ಎರಡನೆ ಕರ್ನಾಟಿಕ್ ಯುದ್ಧ, ಕಾರಣಗಳು, ಘಟನೆಗಳು & ಪರಿಣಾಮಗಳು; ಕ.ವಿ ವ್ಯಾಪ್ತಿಯ5ನೆ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ
ಎರಡನೆ ಕರ್ನಾಟಿಕ್ ಯುದ್ಧ ೧೭೪೯ – ೫೪
ಮೊದಲನೆ ಕರ್ನಾಟಿಕ್ ಯುದ್ಧವು ಕೊನೆಗೊಂಡರೂ ಆಂಗ್ಲ & ಬ್ರಿಟೀಷರ ನಡುವಣ ಸಂಘರ್ಷಗಳು
ಮುಂದಿನ ಎರಡು ಕರ್ನಾಟಿಕ್ ಯುದ್ಧಗಳಿಗೆ ತಳಹದಿಯನ್ನು ಒದಗಿಸಿದವು.
ಯುದ್ಧದ ಕಾರಣಗಳು:-
ಅ. ವ್ಯಾಪಾರ ಮತ್ತು ರಾಜಕೀಯ ಮಹತ್ವಾಕಾಂಕ್ಷೆಗಳು.
ಆ. ಉತ್ತರಾಧಿಕಾರದ ಪ್ರಶ್ನೆ: ೧೭೪೮ ರಲ್ಲಿ ಹೈದ್ರಾಬಾದ್
ನಿಜಾಮ ಆಸಫ್ ಜಾ ಮರಣ; ನಿಜಾಮನ ಮಗ ನಾಸೀರುದ್ದೀನ್ ಜಂಗ್ ಮತ್ತು ಮೊಮ್ಮೊಗ ಮುಜಾಫರ್ ಜಂಗ್ ನಡುವೆ ಉತ್ತರಾಧಿಕಾರದ ಪ್ರಶ್ನೆ ಉದ್ಭವಿಸಿತು.
ಇ. ಕರ್ನಾಟಿಕ್ನಲ್ಲಿ ರಾಜಕೀಯ ಸ್ಥಿತಿ ಬದಲಾವಣೆ:
೧೭೪೮ರ ವೇಳೆಗೆ ಮರಾಠರ ಸೆರೆಯಲ್ಲಿದ್ದ ಚಂದಾಸಾಏಬ್ ಬಿಡುಗಡೆ ಹೊಂದಿ ಆರ್ಕಾಟಿಗೆ ಮರಳಿದ. ಅವನು ಕರ್ನಾಟಿಕ್
ಪ್ರಾಂತ್ಯದ ನವಾಬ ಅನ್ವರುದ್ದೀನನ ವಿರುದ್ಧ ಫ್ರೆಂಚರ ನೆರವು ಕೇಳಿದ.
ಘಟನೆಗಳು:-
• ಡೂಪ್ಲೆ ಹೈದರಾಬಾದಿನಲ್ಲಿ ಮುಜಾಫರ್ ಜಂಗನಿಗೂ ಮತ್ತು ಆರ್ಕಾಟಿನಲ್ಲಿ ಚಂದಾಸಾಹೇಬನಿಗೂ
ಬೆಂಬಲ ನೀಡಿ ಸೈನ್ಯದ ನೆರವು ಘೋಷಿಸಿದ. ಪ್ರತಿಯಾಗಿ ಬ್ರಿಟೀಷರು ಹೈದರಾಬಾದಿನಲ್ಲಿ
ನಾಸಿರ್ ಜಂಗನಿಗೂ ಮತ್ತು ಆರ್ಕಾಟಿನಲ್ಲಿ ಅನ್ವರುದ್ದೀನನಿಗೂ ಬೆಂಬಲ ಘೋಷಿಸಿದರು. ಿದರಿಂದ ಎರಡೂ
ಪಕ್ಷಗಳ ನಡುವೆ ಯುದ್ಧದ ಅನಿವಾರ್ಯತೆ ಉಂಟಾಯಿತು. ಫ್ರೆಂಚರ ಬೆಂಬಲಿತ ಚಂದಾಸಾಹೇಬ 1749 ರಲ್ಲಿ ಆರ್ಕಾಟ್
ಮೇಲೆ ಸೈನಿಕ ದಾಳಿ ಮಾಡಿದ. ಅಂಬೋರ್ ಕದನದಲ್ಲಿ ಕರ್ನಾಟಿಕ್ ನವಾಬನಾಗಿದ್ದ ಅನ್ವರುದ್ದೀನ್ ಸೋತು
