ಕರ್ನಾಟಕದ ಇತಿಹಾಸ ರಚನೆಯ ಸಾಹಿತ್ಯಾಧಾರಗಳು

ಸಾಹಿತ್ಯಾಧಾರಗಳು

   ಲಿಖಿತ ಅಂದರೆ ಬರವಣಿಗೆಯ ರೂಪದಲ್ಲಿರುವ ಆಧಾರಗಳನ್ನು ಸಾಹಿತ್ಯಾಧಾರಗಳು ಎನ್ನುವರು. ಇವುಗಳು ದೇಶೀಯ ಮತ್ತು ವಿದೇಶೀಯ ಬರವಣಿಗೆ ಎರಡರಲ್ಲೂ ಕಂಡುಬರುತ್ತವೆ. ದೇಶೀಯ ಭಾಷೆಗಳಾದ ಪಾಲಿ, ಪ್ರಾಕೃತ, ಸಂಸ್ಕೃತ, ಅರ್ಧಮಾಗಧಿ, ಕನ್ನಡ, ತೆಲುಗು, ತಮಿಳು ಮತ್ತು ಇನ್ನಿತರ ಭಾಷೆಗಳಲ್ಲಿ ಈ ಆಧಾರಗಳು ಕಂಡುಬರುತ್ತವೆ. ವಿದೇಶೀಯ ಭಾಷೆಗಳಾದ ಗ್ರೀಕ್‌, ರೋಮನ್‌, ಪರ್ಷಿಯಾ, ಅರಬ್‌, ತುರ್ಕಿ ಮತ್ತು ಚೀನೀ ಭಾಷೆಗಳಲ್ಲೂ ಸಹ ಕಂಡುಬರುತ್ತವೆ. ಧಾರ್ಮಿಕ ಕೃತಿಗಳು, ಲೌಕಿಕ ಕೃತಿಗಳು, ಐತಿಹಾಸಿಕ ಕೃತಿಗಳು, ಪ್ರವಾಸ ಕಥನಗಳು – ಹೀಗೆ ವಿವಿಧ ರೀತಿಯ ಬರವಣಿಗೆಗಳನ್ನು ಇವು ಒಳಗೊಳ್ಳುತ್ತವೆ.

    ಅಧ್ಯಯನದ ದೃಷ್ಟಿಯಿಂದ ಇವುಗಳನ್ನು 1. ದೇಶೀಯ ಮತ್ತು 2. ವಿದೇಶೀಯ ಬರವಣಿಗೆಗಳು ಎಂದು ವಿಭಾಗಿಸಬಹುದು.

1.     ದೇಶೀಯ ಬರವಣಿಗೆಗಳು: ಸ್ಥಳೀಯ ಭಾಷೆಗಳಲ್ಲಿ  ರಚಿತವಾದ ಆಧಾರಗಳಿವು. ಆಶ್ರಿತ ಕವಿಗಳು ರಚಿಸಿದ ಐತಿಹಾಸಿಕ ಅಥವಾ ಲೌಕಿಕ ಸಾಹಿತ್ಯ ಕೃತಿಗಳು ಇತಿಹಾಸ ಪುನರ್‌ ರಚನೆಗೆ ಹೆಚ್ಚಿನ ಮಾಹಿತಿ ಒದಗಿಸುತ್ತವೆ. ಈ ಸಾಹಿತ್ಯದಲ್ಲಿ ಆತ್ಮಚರಿತ್ರೆಗಳು, ಜೀವನಚರಿತ್ರೆಗಳು, ರಾಜಾವಳಿಗಳು, ನಾಟಕಗಳು, ಕಾದಂಬರಿಗಳು, ವ್ಯಾಕರಣ ಗ್ರಂಥಗಳು ಒಳಗೊಂಡಿರುತ್ತವೆ. ಹೆಚ್ಚು ನಂಬಲರ್ಹ ಮಾಹಿತಿ ಇವುಗಳಿಂದ ಲಭ್ಯ.

