ಪ್ರಾಚೀನ ಭಾರತದ ಇತಿಹಾಸ ಪುನರ್‌ ರಚನೆ; ಮೂಲಾಧಾರಗಳು

ಪ್ರಾಚೀನ ಭಾರತದ ಇತಿಹಾಸ ಪುನರ್‌ ರಚನೆ

ಮೂಲಾಧಾರಗಳು ಮತ್ತು ವರ್ಗೀಕರಣ.

SOURCES AND CLASSIFICATION

    ಗತಿಸಿಹೋದ ಘಟನೆಗಳ ವ್ಯವಸ್ಥಿತ ಅಧ್ಯಯನವೇ ಇತಿಹಾಸ. ಗತಕಾಲದ ಘಟನೆಗಳನ್ನು ಕಾಲಾನುಕ್ರಮದಲ್ಲಿ ಸಂಯೋಜಿಸುವ ಕಾರ್ಯವನ್ನು ಇತಿಹಾಸದ ಪುನರ್‌ ರಚನೆ ಎನ್ನುವರು. ಇತಿಹಾಸದ ಪುನರ್‌ ರಚನೆಗೆ ಆಧಾರಗಳು ಅತ್ಯವಶ್ಯಕ. ಆಧಾರಗಳಿಲ್ಲದೇ ಇತಿಹಾಸವಿಲ್ಲ. ಆಧಾರಗಳಿಲ್ಲದೇ ರಚಿಸಿದ ಇತಿಹಾಸವು ಇತಿಹಾಸವಲ್ಲ; ಅದು ಕಪೋಲಕಲ್ಪಿತ ಅಥವಾ ಕಟ್ಟುಕಥೆ ಎನಿಸಿಕೊಳ್ಳುತ್ತದೆ. ಇತಿಹಾಸ ಪುನರ್‌ ರಚನೆಗೆ ಬಳಸುವ ಆಧಾರಗಳನ್ನು ಮೂಲಾಧಾರಗಳು ಎಂತಲೂ ಕರೆಯುವರು.  ಇಂತಹ ಮೂಲಾಧಾರಗಳು ಐತಿಹಾಸಿಕ ಮಹತ್ವವನ್ನು ಹೊಂದಿರಬೇಕು. ಯಾವುದೇ ದೇಶದ ಇತಿಹಾಸ ಪುನರ್‌ ರಚನೆಗೆ ವಿವಿಧ ಮೂಲಾಧಾರಗಳ ಅವಶ್ಯಕತೆ ಇರುತ್ತದೆ. ಆದರೆ ಪ್ರಾಚೀನ ಭಾರತದ ಇತಿಹಾಸ ರಚಿಸುವಲ್ಲಿ ಆಧಾರಗಳ ಕೊರತೆಯನ್ನು ವಿದ್ವಾಂಸರು ಎದುರಿಸುತ್ತಿದ್ದಾರೆ. ಇದಕ್ಕೆ ಕಾರಣ ಪ್ರಾಚೀನ ಭಾರತೀಯರಿಗೆ ಐತಿಹಾಸಿಕ ಪ್ರಜ್ಞೆಯ ಕೊರತೆ ಇದ್ದು, ಅವರು ಇತಿಹಾಸದ ಕೃತಿಗಳನ್ನು ರಚಿಸಿಲ್ಲ ಎಂಬುದು ಬಹುತೇಕ ವಿದ್ವಾಂಸರ ಅಭಿಪ್ರಾಯ. ಪ್ರಾಚೀನ ಭಾರತದ ಲಭ್ಯ ಸಾಹಿತ್ಯವು ಅಧಿಕ ಪ್ರಮಾಣದಲ್ಲಿ ಧಾರ್ಮಿಕ ಅಂಶಗಳನ್ನು ಒಳಗೊಂಡಿರುವುದೇ ಇದಕ್ಕೆ ಕಾರಣ. ಆದ್ದರಿಂದಲೇ ಅರಬ್‌ ವಿದ್ವಾಂಸ ಅಲ್ಬೇರೂನಿ (12 ನೆ ಶತಮಾನದ ಆದಿಭಾಗ) “ಭಾರತೀಯರನ್ನು ತಮ್ಮ ಪೂರ್ವ ಇತಿಹಾಸದ ಬಗ್ಗೆ ಕೇಳಿದರೆ ಒಂದೇಸಮನೇ ಕತೆ ಹೇಳಲು