ಶಾತವಾಹನರು, ರಾಜಕೀಯ ಇತಿಹಾಸ, ಆಡಳಿತ ಪದ್ಧತಿ ಮತ್ತು ಅವರ ಸಾಂಸ್ಕೃತಿಕ ಕೊಡುಗೆಗಳು

ಶಾತವಾಹನರು.

   ಮೌರ್ಯರ ಪತನಾನಂತರ ದಕ್ಷಿಣ ಭಾರತದಲ್ಲಿ ಆಳ್ವಿಕೆ ನಡೆಸಿದ ಹಿರಿಯ ರಾಜ ಮನೆತನವೆಂದರೆ ಶಾತವಾಹನರು. ಇವರ ಇತಿಹಾಸದ ಪುನರ್‌ರಚನೆಗೆ ಮತ್ಸ್ಯ, ವಿಷ್ಣು & ಭಾಗವತ ಪುರಾಣಗಳಲ್ಲಿ ಆಧಾರಗಳು ಲಭ್ಯ. ಕಾರ್ಲೆ, ನಾಸಿಕ್‌ & ಕನ್ಹೇರಿಗಳಲ್ಲಿನ ಪ್ರಾಕೃತ ಶಾಸನಗಳು ಪುರಾಣಗಳಲ್ಲಿನ ಮಾಹಿತಿಗಳಿಗೆ  ಪೂರಕವಾಗಿವೆ. ಇವರ ಕಾಲದ ನಾಣ್ಯಗಳೂ ಸಹ ಇವರ ಇತಿಹಾಸದ ಪುನರ್‌ರಚನೆಗೆ ಮಾಹಿತಿ ಒದಗಿಸುತ್ತವೆ. ಇವರು ತಮ್ಮನ್ನು ದಕ್ಷಿಣಾಪಥದ ಒಡೆಯರು ಎಂದು ಸ್ವಯಂ ಉಲ್ಲೇಖಿಸಿಗೊಂಡಿದ್ದಾರೆ. ಇವರ ರಾಜ್ಯವು ಕೊಂಕಣದಿಂದ ಕೃಷ್ಣ ನದಿಯ ಮುಖಜಭೂಮಿಯವರೆಗೆ ಹರಡಿತ್ತು. ಚಿತ್ರದುರ್ಗ ಬಳಿಯ ಚಂದ್ರವಳ್ಲೀ ಇವರ ದಕ್ಷಿಣದ ಗಡಿಯಾಗಿತ್ತು. ಮತ್ಸ್ಯ ಪುರಾಣದಂತೆ ಈ ಮನೆತನದ 30 ಅರಸರು ಸು. 460 ವರ್ಷಗಳ ಕಾಲ ಆಳಿದ್ದಾರೆ. ಕೆಲವು ವಿದ್ವಾಂಸರು ಇವರ ಆಳ್ವಿಕೆ ಸಾ.ಶ.ಪೂ. 300 ರಲ್ಲಿ ಆರಂಭವಾಯಿತು ಎಂದು ತಿಳಿಸಿದ್ದರೆ, ಡಿ.ಸಿ ಸರ್ಕಾರರ್ರವರು ಇವರ ಆಳ್ವಿಕೆಯ ಆರಂಭದ ಕಾಲವು ಸು. ಸಾ.ಶ.ವ. 30 ರಲ್ಲಿ ಆಗಿರಬಹುದು ಎಂದು ವಾದಿಸಿದ್ದಾರೆ. ಅವರ ಪ್ರಕಾರ ವಿವಿಧ ಪುರಾಣಗಳು ತಿಳಿಸುವಂತೆ ಶಾತವಾಹನರಿಗಿಂತ ಮುನ್ನ ಆಳ್ವಿಕೆ ನಡೆಸಿದ ಮೌರ್ಯ, ಶೃಂಗ & ಕಣ್ವರ ಒಟ್ಟು ಆಳ್ವಿಕೆಯ ಕಾಲ ಸು. 294 ವರ್ಷಗಳು. ಮೌರ್ಯರ ಸ್ಥಾಪಕ ಚಂದ್ರಗುಪ್ತನ ಕಾಲವು ಸಾ.ಶ.ಪೂ. 324 ಆಗಿದ್ದು, ಅದರಲ್ಲಿ ಮೇಲಿನ ಒಟ್ಟು ಕಾಲವನ್ನು ಕಳೆದರೆ ಉಳಿಯುವ 30 ಶಾತವಾಹನರ ಆರಂಭಿಕ ಕಾಲವಾಗಿದೆ. ಕಣ್ವರ ಕೊನೆಯ ಅರಸನನ್ನು ಇವರ ಮೊದಲ ಅರಸು ಪದಚ್ಯುತಗೊಳಿಸಿದನೆಂಬ ಪೌರಾಣಿಕ ಮಾಹಿತಿ ಇದಕ್ಕೆ ಆಧಾರವಾಗಿದೆ.

ಮೂಲ:- ಬಳ್ಳಾರಿ ಮತ್ತು ಧಾರವಾಡ ಜಿಲ್ಲೆಗಳ ಪ್ರದೇಶವನ್ನು “ಶಾತವಾಹನಿಹಾರ” ಎಂದು ಕರೆದಿರುವ ಕಾರಣ ಇವರು ಕರ್ನಾಟಕದ ಮೂಲದವರೆಂಬುದು ಕೆಲವು ವಿದ್ವಾಂಸರ ವಾದ. ಡಿ.ಸಿ ಸರ್ಕಾರ್‌ ಮತ್ತು ಡಾ. ಭಂಡಾರ್ಕರ್‌ರವರು ಧಾನ್ಯಕಟಕ, ಪ್ರತಿಷ್ಠಾನ ಮತ್ತು ಕುಂತಳಗಳಲ್ಲಿ ಇವರ ಮೂರು ಶಾಖೆಗಳಿದ್ದ ಬಗ್ಗೆ ಮಾಃಇತಿ ನೀಡುತ್ತಾರೆ. ಶಕರ ಆಕ್ರಮಣದ ಕಾರಣ ಶಾತವಾಹನರು ಒಂದು ಶತಮಾನದ ಕಾಲ ನೇಪಥ್ಯಕ್ಕೆ ಸರಿದಿದ್ದರು.

