ಮಳಖೇಡದ ರಾಷ್ಟ್ರಕೂಟರ ರಾಜಕೀಯ ಇತಿಹಾಸ, ಒಂದು ಪರಿಚಯ

ಮಾನ್ಯಕೇಟದ ರಾಷ್ಟ್ರಕೂಟರ ರಾಜಕೀಯ ಇತಿಹಾಸ

ಕಾಲ: ೭೫೭೯೭೩

ಇವರು ರಾಜ್ಯಬಾರ ಮಾಡಿದ್ದು - 8 ನೇ ಶತಮಾನದಿಂದ 10 ನೇ ಶತಮಾನದವರೆಗೆ

ಸ್ಥಾಪಕ: ದಂತಿದುರ್ಗ

ರಾಜಧಾನಿ: ಮಾನ್ಯಕೇಟ, ಗುಲ್ಬರ್ಗಾ ಜಿಲ್ಲೆ

ಮೂಲ:ಮಾನ್ಯಪುರದ ಮೂಲದವರು ಎನ್ನಲಾಗಿದೆ; ಆದರೆ ಇವರ ಮತ್ತು ಮಾನ್ಯಕೇಟದ ಲಾಂಛನಗಳಲ್ಲಿ ವ್ಯತ್ಯಾಸ

ಮಾನ್ಯಪುರದ ರಾಷ್ಟ್ರಕೂಟರದ್ದು ಸಿಂಹ ಲಾಂಛನ; ಆದರೆ ಮಾನ್ಯಕೇಟದ ರಾಷ್ಟ್ರಕೂಟರದ್ದು ಗರುಡ

 

ಯಾದವ ಕುಲದ ಮೂಲ

ಸಾತ್ಯಕಿಯ ಮಗ ರಟ್ಟನೇ ಮೂಲಪುರುಷ. ಇದು ಸತ್ಯಕ್ಕೆ ದೂರ. ಐತಿಹಾಸಿಕ ಆಧಾರಗಳಿಲ್ಲ.

 

ತುಂಗ ಮತ್ತು ವರ್ಷ ಎಂಬ ಬಿರುದುಗಳ ಧಾರಣೆಯ ಕಾರಣ  ತುಂಗ ಮೂಲ ಪುರುಷ, ಅವನ ಮಗ ರಟ್ಟ, ರಟ್ಟ ಪದದಿಂದ ರಾಷ್ಟ್ರ ಪದದ ಉತ್ಪತ್ತಿ ಎಂಬುದು R G ಭಂಡಾರ್ಕರ್ಅವರ ಅಭಿಪ್ರಾಯ. ಇದಕ್ಕೆ ಐತಿಹಾಸಿಕ ಸಮರ್ಥನೆ ಸಾಲದ್ದರಿಂದ ನಿರಾಕರಣೆ

 

ತೆಲುಗು ಮೂಲ

ಪ್ರತಿಪಾದಕರು: ಡಾ. A C ಬರ್ನೆಲ್‌. ರಟ್ಟ ಮತ್ತು ರೆಡ್ಡಿ ಪದಗಳ ಸಾಮ್ಯತೆ. ಆದರೆ ಸಮರ್ಥನೆಗೆ ಆಧಾರಗಳಿಲ್ಲ.

 

ಡಾ. ಫ್ಲೀಟ್ಅವರ ಪ್ರಕಾರ ರಜಪೂತರ ರಾಥೋಡರಿಂದ ರಾಷ್ಟ್ರ ಪದದ ಉತ್ಪತ್ತಿ. ನಂಬಲಸಾಧ್ಯ. ಕಾರಣ, ರಾಷ್ಟ್ರಕೂಟರ ಪತನಾನಂತರವೇ ರಜಪೂತರ ಏಳಿಗೆ ಆಗಿದ್ದು, ರಾಥೋಡರು ತದನಂತರದ ಕಾಲಕ್ಕೆ ಸೇರಿದವರೆಂದು ನಿರ್ಧಾರಿತ

 

ಮರಾಠಿ ಮೂಲ: C V ವೈದ್ಯ ಅವರು ಪ್ರತಿಪಾದಕರು. ಆದರೆ  ಅವರ ಭಾಷೆ ಎಂದಿಗೂ ಮರಾಠಿ ಆಗಿರಲಿಲ್ಲ

ಕನ್ನಡ ಮೂಲ:- ಆದರೆ A S ಆಲ್ಟೇಕರ್ಅವರ ಪ್ರಕಾರ ರಾಷ್ಟ್ರಕೂಟರು ಅಚ್ಚ ಕನ್ನಡಿಗರು ಅವರು ಕನ್ನಡ ನೆಲದವರು. ಏಕೆಂದರೆ ಅವರ ಆಡಳಿತ ಭಾಷೆ ಕನ್ನಡವಾಗಿತ್ತು.  ಶಾಸನಗಳು ಕನ್ನಡದಲ್ಲಿ ಬರೆಸಲ್ಪಟ್ಟಿವೆ.  ಅಲ್ಲದೇ ಅವರ ಬಿರುದುಗಳು ಕನ್ನಡದಲ್ಲಿವೆ. ಹೊರರಾಜ್ಯಗಳ ಶಾಸನಗಳೂ ಕನ್ನಡದಲ್ಲಿವೆ. ಉದಾ: ಜಬಲ್ಪುರ ಮತ್ತು ಜುರಾ ಶಾಸನಗಳು ಕನ್ನಡದಲ್ಲಿವೆ. ಪೋಷಿತ ಕವಿಗಳು ಕನ್ನಡಿಗರೇ

ರಾಷ್ಟ್ರಕೂಟ ಪದದ ಅರ್ಥ:-

ರಾಷ್ಟ್ರಕೂಟ ಎಂಬುದು ಅಧಿಕಾರ ಸೂಚಕ ಪದ. ಬುಡಕಟ್ಟು ಮೂಲದ ಸೂಚಕವಲ್ಲ. ಅದು ಪ್ರಾಂತ್ಯಾಧಿಕಾರಿಯನ್ನು ಸೂಚಿಸುವ ಪದ

ರಾಷ್ಟ್ರಕೂಟ ಎಂಬ ಪದದ ಅರ್ಥ - ಪ್ರಾದೇಶಿಕ ವಿಭಜನೆಗಳಾದ ರಾಷ್ಟ್ರದ ಮುಖ್ಯಸ್ಥ ರು ಅಥವಾ ರಾಷ್ಟ್ರ ಎಂದರೆ ಪ್ರಾಂತ್ಯ ಹಾಗೂ ಕೂಟ ಎಂದರೆ - ನಾಯಕ ಎಂದರ್ಥ

ರಾಷ್ಟ್ರ = ಪ್ರಾಂತ್ಯ ಕೂಟ = ರಾಜ್ಯಪಾಲ

ಸಾಮ್ರಾಜ್ಯ ಸ್ಥಾಪನೆಗೆ ಮುನ್ನ ಪ್ರಾಂತ್ಯವೊಂದರ ಆಡಳಿತಗಾರರಾಗಿದ್ದರು

ದಂತಿದುರ್ಗನು ಅಂತಹ ಪ್ರಾಂತ್ಯಾಧಿಕಾರಿಗಳಲ್ಲಿ ಒಬ್ಬ

ಬಾದಾಮಿಯ ಚಾಲುಕ್ಯರ ಅಧೀನದಲ್ಲಿ ಆಡಳಿತ ಮಾಡುತ್ತಿದ್ದು, ನಂತರ ಅವರನ್ನು ಕೊನೆಗಾಣಿಸಿ ಅಧಿಕಾರಕ್ಕೆ ಬಂದವರು.

ದೇಶಗಳಿಗೆ ದೇಶಮುಖ, ಗ್ರಾಮಗಳಿಗೆ ಗ್ರಾಮಕೂಟರಿದ್ದಂತೆ ರಾಷ್ಟ್ರಗಳಿಗೆ ರಾಷ್ಟ್ರಕೂಟರು

ಮೌರ್ಯ ಮತ್ತು ಶಾತವಾಹನರ ಕಾಲದಲ್ಲಿ ರಾಷ್ಟ್ರೀಯ, ರಥಿಕ, ರಥಿ ಎಂಬ ಅಧಿಕಾರಿಗಳು ದಕ್ಷಿಣ ಭಾರತದಲ್ಲಿ ಆಳುತ್ತಿದ್ದರು ಎಂಬ ಮಾಹಿತಿಗಳೂ ಇವೆ. ಇದರಿಂದ ಪ್ರಾಚೀನ ಕಾಲದಲ್ಲಿ ಕೃಷಿ ಮಾಡುತ್ತಿದ್ದ ರಾಷ್ಟ್ರಿಕ, ರಥಿಕ, ರಾಷ್ಟ್ರಕ ಮತ್ತು ಮಹತ್ತರ ೆಂಬ ಸ್ಥಳೀಯ ಮಟ್ಟದ ಆಡಳಿತಗಾರರೇ ಮುಂದೆ ಅಧಿಕಾರ ಪಡೆದು ನಂತರ ಸಾಮಂತರ ಮಟ್ಟಕ್ಕೆ ಬೆಳೆದರೆಂದು ತಿಳಿದು ಬರುತ್ತದೆ. ರಾಷ್ಟ್ರಕೂಟರು ಅಥವಾ ರಟ್ಟಕೂಟರು ಅಂತಹ ಮನೆತನಗಳಿಗೆ ಸೇರಿದವರೆಂದು ಅಭಿಪ್ರಾಯಪಡಲಾಗಿದೆ. ಇದಕ್ಕೆ ಇಮ್ಮಡಿ ಪುಲಕೇಶಿಯ ಕಾಲದಲ್ಲಿ ರಾಷ್ಟ್ರಕೂಟರ ಗೋವಿಂದ ಮತ್ತು ಅಪ್ಪಾಯಿಕರನ್ನು ಭೀಮಾ ನದಿಯ ದಡದಲ್ಲಿ ಸೋಲಿಸಿದ್ದನೆಂಬುದು ಪೂರಕ ಮಾಹಿತಿ.

