ಬನವಾಸಿಯ ಕದಂಬರು - ಪರಿಷ್ಕೃತ ವಾಚನ ಸಾಮಗ್ರಿ

ಬನವಾಸಿಯ ಕದಂಬರ ರಾಜಕೀಯ ಇತಿಹಾಸ

ಪೀಠಿಕೆ: ಇದು  ಮೊದಲ ಕನ್ನಡದ ರಾಜ ಮನೆತನ. ಇವರು  ಶಾತವಾಹನರ ಉತ್ತರಾಧಿಕಾರಿಗಳು. ಸಾ.ಶ.ವ.  ೪ ರಿಂದ ೬ ನೆ ಶತಮಾನಗಳ ನಡುವೆ ಆಡಳಿತ ನಡೆಸಿದರು.  ಇವರು ತಮ್ಮನ್ನು "ಮಾನವ್ಯ ಗೋತ್ರಕ್ಕೆ ಸೇರಿದ ಹಾರೀತಿಪುತ್ರರು" ಎಂದು ಶಾಸನಗಳಲ್ಲಿ ಹೇಳಿಕೊಂಡಿದ್ದಾರೆ. ಕಾರಣ ಇವರು ಹಿಂದಿನ ಚುಟುಗಳ ಸಂಬಂಧಿಗಳಿರಬಹುದು ಎಂದು ನಂಬಲಾಗಿದೆ. ಬನವಾಸಿ ಇವರ  ಪ್ರಮುಖ  ಆಡಳಿತ ಕೇಂದ್ರವಾಗಿತ್ತು. ಬನವಾಸಿ ಮತ್ತು ಸುತ್ತಲಿನ ಪ್ರದೇಶಗಳನ್ನು  ಪ್ರಾಚೀನ ಕಾಲದಲ್ಲಿ ಕುಂತಳ ಎಂದು ಕರೆಯಲಾಗುತ್ತಿತ್ತು. ಶಿವಮೊಗ್ಗ, ಬೆಳಗಾವಿ, ಧಾರವಾಡ, ಚಿಕ್ಕಮಗಳೂರು ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿನ ಪ್ರದೇಶಗಳು ಇವರ ಆಡಳಿತದ ವ್ಯಾಪ್ತಿಗೆ ಒಳಪಟ್ಟಿದ್ದವು.

ಆಧಾರಗಳು: ಚಂದ್ರವಳ್ಳಿ, ಚಿತ್ರದುರ್ಗ ಜಿಲ್ಲೆ, ಹಲ್ಮಿಡಿ ಹಾಸನ ಜಿಲ್ಲೆ, ತಾಳಗುಂದ (ಸ್ಥಾಣಕುಂದೂರು) ಶಿವಮೊಗ್ಗ ಜಿಲ್ಲೆ, ಹೆಬ್ಬಟ್ಟ, ಮಳವಳ್ಳಿ, ಮಂಡ್ಯ ಜಿಲ್ಲೆ, ಗುಡ್ನಾಪುರಗಳಲ್ಲಿನ ಶಿಲಾಶಾಸನಗಳು. ಹಲಸಿ ತಾಮ್ರಪಟಗಳು, ಬೆಳಗಾವಿ ಜಿಲ್ಲೆ, ಬೀರೂರು ತಾಮ್ರಪಟಗಳು,  ಚಿಕ್ಕಮಗಳೂರು ಜಿಲ್ಲೆ,ದೇವಗಿರಿ, ರಾಣೆಬೆನ್ನೂರು ತಾ, ಸಂಗೊಳ್ಳಿಯ ತಾಮ್ರಪಟಗಳು. ೨ನೆ ಕಾಳಿದಾಸನ ಕೌಂತಳೇಶ್ವರ ದೌತ್ಯಂ. ತಾಳಗುಂದ, ಬನವಾಸಿ, ಚಿತ್ರದುರ್ಗ, ಹಲಸಿ ಮೊದಲಾದ ಸ್ಥಳಗಳಲ್ಲಿನ ಇವರ ಸ್ಮಾರಕಗಳು.

