ಅಧ್ಯಾಯ-5: ಹೊಸ ಭೂಸುಧಾರಣೆಗಳು -ಮಹಲವಾರಿ ಮತ್ತು ರೈತವಾರಿ - Revenue Administration of the British.

ಕಂಪೆನಿಯ ಕಂದಾಯ ಆಡಳಿತ ಪದ್ಧತಿ

(ಜಮೀನುದಾರಿ-1793, ರೈತವಾರಿ-1820ಮತ್ತು ಮಹಲ್‌ವಾರಿ ಪದ್ಧತಿಗಳು - 1833)

ಹಿನ್ನೆಲೆ:- ಮೊಗಲರ ನಂತರದ ಅವಧಿಯಲ್ಲಿ ಜಮೀನುದಾರರು ಸಾಂಪ್ರದಾಯಿಕ ಕಂದಾಯ ವಸೂಲಿದಾರರಾಗಿದ್ದರು. 1765ರ ಅಲಹಾಬಾದ್‌ ಒಪ್ಪಂದದ ನಂತರ ಕಂಪೆನಿಗೆ ಬಂಗಾಳದ ದಿವಾನಿ ಹಕ್ಕು ಲಭಿಸಿದ ಮೇಲೆ ಹಿಂದಿನಂತೆ ಜಮೀನುದಾರರೇ ಅಲ್ಲಿನ ಕಂದಾಯ ವಸೂಲಿ ಮಾಡಿ ಕಂಪೆನಿಗೆ ಸಲ್ಲಿಸುತ್ತಿದ್ದರು. ಆದರೆ ಕಂದಾಯದ ಸೋರಿಕೆಯನ್ನು ತಡೆಗಟ್ಟಲು ಜಮೀನುದಾರರ ಮೇಲ್ವಿಚಾರಣೆಗಾಗಿ 1769 ರಲ್ಲಿ ಆಂಗ್ಲ ಕಂದಾಯ ನಿರೀಕ್ಷಕರ ನೇಮಕ ಮಾಡಲಾಯಿತು. ಮುಂದೆ 1772ರಲ್ಲಿ ಐದು ವರ್ಷಗಳ ಹರಾಜು ಪದ್ಧತಿ ಜಾರಿಗೆ ತರಲಾಯಿತು; 1777 ರಲ್ಲಿ ಅದನ್ನು ವಾರ್ಷಿಕ ಹರಾಜು ವ್ಯವಸ್ಥೆಯಾಗಿ ಬದಲಾವಣೆ ಮಾಡಲಾಯಿತು. ಈ ಪದ್ಧತಿಯಲ್ಲಿದ್ದ ದೋಷಗಳನ್ನು ಸರಿಪಡಿಸಲು ಬ್ರಿಟಿಷರು ಭಾರತದ ಬೇರೆ-ಬೇರೆ ಭಾಗಗಳಲ್ಲಿ ವಿಭಿನ್ನ ಕಂದಾಯ ವಸೂಲಿಯ ಪದ್ಧತಿಗಳನ್ನು ಜಾರಿಗೊಳಿಸಿದರು.

1. ಶಾಶ್ವತ ಭೂಕಂದಾಯ ಪದ್ಧತಿ:- ಹರಾಜು ಪದ್ಧತಿಯಲ್ಲಿನ ಅವ್ಯವಸ್ಥೆಗಳ ಕಾರಣ ಕ್ರಮಬದ್ಧವಾದ ಕಂದಾಯ ವಸೂಲಿಗಾಗಿ ಹೊಸ ಪದ್ಧತಿಯೊಂದನ್ನು ಜಾರಿಗೆ ತರಲು 1784 ರಲ್ಲಿ ಲಂಡನ್ನಿನಲ್ಲಿದ್ದ ಕಂಪೆನಿಯ ನಿರ್ದೇಶಕರ ಮಂಡಳಿಯು ಬಂಗಾಳದ ಗವರ್ನರ್‌ ಜನರಲ್‌ನಿಗೆ ಸೂಚನೆ ನೀಡಿತು. ಅದರಂತೆ ಅಂದಿಗೆ ಕಂಪೆನಿಯ ಕಂದಾಯ ಮಂಡಳಿಯ ಮುಖ್ಯಸ್ಥನಾಗಿದ್ದ ಸರ್.‌ ಜಾನ್‌ ಶೋರ್‌ ನೇತೃತ್ವದಲ್ಲಿ ಹೊಸ ಪದ್ಧತಿಯನ್ನು 1793 ರಲ್ಲಿ  ಜಾರಿಗೊಳಿಸಲಾಯಿತು. ಇದನ್ನು ಜಮೀನ್ದಾರಿ ಅಥವಾ ಖಾಯಂ ಗುತ್ತೇದಾರಿ ಅಥವಾ ಶಾಶ್ವತ ಭೂಕಂದಾಯ ಪದ್ಧತಿ ಎಂದು ಕರೆಯಲಾಗಿದೆ.

