ಮಹಮದ್‌ ಬಿನ್‌ ತುಘಲಕ್‌ ಕಾಲದ ದಂಗೆಗಳು.

   ಮಹಮದ್‌ನ ದೌರ್ಬಲ್ಯದ ಲಾಭ ಪಡೆದ ಅನೇಕ ಪ್ರಾಂತ್ಯಾಧಿಕಾರಿಗಳು ಇವನ ಆಡಳಿತದ ವಿರುದ್ಧ ಪದೇ-ಪದೇ ದಂಗೆ ಏಳುತ್ತಿದ್ದರು. ಒಟ್ಟು ೨೨ ದಂಗೆಗಳು ಇವನ ಕಾಲದಲ್ಲಿ ನಡೆದು, ಅವುಗಳನ್ನು ಅಡಗಿಸಲು ಇವನು ಸು. ೧೬ ವರ್ಷಗಳನ್ನು ತೆಗೆದುಕೊಂಡನು. ಕೆಲವು ಪ್ರಮುಖ ದಂಗೆಗಳು ಮತ್ತು ಅವುಗಳ ವಿವರಗಳು ಮುಂದಿನಂತಿವೆ:

1.     ಬಹಾವುದ್ದೀನ್‌ ಗುರ್ಶಸ್ಪ್‌ ದಂಗೆ ೧೩೨೬-೨೭: ಮಹಮದ್‌ನ ಸಂಬಂಧಿಯಾದ ಇವನು ಗುಲ್ಬರ್ಗಾದ ಬಳಿಯ ಸಗರದ ಜಹಗೀರುದಾರನಾಗಿದ್ದು, ಅವನ ಅಧಿಕಾರದ ವಿರುದ್ಧ ದಂಗೆ ಎದ್ದನು. ಇವನನ್ನು ಅಡಗಿಸಲು ಸೈನ್ಯ ರವಾನಿಸಲಾಯಿತು. ಬಹಾವುದ್ದೀನ್‌ ಮೊದಲು ಆನೆಗುಂದಿಗೂ ನಂತರ ದೋರಸಮುದ್ರಕ್ಕೂ ಪಲಾಯನ ಮಾಡಿದನು. ಅಲ್ಲಿ ಅವನನ್ನು ಸೆರೆ ಹಿಡಿದು ಕೊಂದು, ಅವನ ಮಾಂಸವನ್ನು ಬೇಯಿಸಿ ಅವನ ಸಂಬಂಧಿಗಳಿಗೆ ನೀಡಲಾಯಿತು. ಅವನ ಚರ್ಮದೊಳಗೆ ಹತ್ತಿಯನ್ನು ತುಂಬಿ ಸಾಮ್ರಾಜ್ಯದಲ್ಲಿ ಮೆರವಣಿಗೆ ಮಾಡಿಸಲಾಯಿತು. ಇದು ಮುಂದಿನ ದಂಗೆಕೋರರಿಗೆ ಎಚ್ಚರಿಕೆಯಾಗಿತ್ತು.

2.     ಮಾಬರ್‌ ಅಥವಾ ಮಧುರೈ ದಂಗೆ ೧೩೩೫: ಸೈಯ್ಯದ್‌ ಜಲಾಲುದ್ದೀನ್‌ ಹಸನ್‌ ಶಾ ದಂಗೆ ಎದ್ದನು. ಸ್ವತಃ ಸುಲ್ತಾನ ಸೈನ್ಯ ಸಮೇತ ಬಂದನು. ಆದರೆ ಮಾರ್ಗ ಮಧ್ಯದಲ್ಲಿಯೇ ಉಂಟಾದ ಕ್ಷಾಮ ಮತ್ತು ಸಾಂಕ್ರಾಮಿಕ ರೋಗಗಳ (ಪ್ಲೇಗ್) ಕಾರಣ ಹಿಂತಿರುಗಬೇಕಾಯಿತು. ಮಾಬರ್‌ ಸ್ವತಂತ್ರವಾಯಿತು.

3.     ವಿಜಯನಗರ ಸ್ಥಾಪನೆ ೧೩೩೬: ಹಕ್ಕ & ಬುಕ್ಕರು ಮುಸ್ಲೀಂ ದಾಳಿಗಳನ್ನು ತಡೆಯಲು ಸ್ವತಂತ್ರ ಹಿಂದೂ ರಾಜ್ಯ ಸ್ಥಾಪಿಸಿದರು.

4.     ಬಂಗಾಳದ ದಂಗೆ ೧೩೩೭: ಪೂರ್ವ ಬಂಗಾಳದ ರಾಜ್ಯಪಾಲನಾದ ಬಹ್ರಾಮ್‌ ಖಾನನನ್ನು ಅವನ ಅಧೀನಾಧಿಕಾರಿ ಅಥವಾ ಸೇವಕ ಫಕ್ರುದ್ದೀನ್‌ ಮುಬಾರಕ್‌ ಶಾ ಕೊಂದು ತಾನೇ ಪೂರ್ವ ಬಂಗಾಳದ ರಾಜ್ಯಪಾಲನೆಂದು ಘೋಷಿಸಿಕೊಂಡನು. ಇವನನ್ನು ಎದುರಿಸಲು ಬಂದ ಪಶ್ಚಿಮ ಬಂಗಾಳದ ರಾಜ್ಯಪಾಲ ಖಾದರ್‌ ಖಾನ್‌ ಸಹಾ ಸೋತನು. ಫಕ್ರುದ್ದೀನ್‌ ಮುಂದೆ ಸ್ವತಂತ್ರನಾಗಿ ಆಡಳಿತ ನಡೆಸತೊಡಗಿದನು.

