ತುಘಲಕ್ ಸಂತತಿ: ಮಹಮದ್ ಬಿನ್ ತುಘಲಕ್‌ನ ಆಡಳಿತಾತ್ಮಕ ಪ್ರಯೋಗಗಳು
ಪೀಠಿಕೆ:
ಭಾರತದ ಇತಿಹಾಸದಲ್ಲಿ ಮಹಮದ್ ಬಿನ್ ತುಘಲಕ್ ಒಬ್ಬ ಅಪರೂಪದ ವ್ಯಕ್ತಿ. ಇವನು ಈ ಮನೆತನದ ಶ್ರೇಷ್ಠ
ಸುಲ್ತಾನ. ಅಲ್ಲಾವುದ್ದೀನ್ ಖಿಲ್ಜಿಯಂತೆ ಸಮರ್ಥ; ಆದರೆ ಅವನಂತೆ ಯಶಸ್ವಿ ಆಗಲಿಲ್ಲ. ಇವನ ಆಡಳಿತದ
ಸು. ೨೫ ವರ್ಷಗಳು ದಂಡಯಾತ್ರೆಗಳು, ದಂಗೆಗಳು ಮತ್ತು ಆಡಳಿತಾತ್ಮಕ ಸುಧಾರಣೆಗಳಿಂದ ಕೂಡಿದ್ದವು. ಇವನಲ್ಲಿದ್ದ
ವಿಶೇಷ ಗುಣಗಳ ಕಾರಣ ಹೊಗಳಿಕೆಗೆ ಪಾತ್ರನಾದರೆ ವಿಫಲ
ಯೋಜನೆಗಳ ಕಾರಣ ಚರಿತ್ರಕಾರರ ಟೀಕೆಗೆ ಗುರಿಯಾಗಿದ್ದಾನೆ. ಇವನ ಕಾಲದ ಗಟನೆಗಳ ಕುರಿತು ಇಬ್ನ ಬತೂತ
ಮತ್ತು ಜಿಯಾವುದ್ದೀನ್ ಬರೌನಿಯವರ ಬರಹಗಳಿಂದ ಮಾಹಿತಿ ಲಭ್ಯವಾಗುತ್ತದೆ.
ಬರೌನಿ ಇವನನ್ನು
ಕುರಿತು “ಪರಸ್ಪರ ವಿರುದ್ಧ ಗುಣಗಳ ಮಿಶ್ರಣದ ವ್ಯಕ್ತಿ” ಎಂದಿದ್ದಾನೆ. ಇಬ್ನ ಬತೂತನು “ಸಮಕಾಲೀನ ಯುಗದ
ಸೋಜಿಗದ ವ್ಯಕ್ತಿ!” ಎಂದಿದ್ದಾನೆ. ಇವನು ಬಹುಮುಖ ಪ್ರತಿಭೆಯ, ಪ್ರಚಂಡ ಬುದ್ಧಿಶಕ್ತಿ, ಸ್ಮರಣ ಶಕ್ತಿ,
ಪ್ರಚಂಡ ವೀರ, ಬಹುಭಾಷಾ ಪಂಡಿತ, ವಿಭಿನ್ನ ಆಸಕ್ತಿಗಳುಳ್ಳ ವ್ಯಕ್ತಿಯಾಗಿದ್ದ. ಅಲ್ಲದೇ ಅನೇಕ ದೌರ್ಬಲ್ಯಗಳಿಂದ
ಕೂಡಿದ್ದ. ಅವುಗಳೆಂದರೆ ಸಮಕಾಲೀನ ವ್ಯವಹಾರ ಜ್ಞಾನದ ಕೊರತೆ, ಕೋಪ, ಚಂಚಲಬುದ್ಧಿ, ಕ್ರೂರತನ ಮತ್ತು
ಮಾನಸಿಕ ಅಸಮತೋಲನಗಳು ಇವನ ವ್ಯಕ್ತಿತ್ವದ ಪ್ರಮುಖ ದೌರ್ಬಲ್ಯಗಳು. ಇವನ ಆಡಳಿತ ಕಾಲವು ವಿಜಯಗಳು, ಪ್ರಗತಿಪರ
ಯೋಜನೆಗಳು, ಅವುಗಳ ವಿಫಲತೆ ಮತ್ತು ಸಾಮ್ರಾಜ್ಯದಲ್ಲಿ ಎದ್ದ ವಿವಿಧ ದಂಗೆಗಳಿಂದ ಕೂಡಿತ್ತು.
