ಶ್ರೀಕೃಷ್ಣದೇವರಾಯ, ವಿಜಯನಗರದ ಸಾಮ್ರಾಟ - ಸಾ.ಶ.ವ. ೧೫೦೯-೧೫೨೯
ಶ್ರೀ ಕೃಷ್ಣದೇವರಾಯ - ವಿಜಯನಗರ ಸಾಮ್ರಾಟ
ರಾಜ್ಯಭಾರ: ೨೬
ಜುಲೈ ೧೫೦೯ - ೧೫೨೯[೧]
ಜನನ: ೧೬ ಫೆಬ್ರುವರಿ
೧೪೭೧
ಮರಣ: ೧೫೨೯
ಪೂರ್ವಾಧಿಕಾರಿ:
ವೀರ ನರಸಿಂಹರಾಯ
ಉತ್ತರಾಧಿಕಾರಿ:
ಅಚ್ಯುತ ದೇವರಾಯ
ರಾಣಿಯರು: ಚಿನ್ನಾ
ದೇವಿ,, ತಿರುಮಲಾ ದೇವಿ,, ಅನ್ನಪೂರ್ಣಾ ದೇವಿ
ವಂಶ: ತುಳುವ
ತಂದೆ: ತುಳುವ
ನರಸ ನಾಯಕ
ಗಮನಿಸಿ:- ಶ್ರೀ ಕೃಷ್ಣದೇವರಾಯ ಕಾಲವಾದ ದಿನ ಸ್ಪಷ್ಟವಾಗಿ
ತಿಳಿಸುವ ಶಾಸನ ಪತ್ತೆ
By
Kannadaprabha News
Bengaluru,
First Published Feb 25, 2021, 9:38 AM IST
Shri
krishna Devaraya Death Inscription Found in Tumakuru snr
ತುಮಕೂರು (ಫೆ.25):
ಸಮೀಪದ ಹೊನ್ನೇನಹಳ್ಳಿಯಲ್ಲಿ ವಿಜಯನಗರ ಸಾಮ್ರಾಜ್ಯದ ಕೃಷ್ಣದೇವರಾಯನ ಕಾಲಮಾನವನ್ನು ನಿಖರವಾಗಿ ಸ್ಪಷ್ಟಪಡಿಸುವ
ಶಾಸನವೊಂದು ಪತ್ತೆಯಾಗಿದೆ. ಕ್ರಿಸ್ತಶಕ 1529ರ ಅಕ್ಟೋಬರ್ 17ರಂದು ಶ್ರೀಕೃಷ್ಣದೇವರಾಯ ಕಾಲವಾದರು
ಎಂಬ ಉಲ್ಲೇಖ ಈ ಶಾಸನದಲ್ಲಿದೆ.
ಕ್ರಿಸ್ತ ಶಕ
1336ರಲ್ಲಿ ಹಕ್ಕ, ಬುಕ್ಕರಿಂದ ಆರಂಭವಾದ ವಿಜಯನಗರ ಸಾಮ್ರಾಜ್ಯದ ಶ್ರೀಕೃಷ್ಣ ದೇವರಾಯನ ಸಾವಿನ ಕುರಿತಾದ
ನಿಖರತೆ ಈವರೆಗೂ ಇತಿಹಾಸಕಾರರಿಗೆ ಲಭ್ಯವಾಗಿರಲಿಲ್ಲ. ಈವರೆಗೆ ಕೃಷ್ಣದೇವರಾಯ ಮರಣ ಕಾಲವನ್ನು
1529ರ ಅಕ್ಟೋಬರ್ ಅಥವಾ ನವೆಂಬರ್ ಎಂದು ಅಂದಾಜಿಸಲಾಗಿತ್ತು.
ಆದರೆ ಹೊನ್ನೇನಹಳ್ಳಿಯಲ್ಲಿ
ಸಿಕ್ಕಿರುವ ಶಾಸನದಲ್ಲಿ ಶಾಲಿವಾಹನ ಶಕ ವಿರೋಧಿ ನಾಮ ಸಂವತ್ಸರ 1452ರ ಕಾರ್ತಿಕ ಶುದ್ದ15 ಎಂದರೆ
ಕ್ರಿಸ್ತಶಕ 1529ರ ಅಕ್ಟೋಬರ್ 17ರಂದು ಶ್ರೀಕೃಷ್ಣದೇವರಾಯ ಅಸ್ತಂಗತರಾಗಿದ್ದಾರೆ ಎಂದು ನಮೂದಿಸಿದೆ.
ಈ ಸಂಬಂಧ ಈ ಶಾಸನವನ್ನು
ತುಮಕೂರು ಸೀಮೆಯ ತಿಮ್ಮಣ್ಣ ನಾಯಕರು ಗ್ರಾಮವೊಂದನ್ನು ತುಮಕೂರು ವೀರಪ್ರಸನ್ನ ಹನುಮಂತ ದೇವರ ಪೂಜೆಗಾಗಿ
ಧಾರೆ ಎರೆದು ಕೊಟ್ಟಿರುವ ಉಲ್ಲೇಖವಿದೆ. 15 ಸಾಲುಗಳನ್ನು ಒಳಗೊಂಡಿರುವ ಶಾಸನದಲ್ಲಿ 12 ಸಾಲುಗಳನ್ನು
ಸ್ಪಷ್ಟವಾಗಿ ಓದಬಹುದಾಗಿದೆ. ಶಾಸನದ ಮೇಲ್ಭಾಗದಲ್ಲಿ ಶಂಖ, ಚಕ್ರಗಳ ನಡುವೆ ಆಂಜನೇಯನ ಉಬ್ಬು
ಚಿತ್ರವಿದ್ದು, ಸೂರ್ಯ, ಚಂದ್ರರ ಗುರುತುಗಳು ಇವೆ. ಶಿಲೆಯ ಹಿಂಭಾಗದಲ್ಲಿ ಮಾರುತಿಯ ಚಿತ್ರವಿದೆ. ಬಾಲದಲ್ಲಿ
ಗಂಟೆಯಿದೆ.
ಹಿನ್ನೆಲೆ: ಕೃಷ್ಣದೇವರಾಯನ ತಂದೆ ತುಳುವ ನರಸ ನಾಯಕ. ತಾಯಿ
ನಾಗಲಾಂಬಿಕೆ. ಸಾಳುವ ನರಸಿಂಹನ ಸೇನೆಯಲ್ಲಿ ಅಧಿಕಾರಿಯಾಗಿದ್ದ ನರಸನಾಯಕನು , ಸಂಪೂರ್ಣ ರಾಜ್ಯವನ್ನು
ತನ್ನ ವಶಕ್ಕೆ ತೆಗೆದುಕೊಂಡು ತುಳುವ ಸಾಮ್ರಾಜ್ಯವನ್ನು ಸ್ಥಾಪಿಸಿದನು. ನರಸನಾಯಕನ ನಂತರ ಕೃಷ್ಣಜನ್ಮಾಷ್ಟಮಿಯಂದು
ಪಟ್ಟವೇರಿದ ಕೃಷ್ಣದೇವರಾಯನು ರಾಜಧಾನಿಯಾದ ವಿಜಯನಗರದ ಉಪನಗರವಾಗಿ ನಾಗಲಾಪುರ ಎಂಬ ಸುಂದರ ನಗರವನ್ನು
ಕಟ್ಟಿಸಿದನು.
ಕೃಷ್ಣದೇವರಾಯನು ತನ್ನ ತಂದೆಯ ಸ್ಥಾನದಲ್ಲಿಟ್ಟು ಗೌರವಿಸುತ್ತಿದ್ದ
ತಿಮ್ಮರಸು(ಮಂತ್ರಿ), ಆತನು ಪಟ್ಟವೇರಲು ಕಾರಣೀಭೂತರಾಗಿದ್ದರಷ್ಟೇ ಅಲ್ಲ, ಅವನ ರಾಜ್ಯಭಾರದ ಕಾಲದಲ್ಲಿ
ಮಂತ್ರಿಯಾಗಿ ಸಮರ್ಥವಾಗಿ ಕಾರ್ಯ ನಿರ್ವಹಿಸಿದರು. ಮಟ್ಟಸ ಎತ್ತರವಾಗಿದ್ದ ಕೃಷ್ಣದೇವರಾಯನಿಗೆ, ದಿನವೂ
ವ್ಯಾಯಾಮ,ತಾಲೀಮು ಮಾಡಿದ್ದರ ಪರಿಣಾಮವಾಗಿ ಕಲ್ಲಿನಂತಹ ದೇಹಧಾರ್ಡ್ಯವಿತ್ತು. ಹಸನ್ಮುಖಿಯಾದರೂ, ಶೀಘ್ರಕೋಪಿಯೂ
ಆಗಿದ್ದ ಎಂದೂ ಹೇಳಲಾಗಿದೆ.
