ವಿಜಯನಗರ ಕಾಲದ ನೀರಾವರಿ ವ್ಯವಸ್ಥೆ
ಪೀಠಿಕೆ: ಸುಮಾರು ೨೫೦ ವರ್ಷಗಳಿಗೂ ಹೆಚ್ಚು ಕಾಲ ವೈಭವದಿಂದ ಮೆರೆದ ವಿಜಯನಗರ ರಾಜ್ಯವು ಅನೇಕ ವಿಶಿಷ್ಠ ವ್ಯವಸ್ಥೆಗಳನ್ನು ಹೊಂದಿದ್ದು, ಇಂದಿಗೂ ಅವು ಅಧ್ಯಯನ ಯೋಗ್ಯವಾಗಿವೆ. ಅಂತಹ ಅಂಶಗಳಲ್ಲಿ ಆ ಕಾಲದ ನೀರು ಸರಬರಾಜು ಮತ್ತು ನೀರಾವರಿ ವ್ಯವಸ್ಥೆಯು ಒಂದು. ಪ್ರಸ್ತುತ ಲೇಖನದಲ್ಲಿ ಈ ವಿಷಯದ ಬಗ್ಗೆ ಸಾದ್ಯವಾದಷ್ಟು ವಿವರಗಳನ್ನು ತಿಳಿಸುವ ಪ್ರಯತ್ನ ಮಾಡಲಾಗಿದೆ.
ರಾಜಧಾನಿ ವಿಜಯನಗರದ
ನೀರು ಪೂರೈಕೆಯ ವ್ಯವಸ್ಥೆಗಳು
ವಿಜಯನಗರವು
ಭಾರತದ ಮತ್ತು ಕರ್ನಾಟಕದ ಮಧ್ಯಕಾಲೀನ
ಇತಿಹಾಸದಲ್ಲಿ ತನ್ನದೇ ಆದ ಮಹತ್ವದ ಸ್ಥಾನವನ್ನು
ಹೊಂದಿದೆ. ಈ ಪಟ್ಟಣದ ಸಿರಿವಂತಿಕೆಯನ್ನು
ಕಂಡ ಅಂದಿನ ವಿದೇಶಿಯ ಪ್ರವಾಸಿಗರು ಇಲ್ಲಿನ ಅರಮನೆ, ಭವ್ಯ ದೇವಾಲಯಗಳು, ಮಹಾದ್ವಾರಗಳು,
ಉಪನಗರಗಳು, ಬಜಾರುಗಳು, ತೋಟ, ಹೊಲ, ಗದ್ದೆಗಳ
ವೈಭವವನ್ನು ಮುಕ್ತ ಕಂಠದಿಂದ ಹೊಗಳಿದ್ದಾರೆ.
೧೬ನೇ ಶತಮಾನದಲ್ಲಿ ಈ ಪಟ್ಟಣವು ರೋಮ್ನಷ್ಟು ಜನಸಂಖ್ಯೆಯನ್ನು ಹೊಂದಿತ್ತೆಂದು ವರ್ಣಿಸಿರುವುದನ್ನು ಅವರ ಸಾಹಿತ್ಯದಲ್ಲಿ ಕಾಣಬಹುದು.
ಅಪಾರ
ಜನಸಂಖ್ಯೆಯನ್ನು ಹೊಂದಿದ್ದ ಈ ಪ್ರಖ್ಯಾತ ರಾಜಧಾನಿಯಲ್ಲಿ
ನಾಗರೀಕ ವ್ಯವಸ್ಥೆ ಅದರಲ್ಲೂ ದಿನನಿತ್ಯದ ಬಳಕೆಗೆ ಮೂಲ ಆಧಾರವಾದ ನೀರಿನ
ಸರಬರಾಜು ವ್ಯವಸ್ಥೆಯ ಬಗೆಗೆ
ಕೈಗೊಂಡ ಕ್ರಮಗಳು ಅಧ್ಯಯನ ಯೋಗ್ಯವಾಗಿವೆ. ನಗರದ ನೀರು ಸರಬರಾಜು
ವ್ಯವಸ್ಥೆಯ ಬಗೆಗಿನ ಅನೇಕ ಮಾಹಿತಿಗಳು ಈಗಲೂ
ಕಂಡುಬರುತ್ತವೆ. ಅಳಿದುಳಿದಿರುವ ಈ ಕುರುಹುಗಳು ನೀರು
ಸರಬರಾಜು ವ್ಯವಸ್ಥೆಗೆ ಅಂದು ವಿಜಯನಗರದ ಆಡಳಿತಗಾರರು ನೀಡಿರುವ ಪ್ರಾಮುಖ್ಯತೆಯನ್ನು ಸ್ಪಷ್ಟವಾಗಿ ತಿಳಿಸುತ್ತವೆ. ಅಲ್ಲದೆ ಅವು ನೋಡುಗರ ಗಮನವನ್ನು ಈಗಲೂ ಸೆಳೆಯುತ್ತವೆ.
ಅಂದಿನ ನೀರು
ಸರಬರಾಜು ವ್ಯವಸ್ಥೆಯ ಸ್ಪಷ್ಟ ಕುರುಹುಗಳು ರಾಜ ಪ್ರಾಂಗಣದಲ್ಲಿ ಮಾತ್ರ
ವಿಶೇಷವಾಗಿ ಕಾಣಸಿಗುತ್ತವೆ. ಆದರೆ ನಗರದ ಇತರ
ಭಾಗಗಳಲ್ಲಿ ಕುರುಹುಗಳು ಹೆಚ್ಚಾಗಿ ದೊರೆತಿಲ್ಲ. ನಗರದ ಕೆಲವು ಮುಖ್ಯ
ಸ್ಥಳಗಳು ಹಾಗೂ ಉಪನಗರಗಳ ಕೆಲವು
ಆಯ್ದ ಪ್ರದೇಶಗಳಲ್ಲಿ ನೀರಿನ ಸರಬರಾಜು ವ್ಯವಸ್ಥೆ ಇರುವುದನ್ನು ಗುರುತಿಸಬಹುದಾಗಿದೆ.
ರಾಜಧಾನಿ ವಿಜಯನಗರ
ಪಟ್ಟಣದ ಪ್ರದೇಶ ಬಹು ವಿಶಾಲವಾದುದು. ಇಲ್ಲಿಗೆ
ಆರಂಭದಲ್ಲಿ ಸಮಗ್ರವಾಗಿ ನೀರು
ಸರಬರಾಜು ಮಾಡುವ ಕೇಂದ್ರ ಸರಬರಾಜು ವ್ಯವಸ್ಥೆಯಿರಲಿಲ್ಲ. ಉಪನಗರಗಳಲ್ಲಿರುವ ಬೃಹತ್ ದೇವಾಲಯ ಸಮುಚ್ಛಯದಲ್ಲಿರುವ ಕೊಳ, ಬಾವಿಗಳು ದೇವಾಲಯದ
ನೀರಿನ ಅವಶ್ಯಕತೆಯನ್ನು ಪೂರೈಸುತ್ತಿದ್ದವು. ನಂತರದ ಕಾಲದಲ್ಲಿ ನಿರ್ಮಾಣಗೊಂಡು, ಇಂದು ಉಳಿದುಕೊಂಡಿರುವ
ಕುರುಹುಗಳನ್ನು ಆಧರಿಸಿ
ಹೇಳುವುದಾದರೆ, ಈ ನೀರು ಸರಬರಾಜು
ವ್ಯವಸ್ಥೆ ವಿಜಯನಗರದ ರಾಜ ಮಹಾರಾಜರಿಗೆ ಅವರ
ಪರಿವಾರದವರಿಗೆ, ಮಂತ್ರಿ ಮಹೋದಯರಿಗೆ, ಅರಮನೆಗಳಿಗೆ ಅನುಕೂಲ ಕಲ್ಪಿಸಿತ್ತು. ಈ ಪ್ರದೇಶದಲ್ಲಿ ಮಳೆಯು
ಹೆಚ್ಚಾಗಿ ಬೀಳದಿರುವುದರಿಂದ ಬಿದ್ದ ಮಳೆಯ ನೀರನ್ನು ಸಂರಕ್ಷಿಸಿ ಇತರ ಮೂಲಗಳಿಂದ ದೊರಕುವ
ನೀರನ್ನು ವ್ಯವಸ್ಥಿತವಾಗಿ ಸಂಚಯಿಸಲು ಅನೇಕ ವಿಧಾನಗಳನ್ನು ಅನುಸರಿಸುತ್ತಿದ್ದರು.