ಆರಂಭಿಕ
ಜೀವನ ಮತ್ತು ಏಳಿಗೆ: ಸುಲ್ತಾನ ಘಿಯಾಸುದ್ದೀನ್ ತುಘಲಕನ ಹಿರಿಯ ಮಗನಾಗಿದ್ದನು. ಇವನ ಮೊದಲ ಹೆಸರು:- ಫಕ್ರುದ್ದೀನ್ ಮಹಮ್ಮದ್ ಜುನಾಖಾನ್. ಬಾಲ್ಯದಲ್ಲಿ ಖಗೋಳ, ಭೂಗೋಳ, ವೈದ್ಯ, ಗಣಿತ ಮತ್ತು ಜ್ಯೋತಿಷ್ಯದ
ವಿಷಯಗಳಲ್ಲಿ ಆಸಕ್ತಿ; ಅರಬ್ಬಿ, ಪರ್ಷಿಯಾ ಮತ್ತು ಸಂಸ್ಕೃತ ಭಾಷೆಗಳ ಕಲಿಕೆ. ಖಿಲ್ಜಿ ಸಂತತಿಯ ಕೊನೆಯ ಸುಲ್ತಾನನಾದ ನಾಸಿರುದ್ದೀನ್
ಖುಸ್ರು ಶಾನ ಕಾಲದಲ್ಲಿ ಸುಲ್ತಾನನ
ಕುದುರೆಗಳ ಮೇಲ್ವಿಚಾರಕನಾಗಿದ್ದನು. ಇವನ ತಂದೆ ಘಾಜಿ ಮಲಿಕ್ ನಡೆಸಿದ ನಾಸಿರುದ್ದೀನ್ ಖುಸ್ರೊ ಶಾನ ವಿರುದ್ಧದ ಕ್ರಾಂತಿಯಲ್ಲಿ
ಅವನಿಗೆ ಸಹಾಯಕನಾಗಿದ್ದನು.
ತುಘಲಕ್ ಸಂತತಿಯ ಸ್ಥಾಪನೆಯ ನಂತರ ತಂದೆಯ
ಆಡಳಿತ ಕಾಲದಲ್ಲಿ ವಾರಂಗಲ್ ಮತ್ತು
ಜಾಜನಗರಗಳ ಮೇಲೆ ಆಕ್ರಮಣ ಮತ್ತು
ವಿಜಯ; ೧೩೨೧-೨೩ ರ
ನಡುವೆ. ಅಲ್ಲಿಂದ ಅಪಾರ ಸಂಪತ್ತು ಲೂಟಿ; “ಉಲುಘ್ ಖಾನ್” ಎಂಬ ಬಿರುದು ದೊರೆಯಿತು! ಇವನ
ತಂದೆ ಇವನನ್ನು ಉತ್ತರಾಧಿಕಾರಿ ಎಂದು ಘೋಷಣೆ ಮಾಡಿದ್ದನು. ಸಾ.ಶ.ವ.
೧೩೨೫ ರಲ್ಲಿ ತಂದೆ ಬಂಗಾಳದ ಯುದ್ಧಕ್ಕೆ
ಹೋದಾಗ ರಾಜಧಾನಿಯ ಜವಾಬ್ದಾರಿಯನ್ನು ಇವನಿಗೆ ವಹಿಸಲಾಯಿತು.
ಬಂಗಾಳದಲ್ಲಿನ ವಿಜಯದ ನಂತರ ತಂದೆಯ ಸ್ವಾಗತಕ್ಕೆ
ದೆಹಲಿ ಹೊರವಲಯದ ಅಫ್ಘನ್ ಪುರದಲ್ಲಿ ಔತಣಕೂಟದ ಏರ್ಪಾಡು ಮಾಡಿದನು. ಆನೆಗಳ ನೂಕುನುಗ್ಗಲಿನಲ್ಲಿ ಮರದ ಮಂಟಪ ಕುಸಿದು
ತಂದೆ ಮತ್ತು ಸೋದರ ಮಹಮದ್ ಖಾನನ ಅನುಮಾನಾಸ್ಪದ ಸಾವು ಉಂಟಾಯಿತು. ತಂದೆಯ ಮರಣದ ಹಿಂದೆ ಇವನ
ಕುತಂತ್ರವಿತ್ತು ಎಂದು ಇತಿಹಾಸಕಾರರ ಅಭಿಪ್ರಾಯವಿದೆ.
ಇವನು ತನ್ನ ತಂದೆಯ ಮರಣದ ೪೦ ದಿನಗಳ
ನಂತರ ವೈಭವದ ಪಟ್ಟಾಭಿಷೇಕ ಮಾಡಿಕೊಂಡನು!
ಆಡಳಿತಾವಧಿಯ
ಪ್ರಮುಖ ಘಟನೆಗಳು: ಇವನ ಕಾಲದ ಆಡಳಿತದ ಪ್ರಮುಖ ಘಟನೆಗಳನ್ನು
ಎರಡು ವಿಭಾಗಗಳಲ್ಲಿ ಪರಿಶೀಲಿಸಬಹುದು. ಅವುಗಳೆಂದರೆ,
1.
ಆಡಳಿತಾತ್ಮಕ
ಸುಧಾರಣೆಗಳು (ಹೊಸ ಯೋಜನೆಗಳು) ಮತ್ತು
2. ದಿಗ್ವಿಜಯಗಳು ಮತ್ತು
ದಂಗೆಗಳ ದಮನ.