ಪರದೇಶದ ಪ್ರವಾಸಿಗಳಿಗೆ ಗೌರವ ತೋರಿಸುತ್ತಿದ್ದ. ಸಮರ್ಥ
ಆಡಳಿತಗಾರನಾಗಿದ್ದು ಕಾನೂನು ಪಾಲನೆಯಲ್ಲಿ ಕಠಿಣ ಶಿಸ್ತು ಪಾಲಿಸುತ್ತಿದ್ದ. ಅತ್ಯುತ್ತಮ ಸೇನಾನಾಯಕನೂ
ಆಗಿದ್ದ ಆತನು, ಸ್ವತಃ ಸೇನೆಯ ಮುಂದಾಳುತ್ವ ವಹಿಸುವುದಷ್ಟೇ ಅಲ್ಲ, ಗಾಯಗೊಂಡವರಿಗೆ ಕೈಯಾರೆ ಶುಶ್ರೂಷೆಯನ್ನೂ
ಮಾಡುತ್ತಿದ್ದ ಎಂದೂ ಹೇಳಲಾಗಿದೆ. ಕೃಷ್ಣದೇವರಾಯನ ಆಡಳಿತದ ಬಗೆಗಿನ ಬಹಳಷ್ಟು ಮಾಹಿತಿ ಅವನ ಕಾಲದಲ್ಲಿ
ಭಾರತಕ್ಕೆ ಬಂದ ಪೋರ್ಚುಗೀಸ್ ಯಾತ್ರಿಕರಾದ ಡೊಮಿಂಗೋ ಪಾಯಸ್ ಮತ್ತು ಫೆರ್ನಾವ್ ನೂನೀಜ್ ಅವರ ಬರಹಗಳಿ೦ದ
ತಿಳಿದುಬರುತ್ತದೆ.
ರಾಜ್ಯವಿಸ್ತರಣೆ: ಸಿಂಹಾಸನಕ್ಕೇರಿದ ಆರು ತಿಂಗಳುಗಳಲ್ಲಿಯೇ ಯೂಸುಫ್ ಆದಿಲ್
ಖಾನ್ ಮತ್ತು ಬೀದರಿನ ಸುಲ್ತಾನ ಮಹಮೂದ್ ಅನ್ನು ಕೃಷ್ಣದೇವರಾಯನು ಸೋಲಿಸಿದನೆಂದು ತಿಳಿದುಬರುತ್ತದೆ.
೧೫೧೦ರಲ್ಲಿ ಉತ್ತರದ ರಾಯಚೂರಿಗೆ ಮುತ್ತಿಗೆ ಹಾಕಿ ಗುಲ್ಬರ್ಗಾ ಮತ್ತು ಬೀದರ್ ಕಡೆಗೆ ಹೆಜ್ಜೆ ಹಾಕಿದ.
ಹೀಗೆ ಉತ್ತರದಲ್ಲಿ ತನ್ನ ಸಾಮ್ರಾಜ್ಯವನ್ನು ಗಟ್ಟಿಗೊಳಿಸಿದ ನಂತರ ದಕ್ಷಿಣದಲ್ಲಿ ಶ್ರೀರಂಗಪಟ್ಟಣದ
ಕೇಂದ್ರವಾದ ರಾಜ್ಯಭಾಗವನ್ನು ಸೃಷ್ಟಿಸಿದ.
ನಂತರ ಪೂರ್ವಕ್ಕೆ ತಿರುಗಿ ಪ್ರತಾಪರುದ್ರ ಎಂಬ ಸ್ಥಳೀಯ
ನಾಯಕನನ್ನು ಸೋಲಿಸಿ ಕೃಷ್ಣಾ ನದಿಯವರೆಗಿನ ಭಾಗಗಳನ್ನು ಗೆದ್ದನು. ಕೃಷ್ಣದೇವರಾಯನ ಅತಿ ಮುಖ್ಯ ವಿಜಯ
ಬಂದದ್ದು ಮೇ ೧೯, ೧೫೨೦ ರಲ್ಲಿ ಬಿಜಾಪುರದ ಇಸ್ಮಾಯಿಲ್ ಆದಿಲ್ ಷಾನಿಂದ ರಾಯಚೂರನ್ನು ಗೆದ್ದಾಗ. ಒಟ್ಟು
ಸಾವಿರಾರು ಸೈನಿಕರು, ೩೨,೬೦೦ ಕುದುರೆ ಸವಾರರು ಮತ್ತು ೫೫೧ ಆನೆಗಳು ಪಾಲ್ಗೊಂಡ ಯುದ್ಧದಲ್ಲಿ ಸುಮಾರು
೧೬,೦೦೦ ವಿಜಯನಗರದ ಸೈನಿಕರು ಮೃತಪಟ್ಟರು.
ಕೊನೆಯ ಯುದ್ಧದಲ್ಲಿ ಬಹಮನಿ ಸುಲ್ತಾನರ ಮೊದಲ ರಾಜಧಾನಿಯಾದ
ಗುಲ್ಬರ್ಗಾದ ಕೋಟೆ ನೆಲಸಮವಾಯಿತು. ಡೊಮಿಂಗೋ ಪಯಸ್ ನ ವಿವರಣೆಯಂತೆ ಅಂದಿನ ವಿಜಯನಗರ ರೋಮ್ ನಗರದಷ್ಟಾದರೂ
ದೊಡ್ಡದಿದ್ದು , ಐದು ಲಕ್ಷ ಜನಸಂಖ್ಯೆಯನ್ನು ಹೊಂದಿದ್ದಿತು. ತಾನು ಕಂಡ ಅತ್ಯಂತ ಶ್ರೀಮಂತ ನಗರವೆಂದೂ
ಪಯಸ್ ವಿಜಯನಗರವನ್ನು ವರ್ಣಿಸಿದ್ದಾನೆ.
ದಿಗ್ವಿಜಯಗಳು (ವಿದೇಶಾಂಗ ವ್ಯವಹಾರಗಳು): ವಿಜಯನಗರ ಇತಿಹಾಸದಲ್ಲಿಯೇ
ಅತಿ ಹೆಚ್ಚು ಸೇನಾಯಶಸ್ಸು ಸಿಕ್ಕಿದ್ದು ಕೃಷ್ಣದೇವರಾಯನ ಆಳ್ವಿಕೆಯ ಕಾಲದಲ್ಲಿ. ಹಠಾತ್ತನೆ ಯುದ್ಧ
ತಂತ್ರವನ್ನು ಬದಲಾಯಿಸಿ , ಸೋಲುವ ಪರಿಸ್ಥಿತಿಯಲ್ಲೂ ಗೆಲುವು ಸಾಧಿಸುವ ಚಾಕಚಕ್ಯತೆ ಅವನಿಗಿತ್ತು.
ಆತನ ಆಳ್ವಿಕೆ ಮೊದಲ ದಶಕದಲ್ಲಿ ಆಕ್ರಮಣ, ರಕ್ತಪಾತ ಮತ್ತು ಗೆಲುವುಗಳನ್ನು ಕಾಣುತ್ತೇವೆ.
ಅವನ ಶತ್ರುಗಳಲ್ಲಿ ಮುಖ್ಯರೆಂದರೆ, ಐದು ವಿಭಾಗವಾಗಿದ್ದರೂ
ಹಗೆ ಸಾಧಿಸಿದ ಬಹಮನಿ ಸುಲ್ತಾನರು, ಸಾಳುವ ನರಸಿಂಹರಾಯನ ಕಾಲದಿಂದಲೂ ಸಂಘರ್ಷದಲ್ಲಿ ತೊಡಗಿದ್ದ ಒರಿಸ್ಸಾದ
ಗಜಪತಿ, ಹಾಗೂ ತಮ್ಮ ಪ್ರಬಲ ನೌಕಾಪಡೆಯ ಕಾರಣದಿಂದ ಕಡಲ ವ್ಯಾಪಾರವನ್ನು ನಿಯಂತ್ರಿಸುತ್ತಿದ್ದ, ಹಾಗೂ
ದಿನೇ ದಿನೇ ಬಲಕಾಯಿಸುತ್ತಿದ್ದ ಪೋರ್ಚುಗೀಸರು. ಇವರಲ್ಲದೇ, ಉಮ್ಮತ್ತೂರು ಪಾಳೆಯಗಾರ, ಕೊಂಡವೀಡಿನ
ರೆಡ್ಡಿರಾಜು ಮತ್ತು ಭುವನಗಿರಿಯ ವೇಲಮರೊಂದಿಗೂ ಆಗಾಗ ಕಾಳಗಗಳಾಗುತ್ತಿದ್ದವು.
ದಕ್ಖನಿನಲ್ಲಿ ಜಯ: ದಕ್ಖನ್ ಸುಲ್ತಾನರಿಂದ ವರ್ಷಕ್ಕೊಮ್ಮೆಯಂತೆ
ನಡೆಯುತ್ತಿದ್ದ, ವಿಜಯನಗರದ ಹಳ್ಳಿ, ಪಟ್ಟಣಗಳ ಮೇಲಿನ ಧಾಳಿ, ಲೂಟಿ ಇತ್ಯಾದಿಗಳು ಈತನ ಕಾಲದಲ್ಲಿ ಕೊನೆಗೊಂಡವು.