ಮೂಲ: ಶಾಂತಿವರ್ಮನ ತಾಳಗುಂದದ ಶಾಸನದಂತೆ ಮಯೂರಶರ್ಮ ಮೂಲಪುರುಷ. ತಂದೆ ಬಂಧುಶೇನ. ಗುರು ಮತ್ತು ಅಜ್ಜ, ವೀರಶರ್ಮ. ಮನೆಯ ಬಳಿಯ ಕದಂಬ ವೃಕ್ಷದ ಕಾರಣ ಮನೆತನದ ಹೆಸರು ಬಂದಿದೆ. ಮಳವಳ್ಳಿ ಶಾಸನದಲ್ಲಿ ಮೊದಲ ಅರಸನನ್ನು ʼದ್ವಿಜೋತ್ತಮʼ ಎಂದು ಉಲ್ಲೇಖವಿರುವ ಕಾರಣ ವೈದಿಕ ಧರ್ಮಕ್ಕೆ ಸೇರಿದ ಬ್ರಾಹ್ಮಣ ವರ್ಗದವರು ಎಂದು ನಂಬಲಾಗಿದೆ.

ಮಯೂರಶರ್ಮ ೩೪೫-೬೫:- ತಂದೆ ಬಂದುಸೇನ. ತಾಳಗುಂದದ ಅಗ್ರಹಾರದಲ್ಲಿ ಆರಂಭಿಕ ವೇದ ವಿದ್ಯಾಭ್ಯಾಸ. ನಂತರ ತಾತ/ಗುರು ವೀರಶರ್ಮನೊಂದಿಗೆ ಉನ್ನತ ವೇದಾಧ್ಯಯನಕ್ಕಾಗಿ ಕಂಚಿಗೆ ಪಯಣ. ಒಮ್ಮೆ ಸ್ನಾನಘಟ್ಟದ ಬಳಿ ಪಲ್ಲವರ ಅಶ್ವಪಡೆಯಿಂದ ಅವಮಾನಿತ. ಪಲ್ಲವರ ಆಸ್ಥಾನದಲ್ಲೂ ನ್ಯಾಯ ಸಿಗದೇ   ಅವರ ಸೊಕ್ಕು ಮುರಿಯಲು ರಾಜ್ಯ ನಿರ್ಮಾಣದ ತೀರ್ಮಾನ. “ಪಲ್ಲವಾಶ್ವಸಂಸ್ಥೆ ಕಲಹೇಣ ತ್ರಿವೇಣಿ ರೋಷಿತಹ” ಎಂಬ ಶಪಥ. ಬ್ರಾಮ್ಹಣ್ಯ ತ್ಯಜಿಸಿ ಕ್ಷತ್ರಿಯನಾಗಿ ವರ್ಣ ಬದಲಾವಣೆ. ದರ್ಬೆ ಹಿಡಿಯುವ ಕೈ ಉಜ್ವಲ ಖಡ್ಗ ಧಾರಣೆಮಾಡಿತು -ಎಂಬ ಮಾಹಿತಿ ತಾಳಗುಂದ ಶಾಸನದಿಂದ ಲಭ್ಯ. ಆಂಧ್ರ ಪ್ರದೇಶಕ್ಕೆ ಸೇರಿದ ಶ್ರೀಪರ್ವತದಲ್ಲಿ ಅಂದರೆ ಇಂದಿನ ಶ್ರೀಶೈಲದ ಬಳಿ ಬುಡಕಟ್ಟು ಜನರಿಂದ ಕೂಡಿದ ಸೈನ್ಯ ಸಂಘಟನೆ ಮಾಡಿದ. ನಂತರ ಪಲ್ಲವರ ಅಂತರಪಾಲ (ಗಡಿರಕ್ಷಕ) ರನ್ನು ಸೋಲಿಸಿ ಅವರನ್ನು ಓಡಿಸಿದ. ಪಲ್ಲವರ ಸಾಮಂತರಾದ ಕೋಲಾರದ ಬಳಿಯ ಬೃಹತ್‌ಬಾಣರನ್ನು ಸೋಲಿಸಿ ಅವರಿಂದ ಕಪ್ಪ ಸಂಗ್ರಹ ಮಾಡಿದನು. ಇದರಿಂದ ಕುಪಿತಗೊಂಡ ಪಲ್ಲವರು ಮಯೂರನ ಚಟುವಟಿಕೆಗಳನ್ನು