ಸ್ಮೃತಿಗಳು:

   ಸ್ಮೃತಿ ಎಂಬ ಪದವು ತೈತ್ತರಿಯ ಆರಣ್ಯಕದಲ್ಲಿ ಮೊದಲು ಕಂಡುಬರುತ್ತದೆ. ಅಲ್ಲದೇ ಗೌತಮ ಸೂತ್ರ ಮತ್ತು ವಶಿಷ್ಠ ಸೂತ್ರಗಳಲ್ಲಿ ಸ್ಮೃತಿಯು ಧರ್ಮದ ಆಧಾರವೆಂದು ಹೇಳಲಾಗಿದೆ. ಇವುಗಳ ಉಗಮವನ್ನು ಕುರಿತಂತೆ ವಿದ್ವಾಂಸರು ಹೇಳಿರುವಂತೆ ವೈದಿಕ ಸಂಸ್ಕೃತ ಸಾಹಿತ್ಯವು ಕಾಲಾಂತರದಲ್ಲಿ ಬದಲಾವಣೆ ಹೊಂದಿ ವ್ಯಾಕರಣೋತ್ತರ ಸಂಸ್ಕೃತ ಭಾಷೆಯ ಕಾಲದಲ್ಲಿ ವೇದೋಕ್ತವಾದ ಧರ್ಮಸ್ವರೂಪವನ್ನು ಅರಿಯುವುದು ಜನತೆಗೆ ಕಠಿಣವೆನಿಸಿರಬೇಕು. ಆಗ ವೇದಸಮ್ಮತವಾದ ಧರ್ಮಮಾರ್ಗ ಬೋಧಕರ ಅವಶ್ಯಕತೆಯುಂಟಾಗಿಸ್ಮೃತಿಗಳ ಉಗಮಕ್ಕೆ  ಕಾರಣವಾಯಿತು. ವೇದ ಪಾರಂಗತರಾದ ಶ್ರೀ ಮನ್ನಾದಿ ಮಹರ್ಷಿಗಳು ಹೇಳುವಂತೆ “ಶ್ರುತಿಗಳಲ್ಲಿ ಅಂದರೆ ವೇದಗಳು, ಬ್ರಾಹ್ಮಣಕಗಳು, ಅರಣ್ಯಕಗಳು ಮತ್ತು ಉಪನಿಷತ್ತುಗಳಲ್ಲಿ ಉಕ್ತವಾಗಿರುವ ಧರ್ಮರಹಸ್ಯಗಳನ್ನು ತಮ್ಮ ಸ್ಮೃತಿಪಟಲಕ್ಕೆ ತಂದುಕೊಂಡು, ಅವುಗಳು ಜನಸಾಮಾನ್ಯರಿಗೆ ಅರ್ಥವಾಗುವಂತೆ ಸರ ಸಂಸ್ಕೃತ ಭಾಷೆಯಲ್ಲಿ ರಚಿಸಿದ ಧಾರ್ಮಿಕ ನಿಯಮಗಳೇ ಸ್ಮೃತಿಗಳು' ಎಂದಿದ್ದಾರೆ.

   ಸ್ಮೃತಿಗಳಲ್ಲಿ ಮುಖ್ಯವಾಗಿ ಆಚಾರ, ವ್ಯವಹಾರ ಮತ್ತು ಪ್ರಾಯಶ್ಚಿತ್ತ ಎಂಬ ಮೂರು ಭಾಗಗಳಿರುತ್ತವೆ. ಆಚಾರದಲ್ಲಿ ವ್ಯಕ್ತಿಯು ವೈಯುಕ್ತಿಕ, ಕೌಟುಂಬಿಕ ಮತ್ತು ಸಾಮಾಜಿಕ ಜೀವನದಲ್ಲಿ ಅನುಸರಿಸಬೇಕಾದ ನಿಯಮಗಳನ್ನು ಅಂದರೆ, ಮಾನವನು ಹುಟ್ಟಿನಿಂದ ಮರಣದವರೆಗೆ ಅನುಸರಿಸಬೇಕಾದ ಸಂಸ್ಕಾರಗಳು ವಿವರಿಸಲ್ಪಟ್ಟಿವೆ. ಎರಡನೆಯ ಭಾಗವು ಗೃಹಸ್ಥ ಮತ್ತು ಸಾಮಾಜಿಕ ಜೀವನಗಳಲ್ಲಿ ಎದುರಾಗುವ ವ್ಯವಹಾರಗಳಿಗೆ ಸಂಬಂಧಿಸಿದ ನಿಬಂಧನೆಗಳನ್ನು ತಿಳಿಸುತ್ತದೆ. ಇದರಲ್ಲಿ ಇಂದು ಆಚರಣೆಯಲ್ಲಿರುವ ಸಿವಿಲ್ ಮತ್ತು ಕ್ರಿಮಿನಲ್  ನಿಯಮಗಳಿಗೆ ಹೊಂದಿಕೆಯಾಗುವ ಅನೇಕ ನಿಬಂಧನೆಗಳು ಉಲ್ಲೇಖಿತವಾಗಿವೆ. ಮೂರನೆಯ ಭಾಗವು ಮಾನವನು ಮೇಲೆ ಹೇಳಿರುವ ನಿಯಮಗಳನ್ನು ಮೀರಿದ ಸಂದರ್ಭದಲ್ಲಿ ವಿಧಿಸಬೇಕಾದ ಪಶ್ಚಾತ್ತಾಪ ಅಥವಾ ದೇಹ ದಂಡನೆ ಗಳಿಗೆ ಸಂಬಂಧಿಸಿದ ಪವಿತ್ರ ಕರ್ತವ್ಯಗಳನ್ನು ಕುರಿತದ್ದು.