ಸಿಮುಖ ಅಥವಾ ಶ್ರೀಮುಖ: ಸಾ.ಶ.ವ. 235-212. ಸ್ಥಾಪಕ. ಪೈಠಣ ಇವನ ರಾಜಧಾನಿ. ಆಂಧ್ರಭೃತ್ಯ ಅಂದರೆ ಆಂಧ್ರದ ಮೂಲದವನು ಎಂಬ ಮಾಹಿತಿ ಶಾಸನಗಳಲ್ಲಿ ಲಭ್ಯವಿದೆ. ಹೈದ್ರಾಬಾದಿನ ಕರೀಂನಗರ ಬಳಿ ಇವನ ನಾಣ್ಯಗಳು ಲಭ್ಯ.  ಕಾರಣ ಅದು ಅವರ ಆಡಳಿತದ ಆರಂಭಿಕ ಕೇಂದ್ರವಾಗಿರಬಹುದು. ಇವನು ಕಣ್ವರ ಕೊನೆಯ ಅರಸು ಸುಶರ್ಮನನ್ನು ಕೊಂದು ಸ್ವತಂತ್ರ ಆಡಳಿತ ಆರಂಬ ಮಾಡಿದನು. ನಾನಘಾಟ್‌ ಶಾಸನದಲ್ಲಿ ರಾಯ ಸಿಮುಖ, ಏಕ ಬ್ರಾಹ್ಮಣ, ನಾಸಿಕ್‌ ಶಾಸನದಲ್ಲಿ ಅದ್ವಿತೀಯ ಎಂಬ ಬಿರುದುಗಳು ಇವನಿಗಿದ್ದವು ಎಂದು ತಿಳಿದುಬರುತ್ತದೆ. ಇವನು ಪಲ್ಲವರು & ಕುಂತಳದ ಚುಟುಗಳೊಂದಿಗೆ ವೈವಾಹಿಕ ಸಂಬಂಧಗಳನ್ನು ಹೊಂದಿದ್ದನು. ಇವನು ಮಹಾರಾಷ್ಟ್ರ, ಮಾಳವ & ಮಧ್ಯಪ್ರದೇಶಗಳನ್ನು  ಗೆದ್ದನು. ಇವನು ವೈದಿಕ ಮತಾವಲಂಬಿ.  ಇವನ ನಂತರ ಇವನ ಸೋದರ ಕೃಷ್ಣ ಅಥವಾ ಕನ್ಹ ಆಳಿದನು.  

ಕನ್ಹ: ಸಾ.ಶ.ಪೂ. 212-185. ಇವನು ಬೌದ್ಧ ಧರ್ಮದ ಪೋಷಕನಾಗಿದ್ದನು. ಇವನು ನಾಸಿಕ್‌ ಬಳಿ ಗುಹಾಂತರ ದೇವಾಲಯಗಳ ನಿರ್ಮಾಣ ಮಾಡಿಸಿದ್ದಾನೆ.

1ನೆ ಶಾತಕರ್ಣಿ 194-128. ಇವನು ಸಿಮುಖನ ಮಗ. ಆರಂಭದ ಶಾತಕರ್ಣಿಗಳಲ್ಲಿ ಅತ್ಯಂತ ಪ್ರಬಲನಾಗಿದ್ದನು. ಇವನು ಮಹಾರಾಷ್ಟ್ರದ ಮಹಾರಥಿಗಳ ನಾಗನಿಕಳೊಂದಿಗೆ ವಿವಾಹವಾಗಿದ್ದನು. ಇವಳು ನಾನಘಾಟ್‌ ಶಾಸನ ಬರೆಯಿಸಿದ್ದಾಳೆ. ಇವನು ಮಾಳವ, ಮಹಾರಾಷ್ಟ್ರ, ಸೌರಾಷ್ಟ್ರದ ಪ್ರದೇಶಗಳನ್ನು ಗೆದ್ದು ರಾಜ್ಯವನ್ನು ವಿಂಧ್ಯದಿಂದ ಕೊಂಕಣದ ತನಕ ವಿಸ್ತರಿಸಿದ. ಇದರ ಸ್ಮರಣಾರ್ಥ ಅಶ್ವಮೇಧ & ರಾಜಸೂಯ ಯಾಗಗಳನ್ನು ಮಾಡಿದನೆಂದು ಮತ್ತು ಪ್ರತಾಪಶಾಲಿಯಾದ ಅರಸನೆಂದು ಹೇಳಲಾಗಿದೆ. ದಕ್ಷಿಣಾಪಥರಥಿ, ದಕ್ಷಿಣಾಪಥ ಸಾರ್ವಭೌಮ & ಅಪ್ರಹತಿಹತ ಎಂಬ ಬಿರುದುಗಳು ಇವನಿಗಿದ್ದವು. ಇವನ ಮರಣದ ಕಾಲಕ್ಕೆ ಮಕ್ಕಳು ಶತಶ್ರಿ & ವೇದಶ್ರಿ ಅಪ್ರಾಪ್ತರಾದ ಕಾರಣ ಪತ್ನಿ ನಾಗನಿಕಾಳ ಆಡಳಿತ ಏರ್ಪಟ್ಟಿತು.

2ನೆ ಶಾತಕರ್ಣಿ ಆಳಿದ ನಂತರ ಅನೇಕ ಅರಸರು ಆಳಿದ್ದಾರೆ. ಅವರ ಬಗ್ಗೆ ಐತಿಹಾಸಿಕ ಮಾಹಿತಿಗಳು ಅಲಭ್ಯ.

ಒಂದನೆ ಪುಲಮಾಯಿ ಸಾ.ಶ.ಪೂ. ಸಾ.ಶ.ಪೂ. 30-19. ಇವನು ಶಕ ಕ್ಷತ್ರಪರ ಮೇಲೆ ವಿಜಯ ಸಾಧಿಸಿದನು. ಅಲ್ಲದೇ ಕಣ್ವರ ಮೇಲೆ ವಿಜಯ ಸಾಧಿಸಿ ಮಗಧದ ಮೇಲೆ ಅಧಿಕಾರ ಸ್ಥಾಪಿಸಿದನು. ಇವನ ಮತ್ತು ಹಾಲನ ನಡುವಣ ಅನೇಕ ಅರಸರು ಆಳಿದ ಮಾಹಿತಿ ಪುರಾಣಗಳಲ್ಲಿ ಲಭ್ಯವಾದರೂ ಅವುಗಳಿಗೆ ಐತಿಹಾಸಿಕ ಆಧಾರಗಳು ಅಲಭ್ಯ.