(ಇಲ್ಲಿ ವರ್ಷಕ್ಕೆ ಸುಮಾರು ೫೧ ಸೆಂ.ಮೀ.ಮಳೆ ಬೀಳುತ್ತಿದ್ದು, ಬಿದ್ದ ಮಳೆ ನೀರಿನ ಶೇಖರಣೆ ಮುಖ್ಯವಾಗಿತ್ತು.)
ನೀರಾವರಿ
ವ್ಯವಸ್ಥೆಗೆ ಮತ್ತು ಸತತವಾದ ನೀರು ಪೂರೈಕೆಗೆ ದೊಡ್ಡ
ಮತ್ತು ಸಣ್ಣ ಕೆರೆಗಳನ್ನು ಕಟ್ಟಲಾಗಿತ್ತು.
ಇವುಗಳಲ್ಲಿ ಕೆಲವು ನೀರಿನ ಸೆಲೆಯ ಅಭಾವದಿಂದ ಬೇಸಿಗೆಯಲ್ಲಿ ಬತ್ತಿಹೋಗುತ್ತಿದ್ದವು. ಆದರೆ ಕೆಲವು ಕೊಳಗಳು
ನೀರನ್ನು ಹೊಂದಲು ಸರಿಯಾದ ನೀರಿನ ಅಂತರ್ಜಲದ ಮಟ್ಟ ಹಾಗೂ ಸೆಲೆಯ
ವ್ಯವಸ್ಥೆ ಹೊಂದಿದ್ದವು. ದೇವಾಲಯದ ಸಮುಚ್ಚಯಗಳಲ್ಲಿರುವ ಅದರಲ್ಲೂ ದೇವಾಲಯದ ರಥ ಬೀದಿಗಳಲ್ಲಿರುವ ಬಾವಿಗೆ
ನೀರನ್ನು ಸತತವಾಗಿ ಹರಿಸಲು ಒಂದು ಪ್ರತ್ಯೇಕವಾದ ವ್ಯವಸ್ಥೆ
ಇದ್ದಿತು. ಹಿರಿಯ ಕಾಲುವೆಯಿಂದ ಕೊಳವೆಗಳನ್ನು ಈ ಕೊಳಕ್ಕೆ ಜೋಡಿಸುವ
ಮೂಲಕ ನೀರು ಈ ಕೊಳಕ್ಕೆ
ಹರಿದು ವರ್ಷವಿಡಿ ಅಲ್ಲಿ ಲಭಿಸುವಂತೆ ಮಾಡಲಾಗಿತ್ತು. ಅದಲ್ಲದೆ ಕಾಲುವೆಗಳಿಗೆ ನೀರನ್ನು ನದಿಯಿಂದ ಪೂರೈಸಲಾಗುತ್ತಿತ್ತು. ಇದಕ್ಕೆ ಉತ್ತಮವಾದ ಉದಾಹರಣೆಯೆಂದರೆ ಕಮಲಾಪುರದ ಕೆರೆ ಮತ್ತು ಭೂಪತಿ
ಕೆರೆ.
ಹಿರಿಯ ಕಾಲುವೆ
ಹಿರಿಯ
ಕಾಲುವೆಯಿಂದ ಅಂದರೆ ಇಂದಿನ ತುರ್ತಾ ಕಾಲುವೆಯಿಂದ ಭೂಪತಿ ಕೆರೆಗೆ ನೀರು ಬರುತ್ತಿತ್ತು. ಭೂಪತಿ
ಕೆರೆಯು ಕೆಳಭಾಗಕ್ಕೆ ಬರುವುದರಿಂದ ನೀರು ಹರಿಯಲು ಅನುಕೂಲವಾಗಿತ್ತು.
ಇಲ್ಲಿಂದ ಮುಂದೆ ಈ ಕೆರೆಯ ನೀರನ್ನು
ತಿರುವೆಂಗಳನಾಥ (ಅಚ್ಯುತರಾಯ) ದೇವಾಲಯಕ್ಕೆ ಮತ್ತು ಆಸು-ಪಾಸಿನಲ್ಲಿ ಬರುವ ಕೆಲವು ಸ್ಥಳಗಳಿಗೂ
ಹರಿಸಲಾಗುತ್ತಿತ್ತು. ಹೀಗೆ ಸತತವಾದ ನೀರು
ಪೂರೈಕೆಯಿಂದ ದೇವಾಲಯದ ಬಜಾರಿನಲ್ಲಿರುವ ದೇವಾಲಯಗಳ ಕೊಳಗಳು ತುಂಬಿರುತ್ತಿದ್ದವು.
ಹಿರಿಯ
ಕಾಲುವೆಯಿಂದ ಭೂಪತಿಯ ಕೆರೆಯ ಮೂಲಕ ಹರಿದ ನೀರು
ತಿರುವೆಂಗಳನಾಥ ದೇವಾಲಯ ಸಮುಚ್ಚಯಕ್ಕೆ ಹರಿದು ಬರುವಾಗ ಸಣ್ಣ, ಸಣ್ಣ ಟಿಸಿಲುಗಳಾಗಿ ಸುತ್ತಣ
ಪ್ರದೇಶದ ಜನರಿಗೆ, ಪುರ ಪ್ರಮುಖರ ವಾಸ
ಸ್ಥಳಗಳಿಗೆ ನೀರಿನ ಸರಬರಾಜಾಗುತ್ತಿತ್ತು. ಈ ಪ್ರದೇಶದಲ್ಲಿ ವಾಸಿಸುತ್ತಿದ್ದ
ಗಣ್ಯ ವ್ಯಕ್ತಿಗಳಿಗೆ ಇದರ ಉಪಯೋಗ ಹೆಚ್ಚಾಗಿ
ದೊರಕಿರಬೇಕು. ಇದು ಅಲ್ಲಲ್ಲಿ ದೊರಕುವ
ಗಾರೆಯಿಂದ ನಿರ್ಮಿಸಿದ ಸಣ್ಣ ಕಾಲುವೆಗಳಿಂದ ತಿಳಿದುಬರುತ್ತದೆ.