ಸ್ವರೂಪ: ಈ ಪದ್ಧತಿಯ ಸ್ವರೂಪ ಅಥವಾ ಲಕ್ಷಣಗಳು ಕೆಳಕಂಡಂತಿವೆ,

ಅ. ಜಮೀನುದಾರರಿಗೆ ಶಾಶ್ವತ ಭೂ ಒಡೆತನ ನೀಡಲಾಯಿತು.

ಆ. ಅವರೊಂದಿಗೆ ಕಂದಾಯ ವಸೂಲಿ ಮಾಡಿ ಕಂಪೆನಿಗೆ ಸಲ್ಲಿಸಲು ಹತ್ತು ವರ್ಷಗಳ ಒಪ್ಪಂದ ಮಾಡಿಕೊಳ್ಳಲಾಯಿತು.

ಇ. ಅವರಿಗೆ ವಹಿಸಿದ ಕೃಷಿ ಭೂಮಿಯನ್ನು ಮಾರುವ ಮತ್ತು ಪರಭಾರೆ ಮಾಡುವ ಅಧಿಕಾರ ನೀಡಲಾಯಿತು.

ಈ. ತಮಗೆ ವಹಿಸಿದ ಭೂಮಿಯಲ್ಲಿನ ಕಂದಾಯ ವಸೂಲಿಯ ಹಕ್ಕನ್ನು ಅವರಿಗೆ ನೀಡಲಾಯಿತು.

ಉ. ಮೊದಲ ವರ್ಷ ಅಂದರೆ 1793 ರಲ್ಲಿ ಇದ್ದ ತೆರಿಗೆಯನ್ನು ಸ್ಥಿರಗೊಳಿಸಲಾಯಿತು.

ಊ. ಪ್ರತಿವರ್ಷ ಕಂಪೆನಿಗೆ ನಿಗದಿತ ಪ್ರಮಾಣದ ಕಂದಾಯ ಸಲ್ಲಿಕೆಯ ಷರತ್ತು ವಿಧಿಸಲಾಯಿತು.

ಋ. ಉಳಿದ ಹಣವೆಲ್ಲಾ ಜಮೀನುದಾರರಿಗೆ. ಅಂದರೆ ಹೆಚ್ಚುವರಿ ಕಂದಾಯದ ಮೊತ್ತವೂ ಅವರದೇ ಆಗಿತ್ತು.

ಎ. ನಿಗದಿತ ಕಂದಾಯ ಸಲ್ಲಿಸದ ಜಮೀನುದಾರರ ಭೂ ಒಡೆತನ ರದ್ದುಗೊಳಿಸುವ ಹಕ್ಕು ಕಂಪೆನಿಗೆ ಇತ್ತು.

ಗುಣಗಳು:

ಅ. ಕಂಪೆನಿಗೆ ನಿಗದಿತ ಕಂದಾಯ ಸಲ್ಲಿಕೆ ಸಾಧ್ಯವಾಯಿತು.

ಆ. ಕಂಪೆನಿಗೆ ನಿಶ್ಚಿತ ಆದಾಯದ ಖಾತರಿ ದೊರೆಯಿತು.

ಇ. ಹರಾಜು ಪದ್ಧತಿಗಳಂತಹ ವಾರ್ಷಿಕ ಅನಾನುಕೂಲಗಳು ಮತ್ತು ಅವುಗಳ ವೆಚ್ಚಗಳಿಂದ ಕಂಪೆನಿ ಮುಕ್ತವಾಯಿತು.

