ಅಲ್ಲಾವುದ್ದೀನ್‌ ಖಿಲ್ಜಿಯ ಆಡಳಿತ ಪದ್ಧತಿ ಭಾಗ ೧

ಅಲ್ಲಾವುದ್ದೀನ್‌ ಖಿಲ್ಜಿಯ  ಆಡಳಿತಾತ್ಮಕ                                     ಸುಧಾರಣೆಗಳು.

   ರಣರಂಗದಲ್ಲಿ ಸಮರ್ಥ ಯೋಧನಾಗಿದ್ದಂತೆ ಆಡಳಿತದಲ್ಲೂ ನಿಪುಣನಾಗಿದ್ದ. ಇವನ ಸಾಮ್ರಾಜ್ಯ ವಿಸ್ತರಣೆಯಷ್ಟೇ ಆಡಳಿತ ಕಾರ್ಯಗಳು ಸಹಾ ಮಹತ್ವ ಪಡೆದಿವೆ. ಪೂರ್ವಿಕರಿಂದ ಉಂಟಾದ ಅವ್ಯವಸ್ಥೆಯನ್ನು ತನ್ನ ಆಡಳಿತ ಸುಧಾರಣೆಗಳಿಂದ ಸರಿಪಡಿಸಿದ. ಅನಕ್ಷರಸ್ಥನಾದರೂ ತನ್ನ ಬುದ್ಧಿಬಲದಿಂದ ಗಮನಾರ್ಹ ಸುಧಾರಣೆಗಳನ್ನು ಜಾರಿಗೊಳಿಸಿದ. ಇವನ ಆಡಳಿತಾತ್ಮಕ ಸುಧಾರಣೆಗಳನ್ನು ಕೆಳಕಂಡಂತೆ ವಿವರಿಸಬಹುದು:

1.      ಖಿಲ್ಜಿಯ ರಾಜಪ್ರಭುತ್ವದ ನೀತಿ.

   ಇವನು ಬಲ್ಬನ್ನನ ರಾಜಪ್ರಭುತ್ವದ ಕಲ್ಪನೆಯಲ್ಲಿ ನಂಬಿಕೆ ಇಟ್ಟಿದ್ದ. ಸುಲ್ತಾನ ದೇವರ ಪ್ರತಿನಿಧಿ ಎಂದು ನಂಬಿದ್ದ. ಅವನು ಭೂಮಿಯ ಮೇಲಿನ ಇತರರಿಗಿಂತ ಶ್ರೇಷ್ಠ ಎಂದು ನಂಬಿದ್ದ. ಅವನ ಇಚ್ಛೆಗೆ ವಿರುದ್ಧವಾಗಿ ನಡೆಯುವುದು ದೇವರ ಇಚ್ಛೆಗೆ ವಿರುದ್ಧವಾಗಿ ನಡೆದಂತೆ ಎಂಬುದು ಅವನ ಅಭಿಪ್ರಾಯವಾಗಿತ್ತು. ಉಲೇಮಾಗಳನ್ನು ಆಡಳಿತದಿಂದ ದೂರ ಇಟ್ಟಿದ್ದ. ಸರದಾರರ ಅಧಿಕಾರಗಳನ್ನು ಮೊಟಕುಗೊಳಿಸಿದ. ಧರ್ಮವನ್ನು ರಾಜ್ಯದಿಂದ ಬೇರ್ಪಡಿಸುವುದು ಇವನ ರಾಜಪ್ರಭುತ್ವದ ನೀತಿಯಾಗಿತ್ತು. ನಿರಂಕುಶ ಪ್ರಭುತ್ವ ಅನುಸರಿಸಿದನು. ಪ್ರಜೆಗಳ ಹಿತ ಯಾವುದು ಎಂಬುದು ಧರ್ಮಾಧಿಕಾರಿಗಳಿಗಿಂತ ಚೆನ್ನಾಗಿ ತಿಳಿದಿದ್ದೇನೆ ಎನ್ನುತ್ತಿದ್ದ.