ಈ ರೀತಿ ನಗರ ಪ್ರದೇಶದಲ್ಲಿ
ದೊರಕುತ್ತಿದ್ದ ನೀರು ಅಲ್ಲಿನ ಭೌಗೋಳಿಕ
ಅನುಕೂಲತೆಯ ಮೇಲೆ ಅವಲಂಬಿಸಿರುತ್ತಿತ್ತು. ಕಾರಣ ಸಣ್ಣ
ಕಾಲುವೆಗಳಲ್ಲಿ ನೀರಿನ ಹೆಚ್ಚಿನ ಒತ್ತಡವಿಲ್ಲದ್ದರಿಂದ ಎತ್ತರದ ಪ್ರದೇಶಗಳಿಗೆ ಅಥವಾ ಸಣ್ಣ ದಿಬ್ಬಗಳ
ಮೂಲಕ ಹರಿಯುವುದು ಸಾಧ್ಯವಾಗುತ್ತಿರಲಿಲ್ಲ. ಹಾಗೆಯೇ ಈ ವ್ಯವಸ್ಥೆ ಸಂಪೂರ್ಣವಾಗಿ
ಗುರುತ್ವಾಕರ್ಷಣದ ಮೇಲೆ ನಡೆಯುತ್ತಿದ್ದುದರಿಂದ ಸಮತಟ್ಟಾದ ಒಂದೇ
ಎತ್ತರದಲ್ಲಿ ಮಾತ್ರ ಹರಿಯಲು ಅನುಕೂಲವಿತ್ತು. ಹೀಗೆ ದೇವಾಲಯ ಸಮುಚ್ಚಯದಲ್ಲಿ
ಹರಿವ ನೀರು ದೇವಸ್ಥಾನ ಮತ್ತು
ಜನಗಳ ಅವಶ್ಯಕತೆಯನ್ನು ಪೂರೈಸುತ್ತಿತ್ತು. ಹಿರಿಯ ಕಾಲುವೆಯ ಮೇಲೆ ಇಕ್ಕಟ್ಟಾದ ಪ್ರದೇಶದಲ್ಲಿ
ಕಲ್ಲು ಹಾಸುಗಳನ್ನು ಕಾಲುವೆಯ ಮೇಲೆ ಹಾಸಿ ದೇವಾಲಯದ
ಕೆಲಭಾಗಗಳನ್ನು ನಿರ್ಮಿಸಿದ ನಿದರ್ಶನಗಳಿವೆ. ಇದರಿಂದಾಗಿ ದೇವಾಲಯದ ದೈನಂದಿನ ಅವಶ್ಯಕತೆಗಳನ್ನು ಪೂರೈಸಲು ಬೇಕಾಗುವ ಯತೇಚ್ಛ ನೀರಿನ ಪೂರೈಕೆಯಾಗುತ್ತಿತ್ತು. ನೀರು ದೊರಕುವಿಕೆಯಿಂದಾಗಿ ಹಿರಿಯ
ಕಾಲುವೆಯ ದಡದಲ್ಲಿ ಉದ್ದಕ್ಕೂ ಅಲ್ಲಲ್ಲಿ ದೇವಾಲಯಗಳು, ದೇವಾಲಯಗಳ ಸಣ್ಣ ಸಮುಚ್ಚಯಗಳನ್ನು ಕಾಣಬಹುದು.
ಬಾವಿಗಳು
ವಿಜಯನಗರದಲ್ಲಿ
ದೊಡ್ಡ, ಸಣ್ಣ ಬಾವಿಗಳು ಜನರ
ಅವಶ್ಯಕತೆಯನ್ನು ಪೂರೈಸುತ್ತಿದ್ದವು. ಕೆಲವು ಪ್ರದೇಶಗಳಲ್ಲಿ ಮನೆಗೊಂದರಂತೆ ಬಾವಿಯಿರುವುದನ್ನು ಕಾಣಬಹುದು. ದೊಡ್ಡ ಬಾವಿಗಳಿಂದ ನೀರನ್ನು ಮೇಲಕ್ಕೆತ್ತಿ ಸಣ್ಣ ಮಣ್ಣಿನ ಕೊಳವೆಗಳ
ಮೂಲಕ ಮಧ್ಯದ ಗಾತ್ರದ ಮೆಟ್ಟಿಲುಗಳಲ್ಲಿ ಶೇಖರಿಸಿ ಕೊಳವೆಗಳ ಮೂಲಕ ಗೊತ್ತಾದ ಸ್ಥಳಗಳಿಗೆ
ಸರಬರಾಜು ಮಾಡಿರುವುದು ಕಂಡುಬರುತ್ತದೆ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಮಾಲ್ಯವಂತ ದೇವಾಲಯದ ಉತ್ತರಕ್ಕಿರುವ ಪ್ರದೇಶ. ಇಲ್ಲಿ ಈ ವ್ಯವಸ್ಥೆಯ ಕುರುಹುಗಳಿವೆ.
ಬಾವಿಗಳು
ನೀರಾವರಿಗೆ ಉತ್ತಮವಾದ ಮೂಲವಾಗಿದ್ದವು. ಬಾವಿಯನ್ನು ಪೋಷಿಸುವುದು ಧರ್ಮದ ಕಾರ್ಯವೆಂದು ತಿಳಿದು ಅವುಗಳ ಪೋಷಣೆಯಲ್ಲಿ ರಾಜ ಮಹಾರಾಜರಾದಿಯಾಗಿ ಎಲ್ಲರೂ ಭಾಗಿಯಾಗಿರುವುದು ಶಾಸನಗಳು ಹಾಗೂ ಜನಪದ ಸಾಹಿತ್ಯದಿಂದ
ತಿಳಿದುಬರುತ್ತದೆ. ಅಹಮದ್‌ಖಾನ್ ಧರ್ಮಶಾಲೆಯ ಬಾವಿಯನ್ನು ತನ್ನ ಸ್ವಾಮಿ ಪ್ರೌಢದೇವರಾಯನಿಗೆ
ಒಳಿತಾಗಲೆಂದು ಕಟ್ಟಿಸಿದ ಬಗ್ಗೆ ಉಲ್ಲೇಖವಿದೆ. ಎರಡನೇ ಹರಿಹರನ ಕಾಲದಲ್ಲಿ ಒರತೆಯ ಕುಂಡ ಬಾವಿಯನ್ನು ಕಟ್ಟಿಸಿ
ಮೈಲಾರ ದೇವರನ್ನು ಪ್ರತಿಷ್ಠಾಪಿಸಿ ದಾರಿಯ ಪಕ್ಕ ಗಿಡ, ಮರಗಳನ್ನು
ನೆಡಿಸಿ ಬಾವಿಯ ನೀರನ್ನು ಭಕ್ತಾದಿಗಳು ಉಪಯೋಗಿಸುವಂತೆ ಮಾಡಿರುವುದು ಶಾಸನಗಳಿಂದ ತಿಳಿದುಬರುತ್ತದೆ. ಶ.ಪೂ. ೧೩೯೦ರ ಇನ್ನೊಂದು
ಶಾಸನದಲ್ಲಿ ಬಾವಿಯನ್ನು ತೋಡಿಸಿದ ಬಗ್ಗೆ ಉಲ್ಲೇಖಿಸಲಾಗಿದೆ. ಇದೇ ಕಾಲದ ಮತ್ತೊಂದು
ಶಾಸನದಲ್ಲಿ ಬಾವಿಯನ್ನು ತೋಡಿಸಿ ಅಶ್ವಥ್ಥ ಮರವನ್ನು ನೆಡಿಸಿದ ಬಗ್ಗೆ ತಿಳಿಸಲಾಗಿದೆ. ಪ್ರತಿಷ್ಠಿತ ವ್ಯಕ್ತಿಗಳು ಬಾವಿಗಳನ್ನು ತೋಡಿಸಿ ಜನರಿಗೆ ಅನುಕೂಲ ಮಾಡಿದ ಅಂಶಗಳನ್ನು ಶಾಸನಗಳಿಂದ ತಿಳಿಯಬಹುದಾಗಿದೆ. ಕೆಲವು ಬಾವಿಗಳನ್ನು ಭಕ್ತರ ಅನುಕೂಲಕ್ಕೆ ತೋಡಿಸಿದ್ದು, ಆ ಬಾವಿಗಳನ್ನು ಮೂಲದೇವರ
ಹೆಸರಿನೊಡನೆ ಸೇರಿಸಿರುವುದು ಕಂಡುಬರುತ್ತದೆ. ಉದಾ: ರಂಗನಾಥ ಬಾವಿ, ಲಿಂಗದ ಬಾವಿ. ಇಲ್ಲಿ ರಂಗನಾಥ ಹಾಗೂ ಲಿಂಗದ ಹೆಸರಿನೊಡನೆ
ಬಾವಿಯನ್ನು ಸೇರಿಸಿರುವುದನ್ನು ಗಮನಿಸಬಹುದಾಗಿದೆ.
ನಾಡ
ಬಾವಿಯಲ್ಲಿ ನೀರನ್ನು ತೆಗೆದುಕೊಳ್ಳಲು ತಾಂತ್ರಿಕ ಸಾಧನದ ಅವಶ್ಯಕತೆಯಿದ್ದು, ಚರ್ಮದ
ಚೀಲ ಅಥವಾ ಕಬ್ಬಿಣದ ದೊಡ್ಡ
ಪಾತ್ರೆಗಳ ಸಹಾಯದಿಂದ ಎತ್ತುಗಳನ್ನು ಬಳಕೆ ಮಾಡಿ ನೀರನ್ನು
ಎತ್ತುತ್ತಿದ್ದರು. ಈ ತೆರನಾದ ಬಾವಿಯ
ವರ್ಣನೆಯನ್ನು ಶಾಸನಗಳಲ್ಲಿ ಕಾಣಬಹುದಾಗಿದೆ.