ಈ. ಕಂದಾಯ ವಸೂಲಿಗೆ ಅಧಿಕಾರಿಗಳ ನೇಮಕಾತಿಯಿಂದ ಕಂಪೆನಿಗೆ ತಗುಲುತ್ತಿದ್ದ ವೆಚ್ಚ ಉಳಿತಾಯವಾಯಿತು.

ಉ. ಕೃಷಿ ಉತ್ಪಾದನೆಯಲ್ಲಿ ಹೆಚ್ಚಳವಾಯಿತು.

ಊ. ಕೃಷಿ ಭೂಮಿಯ ವಿಸ್ತರಣೆ ಆಯಿತು.

ಋ. ಕೃಷಿ ಆಧಾರಿತ ಕೈಗಾರಿಕೆಗಳ ಬೆಳವಣಿಗೆ ಸಾ್ಧ್ಯವಾಯಿತು.

ಎ. ಕಂಪೆನಿಯ ದಕ್ಷತೆ ಹೆಚ್ಚಿತು. ಕಂಪೆನಿಗೆ ನಿಷ್ಠರಾದ ಜಮೀನುದಾರರ ಬೆಂಬಲ ದೊರೆಯಿತು.

ದೋಷಗಳು:

ಅ. ರೈತರ ಹಿತ ಕಡೆಗಣಿಸಲಾಯಿತು.

ಆ. ಅವರು ಭೂಒಡೆತನ ಕಳೆದುಕೊಂಡರು.

ಇ. ಜಮೀನುದಾರರ ದಬ್ಬಾಳಿಕೆ ಹೆಚ್ಚಿತು.

ಈ. ಕಂಪೆನಿ ಹತ್ತು ವರ್ಷಗಳ ತನಕ ಕಂದಾಯ ಹೆಚ್ಚಿಸುವ ಹಕ್ಕು ಕಳೆದುಕೊಂಡಿತು.

ಉ. ಇತರೆ ಕ್ಷೇತ್ರಗಳ ಮೇಲೆ ತೆರಿಗೆ ಹೆಚ್ಚಳ ಮಾಡಲಾಯಿತು.

ಊ. ಜಮೀನುದಾರರ ಐಷಾರಾಮಿ ಜೀವನಕ್ಕೆ ದಾರಿ ಮಾಡಿಕೊಟ್ಟಿತು.

ಋ. ಮಧ್ಯವರ್ತಿಗಳ ಹಾವಳಿ ಆರಂಭವಾಯಿತು.

   ಈ ಪದ್ಧತಿಯನ್ನು 1955 ರಲ್ಲಿ West Bengal Land Acquisition Act ಜಾರಿಗೆ ತರುವ ಮೂಲಕ ರದ್ದುಗೊಳಿಸಲಾಯಿತು.

 

2. ರೈತವಾರಿ ಪದ್ಧತಿ:1820 ರಲ್ಲಿ ಜಾರಿಗೊಳಿಸಲಾಯಿತು. ಮೊದಲು ಮದ್ರಾಸ್‌ ನಂತರ ಬಾಂಬೆ ಪ್ರಾಂತ್ಯಗಳಲ್ಲಿ ಅಲ್ಲದೇ ಮರಾಠಾ ಪ್ರದೇಶಗಳಲ್ಲೂ ಅಳವಡಿಸಲಾಯಿತು. ಜಮೀನುದಾರಿ ಪದ್ಧತಿಯ ದೋಷಗಳ ಕಾರಣ ಮದ್ರಾಸ್‌ ಪ್ರಾಂತ್ಯದ ಅಂದಿನ ಗವರ್ನರ್‌ ಥಾಮಸ್‌ ಮನ್ರೊ ಮತ್ತು ಕಂದಾಯ ಅಧಿಕಾರಿ ಅಲೆಗ್ಸಾಂಡರ್‌ ರೀಡ್‌ ಕಟುಟೀಕೆ ಮಾಡಿದರು. ಅಲ್ಲದೇ ಜಮೀನ್ದಾರಿ ಪದ್ಧತಿಯ ಸಮಸ್ಯೆಗಳ ಅಧ್ಯಯನ ಮಾಡಿ ಅದರ ವರದಿಯನ್ನು ಬಂಗಾಳದ ಗವರ್ನರ್‌ ಜನರಲ್‌ನಿಗೆ ಸಲ್ಲಿಸಿದರು. ಅಂದಿನ ಬಂಗಾಳದ ಗವರ್ನರ್‌ ಜನರಲ್‌ ಆಗಿದ್ದ ಮಾರ್ಕ್ವೆಸ್‌  ಆಫ್ ಹೇಸ್ಟಿಂಗ್ಸ್‌ ಮದ್ರಾಸ್‌ ಪ್ರಾಂತ್ಯದಲ್ಲಿ ನೂತನ ರೈತವಾರಿ ಪದ್ಧತಿಯನ್ನು ಜಾರಿಗೆ ತರಲು ಅನುಮತಿಸಿದ. ರೈತ ಇದು ಅರಬ್ಬೀ ಪದ.

