ಕೆಳಗಿನ ವಾಕ್ಯವೃಂದಗಳನ್ನು ಮನಸಿಟ್ಟು ಓದಿಕೊಳ್ಳಿರಿ

ರಾಬಿನ್‌ಸನ್ ಕ್ರೂಸೊ ಓದಲು ಮೊದಲು ಮಾಡಿದೆ. ಲೈಬ್ರರಿಯ ಕೊಟ್ಟಕೊನೆಯಲ್ಲಿ ಇತರರಾರೂ ಹೆಚ್ಚಾಗಿ ಬರದೆ ಇರುತ್ತಿದ್ದ ಜಾಗದಲ್ಲಿ ಒಂದು ಕುರ್ಚಿಯಮೇಲೆ ಮೇಜಿನ ಮುಂದೆ ಕುಳಿತು ಓದತೊಡಗಿದೆ. ಸ್ವಲ್ಪ ಹೆಚ್ಚು ಕಡಿಮೆ ನನಗೆ ಯಾವಾಗಲೂ ಆ ಜಾಗದ ಆ ಕುರ್ಚಿಯೆ ಸಿಗುತ್ತಿತ್ತು. ಬೆಳಿಗ್ಗೆ ಲೈಬ್ರರಿಗೆ ಹೋಗಲು ಆಗುತ್ತಿರಲಿಲ್ಲ. ಸ್ನಾನ ಊಟಮಾಡಿ ಹನ್ನೊಂದು ಗಂಟೆಗೆ ಸ್ಕೂಲಿಗೆ ಹೋಗಬೇಕಾಗುತ್ತಿತ್ತು. ಸಂಜೆ ಐದು ಗಂಟೆಗೆ ಕ್ಲಾಸ್ ಬಿಟ್ಟಕೂಡಲೆ, ಓಡುತ್ತ ಹೋಗಿ ರೂಮಿನಲ್ಲಿ ಸ್ಕೂಲ್ ಬುಕ್ಕುಗಳನ್ನು ಎಸೆದು, ಲೈಬ್ರರಿಗೆ, ಹೆಚ್ಚು ಕಡಮೆ ಓಡುತ್ತಲೆ, ಹೋಗುತ್ತಿದ್ದೆ, ಇತರರು ಯಾರಾದರೂ ಆ ಪುಸ್ತಕವನ್ನು ನನಗಿಂತ ಮೊದಲೇ ತೆಗೆದುಕೊಂಡು ಬಿಟ್ಟಾರು ಎಂದು. ರಾತ್ರಿ ಒಂಬತ್ತು ಗಂಟೆಗೆ ಲೈಬ್ರರಿ ಮುಚ್ಚುತ್ತಿತ್ತು. ಅದರ ಸೂಚನೆಗಾಗಿ ಒಂದು ಹೆಗ್ಗಂಟೆ ಬಾರಿಸುತ್ತಿದ್ದರು. ಒಡನೆಯೆ ಓದುತ್ತಿದ್ದವರೆಲ್ಲರೂ  ತಮ್ಮತಮ್ಮ ಪುಸ್ತಕಗಳನ್ನು ತೆಗೆದು ಕೊಂಡು ಹೋಗಿ ಗ್ರಂಥಪಾಲಕನ ಮೇಜಿನ ಮುಂದೆ ಇಟ್ಟು  ಹೋಗುತ್ತಿದ್ದರು. ಆದರೆ ಸಾಮಾನ್ಯವಾಗಿ ರಾತ್ರಿ ಒಂಬತ್ತು ಗಂಟೆಯವರೆಗೂ ಯಾರೂ ಅಲ್ಲಿ ಓದುತ್ತಾ ಕುಳಿತಿರುತ್ತಿರಲಿಲ್ಲ. ಅದಕ್ಕೆ ಮುಂಚೆಯೆ ಎಲ್ಲರೂ ಹೋಗಿಬಿಟ್ಟಿದ್ದರೆ ಗ್ರಂಥಪಾಲಕರೂ ಅಟೆಂಡರೂ ಒಂಬತ್ತು ಗಂಟೆಗೆ ಮೊದಲೇ ಬಾಗಿಲು ಮುಚ್ಚಿಕೊಂಡು ಮನೆಗೆ ಹೋಗಿಬಿಡುತ್ತಿದ್ದರೆಂದು ತೋರುತ್ತದೆ. ಆದರೆ ನಾನು ಲೈಬ್ರರಿಗೆ  ಹೋಗತೊಡಗಿದ ಮೇಲೆ ಅವರಿಗೆ ಆ ಸೌಕರ್ಯ ತಪ್ಪಿಹೋಯಿತು. ನಾನು ಒಂಬತ್ತು ಗಂಟೆಯಾಗಿ, ಅವರು ಗಂಟೆ ಬಾರಿಸಿದರೂ ಓದುತ್ತಲೆ ಕುಳಿತಿರುತ್ತಿದ್ದೆ. ಒಂದೆರಡು ದಿನ ಆ ಸಾಬಿ ಸ್ವಲ್ಪ ದಾಕ್ಷಿಣ್ಯ ತೋರಿಸಿ ಕಾದು, ನನ್ನ ಬಳಿಗೆ ಬಂದು ಸಕರುಣ ವಿನಯ ಧ್ವನಿಯಿಂದ ಹೊತ್ತಾಯ್ತು ಎಂದು ಹೇಳಿ ಪುಸ್ತಕ ಈಸಿಕೊಂಡು ಹೋಗುತ್ತಿದ್ದನು. ಆದರೆ ಕ್ರಮೇಣ ಆತನಿಗೆ ತಾಳ್ಮೆ ತಪ್ಪಿ, ಪುಸ್ತಕವನ್ನು ನನ್ನ ಕೈಯಿಂದ ಕಸಿದುಕೊಂಡೇ ಹೋಗಲು ಶುರುಮಾಡಿದನು. ಆದರೆ ನಾನು ಮಾತ್ರ ಅವನು ಕಸಿದುಕೊಳ್ಳುವವರೆಗೂ ಓದಿಯೆ ಓದುತ್ತಿದ್ದೆ!