ಜನರ
ಸೌಕರ್ಯಕ್ಕಾಗಿ ತೊಟ್ಟಿಗಳನ್ನು ಕಟ್ಟಿಸಿ ಶಾಸನವನ್ನು ಬರೆಸಿರುವ ಉಲ್ಲೇಖಗಳೂ ಸಹ ಇವೆ. ಊರುಗಳ ಮಧ್ಯೆ ಸಂಪರ್ಕ ಕಲ್ಪಿಸುವ ಸಲುವಾಗಿ ರಸ್ತೆ ನಿರ್ಮಿಸುವಾಗ ಅಲ್ಲಲ್ಲಿ ದಾರಿಹೋಕರ ಅನುಕೂಲಕ್ಕಾಗಿ ಅರವಟ್ಟಿಗೆಗಳನ್ನು ನಿರ್ಮಿಸಿ ಅವುಗಳನ್ನು ವ್ಯವಸ್ಥಿತವಾಗಿ ನಿರ್ವಹಿಸಿಕೊಂಡು ಹೋಗಲು ದಾನವನ್ನು ನೀಡಿದ ಬಗ್ಗೆ ಉಲ್ಲೇಖವಿದೆ. ಪ್ರಾಕೃತಿಕ ಚಿಲುಮೆಗಳ ಉಲ್ಲೇಖವನ್ನು ಶಾಸನದಲ್ಲಿ ಕಾಣಬಹುದು. ಇಂತಹ ಚಿಲುಮೆಗಳಿಗೆ ಉತ್ತಮವಾದ
ಉದಾಹರಣೆ ಮುಕ್ತಿಋಣ ನಿರ್ಮಲ ತೀರ್ಥ ಇದು ಕಮಲಾಪುರದ ಆಗ್ನೇಯ
ದಿಕ್ಕಿಗಿತ್ತು.
ಕಾಲುವೆಗಳು
ವಿಜಯನಗರದ
ಕಾಲದಲ್ಲಿ ಅನೇಕ ಕಾಲುವೆಗಳು ವ್ಯವಸಾಯಕ್ಕೆ
ನೀರನ್ನು ಒದಗಿಸುತ್ತಿದ್ದವು. ಈ ಕಾಲುವೆಗಳು ಪಟ್ಟಣದ
ಮಧ್ಯಭಾಗದಲ್ಲಿ ಕೆಲವೊಮ್ಮೆ ಪಟ್ಟಣದ ಅಂಚಿನ ಭಾಗದಲ್ಲಿ ಹಾಯ್ದು ಹೋಗುತ್ತಿದ್ದವು. ಕೆಲವು ನಿಗದಿತ ಸ್ಥಳಗಳಲ್ಲಿ ಜನರ ಅನುಕೂಲಕ್ಕಾಗಿ ನೀರನ್ನು
ತೆಗೆಯಲು ಸೋಪಾನಗಳು ಹಾಗೂ ಸಣ್ಣ ಸೇತುವೆಗಳನ್ನು
ನಿರ್ಮಿಸಿರುವುದನ್ನು ಕಾಣಬಹುದಾಗಿದೆ. ದೈನಂದಿನ ಉಪಯೋಗಕ್ಕೆ ಕಾಲುವೆಯ ನೀರನ್ನು ಬಳಸಿಕೊಳ್ಳಲಾಗುತ್ತಿತ್ತು. ಹಿರಿಯ ಕಾಲುವೆ ಹಾಗೂ ಇನ್ನಿತರ ಕಾಲುವೆಗಳಿಂದ
ಸಣ್ಣ ಕಾಲುವೆಗಳಿಗೆ ನೀರನ್ನು ಹರಿಯಬಿಡಲಾಗುತ್ತಿತ್ತು. ಕೆಲವು ಕಾಲುವೆಗಳನ್ನು ಇಂದೂ ಗುರುತಿಸಬಹುದಾಗಿದೆ. ಕೆಲವನ್ನು ಗುರುತಿಸುವುದು
ಕಷ್ಟಕರವಾಗಿರುತ್ತದೆ. ಕೆಲವು ವಿಶಿಷ್ಟ ಕಾಲುವೆಗಳ ಉಲ್ಲೇಖವನ್ನು ಶಾಸನಗಳಲ್ಲಿ ಕಾಣಬಹುದು. ಇದಕ್ಕೆ ಉತ್ತಮವಾದ ಉದಾಹರಣೆಯೆಂದರೆ ಪೆನುಕೊಂಡು ಬಾಗಿಲು ಬಳಿಯ ಊಟದ ಕಾಲುವೆ
ಹೀಗೆಯೆ ಇನ್ನೊಂದು ಊಟದ ಕಾಲುವೆಯು ಮಹಾನವಮಿ
ದಿಬ್ಬದ ದಕ್ಷಿಣಕ್ಕೆಯಿದ್ದು, ಇಂದೂ ಜನಪದರು ಹಾಗೆಯೇ
ಕರೆಯುತ್ತಾರೆ. ನದಿಯಿಂದ ಸಣ್ಣ ಕಾಲುವೆಗಳ ಮೂಲಕ
ಹರಿಸುತ್ತಿದ್ದ ನೀರು ವಿದ್ಯಾರಣ್ಯ
ಮಠ ಹಾಗೂ ವಿರೂಪಾಕ್ಷ ದೇವಾಲಯದ
ಉಗ್ರಾಣ ಹಾಗೂ ಭಕ್ತಾದಿಗಳ ಉಪಯೋಗಕ್ಕೆ
ದೇವಾಲಯದ ಹೊರ ಪ್ರಾಂಗಣದ ಮೂಲಕ
ಹರಿದು, ಮುಂದೆ ದೇವಾಲಯದ ಉತ್ತರದ ಪ್ರಾಕಾರವನ್ನು ದಾಟಿ ಹೂದೋಟಕ್ಕೆ ಹರಿದಿರಬೇಕು.
ಕೆರೆಗಳು
ಅವಕಾಶವಿರುವೆಡೆಯಲ್ಲೆಲ್ಲಾ
ಕಣಿವೆಗಳ ಪ್ರದೇಶಗಳಲ್ಲಿ
ಸಣ್ಣ ಕೆರೆ ಕಟ್ಟೆಗಳನ್ನು ಕಟ್ಟಿ
ನೀರನ್ನು ಶೇಖರಿಸಲಾಗುತ್ತಿತ್ತು. ಹೀಗೆ ಶೇಖರಿಸಿದ ನೀರನ್ನು
ಸಣ್ಣ ಕಾಲುವೆಗಳ ಮೂಲಕ ಹಾಯಿಸಿ ಆಯಕಟ್ಟಿನ
ಕೆಳಭಾಗದ ಪ್ರದೇಶದಲ್ಲಿ ವಾಸಿಸುವ ಜನರಿಗೆ ಒದಗಿಸಲಾಗುತ್ತಿತ್ತು. ಕೆಲವು ಪ್ರದೇಶಗಳಲ್ಲಿ ಸರಣಿ ಕಟ್ಟೆಗಳ ನಿರ್ಮಾಣವನ್ನು
ಕಾಣಬಹುದು. ಇವುಗಳಿಂದ ಹರಿದ ನೀರು ದೊಡ್ಡ
ಕೆರೆಯನ್ನು ಸೇರುತ್ತಿತ್ತು. ಇಂದಿಗೆ ವಿಜಯನಗರ ಕಾಲದ ಅನೇಕ ಕೆರೆಗಳು ಹೂಳು
ತುಂಬಿದ್ದು ಹೆಚ್ಚಿನ ಕೆರೆಗಳನ್ನು ಗುರುತಿಸುವುದು ಕಷ್ಟಕರವಾಗಿದೆ. ಅಲ್ಲದೆ ಕೆರೆಯ ಪ್ರದೇಶಗಳನ್ನು ಗದ್ದೆ ಹಾಗೂ ನಿವೇಶನಗಳನ್ನಾಗಿ ಪರಿವರ್ತಿಸಲಾಗಿದೆ.
