ವೈದಿಕ ಸಂಸ್ಕೃತಿ ಮತ್ತು ಆರ್ಯರ ಮೂಲ ಕುರಿತ ವಿದೇಶಿ ಮೂಲದ ವಾದಗಳು.

ವೈದಿಕ ಸಂಸ್ಕೃತಿ

   ಸಿಂಧೂ ನಾಗರೀಕತೆಯ ಪತನಾನಂತರ ಉತ್ತರ ಭಾರತದಲ್ಲಿ ಮತ್ತೊಂದು ಸಂಸ್ಕೃತಿ ಉಗಮಿಸಿತು. ಅದನ್ನು ವೈದಿಕ ಸಂಸ್ಕೃತಿ ಎನ್ನುವರು. ಕಾರಣ ಈ ಕಾಲದಲ್ಲಿಯೇ ವೇದಗಳು ರಚಿತವಾದದ್ದು ಎಂದು ನಂಬಲಾಗಿದೆ. ವೇದಗಳ ರಚನಕಾರರು ಆರ್ಯರು ಎಂದು ಭಾವಿಸಲಾಗಿದ್ದು, ಈ ಸಂಸ್ಕೃತಿಯನ್ನು ಆರ್ಯರ ಸಂಸ್ಕೃತಿ ಎಂದೂ ಸಹ ಕರೆಯಲಾಗಿದೆ. ಆರ್ಯ ಎಂದರೆ ಉತ್ತಮ ವ್ಯಕ್ತಿ, ಸಂಸ್ಕೃತಿಯುಳ್ಳವನು ಇಲ್ಲವೇ ಗೌರವಾನ್ವಿತ ವ್ಯಕ್ತಿ ಎಂಬ ಅರ್ಥಗಳೂ ಇವೆ. ಈ ಕಾಲಘಟ್ಟವು ಸು. ಸಾ.ಶ.ಪೂ ೨,೦೦೦ ರಿಂದ ೬೦೦ ರವರೆಗೆ, ಅಂದರೆ ಅವೈದಿಕ ಧರ್ಮಗಳ ಉದಯದವರೆಗೆ, ವ್ಯಾಪಿಸಿತ್ತು ಎಂದು ಗುರ್ತಿಸಲಾಗಿದೆ.

  ವೈದಿಕ ಸಂಸ್ಕೃತಿಯ ಕರ್ತೃಗಳಾದ ಆರ್ಯರ ಮೂಲದ ಬಗ್ಗೆ ವಿದ್ವಾಂಸರಲ್ಲಿ ಇಂದಿಗೂ ಭಿನ್ನಾಭಿಪ್ರಾಯಗಳಿವೆ. ಏಕೆಂದರೆ ಅವರು ವಿದೇಶಿಯರು ಎಂದು ಒಂದು ವರ್ಗದ ಅಭಿಪ್ರಾಯವಾದರೆ ಆರ್ಯರು ಭಾರತದ ಮೂಲನಿವಾಸಿಗಳೇ ಎಂಬುದು ಇನ್ನೊಂದು ವರ್ಗದ ವಾದವಾಗಿದೆ. ಇವರ ಮೂಲದ ಕುರಿತ ವಿವಿಧ ಸಿದ್ಧಾಂತಗಳು ಮತ್ತು ಅವುಗಳ ಪ್ರತಿಪಾದಕರ ವಿವರಗಳು ಕೆಳಕಂಡಂತಿವೆ:

೧. ಯೂರೋಪ್‌ ಮೂಲ. ಇವರು ಇಂಡೋ-ಯೂರೋಪಿಯನ್ನರು. ಗ್ರೀಕ್‌, ಲ್ಯಾಟಿನ್‌, ಪರ್ಷಿಯನ್‌, ಸಂಸ್ಕೃತ ಮತ್ತು ಇಂಗ್ಲೀಷ್‌ ಭಾಷೆಗಳನ್ನಾಡುತ್ತಿದ್ದ ಇಂಡೊ-ಯೂರೋಪಿಯನ್ನರೆ ಈ ಜನಾಂಗದ ಮೂಲದವರು ಎಂದು ವಿಲಿಯಂ ಜೋನ್ಸ್‌, ಫಿಲೊಪ್ಪೋ ಮತ್ತು ಸಾಸೆಟ್ಟಿ ವಾದಿಸಿದ್ದಾರೆ. ಇದೇ ರೀತಿಯ ವಿವಿಧ ಅಂಶಗಳನ್ನು ಆಧರಿಸಿ ಮೂಡಿಬಂದಿರುವ ಯೂರೋಪ್‌ ಮೂಲದ ಇತರೆ ಉಪವಾದಗಳು ಕೆಳಕಂಡಂತಿವೆ:

ಅ. ಹಂಗೇರಿ ಮೂಲ. ಆರ್ಯರಿಗೆ ತಿಳಿದಿದ್ದ ಕೃಷಿ, ಕಬ್ಬಿಣದ ಬಳಕೆ, ಪಶುಪಾಲನೆ, ಪ್ರಾಣಿವರ್ಗ ಮಧ್ಯಯೂರೋಪಿಯನ್ನರಿಗೆ ತಿಳಿದಿತ್ತು. ಕಾರಣ ಆರ್ಯರು ಅಲ್ಲಿಂದ ಬಂದವರು ಎಂದು ಡಾ. ಪಿ. ಗೇಲ್ಸ್‌ ಮತ್ತು ಮತ್ತು ಮ್ಯಾಕ್‌ಡೊನಾಳ್ಡ್‌ ವಾದಿಸಿದ್ದಾರೆ.

ಆ. ಜರ್ಮನಿ ಮೂಲ. ಆರ್ಯರು ಮತ್ತು ಜರ್ಮನಿಯನ್ನರ ನಡುವಣ ದೈಹಿಕ ಲಕ್ಷಣಗಳ ಹೋಲಿಕೆಯನ್ನು ಆಧರಿಸಿ ಡಾ. ಬೆಂಕಾ ಅವರ ವಾದ. ಇದಕ್ಕೆ ಜನಾಂಗ ಶ್ರೇಷ್ಠತೆಯನ್ನು ಪ್ರತಿಪಾದಿಸಿದ ಹಿಟ್ಲರ್‌ ಸಹಮತಿಸಿದ್ದು, ನಾಜಿಗಳು ಆರ್ಯರ ಮೂಲದವರು ಎಂದು ವಾದಿಸಿದ್ದಾನೆ.

ಇ. ಬಾಲ್ಟಿಕ್‌ ಮೂಲ. ತುರ್ಕಿಸ್ಥಾನದ ಬಾಲ್ಟಿಕಕ್‌ನಲ್ಲಿ ಕಂಡುಬಂದಿರುವ ಹಳೆಶಿಲಾಯುಗದ ಉಪಕರಣಗಳಿಗೂ ಆರ್ಯರು ಬಳಸುತ್ತಿದ್ದ ಉಪಕರಣಗಳಿಗೂ ಸಾಮ್ಯತೆ ಇರುವ ಕಾರಣ ಡಾ ಮಚ್‌ ಮತ್ತು ಹರ್ಚ್‌ಬರ್ಡ್‌ರು  ವಾದಿಸಿದ್ದಾರೆ.

ಈ. ದಕ್ಷಿಣ ರಷ್ಯಾ ಮೂಲ. ಭಾಷೆಗಳ ಹೋಲಿಕೆಯ ಆಧಾರದಲ್ಲಿ ದಕ್ಷಿಣ ರಷ್ಯಾದ ಸ್ಟೆಪ್ಪಿಸ್‌ ಪ್ರದೇಶ ಆರ್ಯರ ಮೂಲವೆಂದು ಡಾ. ಬಿ.ಕೆ. ಘೊಷ್‌, ಮ್ಯಾಕ್ಸ್‌ಮುಲ್ಲರ್‌ ಮತ್ತು ನೆಹರಿಂಗ್‌ ಮೊದಲಾದವರು ವಾದಿಸಿದ್ದಾರೆ.

ಉ. ಉತ್ತರ ಧೃವ ಮೂಲ. ಬಾಲಗಂಗಾಧರ ತಿಲಕರು ವೇದಗಳಲ್ಲಿನ ಸಸ್ಯವರ್ಗ, ಪ್ರಾಣಿವರ್ಗ, ಹವಾಮಾನ ಮತ್ತು ಜ್ಯೋತಿಷ್ಯದ ಕೆಲವು ಅಂಶಗಳನ್ನು ಆಧರಿಸಿ Arctic home of the Vedas ಎಂಬ ತಮ್ಮ ಕೃತಿಯಲ್ಲಿ ಆರ್ಯರು ಉತ್ತರ ಧೃವದಿಂದ ದಕ್ಷಿಣಕ್ಕೆ ಬಂದವರೆಂದು ವಾದಿಸಿದ್ದಾರೆ.