 “ನಾನು ಧರ್ಮಶಾಸ್ತ್ರವನ್ನಾಗಲಿ, ನ್ಯಾಯಶಾಸ್ತ್ರವನ್ನಾಗಲಿ ಅರಿತಿಲ್ಲ; ಆದರೆ ಸಂದರ್ಭೋಚಿತ & ರಾಜ್ಯಕ್ಕೆ ಹಿತವಾದ ಶಾಸನವು ನ್ಯಾಯಬದ್ಧವಾಗಿರಲಿ ಅಥವಾ ಇಲ್ಲದಿರಲಿ, ಅದನ್ನು ಜಾರಿಗೆ ತಂದೇತರುತ್ತೇನೆ. ನಾನು ಸತ್ತ ನಂತರ ದೇವರು ನನಗೆ ಯಾವ ಶಿಕ್ಷೆ ಕೊಟ್ಟರೂ ನನಗೆ ಚಿಂತೆಯಿಲ್ಲ.” ಅಲ್ಲಾವುದ್ದೀನ್ ಖಿಲ್ಜಿ.

2.     ಸರದಾರರು ಮತ್ತು ದಂಗೆಗಳ  ನಿಯಂತ್ರಣ.

   ಅಲ್ಲಾನು ಪಟ್ಟಕ್ಕೆ ಬಂದಾಗ ಅನೇಕ ಸಮಸ್ಯೆಗಳನ್ನು (ದಂಗೆಗಳು) ಎದುರಿಸಬೇಕಾಯಿತು. ಅವುಗಳ ಮೂಲ ತಿಳಿಯಲು ಆಪ್ತರೊಂದಿಗೆ ಚರ್ಚಿಸಿದ & ದಂಗೆಗಳಿಗೆ ಕಾರಣಗಳನ್ನು ಕಂಡುಕೊಂಡ. ಅವುಗಳೆಂದರೆ,

ದಂಗೆಯ ಕಾರಣಗಳು:-

1.     ಅದಕ್ಷ ಗೂಢಾಚಾರ ವ್ಯವಸ್ಥೆ

2.     ಅತಿಯಾದ ಮದ್ಯಪಾನ

3.     ಸರದಾರರಲ್ಲಿನ ಅನ್ಯೋನ್ಯತೆ ಮತ್ತು ಸಾಮಾಜಿಕ ಕೂಟಗಳು (ಸಮಾರಂಭಗಳು)

4.     ಸಂಪತ್ತಿನ ಅತಿಯಾದ ಕ್ರೋಢೀಕರಣ

ಹೀಗೆ ತಾನು ಕಂಡುಕೊಂಡ ದೋಷಗಳನ್ನು ಸರಿಪಡಿಸಲು ಅನೇಕ ಪ್ರತಿಬಂಧಕ ಕ್ರಮಗಳನ್ನು ಕೈಗೊಂಡ. ಅವುಗಳು ಹೀಗಿವೆ:

ಪ್ರತಿಬಂಧಕ ಕ್ರಮಗಳು.

ಸರದಾರರು, ಶ್ರೀಮಂತರು ಮತ್ತು ಧರ್ಮಾಧಿಕಾರಿಗಳು ಪುಕ್ಕಟೆಯಾಗಿ ಹೊಂದಿದ್ದ ಜಮೀನುಗಳನ್ನು ಹಿಂಪಡೆದು ಅವುಗಳನ್ನು ರಾಜ್ಯದ ಅಧೀನಕ್ಕೆ ಒಳಪಡಿಸಿದ. ಮಲಿಕರು, ಶ್ರೀಮಂತರು, ಸರದಾರರ ಮೇಲೆ ಗುಪ್ತಚರ ವ್ಯವಸ್ಥೆ ಬಲಗೊಳಿಸಿದ. ಶ್ರೀಮಂತರ ಮನೆಗಳು, ಸೇನಾ ನೆಲೆಗಳು, ಅಧಿಕಾರಿಗಳ ಮನೆಗಳು & ಅರಮನೆಗಳಲ್ಲೂ ಸಹ ಗುಪ್ತಚಾರರ ನೇಮಕ ಮಾಡಿದ. ಪಿತೂರಿಯ ಕೇಂದ್ರಗಳನ್ನು ನಾಶಪಡಿಸಿದ. ಕುಡಿತ ಮತ್ತು ಜೂಜು ಕಟ್ಟೆಗಳನ್ನು ನಿಷೇಧಿಸಿದ. ಸ್ವತಃ ತಾನೇ ಕುಡಿಯುವುದನ್ನು ತ್ಯಜಿಸಿದ. ಉನ್ನತ ವರ್ಗದವರ ಸಭೆ-ಸಮಾರಂಭಗಳಿಗೆ ಸುಲ್ತಾನನ ಅನುಮತಿ ಖಡ್ಡಾಯಗೊಳಿಸಿದ.

