ಕೆಳಗಿನ ವಾಕ್ಯವೃಂದಗಳನ್ನು ಮನಸಿಟ್ಟು ಓದಿಕೊಳ್ಳಿರಿ
ರಾಬಿನ್‌ಸನ್ ಕ್ರೂಸೊ ಓದಲು ಮೊದಲು ಮಾಡಿದೆ. ಲೈಬ್ರರಿಯ ಕೊಟ್ಟಕೊನೆಯಲ್ಲಿ ಇತರರಾರೂ ಹೆಚ್ಚಾಗಿ ಬರದೆ ಇರುತ್ತಿದ್ದ ಜಾಗದಲ್ಲಿ ಒಂದು ಕುರ್ಚಿಯಮೇಲೆ ಮೇಜಿನ ಮುಂದೆ ಕುಳಿತು ಓದತೊಡಗಿದೆ. ಸ್ವಲ್ಪ ಹೆಚ್ಚು ಕಡಿಮೆ ನನಗೆ ಯಾವಾಗಲೂ ಆ ಜಾಗದ ಆ ಕುರ್ಚಿಯೆ ಸಿಗುತ್ತಿತ್ತು. ಬೆಳಿಗ್ಗೆ ಲೈಬ್ರರಿಗೆ ಹೋಗಲು ಆಗುತ್ತಿರಲಿಲ್ಲ. ಸ್ನಾನ ಊಟಮಾಡಿ ಹನ್ನೊಂದು ಗಂಟೆಗೆ ಸ್ಕೂಲಿಗೆ ಹೋಗಬೇಕಾಗುತ್ತಿತ್ತು. ಸಂಜೆ ಐದು ಗಂಟೆಗೆ ಕ್ಲಾಸ್ ಬಿಟ್ಟಕೂಡಲೆ , ಓಡುತ್ತ ಹೋಗಿ ರೂಮಿನಲ್ಲಿ ಸ್ಕೂಲ್ ಬುಕ್ಕುಗಳನ್ನು ಎಸೆದು , ಲೈಬ್ರರಿಗೆ , ಹೆಚ್ಚು ಕಡಮೆ ಓಡುತ್ತಲೆ , ಹೋಗುತ್ತಿದ್ದೆ , ಇತರರು ಯಾರಾದರೂ ಆ ಪುಸ್ತಕವನ್ನು ನನಗಿಂತ ಮೊದಲೇ ತೆಗೆದುಕೊಂಡು ಬಿಟ್ಟಾರು ಎಂದು. ರಾತ್ರಿ ಒಂಬತ್ತು ಗಂಟೆಗೆ ಲೈಬ್ರರಿ ಮುಚ್ಚುತ್ತಿತ್ತು. ಅದರ ಸೂಚನೆಗಾಗಿ ಒಂದು ಹೆಗ್ಗಂಟೆ ಬಾರಿಸುತ್ತಿದ್ದರು. ಒಡನೆಯೆ ಓದುತ್ತಿದ್ದವರೆಲ್ಲರೂ ತಮ್ಮತಮ್ಮ ಪುಸ್ತಕಗಳನ್ನು ತೆಗೆದು ಕೊಂಡು ಹೋಗಿ ಗ್ರಂಥಪಾಲಕನ ಮೇಜಿನ ಮುಂದೆ ಇಟ್ಟು ಹೋಗುತ್ತಿದ್ದರು. ಆದರೆ ಸಾಮಾನ್ಯವಾಗಿ ರಾತ್ರಿ ಒಂಬತ್ತು ಗಂಟೆಯವರೆಗೂ ಯಾರೂ ಅಲ್ಲಿ ಓದುತ್ತಾ ಕುಳಿತಿರುತ್ತಿರಲಿಲ್ಲ. ಅದಕ್ಕೆ ಮುಂಚೆಯೆ ಎಲ್ಲರೂ ಹೋಗಿಬಿಟ್ಟಿದ್ದರೆ ಗ್ರಂಥಪಾಲಕರೂ ಅಟೆಂಡರೂ ಒಂಬತ್ತು ಗಂಟೆಗೆ ಮೊದಲೇ ಬಾಗಿಲು ಮುಚ್ಚಿಕೊಂಡು ಮನೆಗೆ ಹೋಗಿಬಿಡುತ್ತಿದ್ದರೆಂದು ತೋರುತ್ತದೆ. ಆದರೆ ನಾನು ಲೈಬ್ರರಿಗೆ ಹೋಗತೊಡಗಿದ ಮೇಲೆ ಅವರಿಗೆ ಆ ಸ...