ರಜಾ ದಿನಗಳಲ್ಲಂತೂ ಬೆಳಿಗ್ಗೆ ಸಾಯಂಕಾಲ ಎರಡೂ ಹೊತ್ತೂ ಧಾವಿಸಿ ಹೋಗಿ ಓದುತ್ತಿದ್ದೆ. ಒಮ್ಮೊಮ್ಮೆ  ಬೆಳಿಗ್ಗೆ ಲೈಬ್ರರಿ ಬಾಗಿಲು ತೆಗೆಯುವ ಮುನ್ನವೇ ಹೋಗಿ ಬಾಗಿಲ ಬಳಿ ಕಾಯುತ್ತಾ ನಿಂತಿರುತ್ತಿದ್ದೆ. ಅಟೆಂಡರ್ ಮಹಾಶಯನು ಬಂದವನು ನಗು‌‌ತ್ತಾ ಬಾಗಿಲು ತೆಗೆದು ಒಳಗೆ ಬಿಡುತ್ತಿದ್ದ. ಅವನ ನಗುವಿನಲ್ಲಿ ‘ಯಾಕೆ ಇವನಿಗೆ ಈ ಪಿತ್ತ ಕೆದರಿದೆ? ಇಷ್ಟು ವರ್ಷದ ಸರ್ವಿಸ್ಸಿನಲ್ಲಿ ಯಾರನ್ನೂ ನೋಡಿಲ್ಲವಲ್ಲಾ ಹೀಗೆ ಓದುವ ಹುಚ್ಚು ಹಿಡಿದಿರುವವರನ್ನು? ಈ ಅಯ್ಯಂಗಾರಿಗೆ, ಪಾಪ, ತಲೆಯಲ್ಲಿ ಏನೋ ಐಬಾಗಿರಬೇಕು! ಎಂಬ ಕನಿಕರದ ಛಾಯೆ ಇರುತ್ತಿತ್ತು.