೧. ಆರಂಭಿಕ ಸಮಸ್ಯೆಗಳು ಮತ್ತು ಆಡಳಿತಾತ್ಮಕ ಸುಧಾರಣೆಗಳು: ಆರಂಭದಲ್ಲಿ ಗುಲ್ಬರ್ಗಾದ ಸಗರ ಪ್ರಾಂತ್ಯದಲ್ಲಿ ಎದ್ದ ತನ್ನ ಸಂಬಂಧಿಯೊಬ್ಬನ ದಂಗೆ ಮತ್ತು
ಮುಲ್ತಾನಗಳಲ್ಲಿ ಎದ್ದ ದಂಗೆಗಳನ್ನು ಅಡಗಿಸಿದನು.
ಮಂಗೋಲರು ಇವನ ಗಡಿಗಳ ಮೇಲೆ ದಾಳಿ ಮಾಡಿದಾಗ ಅವರಿಗೆ
ಹಣ ಕೊಟ್ಟು ವಾಪಸ್ಸು ಕಳುಹಿಸಿದನು. ಆರಂಭದ ಇಂತಹ ಸಮಸ್ಯೆಗಳ ಪರಿಹಾರದ
ನಂತರ ಆಂತರಿಕ ಸುಧಾರಣೆಗಳತ್ತ ಗಮನ ಹರಿಸಿದನು. ಇವನ
ಆಂತರಿಕ ಸುಧಾರಣೆಯ ಕ್ರಮಗಳು ಕೆಳಗಿನಂತಿವೆ:-
A. ಕಂದಾಯ
ಸುಧಾರಣೆಗಳು:
ರೈತರ ಅನುಕೂಲಕ್ಕಾಗಿ ಅನೇಕ ಕಂದಾಯ ಸುಧಾರಣೆಗಳನ್ನು
ಜಾರಿಗೆ ತಂದನು. ಕಂದಾಯ ಇಲಾಖೆಯ
ದೋಷಗಳನ್ನು ಸರಿಪಡಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ
ಆದೇಶಿಸಿದನು. ಎಲ್ಲಾ ಪ್ರಾಂತ್ಯಾಧಿಕಾರಿಗಳು
ತಮ್ಮ ಪ್ರಾಂತ್ಯಗಳ ಕಂದಾಯ ಆಡಳಿತದ ವಿವರವಾದ ದಾಖಲೆಗಳನ್ನು ಕೇಂದ್ರಕ್ಕೆ ಸಲ್ಲಿಸಲು ಆದೇಶ ನೀಡಿದನು. ಅವುಗಳ ಆಧಾರದ
ಮೇಲೆ ರಾಜ್ಯದಲ್ಲಿ ಏಕರೂಪದ ಭೂಕಂದಾಯ ವಿಧಿಸುವ ಉದ್ದೇಶವಿತ್ತು.
ದೊ-ಅಬ್ ಪ್ರಾಂತ್ಯದ
ತೆರಿಗೆ
ನೀತಿ:
ಗಂಗಾ-ಯಮುನಾ ನದಿಗಳ ನಡುವಣ ದೊ-ಅಬ್ ಪ್ರದೇಶದಲ್ಲಿ ತೆರಿಗೆ ಹೆಚ್ಚಿಸಿದನು.
ಈ ಭಾಗದ ಕೃಷಿಕರು ಶ್ರೀಮಂತಿಕೆಯ ಕಾರಣ ದಂಗೆ ಏಳುವ
ಸಂಭವವಿದ್ದುದರಿಂದ ತೆರಿಗೆ
ಹೆಚ್ಚಳ ಮಾಡಿದನು. ಸುಲ್ತಾನನ ಆರ್ಥಿಕ ಸ್ಥಿತಿ ಉತ್ತಮವಾಗಿರದ ಕಾರಣ ತೆರಿಗೆ ಹೆಚ್ಚಿಸಿದ
ಎಂದು ಮತ್ತುಂದು ಅಭಿಪ್ರಾಯವಿದೆ. ಶೇ. ೧೦ ರಿಂದ
೨೦ ರಷ್ಟು ತೆರಿಗೆ ಹೆಚ್ಚಳ; ಆಧುನಿಕ ವಿದ್ವಾಂಸರು ಶೇ. ೫ ರಿಂದ
೧೦ ರಷ್ಟು ಹೆಚ್ಚಿಸಿದ ಎಂದು ಅಭಿಪ್ರಾಯ. ತೆರಿಗೆ
ವಸೂಲಿಗೆ ಅಧಿಕಾರಿಗಳು ಕ್ರೂರವಾಗಿ ವರ್ತಿಸತೊಡಗಿದರು. ಅದೇವೇಳೆಗೆ ಪ್ರಾಂತ್ಯದಲ್ಲಿ ಬರಗಾಲ ಉಂಟಾಗಿ ಜನರು ತೆರಿಗೆ ಕೊಡಲು ಅಶಕ್ತರಾದರು. ಕಂದಾಯ ಅಧಿಕಾರಿಗಳ ಕಿರುಕುಳ ತಡೆಯಲಾರದೇ ದೊ-ಅಬ್ ಜನರು ವಲಸೆ ಹೋದರು. ಇದನ್ನು ತಡೆಯಲು ಆ ಭಾಗದ ರೈತರಿಗೆ ಸುಲ್ತಾನನಿಂದ
ಪರಿಹಾರ ಕ್ರಮಗಳು ಜಾರಿಗೊಂಡವು. ವಲಸೆ ಹೋದ ರೈತರಿಗೆ