   ಕರ್ನಾಟಕದ ಇತಿಹಾಸ ರಚನೆಗೆ ಪೂರಕವಾದ ಕೆಲವು ಪ್ರಮುಖ ಕೃತಿಗಳು ಮತ್ತು ಅವುಗಳ  ರಚನಕಾರರ ವಿವರಗಳು ಕೆಳಕಂಡಂತಿವೆ:-

ಶಾತವಾಹನರ ದೊರೆ ಹಾಲನ ಗಾಥಾಸಪ್ತಶತಿ, ಗುಣಾಢ್ಯನ ಬೃಹತ್‌ ಕಥಾ (ವಡ್ಡಕಥಾ), ಅಮೋಘವರ್ಷನ ಕವಿರಾಜಮಾರ್ಗ, ಚಾವುಂಡರಾಯನ ಚಾವುಂಡರಾಯಪುರಾಣ, ಪಂಪನ ಆದಿಪುರಾಣ, ರನ್ನನ ಗದಾಯುದ್ಧ, ವಿಕ್ರಮಾಂಕದೇವ ಚರಿತಂ: ಬಿಲ್ಹಣ – ಆರನೆ ವಿಕ್ರಮಾದಿತ್ಯನ ಜೀವನ ಚರಿತ್ರೆ.

‌   ಪ್ರಾಚೀನ ಭಾರತೀಯರು ಖಗೋಳ, ಗಣಿತ, ವೈದ್ಯ, ಪ್ರಾಣಿವೈದ್ಯ, ರಸವಿದ್ಯೆ, ಲೋಹಶಾಸ್ತ್ರ ಮೊದಲಾದ ವಿಜ್ಞಾನಕ್ಕೆ ಸಂಬಂಧಪಟ್ಟಂತೆ ತಾವು ಗಳಿಸಿದ ಪರಿಣತಿಯನ್ನು ಗ್ರಂಥಗಳ ರೂಪದಲ್ಲಿ ದಾಖಲಿಸಿದ್ದಾರೆ. ಇವುಗಳನ್ನು ವೈಜ್ಞಾನಿಕ ಕೃತಿಗಳು ಎನ್ನಲಾಗಿದೆ. ಅಂತೆಯೇ ಕನ್ನಡದ ಅನೇಕ ವಿದ್ವಾಂಸರು ಮತ್ತು ರಾಜರುಗಳು ಹಲವು ವೈಜ್ಞಾನಿಕ ಕೃತಿಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಕೆಲವು ಪ್ರಮುಖ ವೈಜ್ಞಾನಿಕ ಕೃತಿಗಳು ಮತ್ತು ಕೃತಿಕಾರರ ವಿವರಗಳು ಕೆಳಕಂಡಂತಿವೆ:

ದುರ್ವಿನೀತನ ಗಜಾಷ್ಟಕ, ಶಿವಮಾರನ ಗಜಶಾಸ್ತ್ರ, ಕೀರ್ತಿವರ್ಮನ ಗೋವೈದ್ಯ, ಉಗ್ರಾದಿತ್ಯನ ಕಲ್ಯಾಣಕಾರಕ, ಚಾವುಂಡರಾಯನ ಲೋಕೋಪಕಾರ, ಭಾಸ್ಕರಾಚಾರ್ಯನ ಲೀಲಾವತಿ ಮೊದಲಾದವು ವಿಜ್ಞಾನದ ಹೇರಳ ಮಾಹಿತಿಗಳೊಂದಿಗೆ ಕೆಲವು ಐತಿಹಾಸಿಕ, ಸಾಮಾಜಿಕ, ಧಾರ್ಮಿಕ & ಆರ್ಥಿಕ ಮಾಹಿತಿಗಳನ್ನೂ ಒದಗಿಸುತ್ತವೆ.