ಸ್ವರೂಪ:    ಈ ಪದ್ಧತಿಯ ಲಕ್ಷಣಗಳು ಕೆಳಕಂಡಂತಿವೆ:

ಅ. ರೈತ & ಸರ್ಕಾರದ ನಡುವೆ ನೇರ ಸಂಪರ್ಕ. ರೈತ ಮತ್ತು ಕಂದಾಯ ಅಧಿಕಾರಿಗಳ ನಡುವೆ ನೇರ ಸಂಪರ್ಕ ಏರ್ಪಟ್ಟಿತು.

ಆ. ಮಧ್ಯವರ್ತಿಗಳ ಹಾವಳಿ ಇರಲಿಲ್ಲ.

ಇ. ರೈತನಿಗೆ ಭೂ ಒಡೆತನ ಲಭಿಸಿತು.

ಈ. ಆರಂಭದಲ್ಲಿ ೩ ವರ್ಷಗಳ ಕರಾರು. ನಂತರ ೩೦ ವರ್ಷಗಳಿಗೆ ನವೀಕರಣ ಮಾಡಲಾಯಿತು.

ಉ. ಕೃಷಿ ವೆಚ್ಚ ಕಳೆದು ಒಟ್ಟು ಆದಾಯದಲ್ಲಿ ಅರ್ಧದಷ್ಟು ಭೂಕಂದಾಯವಾಗಿ ನಿಗದಿ ಮಾಡಲಾಯಿತು.

ಊ. ಕರಾರಿನ ಅವಧಿಯಲ್ಲಿ ಕಂದಾಯ ಹೆಚ್ಚಿಸಲು ಅಥವಾ ಭೂಒಡೆತನ ಹಿಂಪಡೆಯಲು ಅವಕಾಶವಿರಲಿಲ್ಲ.

ಋ. ಕಂದಾಯ ಪಾವತಿ ಮಾಡಿದ್ದಕ್ಕೆ ರಸೀದಿ ನೀಡುವ ಪದ್ಧತಿ ಜಾರಿಗೊಳಿಸಲಾಯಿತು.

ಎ. ಭೂ ಮಾಲಿಕತ್ವದ ಪಟ್ಟಾ ಪದ್ಧತಿ ಪರಿಚಯಿಸಲಾಯಿತು.

ಏ. ಜಮೀನು ಮಾರುವ ಅಥವಾ ಹಸ್ತಾಂತರಿಸುವ ಅಧಿಕಾರ ರೈತನಿಗೆ ನೀಡಲಾಯಿತು.

ಐ. ಸಾಗುವಳಿ ಭೂಮಿಯನ್ನು ಅಳತೆ ಮಾಡಿ ಫಲವತ್ತತೆ ಆಧಾರದಲ್ಲಿ ಖುಷ್ಕಿ, ತರಿ, ಬಾಗಾಯ್ತು ಮತ್ತು  ಬಂಜರುಎಂದು ವಿಭಜನೆ ಮಾಡಲಾಯಿತು.

ಗುಣಗಳು: ಅನುಕೂಲಗಳು ಅಥವಾ ಗುಣಗಳು ಕೆಳಕಂಡಂತಿವೆ, ಸರ್ಕಾರ ಮತ್ತು ರೈತರಿಬ್ಬರಿಗೂ ಅನುಕೂಲಕರ ಪದ್ಧತಿಯಿದು.