ತಮ್ಮ ಮನೆಗಳಿಗೆ ಮರಳುವಂತೆ
ಆದೇಶ; ಕೃಷಿಸಾಲ, ಕೆರೆ-ಕಾಲುವೆಗಳ ನಿರ್ಮಾಣ
ಮಾಡಿಸಿದನು. ಆದರೆ
ಯೋಜನೆ ವಿಫಲ!!! ಏಕೆಂದರೆ, ಅಧಿಕಾರಿಗಳು ಭ್ರಷ್ಟರಾಗಿದ್ದರು. ಕೃಷಿಕರು ತಮಗೆ ನೀಡಿದ್ದ ಸಾಲದ ಹಣವನ್ನು ಬೇರೆ
ಕಾರ್ಯಗಳಿಗೆ ಉಪಯೋಗಿಸಿದರು. ಮತ್ತು ಪರಿಹಾರದ ಕ್ರಮಗಳು ಅಕಾಲಿಕವಾಗಿದ್ದವು. ಇದರಿಂದ ವಸೂಲಿ ಆಗುತ್ತಿದ್ದ ಸಾಮಾನ್ಯ ತೆರಿಗೆಯೂ ಬರದಂತಾಯಿತು.
B. ಕೃಷಿ
ಇಲಾಖೆಯ
ಸ್ಥಾಪನೆ:
೧೩೪೦-೪೨ ರ ನಡುವೆ
ಭೀಕರ ಬರಗಾಲದ ಕಾರಣ ಕೃಷಿ ಅಭಿವೃದ್ಧಿಗೆ
ಪ್ರತ್ಯೇಕ ವಿಭಾಗದ ಸ್ಥಾಪನೆ ಮಾಡಿದನು. ಇವನು ಆರಂಭಿಸಿದ ಇಲಾಖೆಯ ಹೆಸರು:- “ದಿವಾನ್ ಇ ಕೋಹಿ” ನೂತನ
ಯೋಜನೆಯಂತೆ ೬೦ ಚ.ಕಿ.ಮೀ
ರಷ್ಟು ಭೂಪ್ರದೇಶವನ್ನು ಕೃಷಿಗೆ ಒಳಪಡಿಸಲಾಯಿತು. ಸು. 70 ಲಕ್ಷ ಟಂಕ ಹಣ
ವ್ಯಯ. ಆದರೆ ಯೋಜನೆ ವಿಫಲವಾಯಿತು!
ಕೃಷಿಗೆ ಒಳಪಡಿಸಿದ ಭೂಮಿ ಫಲವತ್ತಾಗಿರಲಿಲ್ಲ; ಅಧಿಕಾರಿಗಳ
ಭ್ರಷ್ಟತೆ ಮತ್ತು ಹಣದ ದುರುಪಯೋಗ ಇವನ ಯೋಜನೆಯ ವಿಫಲತೆಗೆ ಕಾರಣಗಳು.
C. ರಾಜಧಾನಿಯ
ಬದಲಾವಣೆ:
೧೩೨೭-೩೩:
ದೆಹಲಿಯಿಂದ ದೇವಗಿರಿಗೆ.
ರಾಜಧಾನಿಯ ಬದಲಾವಣೆಗೆ ಕಾರಣಗಳು:- ವಿಶಾಲ ಸಾಮ್ರಾಜ್ಯವನ್ನು ಆಳಲು ದೆಹಲಿಯಿಂದ ಸಾಧ್ಯವಿರಲಿಲ್ಲ;
ಕಾರಣ ರಾಜಧಾನಿಯನ್ನು ಸಾಮ್ರಾಜ್ಯದ ಕೇಂದ್ರಭಾಗಕ್ಕೆ ಬದಲಾಯಿಸಲು ನಿರ್ಧಾರ ಕೈಗೊಂಡನು. ಮಂಗೋಲರ ನಿರಂತರ
ದಾಳಿಗಳಿಂದ ರಕ್ಷಣೆ ಪಡೆಯಲು ರಾಜಧಾನಿ ವರ್ಗಾವಣೆ ಮಾಡಿದನು. ದಕ್ಷಿಣ ಭಾರತದ ಮೇಲೆ ಉತ್ತಮ ನಿಯಂತ್ರಣ
ಸಾಧಿಸಲು ಅನುಕೂಲ ಮತ್ತು ದಂಗೆಗಳ ದಮನಕ್ಕಾಗಿ. ಉದ್ಧಟತನದಿಂದ ವರ್ತಿಸುತ್ತಿದ್ದ ದೆಹಲಿಯ ನಾಗರೀಕರನ್ನು
ಶಿಕ್ಷಿಸಲು ಈ ಕ್ರಮ ಕೈಗೊಂಡನು. ಇದು ಇಬ್ನ ಬತೂತನ ಅಭಿಪ್ರಾಯವಾಗಿದೆ. ರಾಜಧಾನಿಗೆ ಹತ್ತಿರವಿದ್ದ
ರಜಪೂತರ ದಾಳಿಗಳಿಂದ ರಾಜಧಾನಿ ರಕ್ಷಿಸಲು ಈ ಬದಲಾವಣೆ ಮಾಡಿದನು. ದಕ್ಷಿಣದಲ್ಲಿ ಇಸ್ಲಾಂ ಪ್ರಚಾರ ಮಾಡಲು
ಅನುಕೂಲವಾಗಲೆಂದು ಆಲೋಚಿಸಿದನು. ದೇವಗಿರಿಗೆ “ದೌಲತ್ತಾಬಾದ್” ಎಂಬ ಹೊಸ ಹೆಸರು ನೀಡಿದನು.