   ಸ್ಮೃತಿಗಳು ಎಷ್ಟು ಇವೆ ಎಂಬುದನ್ನು ಸ್ಪಷ್ಟವಾಗಿ ಹೇಳುವುದು ಕಷ್ಟಸಾಧ್ಯ. ಏಕೆಂದರೆ ವಿವಿಧ ಸ್ಮೃತಿಕಾರರು ಮತ್ತು ಗ್ರಂಥಗಳಲ್ಲಿ ಇವುಗಳ ಒಟ್ಟು ಸಂಖ್ಯೆಯ ಬಗ್ಗೆ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿವೆ. ಉದಾ: ಬೋಧಾಯನನು ತಾನೂ ಸೇರಿದಂತೆ ಎಂಟು ಸ್ಮೃತಿಕಾರರನ್ನು ಉಲ್ಲೇಖಿಸಿದರೆ, ವಶಿಷ್ಟನು ಐವರು ಸ್ಮೃತಿಕಾರರನ್ನು ಉಲ್ಲೇಖಿಸಿದ್ದಾನೆ. ಆಪಸ್ತಂಭನು ಒಟ್ಟು ಹತ್ತು ಮಂದಿ ಸ್ಮೃತಿಕಾರರನ್ನು ಸೂಚಿಸುತ್ತಾನೆ. ಮನುವು ತಾನೂ ಸೇರಿ ಏಳು ಜನ ಸ್ಮೃತಿಕಾರರೆನ್ನುತ್ತಾನೆ. ಯಾಜ್ಞವಲ್ಕ್ಯನು ತಾನೂ ಸೇರಿ ಇಪ್ಪತ್ತು ಮಂದಿ ಸ್ಮೃತಿಕಾರರೆಂದಿದ್ದಾನೆ. ನೀಲಕಂಠ ಶಿವಾಚಾರ್ಯ (ಕ್ರಿ. . ೧೪೦೦) ಮನು, ಬೃಹಸ್ಪತಿ, ದಕ್ಷಗೌತಮ, ಯಮ, ಅಂಗೀರಸ, ಯೋಗೀಶ್ವರ, ಪ್ರಚೇತಾ, ಶಾತಾತಪ, ಪರಾಶರ, ಸಂವರ್ತ, ಉಶಸನ, ಶಂಖ, ಲಿಖಿತ, ಅತ್ರಿ, ವಿಷ್ಣು, ಆಪಸ್ತಂಭ, ಹಾರೀತ ಎಂಬ ಹದಿನೆಂಟು ಮಂದಿ ಸ್ಮೃತಿಕಾರರನ್ನೂ, ಜಾಬಾಲಿ, ನಾಚಿಕೇತ, ಸ್ಕಂದ, ಲೋಗಾಕ್ಷಿ, ಕಾಶ್ಯಪ, ವ್ಯಾಸ, ಸನತ್ಕುಮಾರ, ಶಂತನು, ಜನಕ, ಕ್ರತು, ಕಾತ್ಯಾಯನ, ಜಾತೂಕರ್ಣಿ, ಕಪಿಂಜಲ, ಬೋಧಾಯನ, ಕಣಾದ, ವಿಶ್ವಾಮಿತ್ರ, ಪೈಲೀನಸಿ ಮತ್ತು ಗೋಭಿಲ ಎಂಬ ಹದಿನೆಂಟು ಮಂದಿ ಉಪ ಸ್ಮೃತಿಕಾರರನ್ನೂ ಉಲ್ಲೇಖಿಸಿದ್ದಾನೆ. ಶ್ರೀಮನ್ನಿ ಜಗುಣಶಿವಯೋಗಿಗಳು ತಮ್ಮ ವಿವೇಕ ಚಿಂತಾಮಣಿಯಲ್ಲಿ ಹತ್ತೊಂಭತ್ತು ಮಂದಿ ಸ್ಮೃತಿಕಾರರನ್ನು ಸೂಚಿಸಿದ್ದಾರೆ. ಮೂವತ್ತಾರು ಸ್ಮೃತಿಗಳುಂಟೆಂದು ಮಿತಾಕ್ಷರದಿಂ ತಿಳಿದುಬರುತ್ತದೆ. ಗೌತಮ ಸ್ಮೃತಿಯಲ್ಲಿ ಐವತ್ತೇಳು ಸ್ಮೃತಿಗಳ ಪಟ್ಟಿ ಕಂಡುಬರುತ್ತದೆ.