ಇಲ್ತಮಶ್‌ - ಜೀವನ ಸಾಧನೆ; For Third Semester, K.U, Dharwad

ಇಲ್ತಮಶ್‌ 1211-36

ಆರಂಭಿಕ ಜೀವನ: ತುರ್ಕಿಸ್ತಾನದ ಇಲ್ಬರಿ ಪಂಗಡಕ್ಕೆ ಸೇರಿದ ಕುಲೀನ ಮನೆತನದವನು. ಸೋದರರ ಮತ್ಸರದ ಕಾರಣ ಗುಲಾಮನಾಗಿ ಮಾರಾಟ. ಜಮಾಲುದ್ದೀನ್‌ ಎಂಬ ವರ್ತಕನಿಂದ ಕುತುಬ್ ಉದ್‌ ದೀನ್‌ ಐಬಕನಿಗೆ ದೆಹಲಿಯಲ್ಲಿ ಮಾರಾಟ. ಐಬಕ್‌ ಆಗ ಘೋರಿಯ ರಾಜಪ್ರತಿನಿಧಿ. ದಕ್ಷತೆಯ ಕಾರಣ “ಅಮೀರ್‌ ಶಿಕಾರ್”‌ ಆಗಿ ನೇಮಕ. ಮುಂದೆ ಗ್ವಾಲಿಯರ್‌, ಬುಲಂದ್‌ ಶಹರ್‌ ಮತ್ತು ಬದೌನ್‌ ಗಳಲ್ಲಿ ಗವರ್ನರ್‌ ಆಗಿ ನೇಮಕ. ಐಬಕನ ಮಗಳೊಂದಿಗೆ ವಿವಾಹ. ಗುಲಾಮತನದಿಂದ ಬಿಡುಗಡೆ. “ಅಮೀರ್‌ ಉಲ್‌ ಉಮ್ರ” ಎಂಬ ಉನ್ನತ ಹುದ್ದೆ.

ಸಿಂಹಾಸನಾರೋಹಣ: 1211 ರಲ್ಲಿ. ಸುಲ್ತಾನ ಆರಾಮ್‌ ಶಾ ನನ್ನು ಸೋಲಿಸಿ ಪಟ್ಟವೇರಿದನು.

ಆರಂಭಿಕ ತೊಂದರೆಗಳು: ಸಿಂಹಾಸನ ಹೂವಿನ ಹಾಸಿಗೆ ಆಗಿರಲಿಲ್ಲ. ಘಸ್ನಿಯ ದೊರೆ ತಾಜುದ್ದೀನ್‌ ಎಲ್ಡೂಜ್‌ ಇವನನ್ನು ತನ್ನ ಪ್ರತಿನಿಧಿ ಎಂದು ಸಾರಿದ. ಪಂಜಾಬಿನಲ್ಲಿ ನಾಸಿರುದ್ದೀನ್‌ ಕುಬಾಚ ಇವನ ಅಧಿಕಾರ ಅಲ್ಲಗಳೆದು ಸ್ವತಂತ್ರ ಘೋಷಿಸಿಕೊಂಡ. ಬಂಗಾಳದ ಅಲಿಮರ್ದಾನ್‌ ಖಿಲ್ಜಿ ಅವಿಧೇಯನಾಗಿ ವರ್ತಿಸತೊಡಗಿದ. ರಜಪೂತರು ಜಾಲೋರ್‌, ರಣತಂಬೋರ್‌ ಮತ್ತು ಗ್ವಾಲಿಯರ್‌ಗಳಲ್ಲಿ ಪ್ರಬಲರಾಗುತ್ತಿದ್ದರು.

ದಿಗ್ವಿಜಯಗಳು: ಅ. ದೆಹಲಿಯಲ್ಲಿನ ತನ್ನ ವಿರೋಧಿ ಅಮೀರರನ್ನು ಸದೆಬಡಿದು, ಅವಧ್‌, ಬನಾರಸ್‌ ಮತ್ತು ಬದೌನಗಳಲ್ಲಿ ತನ್ನ ಸ್ಥಾನ ಭದ್ರಪಡಿಸಿಕೊಂಡನು.