ರಾಜಧಾನಿಯ ವರ್ಗಾವಣೆಗೆ
ಕೈಗೊಂಡ
ಕ್ರಮಗಳು:
ದೆಹಲಿಯಿಂದ ದೇವಗಿರಿಗೆ ವಿಶಾಲವಾದ ರಸ್ತೆಯ ನಿರ್ಮಾಣ ಮಾಡಿಸಿದನು. ರಸ್ತೆಯುದ್ದಕ್ಕೂ ಪ್ರತಿ ೨ ಕಿ.ಮೀಗೆ
ಒಂದರಂತೆ ತಂಗುದಾಣಗಳ ಸ್ಥಾಪನೆ ಮಾಡಿಸಿದನು. ಉಚಿತ ಊಟ ಮತ್ತು
ಕುಡಿಯುವ ನೀರಿನ ವ್ಯವಸ್ಥೆ ಮಾಡಿಸಿದನು. ರಸ್ತೆಯ ಇಕ್ಕೆಲಗಳಲ್ಲಿ ನೆರಳಿಗಾಗಿ ಗಿಡಗಳನ್ನು ನೆಡಿಸಿದನು. ದೇವಗಿರಿಯಲ್ಲಿ ನಗರ ನಿರ್ಮಾಣ ಮಾಡಿ
ವಿವಿಧ ವಸತಿ ವಿಭಾಗಗಳನ್ನು ಕಟ್ಟಿಸಿದ.
ಸಕಲ ಸಿದ್ಧತೆಗಳ ನಂತರ ದೆಹಲಿಯ
ಎಲ್ಲಾ ನಾಗರೀಕರಿಗು ದೇವಗಿರಿಗೆ ಹೋಗುವಂತೆ ಆದೇಶಿಸಿದನು! ಮೊದಲು ಅವನ ರಾಜ ಪರಿವಾರ
ಹೊರಟಿತು. ನಂತರ ಅವನು ಇತರ
ರಾಜಪ್ರಮುಖರೊಂದಿಗೆ ಹೊರಟ. ವಿಪರ್ಯಾಸವೆಂದರೆ ಇವನ ಈ ಯೋಜನೆ
ಸಂಪೂರ್ಣ ವಿಫಲವಾಯಿತು.
ವಿಫಲತೆಗೆ ಕಾರಣಗಳು:
ದೆಹಲಿಯಿಂದ ದೇವಗಿರಿಗೆ ಇದ್ದ ದೂರ – ಸು.
೭೦೦ ಮೈಲಿಗಳು. ರಾಜಧಾನಿಯ ವರ್ಗಾವಣೆಯ ಕಲ್ಪನೆಯು ಪ್ರಜೆಗಳಿಗೆ ಹೊಸದಾಗಿತ್ತು. ದೆಹಲಿಯ ಎಲ್ಲಾ ನಾಗರೀಕರಿಗೂ ವರ್ಗಾವಣೆಯಾಗುವಂತೆ ಆದೇಶಿಸಿದ್ದು. ಇವನು ಕೈಗೊಂಡ ವರ್ಗಾವಣೆಯ ಕ್ರಮಗಳು ಸಾಲದಿದ್ದುದು. ದಾರಿಯಲ್ಲಿ ಅನೇಕ ಪ್ರಜೆಗಳು
ಸಾವಿಗೀಡಾದುದು. ಕೆಲವರು ದೆಹಲಿಗೆ ಹಿಂತಿರುಗಿದುದು.