ಅಂತೆಯೇ ಸ್ಮೃತಿಗಳ ಕಾಲ ನಿರ್ಣಯದ ವಿಷಯದಲ್ಲಿ ಪಂಡಿತರಲ್ಲಿ ಭಿನ್ನಾಭಿಪ್ರಾಯಗಳಿವೆ. ಕೆ. ಎಸ್. ರಾಮಸ್ವಾಮಿ ಶಾಸ್ತ್ರಿಗಳು ಅವುಗಳ ಕಾಲವು ಕ್ರಿ. ಪೂ. ೨೦೦೦ ದಿಂದ ೧೦೦೦ದ ವರೆಗೆ ಎಂದು ಅಭಿಪ್ರಾಯ ಪಡುತ್ತಾರೆ. ಪ್ರೊ. ಮ್ಯಾಕ್ಸ್ ಮುಲ್ಲರ್ಅವರು ಕ್ರಿ. ಪೂ. ೬೦೦ ರಿಂದ ೨೦೦ರ ವರೆಗೆ ಎಂದು ಅಭಿಪ್ರಾಯ ಪಡುತ್ತಾರೆ. ಸರ್ ವಿಲಿಯಂ ಜೋನ್ಸ್  ಕ್ರಿ. ಪೂ. ೧೨೮೦ ಎಂದೂ, ಶ್ಲೆಗಲ್ (Schlegel) ಕ್ರಿ. ಪೂ. ೧೦೦೦ ಎಂದೂ, ಲ್ಫಿನ್‌ಸ್ಟನ್ ಕ್ರಿ. ಪೂ. ೯೦೦ ಎಂದೂ, ಪ್ರೊ. ವಿಲಿಯಮ್ಸ್ ಅವರು ಕ್ರಿ. ಪೂ. ೫ನೆಯ ಶತಮಾನವೆಂದೂ ಅಭಿಪ್ರಾಯ ಪಡುತ್ತಾರೆ. ಆದರೆ ಡಾ. ಬುಲ್ಹರ್ (Dr. Buhler) ಎಂಬುವರು ಸ್ಮೃತಿಗಳಲ್ಲಿ ಪ್ರಾಚೀನವಾದ ಮನುಸ್ಮೃತಿಯು ಕ್ರಿ. ಪೂ. ೩೦೦ ರಿಂದ ಕ್ರಿ. . ೩೦೦ ಮಧ್ಯದಲ್ಲಿ ರಚಿತವಾಗಿರಬೇಕೆಂದು ನಿರ್ಧರಿಸಿದ್ದಾರೆ.

ಪ್ರಮುಖವಾದ ಮತ್ತು ಜನಪ್ರಿಯವಾದ ಸ್ಮೃತಿಗಳೆಂದರೆ, ಮನುಸ್ಮೃತಿ, ನಾರದ ಸ್ಮೃತಿ, ಪರಾಶರ ಸ್ಮೃತಿ, ಯಾಜ್ಞವಲ್ಕ್ಯ ಸ್ಮೃತಿ, ವಿಷ್ಣು ಸ್ಮೃತಿ ಇತ್ಯಾದಿ. 

Comments

Popular posts from this blog

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಸಾಹಿತ್ಯಾಧಾರಗಳು - Literary Sources