ನಾಣ್ಯಶಾಸ್ತ್ರ ಮತ್ತು ಸ್ಮಾರಕಗಳು

   ನಾಣ್ಯಶಾಸ್ತ್ರ ಮತ್ತು ಸ್ಮಾರಕಗಳು ಪುರಾತತ್ವ ಶಾಸ್ತ್ರಾಧಾರಗಳ ಅಧ್ಯಯನದ ಭಾಗವಾಗಿವೆ.


“ನಾಣ್ಯಗಳ ವ್ಯವಸ್ಥಿತ ಅಧ್ಯಯನವನ್ನು ನಾಣ್ಯಶಾಸ್ತ್ರ ಅಥವಾ Numismatics ಎನ್ನುವರು.” ಇತರೆ ಮೂಲಗಳಿಂದ ಲಭ್ಯವಾಗುವ ಮಾಹಿತಿಗಳಿಗೆ ನಾಣ್ಯಗಳಿಂದ ಪೂರಕ ಅಂಶಗಳು ದೊರೆಯುತ್ತವೆ. ಕೆಲವು ರಾಜಮನೆತನಗಳ ಇತಿಹಾಸ ಪುನರ್‌ ರಚನೆಗೆ ನಾಣ್ಯಗಳೇ ಏಕೈಕ ಲಭ್ಯ ಆಧಾರಗಳಾಗಿವೆ. ಉದಾ: ವಾಯುವ್ಯ ಭಾರತವನ್ನಾಳಿದ ಇಂಡೋ-ಗ್ರೀಕರ (ಸಾ.ಶ.ಪೂ. 1-2 ನೆ ಶತಮಾನಗಳಲ್ಲಿ) ಮೂವತ್ತು ಅರಸರ ಬಗ್ಗೆ ಮಾಹಿತಿ ಲಭ್ಯವಿರುವುದು ಕೇವಲ ನಾಣ್ಯಗಳಿಂದಲೇ. ಪ್ರಾಚೀನ ಕಾಲದಿಂದಲೂ ಅಂದರೆ, ವೈದಿಕ ಕಾಲದಿಂದಲೂ (ಸಾ.ಶ.ಪೂ 1300) ನಾಣ್ಯಗಳ ಬಳಕೆ ಭಾರತದಲ್ಲಿ ಕಂಡುಬರುತ್ತದೆ. ಪಣ, ಕರ್ಶಪಣ, ನಿಷ್ಕ, ಶತಮಾನ, ಕೃಷ್ಣಾಲ ಎಂಬ ನಾಣ್ಯಗಳ ಉಲ್ಲೇಖಗಳು ವೈದಿಕ ಸಾಹಿತ್ಯದಲ್ಲಿ ಕಂಡುಬರುತ್ತವೆ. ಅಲ್ಲದೇ ಮೌರ್ಯರ ಕಾಲದ ಬೆಳ್ಳಿ ಮತ್ತು ತಾಮ್ರದ ನಾಣ್ಯಗಳು ದೊರೆತಿವೆ. ಅಂದಿನ ನಾಣ್ಯಗಳು ಗುರುತು ಹಾಕಿದ ಅಂದರೆ Punch marked ನಾಣ್ಯಗಳಾಗಿರುತ್ತಿದ್ದವು. ನಂತರದ ಕಾಲದಲ್ಲಿ ಎರಕ ಹಾಕುವ ನಾಣ್ಯ ಪದ್ಧತಿ ಆರಂಭವಾಯಿತು. ಪ್ರಾಚೀನ ಭಾರತದ ನಾಣ್ಯಗಳನ್ನು ಖಾಸಗಿ ನಾಣ್ಯಗಳೆಂದು ಕೆಲ ಯೂರೋಪಿನ ವಿದ್ವಾಂಸರು ಅಭಿಪ್ರಾಯಪಟ್ಟಿದ್ದರೂ, ಇತ್ತೀಚಿನ ಸಂಶೋಧನೆಗಳಿಂದ ಅವು ಸಾರ್ವಜನಿಕ ನಾಣ್ಯಗಳೆಂದು ಕಂಡುಬಂದಿದೆ. ಅಂತೆಯೇ ವಾಯುವ್ಯ ಭಾರತವನ್ನಾಳಿದ ಗ್ರೀಕರ ಪ್ರಭಾವದಿಂದ ಭಾರತದ ನಾಣ್ಯ ಪದ್ಧತಿಯಲ್ಲಿ ಕೆಲ ಬದಲಾವಣೆಗಳುಂಟಾದವು. ರಾಜರ ಹೆಸರುಗಳ ನಮೂದಿಸುವಿಕೆ, ಅವರ ಮುಖಮುದ್ರೆಗಳ ರಚನೆ, ತಂದೆಯ ಹೆಸರುಗಳನ್ನು ತಮ್ಮ ಹೆಸರಿನೊಂದಿಗೆ ಮುದ್ರಿಸುವುದು, ಕಲಾತ್ಮಕ ನಾಣ್ಯಗಳ ರಚನೆಯಂತಹ ಬದಲಾವಣೆಗಳು ಭಾರತೀಯ ನಾಣ್ಯ ಪದ್ಧತಿಯಲ್ಲಿ ಕಂಡುಬಂದವು. ನಂತರದ ಕಾಲದಲ್ಲಿ ಆಳಿದ ಕುಶಾಣರು, ಶಕರು ಸಹಾ ತಮ್ಮದೇ ನಾಣ್ಯಗಳನ್ನು ಟಂಕಿಸಿದರು. ಕುಶಾಣರು ದಿನಾರ ಎಂಬ ಚಿನ್ನದ ನಾಣ್ಯವನ್ನು ಮೊದಲಸಲ ಹೊರಡಿಸಿದರು. ಗುಪ್ತರಿಗಿಂತ ಮೊದಲು ಉತ್ತರ ಭಾರತವನ್ನಾಳಿದ ಯೌಧೇಯ ಗಣರಾಜ್ಯದ ಮಾಹಿತಿಯು “ಯೌಧೇಯಗಣಸ್ಯ ಜಯಃ” ಎಂಬ ಬರಹವುಳ್ಳ ನಾಣ್ಯಗಳಿಂದ ತಿಳಿದು ಬರುತ್ತದೆ. ನಾಣ್ಯಗಳ ಅಧ್ಯಯನದ ಮಹತ್ವವನ್ನು ಕೆಳಕಂಡ ಅಂಶಗಳಿಂದ ಗುರ್ತಿಸಬಹುದು:-