ಆ. ತಾಜುದ್ದೀನ್‌ ಎಲ್ಡೂಜನ ವಿರುದ್ಧ ಗೆಲುವು 1216: ಎಲ್ಡೂಜನು 1215 ರಲ್ಲಿ ಲಾಹೋರ್‌ ವಶಪಡಿಸಿಕೊಂಡು ಪಂಜಾಬಿನ ಮೇಲೆ ಅಧಿಕಾರ ಸ್ಥಾಪಿಸಿದ್ದ. ಅವನನ್ನು ತರೈನ್‌ ಕದನದಲ್ಲಿ ಸೋಲಿಸಿ ಸೆರೆ ಹಿಡಿದು ಬದೌನ್‌ ನಲ್ಲಿ ಮರಣದಂಡನೆಗೆ ಗುರಿಪಡಿಸಿದ.

ಇ. ನಾಸಿರುದ್ದೀನ್‌ ಕುಬಾಚನ ದಮನ 1217 & 1228: ಎಲ್ಡೂಜನೊಂದಿಗಿನ ಹೋರಾಟದ ವೇಳೆ ನಾಸಿರುದ್ದೀನ್‌ ಕುಬಾಚನು ಲಾಹೋರ್‌ ವಶಪಡಿಸಿಕೊಂಡಿದ್ದ. ಅವನನ್ನು ಸೋಲಿಸಿ ಅಲ್ಲಿಂದ ಓಡಿಸಲಾಯಿತು. ಮುಂದೆ ಅವನು ಸಂಪೂರ್ಣ ಸೋತು ಸಿಂಧೂ ನದಿಯಲ್ಲಿ ಆತ್ಮಹತ್ಯೆ ಮಾಡಿಕೊಂಡನು.

ಈ. ಬಂಗಾಳದ ಆಕ್ರಮಣ 1225-27: 1213 ರಲ್ಲಿ ಅಲಿಮರ್ದಾನನ ಕೊಲೆಯ ನಂತರ ಘಿಯಾಸುದ್ದೀನ್‌ ಖಿಲ್ಜಿ ಎಂಬುವನು ಬಂಗಾಳದ ಸುಲ್ತಾನನಾದ. ಇವನು ಬಿಹಾರ ಪ್ರಾಂತ್ಯವನ್ನು ಆಕ್ರಮಿಸಿದ್ದ. 1225 ರಲ್ಲಿ ಇಲ್ತಮಶ್‌ ಬಂಗಾಳದ ಮೇಲೆ ದಾಳಿ ಮಾಡಲು ಘಿಯಾಸುದ್ದೀನ್‌ ಶರಣಾಗತನಾದ. ಬಿಹಾರಕ್ಕೆ ಜಾನಿ ಮಲಿಕ್‌ ಎಂಬುವವನನ್ನು ಗವರ್ನರ್‌ ಆಗಿ ನೇಮಿಸಿ ಹಿಂತಿರುಗಿದ. ಬಳಿಕ ಘಿಯಾಸುದ್ದೀನ್‌ ಮತ್ತೆ ದಂಗೆ ಏಳಲು ಅವನನ್ನು ಅಡಗಿಸಲು ತನ್ನ ಮಗ ನಾಸಿರುದ್ದೀನ್‌ ಮಹಮ್ಮದ್‌ ನನ್ನು ಇಲ್ತಮಶ್‌ ಸೈನ್ಯ ಸಮೇತ ಕಳುಹಿಸಿದ, 1227ರಲ್ಲಿ. ಈ ಯುದ್ಧದಲ್ಲಿ ಘಿಯಾಸುದ್ದೀನನು ಸೋತು ಹತನಾದನು. ಮಗ ನಾಸೀರುದ್ದೀನ್‌ ಅಲ್ಲಿ ಅಧಿಕಾರಿಯಾಗಿ ಮುಂದುವರಿದನು.

ಉ. ರಣತಂಬೋರ್‌ ವಿಜಯ 1226: ರಜಪೂತರಿಂದ ಗೆದ್ದುಕೊಂಡನು.

ಊ. ಮಾಂಡೊ 1227 ರಲ್ಲಿ ಮಾರವಾಡದ ರಜಪೂತರಿಂದ ಗೆದ್ದುಕೊಂಡನು.