ಕಲ್ಯಾಣದ ಚಾಲುಕ್ಯರ ಅರಸು ಮೂರನೇ ಸೋಮೇಶ್ವರ ರಚಿಸಿದ ಮಾನಸೋಲ್ಲಾಸ ಅಥವಾ ಅಭಿಲಾಷಿತಾರ್ಥ ಚಿಂತಾಮಣಿ ಕಲೆ, ಸಂಗೀತ, ಸಾಹಿತ್ಯ, ಚಿತ್ರಕಲೆ, ನಾಟ್ಯ, ವೈದ್ಯ, ಪಾಕ ಹೀಗೆ ಅನೇಕ ವಿಷಯಗಳ ಮಾಹಿತಿ ಒಳಗೊಂಡ ವಿಶ್ವಕೋಶದಂತಿದೆ.


   ದಕ್ಷಿಣ ಭಾರತದ ಪ್ರಸಿದ್ಧ ಕನ್ನಡ ರಾಜಮನೆತನವಾದ ವಿಜಯನಗರದ ಇತಿಹಾಸ ಪುನರ್‌ ರಚನೆಗೆ ಮುಂದಿನ ಕೃತಿಗಳು ಹೇರಳ ಮಾಹಿತಿ ಒದಗಿಸುತ್ತವೆ:

 ಮಧುರಾವಿಜಯಂ ಅಥವಾ ಕಂಪಣರಾಯ ವಿಜಯ- ಗಂಗಾದೇವಿ; ಕಂಪಣರಾಯನು ಮಧುರೈ ಜಯಿಸಿದ ವಿವರಗಳು

ಸಾಳುವಾಭ್ಯುದಯಂ – ರಾಜನಾಥ ಡಿಂಡಿಮ; ಸಾಳುವ ವಂಶದ ಆಳ್ವಿಕೆ ಮಾಹಿತಿ

ಗಂಗಾಧರ ಪ್ರತಾಪ ವಿಲಾಸಂ – ಗಂಗಾಧರ; ವಿಜಯನಗರ ಮತ್ತು ಒರಿಸ್ಸಾದ ಗಜಪತಿಗಳ ನಡುವಣ ಯುದ್ಧಗಳು

ರಾಯ ವಾಚಕಮು ಮತ್ತು ಕೃಷ್ಣರಾಜ ವಿಜಯಮು – ದೂರ್ಜಟಿ; ಕೃಷ್ಣದೇವರಾಯನ ದಿಗ್ವಿಜಯಗಳು

ಪಾರಿಜಾತಾಪಹರಣಮು - ನಂದಿ ತಿಮ್ಮಣ್ಣ; ಒರಿಸ್ಸಾದ ಮೇಲಿನ ಕೃಷ್ಣದೇವರಾಯನ ದಿಗ್ವಿಜಯಗಳು

ಮನುಚರಿತಮು – ಪೆದ್ದಣ್ಣ; ಕೃಷ್ಣದೇವರಾಯನ ಕಾಲದ ಆಳ್ವಿಕೆಯ ಮಾಹಿತಿ

ಮಾದಲಸಾ ಚರಿತಂ, ರಸಮಂಜರಿ, ಉಷಾಪರಿಣಯ, ಜಾಂಬವತಿ ಕಲ್ಯಾಣ ಮತ್ತು ಅಮುಕ್ತ ಮಾಲ್ಯದ – ಕೃಷ್ಣದೇವರಾಯ; ಅಮುಕ್ತ ಮಾಲ್ಯದದಲ್ಲಿ ಆಡಳಿತ ಪದ್ಧತಿಯ ಮಾಹಿತಿಗಳುಇವೆ. ಇದಕ್ಕೆ ಇದಕ್ಕೆ ಗೋದಾದೇವಿ ಪ್ರಕರಣ ಎಂಬ ಮತ್ತೊಂದು ಹೆಸರೂ ಇದೆ.