ಹಾಲ ಶ.ವ. 20-24. ಇವನು ಈ ಮನೆತನದ 17ನೆ ದೊರೆ. ಸಾಹಿತಿ & ವಿದ್ವಾಂಸನಾಗಿದ್ದನು. ಪ್ರಾಕೃತ ಭಾಷೆಯಲ್ಲಿರುವ ಗಾಥಾಸಪ್ತಶತಿ & ಸಪ್ತಶೈ ಇವನ ಕೃತಿಗಳು. ಲೀಲಾವತಿ ಪರಿಣಯದ ಮಾಹಿತಿಯಂತೆ ಸಿಲೋನ್‌ ಗೆದ್ದು ಅಲ್ಲಿನ ರಾಜಕುಮಾರಿ ಲೀಲಾವತಿಯೊಂದಿಗೆ ವಿವಾಹವಾಗಿದ್ದನು. ಕವಿ ಗುಣಾಢ್ಯ ಇವನ ಸಮಕಾಲೀನ; ವಡ್ಡಕಥಾ ಅಥವಾ ಬೃಹತ್ಕಥಾ ಇವನ ಕೃತಿ. ಇದು ಪೈಶಾಚ ಭಾಷೆಯಲ್ಲಿದೆ. ಇವನ ನಂತರ ನಾಲ್ಕು ಅರಸರ ಆಡಳಿತ ನಡೆಯಿತು. ಈ ಕಾಲಕ್ಕೆ ಶಕರ ದಾಳಿಗಳು ನಡೆದ ಕಾರಣ ರಾಜಕೀಯ ನೇಪಥ್ಯ ಉಂಟಾಯಿತು.

ಗೌತಮಿಪುತ್ರ ಶಾತಕರ್ಣಿ: ಸಾ.ಶ.ವ. 106-130. ಇವನು ಈ ಮನೆತನದ 23ನೆ ಅರಸು. ತ್ರೈಸಮುದ್ರೋತೋಯ ಪೀತವಾಹನ ಅಂದರೆ ಮೂರು ಸಮುದ್ರಗಳ ನೀರನ್ನು ಕುಡಿದ ಕುದುರೆಯನ್ನು ವಾಹನವನ್ನಾಗಿ ಉಳ್ಳವನು ಎಂದರ್ಥ. ಶಕರ ನಹಪಾಣ & ಅವನ ಅಳಿಯ ಉಸವದತ್ತನನ್ನು ಸೋಲಿಸಿ ಅವನಿಂದ ಅನೇಕ ಪ್ರದೇಶಗಳನ್ನು ವಶಪಡಿಸಿಕೊಂಡನು. ಅದಕ್ಕಾಗಿ ಇವನಿಗೆ ಶಕಾರಿ ಎಂಬ ಬಿರುದು ಇದೆ. ಮಹಾರಾಷ್ಟ್ರ, ಕೊಂಕಣ, ಸೌರಾಷ್ಟ್ರಗಳನ್ನು ಗೆದ್ದನು. ಅಲ್ಲದೇ ವಿಂಧ್ಯದ ತಪ್ಪಲಿನ ಅನೇಕ ರಾಜ್ಯಗಳನ್ನು ಗೆದ್ದನು. ನಾಸಿಕ್‌ ಬಳಿಯಲ್ಲಿ ದೊರೆತಿರುವ  ಶಕರ ನಹಪಾಣನ ನಾಣ್ಯಗಳ ಮೇಲೆ ಶಕಾರಿ ಎಂಬ ತನ್ನ ಬಿರುದನ್ನು ಮರು ಮುದ್ರಣ ಮಾಡಿಸಿದ್ದಾನೆ. ಇವನು ವಂಶದ ಕೀರ್ತಿಯ ಮರುಸ್ಥಾಪಕನೆಂದು ಪುಲಮಾಯಿಯ ಶಾಸನದಿಂದ ಮಾಃಇತಿ ಲಭ್ಯವಾಗುತ್ತದೆ. ಸೌರಾಷ್ಟ್ರ, ಮಾಳವ, ಕೃಷ್ಣ ನದಿಯ ಕೊಳ್ಳದ ಪ್ರದೇಶಗಳು ಇವನ ಅಧೀನಕ್ಕೆ ಒಳಪಟ್ಟಿದ್ದವು. ಇವನು ಪೂರ್ವ-ಪಶ್ಚಿಮ ಸಮುದ್ರಗಳ ನಡುವಣ ಭೂಮಿಯ ಒಡೆಯ ಎನಿಸಿದ್ದನು. ಇವನಿಗೆ ಪಶ್ಚಿಮಪ್ರಭು, ವಿಂಧ್ಯ ಒಡೆಯ, ಪ್ರತಿಷ್ಠಾನ ಪ್ರಭು, ರಾಜರಾಜ, ಮಹಾರಾಜ & ಶಾತವಾಹನ ಕುಲಪ್ರತಿಷ್ಠಾಪಕ ಎಂಬ ಇತರ ಬಿರುದುಗಳಿದ್ದವು. ಇವನು ಪರಾಕ್ರಮಿ, ದಕ್ಷ ಆಡಳಿತಗಾರ, ಉತ್ತಮ ಪ್ರಜಾಪೋಷಕ & ಪರಧರ್ಮ ಸಹಿಷ್ಣುವಾಗಿದ್ದನು. ಅಲ್ಲದೇ ಕಲಾಪೋಷಕನೂ ಆಗಿದ್ದನು. ಕಾರ್ಲೆ, ನಾಸಿಕ್‌ & ಕನ್ಹೇರಿಗಳಲ್ಲಿ ಇವನ ಕಾಲದಲ್ಲಿ ನಿರ್ಮಾಣಗೊಂಡ ಅನೇಕ ಸ್ಮಾರಕಗಳಿವೆ. ಇವನ ತಾಯಿ ಗೌತಮಿ ಬಾಲಾಶ್ರಿ ಬರೆಯಿಸಿರುವ ನಾಸಿಕ್‌ ಶಾಸನವು ಇವನ ಪರಾಕ್ರಮ ಮತ್ತು ದಿಗ್ವಿಜಯಗಳ ಮಾಹಿತಿ ನೀಡುತ್ತದೆ.