ಹತ್ತಿಕ್ಕಲು ತಮ್ಮ ಬೃಹತ್‌ ಸೈನ್ಯ ರವಾನೆ ಮಾಡಿದರೂ ಅವನಿಂದ ಸೋಲು ಅನುಭವಿಸಬೇಕಾಯಿತು. ಮಯೂರನನ್ನು ಗೆಲ್ಲಲಾಗದ ಪಲ್ಲವರು ಕಡೆಗೆ ಪಶ್ಚಿಮ ಕರಾವಳಿಯಿಂದ ಪ್ರೇಹಾರ (ಮಲಪ್ರಭಾ) ನದಿಯವರೆಗಿನ ಪ್ರದೇಶಗಳ ಸ್ವತಂತ್ರ ರಾಜನೆಂದು ಮಾನ್ಯ ಮಾಡಿದರು. ಮಳವಳ್ಳಿಯ ಶಾಸನದಂತೆ ಪಲ್ಲವರ ಶಿವಸ್ಕಂದವರ್ಮನಿಂದ ಪಡೆದ ಕೆಲವು ದಾನ-ದತ್ತಿಗಳನ್ನು ಕದಂಬ ಅರಸನೊಬ್ಬ ಮುಂದುವರಿಸಿಕೊಂಡು ಹೋದನೆಂಬ ಉಲ್ಲೇಖದನ್ವಯ ಮಯೂರನಿಂದ ಸೋತವನು ಶಿವಸ್ಕಂದವರ್ಮನೆಂದು ಅಭಿಪ್ರಾಯಪಡಲಾಗಿದೆ. ಮಯೂರನಿಂದ ರಚಿಸಲ್ಪಟ್ಟ ಚಂದ್ರವಳ್ಳಿಯ ಶಾಸನವು ಪ್ರಾಕೃತದ್ದೆಂದುಅಭೀರರು, ತ್ರಿಕೂಟ, ಪಾರಿಯಾತ್ರಕರು, ಪುನ್ನಾಟ, ಪಲ್ಲವರು, ಮೌಖರಿಗಳು, ಶಕಸ್ಥಾನ & ಸೇಂದ್ರಕರನ್ನು ಸೋಲಿಸಿದನೆಂದು  M.H. ಕೃಷ್ಣರವರ ಅಭಿಪ್ರಾಯವಾಗಿತ್ತು. ಆದರೆ 1989 ರಲ್ಲಿ ಪ್ರೋ. B. ರಾಜಶೇಖರಪ್ಪರವರು ಇದು ಸಂಸ್ಕೃತದ್ದೆಂದೂ, ಚಂದ್ರವಳ್ಳಿಯ ಕೆರೆ ನಿರ್ಮಾಣದ ಮಾಹಿತಿ ಇದೆ ಎಂದು ಸಾಬೀತು ಪಡಿಸಿದ್ದಾರೆ. ಹೀಗೆ ಮಯೂರನು ಪಲ್ಲವರ ವಶದಲ್ಲಿದ್ದ ಕನ್ನಡದ ನೆಲಗಳ ಬಿಡುಗಡೆ ಮಾಡಿ ಸ್ವತಂತ್ರ ಕನ್ನಡ ರಾಜಮನೆತನವನ್ನು ಸ್ಥಾಪಿಸಿದ ಕೀರ್ತಿಗೆ ಪಾತ್ರನಾಗಿದ್ದಾನೆ. ಮಯೂರನು ಗುಪ್ತರ ಅರಸು ಸಮುದ್ರಗುಪ್ತನ ದಕ್ಷಿನದ ಪ್ರಾಂತ್ಯಗಳ ಮೇಲಿನ ದಾಳಿಯ ಕಾಲದ ಪಲ್ಲವರ ದುರ್ಬಲತೆಯ ಲಾಭ ಪಡೆದು ಸ್ವತಂತ್ರ ರಾಜ್ಯವನ್ನು ಕಟ್ಟಿದನು ಎಂದು  ಡಾ. ಮೋರಿಸ್‌ ಮತ್ತು ಪ್ರೊ. ನೀಲಕಂಠಶಾಸ್ತ್ರಿ ಅವು ಅಭಿಪ್ರಾಯಪಟ್ಟಿದ್ದಾರೆ.