ನಾನು ಸ್ಕೂಲ್ ಬಿಟ್ಟಕೂಡಲೆ ಇತರರಿಗಿಂತ ಮುಂಚೆ ಓಡಿ-ಓಡಿ ಹೋಗಿ ಪುಸ್ತಕ ತೆಗೆದುಕೊಳ್ಳುತ್ತಿದ್ದರೂ ಒಂದೆರಡು ಸಾರಿ ನನಗಿಂತಲೂ ಮೊದಲೇ ಯಾರೋ ಪುಸ್ತಕ ತೆಗೆದುಕೊಂಡಿದ್ದೂ ಉಂಟು. ಆಗ ನನ್ನ ಗೋಳು ಹೇಳತೀರದು. ಆ ಪುಸ್ತಕ ತೆಗೆದುಕೊಂಡವನು ಎಲ್ಲಿ ಕೂತಿದ್ದಾನೆ ಎಂದು ಪತ್ತೆಹಚ್ಚಲು ಇಡೀ ಲೈಬ್ರರಿಯನ್ನೆ ಅಲೆಯುತ್ತಿದ್ದೆ, ಪ್ರತಿಯೊಬ್ಬರ ಹತ್ತಿರವೂ ನಿಂತೂ  ನಿಂತೂ! ಕಡೆಗೆ ಪತ್ತೆಯಾಗುತ್ತಿತ್ತು, ಒಬ್ಬನ ಕೈಲಿ! ಆಗ ಅವನ ಮೇಲೆ ನನ್ನ ಮತ್ಸರ ಕೆರಳುತ್ತಿತ್ತು. ಅವನ ಕೈಯಿಂದ ಪುಸ್ತಕ ಕಸಿದುಕೊಂಡುಬಿಡುವಂತೆ ಮನಸ್ಸಾಗುತ್ತಿತ್ತು. ತನ್ನ ಪತಿವ್ರತೆಯಾದ ಪ್ರಿಯೆಯನ್ನು ಇನ್ನೊಬ್ಬನು ಎತ್ತಿಕೊಂಡು ಹೋಗಿ ಇಟ್ಟುಕೊಂಡಿದ್ದನ್ನು ಕಂಡರೆ ಆಗುವಂತಹ ರೋಷ ಉಕ್ಕುತ್ತಿತ್ತು. ಅವನಾದರೂ ಅದನ್ನು ನಿಷ್ಠೆಯಿಂದ ಓದುವುದಕ್ಕಾಗಿ ತೆಗೆದುಕೊಂಡಿದ್ದಾನೆಯೇ? ಅದೂ ಅಲ್ಲ. ಸುಮ್ಮನೆ ಲೈಬ್ರರಿಗೆ ಬಂದವನು ಯಾವುದಾದರೂ ಒಂದು ಪುಸ್ತಕ ತೆಗೆದುಕೊಳ್ಳಬೇಕಲ್ಲಾ ಎಂದು ಅಕಸ್ಮಾತ್ತಾಗಿ ಇದನ್ನೇ ತೆಗೆದುಕೊಂಡುಬಿಟ್ಟಿದ್ದಾನೆ! ಏಕೆಂದರೆ ಆ ಪುಣ್ಯಾತ್ಮ ಮತ್ತೆಂದೂ ಆ ಪುಸ್ತಕ ತೆಗೆದುಕೊಳ್ಳಲಿಲ್ಲ. ಒಮ್ಮೊಮ್ಮೆ ಹಾಗೆ ತೆಗೆದುಕೊಂಡವರು ಒಂದು ಹತ್ತು ನಿಮಿಷ ಓದಿದಂತೆ ಮಾಡಿ ಹಿಂತಿರುಗಿಸಿಬಿಡುತ್ತಿದ್ದುದೂ ಉಂಟು. ಆಗ ನಾನು ಅಟೆಂಡರ್ ಮಹಾಶಯನಿಂದ ರಾಬಿನ್‌ಸನ್ ಕ್ರೂಸೋವನ್ನು ಈಸಿಕೊಳ್ಳುತ್ತಿದ್ದೆ. ಆತನೂ ತಿಂಗಳುಗಟ್ಟಲೆ ನನ್ನ ಪರಿಚಯವಾದ ಮೇಲೆ ನಾನೂ ಒಬ್ಬ ಆ ಸಾರ್ವಜನಿಕ ಗ್ರಂಥಾಲಯದ ಅವಿಭಾಜ್ಯ ಅಂಗವೆಂದು ಭಾವಿಸಿಬಿಟ್ಟು ನನಗೆ ವಿಶೇಷ ರೀತಿಯ ರಿಯಾಯಿತಿ ತೋರಿಸುತ್ತಿದ್ದ.