ಅ. ರೈತರು ಬಂಜರು ಭೂಮಿಯನ್ನೂ ಕೃಷಿಗೆ ಒಳಪಡಿಸಿದ ಕಾರಣ ಕೃಷಿಭೂಮಿ ಹೆಚ್ಚಿದಂತೆ ಕಂಪೆನಿಯ ಆದಾಯ ಹೆಚ್ಚತೊಡಗಿತು.

ಆ. ರೈತರು ಜಮೀನ್ದಾರರ ಕಪಿಮುಷ್ಠಿಯಿಂದ ಮುಕ್ತವಾದ ಕಾರಣ ಅವರ ಬೆಂಬಲ ಕಂಪೆನಿ ಆಡಳಿತಕ್ಕೆ ದೊರೆಯಿತು.

ಇ. ಕಂಪೆನಿಗೆ ಕೆಲವೇ ಜಮೀನ್ದಾರರ ಹಿತಾಸಕ್ತಿಗಿಂತ ಬಹುಸಂಖ್ಯಾತ ರೈತರ ಕ್ಷೇಮದಲ್ಲಿ ಕಂಪೆನಿಯ ಒಳಿತು ಎಂದು ಮನವರಿಕೆಯಾಯಿತು.

ಈ. ರೈತನಿಗೆ ಭೂಒಡೆತನ ಲಭಿಸಿದ ಕಾರಣ ಭವಿಷ್ಯದಲ್ಲಿ ಅವನು ಕೃಷಿ ಅಭಿವೃದ್ಧಿ ಮಾಡಲು ಅವಕಾಶವಾಯಿತು.

ಉ. ಕೃಷಿ ಉತ್ಪನ್ನಗಳ ಹೆಚ್ಚಳದ ಕಾರಣ ಕೃಷಿ ಆಧಾರಿತ ಕೈಗಾರಿಕೆಗಳ ಅಭಿವೃದ್ಧಿ ಸಾಧ್ಯವಾಯಿತು.

ಊ. ಕೃಷಿ ಮತ್ತು ಕೈಗಾರಿಕೆಗಳ ವೃದ್ಧಿಯ ಕಾರಣ ಕಂಪೆನಿಯ ಆದಾಯದಲ್ಲಿ ಹೆಚ್ಚಳವಾಯಿತು.

ಋ. ಕೃಷಿಭೂಮಿ ಹೆಚ್ಚಿದಂತೆ ಆಧಾಯ ಹೆಚ್ಚಾಗುತ್ತಿದ್ದ ಕಾರಣ ಅನಗತ್ಯ ತೆರಿಗೆಗಳ ಹೆಚ್ಚಳ ಇಲ್ಲವಾಯಿತು.

ಎ. ಭೂಮಿಯ ಅಂತಿಮ ಒಡೆತನ ಸರ್ಕಾರಕ್ಕೆ ಲಭಿಸಿದ ಕಾರಣ ಭೂಮಾಪನ ಪದ್ಧತಿ ಜಾರಿಗೆ ಬಂದಿತು.

ಏ. ಸಾಗುವಳಿ ಭೂಮಿಯ ವರ್ಗೀಕರಣ; ತರಿ, ಖುಷ್ಕಿ ಮತ್ತು ಬಾಗಾಯ್ತು. ಫಲವತ್ತತೆಗೆ ಅನುಸಾರ ಕಂದಾಯ ನಿಗದಿ.

ಏ. ಭೂದಾಖಲೆಗಳು ಸೃಷ್ಟಿಯಾದ ಕಾರಣ ಭೂ ಒಡೆತನದ ವಿವಾದಗಳು ಕಡಿಮೆಯಾದವು

ದೋಷ ಅಥವಾ ಅನಾನುಕೂಲಗಳು:

ಅ. ರೈತರ ಮೇಲಿನ ತೆರಿಗೆ ಅಧಿಕವಾಗಿತ್ತು. ನಂತರದಲ್ಲಿ ಬಂದ ಅಧಿಕಾರಿಗಳು ಕಂದಾಯ ಹೆಚ್ಚಳ ಮಾಡಿದಾಗ ರೈತರು ಮತ್ತಷ್ಟು ಕಷ್ಟಗಳಿಗೆ ಗುರಿಯಾದರು.