ವಸಿಷ್ಠಿಪುತ್ರ ಪುಲಮಾಯಿ: ಸಾ.ಶ.ವ. 130-159. ಪೈಠಣ ಇವನ ರಾಜಧಾನಿ. ಇವನು ಕೃಷ್ಣ ಮುಖಜ ಭೂಮಿಯಲ್ಲಿ ರಾಜ್ಯ ವಿಸ್ತರಿಸಿದನು. ಇವನಿಗೆ ದಕ್ಷಿಣಾಪಥೇಶ್ವರನೆಂಬ ಬಿರುದು ಇತ್ತು. ಇವನು ಅಮರಾವತಿ ಸ್ಥೂಪದ ನಿರ್ಮಾತೃ. ಇವನು ನವನಗರವೆಂಬ ಹೊಸ ರಾಜಧಾನಿಯ ನಿರ್ಮಾಣ ಮಾಡಿಸಿದನು. ಗಿರ್‌ನಾರ್‌ ಶಾಸನದಂತೆ ಇವನು ಶಕರ ರುದ್ರದಮನನಿಂದ ಎರಡು ಬಾರಿ ಸೋತ ಮಾಹಿತಿ ಲಭ್ಯವಾಗುತ್ತದೆ. ಜೊತೆಗೆ ಅವನ ಮಗಳೊಂದಿಗೆ ವಿವಾಹವಾದನೆಂಬ ಮಾಹಿತಿ ಲಭ್ಯ.

ಇವನ ನಂತರ ಶಿವಶ್ರಿ ಶಾತಕರ್ಣಿ & ಕೆಲವು ಅರಸರು ಆಳಿದರು; ಆ ಕಾಲಕ್ಕೆ  ಶಕರ ದಾಳಿಗಳಿಂದ ಇವರ ರಾಜ್ಯ ತತ್ತರಿಸಿತ್ತು.

ಯಜ್ಞಶ್ರಿ ಶಾತಕರ್ಣಿ: ಶ.ವ. 174-203. ಇವನು ಈ ಮನೆತನದ ಕೊನೆಯ ಪ್ರಬಲ ಅರಸು. ಶಕರ ಮೇಲೆ ಇವನು ವಿಜಯ ಸಾಧಿಸಿದನು. ಇವನ ನಾಣ್ಯಗಳು ಗುಜರಾತ್‌, ಕಾಥೇವಾಡ, ಮಾಳವ, ಮಧ್ಯಪ್ರದೇಶ& ಆಂಧ್ರಗಳಲ್ಲಿ ದೊರೆತ ಕಾರಣ ಈ ಪ್ರದೇಶಗಳು ಇವನ ಆಳ್ವಿಕೆಗೆ ಒಳಪಟ್ಟಿದ್ದವು. ನಾಣ್ಯಗಳ ಮೇಲಿನ ಹಡಗು & ಮೀನಿನ ಚಿತ್ರಗಳ ಕಾರಣ ಸಮುದ್ರಗಳವರೆಗೆ ರಾಜ್ಯದ ಗಡಿಗಳು ವಿಸ್ತರಿಸಿದ್ದವು ಮತ್ತು ವಿದೇಶೀ ವ್ಯಾಪಾರ ವೃದ್ಧಿಸಿತ್ತು. ಇವನು ಬೌದ್ಧ ಧರ್ಮದ ಪೋಷಕನಾಗಿದ್ದನು. 

ಇವನ ನಂತರ ರಾಜ್ಯ ವಿಘಟನೆಗೊಂಡು ಪುಲೋಮ ಮತ್ತು ವಿಜಯಚಂದ್ರರೆಂಬ ಅರಸರ  ನಡುವೆ ಹಂಚಿಕೆಯಾಯಿತು. ಪುಲೋಮನ ನಂತರ ರುದ್ರಶ್ರಿ ಶಾತಕರ್ಣಿ ಆಳಿದನು. ಇವರ ಒಂದು ಶಾಕೆಯು ಕುಂತಳ ಅಥವಾ ಬನವಾಸಿಯಲ್ಲಿದ್ದು, ಹಾಲನು ಈ ಶಾಖೆಗೆ ಸೇರಿದವನೆಂದು ನಂಬಲಾಗಿದೆ. ಶಕರ ದಾಳಿಗಳು ಮತ್ತು ದಕ್ಷಿಣದಲ್ಲಿ ಕದಂಬರು, ಬಾಣರು, ಆಳೂಪರು, ಅಭೀರರು, ಇಕ್ಷ್ವಾಕುಗಳು ಮತ್ತು ಪಲ್ಲವರ ಏಳಿಗೆಯ ಕಾರಣ ಇವರ ರಾಜ್ಯ ಪತನದ ಹಾದಿ ಹಿಡಿಯಿತು. ಶಕರು ಬಹುಕಾಲ ದಕ್ಷಿಣಕ್ಕೆ ವಿಸ್ತರಿಸದಂತೆ ತಡೆದುದು ಈ ಮನೆತನದ ಹಿರಿಮೆಯಾಗಿದೆ.

ಸಾಂಸ್ಕೃತಿಕ ಕೊಡುಗೆಗಳು:

ಅ. ಆಡಳಿತ ಪದ್ಧತಿ: ಕೇಂದ್ರಾಡಳಿತ: ಶಾತವಾಹನರು ಮೌರ್ಯರ ಆಡಳಿತ ಪದ್ಧತಿ ಮುಂದುವರೆಸಿದರು. ಇವರು ಕೌಟಿಲ್ಯನ ಅರ್ಥಶಾಸ್ತ್ರದ ಆಧಾರದ ಮೇಲೆ ಆಡಳಿತ  ನಡೆಸುತ್ತಿದ್ದರು. ರಾಜನೇ ರಾಜ್ಯದ ಸರ್ವೋಚ್ಛ ಅಧಿಕಾರಿಯಾಗಿದ್ದನು. ಎಲ್ಲಾ ಅಧಿಕಾರಗಳೂ ಅವನಲ್ಲಿ ಕೇಂದ್ರೀಕೃತವಾಗಿದ್ದವು. ರಾಜನ ಅಧಿಕಾರವು ವಂಶಪಾರಂಪರ್ಯವಾಗಿತ್ತು. ಹಿರಿಯ ಮಗನಿಗೆ ಸಿಂಹಾಸನ ಲಭಿಸುತ್ತಿತ್ತು. ಆಡಳಿತ ತರಬೇತಿಗಾಗಿ ರಾಜಪುತ್ರರನ್ನು ಯುವರಾಜರಾಗಿ ನೇಮಕ ಮಾಡುತ್ತಿದ್ದರು & ಅವರಿಗೆ ಶಿಕ್ಷಣ ಕಡ್ಡಾಯವಾಗಿತ್ತು. ಇವರ ಕಾಲದಲ್ಲಿ ಕೆಲವು ಸಂದರ್ಭಗಳಲ್ಲಿ ರಾನಿಯರು ಆಳಿದ್ದಾರೆ. ಉದಾಹರಣೆಗೆ, ಒಂದನೇ ಶಾತಕರ್ಣಿಯ ಮಕ್ಕಳು ಶತಶ್ರಿ & ವೇದಶ್ರಿ ಅಪ್ರಾಪ್ತರಾದ ಕಾರಣ ನಾಗನಿಕ ರಾಜಪ್ರತಿನಿಧಿಯಾಗಿದ್ದಳು. ಗೌತಮಿ ಬಾಲಾಶ್ರಿಯು ಅನೇಕ ದೇವಾಲಯ ಮತ್ತು ಬೌದ್ಧ ಗುಹಾಲಯಗಳನ್ನು ನಿರ್ಮಿಸಿದ್ದಾಳೆ ಹಾಗೂ ನಾಸಿಕ್‌ ಶಾಸನವನ್ನು ಇವಳೆ ಬರೆಯಿಸಿದ್ದು. ಶಾತವಾಹನರ ಅರಸರು ನಿರಂಕುಶ ಪ್ರಭುಗಳಾಗಿರಲಿಲ್ಲ. ಅವರು ದರ್ಪಿಷ್ಠರಲ್ಲದೇ ಧರ್ಮನಿಷ್ಠರಾಗಿದ್ದರು. ಆಡಳಿತದಲ್ಲಿ ಧರ್ಮಶಾಸ್ತ್ರಗಳ ನಿಯಮಗಳನ್ನು ಅನುಸರಣೆ ಮಾಡುತ್ತಿದ್ದರು. ಆಡಳಿತದ ಸಹಾಯಕ್ಕೆ ಮಂತ್ರಿ ಪರಿಷತ್‌ ಇದ್ದು ಅದರೊಂದಿಗೆ ಸಮಾಲೋಚನೆ ನಡೆಸಿ ಆಡಳಿತ ನಡೆಸಲಾಗುತ್ತಿತ್ತು. ಇವರು ಮೌರ್ಯರಂತೆ ಅಗಾಧ ಸಂಖ್ಯೆಯ ಅಧಿಕಾರಿ ವರ್ಗವನ್ನು ಹೊಂದಿರಲಿಲ್ಲ.

ಮಂತ್ರಿಪರಿಷತ್ತಿನ ಮುಖ್ಯ ಅಧಿಕಾರಿಗಳೆಂದರೆ,

೧. ಅಮಾತ್ಯ: ಪ್ರಾಂತ್ಯಗಳ ರಾಜ್ಯಪಾಲ.

೨. ರಾಜಾಮಾತ್ಯ: ರಾಜನ ಆಪ್ತ ಸಲಹೆಗಾರ.

೩. ಮಹಾಮಾತೃ: ಮುಖ್ಯ ರಾಜಕಾರ್ಯಗಳ ನಿರ್ವಾಹಕ. ಭಿಕ್ಷುಗಳ ಮೇಲ್ವಿಚಾರಕ.

೪. ಭಂಡಗಾರಿಕ: ಸರಕು-ಸಾಮಗ್ರಿಗಳ ಮೇಲ್ವಿಚಾರಕ.

೫. ಹಿರಣ್ಯಕ: ಕೋಶಾಧ್ಯಕ್ಷ ಅಥವಾ ಖಜಾನೆ ಮುಖ್ಯಸ್ಥ. ಹಣಕಾಸು ವಿಭಾಗದ ಮುಖ್ಯಸ್ಥ.

೬. ಮಹಾಸೇನಾಪತಿ: ದಂಡನಾಯಕ, ಸೇನಾಡಳಿತದ ಮೇಲ್ವಿಚಾರಕ.

೭. ಮಹಾಸಂಧಿವಿಗ್ರಹಿಕ: ವಿದೇಶಾಂಗ ಕಾರ್ಯಗಳು. ರಾಯಭಾರದ ಕಾರ್ಯಗಳು.

೮. ಲೇಖಕ: ರಾಜನ ಆಜ್ಞೆಗಳ ಬರವಣಿಗೆದಾರ.

೯. ನಿಬಂಧಕಾರ: ಕಛೇರಿ ದಾಖಲೆಗಳ ವ್ಯವಸ್ಥಾಪಕ.

೧೦. ರಾಜುಕ: ನ್ಯಾಯಾಧೀಶ. ನ್ಯಾಯ ವಿತರಣೆ ಕಾರ್ಯಗಳು.

   ಇವರಲ್ಲದೇ ಪಾರುಪತ್ಯೆಗಾರ, ಅಕ್ಕಸಾಲಿಗ, ನಾಣ್ಯಮುದ್ರಕ, ದ್ವಾರಪಾಲಕ, ಗ್ರಂಥಪಾಲಕ, ಪ್ರತಿಹಾರ, ದ್ಯೂತಕ, ನಾಡಗೌಡ & ಊರಗೌಡ ಎಂಬ ಇತರೆ ಅಧಿಕಾರಿಗಳು ಇದ್ದರು. ನ್ಯಾಯಾಂಗ, ಶಿಕ್ಷಣ, ಕೃಷಿ, ರಕ್ಷಣೆ, ಕೈಗಾರಿಕೆ ಮತ್ತು ಹಣಕಾಸು ಹೀಗೆ ವಿವಿಧ ಕಾರ್ಯಗಳಿಗೆ ಪ್ರತ್ಯೇಕ ಇಲಾಖೆಗಳಿದ್ದವು.

ಆ. ಪ್ರಾಂತ್ಯಾಡಳಿತ:    ಆಡಳಿತದ ಅನುಕೂಲಕ್ಕಾಗಿ ರಾಜ್ಯವನ್ನು ಜನಪದ, ಅಹರ, ವಿಷಯ, ನಿಗಮ & ಗ್ರಾಮಗಳಾಗಿ ವಿಭಜನೆ ಮಾಡಿದ್ದರು. ಅಹರಗಳ ಮುಖ್ಯಸ್ಥನಾಗಿ ಅಮಾತ್ಯನು ಕಾರ್ಯ ನಿರ್ವಹಣೆ ಮಾಡುತ್ತಿದ್ದನು. ಶಾಸನಗಳಲ್ಲಿ ಸೋಪಾರ, ಗೋವರ್ಧನ ಮತ್ತು ಮಮಲ ಎಂಬ ಮೂರು ಅಹರಗಳ ಹೆಸರುಗಳು ಕಂಡುಬಂದಿವೆ. ಪಟ್ಟಣಗಳ ಆಡಳಿತಕ್ಕೆ ನಗರಸಭೆಗಳಿದ್ದವು. ಗ್ರಾಮಗಳ ಆಡಳಿತಕ್ಕೆ ಗ್ರಾಮಸಭೆಗಳಿದ್ದವು. ಗ್ರಾಮಿಣಿ ಗ್ರಾಮದ ಮುಖ್ಯಸ್ಥನಾಗಿದ್ದು ಇವನಿಗೆ ಕರಣಿಕ & ಲೆಕ್ಕಿಗ ಎಂಬ ಸಹಾಯಕರಿದ್ದರು.