 

ಸ್ಥಳದ ಮೂಲ:-

ರಟ್ಟಕುಲದವರು, ಲಟ್ಟಲೂರು ಪುರವರಾಧೀಶ್ವರರು. ಲಟ್ಟಲೂರು ಅಂದರೆ ಲಾಟೂರು ಅಥವಾ ಲಾತೂರು. ಅದು ಇಂದಿನ ಉಸ್ಮಾನಾಬಾದ್ಜಿಲ್ಲೆ, ಮಹಾರಾಷ್ಟ್ರದಲ್ಲಿದೆ.

ಲಾತೂರು ಅಂದು ಹೈದ್ರಾಬಾದ್-ಕರ್ನಾಟಕ ಪ್ರದೇಶಕ್ಕೆ ಸೇರಿದ್ದ ಕಾರಣ ರಾಷ್ಟ್ರಕೂಟರು ಕನ್ನಡಿಗರು. ಇದು ಐ. . ಮುತ್ತಣ್ಣ ಅವರ ಹೇಳಿಕೆ

ರಾಷ್ಟ್ರಕೂಟರ ಆರಂಭಿಕರಾದ ದುರ್ಗರಾಜ, ಗೋವಿಂದರಾಜ, ಸ್ವಾಮಿರಾಜ, ನನ್ನುಕ, ಕರ್ಕ, ಮತ್ತು ಇಂದ್ರರು ಬಾದಾಮಿ ಚಾಲುಕ್ಯರ ಅಧಿಕಾರಿಗಳು. ಬಿರಾರಿನ ಎಲಿಚಪುರ ಅವರ ಕೇಂದ್ರವಾಗಿತ್ತು.

 

ಆಧಾರಗಳು

ದಂತಿದುರ್ಗನ - ಸಮನ್ ಗಡ್ ಹಾಗೂ ಎಲ್ಲೋರದ ಗುಹಾ ಶಾಸನ

ಒಂದನೇ ಕೃಷ್ಣನ ಭಾಂಡ್ಕ ಮತ್ತು ತಾಳೇಗಾಂ ಶಾಸನ

ಧೃವನ ಜೆಟ್ಟಾಯಿ ಶಾಸನ

ಅಮೋಘವರ್ಷನ ಸಂಜಾನ್ ತಾಮ್ರ ಶಾಸನ ಹಾಗೂ ಕವಿ ರಾಜ ಮಾರ್ಗ

ನೀಲಗುಂದ ತಾಮ್ರ ಶಾಸನ

ಸಿರೂರು ತಾಮ್ರಪಟ ಶಾಸನ

ಬೆಗುಮ್ರ ತಾಮ್ರಪಟ ಶಾಸನ

ಸಾಹಿತ್ಯಾಧಾರಗಳು:-

ಪೊನ್ನನ - ಶಾಂತಿ ಪುರಾಣ

ದುರ್ಗಸಿಂಹನ - ಪಂಚತಂತ್ರ

ತ್ರಿವಿಕ್ರಮನ - ನಳಚಂಪು

ಪಂಪನ - ವಿಕ್ರಮಾರ್ಜುನ ವಿಜಯಂ

ಬಿಲ್ಹಣನ - ವಿಕ್ರಮಾಂಕ ದೇವಚರಿತ

 

ವಿದೇಶೀ ಬರವಣಿಗೆಗಳು:- ಸುಲೇಮಾನ್ - ಬರವಣಿಗೆಗಳು ಹಾಗೂ ಅಲ್ ಮಸೂದಿ, ಇಬಾನ್ ಹಾನಲ್ ಮತ್ತು ಇಸ್ತಾಬ್ರಿಯವರ ಬರವಣಿಗೆಗಳು

 

ರಾಜಕೀಯ ಇತಿಹಾಸ

ದಂತಿದುರ್ಗ ೭೩೫೭೫೬. ಇವನು ಚಾಲುಕ್ಯರ ಸಾಮಂತ. ಇಂದ್ರನ ಮಗ, ಕರ್ಕನ ಮೊಮ್ಮೊಗ ಮತ್ತು ಗೋವಿಂದರಾಜನ ಮರಿಮೊಮ್ಮೊಗನೆಂದು ತಾನೇ ಶಾಸನದಲ್ಲಿ ಹೇಳಿಕೊಂಡಿದ್ದಾನೆ

ಗುಜರಾತಿನ ಚಾಲುಕ್ಯರ ಕನ್ಯೆ ಭಾವನಾಗಳ ಮಗ. ಇಮ್ಮಡಿ ವಿಕ್ರಮಾದಿತ್ಯನ ಕಾಲದಲ್ಲಿ ಸಾಮಂತನಾಗಿದ್ದ. ಉತ್ತರದ ಯುದ್ಧಗಳಲ್ಲಿ ಚಾಲುಕ್ಯರಿಗೆ ಸಹಾಯ ಮಾಡಿದ್ದನು. ಅರಬ್ಬರ ದಮನದಲ್ಲಿ ವಿಕ್ರಮಾದಿತ್ಯನಿಗೆ ಸಹಾಯ. ಕಾರಣ ಅವನಿಗೆ ಪೃಥ್ವಿವಲ್ಲಭ, ಖಡ್ಗಾವಲೋಕ ಬಿರುದುಗಳು ಲಭಿಸಿದ್ದವು. ವಿಕ್ರಮಾದಿತ್ಯನ ಮರಣಾನಂತರ ಪ್ರಾಬಲ್ಯಕ್ಕೆ, ೭೪೭ರ ನಂತರ

ಮಾಳವ ಮತ್ತು ಗುಜರಾತ್ಗಳನ್ನು ಗೆದ್ದು ಉಜ್ಜಯಿನಿಯಲ್ಲಿ ಹಿರಣ್ಯಗರ್ಭ ದಾನ ಯಾಗ ಮಾಡಿದ್ದನು. ಕೋಸಲ, ಕಳಿಂಗ, ಗುರ್ಜರು, ಪಲ್ಲವರು ಮತ್ತು ಪಾಂಡ್ಯರ ವಿರುದ್ಧ ಗೆಲುವು. ೭೫೦ರ ವೇಳೆಗೆ ಮಧ್ಯಪ್ರದೇಶ ಮತ್ತು ವಿದರ್ಭದ ಮೇಲೆ ಇಡಿತ ಸಾಧಿಸಿದ್ದನು. ಅದೇ ವೇಳೆಗೆ ಚಾಲುಕ್ಯರ ಇಮ್ಮಡಿ ಕೀರ್ತಿವರ್ಮನನ್ನು ಸೋಲಿಸಿ ರಾಜಧಾನಿ ವಶಪಡಿಸಿಕೊಂಡ. ಚಾಲುಕ್ಯರ ಬಲ ಕುಗ್ಗಿಸಿ ಸ್ವತಂತ್ರ ಆಳ್ವಿಕೆ ಆರಂಭ ಮಾಡಿದನು. ಶ್ರೀಪೃಥ್ವಿವಲ್ಲಭ, ಪರಮಭಟ್ಟಾರಕ, ಮಹಾರಾಜಾಧಿರಾಜ, ಖಡ್ಗಾವಲೋಕನ, ರಾಜಪರಮೇಶ್ವರ ಎಂಬ ಬಿರುದುಗಳು ಇವನಿಗಿದ್ದವು. ಇವನು  ಸಹಸ್ರತುಂಗ ಎಂದು ಶಾಸನೋಕ್ತನಾಗಿದ್ದಾನೆ. ಪುತ್ರರಹಿತನಾಗಿ ಮರಣ

 

ಒಂದನೆ ಕೃಷ್ಣ ೭೫೬೭೭೪

ದಂತಿದುರ್ಗನ ಚಿಕ್ಕಪ್ಪ. ದಂತಿದುರ್ಗನು ಅಪುತ್ರನಾಗಿ ಮರಣಿಸಿದ ಕಾರಣ ಅಧಿಕಾರಕ್ಕೆ.  ಚಾಲುಕ್ಯರ ದಳಪತಿ ರಾಹಪ್ಪಯ್ಯನೊಡನೆ ಹೋರಾಟ ಮಾಡಿದನು. ಕೀರ್ತಿವರ್ಮನನ್ನು ಸಂಪೂರ್ಣವಾಗಿ ಸೋಲಿಸಿದನು. ಅಂತಿಮವಾಗಿ ಅವರ ಮನೆತನದ ಅಂತ್ಯಕ್ಕೆ ಕಾರಣನಾದನು.