ಕೊಲೆಯಾದ – ಅವನ ಮಗ ಮಹಮದ್ ಅಲಿ ತಿರುಚಿನಾಪಳ್ಳಿಗೆ ಪಲಾಯನ ಮಾಡಿದ. ಪರಿಣಾಮವಾಗಿ ಕರ್ನಾಟಿಕ್ ನಲ್ಲಿ
ಡೂಪ್ಲೆ ಬೆಂಬಲದಿಂದ ಚಂದಾಸಾಹೇಬ್ ನವಾಬನಾದ. ಇದರಿಂದ ಸಂತೋಷಗೊಂಡ ಚಂದಾಸಾಹೇಬ್ ಡೂಪ್ಲೆಗೆ ಪಾಂಡಿಚೇರಿ
ಸುತ್ತಲಿನ ೮೦ ಹಳ್ಳಿಗಳ ಕೊಡುಗೆ ನೀಡಿದ. ಆದರೆ, ಸೋತ ಅನ್ವರುದ್ದೀನನ ಮಗ ಮಹಮದ್ ಅಲಿಗೆ ಬ್ರಿಟಿಷರ
ಬೆಂಬಲ ಮುಂದುವರೆಯಿತು.
• ಇತ್ತ ಹೈದರಾಬಾದಿನಲ್ಲಿ
1750 ರ ವೇಳೆಗೆ ನಿಜಾಮ ಪದವಿಯ ಉತ್ತರಾಧಿಕಾರದ ಕಲಹ ಏರ್ಪಟ್ಟು ನಾಸಿರ್ ಮತ್ತು ಮುಜಾಫರ್ ಜಂಗರ
ನಡುವೆ ನಡೆದ ಯುದ್ಧದಲ್ಲಿ ಮುಜಾಫರ್ ಜಂಗ್ ಸೋತು ಬಂಧಿಯಾದನು. ಇಲ್ಲಿ ಬ್ರಿಟೀಷರ ಬೆಂಬಲಿತ ನಾಸೀರ್
ಜಂಗ್ ನಿಜಾಮ ಪದವಿಗೇರಿದ. ಆದರೆ, ಡೂಪ್ಲೆಯ ಕುತಂತ್ರದಿಂದ ೧೭೫೦ರ ವೇಳೆಗೆ ನಾಸೀರ್ ಜಂಗನ ಕೊಲೆ ಆಯಿತು.
ಮುಂದೆ ಸೆರೆಯಲ್ಲಿದ್ದ ಮುಜಾಫರ್ ಜಂಗನನ್ನು ಬಿಡುಗಡೆಗೊಳಿಸಿ ಅವನಿಗೆ ಫ್ರೆಂಚರ ನೆಲೆ ಪಾಂಡಿಚೇರಿಯಲ್ಲಿ ಹೈದರಾಬಾದಿನ
ನಿಜಾಮ ಪಟ್ಟ ಕಟ್ಟಲಾಯಿತು. ಆದರೆ ೧೭೫೧ ರಲ್ಲಿ ಫ್ರೆಂಚ್ ದಂಡನಾಯಕ ಬುಸ್ಸಿಯ ನೇತೃತ್ವದಲ್ಲಿ ಮುಜಾಫರ್
ಜಂಗನು ಪಾಂಡಿಚೇರಿಯಿಂದ ಹೈದರಾಬಾದಿಗೆ ಹೋಗುವಾಗ ನಡೆದ ಸಣ್ಣ ಘರ್ಷಣೆಯೊಂದರಲ್ಲಿ ಕೊಲೆಯಾದನು. ಕೊನೆಗೆ
ಬುಸ್ಸಿಯು ಮೃತ ನಿಜಾಮ ಆಸಫ್ ಜಾನ ಮೂರನೆ ಮಗ ಸಲಾಬತ್
ಜಂಗನಿಗೆ ನಿಜಾಮ ಪಟ್ಟ ಕಟ್ಟಿದನು. ಈ ಉಪಕಾರಕ್ಕಾಗಿ ಅವನು ಫ್ರೆಂಚರಿಗೆ ನಾಲ್ಕು ಜಿಲ್ಲೆಗಳನ್ನೊಳಗೊಂಡ
ಉತ್ತರ ಸರ್ಕಾರ ಪ್ರಾಂತ್ಯವನ್ನು ಬಿಟ್ಟುಕೊಟ್ಟನು. ಅವನ ರಕ್ಷಣೆಗೆ ಫ್ರೆಂಚರ ದಂಡನಾಯಕ ಬುಸ್ಸಿ ಸೈನ್ಯ
ಸಮೇತ ಹೈದ್ರಾಬಾದಿನಲ್ಲಿ ನೆಲೆಸಿ ಅಲ್ಲಿ ಫ್ರೆಂಚರ ಪ್ರಭಾವವನ್ನು ಮುಂದುವರಿಸಿದ.