ವರ್ಗಾವಣೆಯ ಪರಿಣಾಮಗಳು:
ಸು. ೧೭೦ ವರ್ಷಗಳಿಂದ ವೈಭವದಿಂದಿದ್ದ
ದೆಹಲಿ ನಿರ್ಜನವಾಯಿತು. ವ್ಯಾಪಾರ-ವಾಣಿಜ್ಯಗಳು ಹಾಳಾದವು. ದೆಹಲಿ ಮಂಗೋಲರ ದಾಳಿಗೆ ತುತ್ತಾಯಿತು. ಪ್ರಜೆಗಳು ತಮ್ಮ ಪೂರ್ವಿಕರ ಆಸ್ತಿ-ಜಮೀನುಗಳನ್ನು ಬಿಟ್ಟು ಬಂದ ಕಾರಣ ದೇವಗಿರಿಯಲ್ಲಿ
ಇರದಾದರು. ತನ್ನ ತಪ್ಪಿನ ಅರಿವಾಗಿ, ಎಲ್ಲಾ ನಾಗರೀಕರೂ ಮರಳಿ ದೆಹಲಿಗೆ ವಾಪಾಸ್ಸು
ಹೋಗುವಂತೆ ಆದೇಶ ಮಾಡಿದನು! ಮರುಪ್ರಯಾಣದಲ್ಲಿ ಮತ್ತೆ ಅಪಾರ ಜನ-ಧನ ಹಾನಿ ಉಂಟಾಯಿತು. ದೆಹಲಿಯನ್ನು
ಪೂರ್ವಸ್ಥಿತಿಗೆ ತರಲು ಶ್ರೀಮಂತರು, ವ್ಯಾಪಾರಿಗಳು
ಮತ್ತು ವಿದ್ವಾಂಸರಿಗೆ ದೆಹಲಿಗೆ ಬಂದು ನೆಲೆಸುವಂತೆ ಆದೇಶ
ಮಾಡಿದನು. ಇದರಿಂದ ದೆಹಲಿ
ತನ್ನ ಹಿಂದಿನ ವೈಭವವನ್ನು ಮರಳಿ ಪಡೆಯಲು ಅನೇಕ
ವರ್ಷಗಳೇ ಬೇಕಾದವು.
D. ಸಾಂಕೇತಿಕ
ನಾಣ್ಯ ಚಲಾವಣೆ: 1329-33.
TOKEN CURRENCY SYSTEM: ಮೊದಲು
೨೦೦ ಗ್ರೇನ್ ತೂಕದ ಚಿನ್ನದ “ದಿನಾರ”
ಮತ್ತು ೧೪೦ ಗ್ರೇನ್ ತೂಕದ
ಬೆಳ್ಳಿಯ “ಅದಾಲಿ” ಎಂಬ ನಾಣ್ಯಗಳನ್ನು ಜಾರಿಗೊಳಿಸಿದನು.
ಆದರೆ, ತನ್ನ ನೂತನ ಯೋಜನೆಗಳ
ವೈಫಲ್ಯತೆ, ಮಂಗೋಲರ ಖರೀದಿ, ಉದಾರ ದಾನ ಮತ್ತು
ತೆರಿಗೆ ಪದ್ಧತಿಗಳ ವೈಫಲ್ಯದ ಕಾರಣ ಖಜಾನೆ ಖಾಲಿ
ಆಗತೊಡಗಿತು. ಹೊಸ ನಾಣ್ಯಗಳ ತಯಾರಿಕೆಗೆ ಚಿನ್ನ-ಬೆಳ್ಳಿಯ ಕೊರತೆ ಇತ್ತು. ಕಾರಣ, ಖಾಲಿ ಖಜಾನೆ ತುಂಬಲು ಹೊಸ ನಾಣ್ಯ ಪದ್ಧತಿಯ
ಜಾರಿಗೆ ಆಲೋಚಿಸಿದನು.
ಕೈಗೊಂಡ ಕ್ರಮಗಳು:
ಚಿನ್ನ ಮತ್ತು ಬೆಳ್ಳಿಯ ನಾಣ್ಯಗಳಿಗೆ ಬದಲು ತಾಮ್ರದ ಸಾಂಕೇತಿಕ
ನಾಣ್ಯಗಳನ್ನು ಜಾರಿಗೆ ತಂದನು. ಹಿಂದಿನ ಚಿನ್ನ ಮತ್ತು ಬೆಳ್ಳಿ ನಾಣ್ಯಗಳಿಗೆ
ಬದಲು ನೂತನ ನಾಣ್ಯಗಳನ್ನೇ
ಅವುಗಳಿಗೆ ಸಮವೆಂದು ಭಾವಿಸಿ ಎಲ್ಲಾ
ವ್ಯವಹಾರಗಳಿಗೂ ಬಳಸುವಂತೆ ಆದೇಶ ಮಾಡಿದನು. ನೂತನ ನಾಣ್ಯ ಟಂಕಿಸಲು
ಖಾಸಗಿಯವರಿಗೆ ಅನುಮತಿ ನೀಡಿದನು.
