ಅಲ್ಲಾವುದ್ದೀನ್‌ ಖಿಲ್ಜಿಯ ಆಡಳಿತಾತ್ಮಕ ಸುಧಾರಣೆಗಳು ಭಾಗ ೨ - ಮಾರುಕಟ್ಟೆ ಸುಧಾರಣೆಗಳು.

ಮಾರುಕಟ್ಟೆ ಸುಧಾರಣೆಗಳು

   ಅಲ್ಲಾನು ಈ ಕ್ಷೇತ್ರದಲ್ಲಿ ಮಾಡಿದ ಸುಧಾರಣೆಗಳು ಅವನ ಕಾಲಕ್ಕೆ ಮೀರಿದ ಸುಧಾರಣೆಗಳಾಗಿದ್ದವು. ಸಮಕಾಲೀನ ಚರಿತ್ರಕಾರರು ಇವನ ಮಾರುಕಟ್ಟೆ ಸುಧಾರಣೆಗಳನ್ನು ಕುರಿತು ವಿಭಿನ್ನ ಅಭಿಪ್ರಾಯಗಳನ್ನು ಹೊಂದಿದ್ದಾರೆ. ಅವರುಗಳೆಂದರೆ, ಅಮೀ‌ರ್ ಖುಸ್ರೊ ಮತ್ತು ಜಿಯಾವುದ್ದೀನ್ ಬರೌನಿ.

ಅಮೀರ್‌ ಖುಸ್ರೋ ಅಭಿಪ್ರಾಯ: “ತನ್ನ ಪ್ರಜೆಗಳ ಅನುಕೂಲಕ್ಕಾಗಿ ಖಿಲ್ಜಿ ಈ ಸುಧಾರಣೆಗಳನ್ನು ಜಾರಿಗೆ ತಂದನು.”

ಜಿಯಾವುದ್ದೀನ್‌ ಬರೌನಿಯ ಅಭಿಪ್ರಾಯ: “ಅಲ್ಲಾನು ತನ್ನ ಸೈನಿಕರಿಗೆ ಕನಿಷ್ಠ ವೇತನ ನಿಗದಿ ಮಾಡಿದ್ದ; ಕಾರಣ ಸೈನಿಕರಿಗೆ ಕಡಿಮೆ ಬೆಲೆಗೆ ಜೀವನಾವಶ್ಯಕ ವಸ್ತುಗಳು ದೊರೆಯುವಂತೆ ಮಾಡಲು ಮಾರುಕಟ್ಟೆ ಸುಧಾರಣೆಗಳನ್ನು ಜಾರಿಗೊಳಿಸಿದ.”

ಬರೌನಿಯ ಮತ್ತೊಂದು ಅಭಿಪ್ರಾಯ: “ಅಲ್ಲಾನು ತನ್ನ ರಾಜ್ಯದಲ್ಲಿ ವ್ಯಾಪಾರದಿಂದ ಅಧಿಕ ಲಾಭ ಗಳಿಸುತ್ತಿದ್ದ ಹಿಂದೂ ವ್ಯಾಪಾರಿಗಳನ್ನು ದುರ್ಬಲಗೊಳಿಸಲು ಮಾರುಕಟ್ಟೆ ಸುಧಾರಣೆಗಳನ್ನು ಜಾರಿಗೊಳಿಸಿದನು

ಮಾರುಕಟ್ಟೆ ಸುಧಾರಣೆಯ ಕ್ರಮಗಳು: ಖಿಲ್ಜಿಯು ಕೈಗೊಂಡ ಮಾರುಕಟ್ಟೆ ಸುಧಾರಣೆಯ ಪ್ರಮುಖ ಕ್ರಮಗಳು ಕೆಳಕಂಡಂತಿವೆ:

ಬೆಲೆಗಳ ನಿಯಂತ್ರಣ, ಸರ್ಕಾರಿ ಗೋದಾಮುಗಳ ಸ್ಥಾಪನೆ, ಸರಕು ಸಾಗಾಣಿಕೆಗೆ ಕ್ರಮ, ವಿವಿಧ ಮಾರುಕಟ್ಟೆಗಳ ಸ್ಥಾಪನೆ, ಮೇಲ್ವಿಚಾರಣೆಗೆ ಪ್ರತ್ಯೇಕ ಇಲಾಖೆ ಮತ್ತು ಅಧಿಕಾರಿಗಳು, ಗೂಢಾಚಾರರ ನೇಮಕ & ನಿಯಮ ಮೀರಿದವರಿಗೆ ಉಗ್ರ ಶಿಕ್ಷೆಗಳು.