ಆ. ಪ್ರಕೃತಿ ವಿಕೋಪಗಳ ಕಾಲದಲ್ಲೂ ಕಂದಾಯ ವಸೂಲಿ ರೈತರಿಗೆ ಹೊರೆಯಾಗಿತ್ತು.

ಇ. ಕಂದಾಯ ನೀಡದ ರೈತರ ಜಮೀನು ಹರಾಜಾಗುತ್ತಿದ್ದ ಕಾರಣ ಭೂರಹಿತ ಕೃಷಿ ಕಾರ್ಮಿಕರು ಹೆಚ್ಚಾದರು.

ಈ. ಕಂದಾಯ ನೀಡಲು ರೈತರು ಸಾಲ ಮಾಡುತ್ತಿದ್ದ ಕಾರಣ ಗ್ರಾಮೀಣ ಋಣಭಾರ ಹೆಚ್ಚಾಯಿತು.

ಉ. ಅಧಿಕಾರಿಗಳು ರೈತರ ಶೋಷಕರಾದರು. ಕಂಪೆನಿ ತನಗೆ ಬೇಕಾದ ಬೆಳೆ ಬೆಳೆಯಲು ರೈತರ ಮೇಲೆ ಒತ್ತಡ ಹಾಕತೊಡಗಿತು.

ಋ. ಅಧಿಕ ಸಂಖ್ಯೆಯ ಜನರಿಗೆ ಭೂಒಡೆತನ ಲಬಿಸಿದ್ದರಿಂದ ಗ್ರಾಮಗಳಲ್ಲಿ ಸಾಮರಸ್ಯ ಇಲ್ಲವಾಯಿತು.

ಎ. ಕಂದಾಯ ಏಕಪಕ್ಷೀಯವಾಗಿ ಕಂಪೆನಿಯೇ ನಿರ್ಧರಿಸುತ್ತಿದ್ದ ಕಾರಣ ರೈತರ ಹಿತ ಕಡೆಗಣಿಸಲಾಗಿತ್ತು.

 

3. ಮಹಲ್‌ವಾರಿ ಪದ್ಧತಿ 1833: ವಿಲಿಯಂ ಬೆಂಟಿಂಕ್‌ ಆಡಳಿತಾವಧಿಯಲ್ಲಿ ಪರಿಚಯಿಸಲಾಯಿತು. ಸರ್.‌ ಜಾನ್‌ ಶೋರ್‌ ಕಾಲದಲ್ಲಿ (೧೭೯೩-೯೮) ಕಾಲಾವಧಿಯಲ್ಲಿ ಖಾಯಂ ಜಮೀನ್ದಾರಿ ಪದ್ಧತಿಯನ್ನು ಸಂಯುಕ್ತ ಪ್ರಾಂತ್ಯದಲ್ಲಿ (ಆಗ್ರಾ ಮತ್ತು ಅವಧ್‌ ಒಳಗೊಂಡಿತ್ತು) ಹಾಗೂ ದೆಹಲಿ ಮತ್ತು ಪಂಜಾಬ್‌ ಪ್ರಾಂತ್ಯಗಳಿಗೂ ವಿಸ್ತರಿಸಲಾಯಿತು. ಆದರೆ ಕಂದಾಯವನ್ನು ಅಲ್ಪಾವಧಿಗೆ  ನಿಗದಿ ಮಾಡಲಾಯಿತು ಮತ್ತು ಕಂದಾಯದ ಪ್ರಮಾಣವನ್ನು ಅಧಿಕಗೊಳಿಸಲಾಯಿತು. ಇದು ಅನೇಕ ಗೊಂದಲಗಳನ್ನು ಸೃಷ್ಠಿಸಿತು. ಕಾರಣ ಬೆಂಟಿಂಕ್‌ (1828-35) ಉತ್ತರಪ್ರದೇಶದಲ್ಲಿ ಪ್ರವಾಸ ಕೈಗೊಂಡು ಸಮಸ್ಯೆಗಳ ಅಧ್ಯಯನ ಮಾಡಿದನು. ಮುಂದೆ ಅವನ ಮಾರ್ಗದರ್ಶನದಲ್ಲಿ R.M. ಬರ್ಡ್‌ ಮತ್ತು ಜೇಮ್ಸ್‌ ಥಾಮ್ಸನ್‌ ಮಹಲ್‌ವಾರಿ ಪದ್ಧತಿಯನ್ನು ರೂಪಿಸಿದರು. ಈ ಪದ್ಧತಿಯನ್ನು ಮಹಲ್‌ವಾರಿ ಎಂದು ಕರೆಯಲಾಗಿದೆ.