ಶಾಸನಗಳಲ್ಲಿ ಹಲವಾರು ಕೆರೆಗಳ ಬಗೆಗೆ ಉಲ್ಲೇಖವಿದೆ. ಇವುಗಳಲ್ಲಿ ಮುಖ್ಯವಾದವು ಭೂಪತಿ ಕೆರೆ, ಅನಂತಾಪುರದ ಕೆರೆ, ಕೃಷ್ಣರಾಯ ಸಮುದ್ರ, ನಾಗಸಮುದ್ರ, ಕನ್ನಡಿಕೆರೆ.
ರಾಜಪ್ರಾಂಗಣದ
ನೀರಿನ ವ್ಯವಸ್ಥೆ
ರಾಜ
ಪ್ರಾಂಗಣದಲ್ಲಿ ದೈನಂದಿನ ಬಳಕೆಗೆ ವ್ಯವಸ್ಥಿತವಾದ ನೀರಿನ ಸಂಪರ್ಕ ಜಾಲವನ್ನು ನಿರ್ಮಿಸಿದ್ದರು. ಈ ಪ್ರದೇಶದಲ್ಲಿ ನೀರನ್ನು ಸಣ್ಣ ಕಾಲುವೆಗಳ ಮೂಲಕ
ಬೇಕಾದ ಸ್ಥಳಗಳಿಗೆ ಹಾಯಿಸಲಾಗುತ್ತಿತ್ತು. ಕೆಲವೊಮ್ಮೆ ನೀರನ್ನು ಸಣ್ಣ ಕೊಳವೆಗಳ ಮೂಲಕ
ನಿಗದಿತ ಸ್ಥಳಗಳಿಗೆ ಹರಿಸಲಾಗುತ್ತಿತ್ತು. ನಗರದೊಳಗೆ ಸಣ್ಣ ಶೇಖರಣಾ ಕಟ್ಟೆಗಳನ್ನು
ಆಯಕಟ್ಟಿನ ಪ್ರದೇಶಗಳಲ್ಲಿ ನಿರ್ಮಿಸಲಾಗಿತ್ತು. ಅವುಗಳಲ್ಲಿ ಸುತ್ತಲಿನ ಪ್ರದೇಶದಲ್ಲಿ ಬಿದ್ದ ಮಳೆಯ
ನೀರು ಹರಿದು ಶೇಖರಣೆಯಾಗುತ್ತಿತ್ತು. ನಂತರ ಅದನ್ನು ಬೇಕಾದಾಗ
ಉಪಯೋಗಿಸುತ್ತಿದ್ದರು. ಈ ರೀತಿಯ ಕುರುಹುಗಳನ್ನು
ಹಳ್ಳಿಕೆರೆ ಹಾಗೂ ಅದಕ್ಕೆ ಪೂರ್ವಕ್ಕಿರುವ
ಸಣ್ಣ ಕಟ್ಟೆಗಳಿಂದ ಗುರುತಿಸಬಹುದಾಗಿದೆ. ಇಂತಹ ಸಣ್ಣ
ಕಟ್ಟೆಗಳನ್ನು ಮಳೆಯ ನೀರು ಸಣ್ಣ
ಹಳ್ಳವಾಗಿ ಹರಿಯುವ ಪ್ರದೇಶಕ್ಕೆ ಅಡ್ಡಲಾಗಿ ನಿರ್ಮಾಣ ಮಾಡಿರುವುದನ್ನು ಕಾಣಬಹುದು. ಈ ರೀತಿಯ ಕಟ್ಟೆಗಳಿಂದಾಗಿ
ಸುತ್ತಲಿನ ಪರಿಸರದ ಅಂತರ್ಜಲ ವೃದ್ಧಿಯಾಗಿದ್ದು ಕಂಡುಬರುತ್ತದೆ. ಕಮಲಾಪುರದ ಕೆರೆಯ ನೀರು ಮುಖ್ಯವಾದ ನೀರಿನ
ಆಸರೆಯಾಗಿದ್ದು, ಅದರೊಡನೆ ಮನೆಗಳ ಸನಿಹದಲ್ಲಿ ಬಾವಿಗಳು, ಇಳಿಜಾರು ಪ್ರದೇಶಕ್ಕೆ ಅಡ್ಡಲಾಗಿ ಕಟ್ಟಿದ ಕಟ್ಟೆಗಳು ನೀರಿನ ಮುಖ್ಯ ಆಸರೆಯಾಗಿದ್ದವು.
ರಾಜ
ಪ್ರಾಂಗಣಕ್ಕೆ ನೀರನ್ನು ಕಮಲಾಪುರದ ಕೆರೆಯಿಂದ ನೇರವಾಗಿ ಕಾಲುವೆಗಳ ಮೂಲಕ ಕೊಂಡೊಯ್ಯಲಾಗುತ್ತಿತ್ತು. ಅಂದು ನಿರ್ಮಿಸಿದ
ನೀರಾವರಿಯ ಸಣ್ಣ ಕಾಲುವೆಗಳ ಕುರುಹುಗಳನ್ನು
ಅಲ್ಲಲ್ಲಿ ಇಂದೂ ಕಾಣಬಹುದಾಗಿದೆ. ಕಲ್ಲಿನಲ್ಲಿ
ನಿರ್ಮಿಸಿದ್ದ ಗೋಡೆಯ ಎರಡೂ ಪಕ್ಕಗಳಲ್ಲಿ ಗಾರೆಯಿಂದ
ಗಿಲಾವು ಮಾಡಿದ್ದು, ನೀರು ಸೋರಿಕೆಗೆ ಯಾವುದೇ
ಅವಕಾಶವಿರಲಿಲ್ಲ. ಇದರಿಂದ ಅವ್ಯಾಹತವಾಗಿ ನೀರು ರಾಜಪ್ರಾಂಗಣಕ್ಕೆ ಹರಿಯುತ್ತಿತ್ತು.
ಅಲ್ಲಿ ನೀರನ್ನು ಶೇಖರಣಾ ತೊಟ್ಟಿಗಳಲ್ಲಿ ಸಂಗ್ರಹಿಸಿ, ಮುಂದೆ ಅವಶ್ಯವಿದ್ದ ಸ್ಥಳಗಳಿಗೆ ಸಣ್ಣ ಕಾಲುವೆಗಳ ಮೂಲಕ
ಹರಿಸಲಾಗುತ್ತಿತ್ತು. ಕೆಲವೊಮ್ಮೆ ಸಣ್ಣ ಕಾಲುವೆಗಳನ್ನು ಏಕಶಿಲೆಗಳಿಂದ
ನಿರ್ಮಿಸಿರುವುದನ್ನು ಕಾಣಬಹುದು. ರಾಜಪ್ರಾಂಗಣದ ಅನೇಕ ಸಮುಚ್ಚಯಗಳಲ್ಲಿ ಬೇಕಾಗುವಷ್ಟು
ನೀರನ್ನು ಸಂಗ್ರಹಿಸಲು ವಿವಿಧ ಅಳತೆಯ ಸಂಗ್ರಹಣಾ ತೊಟ್ಟಿಗಳಿದ್ದವು. ಹೀಗೆ ಸಂಗ್ರಹಿಸಿದ ನೀರು
ಅವರ ಅಗತ್ಯತೆಗಳನ್ನು ಪೂರೈಸುವುದರ ಜೊತೆಗೆ ದೈನಂದಿನ ಇತರ ಕಾರ್ಯಗಳಿಗೂ ಅನುಕೂಲವಾಗುತ್ತಿತ್ತು.