ಪರಾಶರ ಮಾಧವಿಯ, ಶಂಕರ ವಿಜಯ, ಕಾಲನಿರ್ಣಯ, ವೇದಭಾಷ್ಯ ಮತ್ತು ಸಂಗೀತಸಾರ  - ವಿದ್ಯಾರಣ್ಯ

ವೇದಾರ್ಥ ಪ್ರಕಾಶ, ಆಯುರ್ವೇದ ಸುಧಾನಿಧಿ, ಯಜ್ಞತಂತ್ರ ಸುಧಾನಿಧಿ ಮತ್ತು ಪುರುಷಾರ್ಥ ಸುಧಾನಿಧಿ – ಸಾಯಣಾಚಾರ್ಯ

ವರದಾಂಬಿಕಾ ಪರಿಣಯಂ – ತಿರುಮಲಾಂಬಿಕೆ

ಕುಮಾರರಾಮ ಚರಿತೆ – ನಂಜುಂಡ ಕವಿ; ಆನೆಗುಂದಿಯ ಕಂಪಿಲರಾಯ ಮತ್ತು ಅವನ ಮಗ ಕುಮಾರರಾಮನ ಮಾಹಿತಿ

ಸ್ವರಮೇಳಕಲಾನಿಧಿ – ಸಂಗೀತ ಕಲೆ ಮತ್ತು ಅಳಿಯ ರಾಮರಾಯನ ಬಗ್ಗೆ ಮಾಹಿತಿ., ಶಿವತತ್ವ ಚಿಂತಾಮಣಿ – ಲಕ್ಕಣ ದಂಡೇಶ; ಎರಡನೆ ದೇವರಾಯನ ಯುದ್ಧಗಳು ಮತ್ತು ಕೃಷ್ಣದೇವರಾಯನ ಅಮುಕ್ತ ಮಾಲ್ಯದ: ರಾಜ್ಯಾಡಳಿತ ಕುರಿತು ಮಾಹಿತಿ ಒದಗಿಸುತ್ತದೆ.


ಬಹಮನಿಗಳು ಮತ್ತು ವಿಜಾಪುರದ ಆದಿಲ್‌ ಶಾಹಿಗಳ ಕಾಲದ ಕೆಲವು ಸಾಹಿತ್ಯಾಧಾರಗಳ ವಿವರಗಳು ಕೆಳಕಂಡಂತಿವೆ:-

1.     ಮಹಮ್ಮದ್‌ ಖಾಸಿಂ ಫೆರಿಶ್ತಾ; ಪರ್ಷಿಯಾದಿಂದ ದಕ್ಷಿಣ ಭಾರತಕ್ಕೆ ವಲಸೆ. ಎರಡನೇ ಇಬ್ರಾಹಿಂ ಆದಿಲ್‌ ಶಾನ ಆಶ್ರಯ. ಗುಲ್ಶನ್‌ ಇ ಇಬ್ರಾಹಿಂ ಕೃತಿ ರಚನೆ, 1596 ರಲ್ಲಿ. ವಿಜಾಪುರದ ಆದಿಲ್‌ ಶಾಹಿಗಳ ಬಗ್ಗೆ ಉತ್ತಮ ಮಾಹಿತಿ. ತಾರಿಕ್‌ ಇ ಫೆರಿಶ್ತಾ ಇವನ ಮತ್ತೊಂದು ಕೃತಿ.

2.     ತಬಾ-ತಬಾ: ಬುಹ್ರಾನ್‌ ಎ ಮಾಸಿರ್;‌ ಅಹಮದ್‌ ನಗರದ ಬುಹ್ರಾನ್‌ ಶಾನ ಆಶ್ರಿತ. ಫೆರಿಶ್ತಾ ಮತ್ತು ತಬಾ-ತಬಾ ಇಬ್ಬರೂ ವಿಜಯನಗರ ಮತ್ತು ಬಹಮನಿ ಹಾಗೂ ವಿಜಾಪುರದ ಸುಲ್ಥಾನರ ನಡುವಣ ರಾಜಕೀಯ ಸಂಬಂಧಗಳನ್ನು ವಿವರಿಸಿದ್ದಾರೆ.