೧೫೦೯ರಲ್ಲಿ, ದಿವಾನಿ ಎಂಬಲ್ಲಿ ನಡೆದ ಯುದ್ಧದಲ್ಲಿ ಬಿಜಾಪುರದ ಸುಲ್ತಾನ್ ಮಹಮೂದ್ ತೀವ್ರವಾಗಿ ಗಾಯಗೊಂಡು
ಸೋಲೊಪ್ಪಿದನು. ಯೂಸುಫ್ ಆದಿಲ್ ನನ್ನು ಕೊಂದು ಅವನ ರಾಜ್ಯವನ್ನು ಸ್ವಾಧೀನಪಡಿಸಿಕೊಳ್ಳಲಾಯಿತು.
ಈ ವಿಜಯದಿಂದ ಸ್ಪೂರ್ತಿಗೊಂಡು ಮತ್ತು ಬಹಮನಿ ಸುಲ್ತಾನರ
ಒಳಜಗಳದ ಲಾಭ ಪಡೆದ ಕೃಷ್ಣದೇವರಾಯನು ಬೀದರ್, ಗುಲ್ಬರ್ಗಾ ಮತ್ತು ಬಿಜಯಪುರಗಳ ಮೇಲೆ ಧಾಳಿ ಮಾಡಿದನು.
ಅಲ್ಲಿ ಸುಲ್ತಾನ್ ಮಹಮೂದನನ್ನು ಬಿಡುಗಡೆ ಮಾಡಿ ಆತನನ್ನು , ಅಲ್ಲಿಯ ವಸ್ತುತಃ ಆಡಳಿತಗಾರನಾಗಿ ಮಾಡಿ
"ಯವನ ಸಾಮ್ರಾಜ್ಯ ಪ್ರತಿಷ್ಠಾಪಕ" ಎಂಬ ಬಿರುದನ್ನು ಗಳಿಸಿದನು. ಗೊಲ್ಕೊಂಡಾ ಸುಲ್ತಾನ
ಕುಲಿ ಕುತ್ಬ್ ಷಾನನ್ನು ಕೃಷ್ಣದೇವರಾಯನ ಮಂತ್ರಿ ತಿಮ್ಮರಸ ಸೋಲಿಸಿದನು.
ಸಾಮಂತರ ಜೊತೆ ಯುದ್ಧ: ಸ್ಥಳೀಯ ಪಾಳೆಯಗಾರರು ಮತ್ತು ಭುವನಗಿರಿಯ ವೇಲಮನ
ಮೇಲೆ ಆಕ್ರಮಣ ಮಾಡಿ ಗೆದ್ದು , ತನ್ನ ರಾಜ್ಯವನ್ನು ಕೃಷ್ಣಾ ನದಿಯವರೆಗೂ ವಿಸ್ತರಿಸಿದನು. ಕಾವೇರಿ
ದಡದಲ್ಲಿ ನಡೆದ ಯುದ್ಧದಲ್ಲಿ ಉಮ್ಮತ್ತೂರಿನ ದೊರೆ ಗಂಗರಾಜನನ್ನು ಸೋಲಿಸಿದನು. ೧೫೧೨ರಲ್ಲಿ ಗಂಗರಾಜನು
ಕಾವೇರಿಯಲ್ಲಿ ಮುಳುಗಿ ಅಸುನೀಗಿದ. ಈ ಪ್ರದೇಶ ಶ್ರೀರಂಗಪಟ್ಟಣ ಪ್ರಾಂತ್ಯದ ಒಂದು ಭಾಗವಾಯಿತು. ೧೫೧೬-೧೭ರಲ್ಲಿ
ಅವನ ರಾಜ್ಯ ದ ಗಡಿಯು ಗೋದಾವರಿ ನದಿಯನ್ನು ದಾಟಿತು.
ಕಳಿಂಗ ಯುದ್ಧ: ಗಜಪತಿಗಳ ರಾಜ್ಯ ವಿಶಾಲವಾಗಿದ್ದು ಇಂದಿನ ಆಂಧ್ರ
ಮತ್ತು ತೆಲಂಗಾಣ ಪ್ರದೇಶ ಹಾಗೂ ಸಂಪೂರ್ಣ ಒರಿಸ್ಸಾವನ್ನು ಒಳಗೊಂಡಿತ್ತು. ಉಮ್ಮತ್ತೂರಿನ ಯಶಸ್ಸಿನಿಂದ
ಉತ್ತೇಜಿತನಾದ ಕೃಷ್ಣದೇವರಾಯನು ಗಜಪತಿ ಪ್ರತಾಪ ರುದ್ರದೇವನ ಸ್ವಾಧೀನದಲ್ಲಿದ್ದ ತೆಲಂಗಾಣ ಪ್ರದೇಶದತ್ತ
ತನ್ನ ದೃಷ್ಟಿಯನ್ನು ತಿರುಗಿಸಿದನು. ವಿಜಯನಗರ ಸೈನ್ಯವು ೧೫೧೨ರಲ್ಲಿ ಉದಯಗಿರಿ ಕೋಟೆಗೆ ಮುತ್ತಿಗೆ
ಹಾಕಿತು. ಒಂದು ವರ್ಷದವರೆಗೂ ನಡೆದ ಈ ಮುತ್ತಿಗೆಯಲ್ಲಿ ಕೊನೆಗೂ ಗಜಪತಿಯ ಸೈನ್ಯ ಹಸಿವಿನಿಂದ ಶಿಥಿಲವಾಗತೊಡಗಿತು.
ಇದೇ ಸಮಯದಲ್ಲಿ ಕೃಷ್ಣದೇವರಾಯನು ಪತ್ನಿಯರಾದ ತಿರುಮಲಾ
ದೇವಿ ಮತ್ತು ಚಿನ್ನಮ ದೇವಿಯರೊಂದಿಗೆ ತಿರುಪತಿಯಲ್ಲಿ ತಿಮ್ಮಪ್ಪನ ದರ್ಶನ ಮಾಡಿದನು. ಇದರ ನಂತರ ಗಜಪತಿಯ
ಸೇನೆ ಕೊಂಡವೀಡುರಾಜು ಎಂಬಲ್ಲಿ ವಿಜಯನಗರ ಸೇನೆಗೆ ಎದುರಾಯಿತು. ಕೆಲವು ತಿಂಗಳುಗಳಿಂದ ಮುತ್ತಿಗೆ ಹಾಕಿದ್ದರೂ,
ಕೆಲವು ಮೊದಮೊದಲ ಸೋಲುಗಳ ನಂತರ ವಿಜಯನಗರ ಸೇನೆ ರಣರಂಗದಿಂದ ಹಿಂದೆಗೆಯಲಾರಂಭಿಸಿತು.
ಅದೇ ಸಮಯದಲ್ಲಿ ತಿಮ್ಮರಸು ಕಂಡುಹಿಡಿದ ಕಾವಲಿಲ್ಲದ ಪೂರ್ವದ
ದ್ವಾರದ ರಹಸ್ಯಒಳದಾರಿಯ ಮೂಲಕ ಒಳನುಗ್ಗಿದ ವಿಜಯನಗರದ ಸೇನೆ ಕೋಟೆಯನ್ನು ಗೆದ್ದು, ಆಕಾಲದ ಅತಿಸಮರ್ಥ
ಕತ್ತಿವರಸೆಗಾರ ಎಂದು ಹೆಸರಾಗಿದ್ದ , ಪ್ರತಾಪರುದ್ರದೇವನ ಮಗ, ಯುವರಾಜ ವೀರಭದ್ರನನ್ನು ಸೆರೆಹಿಡಿಯಿತು.
ಈ ವಿಜಯದ ನಂತರ ತಿಮ್ಮರಸು ಕೊಂಡವೀಡು ಪ್ರಾಂತದ ಮಾಂಡಲೀಕನಾಗಿ ನೇಮಕಗೊಂಡ.
ಮುಂದೆ ವಿಜಯನಗರ ಸೇನೆಯು ಕೊಂಡಪಲ್ಲಿ ಪ್ರದೇಶದಲ್ಲಿ ಗಜಪತಿ
ಸೇನೆಯನ್ನು ಮತ್ತೊಮ್ಮೆ ಮುತ್ತಿತು. ಉತ್ಕಲ-ಕಳಿಂಗದ ಮೇಲೆ ನೇರ ದಾಳಿ ಮಾಡಿ ವಶಪಡಿಸಿಕೊಳ್ಳಬೇಕೆಂದಿದ್ದ
ಕೃಷ್ಣದೇವರಾಯನ ರಣತಂತ್ರಕ್ಕೆ ಪ್ರತಿಯಾಗಿ ಪ್ರತಾಪರುದ್ರದೇವನು ಕೃಷ್ಣದೇವರಾಯನನ್ನು ಅವನ ಸೇನೆಯೊಂದಿಗೆ
ಹೀನಾಯವಾಗಿ ಸೋಲಿಸುವ ಪ್ರತಿಯೋಜನೆ ಹಾಕಿದನು. ಈ ಯೋಜನೆಯ ಪ್ರಕಾರ ಇವೆರಡು ಸೇನೆಗಳು ಕಳಿಂಗನಗರದಲ್ಲಿ
ಸಂಧಿಸಬೇಕಾಗಿತ್ತು.