   ಇವರ ಸಾಮಂತರನ್ನು ಭೋಜಕರು, ಮಹಾಬೋಜಕರು ಮತ್ತು ಮಹಾರಥಿಗಳೆಂದು ಕರೆಯಲಾಗುತ್ತಿತ್ತು. ಇವರಿಗೆ ನಾಣ್ಯ ಟಂಕಿಸುವ ಅಧಿಕಾರವಿತ್ತು.

ಇ. ಸೈನ್ಯ: ಚತುರಂಗ ಬಲ. ಒಂದು ಲಕ್ಷ ಪದಾತಿ, 20 ಸಾವಿರ ಅಶ್ವಪಡೆ, 1000 ಗಜಪಡೆ ಇತ್ತು. ನೌಕಾಪಡೆಯೂ ಇತ್ತು. ಹಳ್ಳಿಗಳ ಶಾಂತಿಪಾಲನೆಗೆ ಸೈನ್ಯವಿತ್ತು.

ಈ. ಸಾಮಾಜಿಕ ಸ್ಥಿತಿ-ಗತಿ: ವರ್ಣಾಶ್ರಮವಿದ್ದರೂ ಕಠಿಣವಾಗಿರಲಿಲ್ಲ. ಬಹುಪತ್ನಿತ್ವ, ವಿಧವಾ ವಿವಾಹ ಮತ್ತು ಅಂತರ್ಜಾತಿ ವಿವಾಹಗಳು ರೂಢಿಯಲ್ಲಿದ್ದವು. ವಿವಿಧ ವೃತ್ತಿನಿರತರು ಇದ್ದರು. ಪಿತೃಪ್ರಧಾನ ಮತ್ತು ಅವಿಭಕ್ತ ಕುಟುಂಬ ವ್ಯವಸ್ಥೆ ಇತ್ತು. ಕಸುಬು ಆಧಾರಿತ ಜಾತಿ ಪದ್ಧತಿ ರೂಢಿಗೆ ಬರತೊಡಗಿತು. ವೃತ್ತಿ ಮತ್ತು ಅಂತಸ್ತು ಆಧರಿಸಿ ಸಮಾಜದಲ್ಲಿ ನಾಲ್ಕು ವರ್ಗದ ಜನರಿದ್ದರು.

ಉ. ಸ್ತ್ರೀಯರ ಸ್ಥಾನ-ಮಾನಗಳು: ಸಮಾಜದಲ್ಲಿ ಅವರಿಗೆ ಗೌರವಾನ್ವಿತ ಸ್ಥಾನವಿತ್ತು. ಅವರು ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ಪುರುಷನೊಂದಿಗೆ ಸಹಭಾಗಿಗಳಾಗುತ್ತಿದ್ದರು. ಅವರಿಗೆ ಪೂರ್ಣ ಸ್ವಾತಂತ್ರ್ಯ ಮತ್ತು ಉನ್ನತ ಶಿಕ್ಷಣಕ್ಕೆ ಅವಕಾಶವಿತ್ತು. ರಾಣಿಯರು ಆಡಳಿತ ಮತ್ತು ದಾನದ ಕಾರ್ಯಗಳನ್ನು ನಿರ್ವಹಿಸುತ್ತಿದ್ದರು. ಅಂದಿನ ಸ್ತ್ರೀಯರಿಗೆ ಚಿತ್ರಕಲೆಯಲ್ಲಿ ಆಸಕ್ತಿಯಿತ್ತು. ಇವರದು ಮಾತೃಪ್ರಧಾನ ರಾಜವಂಶವಾಗಿತ್ತು.

ಊ. ಆರ್ಥಿಕ ಸ್ಥಿತಿ: ಇವರದು ಕೃಷಿಪ್ರಧಾನ ಸಮಾಜವಾಗಿತ್ತು. ಕೃಷಿ ಉತ್ಪನ್ನದ 1/6 ರಷ್ಟು ಭೂಕಂದಾಯ ರೂಪದಲ್ಲಿ ಪಡೆಯಲಾಗುತ್ತಿತ್ತು. ಬತ್ತ & ಗೋಧಿ ಪ್ರಮುಖ ಬೆಳೆಗಳಾಗಿದ್ದವು. ಭೂಮಿಗಳನ್ನು ದತ್ತಿ ನೀಡುವ ಪದ್ಧತಿ ರೂಢಿಯಲ್ಲಿತ್ತು. ವ್ಯವಸಾಯಾಧಾರಿತ ಕೈಗಾರಿಕೆಗಳು ಇದ್ದವು.