3.     ಜುಬೇರಿ- ಬಸಾತಿನ್‌ ಉಸ್‌ ಸಲಾತಿನ್ 1825;‌ ಪರ್ಷಿಯ ಭಾಷೆ. ಆದಿಲ್‌ ಶಾಹಿಗಳು ಮತ್ತು ಮೊಗಲರ ನಡುವಣ ಸಂಬಂಧಗಳ ಮಾಹಿತಿ.

 

ವಿದೇಶೀಯ ಸಾಹಿತ್ಯಾಧಾರಗಳು – Foreign Literary Sources: ಪ್ರಾಚೀನ ಕಾಲದಿಂದಲೂ ನಮ್ಮ ದೇಶಕ್ಕೆ ಭೇಟಿ ನೀಡಿದ ವಿದೇಶಿ ವ್ಯಾಪಾರಿಗಳು, ರಾಯಭಾರಿಗಳು, ಪ್ರವಾಸಿಗರು & ಧರ್ಮಪ್ರಚಾರಕರು ಭಾರತದಲ್ಲಿನ ತಮ್ಮ ಅನುಭವಗಳನ್ನು ಲಿಖಿತ ರೂಪದಲ್ಲಿ ದಾಖಲಿಸಿದ್ದಾರೆ. ಅವರು ತಾವು ನೇರವಾಗಿ ಕಂಡು ಮತ್ತು ಸ್ಥಳೀಯರಿಂದ ಕೇಳಿ ತಿಳಿದ ಮಾಹಿತಿಗಳನ್ನು ತಮ್ಮ ದಾಖಲೆಗಳಲ್ಲಿ ನಿರೂಪಿಸಿದ್ದಾರೆ. ಅವರ ಇಂತಹ ಬರಹಗಳು ಪ್ರಾಚೀನ ಭಾರತದ ಮತ್ತು ಪ್ರಾಚೀನ ಕರ್ನಾಟಕದ ಇತಿಹಾಸ ಪುನರ್‌ ರಚನೆಯಲ್ಲಿ ಅಪಾರವಾದ ಐತಿಹಾಸಿಕ ಮಾಹಿತಿಗಳನ್ನು ಒದಗಿಸುತ್ತವೆ. ಹೀಗೆ ಭಾರತಕ್ಕೆ ಭೇಟಿ ನೀಡಿದ ವಿದೇಶಿಯರಲ್ಲಿ ಗ್ರೀಕರು, ರೋಮನ್ನರು, ಪರ್ಷಿಯನ್ನರು, ಚೀನಿಯರು ಮತ್ತು ಅರಬ್ಬರು ಪ್ರಮುಖರು. ದೇಶೀಯ ಬರವಣಿಗೆಗಳು ಒದಗಿಸದ ಮಾಹಿತಿಗಳು ಕೆಲವೊಮ್ಮೆ ವಿದೇಶೀಯ ಬರವಣಿಗೆಗಳಿಂದ ಲಭ್ಯವಾಗುತ್ತವೆ. ಅಲ್ಲದೇ ಇವು ಸತ್ಯನಿಷ್ಠ ಸಂಗತಿಗಳನ್ನು ಒಳಗೊಂಡಿರುತ್ತವೆ ಎಂಬುದು ವಿದ್ವಾಂಸರ ಅಭಿಪ್ರಾಯ. ಆದರೂ ಕೆಲವೊಮ್ಮೆ ಇವರ ಮಾಹಿತಿಗಳು ಅಪೂರ್ಣ ಮತ್ತು ಉತ್ಪ್ರೇಕ್ಷೆಗಳಿಂದ ಕೂಡಿರುತ್ತವೆ. ಕಾರಣ ಇವರ ಕೃತಿಗಳಲ್ಲಿನ ಮಾಹಿತಿಗಳನ್ನು ಆಧಾರಗಳಾಗಿ ಬಳಸುವಾಗ ಇತಿಹಾಸಕಾರನು ಎಚ್ಚರಿಕೆ ವಹಿಸಬೇಕಾಗುತ್ತದೆ. ಇವರ ಬರವಣಿಗೆಗಳಲ್ಲಿನ ಇಂತಹ ದೋಷಗಳಿಗೆ ಕಾರಣಗಳೆಂದರೆ, ಅವರು ಅಲ್ಪಕಾಲ ಭಾರತದಲ್ಲಿ ಉಳಿದಿರುವುದು, ಸ್ಥಳೀಯ ಭಾಷೆಗಳ ಜ್ಞಾನದ ಕೊರತೆ, ಕಂಡು, ಕೇಳಿದ್ದನ್ನು ಪರಿಶೀಲನೆಗೆ ಒಳಪಡಿಸದಿರುವುದು ಇತ್ಯಾದಿಗಳು. ವಿದೇಶಿ ಬರವಣಿಗೆಗಳನ್ನು ಗ್ರೀಕೋರೋಮನ್‌, ಚೀನೀ & ಮುಸ್ಲೀಂ ದಾಖಲೆಗಳೆಂದು ಮರುವಿಭಾಗ ಮಾಡಬಹುದು.