ಹೀಗೆ ಪ್ರತಿಬಂಧಕ ಕ್ರಮಗಳ ಮೂಲಕ ಸರದಾರರು, ಶ್ರೀಮಂತರು ಮತ್ತು ಧರ್ಮಾಧಿಕಾರಿಗಳನ್ನ್ ನಿಯಂತ್ರಿಸಿದ. ದಂಗೆಯ ಮೂಲವನ್ನು ನಾಶಪಡಿಸುವ ಮೂಲಕ ದಂಗೆಕೋರರನ್ನು ಮೂಲೆಗುಂಪಾಗಿಸಿದ.

3.      ಸೈನಿಕ ಸುಧಾರಣೆಗಳು

ಉದ್ದೇಶಗಳು:- ಸಾಮ್ರಾಜ್ಯ ವಿಸ್ತರಣೆ, ದಂಗೆಗಳ ದಮನ, ಉತ್ತಮ ಆಡಳಿತ, ಮಂಗೋಲರ ದಮನ, ಮತ್ತು  ಗಡಿಗಳ ರಕ್ಷಣೆ ಇತ್ಯಾದಿ.

ಸುಲ್ತಾನನೇ ಸರ್ವೋಚ್ಛ ಸೈನ್ಯಾಧಿಕಾರಿ ಆಗಿದ್ದ. ಸೇನಾಡಳಿತದ ಸಹಾಯಕ್ಕೆ ಆರಿಜ್ ಮುಮಲಿಕ್ ಎಂಬ ಮುಖ್ಯ ಸೇನಾಪತಿ ಇದ್ದನು. ಆತನಿಗೆ ಸೇನಾಡಳಿತದ  ಸಂಪೂರ್ಣ ಜವಾಬ್ದಾರಿ ಇತ್ತು. ಸೈನ್ಯಾಡಳಿತದಲ್ಲಿ ವೈಯುಕ್ತಿಕ ಆಸಕ್ತಿ ವಹಿಸಿದ. ಸೈನಿಕರಿಗೆ ಬೇಕಾದ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿದ. ಅರಬ್‌ & ಪರ್ಷಿಯಾದಿಂದ ಉತ್ತಮ ಕುದುರೆಗಳನ್ನು ತರಿಸಿದ. ʼಹುಲಿಯಾʼ ಎಂಬ ಸೈನಿಕರ ಹಾಜರಾತಿ ಪದ್ಧತಿ ಜಾರಿಗೊಳಿಸಿದ. ಸೈನ್ಯದಲ್ಲಿ ಗುಪ್ತಚಾರ ಪದ್ಧತಿ ಜಾರಿಗೆ ತಂದ.

ಒಂದು ಕುದುರೆ ಹೊಂದಿದ್ದ ಸೈನಿಕರಿಗೆ ವಾರ್ಷಿಕ ೨೩೪ ಟಂಕಗಳ (ಬೆಳ್ಳಿ ನಾಣ್ಯ) ಸಂಬಳ ನಿಗದಿ ಮಾಡಿದ. ಹೆಚ್ಚುವರಿ ಒಂದು ಕುದುರೆಗೆ ೭೮ ಟಂಕಗಳ ಅಧಿಕ ವೇತನ ನಿಗದಿಪಡಿಸಿದ. ವೇತನ ವಿತರಣೆ ಸಕಾಲದಲ್ಲಿ ಆಗುವಂತೆ ವ್ಯವಸ್ಥೆ ಮಾಡಿದ.