ತೊಡಗುತ್ತಾರೆ” ಎಂದಿದ್ದಾನೆ. R.C ಮಜೂಮದಾರ್‌ ಅವರೂ ಸಹಾ “ಇತಿಹಾಸ ಕೃತಿಗಳ ರಚನೆಗೆ ಸಂಬಂಧಿಸಿದಂತೆ ಭಾರತೀಯರು ತೋರಿಸಿರುವ ಅನಾಸ್ಥೆಯು ನಮ್ಮ ಸಂಸ್ಕೃತಿಯ ದೊಡ್ಡ ದೋಷವಾಗಿದೆ” ಎಂದಿದ್ದಾರೆ. ಶಾಸನತಜ್ಞ ಜಾನ್‌ ಫ್ಲೀಟ್‌ ಅವರೂ ಸಹಾ “ಪ್ರಾಚೀನ ಭಾರತೀಯರಿಗೆ ಐತಿಹಾಸಿಕ ಪ್ರಜ್ಞೆಯ ಕೊರತೆ ಇದೆ” ಎಂದಿದ್ದಾರೆ. ಆದರೆ ಖ್ಯಾತ ವಿದ್ವಾಂಸರಾದ A.B. ಕೀತ್‌ ರವರು “ಪ್ರಾಚೀನ ಗ್ರೀಕರ ಮೇಲೆ ಪರ್ಷಿಯನ್ನರು ದಾಳಿ ಮಾಡಿದ ಕಾರಣ ಎರೊಡಟಾಸ್‌ ಮತ್ತು ತುಸಿಡೈಡಸ್‌ ರಂತಹ ಇತಿಹಾಸಕಾರರು ಗ್ರೀಕ್‌ ಇತಿಹಾಸದ ಕೃತಿಗಳನ್ನು ರಚಿಸಿದರು. ಆದರೆ, ಪ್ರಾಚೀನ ಭಾರತದಲ್ಲಿ ಅಂತಹ ಯಾವುದೇ ಘಟನೆಗಳು ನಡೆದಿರದ ಕಾರಣ ಪ್ರಾಚೀನ ಭಾರತೀಯರು ಐತಿಹಾಸಿಕ ಕೃತಿ ರಚನೆಗೆ ಗಮನ ಹರಿಸಿಲ್ಲ. ಲಭ್ಯವಿರುವ ಪ್ರಾಚೀನ ಸಾಹಿತ್ಯದ ಕೃತಿಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಅವುಗಳಲ್ಲೂ ಸಹಾ ಐತಿಹಾಸಿಕ ಮಾಹಿತಿಗಳು ಲಭ್ಯವಾಗುತ್ತವೆ” ಎಂಬ ಮೌಲಿಕ ಅಭಿಪ್ರಾಯವನ್ನು ನೀಡಿದ್ದಾರೆ. ಕಾರಣ, ಋಗ್ವೇದ ಸೇರಿದಂತೆ ಇತರೆ ವೈದಿಕ ಸಾಹಿತ್ಯದಲ್ಲಿ ಹಲವಾರು ಐತಿಹಾಸಿಕ ಅಂಶಗಳನ್ನು ಅವರೇ ಸಂಶೋಧಿಸಿ ತೋರಿಸಿದ್ದಾರೆ. ಪುರಾಣಗಳಲ್ಲೂ ಸಹಾ ಸಾಕಷ್ಟು ಐತಿಹಾಸಿಕ ಘಟನೆಗಳ ವಿವರಗಳು ಲಭ್ಯವಿವೆ. ಅಂತೆಯೇ ಮಃಾಕಾವ್ಯ ಮಹಾಭಾರತವೂ ಸಹಾ ಒಂದು ಅರೆ ಐತಿಹಾಸಿಕ ಕೃತಿಯಾಗಿದೆ ಎಂಬುದು ವಿದ್ವಾಂಸರ ಅಭಿಪ್ರಾಯ. ಆದ್ದರಿಂದ ಪ್ರಾಚೀನ ಭಾರತೀಯರಿಗೆ ಐತಿಹಾಸಿಕ ಪ್ರಜ್ಞೆಯ ಕೊರತೆ ಇತ್ತು ಎಂಬುದು ಚರ್ಚಾಸ್ಪದ ವಿಷಯವಾಗಿದೆ.  