ಆದರೆ , ಈ ಮಾಹಿತಿಯನ್ನು ಚಾಣಾಕ್ಷ ತಿಮ್ಮರಸು ಪ್ರತಾಪರುದ್ರದೇವನ
ಪಕ್ಷ ತ್ಯಜಿಸಿದ ತೆಲುಗು ಭಾಷಿಕನೊಬ್ಬನಿಗೆ ಲಂಚ ಕೊಟ್ಟು ಸಂಪಾದಿಸಿದನು. ಪ್ರತಾಪರುದ್ರನ ಯೋಜನೆ ನಡೆಯದೆ,
ಆತ ತನ್ನ ರಾಜಧಾನಿಯತ್ತ ಹಿಮ್ಮೆಟ್ಟಬೇಕಾಯಿತು. ಕೊನೆಗೂ ಆತ ವಿಜಯನಗರ ಸೇನೆಗೆ ಶರಣಾಗಿ, ತನ್ನ ಮಗಳನ್ನು
ಕೃಷ್ಣದೇವರಾಯನಿಗೆ ಕೊಟ್ಟು ಮದುವೆಮಾಡಿದ. ಇದರ ನಂತರ ಭಾರತದ ಎರಡು ಪ್ರಬಲ ಹಿಂದೂ ಸಾಮ್ರಾಜ್ಯಗಳ ನಡುವೆ
ಶಾಂತಿ ಸಾಮರಸ್ಯ ನೆಲೆಸಿ ಸನಾತನ ಧರ್ಮ ಸುರಕ್ಷಿತವಾಯಿತು.
೧೫೧೦ರಲ್ಲಿ ಗೋವಾದಲ್ಲಿ ಡೊಮಿನಿಯನ್ ಸ್ಥಾಪಿಸಿದ ಪೋರ್ಚುಗೀಸರೊಂದಿಗೆ
ಶ್ರೀಕೃಷ್ಣದೇವರಾಯನು ಸ್ನೇಹ ಸಂಬಂಧಗಳನ್ನು ಬೆಳೆಸಿದನು. ಪೋರ್ಚುಗೀಸ್ ವ್ಯಾಪಾರಿಗಳಿಂದ ಬಂದೂಕು ಮತ್ತು
ಅರಬ್ಬೀ ಕುದುರೆಗಳನ್ನು ಪಡೆದುಕೊಂಡದ್ದಷ್ಟೇ ಅಲ್ಲದೆ . ಪೋರ್ಚುಗೀಸ್ ಪರಿಣತಿಯನ್ನು ಉಪಯೋಗಿಸಿಕೊಂಡು
ವಿಜಯನಗರ ನಗರಕ್ಕೆ ನೀರು ಸರಬರಾಜು ಯೋಜನೆಯ ಸುಧಾರಣೆ ಮಾಡಿದನು.
ಅಂತಿಮ ಸಂಘರ್ಷ: ಐವರು ದಖ್ಖನ್ ಸುಲ್ತಾನರೊಂದಿಗೆ ವಿಜಯನಗರ
ಸಾಮ್ರಾಜ್ಯಕ್ಕಿದ್ದ ಸಂಬಂಧ ದಿನಗಳೆದಂತೆ ಹಳಸಲು ಶುರುವಾದ ಕಾರಣ ವಿಜಯನಗರ ಸಾಮ್ರಾಜ್ಯ ದಖ್ಖನ್ ಸುಲ್ತಾನರ
ವಿರುದ್ಧ ಸಿಟ್ಟಿಗೆದ್ದು ನಿಂತಿತು. ಇದೇ ಸಂಧರ್ಭದಲ್ಲಿ ಕೃಷ್ಣದೇವರಾಯನು ಗೋಲ್ಕೊಂಡವನ್ನು ಗೆದ್ದು
ಅದರ ಸಾಮಂತನಾಗಿದ್ದ ಮುದುರುಲ್-ಮುಲ್ಕ್ ನನ್ನು ಸೆರೆ ಹಿಡಿದನು. ಇನ್ನೂ ಮುಂದುವರೆದು ಬಹಮನಿ ಸುಲ್ತಾನರ
ಪರವಾಗಿ ಬಿಜಾಪುರದ ಮೇಲೆ ದಾಳಿ ನಡೆಸಿ ಅಲ್ಲಿ ರಾಜ್ಯವಾಳುತ್ತಿದ್ದ ಸುಲ್ತಾನ್ ಇಸ್ಮಾಯಿಲ್ ಆದಿಲ್
ಷಾ ನನ್ನು ಸೋಲಿಸಿ ಗೆದ್ದ ರಾಜ್ಯವನ್ನು ಬಹಮನಿ ಸುಲ್ತಾನ ಮುಹಮ್ಮದ್ ಷಾ ನಿಗೆ ವಹಿಸಿ ತಾನು ವಿಜಯನಗರಕ್ಕೆ
ಹಿಂದಿರುಗುತ್ತಾನೆ.
ದಖ್ಖನ್ ಸುಲ್ತಾನರೊಂದಿಗಿನ ಕಾಳಗದಲ್ಲಿ ಮುಖ್ಯವೆನಿಸುವ
ಘಟನೆಯೆಂದರೆ ೧೫೨೦ರ ಮೇ ೧೯ ರಂದು ಬಿಜಾಪುರವನ್ನು ಆಳುತ್ತಿದ್ದ ಇಸ್ಮಾಯಿಲ್ ಆದಿಲ್ ಷಾ ನಿಂದ ರಾಯಚೂರು
ಕೋಟೆಯನ್ನು ವಶಪಡಿಸಿಕೊಂಡಿದ್ದು. ಅತಿ ಪ್ರಯಾಸದಿಂದ ನಡೆದ ಈ ಯುದ್ಧದಲ್ಲಿ ವಿಜಯನಗರ ಸಾಮ್ರಾಜ್ಯ ತನ್ನ
೧೬,೦೦೦ ಸೈನಿಕರನ್ನು ಕಳೆದುಕೊಂಡು ರಾಯಚೂರು ಕೋಟೆ ಕೈವಶ ಮಾಡಿಕೊಳ್ಳುವಲ್ಲಿ ಯಶಸ್ವಿಯಾಯಿತು. ಈ ಯುದ್ಧದಲ್ಲಿ
ಚತುರತೆ ಮೆರೆದು ಗೆಲುವಿಗೆ ಕಾರಣನಾದ ವಿಜಯನಗರದ ಮುಖ್ಯ ಸೇನಾಧಿಕಾರಿ ಪೆಮ್ಮಸಾನಿ ರಾಮಲಿಂಗ ನಾಯ್ಡು
ಅರಸರ ಪ್ರೀತ್ಯಾದರಗಳನ್ನು ಗಳಿಸಿದ, ಶ್ರೀ ಕೃಷ್ಣದೇವರಾಯರು ಆತನನ್ನು ಸೂಕ್ತ ಸನ್ಮಾನದೊಂದಿಗೆ ಗೌರವಿಸಿದರು.
ಒಂದು ಅಂದಾಜಿನ ಪ್ರಕಾರ ರಾಯಚೂರಿಗಾಗಿ ನಡೆದ ಕಾಳಗದಲ್ಲಿ
ಸುಮಾರು ೭೦೩,೦೦೦ ಪದಾತಿ ದಳದ ಸೈನಿಕರು, ೩೨,೬೦೦ ಅಶ್ವದಳದ ಸೈನಿಕರು ಹಾಗು ೫೫೧ ಗಜ ಪಡೆಯ ಸೈನಿಕರು
ಆಹುತಿಯಾದರೆಂದು ತಿಳಿದುಬರುತ್ತದೆ(ರಾಯಚೂರು ಯುದ್ಧದ ವಿವರಗಳಿಂದ). ಕಟ್ಟ ಕಡೆಯದಾಗಿ ತನ್ನ ಕೊನೆಯ
ಯುದ್ಧದಲ್ಲಿ ಕೃಷ್ಣದೇವರಾಯನು ಹಿಂದೆ ಬಹಮನಿ ಸುಲ್ತಾನರ ಕೇಂದ್ರ ಸ್ಥಾನವಾಗಿದ್ದ ಗುಲ್ಬರ್ಗಾ ಕೋಟೆಯನ್ನು
ವಶಪಡಿಸಿಕೊಳ್ಳುವ ಮೂಲಕ ದಕ್ಷಿಣ ಭಾರತದಾದ್ಯಂತ ತನ್ನ ವಿಜಯ ಪತಾಕೆ ಹಾರಿಸಿ ಇಡೀ ದಕ್ಷಿಣ ಭಾರತವನ್ನು
ತನ್ನ ಸಾಮ್ರಾಜ್ಯದ ಅಡಿಯಲ್ಲಿ ತಂದನು.