5.     ಅವಧ್‌ನ ಗವರ್ನರ್‌  ದಂಗೆ ೧೩೪೦-೪೧: ಅಲ್ಲಿನ ರಾಜ್ಯಪಾಲ ಐನ್‌ ಉಲ್‌ ಮುಲ್ಕ್‌ ಮುಲ್ತಾನಿ ಆರಂಭದಲ್ಲಿ ವಿಧೇಯನಾಗಿದ್ದನು. ಕಾರಾ ದಂಗೆ ಅಡಗಿಸಲು ಮತ್ತು ಅವಧ್ನ ಕ್ಷಾಮ ಕಾಲದಲ್ಲಿ ಸಹಾಯ ಮಾಡಿದ್ದನು. ಆದರೆ, ಅವನನ್ನು ದೇವಗಿರಿಯ ದಂಗೆ ಅಡಗಿಸಲು ಹೋಗುವಂತೆ ಆದೇಶಿಸಿದಾಗ ಅದನ್ನು ನಿರಾಕರಿಸಿ ದಂಗೆಯೆದ್ದನು. ಅವನನ್ನು ಸೋಲಿಸಿ ದೆಹಲಿಯಲ್ಲಿ ಸುಲ್ತಾನನ ಹೂದೋಟಗಳ ಮೇಲ್ವಿಚಾರಕನಾಗಿ ನೇಮಿಸಲಾಯಿತು.

6.     ವಾರಂಗಲ್‌ ದಂಗೆ ೧೩೪೩: ಪ್ರತಾಪರುದ್ರದೇವನ ಮಗ ಕೃಷ್ಣಯ್ಯ ಅಥವಾ ಕಾಪಯ್ಯ ಮಹಮದ್‌ನ ವಿರುದ್ಧ ದಂಗೆಯೆದ್ದು ಅಲ್ಲಿನ ಮುಸ್ಲೀಂ ಆಡಳಿತಗಾರನನ್ನು ಓಡಿಸಿ ತಾನು ಸ್ವತಂತ್ರವಾಗಿ ಅದನ್ನು ಆಳತೊಡಗಿದನು. ಇವನಿಗೆ ಹೊಯ್ಸಳರ ಬೆಂಬಲವಿತ್ತು. ಅವನು ಸ್ವತಂತ್ರನಾದನು.

7.     ದೇವಗಿರಿಯ ದಂಗೆಗಳು ೧೩೪೫: ಮೊದಲು ಕುತ್ಲುಬ್‌ ಖಾನ್‌ ದಂಗೆ ಎದ್ದನು. ಅವನನ್ನು ಸದೆಬಡಿದು ದೆಹಲಿಗೆ ಕರೆಸಲಾಯಿತು. ಮತ್ತೆ ಇಮಾದ್‌ ಉಲ್‌ ಮುಲ್ಕ್‌ನ ನೇತೃತ್ವದಲ್ಲಿ ದಂಗೆ ಎದ್ದ ಅಮೀರರು ಹಸನ್‌ ಗಂಗು ನಾಯಕತ್ವದಲ್ಲಿ ದಂಗೆ ಮುಂದುವರಿಸಿದರು. ಗಂಗು ಮುಂದೆ ೧೩೪೭ ರಲ್ಲಿ ಬಹಮನಿ ಸಾಮ್ರಾಜ್ಯ ಸ್ಥಾಪಿಸಿದನು.

8.     ಗುಜರಾತ್‌ ದಂಗೆಗಳು ೧೩೪೫: ಮಾಳವದ ರಾಜ್ಯಪಾಲ ಅಜೀಜ್‌ ಕಮ್ಮಾರ್‌ನು ಶ್ರೀಮಂತರ ವಿರೋದಿಯಾಗಿದ್ದು, ಸು. ೮೦ ಶ್ರೀಮಂತರ ತಲೆ ಕಡಿಸಿದನು. ಅವನನ್ನು ಸೆರೆ ಹಿಡಿದು ಕೊಲ್ಲಲಾಯಿತು. ಮುಂದೆ ಥಾಗಿಯ ನೇತೃತ್ವದಲ್ಲಿ ದಂಗೆ ಮುಂದುವರೆಯಿತು. ಅವನ ದಂಗೆ ಅಡಗಿಸಲು ಮಹಮದ್‌ ಸ್ವತಃ ಸೈನ್ಯ ಸಮೇತ ಬಂದನು. ಥಾಗಿ ಸಿಂಧ್‌ಗೆ ಪಲಾಯನ ಮಾಡಿದನು. ಅವನ ಬೆನ್ನಟ್ಟಿದ ಸುಲ್ತಾನನು ಥಟ್ಟಾದಲ್ಲಿ ಮಾರ್ಚ್‌ ೨೦, ೧೩೫೧ ರಂದು ಅನಾರೋಗ್ಯದಿಂದ ಮರಣ ಹೊಂದಿದನು.

   ಇವುಗಳಲ್ಲದೇ ಮುಲ್ತಾನ್‌ ದಂಗೆ ೧೩೨೭ ಮತ್ತು ಕಾರಾ ದಂಗೆಗಳೂ ನಡೆದವು.

Comments

Popular posts from this blog

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಸಾಹಿತ್ಯಾಧಾರಗಳು - Literary Sources