ಇಲ್ಲಿ ಉಪಯೋಗಿಸಿದ ನಂತರ ಬಂದ ಮಲಿನ
ನೀರನ್ನು ಸಣ್ಣ ಕಾಲುವೆಗಳ ಮೂಲಕ
ದೊಡ್ಡ ಚರಂಡಿಗೆ ಹರಿಸಲಾಗುತ್ತಿತ್ತು. ಸಣ್ಣ ಕಾಲುವೆಗಳಲ್ಲಿ ನೀರು
ವೃಥಾ ವ್ಯಯವಾಗದಂತೆ ಎಚ್ಚರ ವಹಿಸಿದ್ದರು. ಸಣ್ಣ ಕಲ್ಲಿನ ಗೋಡೆಗಳಿಗೆ
ಗಾರೆಯ ಗಿಲಾವು ಮಾಡಿ ಅದರ ಮೇಲೆ
ಸಣ್ಣ ಚಪ್ಪಡಿಯ ಕಲ್ಲುಗಳ ಹೊದಿಕೆಯನ್ನು ಹೊದಿಸಲಾಗಿತ್ತು. ಕಮಲಾಪುರದ ಕೆರೆಯಿಂದ ಗಾರೆಯ ಕಾಲುವೆಗಳ ಮುಖಾಂತರ ರಾಜಪ್ರಾಂಗಣದ ಶೇಖರಣಾ ತೊಟ್ಟಿಗಳು, ಕಾರಂಜಿ, ಜಲಕ್ರೀಡಾ, ಸೌಧಗಳು ಹೀಗೆ ಹಲವು ಪ್ರದೇಶಗಳಿಗೆ
ನೀರನ್ನು ಹರಿಸಿ ಅದರ ಉಪಯೋಗ ಪಡೆಯುತ್ತಿದ್ದರು.
ರಾಜ
ಪ್ರಾಂಗಣದಲ್ಲಿರುವ ಬೃಹತ್ತೊಟ್ಟಿ, ಇತ್ತೀಚೆಗೆ ಉತ್ಖನನದಲ್ಲಿ ದೊರಕಿದ ಪುಷ್ಕರಣಿ, ಹಾಗೂ ಅವುಗಳಿಗೆ ನೀರನ್ನು
ಹಾಯಿಸಲು ನಿರ್ಮಿಸಿರುವ ಏಕಶಿಲಾ ತೊಟ್ಟಿಗಳು ಗಮನಾರ್ಹ. ಈ ಪುಷ್ಕರಣಿಯು ಚಚ್ಚೌಕವಾಗಿದೆ.
ಮೇಲಿನಿಂದ ಕೆಳಗಿನವರೆವಿಗೂ ಚೌಕಾಕಾರದಲ್ಲಿ ನಿರ್ಮಿಸಲಾಗಿದೆ. ಈ ಪುಷ್ಕರಣಿಯನ್ನು ಹಸಿರು
ಬಳಪದ ಕಲ್ಲಿನಿಂದ ಕಟ್ಟಲಾಗಿದೆ. ಇಲ್ಲಿನ ಹಲವು ಮೆಟ್ಟಿಲುಗಳನ್ನು ಗುಂಪು,
ಗುಂಪಾಗಿ ಒಂದರ ಮೇಲೆ ಒಂದರಂತೆ
ವ್ಯವಸ್ಥಿತವಾಗಿ ಜೋಡಿಸಲಾಗಿದೆ. ಇಲ್ಲಿ ಪ್ರತಿಯೊಂದು ಕಲ್ಲಿಗೂ ಅದರ ದಿಕ್ಕು ಮತ್ತು
ಸಂಖ್ಯೆಯನ್ನು ನೀಡಲಾಗಿದೆ. ಬಹುಶಃ ಕಲ್ಲಿನ ಗಣಿಯ ಬಳಿಯೆ ಇವುಗಳಿಗೆ
ಸಂಖ್ಯೆಗಳನ್ನು ನೀಡಿ, ಪ್ರತಿಯೊಂದು ಕಲ್ಲು ಯಾವ ಸ್ಥಳದಲ್ಲಿ ಸೇರಬೇಕು
ಎನ್ನುವುದನ್ನು ನಿರ್ಧರಿಸಲಾಗಿತ್ತು ಎಂದು ತೋರುತ್ತದೆ. ಕಲ್ಲು
ಗಣಿಯಲ್ಲೇ ನಿಗದಿತ ಸಂಖ್ಯೆ ನೀಡಿದ್ದರಿಂದ ಪ್ರತಿಯೊಂದು ಕಲ್ಲಿಗೂ ಒಂದು ಗೊತ್ತಾದ ಸ್ಥಳವನ್ನು
ಪೂರ್ವಭಾವಿಯಾಗಿ ನಿರ್ಧರಿಸಿರುವುದು ತಿಳಿಯುತ್ತದೆ. ಈ ರೀತಿ ಬಳಪದ
ಕಲ್ಲಿನ ನಿರ್ಮಿತಿಗಳನ್ನು ಕಲ್ಯಾಣಿ ಚಾಲುಕ್ಯ ಮತ್ತು ಹೊಯ್ಸಳರ ಕಾಲದಲ್ಲಿ ವಿಶೇಷವಾಗಿ ಕಾಣಬಹುದು.
ಈ ಪುಷ್ಕರಣಿಗೆ ನೀರನ್ನು ಕಲ್ಲಿನ ದೋಣಿಯ ಮೂಲಕ ಒದಗಿಸಲಾಗುತ್ತಿತ್ತು. ಅಲ್ಲದೆ ಈ
ಕೊಳವು ಸಾಕಷ್ಟು ಆಳದಲ್ಲಿರುವುದರಿಂದ ಅಂತರ್ಜಲದಿಂದಾಗಿ ಪುಷ್ಕರಣಿಯಲ್ಲಿ ನೀರು ಒಂದು ಗೊತ್ತಾದ
ಮಟ್ಟದವರೆಗೂ ಇರುತ್ತಿತ್ತು. ಈ ಪುಷ್ಕರಣಿಯು ಆಯಕಟ್ಟಿನ
ಸ್ಥಳದಲ್ಲಿದೆ. ಇದರ ವಾಸ್ತುವಿನ್ಯಾಸವನ್ನು ಗಮನಿಸಿದಲ್ಲಿ ಈ
ನೀರನ್ನು ಧಾರ್ಮಿಕ ಕ್ರಿಯೆಗಳಿಗೆ ಉಪಯೋಗಿಸಿರುವುದನ್ನು ಕಾಣಬಹುದು. ಉತ್ಖನನದಲ್ಲಿ ದೊರೆತ ಸಣ್ಣ ಅಲಂಕಾರಿಕ ಮಡಿಕೆಗಳು
ಈ ಪುಷ್ಕರಣಿಯ ಉಪಯೋಗದ ಬಗೆಗೆ ಹೆಚ್ಚಿನ ಬೆಳಕು ಚೆಲ್ಲಬಲ್ಲವು. ಇಂದಿಗೂ ಹಬ್ಬ, ದೇವರ ಎಡೆ ಮುಂತಾದ
ಸಂದರ್ಭಗಳಲ್ಲಿ ಇವುಗಳನ್ನು ಉಪಯೋಗಿಸಲಾಗುತ್ತಿದೆ. ಹಾಗಾಗಿ ಈ ನೀರನ್ನು ಒಂದು
ನಿಗದಿತ ಆಚರಣೆಗೆ ಅಂದರೆ ಪವಿತ್ರ ಸ್ನಾನ ಅಥವಾ ದೇವತಾ ಕಾರ್ಯಗಳಿಗೆ
ಉಪಯೋಗಿಸಿರಬಹುದು. ನೀರಿನ ಸೌಲಭ್ಯವು ರಾಜ ಪ್ರಾಂಗಣದ ಕಟ್ಟಡಗಳಲ್ಲಿ
ವಾಸಿಸುವ ಜನರಿಗೆ ಮುಖ್ಯವಾಗಿ ಬೇಕಾಗಿದ್ದು ಅದರ ವ್ಯವಸ್ಥಿತ ಸರಬರಾಜಿಗೆ
ಬೇಕಾಗುವ ಅನುಕೂಲತೆಯನ್ನು ಮಾಡಿಕೊಂಡಿದ್ದರು. ನೀರು ಇಂತಹ ಸ್ಥಳಗಳಿಗೆ
ನಿಗದಿತವಾಗಿ ಹರಿದುಬರುವುದು ಇದರ ವೈಶಿಷ್ಟ್ಯ. ಇಲ್ಲಿಗೆ
ನೀರನ್ನು ಕೆಲವು ವಿಶೇಷ ಸಂದರ್ಭಗಳಲ್ಲಿ ಮಾತ್ರ ಹರಿಯಿಸುತ್ತಿದ್ದರೆಂದು ತಿಳಿಯಲಾಗಿದೆ. ಅಲ್ಲದೆ ಅರಮನೆಗೆ ವಿಷೇಶ ಅತಿಥಿಗಳು ಆಗಮಿಸಿದಾಗ ಹಬ್ಬದ ದಿನಗಳಲ್ಲಿ ಮಾತ್ರ ಉಪಯೋಗಿಸುತ್ತಿದ್ದರೆಂದು ಅಭಿಪ್ರಾಯಪಡಲಾಗಿದೆ. ಇಲ್ಲಿಯ ಅಗತ್ಯತೆ ಹಾಗೂ ಕುರುಹುಗಳನ್ನು ನೋಡಿದಲ್ಲಿ
ಈ ಅಭಿಪ್ರಾಯವು ಸರಿಯಲ್ಲವೆನಿಸುತ್ತದೆ. ರಾಜ ಪ್ರಾಂಗಣದಲ್ಲಿ ನೀರಿನ
ತೀವ್ರವಾದ ಅಗತ್ಯತೆ ಹೊಂದಿದ್ದರಿಂದ ಸದಾ ನೀರಿನ ಅನುಕೂಲತೆಬೇಕಾಗಿತ್ತು.