ಬೆಲೆಗಳ ನಿಗದಿ ಅಥವಾ ನಿಯಂತ್ರಣ : ಸುಲ್ತಾನನ ಅಧ್ಯಕ್ಷತೆಯಲ್ಲಿ ಸಮಿತಿಯೊಂದು ಎಲ್ಲಾ ಜೀವನಾವಶ್ಯಕ ವಸ್ತುಗಳ ಬೆಲೆ ನಿಗದಿ ಮಾಡುತ್ತಿತ್ತು. ವ್ಯಾಪಾರಿಗಳು ವಸ್ತುಗಳನ್ನು ಅವುಗಳ ನಿಗದಿತ ಬೆಲೆಗೆ ಮಾತ್ರ ಮಾರಾಟ ಮಾಡಬೇಕು. ಅವರು ವಸ್ತುಗಳ ದರಪಟ್ಟಿಯನ್ನು ತಮ್ಮ ಅಂಗಡಿಗಳ ಮುಂದೆ ಪ್ರದರ್ಶನ ಮಾಡಬೇಕು.

ಕೆಲವು ವಸ್ತುಗಳು ಮತ್ತು ಅವುಗಳ ಬೆಲೆಗಳು.

1)      ಗೋದಿ – ೧ ಮಣ – ೭.೫ ಜಿತಾಲ್.

2)     ಬಾ‌ರ್ಲಿ – ೧ ಮಣ – ೪ ಜಿತಾಲ್.

3)     ಅಕ್ಕಿ – ೧ ಮಣ – ೫ ಜಿತಾಲ್.

4)    ಉಪ್ಪು - ೨ ಮಣ - ೧ ಜಿತಾಲ್.

5)     ಉದ್ದು – ೧ ಮಣ – ೫ ಜಿತಾಲ್.

6)     ಬೇಳೆ – ೧ ಮಣ – ೫ ಜಿತಾಲ್.

7)     ಬೆಣ್ಣೆ – ೨.೫ ಸೇರು – ೪ ಜಿತಾಲ್.

8)     ಸಕ್ಕರೆ – ೧ ಸೇರು – ೧.೫ ಜಿತಾಲ್.

9)     ಎಳ್ಳೆಣ್ಣೆ – ೩ ಸೇರು – ೧ ಜಿತಾಲ್.

   ದಿನಬಳಕೆ ವಸ್ತುಗಳಷ್ಟೇ ಅಲ್ಲ ಗುಲಾಮರು, ಕುದುರೆ ಮತ್ತು ಹಸುಗಳಿಗೂ ಬೆಲೆ ನಿಗದಿ ಮಾಡಿದ್ದ.

1.      ಕರೆಯುವ ಹಸು – ೩ ರಿಂದ ೫ ಟಂಕಗಳು.

2.     ಸ್ತ್ರೀ ಗುಲಾಮಳು – ೫ ರಿಂದ ೧೨ ಟಂಕಗಳು.

3.     ಪುರುಷ ಗುಲಾಮ – ೧೦ ರಿಂದ ೧೫ ಟಂಕಗಳು.

4.    ಕುದುರೆ – ೬೫ ರಿಂದ ೧೨೦ ಟಂಕಗಳು. (ಕುದುರೆಗಳಲ್ಲಿ ೩ ದರ್ಜೆಗಳನ್ನು ಮಾಡಲಾಗಿತ್ತು.)

ಮಾರುಕಟ್ಟೆಗಳ ವರ್ಗೀಕರಣ: ಖಿಲ್ಜಿಯು ವಿವಿಧ ವಸ್ತುಗಳ ಮಾರುಕಟ್ಟೆಗಳನ್ನು ಕೆಳಗಿನಂತೆ ವರ್ಗೀಕರಿಸಿದ್ದನು:-

A.    ಮಂಡಿ – ದವಸ-ಧಾನ್ಯಗಳ ಮಾರುಕಟ್ಟೆ.

B.    ಸರಾಯಿ ಐ ಅದಿಲ್ – ಸಿದ್ಧವಸ್ತುಗಳ ಮಾರುಕಟ್ಟೆ.

C.    ಜಾನುವಾರುಗಳ ಮಾರುಕಟ್ಟೆ (ಕುದುರೆ, ಹಸು, ಎಮ್ಮೆ, ಗುಲಾಮರು).

D.    ಸಾಮಾನ್ಯ ಮಾರುಕಟ್ಟೆ (ಇತರೆ ವಸ್ತುಗಳು).

ದಾಸ್ತಾನು ಮತ್ತು ಪೂರೈಕೆ ನಿಯಂತ್ರಣ: ನಿರಂತರ ವಸ್ತುಗಳ ಪೂರೈಕೆಗಾಗಿ ಮತ್ತು ವಸ್ತುಗಳ ಸಂಗ್ರಹಣೆಗಾಗಿ ಕೆಳಗಿನ ಕ್ರಮಗಳನ್ನು ಕೈಗೊಂಡನು:-