1.    ನಾಣ್ಯಗಳ ಅಧ್ಯಯನದಿಂದ ಕೆಲವು ರಾಜಮನೆತನಗಳ ಇತಿಹಾಸ ಪುನರ್‌ ರಚನೆಗೆ ಆಧಾರಗಳು ಲಭ್ಯ.

2.    ಅಂದಿನ ಕಾಲದ ಆರ್ಥಿಕ ಸ್ಥಿತಿ ತಿಳಿಯಲು ಸಾಧ್ಯವಾಗುತ್ತದೆ. ಉದಾ: ಗುಪ್ತರ ಆರಂಭದ ಮತ್ತು ಕೊನೆಯ ಕಾಲದ ನಾಣ್ಯಗಳು.

3.    ಅವುಗಳ ಮೇಲಿನ ಭಾಷೆಗಳ ಅಧ್ಯಯನದಿಂದ ಶಾಸನಗಳ ಭಾಷೆ ಮತ್ತು ಲಿಪಿ ತಿಳಿಯಲು ಸಾಧ್ಯವಾಗುತ್ತದೆ.

4.    ರಾಜ್ಯ ಮತ್ತು ಸಾಮ್ರಾಜ್ಯಗಳ ಗಡಿಗಳನ್ನು ಗುರ್ತಿಸಬಹುದು.

5.    ರಾಜರುಗಳ ಧಾರ್ಮಿಕ ಆಸಕ್ತಿಗಳು ಮತ್ತು ಅಭಿರುಚಿಗಳು ತಿಳಿದುಬರುತ್ತವೆ. ಉದಾ: ಸಮುದ್ರಗುಪ್ತನ ನಾಣ್ಯಗಳು.

6.    ಲೋಹಶಾಸ್ತ್ರದ ಬೆಳವಣಿಗೆಯ ಅಧ್ಯಯನಕ್ಕೂ ಇವು ಅವಕಾಶ ಒದಗಿಸುತ್ತವೆ.

7.    ವಿದೇಶಗಳೊಂದಿಗಿನ ಸಂಬಂಧಗಳ ಮಾಹಿತಿ ತಿಳಿದುಬರುತ್ತವೆ.

