ಅಧ್ಯಾಯ 7. ಆರ್ಥಿಕಾಭಿವೃದ್ಧಿ; ನೆಹರು ಕಾಲದ ಆರ್ಥಿಕ ಪರಂಪರೆ – ಪಂಚವಾರ್ಷಿಕ ಯೋಜನೆಗಳು, ಜಮೀನ್ದಾರಿ ಪದ್ಧತಿಯ ರದ್ದತಿ – ಭೂದಾನ ಚಳವಳಿ ಮತ್ತು ಹಸಿರು ಕ್ರಾಂತಿ.
ಪೀಠಿಕೆ : ಸ್ವಾತಂತ್ರದ ಕಾಲಕ್ಕೆ ಭಾರತವು ಹದಗೆಟ್ಟ ಆರ್ಥಿಕ ಪರಿಸ್ಥಿತಿಯನ್ನು ಹೊಂದಿತ್ತು. ಇದಕ್ಕೆ ಕಾರಣವೆಂದರೆ ಬ್ರಿಟಿಷರ ಆಡಳಿತವು ನಮ್ಮ ಆರ್ಥಿಕತೆಯನ್ನು ಅಷ್ಟು ದುರ್ಬಲಗೊಳಿಸಿತ್ತು. ಇದರಿಂದ ಭಾರತವು ಜಾಗತಿಕ ಮಟ್ಟದ ಕೈಗಾರಿಕಾ ಪೈಪೋಟಿಯಲ್ಲಿ ಭಾಗವಹಿಸದಾಯಿತು. ಕಡುಬಡತನ, ಅನಕ್ಷರತೆ, ಕೈಗಾರಿಕೆ ಹಾಗೂ ಕೃಷಿಯ ಹಿಂದುಳಿಯುವಿಕೆ ಮತ್ತು ಮೂಲಭೂತ ಸೌಲಭ್ಯಗಳ ಕೊರತೆಗಳು ಭಾರತವು ಆರ್ಥಿಕ ಕ್ಷೇತ್ರದಲ್ಲಿ ಸ್ವಾವಲಂಬಿಯಾಗುವಲ್ಲಿ ಅಡ್ಡಿಯಾಗಿದ್ದವು. ಇಂತಹ ಸನ್ನಿವೇಶದಲ್ಲಿ ನೆಹರು ಮತ್ತು ಕೆಲವು ಆರ್ಥಿಕ ತಜ್ಞರಿಗೆ ಭಾರತದ ಆರ್ಥಿಕಾಭಿವೃದ್ಧಿಗಾಗಿ ಕ್ರಮ ಕೈಗೊಳ್ಳುವ ಅನಿವಾರ್ಯತೆ ಉಂಟಾಗಿತ್ತು. ಜಾಗತಿಕವಾಗಿ ಆರ್ಥಿಕ ಯೋಜನೆಗಳ ಆರಂಭ: ಒಂದನೆಯ ಮಹಾಯುದ್ಧದ ಅನಂತರ ೧೯೨೯ರ ಸುಮಾರಿಗೆ ಇಡೀ ಯುರೋಪ್ ಖಂಡವೇ ಬಹು ತೀವ್ರವಾದ ಆರ್ಥಿಕ ಮುಗ್ಗಟ್ಟನ್ನು ಎದುರಿಸಬೇಕಾಯಿತು. ಇದರಿಂದ ಅನೇಕ ರಾಷ್ಟ್ರಗಳಲ್ಲಿ ರಾಜಕೀಯ ಅಸ್ಥಿರತೆ ಉಂಟಾಗಿ ಸರ್ವಾಧಿಕಾರಿಗಳ ಆಡಳಿತ ಜಾರಿಗೆ ಬರಲು ಕಾರಣವಾಯಿತು. ಇದೇ ಸಮಯದಲ್ಲಿ ಸೋವಿಯತ್ ರಷ್ಯ ಆರ್ಥಿಕ ಯೋಜನೆ ಯನ್ನು ಪ್ರಾರಂಭಿಸಿದುದರಿಂದ ಯುರೋಪಿನ ಆರ್ಥಿಕ ಮುಗ್ಗಟ್ಟು ಆ ದೇಶದ ಮೇಲೆ ಏನೂ ಪರಿಣಾಮ ಉಂಟುಮಾಡಲಿಲ್ಲ. ಈ ಘಟನೆಯಿಂದ ಯುರೋಪಿನ ಅನೇಕ ಅರ್ಥಶಾಸ್ತ್ರಜ್ಞರು ಪ್ರಭಾವಿತರಾದರು. ಅಮೆರಿಕದ ಅಧ್ಯಕ್ಷ ಫ್ರಾಂಕ್ಲಿನ್ ಡಿ ರೂಸ್ವೆಲ್ಟ್ ಆರ್ಥಿಕ ಮುಗ್ಗಟ್ಟಿನಿಂದ ಉಂಟಾದ ಪರಿಸ್ಥಿತಿಯನ್ನು ಪರಿಹರಿಸಲು “ನ್ಯೂ ಡೀಲ್...