ಅಲ್ಲದೆ ದೊಡ್ಡ ಸಂಗ್ರಹಣಾ ತೊಟ್ಟಿಗಳನ್ನು ಶುಚಿಗೊಳಿಸಿದಾಗ ಮಲಿನ ನೀರು ಹೊರ
ಹೋಗಲು ದ್ವಾರಗಳಿರುವುದನ್ನು ಗಮನಿಸಿದಲ್ಲಿ ನೀರಿನ ಪ್ರಾಮುಖ್ಯತೆ ತಿಳಿಯುತ್ತದೆ.
ರಾಜ
ಪ್ರಾಂಗಣದಲ್ಲಿ ನೀರನ್ನು ಹರಿಬಿಡಲು ಕಲ್ಲಿನ ದೋಣಿಗಳು ಕೆಲವು ಕಟ್ಟಡದ ಬಳಿಯಿರುವ ತೊಟ್ಟಿಗಳು ಸಂಗ್ರಹಣಾ ವ್ಯವಸ್ಥೆಗಳು ನೀರನ್ನು ಒಂದು ನಿರ್ದಿಷ್ಟ ರೀತಿಯಲ್ಲಿ
ಉಪಯೋಗಿಸಿದ ಬಗೆಗೆ ಉತ್ತಮ ಉದಾಹರಣೆಯಾಗಿವೆ. ರಾಜ ಪ್ರಾಂಗಣದ ಮಧ್ಯದಲ್ಲಿರುವ
ಬೃಹತ್ ಬಾವಿ, ಕಲ್ಲಿನ ದೋಣಿಯ ಹರಿವು ದಿಕ್ಕುಬದಲಿಸುವ ಮೂಲೆಯಲ್ಲಿದೆ. ಹೊರಗಿನ ನೀರು ಸರಬರಾಜು ವ್ಯತ್ಯಯವಾದಾಗ
ಈ ಬಾವಿಗೆ ರಾಟೆಯನ್ನು ಹೊಂದಿಸಲು ಬಾವಿಯ ಎರಡು ಪಕ್ಕದಲ್ಲಿ ಚಪ್ಪಡಿ
ಕಲ್ಲುಗಳಿದ್ದು ಮೇಲ್ಭಾಗದಲ್ಲಿ ದೊಡ್ಡ ರಂಧ್ರವಿದೆ. ಇದರ ಮೂಲಕ ಅಡ್ಡ
ತೊಲೆಗಳನ್ನು ಹಾಕಿ ರಾಟೆಯನ್ನು ಕೂಡಿಸಲಾಗುತ್ತಿತ್ತು.
ಈ ರಾಟೆಯಿಂದ ನೀರನ್ನು ಮೇಲೆತ್ತಿ ಕಲ್ಲಿನ ದೋಣಿಗಳ ಮೂಲಕ ಹರಿಯಬಿಡಲಾಗುತ್ತಿತ್ತು. ಈ ಬಾವಿಯ
ಪಕ್ಕದಲ್ಲಿರುವ ಪುಷ್ಕರಣಿಯಂತೆ ಈ ಬಾವಿಯಲ್ಲೂ ಉತ್ತಮ
ಅಂತರ್ಜಲದ ಸೆಲೆಯಿದ್ದು ಪರಿಪೂರ್ಣ ನೀರಿನ ಸರಬರಾಜಿಗೆ ಉತ್ತಮ ಸಾಧನವಾಗಿತ್ತು. ರಾಜಪ್ರಾಂಗಣದಲ್ಲಿ ಬಾವಿಗಳ ಪ್ರಮಾಣ ಕಡಿಮೆಯಿದೆ. ಆದರೆ ನೀರು ಶೇಖರಣಾ
ತೊಟ್ಟಿಗಳು ಹೇರಳವಾಗಿ ಕಂಡುಬಂದಿವೆ. ಅಂದರೆ ಹೊರಗಿನಿಂದ ಸರಬರಾಜಾದ ನೀರನ್ನು ಸಂಗ್ರಹಿಸಿ ಉಪಯೋಗಿಸಲಾಗುತ್ತಿತ್ತು. ಮಳೆ ನೀರು ಒಂದು
ಕಡೆ ಹರಿದು ಅದನ್ನು ಸಂಗ್ರಹಿಸಲು ನೀರಿನ ತೊಟ್ಟಿಗಳನ್ನು ಮಾಡಲಾಗಿತ್ತು. ಕೆಲವು ಕಟ್ಟಡಗಳ ಗಾರೆಯಿಂದ ಲೇಪಿಸಿದ ಸಣ್ಣ ಕಾಲುವೆಗಳು ನಿರ್ದಿಷ್ಟ
ತೊಟ್ಟಿಗೆ ಜೋಡಣೆಯಾಗಿವೆ. ಇವು ಕಟ್ಟಡದ ಬಳಿ
ಇದ್ದ ನೀರನ್ನು ಒಯ್ಯುವ ವ್ಯವಸ್ಥೆಯಾಗಿರಬೇಕು. ಇಲ್ಲಿ ಸಂಗ್ರಹವಾದ ನೀರನ್ನು ದಿನಬಳಕೆಗೆ ಉಪಯೋಗಿಸಿರಬಹುದು.
ನೀರನ್ನು
ಹರಿಸಲು ಸುಟ್ಟ ಮಣ್ಣಿನ ಕೊಳವೆಗಳನ್ನು ಒಂದರ ಪಕ್ಕದಲ್ಲಿ ಒಂದನ್ನು
ಜೋಡಿಸಿ ಗಾರೆಯಿಂದ ಭದ್ರಪಡಿಸಿರುವುದರಿಂದ ಈ ಕೊಳವೆಗಳು ಒಡೆದು
ಹೋಗುವ ಅಥವಾ ಹಾಳಾಗುವುದನ್ನು ತಡೆಯಬಹುದಾಗಿತ್ತು.