• ಹೀಗೆ ಹೈದ್ರಾಬಾದ್ ಮತ್ತು
ಕರ್ನಾಟಿಕ್ ಎರಡೂ ಕಡೆ ಡೂಪ್ಲೆ ಬೆಂಬಲಿತರು ಅಧಿಕಾರಕ್ಕೆ ಬಂದು ದಖನ್ನಿನಲ್ಲಿ ಫ್ರೆಂಚರ ರಾಜಕೀಯ
ಪ್ರಭಾವ ಹೆಚ್ಚಿತು. ಇದರಿಂದ ಮದ್ರಾಸಿನಲ್ಲಿದ್ದ ಆಂಗ್ಲರು ದಖನ್ನಿನಲ್ಲಿ ಫ್ರೆಂಚರ ಪ್ರಭಾವವನ್ನು
ಮುರಿಯಲು ಹವಣಿಸುತ್ತಿದ್ದರು. ಅದೇ ವೇಳೆಗೆ ಡೂಪ್ಲೆ ಮತ್ತು ಚಂದಾಸಾಹೇಬ್ ಹಿಂದೆ ಸೋತು ತಿರುಚಿನಾಪಳ್ಳಿಯಲ್ಲಿ
ಆಶ್ರಯ ಪಡೆದಿದ್ದ ಮಹಮದ್ ಅಲಿಯನ್ನು ಸೆರೆ ಹಿಡಿಯಲು ಅದರ ಮೇಲೆ ಮುತ್ತಿಗೆ ಹಾಕಿದರು. ಆದರೆ, ಮಹಮದ್
ಅಲಿಯ ಬೆಂಬಲಕ್ಕೆ ನಿಂತಿದ್ದ ಬ್ರಿಟೀಷರು ಅವನ ಮೇಲಿನ ಒತ್ತಡ ತಡೆಯಲು ರಾಬರ್ಟ್ ಕ್ಲೈವನ ನೇತೃತ್ವದಲ್ಲಿ ೫೦೦ ಸೈನಿಕರೊಂದಿಗೆ ಕರ್ನಾಟಿಕ್ ರಾಜಧಾನಿ ಆರ್ಕಾಟ್ ಮೇಲೆ
ಮುತ್ತಿಗೆ ಹಾಕಿ ಅದನ್ನು ವಶಪಡಿಸಿಕೊಂಡರು. ಇದರಿಂದ ಕುಪಿತಗೊಂಡ ಚಂದಾಸಾಹೇಬ್ ರಾಜಧಾನಿ ಆರ್ಕಾಟದ
ರಕ್ಷಣೆಗೆ ತನ್ನ ಮಗ ರಾಜಾಸಾಹೇಬನನ್ನು ಸೈನ್ಯಸಮೇತ
ಕಳುಹಿಸಿದ. ಆದರೆ, ರಾಜಾಸಾಹೇಬನು ಕ್ಲೈವ್ ನೊಂದಿಗೆ ನಡೆದ ಯುದ್ಧದಲ್ಲಿ ಸೋತು ಕೊಲೆಯಾದನು. ಅಲ್ಲದೇ
ಮುಂದುವರಿದ ಬ್ರಿಟೀಷರು ತಿರುಚಿನಾಪಳ್ಳಿಯ ಮೇಲೆ ದಾಳಿ ನಡೆಸಿ ಫ್ರೆಂಚರಿಂದ ಮಹಮದ್ ಅಲಿಯನ್ನು ರಕ್ಷಿಸಿದರು.