ಅ. ಗ್ರೀಕೋರೋಮನ್‌ ಬರವಣಿಗೆಗಳು:ಟಾಲೆಮಿಯ ಭೂಗೋಳ ಅಥವಾ Geography & ಅನಾಮಧೇಯ ರಚಿತ ದಿ ಪೆರಿಪ್ಲಸ್‌ ಆಫ್‌ ದಿ ಎರಿತ್ರಿಯನ್‌ ಸೀ ಕೃತಿಗಳು ಪ್ರಾಚೀನ ಕರ್ನಾಟಕದ ಬಂದರುಗಳ ಹೆಸರುಗಳು ಮತ್ತು ಪ್ರಮುಖ ವ್ಯಾಪಾರಿ ಕೇಂದ್ರಗಳ ಹೆಸರುಗಳನ್ನು ಉಲ್ಲೇಖಿಸಿವೆ.

ಆ. ಚೀನೀ ಬರವಣಿಗೆಗಳು: ಭಾರತದ ನೆರೆರಾಷ್ಟ್ರ ಚೀನಾದಿಂದ ಸಾ.ಶ.ವ. 630-45ರ ಕಾಲಘಟ್ಟದಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಯಾತ್ರಿಕರ ರಾಜ ಎಂದೇ ಹೆಸರಾದ ಹೂ ಎನ್ ತ್ಸಾಂಗನು ರಚಿಸಿದ ಸೀ ಯೂ ಕೀ ಕೃತಿಯಲ್ಲಿ ಬಾದಾಮಿಯ ಚಾಲುಕ್ಯ ಅರಸು ಇಮ್ಮಡಿ ಪುಲಕೇಶಿಯ ಸಾಧನೆಗಳ ವಿವರಗಳನ್ನು ನೀಡಿದ್ದಾನೆ. ನರ್ಮದಾ ನದಿಯ ಯುದ್ಧದ ಮಾಃಇತಿಯು ಇದರಲ್ಲಿ ಸೇರಿದೆ. ಸಾ.ಶ.ವ. 675ರಲ್ಲಿ ಭಾರತಕ್ಕೆ ಬಂದಿದ್ದ ಇತ್ಸಿಂಗನು ತನ್ನ ಬರವಣಿಗೆ “ನಾನ್‌ ಹೈ ಕಿ ಕೂಚೆ ನೈಪಚೌ” ಅಂದರೆ ಬೌದ್ಧ ನಾಡಿನ ದಾಖಲೆಗಳು ಎಂಬ ಕೃತಿಯಲ್ಲಿ ತನ್ನ ಅನುಭವಗಳನ್ನು ದಾಖಲಿಸಿದ್ದಾನೆ. 