೧೫೨೪ರಲ್ಲಿ ಶ್ರೀ ಕೃಷ್ಣದೇವರಾಯನು ತನ್ನ ಪುತ್ರ ತಿರುಮಲರಾಯನಿಗೆ
ಪಟ್ಟ ಕಟ್ಟುವ ಮೂಲಕ ಅರಸನ ಪಟ್ಟಕ್ಕೇರಿಸಿದನು. ಇನ್ನೂ ಬಾಲ್ಯಾವಸ್ಥೆಯಲ್ಲಿದ್ದ ತಿರುಮಲರಾಯನಿಗೆ ಪಿತೂರಿ
ನಡೆಸಿ ದುಷ್ಕರ್ಮಿಗಳು ವಿಷ ಪ್ರಾಶನ ಮಾಡಿಸಿ ಕೊಂದುಬಿಟ್ಟರು. ಆದ ಕಾರಣ ಕೃಷ್ಣದೇವರಾಯನ ಪುತ್ರ ಸಿಂಹಾಸನದಲ್ಲಿ
ಹೆಚ್ಚು ದಿನ ಉಳಿಯಲಾಗಲಿಲ್ಲ. ತನ್ನ ಪುತ್ರನ ಅಕಾಲಿಕ ಮರಣದಿಂದ ಆಘಾತಕ್ಕೊಳಗಾದ ಕೃಷ್ಣದೇವರಾಯನು ಬಹಳ
ಕುಸಿದು ಹೋದನು ಹಾಗು ದಿನೇ ದಿನೇ ಕೃಶವಾಗುತ್ತಾ ಹೋದನು. ತಿರುಮಲರಾಯನ ಕಗ್ಗೊಲೆಯ ವಿಚಾರವಾಗಿ ನ್ಯಾಯಸ್ಥಾನದಲ್ಲಿ
ವಿಚಾರಣೆ ನಡೆಸಿ ವಿಜಯನಗರದ ಪ್ರಧಾನಮಂತ್ರಿ ತಿಮ್ಮರಸುವಿಗೆ ತಪ್ಪಾಗಿ ಕಣ್ಣು ಕೀಳಿಸುವ ಶಿಕ್ಷೆ ವಿಧಿಸಲಾಯಿತು.
ಇದನ್ನು ತಡೆಯಲು ಶ್ರೀ ಕೃಷ್ಣದೇವರಾಯರು ಬಹಳ ಪ್ರಯತ್ನ ಪಟ್ಟರಾದರೂ ಅಷ್ಟರಲ್ಲಿ ಕಾಲ ಮಿಂಚಿ ಹೋಗಿತ್ತು.
ಶ್ರೀ ಕೃಷ್ಣ ದೇವರಾಯನನ್ನು ಸಿಂಹಾಸನದಲ್ಲಿ ಕುಳ್ಳಿರಿಸಲು ಅವಿರತ ಪ್ರಯತ್ನ ನಡೆಸಿ ಯಶಸ್ವಿಯಾಗಿದ್ದ
ತಿಮ್ಮರಸು ವಿಜಯನಗರ ಸಾಮ್ರಾಜ್ಯದ ಹಿತೈಷಿಯಾಗಿದ್ದರೇ ಹೊರತು ದ್ವೇಷಿಯಾಗಿರಲಿಲ್ಲ. ತಿಮ್ಮರಸುವಿನ
ಕಣ್ಣುಗಳನ್ನು ಕಿತ್ತ ಸುದ್ದಿ ತಿಳಿದಂತೆಯೇ ಶ್ರೀ ಕೃಷ್ಣದೇವರಾಯರು ಕುಸಿದು ಹೋದರು.ಅದೇ ಸಮಯದಲ್ಲಿ
ಬಹಮನಿ ಸುಲ್ತಾನರ ವಶದಲ್ಲಿದ್ದ ಬೆಳಗಾವಿಯನ್ನು ವಶಪಡಿಸಿಕೊಳ್ಳುವ ಕನಸು ಕೃಷ್ಣದೇವರಾಯರಿಗಿದ್ದರೂ
ಅದು ಸಾಧ್ಯವಾಗದೆ ಆಘಾತಗಳ ಮೇಲೆ ಆಘಾತ ಬಂದೆರಗಿ ಅನಾರೋಗ್ಯಕ್ಕೆ ತುತ್ತಾದರು. ಆದರೆ ಕೃಷ್ಣ ದೇವರಾಯರು
ಅನಾರೋಗ್ಯದಿಂದ ಹೊರಬರಲಾಗದೆ ೧೫೨೯ರಲ್ಲಿ ತಮ್ಮ ಇಹಲೋಕ ಯಾತ್ರೆ ಮುಗಿಸಿದರು.
ಸಾವಿಗೆ ಮುನ್ನವೇ ಕೃಷ್ಣದೇವರಾಯ ತನ್ನ ಸಹೋದರ ಅಚ್ಯುತ
ರಾಯನಿಗೆ ತನ್ನ ಸಾಮ್ರಾಜ್ಯಾಧಿಕಾರಗಳನ್ನು ವಹಿಸಿಕೊಟ್ಟನು ಹಾಗು ವಿಜಯನಗರದ ಇತಿಹಾಸದ ಪುಟದಲ್ಲಿ ಕೃಷ್ಣದೇವರಾಯನು
ತನ್ನ ಸುಭೀಕ್ಷ ಆಳ್ವಿಕೆಯಿಂದಲೇ ಅಜರಾಮರನಾದನು.ಇಂದಿಗೂ ಕರ್ನಾಟಕದ ಹಂಪಿಯಲ್ಲಿರುವ ಅವಶೇಷಗಳು ವಿಜಯನಗರದ
ಗತ ವೈಭವವನ್ನು ಸಾರಿ ಹೇಳುತ್ತಿವೆ.
ಮೈಸೂರು
ವಿಶ್ವವಿದ್ಯಾನಿಲಯ ವಿಶ್ವಕೋಶದಿಂದ ಸಂಗ್ರಹಿತ
ವಿಜಯನಗರ ಸಾಮ್ರಾಜ್ಯದ
ಅರಸು ಮನೆತನಗಳಲ್ಲಿ ಮೂರನೆಯದಾದ ತುಳುವ ವಂಶಕ್ಕೆ ಸೇರಿದ ಮತ್ತು ಆ ಸಾಮ್ರಾಜ್ಯದ ಇತಿಹಾಸದಲ್ಲಿ
ಅತ್ಯಂತ ಪ್ರಸಿದ್ಧನಾದ ಚಕ್ರವರ್ತಿ. ಇವನ ಆಳ್ವಿಕೆಯ ಕಾಲ
1509-1529. ಧರ್ಮರಕ್ಷಣೆಗಾಗಿ
ಸ್ಥಾಪಿತವಾದ ವಿಜಯನಗರ ಸಾಮ್ರಾಜ್ಯ ಕೃಷ್ಣದೇವರಾಯನ ಕಾಲದಲ್ಲಿ ತನ್ನ ಧ್ಯೇಯವನ್ನು ಸಾಧಿಸಿತಲ್ಲದೆ
ಉನ್ನತ ಕೀರ್ತಿಯನ್ನೂ ಪಡೆಯಿತು. ಪೇಸ್, ನ್ಯೂನಿಜ್, ಬರ್ಬೊಸ ಮೊದಲಾದ ಪೋರ್ಚುಗೀಸ್ ಪ್ರವಾಸಿಗಳು ಇವನ ಆಸ್ಥಾನದಲ್ಲಿದ್ದು, ರಾಜನ
ವ್ಯಕ್ತಿತ್ವ ಮತ್ತು ವೈಭವಗಳನ್ನು ಕಣ್ಣಾರೆ ಕಂಡು ಅವನ್ನು ವಿವರವಾಗಿ
ವರ್ಣಿಸಿದ್ದಾರೆ. ದೊರೆ ಸ್ಫುರದ್ರೂಪಿ. ಆತ
ಎತ್ತರವಾಗಿಲ್ಲದಿದ್ದರೂ ನಿತ್ಯವೂ ಗರಡಿ ಸಾಧನೆ ಮಾಡುತ್ತಿದ್ದುದರಿಂದ
ಬಲವಾದ ಮೈಕಟ್ಟು ಪಡೆದಿದ್ದ. ಮುಖದಲ್ಲಿ ಸಿಡುಬಿನ ಕಲೆಗಳಿದ್ದರೂ ವರ್ಚಸ್ಸು ತುಂಬಿತ್ತು. ವಿದೇಶಿಯರಲ್ಲಿ ಇವನಿಗೆ ತುಂಬ ಗೌರವವಿತ್ತೆಂದೂ ಈತ
ನ್ಯಾಯಪರನೆಂದೂ ಹೇಳಲಾಗಿದೆ. ಕತ್ತಿವರಸೆ, ಕುದುರೆ ಸವಾರಿ, ಕುಸ್ತಿ ಇವು ಈತನ ದಿನಚರಿಗಳಾಗಿದ್ದುವು.