ಋ. ಗ್ವಾಲಿಯರ್‌ 1232: ಮಂಗಲದೇವನಿಂದ ಗೆದ್ದುಕೊಂಡನು.

ಎ. ಮಾಳವದ ಮೇಲೆ ದಾಳಿ 1234: ಮಾಳವದ ಪರಮಾರರ ವಶದಲ್ಲಿದ್ದ ಬಿಲ್ಸಾ ಮತ್ತು ಉಜ್ಜಯಿನಿಗಳನ್ನು ಲೂಟಿ ಮಾಡಿದನು. ಉಜ್ಜಯಿನಿಯ ಮಹಾಕಾಲ ದೇವಾಲಯ ಹಾನಿಗೊಳಗಾಯಿತು.

ಏ. ದೊ-ಅಬ್‌ ಮೇಲೆ ವಿಜಯ: ಕನೋಜ್‌ ಮತ್ತು ರೋಹಿಲ್‌ ಖಂಡಗಳನ್ನು ವಶಪಡಿಸಿಕೊಂಡು ದೆಹಲಿಯ ಗಡಿಗಳನ್ನು ವಿಸ್ತರಿಸಿದನು.

ಐ. ಮಂಗೋಲರ ದಾಳಿಯ ಭೀತಿ 1221: ಪ್ರಥಮ ಬಾರಿಗೆ ಮಂಗೋಲರ ದಾಳಿ ಭಾರತದ ಮೇಲೆ. ಚಂಗೇಸ್‌ ಖಾನ (1155-1227) ಮಧ್ಯಏಷ್ಯಾದ ಕ್ವಾರಿಜಂ ರಾಜ್ಯದ ದೊರೆ ಅಲ್ಲಾವುದ್ದೀನ್‌ ಶಾ ಮತ್ತು ಅವನ ಮಗ ಜಲಾಲುದ್ದೀನ್‌ ಮಂಗವರ್ನಿಯರನ್ನು ಹೊಡೆದೋಡಿಸಿದನು. ಮಂಗಬರ್ನಿಯು ಪಂಜಾಬ್‌ ಪ್ರಾಂತ್ಯಕ್ಕೆ ಓಡಿಬಂದನು. ಅವನನ್ನು ಬೆನ್ನತ್ತಿ ಚಂಗೇಸ್‌ ಖಾನನ ಸೈನ್ಯ ಸಿಂಧ್‌ ನದಿಯ ತೀರಕ್ಕೆ ಬಂದಿತು. ಆಶ್ರಯ ಬೇಡಿದ ಮಂಗಬರ್ನಿಯ ಮನವಿಯನ್ನು ಇಲ್ತಮಶ್‌ ತಿರಸ್ಕರಿಸಿದ್ದನು. ಪಂಜಾಬದ ಬಿರುಬೇಸಿಗೆಯನ್ನು ತಡೆಯದ ಮಂಗೋಲರು ಹಿಂತಿರುಗಿದರು. ಆದರೆ, ಮಂಗಬರ್ನಿಯು ಉತ್ತರ ಗುಜರಾತ್‌ ಮತ್ತು ಸಿಂದಗಳಲ್ಲಿ ಲೂಟಿ ಮಾಡಿ 1224 ರಲ್ಲಿ ಪರ್ಷಿಯಾಕ್ಕೆ ಪಲಾಯನ ಮಾಡಿದನು.

ಓ. ಖಲೀಫನಿಂದ ಸಮ್ಮತಿ ಪತ್ರ 1229: ಇಸ್ಲಾಂ ಧಾರ್ಮಿಕ ಜಗತ್ತಿನ ಮುಖಂಡನೂ ಆಗಿದ್ದ ಬಾಗ್ದಾದದ ಖಲೀಫನು ಇಲ್ತಮಶನಿಗೆ ಅಧಿಕಾರ ಸಮ್ಮತಿ ಪತ್ರವನ್ನು ನೀಡಿ ಅವನನ್ನು ಸುಲ್ತಾನ ಎಂದು ಅಂಗೀಕರಿಸಿದನು. ಇದರಿಂದ ಮುಸ್ಲೀಂ ಜಗತ್ತಿನಲ್ಲಿ ಇಲ್ತಮಶನ ಕೀರ್ತಿ ಮತ್ತಷ್ಟು ಹೆಚ್ಚಿತು. ತನ್ನ ನಾಣ್ಯಗಳ ಮೇಲೆ ಖಲೀಫನ ಪ್ರತಿನಿಧಿ ಎಂದು ಉಲ್ಲೇಖಿಸಿದ್ದಾನೆ.