770 ರಲ್ಲಿ ಯುವರಾಜ ಗೋವಿಂದನು ವೆಂಗಿಯ ಚಾಲುಕ್ಯರ ವಿರುದ್ಧ ಯುದ್ಧ ಮಾಡಿ ೪ನೆ ವಿಷ್ಣುವರ್ಧನನ ಮೇಲೆ ವಿಜಯ ಸಾಧಿಸಿದನು. ಅವನು ರಾಷ್ಟ್ರಕೂಟರ ಸಾಮಂತನಾದ

ವೆಂಗಿಯ ಚಾಲುಕ್ಯ ಕನ್ಯೆ ಶೀಲಭಟ್ಟಾರಿಕೆಯ ವಿವಾಹ ಧೃವನೊಡನೆ ಆಯಿತು. ಗಂಗರ  ಶ್ರೀಪುರುಷನಿಂದ ಕಪ್ಪಕಾಣಿಕೆ ಪಡೆದನು. ಕೊಂಕಣದ ಮೇಲೆ ವಿಜಯ ಸಾಧಿಸಿ ಅಲ್ಲಿಗೆ ಮಾಂಡಲೀಕ ಶಿಲಾಹಾರರ ಸಣ್ಣಪುಲ್ಲನ ನೇಮಕ ಮಾಡಿದನು.

ನನ್ನಗುಣಾವಲೋಕ, ಮಾನವಲೋಕ, ರತ್ನವರ್ಷ ಮೊದಲಾದ ದಾಯಾದಿಗಳು ಪ್ರಾಂತ್ಯಾಧಿಕಾರಿಗಳಾಗಿ ನೇಮಕಗೊಂಡರು.

 

ಕೃಷ್ಣನ ಘನತೆ: ಅವನು ಇತಿಹಾಸ ಪ್ರಸಿದ್ಧನಾಗಿರುವುದು ಯುದ್ಧಗಳಿಂದಲ್ಲ, ಎಲ್ಲೋರಾದ ಕೈಲಾಸನಾಥ ದೇವಾಲಯ ನಿರ್ಮಾಣದಿಂದ

ವಿ. . ಸ್ಮಿತ್ಅವರು ಅದು ಅತ್ಯಮೋಘವಾದ ವಾಸ್ತುಶಿಲ್ಪದ ರಚನೆ ಎಂದಿದ್ದಾರೆ.

ಅದರ ವಿಮಾನ ಅಥವಾ ಗೋಪುರ ೯೬ ಅಡಿ ಎತ್ತರವಾಗಿದೆ. ಸಭಾಂಗಣ ೫೩ ಚದರ ಅಡಿಗಳಷ್ಟು ವಿಶಾಲವಾಗಿದೆ. ಸುಂದರ ಕೆತ್ತನೆಗಳ ೧೬ ಕಂಬಗಳ ಆಧಾರ ಈ ದೇವಾಲಯಕ್ಕಿದೆ. ಅಲ್ಲದೇ ೧೮ ಇತರೆ ದೇವಾಲಯಗಳ ನಿರ್ಮಾಣ ಮಾಡಿಸಿದನೆಂದು ಹೇಳಲಾಗಿದೆ.

ಶುಭತ್ತುಂಗ, ಅಕಾಲವರ್ಷ ಎಂಬ ಬಿರುದುಗಳು ಇವನಿಗಿದ್ದವು. ಇಬ್ಬರು ಮಕ್ಕಳು: 2ನೆ ಗೋವಿಂದ ಮತ್ತು ಧೃವ

 

ಎರಡನೆ ಗೋವಿಂದ ೭೭೪೭೮೦

ತಂದೆಯ ಕಾಲದಲ್ಲೇ ವಿಷ್ಣುವರ್ಧನ ಮತ್ತು ಶ್ರೀಪುರುಷರ ವಿರುದ್ಧ ಗೆಲುವು ಸಾಧಿಸಿ ಜಗತ್ತುಂಗ, ಪ್ರಭೂತವರ್ಷ, ಪ್ರತಾಪವಲೋಕ, ವಿಕ್ರಮಾವಲೋಕ ಎಂಬ ಬಿರುದುಗಳನ್ನು ಗಳಿಸಿದ್ದನು. ಪ್ರಾರಂಭದಲ್ಲಿ ಯುದ್ಧಸಮರ್ತ, ಆದರೆ ನಂತರ ಭೋಗವಿಲಾಸಿ

ಅಧಿಕಾರಾರೂಢನಾದ ನಂತರ ವಿಲಾಸಿಯಾಗಿ ಜನಪ್ರಿಯತೆ ಕಳೆದುಕೊಂಡ, ಅಧಿಕಾರವೆಲ್ಲಾ ಸೋದರ ದೃವನಲ್ಲಿ ಕೇಂದ್ರೀಕೃತವಾಯಿತು. ಕಡೆಗೆ ಅವನಿಗೆ ಅಧಿಕಾರ ಬಿಟ್ಟುಕೊಟ್ಟ. A. S. ಆಲ್ಟೇಕರರು ಧೃವನು ಅಣ್ಣನನ್ನು ಪದಚ್ಯುತಗೊಳಿಸಿದನೆಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ಕೆ. ವಿ ಸುಬ್ರಮಣ್ಯ ಐಯ್ಯರ್‌ ಮತ್ತು ಡಾ. ದೇಸಾಯಿಯವರು ಗೋವಿಂದನು ಸೋದರ ದೃವನಿಗೆ ಶಾಂತಿಯುತವಾಗಿ ಪಟ್ಟ ಬಿಟ್ಟುಕೊಟ್ಟನು ಎಂದು ಅಭಿಪ್ರಾಯಪಟ್ಟಿದ್ದಾರೆ. ಐಯ್ಯರ್‌ರವರು ಪ್ರೊದ್ದಟ್ಟೂರು ಶಾಸನದಂತೆ ವಿಷಯಲಂಪಟನಾದ ಗೋವಿಂದನು ಅಧಿಕಾರವನ್ನೆಲ್ಲಾ ಸೋದರನಿಗೆ ವಹಿಸಿದ್ದ ಕಾರಣ ಅವನ ಜನಪ್ರಿಯತೆ ಶಿಥಿಲವಾಯಿತು ಎಂದಿದ್ದಾರೆ. ಕರಹಾಡ ಶಾಸನದಲ್ಲೂ ಇಂತಹುದೇ ಮಾಹಿತಿ ಇರುವ ಕಾರಣ ಬಹುಶಃ ಅಂತರ್ಯುದ್ಧ ನಡೆದಿರಲಾರದು ಎಂಬುದು ವಿದ್ವಾಂಸರ ಅಭಿಪ್ರಾಯ.

 

ದೃವ ೭೮೦೭೯೩

ಕನೋಜ್ದಿಗ್ವಿಜಯ ಇವನ ಕಾಲದ ಪ್ರಮುಖ ಘಟನೆ. ಉತ್ತರ ಭಾರತದ ದಿಗ್ವಿಜಯ ಕೈಗೊಂಡ ಮೊದಲ ಅರಸು. ಆಂತರಿಕ ಕಲಹದಲ್ಲಿ ಅಧಿಕಾರ ಗ್ರಹಣ ಮಾಡಿದನು. ಅಧಿಕಾರಕ್ಕೆ ಬಂದಾಗ ೫೦ ವರ್ಷಗಳು. ಧಾರಾವರ್ಷ, ನರೇಂದ್ರದೇವ, ಕಾಳವಲ್ಲಭ ಮತ್ತು ಶ್ರೀವಲ್ಲಭ ಎಂಬ ಬಿರುದುಗಳು ಇವನಿಗಿದ್ದವು.

ಅಧಿಕಾರದ ಯುದ್ಧದಲ್ಲಿ ಅಣ್ಣನಿಗೆ ಬೆಂಬಲ ನೀಡಿದವರ ವಿರುದ್ಧ ಯುದ್ಧ ಮಾಡಿ, ಗಂಗರ ಶಿವಮಾರನನ್ನು ಸೋಲಿಸಿ ಮಾನ್ಯಕೇಟದ ಸೆರೆಮನೆಯಲ್ಲಿಟ್ಟನು. ಅಲ್ಲಿಗೆ ಮಗ ಸ್ತಂಭನನ್ನು ಪ್ರಾಂತ್ಯಾಧಿಕಾರಿಯನ್ನಾಗಿ  ನೇಮಕ ಮಾಡಿದನು. ಅಲ್ಲದೇ ಪಲ್ಲವ ದಂತಿವರ್ಮನಿಂದ ಅಪಾರ ಕಪ್ಪ ಪಡೆದ

ನಂತರ ಉತ್ತರದ ಕಡೆಗೆ ಗಮನ ಹರಿಸಿದ. ನರ್ಮದಾ ದಂಡೆಯಲ್ಲಿ ಪ್ರಬಲ ಸೈನ್ಯದ ಸಂಘಟನೆ ಮಾಡಿದನು. ಮಕ್ಕಳು ೩ನೆ ಗೋವಿಂದ ಮತ್ತು ಇಂದ್ರರನ್ನು ಅದರ ಮೇಲ್ವಿಚಾರಣೆಗೆ ನೇಮಕ ಮಾಡಿದ.

