ಕರ್ನಾಟಕದಲ್ಲಿ ಶಾತವಾಹನರು

ಕರ್ನಾಟಕದಲ್ಲಿ ಇತಿಹಾಸಾರಂಭ ಕಾಲ ಮತ್ತು ಶಾತವಾಹನರು

  ಲಿಖಿತ ದಾಖಲೆಗಳು ಲಭ್ಯವಾದ ನಂತರದ ಕಾಲವನ್ನು ಇತಿಹಾಸದ ಆರಂಭ ಕಾಲ ಅಥವಾ ಐತಿಹಾಸಿಕ ಕಾಲ ಎಂದು ಕರೆಯುವರು. ಕರ್ನಾಟಕದಲ್ಲಿ ಈ ಕಾಲಘಟ್ಟವು ಅಶೋಕನ ಶಾಸನಗಳಿಗಿಂತ ಎರಡು ಶತಮಾನಗಳ ಹಿಂದೆಯೇ ಆರಂಭವಾಗಿದೆ. ಅಂದರೆ ಸು. ಸಾ.ಶ.ಪೂ 500 . ರಷ್ಟು ಹಿಂದಿನ ಸಾಹಿತ್ಯದ ತುಣುಕುಗಳು ಲಭ್ಯವಾಗಿವೆ. ಕರ್ನಾಟಕದ ಅಶೋಕನ ಶಾಸನಗಳ ಕಾಲವು ಸಾ.ಶ.ಪೂ 259-58 ಎಂದು ಗುರ್ತಿಸಲಾಗಿದೆ. ಚಿತ್ರದುರ್ಗ ಜಿಲ್ಲೆಯ ಅವನ ಶಾಸನಗಳು ಮೌರ್ಯರ ದಕ್ಷಿಣ ಗಡಿಯನ್ನು ತಿಳಿಸುತ್ತವೆ. (ಬ್ರಹ್ಮಗಿರಿ, ಅಶೋಕ ಸಿದ್ದಾಪುರ & ಜಟಿಂಗ ರಾಮೇಶ್ವರ) ಇಸಿಲ ಎಂಬುದು ಈ ಪ್ರಾಂತ್ಯಕ್ಕಿದ್ದ ಅಂದಿನ ಹೆಸರು. ಸುವರ್ಣಗಿರಿ ಅದರ ರಾಜಧಾನಿ; ಅಂದರೆ ಇಂದಿನ ಕೊಪ್ಪಳ ಜಿಲ್ಲೆಯ ಕನಕಗಿರಿ ಎಂದು ನಂಬಲಾಗಿದೆ. ಸು. ಸಾ.ಶ.ವ. 1500 ವರ್ಷಗಳಷ್ಟು ಹಿಂದಿನ ಕನ್ನಡ ಕೃತಿ ʼಸಿಂಗಿರಾಜ ಪುರಾಣʼ ದಲ್ಲಿ ಪಟ್ಟದಕಲ್ಲು ಕುರಿತು ಮಾಹಿತಿ ನೀಡುವಾಗ ಇದು ನಂದರ ಆಳ್ವಿಕೆಗೆ ಒಳಪಟ್ಟಿತ್ತು ಎಂಬ ಉಲ್ಲೇಖವಿದೆ. ಅದಕ್ಕೂ ಹಿಂದೆ 11ನೆ ಶತಮಾನದ ಕೆಲವು ದಾಖಲೆಗಳ ಪ್ರಕಾರ ನಂದರು ಕುಂತಳದಲ್ಲೂ (ಬನವಾಸಿ) ಅಧಿಕಾರ ಹೊಂದಿದ್ದ ಬಗ್ಗೆ ಮಾಹಿತಿ ಲಭ್ಯವಾಗುತ್ತದೆ. ಕಾರಣ ಚಿತ್ರದುರ್ಗ ಮತ್ತು ಅದರ ಮೇಲಣ ಪ್ರದೇಶಗಳು ಮೌರ್ಯರು ಮತ್ತು ಅವರಿಗೂ ಹಿಂದೆ ನಂದರ ಆಳ್ವಿಕೆಗೆ ಒಳಪಟ್ಟಿತ್ತು ಎಂಬುದು ಇದರಿಂದ ದೃಢವಾಗುತ್ತದೆ. ಏಕೆಂದರೆ ಮೌರ್ಯರು ಇಡೀ ನಂದ ಸಾಮ್ರಾಜ್ಯವನ್ನು ಗೆದ್ದಿದ್ದರು.