   ಕೇವಲ ದೈಹಿಕ ಲಕ್ಷಣಗಳು, ಪುರಾತತ್ವ ಆಧಾರಗಳು ಮತ್ತು ಭಾಷೆಗಳನ್ನು ಆಧರಿಸಿ ಒಂದು ಜನಾಂಗದ ಮೂಲವನ್ನು ನಿರ್ಧರಿಸಲು ಸಾಧ್ಯವಿಲ್ಲದ ಕಾರಣ ಮೇಲಿನ ಸಿದ್ಧಾಂತಗಳಿಗೆ ಅನೇಕ ಟೀಕೆಗಳು ಕೇಳಿಬಂದಿವೆ.

೨. ಮಧ್ಯ ಏಷ್ಯಾ ಮೂಲ. ಜರ್ಮನಿಯ ಭಾಷಾತಜ್ಞ ಮ್ಯಾಕ್ಸ್‌ ಮುಲ್ಲರ್‌ ಈಗಿನ ಇರಾನ್ರಾಕ್‌ಗಳು ಇವರ ಮೂಲವೆಂದು ತಮ್ಮ ಭಾಷೆಗಳ ವಿಜ್ಞಾನದ ಮೇಲಿನ ಉಪನ್ಯಾಸಗಳು ಎಂಬ ಕೃತಿಯಲ್ಲಿ ಸಂಸ್ಕೃತದ ಮಾತೃ, ಪಿತೃ, ಬ್ರಾತೃ ಮತ್ತು ಗೋವು ಎಂಬ ಪದಗಳಿಗೆ Mother, Father, Brother and Cow ಎಂಬ ಪದಗಳ ನಡುವಣದ ಉಚ್ಛಾರಣೆಯಲ್ಲಿನ ಹೋಲಿಕೆಯನ್ನು ಆಧರಿಸಿ ಈ ವಾದವನ್ನು ಮಂಡಿಸಿದ್ದಾರೆ. ಇದಕ್ಕೆ ಪೂರಕವಾಗಿ ಏಷ್ಯಾ ಮೈನರ್‌ನ ಭೋಗಜ್‌ಕಾಯ್‌ ಶಾಸನದಲ್ಲಿ ಕಂಡುಬಂದಿರುವ ದೇವತೆಗಳ ಹೆಸರುಗಳು ಆರ್ಯರ ದೇವತೆಗಳೊಂದಿಗೆ ಹೋಲಿಕೆಯಾಗುವುದನ್ನು ಪ್ರತಿಪಾದಿಸಲಾಗಿದೆ. ಅಲ್ಲದೇ ಇರಾನಿಯನ್ನರ ಪ್ರಾಚೀನ ಕೃತಿ ಜೆನ್‌ಅವಿಸ್ತಾಕ್ಕೂ ವೇದಗಳಲ್ಲಿನ ವಿವರಗಳಿಗೂ ಸಾಮ್ಯತೆ ಇರುವುದು ಕಂಡುಬಂದಿದೆ ಎಂಬುದು ಇವರ ವಾದ.

೩. ಟಿಬೆಟ್‌ ಮೂಲ. ದಯಾನಂದ ಸರಸ್ವತಿಯವರು ತಮ್ಮ ಸತ್ಯಾರ್ಥಪ್ರಕಾಶ ಕೃತಿಯಲ್ಲಿ ಟಿಬೆಟ್ಟಿನಲ್ಲಿ ಹೆಚ್ಚಿದ ಜನಸಂಖ್ಯೆಯ ಕಾರಣ ಸಪ್ತಸಿಂಧೂ ಬಯಲಿಗೆ ವಲಸೆ ಬಂದರೆಂದು ವಾದಿಸಿದ್ದಾರೆ.

  ಆದರೆ ಇದಕ್ಕೆ ವ್ಯತಿರಿಕ್ತವಾಗಿ ಆರ್ಯರು ವಿದೇಶಿಯರಲ್ಲ, ಅವರು ಭಾರತದ ಮೂಲದವರೇ ಎಂದು ಅನೇಕ ವಿದ್ವಾಂಸರು ವಾದಿಸಿದ್ದಾರೆ. 

Comments

Popular posts from this blog

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಸಾಹಿತ್ಯಾಧಾರಗಳು - Literary Sources