ಕಂಗ ಅಥವಾ ಕೊಂಗುಣಿವರ್ಮ ೩೬೫-೯೦: ಇವನು ಅನೇಕ ಸಾಮಂತರಿಂದ ಗೌರವಿತನಾಗಿದ್ದನು. ಸಾಮಂತರ ದಂಗೆಗಳನ್ನು ಅಡಗಿಸಿ ಸಾರ್ವಭೌಮತ್ವದ ರಕ್ಷಣೆ ಮಾಡಿಕೊಂಡನು. ಆದರೆ ವಾಕಾಟಕರ ಪೃಥ್ವಿಸೇನನಿಂದ ಸೋಲು ಅನುಭವಿಸಿ ರಾಜ್ಯದ ಮೇಲಿನ ಒಡೆತನ ಕಳೆದುಕೊಳ್ಳಬೇಕಾಯಿತು. ಈ ಸಂದರ್ಭದಲ್ಲಿ ಕೆಲಕಾಲ ಕದಂಬರಿಗೆ ರಾಜಕೀಯ  ಹಿನ್ನಡೆ ಉಂಟಾಗಿತ್ತು. ಇದೇ ವೇಳೆ ಕಂಗವರ್ಮನ ಮಗ ಭಗೀರಥವರ್ಮನ ಜನನವಾಯಿತು. ಇವನನ್ನು “ಕದಂಬಕುಲ ಪ್ರಚ್ಛನ್ನ ಜನ್ಮ” ಎಂದು ತಾಳಗುಂದ ಶಾಸನದಲ್ಲಿ ಹೇಳಲಾಗಿದೆ. ಅಂದರೆ ಕಂಗವರ್ಮನ ರಾಜಕೀಯ ಹಿನ್ನಡೆಯ ಕಾಲಕ್ಕೆ ಕದಂಬ ಕುಲದಲ್ಲಿ ಗುಟ್ಟಾಗಿ ಹುಟ್ಟಿದವನು ಎಂಬರ್ಥ ಬರುತ್ತದೆ.

ಭಗೀರಥವರ್ಮ೩೯೦-೪೧೫: ಇವನು ತಂದೆಯ ಕಾಲದಲ್ಲಿ ಕಳೆದುಹೋದ ಮನೆತನದ ಕೀರ್ತಿಯ ಮರುಸ್ಥಾಪಕನಾಗಿದ್ದಾನೆ. ಇವನನ್ನು ʼಪೂರ್ಣ ಕದಂಬ ರಾಜ್ಯದ ಸ್ವಾಮಿʼ ಎಂದು ವರ್ಣಿಸಲಾಗಿದೆ. ತಂದೆಯ ಕಾಲದಲ್ಲಿ ಉಂಟಾಗಿದ್ದ ರಾಜ್ಯವನ್ನು ಇವನು ಮತ್ತೆ ಗಳಿಸಿದನೆಂದು ಹೇಳಲಾಗಿದೆ. ಗುಪ್ತರೊಂದಿಗೆ ಉತ್ತಮ ಸಂಬಂಧಗಳನ್ನು ಹೊಂದಿದ್ದನು.

ರಘುಪತಿವರ್ಮ 415-35: ಸ್ವತಂತ್ರರಾಗಲು ಹವಣಿಸಿದ ಸಾಮಂತರನ್ನು ಮಣಿಸಿ ಅಧೀನಕ್ಕೆ ಒಳಪಡಿಸಿದ. ಇವನು ಗುಪ್ತರ ೨ನೆ ಚಂದ್ರಗುಪ್ತನ ಸಮಕಾಲೀನನಾಗಿದ್ದನು. ಇವನ ಆಸ್ಥಾನಕ್ಕೆ ಕಾಳಿದಾಸ ಭೇಟಿ ನೀಡಿದ್ದ ಬಗ್ಗೆ ಕೌಂತಳೇಶ್ವರ ದೌತ್ಯಂನಿಂದ ಮಾಹಿತಿ ಲಭ್ಯ. ಆದರೆ, ಯಾವ ಕಾಳಿದಾಸನೆಂಬ ಬಗ್ಗೆ ಇನ್ನೂ ಜಿಜ್ಞಾಸೆ ಇದೆ. ಇದಕ್ಕೆ ಕಾರಣ ಕೌಂತಳೇಶ್ವರ ದೌತ್ಯಂ  ಕೃತಿ ಅಲಭ್ಯ. ಇವನು ಘನಪಂಡಿತನಾಗಿದ್ದನು. ಇವನು ಸಂತಾನರಹಿತನಾಗಿ ಗತಿಸಿದ  ಕಾರಣ ಇವನ ಸೋದರ ಕಾಕುಸ್ತ ಸಿಂಹಾಸನಕ್ಕೆ ಬಂದನು.