ಋ. ವ್ಯಾಪಾರ-ವಾಣಿಜ್ಯ: ಆಂತರಿಕ ಮತ್ತು ವಿದೇಶೀ ವ್ಯಾಪಾರಗಳು ನಡೆಯುತ್ತಿದ್ದವು. ಈ ಬಗ್ಗೆ ಗ್ರೀಕ್‌ ಅನಾಮಧೇಯನ ದಿ ಪೆರಿಪ್ಲಸ್‌ ಆಫ್‌ ದಿ ಎರಿಥ್ರಿಯನ್‌  ಸೀ ಎಂಬ ಕೃತಿಯಿಂದ ಮಾಹಿತಿ ಲಭ್ಯವಾಗುತ್ತದೆ. ವಸ್ತುಗಳ ಸಾಗಾಣಿಕೆಗೆ ಎತ್ತಿನ ಗಾಡಿಗಳ ಬಳಕೆ ಮಾಡಲಾಗುತ್ತಿತ್ತು. ವಸ್ತುಗಳನ್ನು ಸಾಗಿಸಲು ರಾಜಮಾರ್ಗಗಳಿದ್ದವು. ಅಂದು ಪರ್ಷಿಯ, ಗ್ರೀಸ್‌, ಆಫ್ರಿಕ ಮತ್ತು ಯೂರೋಪ್‌ ದೇಶಗಳೊಂದಿಗೆ ವಿದೇಶೀ ವ್ಯಾಪಾರ ನಡೆಯುತ್ತಿತ್ತು. ಇದಕ್ಕೆ ಸಾಕ್ಷಿಯಾಗಿ ರೋಮನ್‌ ನಾಣ್ಯಗಳು ಅಕ್ಕಿಹಾಲೂರು, ಬನವಾಸಿ ಮತ್ತು ಚಿತ್ರದುರ್ಗಗಳಲ್ಲಿ ಕಂಡುಬಂದಿವೆ. ಅಂದು ವಿದೇಶಗಳಲ್ಲಿ ಭಾರತದ ವಸ್ತುಗಳಿಗೆ ದುಪ್ಪಟ್ಟು ಬೆಲೆ ಸಿಗುತ್ತಿತ್ತು. ಆಗ್ನೇಯ ಏಷ್ಯಾ ರಾಷ್ಟ್ರಗಳಲ್ಲೂ ವ್ಯಾಪಾರ ಸಂಬಂಧಗಳಿದ್ದ ಕಾರಣ ಅಲ್ಲಿ ಭಾರತೀಯ ಪರಂಪರೆ ಪ್ರಸರಿಸಿತು. ಅಂದು ದಿನಾರ ಮತ್ತು ಸುವರ್ಣವೆಂಬ ಚಿನ್ನದ ನಾಣ್ಯಗಳು ಹಾಗೂ ಕುಶನ &ಕರ್ಶ್ಯಪಣ ಎಂಬ ಬೆಳ್ಳಿಯ ನಾಣ್ಯಗಳು ಮತ್ತು ದ್ರಮ್ಮ, ಪಣಗಣ್ಯ ಮತ್ತು ಗದ್ಯಾಣ ಎಂಬ ತಾಮ್ರ ಮತ್ತು ಸೀಸದ ನಾಣ್ಯಗಳಿದ್ದವು. 1 ಸುವರ್ಣ = 25 ಕರ್ಶ್ಯಪಣ. ವಿವಿಧ ಚಿತ್ರಗಳು ಅವುಗಳ ಮೇಲಿದ್ದವು.

ಎ. ಶ್ರೇಣಿಗಳು:       ವೃತ್ತಿನಿರತರು ಮತ್ತು ವ್ಯಾಪಾರಿಗಳ ಶ್ರೇಣಿಗಳು ಇದ್ದವು. ಇವುಗಳ ಮುಖ್ಯಸ್ಥನನ್ನು ಶ್ರೇಷ್ಠಿ ಎನ್ನಲಾಗುತ್ತಿತ್ತು. ಇವುಗಳ ಕಾರ್ಯಗಳಿಗೆ ನಿಗಮಸಭೆಗಳು ಎಂಬ ಕಛೇರಿಗಳಿದ್ದವು. ಅವರು ತಮ್ಮದೇ ಆದ ಕಾನೂನು ಅಥವಾ ಶ್ರೇಣಿಧರ್ಮವನ್ನು ಪಾಲಿಸುತ್ತಿದ್ದರು. ಶ್ರೇನಿಗಳಿಂದ ರಸ್ತೆಗಳ ನಿರ್ಮಾಣ, ನೀರಾವರಿ ಸೌಲಭ್ಯಗಳಂತಹ ಜನೋಪಕಾರಿ ಕಾರ್ಯಗಳು ನಡೆಯುತ್ತಿದ್ದವು. ಅವುಗಳು ಇಂದಿನ ಬ್ಯಾಂಕುಗಳಂತೆ ಕಾರ್ಯ ನಿರ್ವಹಿಸುತ್ತಿದ್ದವು. ಶ್ರೇಣಿಗಳು ವಾರ್ಷಿಕ ಬಡ್ಡಿ ಆಧಾರಿತ ಸಾಲ ನೀಡುತ್ತಿದ್ದವು. “ಅಂದಿನ ಶ್ರೇಣಿಗಳು ನಂಬಿಕೆಗೆ ಅರ್ಹವಾಗಿದ್ದು ದೀರ್ಘಕಾಲ ಅಸ್ತಿತ್ವದಲ್ಲಿದ್ದವು” ಎಂದು R.C ಮಜೂಮ್‌ದಾರ್ ಅವರು ಅಭಿಪ್ರಾಯಪಟ್ಟಿದ್ದಾರೆ.

ಏ. ಧಾರ್ಮಿಕ ನೀತಿ: ಶಾತವಾಹನ ಅರಸರು ವಿವಿಧ ಧರ್ಮಗಳಿಗೆ ಸಮಾನ ಪೋಷಣೆ ನೀಡುತ್ತಿದ್ದ ಕಾರಣ ಚತುಸ್ಸಮಯ ಸಮುದ್ಧರಣ ಎಂಬ ಬಿರುದಿಗೆ ಪಾತ್ರರಾಗಿದ್ದರು. ಆದರೆ ಇವರು ವೈದಿಕ ಮತಾವಲಂಬಿಗಳಾಗಿದ್ದರಿಂದ ವೈದಿಕ ಆಚರಣೆಗಳು ಇವರ ಕಾಲದಲ್ಲಿ ಪುನರಾರಂಬವಾದವು. ಹಬ್ಬ-ಹರಿದಿನಗಳಲ್ಲಿ ಪ್ರಾಣಿಬಲಿ ರೂಢಿಯಲ್ಲಿತ್ತು. ಅಂದಿಗೆ ಭಾಗವತ ಪಂಥ ಹೆಚ್ಚು ಜನಪ್ರೀಯತೆ ಪಡೆದಿತ್ತು. ಜೊತೆಗೆ ಮಾತೃದೇವತೆಯ ಆರಾಧನೆ ರೂಢಿಯಲ್ಲಿತ್ತು. ಅಂದು ಬೌದ್ದದರ್ಮ ಉತ್ತಮ ರಾಜಪೋಷಣೆಯೊಂದಿಗೆ ಉಚ್ರಾಯವಾಗಿತ್ತು.