ಪರಿಣಾಮಗಳು: ಪ್ರಜೆಗಳು ಚಿನ್ನ-ಬೆಳ್ಳಿಯ ನಾಣ್ಯಗಳನ್ನು ಬಚ್ಚಿಟ್ಟರು. ಸರ್ಕಾರದ ಸಾಂಕೇತಿಕ ನಾಣ್ಯಗಳ ಚಲಾವಣೆ ಜೊತೆಗೆ ನಕಲಿ ನಾಣ್ಯಗಳ ಹಾವಳಿ
ಹೆಚ್ಚಾಯಿತು. ವ್ಯಾಪಾರಿಗಳು ವಸ್ತುಗಳ ಖರೀದಿಗೆ ಸಾಂಕೇತಿಕ ತಾಮ್ರದ ನಾಣ್ಯಗಳನ್ನೂ ಮತ್ತು ತಮ್ಮಲ್ಲಿನ ವಸ್ತುಗಳ ಮಾರಾಟಕ್ಕೆ ಚಿನ್ನ-ಬೆಳ್ಳಿಯ ನಾಣ್ಯಗಳನ್ನು ಬಳಸತೊಡಗಿದರು. ಇದರಿಂದ ವ್ಯಾಪಾರ ಚಟುವಟಿಕೆಗಳು ಕುಂಠಿತವಾಯಿತು. ನಕಲಿ ತಾಮ್ರದ ನಾಣ್ಯಗಳ ಹರಿವು ಹೆಚ್ಚಾದ ಕಾರಣ ಅಸಲಿ ನಾಣ್ಯಗಳ ಬೆಲೆ ಕುಸಿದು ಹೋಯಿತು.
ಅವುಗಳು ಮಡಕೆ ಚೂರು ಮತ್ತು ಕಲ್ಲುಗಳಿಗಿಂತ
ಬೆಲೆ ಕಳೆದುಕೊಂಡವು. ಕಾರಣ ಸುಲ್ತಾನನು ಸಾಂಕೇತಿಕ
ನಾಣ್ಯ ಪದ್ಧತಿಯನ್ನು ರದ್ದುಪಡಿಸಿದನು. ಪ್ರಜೆಗಳು ತಮ್ಮಲ್ಲಿರುವ ಸಾಂಕೇತಿಕ ತಾಮ್ರದ ನಾಣ್ಯಗಳನ್ನು ಖಜಾನೆಗೆ ಹಿಂತಿರುಗಿಸಿ ಬದಲಿಗೆ ಚಿನ್ನ-ಬೆಳ್ಳಿಯ ನಾಣ್ಯಗಳನ್ನು ಪಡೆಯಲು ಆದೇಶನೀಡಿದನು. ಆಗ ಬುದ್ಧಿವಂತರಾದ ಪ್ರಜೆಗಳು ತಮ್ಮಲ್ಲಿದ್ದ ಅಪಾರ
ನಕಲಿ ತಾಮ್ರದ ನಾಣ್ಯಗಳನ್ನು ಚಿನ್ನ-ಬೆಳ್ಳಿಯ ನಾಣ್ಯಗಳೊಂದಿಗೆ ವಿನಿಮಯ ಮಾಡಿಕೊಂಡರು. “ಬುದ್ಧಿವಂತ ಪ್ರಜೆಗಳು!” ಪರಿಣಾಮ, ಅವನ ಅರಮನೆಯ ಮುಂದೆ
ಬೆಟ್ಟದಷ್ಟು ತಾಮ್ರದ ನಕಲಿ ನಾಣ್ಯಗಳ ರಾಶಿ
ಬಿದ್ದಿತು.
ನಾಣ್ಯ ಪದ್ಧತಿಯ
ವಿಫಲತೆಗೆ
ಕಾರಣಗಳು:
ಖಾಸಗಿಯವರಿಗೆ ನಾಣ್ಯ ಟಂಕಿಸಲು ಅನುಮತಿ ನೀಡಿದ್ದು. ರಾಜಮುದ್ರೆಯ ಬದಲು ನಾಣ್ಯಗಳ ಮೇಲೆ
ಸಾಮಾನ್ಯ ಬರಹವಿದ್ದುದು. ಸಾಂಕೇತಿಕ ಮತ್ತು ಚಿನ್ನ-ಬೆಳ್ಳಿ ನಾಣ್ಯಗಳ ನಡುವೆ ವಿನಿಮಯ ದರ ನಿಗದಿ ಮಾಡದಿದ್ದುದು.
ನಕಲಿ ನಾಣ್ಯಗಳ ತಡೆಗೆ ಕ್ರಮ ಕೈಗೊಳ್ಳದಿದ್ದುದು.
E. ವಿಫಲ
ದಂಡಯಾತ್ರೆಯ
ಪ್ರಯತ್ನಗಳು:
ಮಧ್ಯ ಏಷ್ಯಾ ವನ್ನು ಗೆದ್ದು ಮಂಗೋಲರ ಹಾವಳಿಯನ್ನು ತಡೆಯಲು
ಮತ್ತು ಅಲ್ಲಿ ರಾಜಕೀಯ ಸಮತೋಲನ ಕಾಪಾಡಲು ೧೩೨೯
ರಲ್ಲಿ ಈ ಯೋಜನೆಯನ್ನು ರೂಪಿಸಿದನು. ಆ ಪ್ರದೇಶ ಗೆಲ್ಲಲು ಸು. ೩ ಲಕ್ಷ ೭೦ ಸಾವಿರ ಸೈನಿಕರ ನೇಮಕಾತಿ
ಮಾಡಿಕೊಂಡನು. ಅವರಿಗೆ ೧ ವರ್ಷದ ಸಂಬಳ ಮುಂಗಡ ಪಾವತಿ ಮಾಡಿದನು. ಆದರೆ, ದೂರದ ಮಧ್ಯ ಏಷ್ಯಾ ಗೆಲ್ಲುವುದು
ಮತ್ತು ಅದನ್ನು ಆಳುವುದು ಅಸಾಧ್ಯವೆಂದು ಅರಿತು ಯೋಜನೆಯನ್ನು ಒಂದು ವರ್ಷದ ನಂತರ ಸ್ಥಗಿತಗೊಳಿಸಿದನು.