ಕಾಕುಸ್ತವರ್ಮ ೪೩೫-೫೫:  ಡಾ. ಮೋರೀಸ್ರವರು ಇವನ ಕಾಲವು ಅತ್ಯಂತ ವೈಭವದ ಕಾಲ ಎಂದಿದ್ದಾರೆ. ರಾಜ್ಯದ ವಿಸ್ತರಣೆ ಮಾಡಿದನು. ತಾಳಗುಂದ ಶಾಸನದಲ್ಲಿ ಕದಂಬ ಕುಲಭೂಷಣ ಎಂದು ವರ್ಣಿಸಲಾಗಿದೆ. ದೀನರು-ಪ್ರಜಾರಕ್ಷಕನಾಗಿದ್ದ ಇವನು ಪ್ರಜಾಪ್ರೀತಿಗೆ ಪಾತ್ರನಾಗಿದ್ದನು. ಇವನ ರಾಜ್ಯದಲ್ಲಿ ಚಂಚಲಳಾಗಿದ್ದ ಲಕ್ಷ್ಮಿ ಸ್ಥಿರವಾಗಿ ನೆಲೆಸಿದ್ದಳು. ಇವನು ತನ್ನ ನೆರೆರಾಜ್ಯಗಳೊಂದಿಗೆ ವೈವಾಹಿಕ ಸಂಬಂಧಗಳನ್ನು ಏರ್ಪಡಿಸಿದನು. ಗುಪ್ತರ ಕುಮಾರಗುಪ್ತನಿಗೆ ಪುತ್ರಿ ವಿವಾಹ ಮಾಡಿದ ಬಗ್ಗೆ  ಕೌಂತಳೇಶ್ವರ ದೌತ್ಯಂನಿಂದ ಮಾಹಿತಿ ಲಭ್ಯವಿದೆ. ವಾಕಾಟಕರ ನರೇಂದ್ರಸೇನನಿಗೆ ಅಜಿತ ಭಟ್ಟಾರಿಕೆಯನ್ನು ವಿವಾಹ ಮಾಡಿಕೊಟ್ಟ ಬಗ್ಗೆ ಭಾಲಾಘಾಟ್‌ ಶಾಸನದಿಂದ ಮಾಹಿತಿ ಲಭ್ಯ ಎಂದು D.C. ಸರ್ಕಾರ್‌ ಅಭಿಪ್ರಾಯಪಟ್ಟಿದ್ದಾರೆ. ಗಂಗರ ೨ನೆ ಮಾಧವನಿಗೆ ಮತ್ತೊಬ್ಬ ಮಗಳನ್ನು ನೀಡಿದ್ದನು. ಸಾಮಂತರಾಗಿದ್ದ ಭಟಾರಿ ಕುಲದ ಮಾಂಡಲೀಕನೊಬ್ಬನಿಗೆ ಮಗಳು ಲಕ್ಷ್ಮಿಯ ವಿವಾಹ ಮಾಡಿಕೊಟ್ಟನು. ಹೀಗೆ ಇವನು ಬೆಳೆಸಿದ ನೆರೆಯವರೊಂದಿಗಿನ ವೈವಾಹಿಕ ಸಂಬಂಧಗಳು ಇವನ ರಾಜನೀತಿ ನಿಪುಣತೆಗೆ ಸಾಕ್ಷಿಯಾಗಿವೆ. ಇವನು ಪ್ರಣವೇಶ್ವರ ದೇವಾಲಯದ ಬಳಿ ತಟಾಕದ  ಮಾಡಿಸಿದನುನಿರ್ಮಾಣ. ಇವನಿಗೆ ಇಬ್ಬರು ಮಕ್ಕಳಿದ್ದು, ಶಾಂತಿವರ್ಮನು ಬನವಾಸಿಯಲ್ಲೂ & ಕೃಷ್ಣವರ್ಮನು ತ್ರಿಪರ್ವತದಲ್ಲೂ ಆಳತೊಡಗಿ ಎರಡು ಶಾಖೆಗಳು ಏರ್ಪಟ್ಟವು. ತ್ರಿಪರ್ವತವು ಬೆಳಗಾವಿ ಜಿಲ್ಲೆಯ ಮುರಗೋಡು ಎಂದು ಭಾವಿಸಲಾಗಿದ್ದು,ರಾಣೆಬೆನ್ನೂರು ಬಳಿಯ ದೇವಗಿರಿ ಇರಬಹುದು ಎಂದು ಈಗ ನಂಬಲಾಗಿದೆ.