ಇವನನ್ನು ಎದುರಿಸಿದ ಪ್ರತಿಹಾರರ ವತ್ಸರಾಜನ ಸೋಲು, ಜಾನ್ಸಿ ಯುದ್ಧದಲ್ಲಿ. ಇದು ಕೇವಲ ದಿಗ್ವಿಜಯ ಮತ್ತು ಕೀರ್ತಿಗಾಗಿ ಮಾಡಿದ ಯುದ್ಧ; ಇದರಿಂದ ಕೀರ್ತಿ ಮತ್ತು ಸಂಪತ್ತು ಮಾತ್ರ ಲಭಿಸಿತು; . ಎಸ್. ಆಲ್ಟೇಕರ್

ಹಳೆಬೀಡಿಗೆ ದೋರಸಮುದ್ರ ಹೆಸರು ಬರಲು ಇವನು ಕಟ್ಟಿಸಿದ ಧೃವಸಮುದ್ರ ಎಂಬ ಕೆರೆಯಿಂದ ಎಂದು ಡೆರೆಟ್ಎಂಬ ವಿದ್ವಾಂಸರು ಹೇಳಿದ್ದಾರೆ.

ಇವನಿಗೆ ನಾಲ್ಕು ಮಕ್ಕಳು: ಸ್ತಂಭಾವರಣಲೋಕ ಅಥವಾ ಸ್ತಂಭ, ಕರ್ಕ [ತಂದೆಗೂ ಮೊದಲೇ ಮೃತನಾಗಿದ್ದನು], ಮೂರನೇ ಗೋವಿಂದ & ಇಂದ್ರ. ಅವರಲ್ಲಿ ಸಮರ್ತನಾದ ಮೂರನೇ ಗೋವಿಂದನನ್ನು ತನ್ನ ಜೀವಿತಾವಧಿಯಲ್ಲಿಯೇ ಯುವರಾಜನನ್ನಾಗಿ ನೇಮಿಸಿದ್ದನು.

 

ಮೂರನೆ ಗೋವಿಂದಕಾಲ: ೭೯೩ ೮೧೪.

ತಂದೆಯ ಪ್ರೀತಿಪಾತ್ರನಾದ ಗೋವಿಂದ ಅವನ ಉತ್ತರಾಧಿಕಾರಿಯಾದ. ಇದು ಮತ್ತೆ ಅಂತಃಕಲಹಕ್ಕೆ ದಾರಿಯಾಯಿತು. ಗಂಗವಾಡಿಯಲ್ಲಿದ್ದ ದೃವನ ಹಿರಿಯ ಮಗ ಸ್ತಂಭ ಸೋದರನ ವಿರುದ್ಧ ಅಧಿಕಾರಕ್ಕಾಗಿ ಬಂಡಾಯ ಹೂಡಿದನು. ಅವನಿಗೆ ೧೨ ಅರಸರ ಬೆಂಬಲವಿತ್ತು. ಇದರಿಂದ ಗೋವಿಂದ ಸೆರೆಯಲ್ಲಿದ್ದ ಶಿವಮಾರನನ್ನು ತನ್ನ ಪಕ್ಷವಹಿಸುವನೆಂದು ತಿಳಿದು ಬಿಡುಗಡೆ ಮಾಡಿದ. ಆದರೆ ಶಿವಮಾರ ಸ್ತಂಭನ ಪಕ್ಷ ವಹಿಸಿದ. ಗೋವಿಂದನು ತನ್ನ ಇತರ ಸಾಮಂತರ ಬೆಂಬಲದಿಂದ ಸ್ತಂಭನ ಬಂಡಾಯ ಅಡಗಿಸಿ ಅವನನ್ನು ಸೆರೆ ಹಿಡಿದ. ಆದರೆ ಅಣ್ಣನೆಂಬ ಔದಾರ್ಯದಿಂದ ಕ್ಷಮಿಸಿ ಮತ್ತೆ ಗಂಗವಾಡಿಯ ಮಾಂಡಲೀಕನಾಗಿ ನೇಮಕ ಮಾಡಿದನು. ಶಿವಮಾರನನ್ನು ಮತ್ತೆ ಸೆರೆಗೆ ಹಾಕಲಾಯಿತು. ಅಂತಃಕಲಹದಲ್ಲಿ ತನಗೆ ನೆರವಿತ್ತ ಸೋದರ ಇಂದ್ರನನ್ನು ಗುಜರಾತಿನ ಮಾಂಡಲೀಕನಾಗಿ ನೇಮಿಸಿದ

ನಂತರದಲ್ಲಿ ನೊಳಂಬವಾಡಿಯ [ಇಂದಿನ ತುಮಕೂರು ಮತ್ತು ಸುತ್ತಲಿನ ಪ್ರದೇಶ] ಚಾರುಪೊನ್ನೇರ ಗೋವಿಂದನ ಪ್ರಬುತ್ವ ಒಪ್ಪಿಕೊಂಡ. ವೆಂಗಿ ಚಾಲುಕ್ಯರ ಮೇಲೆ ವಿಜಯ ಸಾಧಿಸಿ ಅವರನ್ನು ತನ್ನ ಅಧೀನರನ್ನಾಗಿಸಿದ.

ನಂತರ ಗೋವಿಂದನು ಉತ್ತರ ಭಾರತದ ಕಡೆಗೆ ತನ್ನ ಗಮನ ಹರಿಸಿದನು. ತನ್ನ ತಂದೆಯಂತೆ ಉತ್ತರದ ದಿಗ್ವಿಜಯ ನಡೆಸಲು ಆಲೋಚಿಸಿದನು.

ಈ ವೇಳೆ ತನ್ನನ್ನು ಎದುರಿಸಿದ ಪ್ರತಿಹಾರರ ೨ನೆ ನಾಗಭಟ್ಟನನ್ನು ಬುಂದೇಲಕಂಡದ ಬಳಿ ಸೋಲಿಸಿದ. ಅವನು ರಜಪೂತಾಣದ ಕಡೆ ಪಲಾಯನಗೈದನು. ಕನೋಜದ ಚಕ್ರಾಯುಧ ಸೋತು ಗೋವಿಂದನಿಗೆ ಶರಣಾಗತನಾದ. ಚಕ್ರಾಯುಧನ ನೆರವಿಗೆ ಧಾವಿಸಿದ ಬಂಗಾಳದ ಪಾಲರ ಧರ್ಮಪಾಲನ ವಿರುದ್ಧ ಸಹಾ ಗೆಲುವು ಸಾಧಿಸಿದನು.

ಅವನು ಇನ್ನೂ ಮುಂದುವರಿದು ಹಿಮಾಲಯದ ತಪ್ಪಲಿನ ವರೆಗೆ ದಿಗ್ವಿಜಯ ನಡೆಸಿದ. ಅಮೋಘವರ್ಷನ ಸಂಜನ್ತಾಮ್ರಪತ್ರಗಳಲ್ಲಿ ಈ ಕುರಿತ ವರ್ಣನೆ ಲಭ್ಯವಿದೆ.

ಉತ್ತರದ ಈ ಯುದ್ಧಗಳು ಗೋವಿಂದನಿಗೆ ಕೀರ್ತಿ ಮತ್ತು ಹಣ ತಂದುಕೊಟ್ಟವೇ ಹೊರತು ಭೂಪ್ರದೇಶಗಳನ್ನಲ್ಲ

ಅಲ್ಲಿಂದ ರಾಜಧಾನಿಗೆ ಹಿಂತಿರುಗುವಾಗ ಗುಜರಾತಿನ ಬ್ರೋಚ್‌ ಬಳಿಯ ಶ್ರೀಭುವನದ ಬಳಿ ಪಟ್ಟದರಸಿ ಗಾವುಂಡಬ್ಬೆಯಲ್ಲಿ ಮಗ ಶರ್ವನ ಜನನ; ಅವನು  ಮುಂದೆ ಅಮೋಘವರ್ಷನೆಂದು ಖ್ಯಾತನಾದನು.

ಉತ್ತರದ ದಿಗ್ವಿಜಯಗಳಲ್ಲಿ ನಿರತನಾದ ಗೋವಿಂದನು ರಾಜಧಾನಿಯಿಂದ ಬಹುಕಾಲ ದೂರವಿದ್ದ ಕಾರಣ ಇತ್ತ ದಕ್ಷಿಣದಲ್ಲಿ ಇವನಿಂದ ಸೋತ ರಾಜರು ಗೋವಿಂದನ ವಿರುದ್ಧ ಒಕ್ಕೂಟದ ರಚನೆ ಮಾಡಿಕೊಂಡರು.