      ಮೂಲಾಧಾರಗಳಲ್ಲಿ ಐತಿಹಾಸಿಕ   ಮೌಲ್ಯವುಳ್ಳ ಪಳೆಯುಳಿಕೆಗಳು, ಪ್ರಾಚ್ಯ ವಸ್ತುಗಳು, ಶಾಸನಗಳು, ಕಟ್ಟಡಗಳು, ಸ್ಮಾರಕಗಳು, ಹಸ್ತಲಿಪಿಗಳು, ಓಲೆಗರಿಗಳು, ನಾಣ್ಯಗಳು, ದೇಶೀಯ ಮತ್ತು ವಿದೇಶಿಯ ಲೇಖಕರ ಕೃತಿಗಳು, ಪ್ರವಾಸ ಕಥನಗಳು, ಆತ್ಮಕಥನಗಳು, ವಂಶಾವಳಿಗಳು ಇತ್ಯಾದಿಗಳು ಮೂಲಾಧಾರಗಳೇ ಆಗಿವೆ. ಅಧ್ಯಯನದ ಅನುಕೂಲಕ್ಕಾಗಿ ಅವುಗಳನ್ನು ಕೆಳಕಂಡಂತೆ ವರ್ಗೀಕರಣ ಮಾಡಲಾಗಿದೆ.

ಮೂಲಾಧಾರಗಳ ವರ್ಗೀಕರಣ:- ಮೂಲಾಧಾರಗಳನ್ನು ಪ್ರಮುಖವಾಗಿ  ಎರಡು ವಿಧಗಳಾಗಿ ವರ್ಗೀಕರಣ ಮಾಡಬಹುದು. ಅವುಗಳೆಂದರೆ:-

1.       ಪುರಾತತ್ವ ಆಧಾರಗಳು: ಉತ್ಖನನಗಳು, ಶಾಸನಗಳು, ನಾಣ್ಯಗಳು & ಸ್ಮಾರಕಗಳು ಒಳಗೊಳ್ಳುತ್ತವೆ.

2.     ಸಾಹಿತ್ಯದ ಆಧಾರಗಳು (Literary Sources) ಅಥವಾ ಲಿಖಿತ ಆಧಾರಗಳು.

೧. ಉತ್ಖನನಗಳು:- ಭೂಮಿಯೊಳಗೆ ಹೂತು ಹೋಗಿರುವ ಪ್ರಾಚೀನ ಅವಶೇಷಗಳನ್ನು ವ್ಯವಸ್ಥಿತವಾಗಿ ಅಗೆಯುವ, ದಾಖಲಿಸುವ ಮತ್ತು ವೈಜ್ಞಾನಿಕವಾಗಿ ವಿಶ್ಲೇಷಣೆಗೆ ಒಳಪಡಿಸುವ ಪ್ರಕ್ರಿಯೆಯನ್ನು ಉತ್ಖನನ ಎನ್ನುವರು. ಇದರಲ್ಲಿ ಮತ್ತೆ ಎರಡು ವಿಧಗಳಿವೆ. ಅವುಗಳೆಂದರೆ:

ಅ. ಸಮತಲ ಉತ್ಖನನ ಮತ್ತು ಆ. ಲಂಬ ಉತ್ಖನನ.

ಭಾರತದಲ್ಲಿನ ಕೆಲವು ಪ್ರಮುಖ ಉತ್ಖನನಗಳು ಮತ್ತು ಸಂಶೋಧಕರ  ವಿವರಗಳು ಕೆಳಕಂಡಂತಿವೆ:

1. ಹರಪ್ಪಾ - ಡಾ. ದಯಾರಾಂ ಸಹಾನಿ - 1921

2. ಮೊಹೆಂಜೊದಾರೊ - R.D. ಬ್ಯಾನರ್ಜಿ - 1922

3. ತಕ್ಷಶಿಲೆ, ನಳಂದಾ ಮತ್ತು ಪಾಟಲೀಪುತ್ರಗಳು - ಡಾ. ಸ್ಪೂನರ್‌ - 1934

4. ನರ್ಮದಾ ನದಿ ತೀರ - H.D. ಸಂಕಾಲಿಯ

5. ದಕ್ಷಿಣ ಭಾರತದ ಪ್ರದೇಶಗಳು - ರಾಬರ್ಟ್‌ ಬ್ರೂಸ್‌ ಫೂಟ್

Comments

Popular posts from this blog

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಸಾಹಿತ್ಯಾಧಾರಗಳು - Literary Sources