ಶಾಂತಿವರ್ಮ 455-60: ದಕ್ಷಿಣದಲ್ಲಿ ಮಾಂಡಲೀಕನಾಗಿದ್ದ ಇವನ  ಸೋದರ ಕೃಷ್ಣನ ಮಗ ವಿಷ್ಣು ತನ್ನ ಬೀರೂರು ತಾಮ್ರಪಟದಲ್ಲಿ ಚಿಕ್ಕಪ್ಪ ಶಾಂತಿವರ್ಮನನ್ನು “ಧರ್ಮಮಹಾರಾಜ, ಸಮಗ್ರ ಕರ್ನಾಟದೇಶ ಭೂವರ್ಗ ಬ್ರರ್ತಾರ” ಎಂದು ಹೊಗಳಿದ್ದಾನೆ. ಇವನ ಆಳ್ವಿಕೆ ಅಲ್ಪಕಾಲದ್ದಾಗಿತ್ತು.

ಮೃಗೇಶವರ್ಮ 460-80: ಇವನು ಶಾಂತಿವರ್ಮನ ಮಗ. ಬನವಾಸಿ ಮೃಗೇಶನ ಪ್ರಮುಖ ಆಡಳಿತ ಕೇಂದ್ರವಾಗಿತ್ತು. ಪಲಾಸಿಕ ಅಂದರೆ ಇಂದಿನ ಬೆಳಗಾವಿ ಜಿಲ್ಲೆಯ ಹಲಸಿ ಇವನ ದ್ವಿತೀಯ ರಾಜಧಾನಿಯಾಗಿತ್ತು. ಕೇಕಯ ವಂಶದ ಪ್ರಭಾವತಿ ಇವನ ರಾಣಿಯಾಗಿದ್ದಳು. ಕೇಕಯರ ನಾಡು ಉತ್ತರ ಕನ್ನಡ ಜಿಲ್ಲೆಯಲ್ಲಿತ್ತು. ಇವನು ಗಂಗರ ವಿಷ್ಣುಗೋಪ ಮತ್ತು ಪಲ್ಲವರ ಸ್ಕಂದವರ್ಮರನ್ನು ಸೋಲಿಸಿದ್ದನು. ಉಚ್ಚಂಗಿಯಲ್ಲಿ (ದಾವಣಗೆರೆ ಜಿಲ್ಲೆ) ಇವನ ಸೋದರ ಕುಮಾರವರ್ಮನ ಆಡಳಿತವಿತ್ತೆಂದು ಡಾ. ಮೋರಿಸ್‌ ಹೇಳಿದ್ದು, ಇದನ್ನು  ಇತರ ವಿದ್ವಾಂಸರು ಒಪ್ಪಿಲ್ಲ. ಇವನನ್ನು “ಪರಮಬ್ರಾಹ್ಮಣ” ನೆಂದು ಶಾಸನಗಳಲ್ಲಿ ವರ್ಣಿಸಲಾಗಿದೆ. ಇವನು ವೈದಿಕ ಧರ್ಮೀಯನಾದರೂ ಜೈನಧರ್ಮದ ಪೋಷಕನಾಗಿದ್ದನು. ಇವನ ಮರಣದ ಕಾಲಕ್ಕೆ ಮಕ್ಕಳು ರವಿವರ್ಮ, ಶಿವರಥಿವರ್ಮ & ಬಾನುವರ್ಮರೆಂಬುವರು ಅಪ್ರಾಪ್ತರಾದ ಕಾರಣ ಉಚ್ಚಂಗಿಯ ಶಿವ ಮಾಂಧಾತೃವರ್ಮನ (480-85) ತಾತ್ಕಾಲಿಕ ಆಡಳಿತ ಏರ್ಪಟ್ಟಿತ್ತು. ನಂತರ ಮಗ ರವಿವರ್ಮನ ಆಡಳಿತ ಆರಂಭವಾಯಿತು.