 

*****

 

ಒಮ್ಮೆ ಲ್ಯಾಂಡ್ಸ್ ಡೌನ್ ಬಿಲ್ಡಿಂಗ್ನ ಅಂಗಡಿ ಸಾಲುಗಳಲ್ಲಿದ್ದ ಒಂದು ಹಳೆ ಪುಸ್ತಕದಂಗಡಿ(ಸೆಕೆಂಡ್ ಹ್ಯಾಂಡ್ ಬುಕ್ ಸ್ಟಾಲ್)ಯಲ್ಲಿ  ಷೇಕ್ಸ್ ಪಿಯರ್ ನ ‘ಸಿಂಬಲೈನ್’ ನಾಟಕ ಕಂಡೆ. ಕ್ಯಾಲಿಕೊ ಪ್ರತಿಯಾಗಿದ್ದರೂ ಬೆಲೆಯೂ ಸುಲಭವಾಗಿದ್ದು ನನ್ನ ರಸಿಕತೆಗೆ ಎಟುಕುವಂತಿದ್ದುದರಿಂದ ಹಲವು ದಿನದ ಬಯಕೆಯಾಗಿದ್ದ ಅದನ್ನು ಕೊಂಡುಕೊಂಡೆ. ಒಡನೆಯ ನನ್ನ ಕೊಠಡಿಗೆ ಹೋದೆ. ಸಂಜೆಯಾಗಿದ್ದುದರಿಂದ ಎಲ್ಲರೂ ಹೊರಗೆ ಹೋಗಿದ್ದರು. ನಾನೊಬ್ಬನೆ ಚಾಪೆಯಮೇಲೆ ಕುಳಿತು ನನ್ನ ಹಾಸಿಗೆಯ ಸುರುಳಿಗೆ ಒರಗಿ ಪುಸ್ತಕ ಓದಲು ತೆರೆದೆ. ಏನು ಉತ್ಸುಕತೆ ಮಹಾಕವಿಯ ಕೃತಿ ಪ್ರವೇಶನಕ್ಕೆ!

ಮೊದಲನೆಯ ಅಂಕದ ಮೊದಲನೆಯ ದೃಶ್ಯದಿಂದಲೆ ಪ್ರಾರಂಭಿಸಿದೆ. ಒಂದೊಂದು ಪಂಕ್ತಿಯನ್ನೂ ಚೆನ್ನಾಗಿ ಅರ್ಥಮಾಡಿಕೊಂಡು ಭಾವವನ್ನು ಗ್ರಹಿಸಿಯೆ ಮುಂದುವರಿಯುವ ಹಟ. ಆದರೆ ಹತ್ತಾರು ಪಂಕ್ತಿಯನ್ನು ಓದಿದರೂ ಏನೂ ಅರ್ಥ ಹೊಳೆಯಲೆ ಇಲ್ಲ. ಕಷ್ಟ ಪದಗಳಿಗೆ ನಿಘಂಟನ್ನು ನೋಡಿ ತಿಳಿದು ಮತ್ತೆ ಓದಿದೆ. ಪ್ರಯೋಜನವಾಗಲಿಲ್ಲ. ಅರೆ! ಇದೇನು? ನನಗೆ ಇಂಗ್ಲಿಷ್ ಭಾಷೆ ಬರುತ್ತದೆ. ಎಸ್.ಎಸ್.ಎಲ್.ಸಿ ಓದುತ್ತಿದ್ದೇನೆ! ಆದರೆ ಷೇಕ್ಸ್ ಪಿಯರ್ ನ ಈ ನಾಟಕ ಏಕೆ ಅರ್ಥವಾಗುತ್ತಿಲ್ಲ. ನನ್ನ ವಿದ್ಯಾಹಂಕಾರಕ್ಕೆ ಒದೆ ಬಿದ್ದಂತಾಯಿತು. ನಿಘಂಟನ್ನೂ ನೋಡಿ ಪದಗಳಿಗೆಲ್ಲ ಅರ್ಥ ತಿಳಿದಿದ್ದೇನೆ. ಆದರೂ ಭಾವವಾಗುತ್ತಿಲ್ಲವಲ್ಲಾ? ಅಳು ಬಂದಂತಾಯಿತು. ಸಿಟ್ಟೂ ಬಂದಿತು. ಪುಸ್ತಕ ಮುಚ್ಚಿಟ್ಟು, ರೂಂ ಬಾಗಿಲಿಗೆ ಬೀಗ ಹಾಕಿಕೊಂಡು ನಿಷಾದ್ ಬಾಗಿನ ಕಡೆ ತಿರುಗಾಡಲು ಹೋದೆ.