ಈತ ಸೂರ್ಯೋದಯಕ್ಕೆ ಮುಂಚೆಯೇ ಅಂಗಸಾಧನೆಗಳಲ್ಲಿ ನಿರತನಾಗುತ್ತಿದ್ದ. ಕೆಲವು ಬಾರಿ ಮುಂಗೋಪಿಯಾದರೂ ಕಾಲವನ್ನು
ವ್ಯರ್ಥಮಾಡದೆ ಯಾವಾಗಲೂ ಜನರ ಯೋಗಕ್ಷೇಮವನ್ನೇ ಚಿಂತಿಸುತ್ತಿದ್ದ-ಇದು ಪೇಸನ ಬರಹಗಳಿಂದ
ತಿಳಿದುಬಂದಿರುವಂತೆ ಕೃಷ್ಣದೇವರಾಯನ ವ್ಯಕ್ತಿತ್ವ. ಇವನ ರಾಜ್ಯಾರೋಹಣದ ವಿಷಯವಾಗಿ
ಜನಜನಿತವಾದ ಕಥೆಯೊಂದಿದೆ. ರಾಯನಿಗಿಂತ ಹಿಂದೆ ದೊರೆಯಾಗಿದ್ದ ಆತನ ಹಿರಿಯ ಮಲಸೋದರ ಇಮ್ಮಡಿ ನರಸಿಂಹ ತನ್ನ 8 ವರ್ಷದ ಮಗನಿಗೆ ಪಟ್ಟ ಕಟ್ಟುವ ಸಲುವಾಗಿ,
ಬಲತಮ್ಮನಾದ ಕೃಷ್ಣದೇವನನ್ನು ಕೊಂದು ಅವನ ಕಣ್ಣುಗುಡ್ಡೆಗಳನ್ನು ತನಗೆ ತೋರಿಸುವಂತೆ
ಮಂತ್ರಿ ಸಾಳುವ ತಿಮ್ಮರಸನಿಗೆ ಆಜ್ಞಾಪಿಸಿದುದಾಗಿಯೂ ಮಂತ್ರಿ ಇವನನ್ನು ಗೋಪ್ಯವಾಗಿಟ್ಟು ಮೇಕೆಯ ಕಣ್ಣುಗುಡ್ಡೆಗಳನ್ನು ದೊರೆಗೆ ತೋರಿಸಿದನೆಂದೂ ನರಸಿಂಹ ನೆಮ್ಮದಿಯಿಂದ ಸತ್ತ ಅನಂತರ ಕೃಷ್ಣದೇವನಿಗೆ
ಪಟ್ಟಕಟ್ಟಿದುದಾಗಿಯೂ ಈ ಕಥೆ ತಿಳಿಸುತ್ತದೆ.
ಇದನ್ನು ನ್ಯೂನಿಜ್ ಬರೆದಿಟ್ಟಿದ್ದಾನೆ. ಆದರೆ ಇದನ್ನು ಸಮರ್ಥಿಸುವ
ಐತಿಹಾಸಿಕ ದಾಖಲೆಗಳು ಯಾವುವೂ ದೊರಕಿಲ್ಲ. ಆ ಸೋದರರಲ್ಲಿ ಅನ್ಯೋನ್ಯತೆ
ಇದ್ದುದಾಗಿಯೂ ತಿಳಿದು ಬರುತ್ತದೆ.
ಕೃಷ್ಣದೇವರಾಯ ಪಟ್ಟಕ್ಕೆ ಬಂದೊಡನೆ
ಸೈನ್ಯವನ್ನು ಸುವ್ಯವಸ್ಥೆಗೊಳಿಸಿ ಯುದ್ಧ ನಿರತನಾಗಬೇಕಾಯಿತು. ದಕ್ಷಿಣದಲ್ಲಿ ಉಮ್ಮತ್ತೂರಿನ ಗಂಗರಾಜನ ಮೇಲೆ ಮಾಡಿದ ಯುದ್ಧದಲ್ಲಿ
(1510-1512) ಉಮ್ಮತ್ತೂರು,
ಪೆನುಗೊಂಡೆ, ಶಿವಸಮುದ್ರ ಮತ್ತು ಶ್ರೀರಂಗಪಟ್ಟಣಗಳು ಇವನ ವಶವಾದುವು. ಈ
ಪ್ರದೇಶಗಳನ್ನು ಶ್ರೀರಂಗಪಟ್ಟಣ ಪ್ರಾಂತ್ಯವನ್ನಾಗಿ ಮಾಡಲಾಯಿತು. ಅನಂತರ ಈತ ಪೂರ್ವ ದೇಶಕ್ಕೆ
ನುಗ್ಗಿ ಕೊಂಡವೀಡು, ಉದಯಗಿರಿ ಕೋಟೆಗಳನ್ನು ಹಿಡಿದು, ಪ್ರತಾಪರುದ್ರ ಗಜಪತಿಯನ್ನು ಸೋಲಿಸಿ, ಅವನ ಮಗಳಾದ ಜಗನ್ಮೋಹಿನಿಯನ್ನು
ಮದುವೆಯಾದ. ಈ ವಿಜಯದ ಅನಂತರ
1514ರಲ್ಲಿ ತಿರುಮಲೈಗೆ ಹೋಗಿ ಶ್ರೀ ವೆಂಕಟೇಶ್ವರನಿಗೆ
ಕಾಣಿಕೆ ಸಲ್ಲಿಸಿದ. ಆ ಸಂದರ್ಭದಲ್ಲಿ ಮಾಡಿಸಲಾದ
ಈತನ ಮತ್ತು ರಾಣಿಯರಾದ ತಿರುಮಲಾದೇವಿ ಮತ್ತು ಚಿನ್ನಾದೇವಿಯರ ಪ್ರತಿಮೆಗಳು ಈಗಲೂ ಆ ದೇವಸ್ಥಾನದಲ್ಲಿವೆ.
ಮಾಧ್ವ ಯತಿಗಳಾದ ಶ್ರೀ ವ್ಯಾಸರಾಯರು ಆ
ಸಂದರ್ಭವನ್ನು ಕೊಂಡಾಡಿ ದೇವರನಾಮಗಳನ್ನು ರಚಿಸಿದ್ದಾರೆ. 1520ರಲ್ಲಿ ನಡೆದ ರಾಯಚೂರು ಯುದ್ಧದಲ್ಲಿ
ಕೃಷ್ಣದೇವರಾಯನಿಂದ ಬಿಜಾಪುರ ಸುಲ್ತಾನ ಸಂಪೂರ್ಣವಾಗಿ ಸೋತ. ಕರ್ಣಾಟಕ ಸಾಮ್ರಾಜ್ಯದ
ಎಲ್ಲೆಗಳು ಉತ್ತರದಲ್ಲಿ ಕೃಷ್ಣಾ ಗೋದಾವರಿಗಳವರೆಗೂ ಪೂರ್ವಪಶ್ಚಿಮಗಳಲ್ಲಿ ಸಮುದ್ರತೀರದವರೆಗೂ ದಕ್ಷಿಣದಲ್ಲಿ ಕನ್ಯಾಕುಮಾರಿಯವರೆಗೂ ವಿಸ್ತರಿಸಿ ದಕ್ಷಿಣ ಭಾರತದಲ್ಲಿ ಶಾಂತಿ ನೆಲಸಿತು. ಪೂರ್ವ ಪಶ್ಚಿಮ ದಕ್ಷಿಣ ಸಮುದ್ರಾಧೀಶ್ವರ ಎಂಬ ಬಿರುದು ಕೃಷ್ಣದೇವರಾಯನಿಗೆ
ಸಾರ್ಥಕವಾಯಿತು.