ರವಿವರ್ಮ 485-519: ಇವನದು ದೀರ್ಘಕಾಲದ ಆಡಳಿತ. ಇವನು ಗುಡ್ನಾಪುರ ಶಾಸನದ ಕರ್ತೃ. ಕಂಚಿಯ ಚಂಡದಂಡನನ್ನು ಸೋಲಿಸಿದ್ದ; ಅವನು ಪಲ್ಲವರ ಶಾಂತಿವರ್ಮನೆಂದು ಡಾ. ಸತ್ಯನಾಥ ಅಯ್ಯರ್‌ರವರ ಅಭಿಪ್ರಾಯವಾಗಿದೆ. ತ್ರಿಪರ್ವತದ ವಿಷ್ಣುವರ್ಮನ ಅಂತ್ಯ ಇವನಿಂದ ಆಯಿತು. ಉಚ್ಚಂಗಿಯ ವಿಷ್ಣುವರ್ಮನ ಬಂಡಾಯ ಅಡಗಿಸಿ ಅಲ್ಲಿಗೆ ತನ್ನ ಸೋದರ ಶಿವರಥನ ನೇಮಕ ಮಾಡಿದನು. ಅಲ್ಲದೇ ಗಂಗರ ಅವನೀತನನ್ನು ಸದೆಬಡಿದನು. ಮತ್ತೊಬ್ಬ ಸೋದರ ಭಾನುವರ್ಮ ಹಲಸಿಯಿಂದ ಆಳುತ್ತಿದ್ದ. ಆಳೂಪರು, ಕೊಂಗಾಳ್ವರು, ಪಾಂಡ್ಯರು & ಪುನ್ನಾಟರು ಇವನ ಮಾಂಡಲೀಕರೆಂಬ ಮಾಃಇತಿ ಗುಡ್ನಾಪುರ ಶಾಸನದಲ್ಲಿದೆ. ಇವನು ಗುಡ್ನಾಪುರದಲ್ಲಿ ಕೆರೆ ನಿರ್ಮಾಣ ಮಾಡಿಸಿದನು.

ಹರಿವರ್ಮ 519-25: ಬನವಾಸಿಯ ಕೊನೆಯ ಅರಸು. ಿವನು ಶಾಂತಿಪ್ರಿಯಅರಸನಾಗಿದ್ದ. ತ್ರಿಪರ್ವತದ ೨ನೆ ಕೃಷ್ಣವರ್ಮನಿಂದ ಇವನ ಕೊಲೆಯಾಯಿತು. ಇದರಿಂದ ಬನವಾಸಿಯ ಆಡಳಿತ ಅಂತ್ಯಗೊಂಡಿತು. ಮುಂದೆ ಚಾಲುಕ್ಯರ ೧ನೆ ಪುಲಕೇಶಿ ಕೃಷ್ಣವರ್ಮನನ್ನು ಕೊಂದು ಬನವಾಸಿಯನ್ನು ವಶಪಡಿಸಿಕೊಂಡನು. ಮುಂದಿನ ಅಜವರ್ಮ & ಭೋಗಿವರ್ಮರು ಚಾಲುಕ್ಯರ ಸಾಮಂತರಾಗಿ ಆಳ್ವಿಕೆ ನಡೆಸಿದರು. 

Comments

Popular posts from this blog

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಸಾಹಿತ್ಯಾಧಾರಗಳು - Literary Sources