ಪರಿಣಾಮವಾಗಿ ಡೂಪ್ಲೆ – ಚಂದಾಸಾಹೇಬರಿಗೆ ಕರ್ನಾಟಿಕ್ ಪ್ರದೇಶದಲ್ಲಿ ಹಿನ್ನಡೆ ಉಂಟಾಯಿತು.
• ಸೋತ ಚಂದಾಸಾಹೇಬ ಪಲಾಯನ
ಮಾಡುತ್ತಿದ್ದಾಗ ತಂಜಾವೂರಿನ ರಾಜನಿಂದ ಕೊಲೆಯಾದನು.
ಕೊನೆಗೆ ಆರ್ಕಾಟಿನಲ್ಲಿ ಬ್ರಿಟೀಷರ ಬೆಂಬಲದಿಂದ ಮಹಮದ್ ಅಲಿ ಕರ್ನಾಟಿಕ್ ನವಾಬನ ಹುದ್ದೆಗೇರಿದ.
ಡೂಪ್ಲೆ ದಖನ್ನಿನಲ್ಲಿ ಫ್ರೆಂಚರ ಪ್ರಭಾವವನ್ನು ಮತ್ತೆ ಹೆಚ್ಚಿಸಲು ಪ್ರಯತ್ನಿಸಿದರೂ ಅವನಿಗೆ ಸ್ವದೇಶದಿಂದ
ಸರಿಯಾದ ಬೆಂಬಲ ಸಿಗಲಿಲ್ಲ. ಡೂಪ್ಲೆಯ ನೀತಿಯನ್ನು ಖಂಡಿಸಿ ಫ್ರೆಂಚ್ ಸರ್ಕಾರ ಅವನನ್ನು ಮರಳಿ ಫ್ರಾನ್ಸಿಗೆ
ಬರುವಂತೆ ಆದೇಶ ಮಾಡಿತು. ೧೭೫೪ ರಲ್ಲಿ ಡೂಪ್ಲೆ ತಾಯ್ನಾಡಿಗೆ ನಿರ್ಗಮಿಸಿದ.
• ಡೂಪ್ಲೆಯ ಬದಲಿಗೆ ಚಾರ್ಲ್ಸ್
ಗೊಡೆಹೊ ಎಂಬಾತನು ಪಾಂಡಿಚೇರಿಯ ಗವರ್ನರ್ ಆಗಿ ಬಂದನು. ಅವನು ಆಂಗ್ಲರೊಂದಿಗೆ 1755 ರಲ್ಲಿ ಪಾಂಡಿಚೇರಿ
ಒಪ್ಪಂದವನ್ನು ಮಾಡಿಕೊಂಡು ಎರಡನೆ ಕರ್ನಾಟಿಕ್ ಯುದ್ಧವನ್ನು ಅಂತ್ಯಗೊಳಿಸಿದನು.
ಹೀಗೆ ಮೊದಲನೇ ಕರ್ನಾಟಿಕ್ ಯುದ್ಧದಲ್ಲಿ ಮುನ್ನಡೆ ಸಾಧಿಸಿದ್ದ ಫ್ರೆಂಚರು ಎರಡನೇ ಕರ್ನಾಟಿಕ್
ಯುದ್ಧದ ಅಂತ್ಯದ ವೇಳೆಗೆ ಕರ್ನಾಟಿಕ್ ನಲ್ಲಿ ಹಿನ್ನಡೆ ಅನುಭವಿಸಿದರು.
ಪರಿಣಾಮಗಳು:-
1.
ಆರ್ಕಾಟಿನಲ್ಲಿ
ಬ್ರಿಟೀಷ್ ಬೆಂಬಲಿತ ಮಹಮದ್ ಅಲಿ ನವಾಬನಾದನು.
2.
ಕರ್ನಾಟಿಕ್
ನಲ್ಲಿ ಫ್ರೆಂಚರ ಪ್ರಭಾವ ಕುಸಿದು ಆಂಗ್ಲರ ಪ್ರಭಾವ ಹೆಚ್ಚಿತು.
3. ಆದರೆ ಹೈದ್ರಾಬಾದಿನಲ್ಲಿ ಫ್ರೆಂಚರ ಪ್ರಭಾವ ಇನ್ನೂ ಉಳಿದಿತ್ತು.
Comments
Post a Comment