 ಸೇನಾಬಲದಿಂದಲೇ ಗಳಿಸಿದ ಅಧಿಕಾರವನ್ನು ಅದರ ನೆರವಿನಿಂದಲೇ ನಡೆಸಿದ. ಇವನ ಸುಸಜ್ಜಿತ ಸೈನ್ಯವು ಭಾರತದ ಉದ್ದಗಲಕ್ಕೂ ದಿಗ್ವಿಜಯ ಸಾಧಿಸಿತು.

4.     ನ್ಯಾಯಾಂಗದ ಸುಧಾರಣೆಗಳು.

ಖಿಲ್ಜಿಯು ನಿಷ್ಪಕ್ಷಪಾತ ಮತ್ತು ಶೀಘ್ರ ನ್ಯಾಯ ವಿತರಣೆಗೆ ಕೆಳಗಿನ ಕ್ರಮಗಳನ್ನು  ಕೈಗೊಂಡನು.

ನ್ಯಾಯಾಡಳಿತವನ್ನು ಉಲೇಮಾಗಳ ಪ್ರಭಾವದಿಂದ ಮುಕ್ತಗೊಳಿಸಿದ. ಅಧಿಕ ಸಂಖ್ಯೆಯ ನ್ಯಾಯಾಧೀಶರನ್ನು ನೇಮಿಸಿದ. ಮುಖ್ಯ ಖಾಜಿ ಇವನಿಗೆ ನ್ಯಾಯಾಡಳಿತದಲ್ಲಿ ನೆರವು ನೀಡುತ್ತಿದ್ದ. ಸುಲ್ತಾನನ ಆಸ್ಥಾನವೇ ಅಂತಿಮ ನ್ಯಾಯಾಲಯವಾಗಿತ್ತು. ಅಪರಾಧಿಗಳಿಗೆ ಅಂಗಚ್ಛೇದ, ದಂಡ, ಮರಣದಂಡನೆ & ಗಡಿಪಾರುಗಳಂತಹ ಕ್ರೂರ ಶಿಕ್ಷೆಗಳನ್ನು ಜಾರಿಗೊಳಿಸಿದ. ನಗರಗಳ ರಕ್ಷಣೆಗೆ ಕೊತ್ವಾಲ ಎಂಬ ಅಧಿಕಾರಿಗಳನ್ನು ನೇಮಿಸಿದ. ಪೋಲೀಸ್ ವ್ಯವಸ್ಥೆಯನ್ನು ಬಲಗೊಳಿಸಿದ.

5.     ಆರ್ಥಿಕ ಸುಧಾರಣೆಗಳು.

ಇವನ ಆರ್ಥಿಕ ಸುಧಾರಣೆಗಳನ್ನು ಎರಡು ವಿಭಾಗಗಳಾಗಿ ಅಧ್ಯಯನ ಮಾಡಬಹುದು. 1. ಕಂದಾಯ ಆಡಳಿತದ ಸುಧಾರಣೆಗಳು & 2. ಮಾರುಕಟ್ಟೆ ಸುಧಾರಣೆಗಳು.

ಆರ್ಥಿಕ ಸುಧಾರಣೆಗಳ ಪ್ರಮುಖ ಉದ್ಧೇಶಗಳು:- ಸರ್ಕಾರದ ಆದಾಯ ಹೆಚ್ಚಿಸುವುದು ಮತ್ತು ಖಾಸಗಿ ಆದಾಯವನ್ನು ಕುಗ್ಗಿಸುವುದು. ಅಲ್ಲದೇ, ದಂಗೆಗಳ ತಡೆ, ಮಂಗೋಲರ ವಿರುದ್ಧದ ಹೋರಾಟ ಮತ್ತು ಸಾಮ್ರಾಜ್ಯ ವಿಸ್ತರಣೆಗೆ ಹಣದ ಅವಶ್ಯಕತೆ ಇತ್ತು. ಕಾರಣ, ರಾಜ್ಯದ ಆದಾಯದ ಮೂಲಗಳನ್ನು ಹೆಚ್ಚಿಸಲು ಅನೇಕ ಸುಧಾರಣೆಗಳನ್ನು ಜಾರಿಗೆ ತಂದನು. ಅವುಗಳೆಂದರೆ,