   ಏಳನೆ ಶತಮಾನದ ಶ್ರವಣಬೆಳಗೊಳದ ಶಾಸನಗಳ ಪ್ರಕಾರ ಚಂದ್ರಗುಪ್ತ ಮೌರ್ಯನು ಗುರು ಭದ್ರಬಾಹುವಿನೊಂದಿಗೆ ಇಲ್ಲಿಗೆ ಬಂದು ನೆಲೆಸಿ ಸಲ್ಲೇಖನ ಕೈಗೊಂಡ ಬಗ್ಗೆ ಮಾಹಿತಿ ತಿಳಿಸುತ್ತವೆ. ಅವನು ವಾಸವಿದ್ದ ಬೆಟ್ಟಕ್ಕೆ ಚಂದ್ರಗಿರಿ ಎಂದು ಕರೆಯಲಾಗುತ್ತಿದ್ದು, ಅವನ ಹೆಸರಿನ ಒಂದು ಬಸದಿಯು ಅಲ್ಲಿದೆ. ಆದರೆ ಮಂ. ಗೋವಿಂದ ಪೈ ಅವರು ಇಲ್ಲಿಗೆ ಬಂದವನು ಮೌರ್ಯ ವಂಶದ ಸ್ಥಾಪಕನಲ್ಲ; ಬದಲಿಗೆ ಅಶೋಕನ ಉತ್ತರಾಧಿಕಾರಿಗಳಲ್ಲಿ ಒಬ್ಬನಾಗಿದ್ದ ಸಂಪ್ರತಿ ಚಂದ್ರಗುಪ್ತ ಎಂದು ಅಭಿಪ್ರಾಯಪಟ್ಟಿದ್ದಾರೆ. ಅಶೋಕನ 11 ಶಾಸನಗಳು ಕರ್ನಾಟಕದಲ್ಲಿ ದೊರೆತಿದ್ದು ಚಿತ್ರದುರ್ಗದ ಶಾಸನಗಳು ಅತ್ಯಂತ ದಕ್ಷಿಣದಲ್ಲಿ ದೊರೆತಿರುವ ಕಾರಣ ಈ ಭಾಗವು ಅಶೋಕನ ಆಳ್ವಿಕೆಗೆ ಒಳಪಟ್ಟಿದ್ದು ನಿರ್ವಿವಾದ. ಶ್ರೀಲಂಕಾದ ಬೌದ್ಧ ಕೃತಿ ಮಹಾವಂಶದಲ್ಲೂ ಅಶೋಕನು ವನವಾಸ (ಇಂದಿನ ಬನವಾಸಿ) ಕ್ಕೆ ತನ್ನ ಧರ್ಮಪ್ರಚಾರಕರನ್ನು ಕಳುಹಿಸಿದ್ದ ಬಗ್ಗೆ ಮಾಹಿತಿ ನೀಡುತ್ತದೆ. ಇದರಿಂದ ಶಾತವಾಹನರಿಗೂ ಮೊದಲು ಮೌರ್ಯರು ಕರ್ನಾಟಕದ ಭಾಗಗಳನ್ನು ಆಳುತ್ತಿದ್ದರೆಂದು ನಂಬಬಹುದು. ಇದಕ್ಕೆ ಪೂರಕವಾಗಿ ಕಲಬುರ್ಗಿ ಜಿಲ್ಲೆಯ ಸನ್ನತಿಯಲ್ಲಿ ಅವರ ಕಾಲದ ಸ್ಮಾರಕಗಳು ದೊರೆತಿವೆ.