ಇ. ಮುಸ್ಲೀಂ ಬರವಣಿಗೆಗಳು: ಎಂಟನೇ ಶತಮಾನದ ನಂತರ ದಕ್ಷಿಣ ಭಾರತಕ್ಕೆ ಮುಸ್ಲೀಂರ ಆಗಮನ ಆರಂಭವಾಯಿತು. ಬಾದಾಮಿ ಚಾಲುಕ್ಯರ ಇಮ್ಮಡಿ ಪುಲಕೇಶಿಯ ಆಸ್ಥಾನಕ್ಕೆ ಭೇಟಿ ನೀಡಿದ್ದ ಪರ್ಷಿಯಾದ ಎರಡನೆ ಖುಸ್ರೊನ ರಾಯಬಾರಿ ತಬರಿ, ರಾಷ್ಟ್ರಕೂಟರ ಅಮೋಘವರ್ಷ ನೃಪತುಂಗನ ಆಸ್ಥಾನಕ್ಕೆ ಭೇಟಿ ನೀಡಿದ್ದ ಸುಲೇಮಾನ್‌ (ಸಾ.ಶ.ವ. 851) ಮತ್ತು ವಿಜಯನಗರದ ಅರಸು ದೇವರಾಯನ ಕಾಲದಲ್ಲಿ ಭಾರತಕ್ಕೆ ಬಂದಿದ್ದ ಅಬ್ದುಲ್‌ ರಜಾಕ್‌ ಇವರಲ್ಲಿ ಪ್ರಮುಖರು.

ಅಲ್ಲದೇ ಮಹಮ್ಮದ್‌ ಖಾಸಿಂ ಫೆರಿಶ್ತಾ (ಎರಡನೇ ಇಬ್ರಾಹಿಂ ಆದಿಲ್‌ ಶಾನ ಆಶ್ರಯ) ಗುಲ್ಶನ್‌ ಇ ಇಬ್ರಾಹಿಂ ಕೃತಿ ರಚನೆ, 1596 ರಲ್ಲಿ; ವಿಜಾಪುರದ ಆದಿಲ್‌ ಶಾಹಿಗಳ ಬಗ್ಗೆ ಉತ್ತಮ ಮಾಹಿತಿ. ತಾರಿಕ್‌ ಇ ಫೆರಿಶ್ತಾ ಇವನ ಮತ್ತೊಂದು ಕೃತಿ. ತಬಾ-ತಬಾ: ಬುಹ್ರಾನ್‌ ಎ ಮಾಸಿರ್;‌ ಅಹಮದ್‌ ನಗರದ ಬುಹ್ರಾನ್‌ ಶಾನ ಆಶ್ರಿತ. ಫೆರಿಶ್ತಾ ಮತ್ತು ತಬಾ-ತಬಾ ಇಬ್ಬರೂ ವಿಜಯನಗರ ಮತ್ತು ಬಹಮನಿ ಹಾಗೂ ವಿಜಾಪುರದ ಸುಲ್ಥಾನರ ನಡುವಣ ರಾಜಕೀಯ ಸಂಬಂಧಗಳನ್ನು ವಿವರಿಸಿದ್ದಾರೆ. ಜುಬೇರಿ ರಚಿಸಿದ ಬಸಾತಿನ್‌ ಉಸ್‌ ಸಲಾತಿನ್ 1825;‌ ಪರ್ಷಿಯ ಭಾಷೆ ಕೃತಿಯಿಂದ ಆದಿಲ್‌ ಶಾಹಿಗಳು ಮತ್ತು ಮೊಗಲರ ನಡುವಣ ಸಂಬಂಧಗಳ ಮಾಹಿತಿ ತಿಳಿದು ಬರುತ್ತದೆ.