ಮರುದಿನ ಮತ್ತೆ ಓದಲು ತೆಗೆದುಕೊಂಡೆ. ಮೊದಲನೆಯ  ಪಂಕ್ತಿಗಳೆ ಮೂದಲಿಸುವಂತೆ ತೋರಿತು. ನೋಡೋಣ ಎಂದು, ಪುಸ್ತಕಕ್ಕೆ ಬರೆದಿದ್ದ ಪೀಠಿಕೆಯಲ್ಲಿದ್ದ ಕಥಾ ಸಾರಾಂಶವನ್ನು ಓದಿದೆ. ಕಥೆಯೇನೊ ತಕ್ಕಮಟ್ಟಿಗೆ ಗೊತ್ತಾಯಿತು. ಅದನ್ನು ಆಧಾರವಾಗಿಟ್ಟುಕೊಂಡು ಮತ್ತೆ ಮೊದಲನೆಯ ದೃಶ್ಯವನ್ನು ಓದತೊಡಗಿದೆ. ಉಹ್ಞು! ಏನೂ ಅರ್ಥವಾಗಲಿಲ್ಲ. ಸಿಟ್ಟೇರಿತು! ಪುಸ್ತಕವನ್ನು ತೆಗೆದು ಎದುರಿಗೆ ಆರೇಳು ಅಡಿಗಳಲ್ಲಿದ್ದ ಗೋಡೆಗೆ ಬಲವಾಗಿ ಎಸೆದು ಅಪ್ಪಳಿಸಿಬಿಟ್ಟೆ! ಹಾಳೆಗಳೆಲ್ಲ ಹಕ್ಕಿಪುಕ್ಕಗಳಂತೆ ಕೆದರಿ, ಕ್ಯಾಲಿಕೊ ರಟ್ಟು ಗೋಡೆಗೆ ಡಿಕ್ಕಿಯಾದ ಹೊಡೆತಕ್ಕೆ ಹಿಸಿದು, ರಪ್ಪನೆ ಕೆಳಗೆ ಬಿತ್ತು. ಕಣ್ಣಲ್ಲಿ ನೀರೂ ಬಂತು. ಅಯ್ಯೋ ದುಡ್ಡುಕೊಟ್ಟು ಕೊಂಡ ಪುಸ್ತಕ  ಹಾಳಾಯಿತಲ್ಲಾ ಎಂದೂ ಕರುಳು ಕಿವಿಚಿತು. ಎದ್ದುಹೋಗಿ ಅದನ್ನೆತ್ತಿಕೊಂಡು ಹಾಳೆರಟ್ಟುಗಳನ್ನೆಲ್ಲ ಸರಿಪಡಿಸಿದೆ. ಮತ್ತೆ ಓದಲು ಪ್ರಯತ್ನಿಸಿದೆ.

ಈ ಸಾರಿ, ಮನಸ್ಸಿಗೆ ಹೊಳೆಯಿತು, ಅರ್ಥವಾಗದಿದ್ದರೂ ಓದುತ್ತಾ ಹೋಗಬೇಕೆಂದು. ಹೇಗಿದ್ದರೂ ಕಥೆ ಸ್ವಲ್ಪಮಟ್ಟಿಗೆ ಗೊತ್ತಿತ್ತು. ಸುಮ್ಮನೆ ಓದುತ್ತಾ ಹೋದೆ. ತಂತಿ ಅಲ್ಲಲ್ಲಿ ತುಂಡುಗಡಿದಿದ್ದರೂ ಸಮಿಪಗತವಾಗುವುದರಿಂದ ವಿದ್ಯುತ್ತು ತುಂಡಿನಿಂದ ತುಂಡಿಗೆ  ಹಾರುವಂತೆ ಅನೇಕ ಎಡೆಗಳಲ್ಲಿ ಅರ್ಥವಾಗದಿದ್ದರೂ ಕಥಾಸೂತ್ರದ ಸಹಾಯದಿಂದ ಭಾವಕಲ್ಪನೆಯಾಗಿ ಮನಸ್ಸಿಗೆ ಸಂತೋಷವಾಗ ತೊಡಗಿತು. ಪೂರ್ತಿ  ನಾಟಕವನ್ನು ಓದಿ ಮುಗಿಸಿಯೆಬಿಟ್ಟೆ! ಅಂತೂ ಕಡೆಯಲ್ಲಿ ಪರ್ವಾಗಿಲ್ಲ ಎನ್ನಿಸಿತು.