ಐ. ಸಾಹಿತ್ಯ: ಇವರ ಕಾಲದಲ್ಲಿ ಸಂಸ್ಕೃತ ಮತ್ತು ಪ್ರಾಕೃತ ಭಾಷೆಯಲ್ಲಿ ಕೃತಿಗಳ ರಚನೆ ಆಗಿದೆ. ಪ್ರಾಕೃತ ಇವರ ಅಧಿಕೃತ ಭಾಷೆಯಾಗಿದ್ದು ಇವರ ಶಾಸನಗಳು ಅದೇ ಭಾಷೆಯಲ್ಲಿ ಬ್ರಾಹ್ಮಿ ಲಿಪಿಯಲ್ಲಿ ಬರೆಯಲ್ಪಟ್ಟಿವೆ. ದೊರೆ ಹಾಲನು ಸ್ವತಃ ಕವಿಯಾಗಿದ್ದನು. ಇವನು ಗಾಥಾಸಪ್ತಶತಿ & ಸಪ್ತಶೈ ಎಂಬ ಕೃತಿಗಳನ್ನು ಪ್ರಾಕೃತ ಭಾಷೆಯಲ್ಲಿ ರಚಿಸಿದ್ದಾನೆ. ಗಾಥಾಸಪ್ತಶತಿ 700 ಶೃಂಗಾರಪದ್ಯಗಳಿಂದ ಕೂಡಿದ ಬೃಹತ್‌ ಕೃತಿಯಾಗಿದ್ದು, ಇದರಲ್ಲಿ ಶಿವ, ಗಣೇಶ ಮೊದಲಾದ ದೇವತೆಗಳ ಆರಾಧನೆಯ ಶ್ಲೋಕಗಳಿವೆ. ಇವರ ಕಾಲದ ಇತರೆ ಕೃತಿಗಳು ಮತ್ತು ಅವುಗಳ ಕರ್ತೃಗಳ ಮಾಹಿತಿ ಕೆಳಕಂಂಡಂತಿದೆ:

   ಕುಂದಾಚಾರ್ಯ – ಪ್ರಕೃತಸಾರ, ರಾಯಸಾರ, ಸಮಯಸಾರ, ಪ್ರವಚನಸಾರ ಮತ್ತು ದ್ವಾದಶಾನುಪ್ರೇಕ್ಷ. ಗುಣಾಡ್ಯನ ವಡ್ಡಕಥಾ ಅಥವಾ ಬೃಹತ್‌ಕಥಾ ಪೈಶಾಚ ಭಾಷೆಯಲ್ಲಿದೆ. ನಾಗಾರ್ಜುನನ ಶತಸಹಸ್ರಿಕ & ಮಾಧ್ಯಮಿಕಸೂತ್ರಗಳು ಸಂಸ್ಕೃತದಲ್ಲಿವೆ. ಸರ್ವವರ್ಮನ ಕಾತಂತ್ರ ವ್ಯಾಕರಣವು ಪಾಣಿನಿಯ ಅಷ್ಟಾಧ್ಯಾಯಿಯ ಸರಳರೂಪದ ಕೃತಿಯಾಗಿದೆ. ಕಥಾಸರಿತ್ಸಾಗರ ಕ್ಷೇಮೇಂದ್ರನ ಕೃತಿಯಾಗಿದೆ.

ಒ. ಕಲೆ ಮತ್ತು ವಾಸ್ತು-ಶಿಲ್ಪ: ಇವರು ಉತ್ತಮ ಕಲಾಪೋಷಕರಾಗಿದ್ದರು. ದೇವಾಲಯ, ಗುಹಾಲಯ, ಸ್ತೂಪ, ಬಸದಿ ಮತ್ತು ಚೈತ್ಯಗಳನ್ನು ನಿರ್ಮಿಸಿದ್ದಾರೆ. ದಕ್ಷಿಣ ಭಾರತದಲ್ಲಿ ಬೌದ್ಧ ವಾಸ್ತು-ಶಿಲ್ಪಕ್ಕೆ ಪ್ರಥಮವಾಗಿ ಪೋಷಣೆ ನೀಡಿದವರು ಇವರೆ. ಕಾರ್ಲೆ, ನಾಸಿಕ್‌, ಕನ್ಹೇರಿ, ಅಮರಾವತಿ, ನಾಗಾರ್ಜುನಕೊಂಡ, ಭಟ್ಟಿಪ್ರೋಲು, ಘಂಟಸಾಲ, ಕೊಂಡಣ, ಅಜಂತ, ಪೈಠಣ, ಜಗ್ಗಯ್ಯಪೇಟೆ ಇನ್ನೂ ಮೊದಲಾದವು ಇವರ ಪ್ರಮುಖ ಕಲಾಪೋಷಣೆಯ ಕೇಂದ್ರಗಳಾಗಿವೆ. ಇವರು ಚೈತ್ಯ, ವಿಹಾರ ಮತ್ತು ಸ್ತೂಪಗಳೆಂಬ ಮೂರು ರೀತಿಯ ಬೌದ್ಧ ಕಟ್ಟಡಗಳನ್ನು ನಿರ್ಮಿಸಿದ್ದಾರೆ. ಅವುಗಳಲ್ಲಿ ಸುಂದರವಾದ ಜಾತಕಕತೆಗಳ ಕೆತ್ತನೆಗಳು, ಅಲಂಕಾರಿಕ ರಚನೆಗಳು ಮತ್ತು ಚಿತ್ರಕಲೆಗಳನ್ನು ಕಾಣಬಹುದಾಗಿದೆ. ಅಮರಾವತಿಯ ಸ್ತೂಪ  ಇವರ ಸ್ತೂಪಗಳಲ್ಲೆಲ್ಲಾ ಅತಿ ಪ್ರಸಿದ್ಧವಾಗಿದೆ. ಅಜಂತಾದ 9 ಮತ್ತು 10 ನೆ ಗುಹೆಗಳಲ್ಲಿ ಇವರ ಕಾಲದ ಬುದ್ಧನ ಚಿತ್ರಕಲೆಯ ರಚನೆಗಳನ್ನು ನೋಡಬಹುದು.

   ಹೀಗೆ ಶಾತವಾಹನರು ಕರ್ನಾಟಕದಲ್ಲಿ ಮೊದಲ ಐತಿಹಾಸಿಕ ರಾಜಮನೆತನವಾಗಿ ಆಳಿದ್ದಲ್ಲದೇ ಸಾಂಸ್ಕೃತಿಕವಾಗಿಯೂ ಸಹ ಅನೇಕ ಕೊಡುಗೆಗಳನ್ನು ನೀಡಿ ಇತಿಹಾಸದಲ್ಲಿ ತಮ್ಮ ಹೆಸರನ್ನು ಶಾಶ್ವತಗೊಳಿಸಿಕೊಂಡಿದ್ದಾರೆ. 

Comments

Popular posts from this blog

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಸಾಹಿತ್ಯಾಧಾರಗಳು - Literary Sources