳಗಿನ ಉಪಹಾರ
ಮುಗಿಸಿದ್ದಾಯಿತು. ಮುಂದಿನದು ಸಂಬಂಧಪಟ್ಟವರು ಬಂದು ನಮ್ಮ ದಾಖಲೆಗಳ ಪರಿಶೀಲನೆ ಮತ್ತು ದಾಖಲಾತಿ ಪ್ರಕ್ರಿಎ.
ಆನಂದ್ ಸರ್ ಆ ಕಾರ್ಯವನ್ನು ನೆರವೇರಿಸಿದರು. ಒಟ್ಟು ೨೫ ಅಭ್ಯರ್ಥಿಗಳು; ಅವರಲ್ಲಿ ಒಬ್ಬರು ಮಾತ್ರ
ಆರಂಭದಲ್ಲಿಯೇ ತರಬೇತಿ ಬೇಡವೆಂದು ವಾಪಾಸು ಹೋದರು. ಉಳಿದವರಲ್ಲಿ ೪ ದೃಷ್ಟಿಸಮರ್ಥರು ಇದ್ದರು. ಮಧ್ಯಾಹ್ನದ
ವೇಳೆಗೆ ದಾಖಲಾತಿಯ ಎಲ್ಲಾ ಪ್ರಕ್ರಿಯೆ ಮುಗಿದು ನನ್ನೊಡನೆ ಬಂದಿದ್ದ ಅಪ್ಪ ಊರಿಗೆ ಹೊರಡುವ ಸಮಯ ಸನ್ನಿಹಿತವಾಗುತ್ತಿತ್ತು.
ಆ ವೇಳೆಗಾಗಲೇ ನನ್ನೊಳಗೆ ಏನೋ ತಳಮಳ ಶುರುವಾಗಿದ್ದು ಅದರ ಲಕ್ಷಣಗಳು ನನ್ನ ಮುಖದಲ್ಲಿ ಭಾವನೆಗಳ ರೂಪದಲ್ಲಿ
ವ್ಯಕ್ತವಾಗಿದ್ದನ್ನು ಅಪ್ಪನೂ ಗಮನಿಸಿದ್ದರು. ಸುಮಾರು ಒಂದು ಎಕರೆಗೂ ವಿಸ್ತಾರವಾದ ಬಯಲಿನಲ್ಲಿ ಬೃಹದಾಕಾರವಾಗಿ
ನಿರ್ಮಾಣಗೊಂಡಿದ್ದ ಮಹಾರಾಜರ ಕಾಲದ ಪಾರಂಪರಿಕ ಕಟ್ಟಡದ ಮಧ್ಯದಲ್ಲಿ ಮುಖ್ಯದ್ವಾರದ ಎದುರು ನಿಂತಿದ್ದ
ನನ್ನನ್ನು ಅಪ್ಪ ಕೇಳಿದರು: “ನಿಂಗಿಷ್ಟವಿಲ್ಲವೆಂದರೆ ನಂಜೊತೆ ಊರಿಗೆ ವಾಪಾಸು ಬಂದುಬಿಡು, ನಾ ಇದ್ದೀನಿ
ನಿನ್ನನ್ನು ಸಾಕೋಕೆ”. ಅವರ ಈ ಮಾತುಗಳನ್ನು ಕೇಳುವಾಗ ನನ್ನ ಕಂಠ ಬಿಗಿದಿತ್ತು. ಆದರೂ ನಾನು ತರಬೇತಿ
ಮುಗಿಸಿಯೇ ಊರಿಗೆ ಬರುತ್ತೇನೆ ಎಂದು ಅವರಿಗೆ ದೃಢಸ್ವರದಲ್ಲಿ ಹೇಳಿದೆ. ನನ್ನಿಂದ ಬೀಳ್ಕೊಂಡ ಅವರು
ರಸ್ತೆಯವರೆಗೂ ಹೋಗಿ ಮತ್ತೆ ವಾಪಾಸು ಬಂದು ಅಲ್ಲಿಯೇ ಗರುಡಗಂಬದಂತೆ ನಿಂತಿದ್ದ ನನಗೆ ಮತ್ತದೇ ಮಾತುಗಳನ್ನು
ಹೇಳಿದರು; ಆಗಲೂ ನಾನು ಮನಸ್ಸು ಬದಲಿಸಲಿಲ್ಲ. ಅವರು ಹೊರಟರು.