ಆದರೆ ಗೋವಿಂದನು ಈ ಒಕ್ಕೂಟವನ್ನು ಯಶಸ್ವಿಯಾಗಿ ಮಣಿಸಿದನು. ಈ ಕುರಿತು ೮೦೫ ಶಾಸನದಲ್ಲಿ ಚೋಳ-ಮತ್ಸ್ಯ,  ಚೇರ-ಚಾಪ,  ಪಾಂಡ್ಯ- ವ್ಯಾಘ್ರ,  ವೆಂಗಿಯ ಚಾಲುಕ್ಯ-ವರಾಹ, ಪಲ್ಲವ-ವೃಷಭ ಮತ್ತು  ಗಂಗರ ಗಜ ರಾಜಲಾಂಛನಗಳನ್ನು ಕಸಿದುಕೊಂಡನೆಂದು ವರ್ಣಣೆ ಮಾಡಲಾಗಿದೆ. ತನ್ನಿಂದ ಸೋತ ಚೋಳರ ವೈರಮೇಘತ್ರಿ ಎಂಬ ಬಿರುದು ಧಾರಣೆ ಮಾಡಿದನು. ಅವನ ಈ ವಿಜಯಗಳಿಂದ ಬೆದರಿದ ಶ್ರೀಲಂಕಾದ ಅರಸು ಸ್ವಯಂ ಶರಣಾಗತ ಸೂಚಕವಾಗಿ ತನ್ನ ಮತ್ತು ಮಂತ್ರಿಯ ವಿಗ್ರಹಗಳನ್ನು ಗೋವಿಂದನಿಗೆ ಅರ್ಪಿಸಿದನು.

ಮಯೂರಖಂಡಿ ಅಥವಾ ಮೋರಕೇಡ್‌ ಅವನ ರಾಜಧಾನಿಯಾಗಿತ್ತು ಮತ್ತು ಅವನು ೮೧೪ ರಲ್ಲಿ ಮರಣ ಹೊಂದಿದನು. ಆದರೆ ತಾನು ಬದುಕಿರುವವರೆಗೂ ಉತ್ತರದ ರಾಜರಿಗೆ ಸಿಂಹಸ್ವಪ್ನವಾಗಿದ್ದನು.

ಅವನಿಗಿದ್ದ ಬಿರುದುಗಳು: ಜಗತ್ತುಂಗ, ಪ್ರಭೂತವರ್ಷ, ಕೀರ್ತಿನಾರಾಯಣ, ನರೇಂದ್ರವಲ್ಲಭ, ಶ್ರೀವಲ್ಲಭ, ವೈರಮೇಘತ್ರಿ ಮತ್ತು ಭುವನ ಧವಳ.

ಸಾಹಿತ್ಯದ ಪೋಷಣೆ: ವಿದ್ಯಾನಂದಿ, ವಾಮ, ಜಿನಸೇನ, ಲೋಕಸೇನ, ಮಹಾವೀರಾಚಾರ್ಯ ಎಂಬ ಕವಿಗಳು. ಪೂರ್ಣದಂತನಿಂದ ಅಪಭ್ರಂಶ ಮತ್ತು ವಾಮನಿಂದ ಲಿಂಗಾನುಶಾಸನಗಳು ರಚಿತ. ವಾಮನು ಗೋವಿಂದನ ಆಸ್ಥಾನವನ್ನು ಜಗೋತ್ತುಂಗ ಸಭೆ ಎಂದು ವರ್ಣನೆ ಮಾಡಿದ್ದಾನೆ. ಅವನು ವೈದಿಕನಾದರೂ ಪರಮತಸಹಿಷ್ಣುವಾಗಿದ್ದನು. ಜೈನ ಧರ್ಮದ ಉದಾರ ಪೋಷಕ.

 

ಹಿರಿಮೆ: ವಾಣಿ-ದಂಡೂರಿ ಶಾಸನದಲ್ಲಿ ಗೋವಿಂದನ ಕಾಲದಲ್ಲಿ ರಾಷ್ಟ್ರಕೂಟರು ಇಡೀ ಭಾರತದಲ್ಲಿ ಅಜೇಯರಾಗಿ ವಿಜೃಂಭಿಸಿದರೆಂದು ವರ್ಣನೆ ಮಾಡಲಾಗಿದೆ. ಕರ್ಕನ ಬರೋಡ ಶಾಸನದಲ್ಲಿ ಅವನ ದಿಗ್ವಿಜಯಗಳನ್ನು ಮಹಾಭಾರತದ ಅರ್ಜುನನ ವಿಜಯಗಳಿಗೆ ಹೋಲಿಸಲಾಗಿದೆ.  ಅವನು ಸಮಗ್ರ ಭರತೇಶ್ವರನಾಗಿ ಮೆರೆದ ಅವನ ಪೌರುಷವನ್ನು ಕುರಿತು ವೈರಿಗಳ ಬಲವನ್ನು ಲೆಕ್ಕಿಸದೇ ರಣರಂಗಕ್ಕೆ ಧುಮುಕಿ ಶತೃಗಳನ್ನು ಸದೆ ಬಡಿಯುವ ವೀರಾಧಿವೀರನೆಂದು ನವಸಾರಿ ಶಾಸನದಲ್ಲಿ ವರ್ಣನೆ ಮಾಡಲಾಗಿದೆ.

 

ಅಮೋಘವರ್ಷ ನೃಪತುಂಗ ೮೧೪ ೮೭೮

೮೦೦ ರಲ್ಲಿ ಶ್ರೀಭುವನದಲ್ಲಿ ಜನನ. ಶರ್ವ ಇವನ ಮೊದಲ ಹೆಸರು. ಮೂರನೆ ಗೋವಿಂದ ಮತ್ತು ಗಾವುಂಡಬ್ಬೆಯರ ಏಕೈಕ ಪುತ್ರ. ತಂದೆಯ ಮರಣಾನಂತರ ಕೇವಲ ೧೪ನೆ ವಯಸ್ಸಿಗೆ ಪಟ್ಟಕ್ಕೆ ಬಂದನು. ಈ ವೇಳೆ ರಾಜಧಾನಿಗೆ ಶತೃಗಳ ಭಯ ಉಂಟಾಯಿತು. ಆದರೆ ಅವನ ಚಿಕ್ಕಪ್ಪ ಕರ್ಕ ಸುವರ್ಣವರ್ಷನು ಈ ವೇಳೆ ರಾಜಪ್ರತಿನಿಧಿಯಾಗಿದ್ದ. ಅವನು ಬಾಲಕನಾದ ಶರ್ವನ ರಕ್ಷಣೆ ಮತ್ತು ಶಿಕ್ಷಣದ ಹೊಣೆ ಹೊತ್ತನು. ತಂದೆಯ ಕಾಲದಲ್ಲಿ ಸೋತಿದ್ದ ಸಾಮಂತರು ಮತ್ತು ನೆರೆ ರಾಜರ ಬಂಡಾಯ ಆರಂಬವಾಯಿತು. ಇತ್ತ ಸ್ತಂಭನ ಮಗ ಶಂಕರಗಣ ಸಿಂಹಾಸನದ ಅಧಿಕಾರಕ್ಕೆ ಸ್ಪರ್ದೆ ಹೂಡಿದ ಮತ್ತು ವೆಂಗಿಯ ೨ನೆ ವಿಜಯಾದಿತ್ಯ ಕಳೆದುಕೊಂಡ ರಾಜ್ಯ ಪಡೆಯಲು ಯತ್ನಿಸಿದ. ಅಲ್ಲದೇ ಗಂಗರು ರಾಷ್ಟ್ರಕೂಟರಿಂದ ಸ್ವಾತಂತ್ರ್ಯ ಬಯಸಿದರು. ಗುರ್ಜರ ಪ್ರತಿಹಾರರು ರಾಜ್ಯದ ಉತ್ತರದ ಗಡಿಗಳನ್ನು ಮುತ್ತಿದರು

ಆದರೆ ೮೧೭ ರಲ್ಲಿರಾಜಧಾನಿಯನ್ನು ಮುತ್ತಿದ್ದ ಶತೃಗಳಿಂದ ಅದರ ರಕ್ಷಣೆ, ಕರ್ಕ ಸುವರ್ಣವರ್ಷನಿಂದ. ಇದು ಪಿ. ಬಿ. ದೇಸಾಯಿ ಅವರ ಅಭಿಪ್ರಾಯ

 

ಪ್ರಮುಖ ಘಟನೆಗಳು:

ದಂಗೆಗಳ ದಮನ: ಶಂಕರಗಣ ಮತ್ತು ಸಾಮಂತ ಜಟ್ಟಿ ಎಂಬುವರ ದಮನ, ಕರ್ಕನಿಂದ. ವೆಂಗಿಯ ಬೀಮ ಸಲುಕಿಯಿಂದ ಸಿಂಹಾಸನ ಕಸಿದುಕೊಂಡ ವಿಜಯಾದಿತ್ಯ ರಾಷ್ಟ್ರಕೂಟರ ಗಡಿಗಳ ಮೇಲೆ ದಾಳಿ ಆರಂಭಿಸಿದ. ಚಾಲುಕ್ಯ ಶಾಸನಗಳಲ್ಲಿ ವಿಜಯಾದಿತ್ಯನ ಸೇನಾನಿ ಪಾಂಡುರಂಗನಿಂದ ರಾಜಧಾನಿಯ ಸೂರೆ ಎಂದು ವರ್ಣನೆ ಮಾಡಲಾಗಿದೆ. ಅನೇಕ ಯುದ್ಧಗಳಲ್ಲಿ ವಿಜಯಾದಿತ್ಯನಿಗೆ ಗೆಲುವು ಲಭಿಸಿತು. ಆದರೆ ೮೩೦ರಲ್ಲಿ ನಡೆದ ವಿಂಗವಳ್ಳಿಯ ಕದನದಲ್ಲಿ ವಿಜಯಾದಿತ್ಯನನ್ನು ಸಂಪೂರ್ಣವಾಗಿ ಸೋಲಿಸಿ ವೆಂಗಿಯ ರಾಜ್ಯದ ಮೇಲೆ ಅಧಿಕಾರ ಸ್ಥಾಪನೆ ಮಾಡಲಾಯಿತು. ಚಾಲುಕ್ಯಸಾಗರದಲ್ಲಿ ಮುಳುಗಿ ಹೋಗುತ್ತಿದ್ದ ರಟ್ಟಸಾಮ್ರಾಜ್ಯವನ್ನು ರಕ್ಷಿಸಿ ವೀರನಾರಾಯಣ ಎಂದು ಬಿರುದಾಂಕಿತನಾದನು ಎಂದು ಶಾಸನಗಳು ಇವನ ಪರಾಕ್ರಮವನ್ನು ಹೊಗಳಿವೆ. ಅಲ್ಲದೇ ವಿಂಗವಳ್ಳಿಯಲ್ಲಿ ಚಾಲುಕ್ಯರ ಸೇನೆಯನ್ನು ಯಮನಿಗೆ ಅರ್ಪಿಸಿದನು ಎಂದು ಸಹಾ ರಾಷ್ಟ್ರಕೂಟರ ಶಾಸನಗಳು ಹೇಳಿವೆ.

ಶಿವಮಾರನ ಕಾಲದಿಂದಲೂ ಗಂಗರಿಗೂ ಮತ್ತು ರಾಷ್ಟ್ರಕೂಟರಿಗೂ ವೈರತ್ವವಿತ್ತು. ಅಮೋಘನ ಕಾಲದಲ್ಲೂ ಶಿವಮಾರನ ಮಗ ರಾಚಮಲ್ಲ ಮತ್ತು ಅವನ ಮಗ ನೀತಿಮಾರ್ಗರು ರಾಷ್ಟ್ರಕೂಟರ ವಿರುದ್ಧ ಹೋರಾಟ ಮುಂದುವರೆಸಿದರು. ನೀತಿಮಾರ್ಗನು ರಾಷ್ಟ್ರಕೂಟರ ದಕ್ಷಿಣದ ಗಡಿಗಳ ಅನೇಕ ಪ್ರದೇಶಗಳನ್ನು ಗೆದ್ದನು. ಆದರೆ ನೃಪತುಂಗನ ಸಮರ್ಥ ಸೇನಾಧಿಪತಿ ಬಂಕೇಶ ಅವುಗಳನ್ನು ಮರಳಿ ಗೆದ್ದನು. ಅಮೋಘವರ್ಷನು ಗಂಗರೊಂದಿಗಿನ ಈ ನಿರಂತರ ಸಂಘರ್ಷಗಳನ್ನು ಕೊನೆಗಾಣಿಸಲು ಅವರೊಂದಿಗೆ ವೈವಾಹಿಕ ಸಂಬಂಧಗಳನ್ನು ಬೆಳೆಸಿದನು. ತನ್ನ ಮಗಳು ಚಂದ್ರೋಬಲಬ್ಬೆಯನ್ನು ೧ನೆ ಬೂತುಗನಿಗೆ ಕೊಟ್ಟು ವಿವಾಹ ಮಾಡಿದನು. ಈ ತೆರನಾದ ಸಂಬಂಧಗಳು ಎರಡೂ ಮನೆತನಗಳ ನಡುವೆ ಮುಂದೆ ಅನೇಕ ವರ್ಷಗಳ ತನಕ ಶಾಂತಿಯನ್ನು ಕಾಪಾಡಿದವು.

 

ಅವಿಧೇಯನಾಗಿದ್ದ ಗುಜರಾತಿನ ಮಾಂಡಲೀಕ ಧೃವನ ದಮನ:. ಅವನು ಕರ್ಕನ ಮಗ. ಆದರೆ  ತಂದೆಯಂತೆ ವಿಧೇಯನಲ್ಲ. ಇದು ಮುಂದೆ ಸುಮಾರು ೨೫ ವರ್ಷಗಳ ಧೀರ್ಘ ಸಂಘರ್ಷಗಳಿಗೆ ಎಡೆಮಾಡಿತು. ಕೊನೆಗೆ ೮೪೫ ರಲ್ಲಿ ಧೃವ ಯುದ್ಧದಲ್ಲಿ ಮರಣ ಹೊಂದಿದನು. ಅವನ ಮಗ ಅಕಾಲವರ್ಷ ಸಂಘರ್ಷ ಮುಂದುವರೆಸಿದನಾದರೂ ಅವನೂ ಬಂಕೇಶನಿಂದ ೮೫೦ರಲ್ಲಿ ಹತನಾದ. ನಂತರ ಬಂದ ೨ನೆ ಧೃವನು ಈ ಸಂಘರ್ಷಗಳನ್ನು ಕೊನೆಗಾಣಿಸಿದ

 

ಗುರ್ಜರ ಪ್ರತಿಹಾರರ ನಾಗಭಟ್ಟನ ಉತ್ತರಾಧಿಕಾರಿ ೧ನೆ ಭೋಜರಾಜನಿಂದ ಬಂಡಾಯಗಳು ಆರಂಭವಾದವು. ಅವನು ರಾಷ್ಟ್ರಕೂಟರ ಉತ್ತರದ ಗಡಿಗಳ ಮೇಲೆ ದಾಳಿ ಮಾಡಿದನಾದರೂ ಆ ವೇಳೆಗೆ ೨ನೆ ಧೃವ ಮತ್ತು ನೃಪತುಂಗರ ನಡುವಣ ಶಾಂತಿಯಿಂದಾಗಿ ಭೋಜರಾಜ ಹಿಮ್ಮೆಟ್ಟಿದ.

ಅಮೋಘನು ಪಾಲರ ದೇವಪಾಲನೊಂದಿಗೆ ಸಂಘರ್ಷಗಳಲ್ಲಿ ತೊಡಗಬೇಕಾಯಿತು. ಮೊದಲು ದೇವಪಾಲನು ಗೆದ್ದರೂ  ನಂತರ ಅಮೋಘನಿಂದ ಸೋತನು.

ಪಲ್ಲವರೊಂದಿಗೆ ಮೈತ್ರಿ

ಅಮೋಗನ ಕಾಲದಲ್ಲಿದ್ದ ೩ನೆ ನಂದಿವರ್ಮನಿಗೆ ಪಾಂಡ್ಯರ ಕಿರುಕುಳ ಉಂಟಾಗಲು ಅವನು ರಾಷ್ಟ್ರಕೂಟರ  ಸಹಾಯ ಯಾಚನೆ ಮಾಡಿದನು. ಅಮೋಘನು ಅವನಿಗೆ ಮಗಳು ಶಂಕಳನ್ನು ಕೊಟ್ಟು ವಿವಾಹ ಸಂಬಂಧ ಬೆಳೆಸಿದ. ಇದರಿಂದ ಪಾಂಡ್ಯರು ಹಿಮ್ಮೆಟ್ಟಬೇಕಾಯಿತು.

ಅಮೋಘನು ತನ್ನ ಕಾಲದಲ್ಲಿ ಬಂಡೆದ್ದ  ಆಳೂಪರ ವಿಮಲಾದಿತ್ಯನನ್ನು ಸದೆಬಡಿದನೆಂದು ಕೆ. ವಿ. ರಮೇಶ್‌ರವರು ಹೇಳಿದ್ದಾರೆ.

ಕೊನೆಯ ದಿನಗಳಲ್ಲಿ ತನ್ನ ಮಗ ಕೃಷ್ಣನಿಂದ ಅಧಿಕಾರಕ್ಕಾಗಿ ಬಂಡಾಯ ಆರಂಭವಾಯಿತು. ಬಂಕೇಶನಿಂದ ಕೃಷ್ಣನ ಬಂಧನವಾಯಿತು. ಕೆಲಕಾಲದ ಗಂಗವಾಡಿಯ ಸೆರೆವಾಸದ ನಂತರ  ಕೃಷ್ಣನನ್ನು ಮಾನ್ಯಕೇಟಕ್ಕೆ ಕರೆತರಲಾಯಿತು. ಬಂಕೇಶನ ಪ್ರಯತ್ನಗಳಿಂದಾಗಿ ತಂದೆ-ಮಗರ ನಡುವೆ ಸಂಧಾನ ಏರ್ಪಟ್ಟು ಶಾಂತಿ ನೆಲೆಸಿತು

ಈ ವೇಳೆ ಬಂಕೇಶನಿಗೆ ಬನವಾಸಿಯ ಅಧಿಪತ್ಯ ನೀಡಲಾಯಿತು. ಅವನ ಹೆಸರಿನಲ್ಲಿ ಬಂಕಾಪುರದ ನಿರ್ಮಾಣ ಸಹಾ ಮಾಡಿಸಲಾಯಿತು.