ಉಲೇಮಾಗಳು, ಶ್ರೀಮಂತರು, ಮತ್ತು ಸರದಾರರು ಅನವಶ್ಯಕವಾಗಿ ಅನುಭವಿಸುತ್ತಿದ್ದ ಜಮೀನುಗಳನ್ನು ವಾಪಾಸು ಪಡೆದನು. ಭೂಮಿಯ ಅಳತೆ ಮಾಡಿಸಿ ಒಡೆತನ & ಕಂದಾಯ ನಿಗದಿ ಮಾಡಿದನು. ಹಿಂದೂಗಳಿಗೆ ಉತ್ಪಾದನೆಯ ಶೇ. ೫೦ ರಷ್ಟನ್ನು ಭೂಕಂದಾಯವೆಂದು ನಿಗದಿ ಮಾಡಿದ. ಮುಸ್ಲೀಮರಿಗೆ ಇದರ ಪ್ರಮಾಣ ಕಾಲು ಭಾಗದಷ್ಟಿತ್ತು. ಪಾರಂಪರಿಕ ಕಂದಾಯ ಅಧಿಕಾರಿಗಳ (ಚೌಧರಿ ಮತ್ತು ಮುಕದ್ದಮ್ಮರು) ವಿಶೇಷ ರಿಯಾಯಿತಿಗಳನ್ನು ರದ್ದು ಪಡಿಸಿದನು. ಯುದ್ದ ಲೂಟಿಯಲ್ಲಿ / ರಷ್ಟನ್ನು ಸರ್ಕಾರಕ್ಕೆ ಸಲ್ಲಿಸಲು ಸೂಚಿಸಿದ. ಹಿಂದೂಗಳಿಗೆಜೆಜಿಯಾಮತ್ತು ಮುಸ್ಲೀಂರಿಗೆಜಕಾತ್ತೆರಿಗೆ ವಿಧಿಸಿದ. ಉದ್ಯೋಗ, ವ್ಯಾಪಾರ, ಮನೆ, ಆಮದು-ರಫ್ತು ಇತ್ಯಾದಿಗಳ ಮೇಲೆ ತೆರಿಗೆ ಹಾಕಿದ. ಕ್ರಮಬದ್ಧ  ಕಂದಾಯ ವಸೂಲಿಗೆ, ಭ್ರಷ್ಟಾಚಾರ ತಡೆಯಲು ಮತ್ತು ಹಳೆಯ ಬಾಕಿ ವಸೂಲಿ ಮಾಡಲು ಶರಾಬ್‌ ಖಾನಿ & ಮಸ್ತಕ್‌ ರಾಜ್‌ ಎಂಬ ಹೊಸ ಅಧಿಕಾರಿಗಳನ್ನು ನೇಮಕ ಮಾಡಿದ. ಭ್ರಷ್ಟಾಚಾರ ತಡೆಯಲು ಅಧಿಕಾರಿಗಳ ವೇತನ ಹೆಚ್ಚಿಸಿದ ಮತ್ತು ಅವರ ಮೇಲೆ ನಿಗಾ ಇಡಲು ಗುಪ್ತಚಾರರನ್ನು ನೇಮಿಸಿದ.

(ಭಾಗ ೨ ರಲ್ಲಿ ಮುಂದುವರಿಯುತ್ತದೆ) 

Comments

Popular posts from this blog

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧

ಸಾಹಿತ್ಯಾಧಾರಗಳು - Literary Sources

ಕರ್ನಾಟಕದ ಭೌಗೋಳಿಕ ಲಕ್ಷಣಗಳು ಮತ್ತು ಇತಿಹಾಸದ ಮೇಲೆ ಅವುಗಳ ಪ್ರಭಾವ