ವಿಶಾಲವಾದ ಕಟ್ಟಡದ ನಡುವೆ ಹೆಗಲ ಮೇಲಿನ
ಬಟ್ಟೆಗಳ ಬ್ಯಾಗ್ನೊಂದಿಗೆ ಬಲಗೈಯಲ್ಲಿ ಕೇನ್ ಹಿಡಿದು ನಿಂತಿದ್ದ ನನಗೆ ಆಗ ದುಃಖ ಉಮ್ಮಳಿಸಿ ಅಳುವೇ
ಬಂದಿತ್ತು ಆದರೆ ಅಳಲಿಲ್ಲ. ನನ್ನ ಅಂದಿನ ಆ ಕ್ಷಣದ ಅಧೈರ್ಯಕ್ಕೆ ಕಾರಣವೂ ಇತ್ತು. ಇದಕ್ಕೆ ಮೊದಲು
ಬೆಂಗಳೂರಿನ ತರಬೇತಿಯಲ್ಲಿ ಅಲ್ಲಿಯೇ ಊಟ-ವಸತಿಗಳು ಇದ್ದವು. ಆದರೆ ಇಲ್ಲಿ ವಸತಿ ಅನಿಶ್ಚಿತ; ಊಟಕ್ಕೆ
ಶಾಲೆಯ ಆವರಣ ದಾಟಿ ದೂರದಲ್ಲಿದ್ದ ಹೋಟೆಲ್ಲುಗಳಿಗೆ ಹೋಗಬೇಕು, ಅದೂ ದಿನಕ್ಕೆ ಮೂರು ಸಲ! ಸಂಜೆಯ ವೇಳೆಗೆ
ನಮಗೆ ಸರ್ಕಾರಿ ವಸತಿನಿಲಯದ (Hostel) ವ್ಯವಸ್ಥೆ ಆಗುವವರೆಗೆ ಶಾಲೆಯ ಕೊಠಡಿಯೊಂದರಲ್ಲಿ ಹೈಸ್ಕೂಲು
ವಿದ್ಯಾರ್ಥಿಗಳೊಂದಿಗೆ ಇರಲು ಅವಕಾಶ ಕಲ್ಪಿಸಿದರು ಅಂದಿಗೆ ಶಾಲೆಯ ಅಧೀಕ್ಷಕರಾಗಿದ್ದ ಶ್ರೀ ಬಲರಾಂ
ಸರ್ ಅವರು. ಹತ್ತಡಿ ಅಗಲದ ೧೫ ಅಡಿಗಳಿಗೂ ಉದ್ದದ ಕೊಠಡಿಯ ಮೂಲೆಯೊಂದರಲ್ಲಿದ್ದ ಮರದ ಪೆಟ್ಟಿಗೆಯ ಪಕ್ಕದಲ್ಲಿ
ನನ್ನ ಹೆಗಲಿಗೆ ಹೊರೆಯಾಗಿದ್ದ ಬಟ್ಟೆಗಳ ಬ್ಯಾಗ್ ಮತ್ತು ಸೂಟ್‌ಕೇಸ್‌ಗಳನ್ನಿಟ್ಟು ಅಲ್ಲಿಂದ ತುಸು
ದೂರವಿದ್ದ ಬಚ್ಚಲು ಮನೆಯಲ್ಲಿ ಮುಖ ತೊಳೆದು ಸುಧಾರಿಸಿಕೊಂಡದ್ದಾಯಿತು. ಇನ್ನು ರಾತ್ರಿಯ ಊಟದ ವ್ಯವಸ್ಥೆಗೆ
ಹೊರಗೆ ಹೋಗಬೇಕಾಗಿತ್ತು. ಅದುವರೆಗೂ ಹೊಸಕಟ್ಟಡ ಮತ್ತು ಸ್ಥಳದ ಪರಿಚಯ ಮಾಡಿಕೊಂಡಿದ್ದ ನಾನು ನನ್ನ
ಪಕ್ಕದ ಜಿಲ್ಲೆ ಬಳ್ಳಾರಿಯ ಕುಡುತಿನಿ ಗ್ರಾಮದಿಂದ ಬಂದಿದ್ದ ಮಹಮದ್ ರಫಿಯೊಂದಿಗೆ ರಾತ್ರಿಯ ಕತ್ತಲಲ್ಲಿ
ಕೇನ್ (ಬಿಳಿಯ ಕೋಲು) ಹಿಡಿದು ಹೆಜ್ಜೆ ಹಾಕಿದೆನು. ರಫಿ ಸಹಾ ನನ್ನಂತೆಯೇ ಮಧ್ಯದಲ್ಲಿ ದೃಷ್ಟಿ ಕಳೆದುಕೊಂಡವರು,
ಆರನೆ ತರಗತಿ ಓದುತ್ತಿದ್ದಾಗ. ಆದರೆ ಉತ್ತಮ ವ್ಯಕ್ತಿತ್ವದ ಅವರು ನನಗೆ ಇಡೀ ಹತ್ತು ತಿಂಗಳ ತರಬೇತಿಯಾದ್ಯಂತ
ಉತ್ತಮ ಸಹಪಾಠಿಯಾಗಿದ್ದರು.
(ಮುಂದುವರಿಯುತ್ತದೆ)
ನಿಮಗೆ ಕೆಲಸ ಸಿಕ್ಕಿದೆಯೆಂದೂ ಆ ಖುಷಿಗೆ ತನಗೆ ಏನನ್ನಾದರೂ ನೀವು ಕೊಡುವಿರೆಂದೂ ಕಾದು ಕೂತಿದ್ದ ಅವರಿಗೆ ಬಹಳ ನಿರಾಸೆಯಾಗಿರಬೇಕು ಸರ್. ಅಂತಹ ನಿರೀಕ್ಷೆಯನ್ನು ಇಟ್ಟುಕೊಳ್ಳೋದಕ್ಕೆ ಪ್ರಮುಖ ಕಾರಣ ಅವರ ಅರ್ಧಂಬರ್ಧ ಇಂಗ್ಲಿಷ್ ಶಿಕ್ಷಣ. ಪತ್ರವನ್ನು ಓದಿ ಅರ್ಥ ಮಾಡಿಕೊಂಡಿದ್ದರೆ ಅವರಿಗೆ ನಿರಾಸೆ ಕಾಡುತ್ತಿರಲಿಲ್ಲ.
ReplyDeleteನಿಮಗೆ ಅಂತಹ ಸಮಸ್ಯೆ ಇದ್ದರೂ ಕೂಡ ಆ ಅಪರಿಚಿತ ಮಹಾನಗರದಲ್ಲಿದ್ದು ಏನಾದರೂ ಸಾಧಿಸಬೇಕು ಎಂಬ ನಿಮ್ಮ ತುಡಿತಕ್ಕೆ ಅನಂತ ವಂದನೆಗಳು ಸರ್ 🙏
Thank you very much, please put your name. Your opinion is right...
Delete