 

ಅಮೋಘವರ್ಷನ ಸುಧೀರ್ಘ ಆಡಳಿತವು ದಿಗ್ವಿಜಯದ ದೃಷ್ಟಿಯಿಂದ ಮಹತ್ವದ ಕಾಲವಲ್ಲ. ರಾಜ್ಯದ ವಿವಿಧ ಭಾಗಗಳಲ್ಲಿ ನಿರಂತರ ದಂಗೆ, ಕದನಗಳು ನಡೆದೇ ಇದ್ದವು. ಅವುಗಳನ್ನು ಅವನು ಅಡಗಿಸುವಲ್ಲಿ ಯಶಸ್ವಿಯಾದರೂ ಪೂರ್ವಿಕರಂತೆ ದಂಡಯಾತ್ರೆಗಳನ್ನು ನಡೆಸಲಿಲ್ಲ

ನೂತನ ರಾಜಧಾನಿ ಮಳಕೇಡದ ನಿರ್ಮಾತೃ ಇವನೇ.

ವೈವಾಹಿಕ ಸಂಬಂಧಗಳು

ಸ್ವಭಾವತಃ ಶಾಂತಿಪ್ರಿಯನಾದ ಅಮೋಘನು ಯುದ್ದದ ಬದಲು ಶಾಂತಿಯ ಮಾರ್ಗ ಅನುಸರಿಸಿದನು. ಮಗಳು ಚಂದ್ರೋಬಲಬ್ಬೆಯನ್ನು ಅಥವಾ ಅಬ್ಬಲಬ್ಬೆಗಂಗರ ೧ನೆ ಬೂತುಗನಿಗೆ ವಿವಾಹ ಮಾಡಿದನು. ಇವನು ನೀತಿಮಾರ್ಗನ ಮಗ. ಮತ್ತೊಬ್ಬ ರಾಷ್ಟ್ರಕೂಟರ  ಕನ್ಯೆ ಶೀಲಮಹಾದೇವಿ [ಗುಜರಾತಿನ ಕರ್ಕ ಸುವರ್ಣವರ್ಷನ ಸೋದರಿ] ಯನ್ನು ವೆಂಗಿಯ ಚಾಲುಕ್ಯರ ೫ನೆ ವಿಷ್ಣುವರ್ಧನನಿಗೆ ಕೊಟ್ಟನು. ಇವನು ವಿಜಯಾದಿತ್ಯನ ಮಗ. ಇನ್ನೊಬ್ಬ ಮಗಳಾದ ಶಂಕ ಅಥವಾ ಸಮುಕಳನ್ನು ಪಲ್ಲವರ ೩ನೆ ನಂದಿವರ್ಮನಿಗೆ ನೀಡಿದ್ದನು. ಕೊನೆಯ ಮಗಳು ರೇವಕ ನಿಮ್ಮಡಿ ಅಥವಾ ರೇವಬ್ಬೆ ನಿಮ್ಮಡಿಯನ್ನು ಗಂಗರ ನೀತಿಮಾರ್ಗ ಎರೆಗಂಗನಿಗೆ ವಿವಾಹ ಮಾಡಿದ್ದನು.

ಇದರಿಂದ ನೆರೆ ರಾಜ್ಯಗಳೊಂದಿಗೆ ಉತ್ತಮ ಭಾಂಧವ್ಯಗಳು ಮೂಡಿ ನಿರಂತರ ಶಾಂತಿಗೆ ಕಾರಣವಾಯಿತು.

 

ಅವನ ಸಂಧ್ಯಾಕಾಲದಲ್ಲಿ ಧರ್ಮ, ಶಾಂತಿ ಮತ್ತು ಸಾಹಿತ್ಯಗಳು ಅವನಿಗೆ ಹೆಚ್ಚು ಪ್ರಿಯವಾಗಿದ್ದವು

ಧರ್ಮ: ವೈಷ್ಣವ ಮತಾವಲಂಬಿ. ಪರಧರ್ಮಸಹಿಷ್ಣುವಾಗಿದ್ದನು. ಅವನು ಕೊಲ್ಹಾಪುರದ ಮಹಾಲಕ್ಷ್ಮಿಯ ಪರಮಭಕ್ತ. ಅಂತ್ಯಕಾಲದಲ್ಲಿ ಜೈನ ಮುನಿಗಳ ಪ್ರಭಾವಕ್ಕೆ ಒಳಗಾಗಿ ಜೈನ ಮತ ಸ್ವೀಕಾರ ಮಾಡಿದನು. ಆದರೂ ಮಹಾಲಕ್ಷ್ಮಿ ಮತ್ತು ಮಹಾವೀರ ಇಬ್ಬರಿಗೂ ಸಮಾನಭಕ್ತಿ ತೋರುತ್ತಿದ್ದನು.

 

ಸಾಹಿತ್ಯ: ಶಾಂತಿಪ್ರಿಯನಾದ ಕಾರಣ ಸಾಹಿತ್ಯದಲ್ಲಿ ಆಸಕ್ತಿ ಇದ್ದಿತು. ಅವನು ವೈದಿಕ ಮತ್ತು ಜೈನ ಕವಿಗಳಿಗೆ ಆಶ್ರಯ ನೀಡಿದ್ದನು. ಆದರೆ, ಬಹುತೇಕರು ಜೈನರು ಇವನ ಕಾಲದಲ್ಲಿ ಸಂಸ್ಕೃತ ಮತ್ತು ಕನ್ನಡದಲ್ಲಿ ಸಾಹಿತ್ಯ ರಚನೆಯಾಯಿತು.

ಕವಿಗಳು ಮತ್ತು ಕೃತಿಗಳು

ಶಕಟಾಯನ  ಶಬ್ಧಾನುಶಾಸನ ಮತ್ತು ಅಮೋಘವೃತ್ತಿ

ಮಹಾವೀರಾಚಾರ್ಯಗಣಿತಸಾರಸಂಗ್ರಹ

ಕುಮಧೇಂದುಸಿರಿಭೂವಲಯ

ಜಿನಸೇನಾಚಾರ್ಯಇವನು ಅಮೋಘನ ಜಿನ ಗುರು: ಹರಿವಂಶ, ಆದಿಪುರಾಣ, ಪಾರ್ಶ್ವಾಭ್ಯುದಯಂ

ಉಗ್ರಾದಿತ್ಯಕಲ್ಯಾಣಕಾರಕ

ಮಾಣಿಕ್ಯನಂದಿನ್‌ - ಪರೀಕ್ಷಾಮುಖಸೂತ್ರ

ವಿದ್ಯಾನಂದಿನ್‌ - ತತ್ವಾರ್ಥ ಶ್ಲೋಕ ವಾರ್ತಿಕಾ

ಗುಣಭದ್ರ, ಇವನು ಅಮೋಘನ ಮಗ ಕೃಷ್ಣನ ಗುರು. ಉತ್ತರಪುರಾಣ ಇವನ ಕೃತಿ.

ಪ್ರಭಾಚಂದ್ರಕುಮಾರ ಚಂದ್ರೋದಯ

ಅಮೋಘ ವರ್ಷಪ್ರಶ್ನೋತ್ತರ ರತ್ನಮಾಲಾ. ಕವಿರಾಜಮಾರ್ಗ [ಆಸ್ಥಾನಿಕ ಶ್ರೀವಿಜಯನಿಂದ ರಚಿತವೆಂಬ ಅಭಿಪ್ರಾಯವೂ ಇದೆ]

 

ಅರಬ್‌ ಯಾತ್ರಿಕ ಸುಲೇಮಾನ್೮೫೧ ರಲ್ಲಿ ಇವನ ರಾಜಧಾನಿಗೆ ಭೇಟಿ ನೀಡಿದ್ದನು; ಅಮೋಘನ ಸಾಮ್ರಾಜ್ಯವು ಜಗತ್ತಿನ ನಾಲ್ಕು ಶ್ರೇಷ್ಠ ಸಾಮ್ರಾಜ್ಯಗಳಲ್ಲಿ ಒಂದು ಎಂಬುದು ಅವನ ಅಭಿಪ್ರಾಯ.

ಆರ್ಎಸ್ಪಂಚಮುಖಿ ಅವರು ಇವನನ್ನು ಅಶೋಕನಿಗೆ ಹೋಲಿಕೆ ಮಾಡಿದ್ದಾರೆ. ಅವನ ಶಾಂತಿ ಮತ್ತು ಧಾರ್ಮಿಕ ಸ್ವಭಾವಗಳೇ ಇದಕ್ಕೆ ಕಾರಣ.