ನನಗಿಂತಲೂ ತಿಳಿದವರು ಯಾರಾದರೂ ನಮ್ಮ ಜೊತೆ ಇದ್ದಿದ್ದರೆ ಅವರಿಂದ ಓದಿಸಿ ಅರ್ಥ ಹೇಳಿಸಿಕೊಂಡು ಭಾವವಿವರಣೆ ಪಡೆದು ಅಷ್ಟೊಂದು ಪಾಡುಪಡದೆ ಮುಂದುವರಿಯಬಹುದಿತ್ತು. ಆದರೆ ಆಗ ನಾನಿದ್ದ ಸ್ಥಿತಿಯಲ್ಲಿ ಆ ಅನುಕೂಲವಿರಲಿಲ್ಲ. ನನ್ನ ರೂಮುಮೇಟುಗಳು ನನಗಿಂತಲೂ ಮಹಾಬೃಹಸ್ಪತಿಗಳು. ಬೇರೆಯವರ ಪರಿಚಯವಿಲ್ಲ. ಹೈಸ್ಕೂಲಿನ ಅಧ್ಯಾಪಕರು ಪಾಠಹೇಳಿಕೊಡುವುದೆ ಹರ್ಮಾಗಾಲವಾಗಿತ್ತು. ಅವರ ಮನೆಗಳನ್ನು ಹುಡುಕಿಕೊಂಡು ಹೋಗಿ, ಅವರ ಸಮಯ ಕಾದು, ಅದನ್ನೆಲ್ಲ ಮಾಡುವ ಚೇತನ ನನ್ನದಾಗಿರಲಿಲ್ಲ. ಆದ್ದರಿಂದ ಯಾರ ನೆರವನ್ನೂ ಹಾರೈಸದೆ ಏಕಾಂಗಸಾಹಸಿಯಾಗಿಯೆ ಮುಂದುವರಿಯಬೇಕಾಗಿತ್ತು. ಅದರಿಂದ ಒಂದು ದೊಡ್ಡ ಲಾಭವಾಯಿತು. ಸಾಹಿತ್ಯದೊಡನೆ ಹೋರಾಡಿ, ಅರ್ಥದೊಡನೆ ಗುದ್ದಾಡಿ, ತಪ್ಪೊನೆಪ್ಪೊ ಭಾವಗಳೊಡನೆ ಗರುಡಿಮಾಡಿ, ನನ್ನ ಬುದ್ಧಿಗೆ ವ್ಯಾಯಾಮ ಒದಗಿ ಬಲಿಷ್ಠವಾಯಿತು; ಉಜ್ಜಿಉಜ್ಜಿ ನನ್ನ ಭಾವಶಕ್ತಿ ಉಜ್ವಲವಾಯಿತು; ಪ್ರತಿಭೆಗೆ ಒಂದು ಕೆಚ್ಚು ಲಭಿಸಿ, ಆತ್ಮಪ್ರತ್ಯಯ ನಿಷ್ಠೆಗೆ ನಾಂದಿಯಾಯಿತು. ಆದ್ದರಿಂದ ನಾನು ಎಸ್.ಎಸ್.ಎಲ್.ಸಿ ತರಗತಿಯಲ್ಲಿರುವಾಗಲೆ ಷೇಕ್ಸ್ ಪಿಯರ್ ನಾಟಕಗಳನ್ನೂ ಮಿಲ್ಟನ್ ಕವಿಯ ಪ್ಯಾರಡೈಸ್ ಲಾಸ್ಟ್ ಕಾವ್ಯವನ್ನೂ ಓದಲು ಸಮರ್ಥನಾದೆ.

 

***** 

Comments

Popular posts from this blog

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಸಾಹಿತ್ಯಾಧಾರಗಳು - Literary Sources