    ಆದರೆ, ಕೆಲವು ರಾಜಮನೆತನಗಳ ನಾಣ್ಯಗಳು ಅಲಭ್ಯವಾಗಿದ್ದು ಇದರಿಂದ ಅವರ ಇತಿಹಾಸ ಕುರಿತ ಕೆಲ ಮಾಹಿತಿಗಳು ಸಂಪೂರ್ಣವಾಗಿ ಲಭ್ಯವಾಗುವುದಿಲ್ಲ. ಉದಾ: ಬಾದಾಮಿಯ ಚಾಲುಕ್ಯರು ಮತ್ತು ರಾಷ್ಟ್ರಕೂಟರ ನಾಣ್ಯಗಳು ಸಾಕಷ್ಟು ಪ್ರಮಾಣದಲ್ಲಿ ಸಿಕ್ಕಿಲ್ಲ.


ಸ್ಮಾರಕಗಳು:- ಪ್ರಾಚೀನ ಕಾಲದ ದೇವಾಲಯಗಳು, ಕೋಟೆಗಳು, ಬಸದಿಗಳು, ಚೈತ್ಯಗಳು, ಸ್ತೂಪಗಳು, ಸ್ತಂಭಗಳು, ವಿಗ್ರಹಗಳು, ಮಸೀದಿಗಳು, ಸಮಾಧಿಗಳು ಇವೇ ಮೊದಲಾದವು ಸ್ಮಾರಕಗಳಾಗಿವೆ. ಇವುಗಳ ಅಧ್ಯಯನದಿಂದ ಇತಿಹಾಸದ ಪುನರ್‌ ರಚನೆಗೆ ವಿವಿಧ ಮಾಃಇತಿಗಳು ಲಭ್ಯವಾಗುತ್ತವೆ. ಅವುಗಳು ದೀರ್ಘಕಾಲದಿಂದ ಉಳಿದು ಬಂದಿದ್ದು ಮೂಕಸಾಕ್ಷಿಗಳಾಗಿ ಇತಿಹಾಸದ ಮಹತ್ವವನ್ನು ಸಾರುತ್ತವೆ. ಸ್ಮಾರಕಗಳ ಅಧ್ಯಯನದಿಂದ:-

1.    ವಿವಿಧ ವಾಸ್ತುಶಿಲ್ಪದ ಲಕ್ಷಣಗಳನ್ನು ತಿಳಿಯಬಹುದಾಗಿದೆ.

2.    ಶಿಲ್ಪಗಳ ಅಧ್ಯಯನವು ಶಿಲ್ಪಶೈಲಿಗಳ ಅಧ್ಯಯನಕ್ಕೆ ಮಹತ್ವದ ಆಧಾರಗಳಾಗಿವೆ.

3.    ನಿರ್ಮಾಣ ಕಲೆಯಲ್ಲಿ ಪ್ರಾಚೀನ ಕಾಲದಿಂದ ಆಗಿರುವ ಬದಲಾವಣೆಗಳನ್ನು ಅರಿಯಬಹುದು.

4.    ಅಂದಿನ ಜನರ ಹವ್ಯಾಸಗಳು, ಆಭರಣಗಳು, ಉಡುಗೆ ಮೊದಲಾದ ಸಾಮಾಜಿಕ ಸ್ಥಿತಿ-ಗತಿ ತಿಳಿಯಲು ಇವು ಪ್ರಮುಖ ಆಧಾರಗಳಾಗಿವೆ.

5.    ಶಿಲ್ಪಿಗಳ ನಿಪುಣತೆ, ಕಲಾಪ್ರಜ್ಞೆ ಮೊದಲಾದವುಗಳನ್ನು ಸ್ಮಾರಕಗಳ ಅಧ್ಯಯನದಿಂದ ತಿಳಿಯಬಹುದು.

   ಆದರೆ, ನಮ್ಮಲ್ಲಿನ ಐತಿಹಾಸಿಕ ಪ್ರಜ್ಞೆಯ ಕೊರತೆಯ ಕಾರಣ ಸ್ಮಾರಕಗಳು ಹಾಳಾಗುತ್ತಿದ್ದು ಇದು ನಮ್ಮ ಸಂಸ್ಕೃತಿಯ ನಾಶವಲ್ಲದೇ ಇತಿಹಾಸ ಪುನರ್‌ ರಚನೆಗೆ ತೊಡಕುಗಳನ್ನು ಉಂಟುಮಾಡುತ್ತದೆ. 

Comments

Popular posts from this blog

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಸಾಹಿತ್ಯಾಧಾರಗಳು - Literary Sources