ಕರ್ನಾಟಕದಲ್ಲಿ ಶಾತವಾಹನರು.

   ಕರ್ನಾಟಕದಲ್ಲಿ ಆಳ್ವಿಕೆ ನಡೆಸಿದ ಲಿಖಿತ ಆಧಾರಗಳುಳ್ಳ ಹಿರಿಯ ರಾಜ ಮನೆತನವೆಂದರೆ ಶಾತವಾಹನರು. ಮತ್ಸ್ಯ, ವಿಷ್ಣು & ಭಾಗವತ ಪುರಾಣಗಳಲ್ಲಿ ಆಧಾರಗಳು ಲಭ್ಯ. ಕಾರ್ಲೆ, ನಾಸಿಕ್‌ & ಕನ್ಹೇರಿಗಳಲ್ಲಿನ ಪ್ರಾಕೃತ ಶಾಸನಗಳು ಪುರಾಣಗಳಿಗೆ ಪೂರಕವಾಗಿವೆ. ನಾಣ್ಯಗಳೂ ಸಹ ಮಾಹಿತಿ ಒದಗಿಸುತ್ತವೆ. ದಕ್ಷಿಣಾಪಥದ ಒಡೆಯರು ಎಂದು ಸ್ವಯಂ ಉಲ್ಲೇಖ. ರಾಜ್ಯವು ಕೊಂಕಣದಿಂದ ಕೃಷ್ಣ ನದಿಯ ಮುಖಜಭೂಮಿಯವರೆಗೆ ಹರಡಿತ್ತು.ಚಂದ್ರವಳ್ಲೀ ಇವರ ದಕ್ಷಿಣದ ಗಡಿಯಾಗಿತ್ತು. ಮತ್ಸ್ಯ ಪುರಾಣದಂತೆ 30 ಅರಸರು ಸು. 460 ವರ್ಷಗಳ ಕಾಲ ಆಳಿದ್ದಾರೆ. ಕೆಲವು ವಿದ್ವಾಂಸರು ಇವರ ಆಳ್ವಿಕೆ ಸಾ.ಶ.ಪೂ. 300 ರಲ್ಲಿ ಆರಂಭವಾಯಿತು ಎಂದು ತಿಳಿಸಿದ್ದರೆ, ಡಿ.ಸಿ ಸರ್ಕಾರರ್ರವರು ಇವರ ಆಳ್ವಿಕೆಯ ಆರಂಭದ ಕಾಲವು ಸು. ಸಾ.ಶ.ವ. 30 ರಲ್ಲಿ ಆಗಿರಬಹುದು ಎಂದು ವಾದಿಸಿದ್ದಾರೆ. ಅವರ ಪ್ರಕಾರ ವಿವಿಧ ಪುರಾಣಗಳು ತಿಳಿಸುವಂತೆ ಶಾತವಾಹನರಿಗಿಂತ ಮುನ್ನ ಆಳ್ವಿಕೆ ನಡೆಸಿದ ಮೌರ್ಯ, ಶೃಂಗ & ಕಣ್ವರ ಒಟ್ಟು ಆಳ್ವಿಕೆಯ ಕಾಲ ಸು. 294 ವರ್ಷಗಳು. ಮೌರ್ಯರ ಸ್ಥಾಪಕ ಚಂದ್ರಗುಪ್ತನ ಕಾಲವು ಸಾ.ಶ.ಪೂ. 324 ಆಗಿದ್ದು, ಅದರಲ್ಲಿ ಮೇಲಿನ ಒಟ್ಟು ಕಾಲವನ್ನು ಕಳೆದರೆ ಉಳಿಯುವ 30 ಶಾತವಾಹನರ ಆರಂಭಿಕ ಕಾಲವಾಗಿದೆ. ಕಣ್ವರ ಕೊನೆಯ ಅರಸನನ್ನು ಇವರ ಮೊದಲ ಅರಸು ಪದಚ್ಯುತಗೊಳಿಸಿದನೆಂಬ ಪೌರಾಣಿಕ ಮಾಹಿತಿ ಇದಕ್ಕೆ ಆಧಾರವಾಗಿದೆ. ಬಳ್ಳಾರಿ ಮತ್ತು ಧಾರವಾಡ ಜಿಲ್ಲೆಗಳ ಪ್ರದೇಶವನ್ನು “ಶಾತವಾಹನಿಹಾರ” ಎಂದು ಕರೆದಿರುವ ಕಾರಣ ಇವರು ಕರ್ನಾಟಕದ ಮೂಲದವರೆಂಬುದು ಕೆಲವು ವಿದ್ವಾಂಸರ ವಾದ.