ಔ. ಆಡಳಿತ ಪದ್ಧತಿಯ ಸುಧಾರಣೆ: ದಕ್ಷ ಆಡಳಿತಗಾರನಾಗಿದ್ದು ಉತ್ತಮ ಆಡಳಿತ ವ್ಯವಸ್ಥೆಯನ್ನು ಸಂಘಟಿಸಿದನು. ಅವನು ಕೈಗೊಂಡ ಆಡಳಿತ ಸುಧಾರಣಾ ಕ್ರಮಗಳು ಇಂತಿವೆ:

1.    ರಾಜ್ಯವನ್ನು ಇತ್ತಾಗಳಾಗಿ (ಪ್ರಾಂತ್ಯ) ವಿಭಜಿಸಿ ಅವುಗಳಿಗೆ ಇಕ್ತೆದಾರರ ನೇಮಕ. ಶಾಂತಿಪಾಲನೆ ಮತ್ತು ಕಂದಾಯ ವಸೂಲಿ ಇವನ ಕೆಲಸ. ಕಂದಾಯದಲ್ಲಿ ಪ್ರಾಂತ್ಯದ ಆಡಳಿತ ವೆಚ್ಚ ಭರಿಸಿ ಉಳಿದ ಕಂದಾಯವನ್ನು ಕೇಂದ್ರಕ್ಕೆ ರವಾನಿಸಬೇಕಿತ್ತು.

2.    ವರ್ಗಾವಣೆ ಪದ್ಧತಿಯ ಮೂಲಕ ಇಕ್ತೆದಾರರ ಮೇಲೆ ನಿಯಂತ್ರಣ ಹೊಂದಿದ್ದ.

3.    ನಲವತ್ತು ತುರ್ಕಿ ಸರದಾರರ ಕೂಟ ಅಥವಾ “ಚಹಲಗಾನಿ” ಎಂಬ ಗುಂಪನ್ನು ಸಂಘಟಿಸಿ ಅದರ ಸದಸ್ಯರಿಗೆ ಉನ್ನತ ಹುದ್ದೆಗಳನ್ನು ನೀಡಿ ಅದನ್ನು ಬಲಪಡಿಸಿದನು. ಆ ಮೂಲಕ ಸುಲ್ತಾನನ ಸ್ಥಾನವನ್ನು ಭದ್ರಪಡಿಸುವುದು ಇಲ್ತಮಶನ ಯೋಜನೆಯಾಗಿತ್ತು.

4.    ನ್ಯಾಯದಾನಕ್ಕೆ ಮಿನಾಜ್‌ ಉಸ್‌ ಸಿರಾಜಿಯನ್ನು ಪ್ರಧಾನ ನ್ಯಾಯಾಧೀಶನನ್ನಾಗಿ ನೇಮಿಸಿದನು. ದೊಡ್ಡ ಪಟ್ಟಣಗಳಲ್ಲಿ ಖಾಜಿಗಳನ್ನು ನೇಮಿಸಿದನು. ಕೆಳಹಂತದ ದೂರುಗಳನ್ನು ವಿಚಾರಿಸಲು ಮೇಲ್ಮನವಿ ಸಲ್ಲಿಸಲು ಅವಕಾಶ ಕಲ್ಪಿಸಿದನು.

5.    ಚಿನ್ನ & ಬೆಳ್ಳಿಯ ನಾಣ್ಯಗಳನ್ನು ಜಾರಿಗೆ ತಂದನು. ಬೆಳ್ಳಿಯ ಟಂಕ 175 ಗ್ರೈನ್‌ ತೂಕವಿತ್ತು.