   ಮಹಲ್‌ ಎಂದರೆ ಘಟಕ ಅಥವಾ ಗುಂಪು ಎಂದರ್ಥ. ಇದು ರೈತವಾರಿ ಮತ್ತು ಜಮೀನ್ದಾರಿ ಪದ್ಧತಿಗಳೆರಡರ ಲಕ್ಷಣಗಳನ್ನು ಹೊಂದಿತ್ತು.

ಲಕ್ಷಣಗಳು: ಇದರ ಸ್ವರೂಪ ಕೆಳಕಂಡಂತಿದೆ,

ಅ. ಗ್ರಾಮವನ್ನು ಒಂದು ಘಟಕ ಅಥವಾ ಎಸ್ಟೇಟ್‌ ಆಗಿ ಪರಿಗಣನೆ ಮಾಡಲಾಯಿತು.

ಆ. ಗ್ರಾಮ ಮುಖಂಡನಿಗೆ ಅದರ ಜವಾಬ್ದಾರಿ ವಹಿಸಲಾಯಿತು.

ಇ. ಆದರೆ ಭೂ ಒಡೆತನ ರೈತರಿಗೇ ನೀಡಲಾಗಿತ್ತು.

ಈ. ಸಾಮೂಹಿಕ ಕೃಷಿಯ ಹೊಣೆಗಾರಿಕೆ ಊರಿನ ಪಟೇಲ ಅಥವಾ ಲಂಭಾದಾರ್ ನೋಡಿಕೊಳ್ಳುತ್ತಿದ್ದ.

ಉ. ಕಂದಾಯ ಸಂಗ್ರಹಿಸುವುದು ಪಟ್ಟಾರಿಯ ಕಾರ್ಯ; ಇವನು ಕಂಪೆನಿಯ ನೌಕರನಾಗಿದ್ದನು.

ಊ. ಸರ್ಕಾರ ಮತ್ತು ಮುಖಂಡರ ನಡುವೆ ನೇರ ಸಂಪರ್ಕ ಏರ್ಪಟ್ಟಿತು.

ಋ. 30 ವರ್ಷಗಳ ಅವಧಿಗೆ ಕಂದಾಯ ನಿಗದಿ ಮಾಡಲಾಯಿತು.

ದೋಷಗಳು:

ಅ. ಇದು ಜಮೀನ್ದಾರಿ ಮತ್ತು ರೈತವಾರಿ ಪದ್ಧತಿಗಳೆರಡರ ಲಕ್ಷಣಗಳನ್ನೂ ಒಳಗೊಂಡಿತ್ತು

ಆ. ನಿಗದಿಗೊಳಿಸಿದ ಶೇ. 66 ರಷ್ಟು ಕಂದಾಯ ಅಧಿಕವಾಗಿತ್ತು.

ಇ.    ರೈತರಿಗೆ ನೈಜ ಭೂ ಒಡೆತನ ನೀಡಿ ಅವರ ಹಿತಾಸಕ್ತಿಗಳನ್ನು ಕಾಪಾಡಲಾಗಿದ್ದರೂ  ಮುಖಂಡನು ಕೃಷಿ ಕೈಗೊಳ್ಳದ ರೈತರ ಭೂಒಡೆತನ ರದ್ದುಗೊಳಿಸಬಹುದಾಗಿತ್ತು.

ಮುಂದೆ 1872 ರಲ್ಲಿ ಬಂಗಾಳದ ಗೇಣಿ ಕಾಯ್ದೆ ಜಾರಿಗೊಳಿಸಿ ರೈತರು ಗೇಣಿ ನೀಡುವವರೆಗೆ ಅವನ ಭೂ ಒಡೆತನವನ್ನು ರದ್ದುಗೊಳಿಸದಂತೆ ವ್ಯವಸ್ಥೆ ಮಾಡಲಾಯಿತು.

*****

Comments

Popular posts from this blog

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಸಾಹಿತ್ಯಾಧಾರಗಳು - Literary Sources