   ಜೊತೆಗೆ ಯೂರೋಪಿನಿಂದ ಅನೇಕ ಪ್ರವಾಸಿಗರು ದಕ್ಷಿಣ ಭಾರತ ಮತ್ತು ಕರ್ನಾಟಕದ ವಿಜಯನಗರದ ಅರಸರ ಆಸ್ಥಾನಕ್ಕೆ ಭೇಟಿ ನೀಡಿದ್ದರು. ಅವರಲ್ಲಿ ನಿಕೊಲೋ ಕೋಂಟಿ; ಇಟಲಿ. 1520 ರಲ್ಲಿ. ಇದೇ ಕಾಲಕ್ಕೆ ಇಟಲಿಯವನೇ ಆದ ಫೇಸ್‌ ಸಹಾ ಭೇಟಿ ನೀಡಿದ್ದ. ನ್ಯೂನಿಜ್; ಕುದುರೆ ವ್ಯಾಪಾರಿ. ವಿಜಯನಗರಕ್ಕೆ ಭೇಟಿ, 1537 ರಲ್ಲಿ. ವೃತ್ತಾಂತ ಅಥವಾ Chronicles ವಿಜಯನಗರ ಕುರಿತು ಹೆಚ್ಚಿನ ಮಾಹಿತಿ ನೀಡಿದ್ದಾನೆ.  ನಿಕೆಟಿನ್:‌ ರಷ್ಯಾದ ಪ್ರವಾಸಿಗ. 1570 ರಲ್ಲಿ ಬೀದರಿಗೆ ಭೇಟಿ. ಬಹಮನಿ ರಾಜ್ಯದ ಬಗ್ಗೆ ಮಾಹಿತಿ ನೀಡಿದ್ದಾನೆ.

   ಹೀಗೆ ವಿದೇಶೀಯ ಬರವಣಿಗೆಗಳು ಕರ್ನಾಟಕದ ಇತಿಹಾಸ ಪುನರ್‌ ರಚನೆಯಲ್ಲಿ ತಮ್ಮದೇ ಆದ ಪ್ರಮುಖ ಪಾತ್ರವಹಿಸಿವೆ.      ಆದರೆ, ವಿದೇಶೀ ಬರವಣಿಗೆಗಳಲ್ಲಿ ಮಾಹಿತಿ ಕೊರತೆ ಕಂಡುಬರುತ್ತದೆ. ಕಾರಣ, ಅವರಿಗೆ ಆಶ್ರಿತ ಇತಿಹಾಸಕಾರರಂತೆ ಸರ್ಕಾರಿ ದಾಖಲೆಗಳನ್ನು ಪರಿಶೀಲಿಸುವ ಅವಕಾಶವಿರಲಿಲ್ಲ. ಅಲ್ಲದೇ ಐತಿಹಾಸಿಕ ವಿಶ್ಲೇಷಣೆಯ ಕೊರತೆಯು ಅವರ ಬರವಣಿಗೆಗಳಲ್ಲಿ ಕಂಡು ಬರುತ್ತದೆ.

 

ಹೆಚ್ಚಿನ ಓದಿಗಾಗಿ:-

ಸಂಕ್ಷಿಪ್ತ ಕರ್ನಾಟಕ ಇತಿಹಾಸ; ಲೇಖಕರು:- ಸೂರ್ಯನಾಥ ಕಾಮತ್

ಸಮಗ್ರ ಕರ್ನಾಟಕದ ಇತಿಹಾಸ; ಲೇಖಕರು;_ ಫಾಲಾಕ್ಷ. 

Comments

Popular posts from this blog

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಸಾಹಿತ್ಯಾಧಾರಗಳು - Literary Sources