ಇದರಿಂದ ಖಜಾನೆಗೆ ಅಪಾರ ಹಣದ ನಷ್ಟವಾಯಿತು.
ಚೀನಾ ಮೇಲೆ
ಆಕ್ರಮಣ ೧೩೩೩: ಹಿಮಾಲಯದ ಆಚೆಗಿನ ಪ್ರದೇಶಗಳ ಮೇಲೆ ಪ್ರಭುತ್ವ ಸಾಧಿಸಲು ಈ ಯೋಜನೆ ರೂಪಿಸಿ ಅದಕ್ಕಾಗಿ
ಬೃಹತ್ ಸೈನ್ಯ ರವಾನಿಸಿದನು. ಆದರೆ, ಕಾಂಗ್ರಾದ ಹಿಂದೂ ಅರಸನಿಂದ ಸೋತು ಸೈನ್ಯ ವಾಪಾಸ್ಸು ಮರಳಿತು.
ಹತ್ತು ಸಾವಿರದಲ್ಲಿ ಬೆರಳೆಣಿಕೆಯಷ್ಟು ಸೈನಿಕರು ಮಾತ್ರ ಜೀವಂತವಾಗಿ ರಾಜಧಾನಿಗೆ ಮರಳಿದರು.
F. ಮಂಗೋಲರೊಂದಿಗಿನ ನೀತಿ: ೧೩೨೯-೩೦: ಮಂಗೋಲರ ದಾಳಿಗಳನ್ನು
ತಡೆಯುವ ಬದಲು ಅವರಿಗೆ ಹಣ
ನೀಡಿ ತೃಪ್ತಿಪಡಿಸುವ ಯತ್ನ ಮಾಡಿದನು. ಪರಿಣಾಮ “ತರ್ಮಾಶಿರಿನ್” ನಾಯಕತ್ವದಲ್ಲಿ ಮಂಗೋಲರು ಇವನ ರಾಜ್ಯದ ಮೇಲೆ ಪದೇ-ಪದೇ ದಾಳಿ ಮಾಡತೊಡಗಿದರು. ಪ್ರತಿಸಲವೂ ಅವರನ್ನು
ತೃಪ್ತಿಪಡಿಸಲು ಅವರಿಗೆ ಹಣ
ನೀಡುತ್ತಿದ್ದ ಕಾರಣ ಖಜಾನೆ ಖಾಲಿ ಆಗತೊಡಗಿತು. ಇವನ ಈ ನೀತಿಯನ್ನು ಖಂಡಿಸಿ ಸಮಕಾಲೀನ ಬರಹಗಾರ
ಬರೋನಿ “ಮಂಗೋಲರಿಗೆ ಹಣ ನೀಡಿ
ಮನವೊಲಿಸುವ ಬದಲಿಗೆ ಬಲ್ಬನ್,
ಖಿಲ್ಜಿ ಮತ್ತು ತನ್ನ ತಂದೆಯಂತೆ ಯುದ್ಧ
ನೀತಿಯನ್ನು ಅನುಸರಿಸಿ ಮಂಗೋಲರನ್ನು ಎದುರಿಸಬಹುದಿತ್ತು” ಎಂದು ಅಭಿಪ್ರಾಯಪಟ್ಟಿದ್ದಾನೆ.
ಹೀಗೆ ಮಹಮದ್ ಬಿನ್ ತುಘಲಕ್‌ನು ತನ್ನ ವಿವೇಚನಾರಹಿತ
ಯೋಜನೆಗಳ ಕಾರಣ ಆಂತರಿಕ ಆಡಳಿತದಲ್ಲಿ ವಿಫಲನಾದನು ಮತ್ತು ತನ್ನ ಪ್ರಜೆಗಳನ್ನೂ ಅನೇಕ ಕಷ್ಟಗಳಿಗೆ ಈಡು
ಮಾಡಿದನು. ಅವನ ಮರಣದ ಕಾಲಕ್ಕೆ ಅವನಿಗೆ ಪ್ರಜೆಗಳಿಂದ ಬಿಡುಗಡೆ ದೊರೆತರೆ, ಇವನಿಂದ ಪ್ರಜೆಗಳಿಗೆ ದೊರೆಯಿತು
ಎಂಬ ಅಭಿಪ್ರಾಯವನ್ನು ಸಮಕಾಲೀನ ಬರಹಗಾರನೊಬ್ಬ ವ್ಯಕ್ತಪಡಿಸಿದ್ದಾನೆ!
Comments
Post a Comment