ಕೃಷ್ಣದೇವರಾಯ ಪ್ರಖ್ಯಾತನಾಗಿರುವುದು ತನ್ನ ವಿಜಯಯಾತ್ರೆಗಳಿಗಿಂತ
ಅಧಿಕವಾಗಿ ತಾನು ಸಂಸ್ಕೃತಿಗೆ ಕೊಟ್ಟ
ಪ್ರೋತ್ಸಾಹದಿಂದಾಗಿ. ಈತ ಮಹಮ್ಮದೀಯರಿಂದ ನಾಶವಾಗಿದ್ದ
ಸುಪ್ರಸಿದ್ಧ ಹಿಂದೂ ದೇವಾಲಯಗಳ ಜೀರ್ಣೋದ್ಧಾರ ಮಾಡಿ, ಹಿಂದೂಧರ್ಮದ ಪುನರೇಳಿಗೆಗೆ ಕಾರಣನಾದ. ಉದಯಗಿರಿಯಿಂದ ಬಾಲಗೋಪಾಲವಿಗ್ರಹವನ್ನು ತರಿಸಿ ರಾಜಧಾನಿಯಲ್ಲಿ ಪ್ರತಿಷ್ಠಿಸಿದುದಲ್ಲದೆ, ಹಂಪಿಯ ವಿಜಯವಿಠಲಸ್ವಾಮಿಯ ಕಲಾಪೂರ್ಣವಾದ ದೇವಾಲಯವನ್ನು ಕಟ್ಟಿಸಿದ. ಈತ ಎಲ್ಲ ಮತಗಳಿಗೂ
ಆಶ್ರಯದಾತನಾಗಿದ್ದ. ಮಾಧ್ವ ಗುರು ವ್ಯಾಸರಾಯರು ವೈಷ್ಣವಮತವನ್ನೂ
ಶ್ರೀವೈಷ್ಣವ ಗುರು ತಾತಾಚಾರ್ಯರು ಶ್ರೀವೈಷ್ಣವ
ಮತವನ್ನೂ ವಲ್ಲಭಾಚಾರ್ಯರು ಶುದ್ಧಾದ್ವೈತ ಮತವನ್ನೂ ಪ್ರಚಾರ ಮಾಡಿದರು. ಪಂಡಿತರಿಂದಲೂ ಕವಿಗಳಿಂದಲೂ ಇವನ ಆಸ್ಥಾನ ತುಂಬಿತ್ತು.
ತೆಲುಗು ಸಾಹಿತ್ಯ ಬಹಳ ಮಟ್ಟಿಗೆ ಅಭಿವೃದ್ಧಿ
ಹೊಂದಿತು. ಇವರ ಕಾಲ ಸಾಹಿತ್ಯ
ರಂಗದಲ್ಲಿ ಸ್ವರ್ಣಯುಗವೆಂದು ಪ್ರಸಿದ್ಧವಾಗಿದೆ. ಪ್ರಸಿದ್ಧರಾದ ಅಲ್ಲಸಾನಿಪೆದ್ದನ, ಪಿಂಗಳಿಸೂರನ, ಮಲ್ಲನ, ತಿಮ್ಮನ, ರಾಮಭದ್ರ, ತೆನಾಲಿ ರಾಮಕೃಷ್ಣ, ಧೂರ್ಜಟಿ, ರುದ್ರಕವಿ ಎಂಬ ಅಷ್ಟದಿಗ್ಗಜರು ಇವನ
ಆಸ್ಥಾನವನ್ನು ಅಲಂಕರಿಸಿ ಉದ್ಗ್ರಂಥಗಳನ್ನು ರಚಿಸಿದರು. ಮನುಚರಿತ್ರೆಯನ್ನು ಬರೆದ ಅಲ್ಲಸಾನಿ ಪೆದ್ದನ
ಇವರಲ್ಲಿ ಅಗ್ರಗಣ್ಯ. ಕೃಷ್ಣದೇವರಾಯ ಇತರ ಭಾಷೆಗಳಿಗೂ ಇದೇ
ರೀತಿಯಾದ ಪ್ರೋತ್ಸಾಹ ನೀಡಿದ. ತಿಮ್ಮಕವಿ ಇವನ ಆಶ್ರಯದಲ್ಲಿ ಕನ್ನಡದಲ್ಲಿ
ಗದುಗಿನ ಭಾರತವನ್ನು ಪೂರ್ತಿ ಮಾಡಿದ. ಪುರಂದರದಾಸರು ಅಮೋಘವಾದ ದೇವರನಾಮಗಳನ್ನು ಸೃಷ್ಟಿಸಿದರು. ಸಂಸ್ಕೃತದಲ್ಲಿ ಜಾಂಬವತೀ ಕಲ್ಯಾಣ, ಮದಾಲಸ ಚರಿತ್ರೆ, ಸತ್ಯವಧೂ ಪ್ರೀಣನ, ಸಕಲಕಥಾ ಸಾರಸಂಗ್ರಹಂ, ಜ್ಞಾನಚಿಂತಾಮಣಿ, ರಸಮಂಜರೀ-ಎಂಬ ಗ್ರಂಥಗಳನ್ನೂ ತೆಲುಗಿನಲ್ಲಿ
ಅಮುಕ್ತಮಾಲ್ಯದ ಎಂಬ ಕಾವ್ಯವನ್ನೂ ಕೃಷ್ಣದೇವರಾಯನೇ
ರಚಿಸಿದನೆಂದು ಹೇಳಲಾಗಿದೆ. ಇವುಗಳಲ್ಲಿ ಸದ್ಯಕ್ಕೆ ದೊರಕಿರುವವು ಜಾಂಬವತೀ ಪರಿಣಯ ಮತ್ತು ಅಮುಕ್ತಮಾಲ್ಯದ. ಕೃಷ್ಣದೇವರಾಯನ ವೈಭವ ಭಾರತದ ಚರಿತ್ರೆಯಲ್ಲಿ
ಚಿರಸ್ಮರಣೀಯವಾದುದು.
ಆಮುಕ್ತ ಮಾಲ್ಯದ
ತೆಲುಗಿನ
ಪಂಚಮಹಾಕಾವ್ಯಗಳಲ್ಲೊಂದೆನಿಸಿದ
ಅಮುಕ್ತಮಾಲ್ಯದ ಅದರ ಹೆಸರೇ ಹೇಳುವಂತೆ
ತಾನು ಮುಡಿದ ಹೂವನ್ನು ದೇವರಿಗೆ ಕೊಟ್ಟು ಆತನ ಪ್ರಣಯಪಾತ್ರಳಾಗಿ ಅವನನ್ನೇ
ಮದುವೆಯಾದ ಗೋದಾದೇವಿಯ ಚರಿತ್ರೆಯನ್ನು ಒಳಗೊಂಡ ಗ್ರಂಥ. ವಿಷ್ಣುಚಿತ್ತನೆಂಬ ಭಾಗವತೋತ್ತಮನ ಪುಣ್ಯಕಥೆಯೂ ಇರುವುದರಿಂದ ಗ್ರಂಥಕ್ಕೆ ವಿಷ್ಣುಚಿತ್ತೀಯಮು ಎಂಬ ಪರ್ಯಾಯನಾಮವೂ ಇದೆ.
ವಿಷ್ಣುಚಿತ್ತ ಮತ್ಸ್ಯಧ್ವಜ ಮಹಾರಾಜನ ಆಸ್ಥಾನದಲ್ಲಿ ವಿಷ್ಣುವೇ ಪರದೈವವೆಂಬ ಸಿದ್ಧಾಂತವನ್ನು ಸ್ಥಾಪಿಸಿ ಅನ್ಯವಾದಿಗಳನ್ನು ಗೆದ್ದವನು. ಇವನ ಕಥೆ ಹೇಳಿ
ಶ್ರೀವೈಷ್ಣವ ಮತದ ಪ್ರಾಶಸ್ತ್ಯ ಪ್ರತಿಪಾದನೆ
ಮಾಡಬೇಕೆಂಬುದು ಕವಿಯ ಮುಖ್ಯ ಗುರಿಯಾಗಿದೆ.
ತನ್ನ ಉದ್ದೇಶಕ್ಕೆ ತಕ್ಕಂತೆ ಹರಿಭಕ್ತಿ, ಹರಿಕೀರ್ತನೆ, ಹರಿಕಥಾಶ್ರವಣ-ಇವುಗಳ ಮಹಿಮಾತಿಶಯವನ್ನು ಕಾವ್ಯದುದ್ದಕ್ಕೂ ಕವಿ ಹೊಗಳಿದ್ದಾನಲ್ಲದೆ ಶ್ರೀವೈಷ್ಣವ
ಧರ್ಮದ ಹಿರಿಮೆಯನ್ನು ಬಾಯಿ ತುಂಬ ಕೊಂಡಾಡಿದ್ದಾನೆ.