ದವಸ-ಧಾನ್ಯಗಳನ್ನು ಶೇಖರಿಸಲು ಸರ್ಕಾರಿ ಗೋದಾಮುಗಳ ಸ್ಥಾಪನೆ. ಖಾಸಗಿ ಧಾನ್ಯ ಸಂಗ್ರಹಣೆ ನಿಷೇಧ. ರೈತರು ಖಡ್ಡಾಯವಾಗಿ ಸರ್ಕಾರಕ್ಕೆ ಧಾನ್ಯ ಮಾರಾಟ. ಸರ್ಕಾರಿ ಜಮೀನುಗಳಿಂದ ಧಾನ್ಯ ರೂಪದಲ್ಲಿ ತೆರಿಗೆ. ಕಾಳಸಂತೆ ಮಾರಾಟ ನಿಷೇಧ. ಅಭಾವ ಕಾಲದಲ್ಲಿ ನಿಗದಿತ ಖರೀದಿ ಅಥವಾ ತಾತ್ಕಾಲಿಕ ಪಡಿತರ ಪದ್ಧತಿಯ ಜಾರಿ.

ಸಾಗಾಣಿಕೆ ಕ್ರಮಗಳು: ವಸ್ತುಗಳ ನಿರಂತರ & ಸರಾಗ ಸಾಗಾಣಿಕೆಗೆ (ದೆಹಲಿಗೆ) ರಸ್ತೆಗಳ ಸುಧಾರಣೆ. ಸಾಗಾಣಿಕೆದಾರರು ನಿಗದಿತ ಅಂತರಗಳಲ್ಲಿ ವಾಸಿಸಲು ಕ್ರಮ. ಸುಗ್ಗಿ ಕಾಲದಲ್ಲಿ ಅಧಿಕಾರಿಗಳು ಬೆಳೆಗಳ ಬೆಲೆ ನಿಗದಿ ಮತ್ತು ಖರೀದಿ

ಇಲಾಖೆ ಮತ್ತು ಅಧಿಕಾರಿಗಳು:

ಮಾರುಕಟ್ಟೆ ನಿರ್ವಹಣೆಗೆ ಹೊಸದಾಗಿ ಸ್ಥಾಪಿಸಿದ ಇಲಾಖೆಯ ಹೆಸರು:- ದಿವಾನ್ ಎ ರಿಯಾಸತ್. ಶಹಾನ್ ಐ ಮಂಡಿ (ಮಾರುಕಟ್ಟೆ ಸ್ಥಿತಿ ಸುಲ್ತಾನನಿಗೆ ವರದಿ‌ ಮಾಡುವ ಅಧಿಕಾರಿ). ಬರೀದ್ ಇ ಮಂಡಿ ಮೇಲಿನ ಅಧಿಕಾರಿಗೆ ಸಹಾಯಕ. ಅಧಿಕಾರಿಗಳ ರಕ್ಷಣೆಗೆ ಸೈನಿಕರು ಇರುತ್ತಿದ್ದರು. ಮಾರುಕಟ್ಟೆಗಳ ವಹಿವಾಟು ತಿಳಿಯಲು ಗೂಢಾಚಾರರನ್ನು ನೇಮಿಸಿದ್ದ. ಸ್ವತಃ ತಾನೇ ಪರಿಶೀಲನೆ ಮಾಡಲು ಪುಟ್ಟ ಮಕ್ಕಳು ಮತ್ತು ತನ್ನ ಗುಲಾಮರನ್ನು ನಿಯೋಜಿಸುತ್ತಿದ್ದ!

ಅಳತೆ ನಿಯಮಗಳು & ಶಿಕ್ಷೆಗಳ ಸ್ವರೂಪ: ಅಳತೆ ಮತ್ತು ತೂಕಗಳನ್ನು ಸರ್ಕಾರವೇ ನಿಗದಿಪಡಿಸುತ್ತಿತ್ತು. ಅಧಿಕೃತ ತೂಕದ ಪ್ರಮಾಣಗಳನ್ನೇ ಬಳಸಬೇಕಾಗಿತ್ತು. ತೂಕ-ಅಳತೆಗಳಲ್ಲಿ ಮೋಸ ಮಾಡಿದವರ ದೇಹದಿಂದ ಮೋಸದ ಪ್ರಮಾಣದಷ್ಟೇ ಮಾಂಸವನ್ನು ಕೀಳಿಸಲಾಗುತ್ತಿತ್ತು!