ಸಿಮುಖ: ಸಾ.ಶ.ವ. 30. ಸ್ಥಾಪಕ. ಆಂಧ್ರಭರ್ತೃ ಅಂದರೆ ಆಂಧ್ರದ ಮೂಲದವನು. ಹೈದ್ರಾಬಾದಿನ ಕರೀಂನಗರ ಬಳಿ ಇವನ ನಾಣ್ಯಗಳು ಲಭ್ಯ.  ಕಾರಣ ಅದು ಅವರ ಆಡಳಿತದ ಆರಂಭಿಕ ಕೇಂದ್ರ. ಇವನ ನಂತರ ಸೋದರ ಕೃಷ್ಣ ಅಥವಾ ಕನ್ಹ ಮತ್ತು ಅವನ ಮಗ ಶಾತಕರ್ಣಿ ಆಳಿದರು. ನಾನಾಘಾಟ್‌ (ರಾಜಾ ಸಿಮುಖ ಶಾತವಾಹನ) ಶಾಸನಗಳಲ್ಲಿ ಮಾಹಿತಿ. ನಾಸಿಕ್‌ ಶಾಸನದಲ್ಲಿ ಸಿಮುಖನನ್ನು  ʼಏಕ ಬ್ರಾಹ್ಮಣʼ ಎಂದು ಕರೆದಿದ್ದು, ಬ್ರಾಹ್ಮಣರ ಸೊಕ್ಕು ಮುರಿದವನು ಇವನು ಎನ್ನಲಾಗಿದೆ. ಇವರು ವೈದಿಕ ಮತಾವಲಂಬಿಗಳು ಮತ್ತು ಪ್ರತಿಷ್ಠಾನ ಇವರ ರಾಜಧಾನಿ. ಅದು ಇಂದಿನ ಮಹಾರಾಷ್ಟ್ರದ ಪೈಠಣವೇ ಆಗಿದೆ.

   ಶಾತಕರ್ಣಿಯು ಅಶ್ವಮೇಧ ಯಾಗವನ್ನು ಮಾಡಿದನೆಂದು ಮತ್ತು ಪ್ರತಾಪಶಾಲಿಯಾದ ಅರಸನೆಂದು ಹೇಳಲಾಗಿದೆ. ಇವನ ಮತ್ತು ಗೌತಮಿಪುತ್ರನ ನಡುವಣ ಅನೇಕ ಅರಸರು ಆಳಿದ ಮಾಹಿತಿ ಪುರಾಣಗಳಲ್ಲಿ ಲಭ್ಯವಾದರೂ ಅವುಗಳಿಗೆ ಐತಿಹಾಸಿಕ ಆಧಾರಗಳು ಅಲಭ್ಯ. ಡಿ.ಸಿ ಸರ್ಕಾರ್‌ ಮತ್ತು ಡಾ. ಭಂಡಾರ್ಕರ್‌ರವರು ಧಾನ್ಯಕಟಕ, ಪ್ರತಿಷ್ಠಾನ ಮತ್ತು ಕುಂತಳಗಳಲ್ಲಿ ಇವರ ಮೂರು ಶಾಖೆಗಳಿದ್ದ ಬಗ್ಗೆ ಮಾಃಇತಿ ನೀಡುತ್ತಾರೆ. ಶಕರ ಆಕ್ರಮಣದ ಕಾರಣ ಶಾತವಾಹನರು ಒಂದು ಶತಮಾನದ ಕಾಲ ನೇಪಥ್ಯಕ್ಕೆ ಸರಿದಿದ್ದರು.