ವ್ಯಕ್ತಿತ್ವ ಮತ್ತು ಸಾಧನೆಯ ವಿಶ್ಲೇಷಣೆ: ಶೈಶವಾವಸ್ಥೆಯಲ್ಲಿದ್ದ ದೆಹಲಿ ಸುಲ್ತಾನರ ರಾಜ್ಯವನ್ನು ರಕ್ಷಿಸಿ ಗುಲಾಮ ಸಂತತಿಯ ಶ್ರೇಷ್ಠ ಸುಲ್ತಾನನಷ್ಟೇ ಅಲ್ಲ ಅದರ ನಿಜವಾದ ಸ್ಥಾಪಕನೂ ಎನಿಸಿದ್ದಾನೆ. ಐಬಕನ ಮರಣಾನಂತರ ಕೈಬಿಟ್ಟು ಹೋಗಿದ್ದ ಪ್ರಾಂತ್ಯಗಳನ್ನು ಮತ್ತೆ ದೆಹಲಿ ರಾಜ್ಯಕ್ಕೆ ಸೇರಿಸಿದನು. ತಾಜುದ್ದೀನ್‌ ಎಲ್ಡೂಜನಿಂದ ಒದಗಿದ್ದ ಆಪತ್ತನ್ನು ನಿವಾರಿಸಿ ನಾಸಿರುದ್ದೀನ್‌ ಕುಬಾಚನನ್ನು ಸದೆಬಡಿದು ಸಿಂಹಾಸನಕ್ಕೆ ಒದಗಿದ್ದ ಆಪತ್ತನ್ನು ನಿವಾರಿಸಿದನು. ಜೊತೆಗೆ ಮಂಗೋಲರ ದಾಳಿಯಿಂದ ತನ್ನ ಶೈಶವದ ರಾಜ್ಯವನ್ನು ತನ್ನ ದೂರದೃಷ್ಟಿಯ ಆಲೋಚನೆಯಿಂದ ರಕ್ಷಿಸಿದನು. ಚಹಲಗಾನಿ ಅಥವಾ ನಲವತ್ತು ತುರ್ಕರ ಕೂಟವನ್ನು ರಚಿಸಿ ಸುಲ್ತಾನತ್ವ ಮತ್ತು ಸಿಂಹಾಸನದ ಘನತೆಯನ್ನು ಹೆಚ್ಚಿಸಿದನು. ತಾನು ಗೆದ್ದ ಪ್ರದೇಶಗಳಲ್ಲಿ ಆಡಳಿತ ವ್ಯವಸ್ಥೆಯನ್ನೂ ಸಹ ರೂಪಿಸುವ ಪ್ರಯತ್ನದಲ್ಲಿ ತೊಡಗಿದನು. ಐಬಕನಿಂದ ಅಪೂರ್ಣಗೊಂಡಿದ್ದ ಕುತುಬ್‌ ಮಿನಾರದ ನಿರ್ಮಾಣವನ್ನು 1232 ರಲ್ಲಿ ಪೂರ್ಣಗೊಳಿಸಿದನು ಎಂದು ಹಲವು ಇತಿಹಾಸಕಾರರು ಅಭಿಪ್ರಾಯಪಟ್ಟಿದ್ದಾರೆ. ಇವನು ದಕ್ಷ ಆಡಳಿತಗಾರ, ಉತ್ತಮ ಸೇನಾಪತಿ, ಚಾಣಾಕ್ಷ ರಾಜಕಾರಣಿ ಆಗಿದ್ದು ತನ್ನ ಸ್ವಸಾಮರ್ಥ್ಯದಿಂದಲೇ ಗುಲಾಮನ ಸ್ಥಾನದಿಂದ ಸುಲ್ತಾನನ ಸ್ಥಾನಕ್ಕೆ ಏರಿದನು. ಇವನು ಅಜ್ಮೀರದಲ್ಲಿ ಭವ್ಯವಾದ ಮಸೀದಿಯೊಂದನ್ನು ಕಟ್ಟಿಸಿದನು. ಕಲಾಪೋಷಕ & ಸಾಹಿತ್ಯಪ್ರೇಮಿಯಾದ ಇವನು ಶ್ರದ್ದಾವಂತ ಮುಸ್ಲೀಮನಾಗಿದ್ದನು ಎಂದು ಮಿನಾಜ್‌ ಉಸ್‌ ಶಿರಾಜಿ ಅಭಿಪ್ರಾಯಪಟ್ಟಿದ್ದಾನೆ.


Comments

Post a Comment

Popular posts from this blog

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಸಾಹಿತ್ಯಾಧಾರಗಳು - Literary Sources