ಅಲ್ಲದೆ ನೀರು ಒತ್ತಡದಲ್ಲಿ ಹರಿಯುವ
ಗುಣ ಹೊಂದಿದೆ. ಒತ್ತಡ ಹಾಗೂ ಗುರುತ್ವಾಕರ್ಷಣೆಯಿಂದ ರಭಸವಾಗಿ ಹರಿಯುವ
ನೀರನ್ನು ಕಾರಂಜಿ ಮತ್ತು ಕೃತಕ ನೀರಿನ ಹರಿವುಗಳನ್ನು ನಿರ್ಮಿಸಲು ಉಪಯೋಗಿಸಲಾಗುತ್ತಿತ್ತು.
ಜಲಕ್ರೀಡಾ
ಸೌಧಗಳಿಗೆ ನೀರನ್ನು ಹರಿಸುವಾಗ ಕೆಸರು ಸಂಗ್ರಹಕ್ಕಾಗಿ ಅಲ್ಲಲ್ಲಿ ಸಣ್ಣ ತೊಟ್ಟಿಗಳಿದ್ದು, ಆಗಿಂದಾಗ್ಗೆ
ಸಂಗ್ರಹವಾದ ಕೆಸರನ್ನು ತೆಗೆಯಲಾಗುತ್ತಿತ್ತು. ಇದೇ ರೀತಿಯ ವ್ಯವಸ್ಥೆ
ಸುಟ್ಟ ಮಣ್ಣಿನ ಕೊಳವೆಗಳಲ್ಲಿ ನೀರು ಹಾಯಿಸುವಾಗಲೂ ಮಾಡಿರುವುದು
ಕಂಡುಬರುತ್ತದೆ. ಈ ವ್ಯವಸ್ಥೆಯಿಂದ ಕೆಸರನ್ನು
ಹೊರತುಪಡಿಸಿದ ತಿಳಿನೀರು ಉಪಯೋಗಕ್ಕೆ ದೊರಕುತ್ತಿತ್ತು. ಅಲ್ಲದೆ ಕೊಳವೆಗಳಲ್ಲಿ ಕೆಸರು ಸಂಗ್ರಹವಾಗುವುದನ್ನು ತಡೆಯಲು ಇದು ಉತ್ತಮ ಮಾರ್ಗವಾಗಿತ್ತು.
ಸುಟ್ಟಮಣ್ಣಿನ
ಕೊಳವೆಗಳ ಮುಖಾಂತರ ನೀರನ್ನು ಹಾಯಿಸುವ ಇಂತಹ ವ್ಯವಸ್ಥೆ ವಿಜಯನಗರ ಕಾಲದ ಪೂರ್ವದಲ್ಲಿ ಅಸ್ತಿತ್ವದಲ್ಲಿದ್ದ
ವಿವರಗಳು ಕಂಡುಬಂದಿಲ್ಲ. ಆದರೆ
ವಿಜಯನಗರದ ಪಕ್ಕದ ರಾಜ್ಯವಾದ ಬಹಮನಿ ಸುಲ್ತಾನರ ಕಟ್ಟಡಗಳು ಹಾಗೂ ಅವರ ವಾಸ್ತು ವಿನ್ಯಾಸಗಳಲ್ಲಿ
ಬಳಸಿದ್ದಾರೆ. ವಾಸ್ತು ಮತ್ತು ತಾಂತ್ರಿಕತೆಯಲ್ಲಿ ಪರಸ್ಪರ ಕೊಡುಕೊಳ್ಳುವಿಕೆಯಿಂದ ಸುಟ್ಟ ಮಣ್ಣಿನ ಕೊಳವೆಗಳ ಬಳಕೆ ಹೆಚ್ಚಾಗಿತ್ತೆಂದು ಕಾಣುತ್ತದೆ.
ನೀರಾವರಿ ವ್ಯವಸ್ಥೆಯ
ಕಾಲಮಾನ
ರಾಜ
ಪ್ರಾಂಗಣದ ನೀರಾವರಿ ಸೌಲಭ್ಯಗಳ ಬಗೆಗೆ ಅಧಿಕೃತವಾಗಿ ಕಾಲಮಾನವನ್ನು ನಿರ್ಧರಿಸಲಾಗಿಲ್ಲ. ಇಲ್ಲಿಯ ರಚನೆಗಳ ಬಗೆಗೆ ಶಾಸನಗಳಲ್ಲಿ ಮಾಹಿತಿ ಸಿಗುವುದಿಲ್ಲ ಅಥವಾ ಇನ್ನಾವುದೇ ಮೂಲದಿಂದಲೂ
ತಿಳಿಯುವುದು ಕಷ್ಟಕರವಾಗಿದೆ. ನೀರಿನ ಸೌಕರ್ಯದ ಪ್ರದೇಶಗಳು ಹಾಗೂ ಕಟ್ಟಡಗಳು ಕಾಲಕ್ರಮೇಣ
ಹಲವಾರು ಬದಲಾವಣೆಗಳನ್ನು
ಹೊಂದಿವೆ. ಕೆಲವು ಸಂದರ್ಭಗಳಲ್ಲಿ ಉಪಯೋಗಿಸಲು ಯೋಗ್ಯವಲ್ಲದ ವಿಜಯನಗರದ ಪ್ರಾರಂಭಿಕ ಹಂತದ ಕಟ್ಟಡದ ಕೆಲವು
ಅವಶೇಷಗಳು ಬಳಕೆಗೆ ಯೋಗ್ಯವಾದುದರಿಂದ ಪುನಃ ಉಪಯೋಗಿಸಲಾಗಿದೆ. ಇದರಿಂದಾಗಿ
ಈ ನೀರಾವರಿ ವ್ಯವಸ್ಥೆಯ ಕಾಲವನ್ನು ನಿರ್ಧರಿಸಲಾಗಿಲ್ಲ. ರಾಜಪ್ರಾಂಗಣದ ಬೃಹತ್ನೀರಿನ ತೊಟ್ಟಿ, ಅಷ್ಟಕೋನಾಕೃತಿಯ ಕಾರಂಜಿ ಮತ್ತು ಅಷ್ಟಕೋನಾಕೃತಿಯ ಜಲಸೌಧಗಳ ವಾಸ್ತುವಿನ್ಯಾಸ ಆಕರ್ಷಕವಾಗಿವೆ. ಉತ್ತಮವಾಗಿ ಸಿದ್ಧಪಡಿಸಿದ ಕಲ್ಲುಗಳು ಹಾಗೂ ಗಾರೆಯ ಲೇಪನ
ಇಲ್ಲಿ ಸಾಮಾನ್ಯವಾಗಿ ಕಂಡುಬರುವ ಲಕ್ಷಣಗಳು. ಈ ಕಟ್ಟಡಗಳಲ್ಲಿ ಸ್ವಲ್ಪ
ರೀತಿಯ ಬದಲಾವಣೆಗಳನ್ನು ಮಾಡಲಾಗಿದೆ. ಮೇಲೆ ತಿಳಿಸಿದ ರೀತಿಯ
ಕಟ್ಟಡಗಳು ತಮ್ಮ ವೈಭವದ ಸಂಕೇತವಾಗಿ
ನಿಲ್ಲುವುದರಿಂದ ರಾಜ್ಯದಲ್ಲಿ ಸಮೃದ್ಧಿ, ಸುಭಿಕ್ಷೆ, ಆರ್ಥಿಕ ಸಬಲತೆಯಿದ್ದಾಗ ನಿರ್ಮಿಸಿರಬಹುದೆಂದು ತೋರುತ್ತದೆ. ಒಟ್ಟಾರೆ ಹೇಳುವುದಾದರೆ ವಿಜಯನಗರದಲ್ಲಿ ಉತ್ತಮವಾದ ನೀರಿನ ಪೂರೈಕಾ ವ್ಯವಸ್ಥೆ ಇದ್ದಿತೆಂದು ಹೇಳಬಹುದು.
ಆಕರ
ವಿಜಯನಗರ
ಅಧ್ಯಯನ, ಸಂಪುಟ - ೮, ೨೦೦೩
ಪು.
೧೧೬-೧೨೫
ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯಗಳ ನಿರ್ದೇಶನಾಲಯ, ಹೊಸಪೇಟೆ
Valuable notes sir
ReplyDeleteThank you. And Next time please put your sweet name while commenting.
Delete