ಮತ್ಸ್ಯಧ್ವಜನ ಕಥೆ, ಗೋದಾದೇವಿಯ
ಕಥೆ. ಮಾಲದಾಸರಿ ಮತ್ತು ಬ್ರಹ್ಮರಾಕ್ಷಸರ ವೃತ್ತಾಂತ, ಖಾಂಡಿಕ್ಯಕೇಶಿಧ್ವಜರ ಚರಿತ್ರೆ, ವಿಷ್ಣುಚಿತ್ತನ ಭಕ್ತಿಜೀವನ ವೃತ್ತಾಂತ-ಹೀಗೆ ಹಲವು ಕಥೆಗಳನ್ನು
ಒಳಗೊಂಡಿದೆ. ಆದರೆ ಈ ಎಲ್ಲ
ಕಥೆಗಳನ್ನೂ ರಾಯ ಹೇಳಹೊರಟಿರುವುದು ತನಗೆ
ಪೂಜ್ಯವಾದ ಶ್ರೀವೈಷ್ಣವ ಧರ್ಮ ಪ್ರಾಶಸ್ತ್ಯ ಪ್ರತಿಪಾದನೆಯ
ಏಕೈಕ ಧ್ಯೇಯವನ್ನು ಸಾಧಿಸಿಕೊಳ್ಳುವುದಕ್ಕಾಗಿ. ಆದರೆ ಈ ಕಾವ್ಯದಲ್ಲಿ
ತಾನು ಮುಡಿದ ಮಾಲೆಯನ್ನು ದೇವರಿಗೆ ಅರ್ಪಿಸಿ ಅವನ ಪ್ರೇಮಕ್ಕೆ ಪಾತ್ರಳಾದ
ಗೋದಾದೇವಿಗೆ ಹೆಚ್ಚಿನ ಪ್ರಾಶಸ್ತ್ಯ ಕೊಡಲಾಗಿದೆ.
ಏಳು ಆಶ್ವಾಸಗಳಷ್ಟು
ವಿಸ್ತಾರವಾದ ಈ ಕಾವ್ಯ ಮುಖ್ಯವಾಗಿ
ಶ್ರೀವೈಷ್ಣವ ಸಿದ್ಧಾಂತದ ಹಿರಿಮೆಯನ್ನು ಸ್ಥಾಪಿಸುವ ಉದ್ದೇಶ ಸಾಧನೆಗೋಸ್ಕರವೇ ರಚಿತವಾದುದಾದರೂ ಇದರಲ್ಲಿ ರಾಯನ ರಸಿಕತೆ, ಪಾಂಡಿತ್ಯ,
ಲೋಕಾನುಭವ, ರಾಜನೀತಿ, ಚೆನ್ನಾಗಿ ಪ್ರಕಟವಾಗಿವೆ. ಅಂದಿನ ಜನಜೀವನದ ರಮ್ಯಚಿತ್ರವೂ ಇಲ್ಲಿದೆ. ವಿಲ್ಲುಬುತ್ತೂರಿನ ವರ್ಣನೆ, ವಿಷ್ಣುಚಿತ್ತನ ಮನೆಯ ಅತಿಥಿ ಸತ್ಕಾರವರ್ಣನೆ,
ತಮಿಳು ಕನ್ಯೆಯರು, ಅವರ ಪರಿಹಾಸ್ಯಗಳ ವರ್ಣನೆ
ಮುಂತಾದ ಹಲವು ಚಿತ್ರಗಳು ಗ್ರಂಥವನ್ನು
ಓದಿಮುಗಿಸಿದ ಮೇಲೆಯೂ ಓದುಗರ ಚಿತ್ತಭಿತ್ತಿಯ ಮೇಲೆ ನಿಲ್ಲುತ್ತವೆ. ಕೃಷ್ಣದೇವರಾಯ
ಪ್ರಕೃತಿ ವರ್ಣನೆಯಲ್ಲಿ ದಕ್ಷ. ಆಟವಿಕ ಮೃಗಗಳ ಚಲನವಲನಗಳನ್ನೂ ವನಸಂಚಾರಿಗಳ ರೀತಿನೀತಿಗಳನ್ನೂ ಸೂಕ್ಷ್ಮವಾಗಿ ಗಮನಿಸಿದ್ದಾನೆ. ಚಳಿಗಾಲದಲ್ಲಿ ರೆಡ್ಡಿ ಜನ ತಮ್ಮ ಮನೆಗಳಲ್ಲಿ
ಅಳವಡಿಸಿಕೊಳ್ಳುವ ಜೀವನ ಸೌಲಭ್ಯಗಳನ್ನೂ ಅವರ
ನಿತ್ಯವ್ಯವಹಾರಕ್ರಮಗಳನ್ನೂ
ತನ್ನ ಕಾವ್ಯದಲ್ಲಿ ಅಲ್ಲಲ್ಲಿ ಸೂಚ್ಯವಾಗಿ ವರ್ಣಿಸಿ ಹೇಳಿರುವುದು ಮನೋಜ್ಞವಾಗಿದೆ. ವಿಜಯನಗರ ಸಾಮ್ರಾಜ್ಯಕ್ಕೆ ಅಧಿಪತಿಯಾಗಿ ಅಮಿತವೈಭವದಿಂದ ಬಾಳಿದ ರಾಯ ತನ್ನ ಕಾಲದ
ಸಾಧಾರಣ ಜನರ ಕಷ್ಟಸುಖಗಳನ್ನೂ ಆದರ್ಶಗಳನ್ನೂ
ಅವರ ಬದುಕಿನ ರೀತಿಯನ್ನೂ ಚೆನ್ನಾಗಿ ಬಲ್ಲವನೆಂಬುದು ಈ ಕೃತಿಯಿಂದ ಸುವ್ಯಕ್ತವಾಗುತ್ತದೆ.
ಅಲ್ಲಸಾನಿ ಪೆದ್ದನ ರಚಿಸಿದ
ಕೃಷ್ಣರಾಯ ಪ್ರಶಂಸಾತ್ಮಕವಾದ ಕೆಲವು ಪದ್ಯಗಳು ಆಮುಕ್ತಮಾಲ್ಯದದಲ್ಲೂ ಬಂದಿವೆ. ಆದ್ದರಿಂದ ಈ ಗ್ರಂಥವನ್ನೂ ಪೆದ್ದನ
ಕವಿಯೇ ರಚಿಸಿ ರಾಯನ ಹೆಸರಿನಲ್ಲಿ ಪ್ರಚುರಪಡಿಸಿರಬೇಕೆಂಬ
ಒಂದು ವಾದ ಇದೆ. ಆದರೆ
ಈ ಕೃತಿಯ ಶೈಲಿ ಪೆದ್ದನನ ಸರಳ
ಶೈಲಿಯಲ್ಲ. ಮನುಚರಿತ್ರದಂಥ ದ್ರಾಕ್ಷಾಪಾಕದ ಕಾವ್ಯ ರಚಿಸಿದ ಪೆದ್ದನ ಈ ಶಿಲಾಪಾಕ, ವಜ್ರಪಾಕ,
ಎಂದು ವರ್ಣಿಸಬಹುದಾದ ಆಮುಕ್ತಮಾಲ್ಯದವನ್ನು ಬರೆಯುವುದು ಸಂಭವವಲ್ಲ-ಎಂದು ಹೇಳಲಾಗಿದೆ. ಇದು
ಪ್ರೌಢಶೈಲಿಯ ಪಂಡಿತಕೃತಿ. ಅಪೂರ್ವ ಪದಪ್ರಯೋಗ, ಅಲಂಕಾರ ಶೈಲಿ, ಸಂಸ್ಕೃತ ಪದಬಾಹುಳ್ಯ ಮೊದಲಾದ ಹಲವು ನಿಮಿತ್ತಗಳಿಂದ ಈ
ಕೃತಿರತ್ನ ತಕ್ಕ ವ್ಯಾಖ್ಯಾನದ ನೆರವಿಲ್ಲದಿದ್ದರೆ
ಸಾಮಾನ್ಯ ವಾಚಕರಿಗೆ ಸರ್ವಥಾ ಅರ್ಥವಾಗುವುದಿಲ್ಲ. ತೆಲಗು ದೇಶದ ಹಲವು ವಿದ್ವಾಂಸರು
ಈ ಕೃತಿಗೆ ವಿಸ್ತಾರವಾದ ವ್ಯಾಖ್ಯಾನಗಳನ್ನು ರಚಿಸಿದ್ದಾರೆ. ವೇದಂ ವೆಂಕಟರಾಯಶಾಸ್ತ್ರಿಗಳು ರಚಿಸಿದ ಸಂಜೀವಿನೀ
ಮತ್ತು ವಾವಿಳ್ಳ ರಾಮಸ್ವಾಮಿ ಶಾಸ್ತ್ರಿಗಳು ಚದಲವಾಡ ಸೀತಾರಾಮಶಾಸ್ತ್ರಿಗಳ ನೆರವಿನಿಂದ ರಚಿಸಿದ ರುಚಿ ಎಂಬ ಎರಡು
ವ್ಯಾಖ್ಯಾನಗಳು ಸುಪ್ರಸಿದ್ಧವಾಗಿವೆ.
ಸೂಚನೆ: ಮೇಲಿನ ವಿವರಗಳನ್ನು ವಿವಿಧ ಅಂತರ್ಜಾಲದ ಪುಟಗಳಿಂದ ಸಂಗ್ರಹಿಸಿ ಇಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನೀಡಲಾಗಿದೆ.
Comments
Post a Comment