ಗೌತಮಿಪುತ್ರ ಶಾತಕರ್ಣಿ: ಸಾ.ಶ.ವ. 106-130. ತ್ರೈಸಮುದ್ರೋತೋಯ ಪೀತವಾಹನ. ಶಕಾರಿ. ಶಕರ ನಹಪಾಣನನ್ನು ಸೋಲಿಸಿ ಅವನಿಂದ ಅನೇಕ ಪ್ರದೇಶಗಳ ವಶ. ವಂಶದ ಕೀರ್ತಿಯ ಮರುಸ್ಥಾಪಕನೆಂದು ಪುಲಮಾಯಿಯ ಶಾಸನದಿಂದ ಮಾಃಇತಿ. ಸೌರಾಷ್ಟ್ರ, ಮಾಳವ, ಕೃಷ್ಣ ನದಿಯ ಕೊಳ್ಳದ ಪ್ರದೇಶಗಳು ಇವನ ಅಧೀನಕ್ಕೆ ಒಳಪಟ್ಟಿದ್ದವು. ಪೂರ್ವ-ಪಶ್ಚಿಮ ಸಮುದ್ರಗಳ ನಡುವಣ ಭೂಮಿಯ ಒಡೆಯ.

ವಸಿಷ್ಠಿಪುತ್ರ ಪುಲಮಾಯಿ: ಸಾ.ಶ.ವ. 130-159. ಪೈಠಣ ಇವನ ರಾಜಧಾನಿ. ಕೃಷ್ಣ ಮುಖಜ ಭೂಮಿಯಲ್ಲಿ ರಾಜ್ಯ ವಿಸ್ತಾರ.

   ಇವನ ನಂತರ ಶಿವಶ್ರಿ ಶಾತಕರ್ಣಿ (159-66), ಶಿವಸ್ಕಂದ (167-74) ಮತ್ತು ಯಜ್ಞಶ್ರಿ ಶಾತಕರ್ಣಿ (174-203) ವರೆಗೆ ಆಳಿದರು.

   ಯಜ್ಞಶ್ರಿ ಶಾತಕರ್ಣಿಯು ಶಕರಿಂದ  ಅನೇಕ ಪ್ರದೇಶಗಳನ್ನು ಮತ್ತು ಕೊಂಕಣವನ್ನು ಗೆದ್ದನು. ಆಂಧ್ರದ ಕರಾವಳಿ ಇವನ ಹಿಡಿತದಲ್ಲಿತ್ತು. ನಂತರ ರಾಜ್ಯ ವಿಘಟನೆಗೊಂಡು ಪುಲೋಮ ಮತ್ತು ವಿಜಯಚಂದರರ ನಡುವೆ ಹಂಚಿಕೆಯಾಯಿತು. ಪುಲೋಮನ ನಂತರ ರುದ್ರಶ್ರಿ ಶಾತಕರ್ಣಿ ಆಳಿದನು. ಇವರ ಒಂದು ಶಾಕೆಯು ಕುಂತಳ ಅಥವಾ ಬನವಾಸಿಯಲ್ಲಿದ್ದು, ಹಾಲನು ಇಲ್ಲಿಯವನು. ಇವನು ಕವಿಯಾಗಿದ್ದು ʼಗಾಥಾಸಪ್ತಶತಿ” ಎಂಬ ಕೃತಿಯ ಕರ್ತೃ.

   ಶಕರು ದಕ್ಷಿಣಕ್ಕೆ ವಿಸ್ತರಿಸದಂತೆ ತಡೆದುದು ಈ ಮನೆತನದ ಹಿರಿಮೆ.        

     

Comments

Popular posts from this blog

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧

ಸಾಹಿತ್ಯಾಧಾರಗಳು - Literary Sources