ಸುಧಾರಣೆಯ ಫಲಿತಾಂಶಗಳು: ಕಡಿಮೆ ಬೆಲೆಗೆ ಜೀವನಾವಶ್ಯಕ ವಸ್ತುಗಳ ಲಭ್ಯತೆ. ಸೈನಿಕರು ಕಡಿಮೆ ವೇತನದಲ್ಲೂ ಸುಖಿಗಳಾಗಿದ್ದರು. ನಿರಂತರ ಪೂರೈಕೆಯಿಂದ ಸುಖಮಯ ಜೀವನ ಸಾಧ್ಯವಾಗಿತ್ತು. ಕ್ಷಾಮಗಳಲ್ಲೂ ಕೊರತೆ ಕಂಡುಬರಲಿಲ್ಲ. ಕ್ರೂರ ಶಿಕ್ಷೆಗಳ ಕಾರಣ ಕಾಳಸಂತೆ ಮಾರಾಟ ಮತ್ತು ಮೋಸದ ಮಾರಾಟಗಳು ಕುಗ್ಗಿದವು.

ಹಿರಿಮೆ: ಅಲ್ಲಾನ ಮಾರುಕಟ್ಟೆ ಸುಧಾರಣೆಯ ಕ್ರಮಗಳನ್ನು ಸಮಕಾಲೀನ ಚರಿತ್ರಕಾರರು & ಆಧುನಿಕ ವಿದ್ವಾಂಸರು ಈ ಮುಂದಿನಂತೆ ಪ್ರಶಂಸಿಸಿದ್ದಾರೆ:

ಫೆರಿಸ್ಥಾ:- “ಸುಲ್ತಾನನ ಕ್ರಮಗಳಿಂದ ಕ್ಷಾಮವಿರಲಿ, ಸುಭಿಕ್ಷವಿರಲಿ ಬೆಲೆಗಳು ಏರುತ್ತಿರಲಿಲ್ಲ; ಎಲ್ಲಾ ಕಾಲಕ್ಕೂ ವಸ್ತುಗಳು ಲಭ್ಯವಿದ್ದವು.”

ಬರೌನಿ:- “ಬೆಲೆ ನಿಗದಿ ಮತ್ತು ನಿಯಂತ್ರಣವು ಅದ್ಭುತ ಕ್ರಮವಾಗಿತ್ತು.”

ಲೇನ್ ಪೂಲ್ :- “ಇವನೊಬ್ಬ ಮಹಾನ್ ರಾಜಕೀಯ ಅರ್ಥಶಾಸ್ತ್ರಜ್ಞ.”

ದೋಷಗಳು:

ಅ. ಇವನ ಮಾರುಕಟ್ಟೆ ಸುಧಾರಣೆಗಳು ಕೇವಲ ರಾಜಧಾನಿ ದೆಹಲಿ ಮತ್ತು ಅದರ ಸುತ್ತಲಿನ ಕೆಲವು ಪ್ರದೇಶಗಳಿಗೆ ಮಾತ್ರ ಸೀಮಿತವಾಗಿದ್ದವು.

ಆ. ರೈತರು ಇವನ ಸುಧಾರಣೆಯ ಕ್ರಮಗಳಿಂದ ನಷ್ಟ ಅನುಭವಿಸಬೇಕಾಯಿತು.

ಇ. ಬಡವರಿಗೆ ಇದರಿಂದ ಯಾವುದೇ ಲಾಭವಿರಲಿಲ್ಲ.

ಈ. ಇವನ ಮರಣದ ನಂತರ ಅಧಿಕಾರಕ್ಕೆ ಬಂದ ಮಗ ಮುಬಾರಕ್‌ ಶಾ ಇವನ ಸುಧಾರಣೆಗಳನ್ನು ರದ್ದು ಪಡಿಸಿದ ಕಾರಣ ಇವನ ಸುಧಾರಣೆಗಳು ಅಲ್ಪಕಾಲಿಕವಾಗಿದ್ದವು. 

Comments

Popular posts from this blog

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಸಾಹಿತ್ಯಾಧಾರಗಳು - Literary Sources