ಇವನಿಗಿದ್ದ ಬಿರುದುಗಳು: ಅತಿಶಯಧವಳ, ವೀರನಾರಾಯಣ, ರಟ್ಟಮಾರ್ತಾಂಡ, ಅಮೋಘರಾಮ, ಶ್ರೀವಲ್ಲಭ, ಲಕ್ಷ್ಮಿವಲ್ಲಭೇಂದ್ರ, ನರಲೋಕಚಂದ್ರ, ರಾಜಸಿಂಹ ಮತ್ತು ನಿತ್ಯಮಲ್ಲ

 

೨ನೆ ಕೃಷ್ಣ: ೮೭೮ ೯೧೪

ಇವನು ಅಮೋಘನ ನಂತರ ಅಧಿಕಾರಕ್ಕೆ ಬಂದನು. ಚೇದಿ ವಂಶದ ಕೋಕಲ್ಲನ ಮಗಳನ್ನು ವಿವಾಹವಾಗಿದ್ದನು. ಇವನ ಕಾಲದಲ್ಲಿ ರಾಷ್ಟ್ರಕೂಟರ  ಸಾಮ್ರಾಜ್ಯದಲ್ಲಿ ಅನೇಕ ಏಳು-ಬೀಳುಗಳು ಕಂಡುಬಂದವು

. ವೆಂಗಿಯ ಚಾಲುಕ್ಯರ ಜೊತೆ ಹೋರಾಟಗಳು

೩ನೆ ವಿಜಯಾದಿತ್ಯ ಇವನ ಕಾಲದಲ್ಲಿ ರಾಷ್ಟ್ರಕೂಟರ ಉತ್ತರದ ಗಡಿಗಳ ಮೇಲೆ ದಾಳಿ ಮಾಡಿ ಅವುಗಳನ್ನು ಗೆದ್ದನು. ಮುಂದೆ ಕೃಷ್ಣನು ತನ್ನ ಮಾವ ಮತ್ತು ವೇಮುಲವಾಡದ ಅರಿಕೇಸರಿಯ ನೆರವಿನೊಂದಿಗೆ ವಿಜಯಾದಿತ್ಯನ ಉತ್ತರಾಧಿಕಾರಿ ಭೀಮನನ್ನು ಸೆರೆ ಹಿಡಿದನು. ಆದರೆ ಬಿಡುಗಡೆಯ ನಂತರ ಭೀಮನು ಮತ್ತೆ ದಂಗೆ ಎದ್ದನು. ರಾಷ್ಟ್ರಕೂಟರ  ಸೇನಾಪತಿ ಗುಂಡಯ್ಯ ನಿರವದ್ಯಪುರದ ಬಳಿ ನಡೆಸಿದ ಕಾಳಗದಲ್ಲಿ ಭೀಮನ ಮಗ ಹತನಾದನು. ಇದರೊಂದಿಗೆ ಅವರೊಂದಿಗಿನ ಸಂಘರ್ಷಗಳು ಕೊನೆಗೊಂಡವು

. ಪ್ರತಿಹಾರರ ರಾಜ ಭೋಜನು ಉಜ್ಜಯಿನಿ ಸುತ್ತಲಿನ ಪ್ರದೇಶಗಳನ್ನು ವಶಪಡಿಸಿಕೊಂಡನು. ಆರಂಬದಲ್ಲಿ ನರ್ಮದಾ ಬಳಿ ನಡೆದ ಕಾಳಗದಲ್ಲಿ ಕೃಷ್ಣನು ಸೋತರೂ ನಂತರ ಚೇದಿ ಮತ್ತು ಗುಜರಾತಿನ ಮಾಂಡಲೀಕರ ನೆರವಿನೊಂದಿಗೆ ಕಳೆದುಕೊಂಡ ಪ್ರದೇಶಗಳನ್ನು ಮತ್ತೆ ಗಳಿಸಿಕೊಂಡನು

. ಚೋಳರೊಡನೆ ಸಂಬಂಧಗಳು

ರಾಷ್ಟ್ರಕೂಟರ  ಕಾಲದಲ್ಲಿ ಮತ್ತೆ ಉದಯಿಸಿದ ಚೋಳರೊಂದಿಗೆ ಕೃಷ್ಣನು ವೈವಾಹಿಕ ಸಂಬಂಧ ಬೆಳೆಸಿದನು.  ಚೋಳರ ೧ನೆ ಆದಿತ್ಯನಿಗೆ ತನ್ನ ಮಗಳನ್ನು ಕೊಟ್ಟು ವಿವಾಹ ಮಾಡಿದನು. ಆದರೆ ಅವಳ ಮಗ ಕನ್ಹರನಿಗೆ ಚೋಳ ಸಿಂಹಾಸನ ಸಿಗದಿರಲು ಅವರೊಂದಿಗೆ ಯುದ್ಧ ಮಾಡಬೇಕಾಯಿತು. ೯೧೧ ರಲ್ಲಿ ನಡೆದ ಯುದ್ಧದಲ್ಲಿ ಸೋಲು ಅನುಭವಿಸಿದನು. ಚೋಳರೊಂದಿಗಿನ ವೈವಾಹಿಕ ಸಂಬಂಧಗಳಿಂದ ಲಾಭವೇನು ಆಗಲಿಲ್ಲ.

. ಗುಜರಾತಿನ ಶಾಖೆಯನ್ನು ಕೊನೆಗಾಣಿಸಿದನು

ಇವನು ಜೈನ ಮತಾವಲಂಬಿ. ಆದರೆ ಪರಮತಸಹಿಷ್ಣು. ಗುಣಭದ್ರ ಇವನ ಗುರುಗಳು

ಇವನ ಹಿರಿಯ ಮಗ ಜಗತ್ತುಂಗ ಅವನಿಗಿಂತ ಮೊದಲೇ ಗತಿಸಿದ್ದ. ಆದ್ದರಿಂದ ಜಗತ್ತುಂಗನ ಮಗ ೩ನೆ ಇಂದ್ರ ಪಟ್ಟಕ್ಕೆ ಬಂದನು

 

೩ನೆ ಇಂದ್ರ - ೯೧೪ ೯೨೯

ಇವನು ಸಮರ್ಥ ಸೇನಾನಿ ಮತ್ತು ದಿಗ್ವಿಜಯಿಯಾಗಿದ್ದನು. ತಾನು ಪಟ್ಟಕ್ಕೆ ಬಂದಾಗ ತುಲಾಭಾರ ನೆರವೇರಿಸಿ ಅಪಾರವಾದ ದಾನಗಳನ್ನು ನೀಡಿದನು. ದೇವಾಲಯಗಳಿಗೆ ಮತ್ತು ಬ್ರಾಹ್ಮಣರಿಗೆ ೪೦೦ ಗ್ರಾಮಗಳ ದಾನ ನೀಡಿದನು.

ಉತ್ತರ ಭಾರತದ ಮೇಲೆ ದಂಡಯಾತ್ರೆ

ಸನ್ನಿವೇಶ: ಪ್ರತಿಹಾರರ ರಾಜ ಮಹೇಂದ್ರಪಾಲನ ಮರಣದ ಕಾರಣ ಅವರ ಪ್ರಾಬಲ್ಯ ಕುಂಠಿತವಾಗಿತ್ತು. ಅವನ ಮಕ್ಕಳಾದ ಮಹಿಪಾಲ ಮತ್ತು ೨ನೆ ಭೋಜರಲ್ಲಿ ಅಧಿಕಾರಕ್ಕಾಗಿ ಕಲಹವೇರ್ಪಟ್ಟಿತ್ತು. ಈ ಕಲಹದಲ್ಲಿ ರಾಷ್ಟ್ರಕೂಟರ  ಸಂಬಂಧಿ ಚೇದಿ ರಾಜ ಕೋಕಲ್ಲನು ೨ನೆ ಭೋಜನ ಪಕ್ಷ ವಹಿಸಿದ್ದ ಕಾರಣ ಅವನು ಅಧಿಕಾರಕ್ಕೆ ಬಂದನು.

ಆದರೆ ಮುಂದೆ ಮಹಿಪಾಲನು ಭೋಜನನ್ನು ಪದಚ್ಯುತಗೊಳಿಸಿ ತಾನು ಅಧಿಕಾರ ವಹಿಸಿಕೊಂಡನು. ಅಲ್ಲದೇ ಪ್ರತಿಹಾರರ ಸಾಮಂತ ಉಪೇಂದ್ರ ಎಂಬುವನು ರಾಷ್ಟ್ರಕೂಟರ ಗೋವರ್ಧನ ಎಂಬ ಪ್ರದೇಶವನ್ನು ವಶಪಡಿಸಿಕೊಂಡನು. ಇದು ಇಂದ್ರನಿಗೆ ಪ್ರತಿಹಾರರ ಮೇಲೆ ಯುದ್ಧ ಸಾರಲು ಕಾರಣವಾಯಿತು. ಅವನು ಉಪೇಂದ್ರನನ್ನು ಸದೆಬಡಿದು ಗೋವರ್ಧನವನ್ನು ಗೆದ್ದನು. ಮಾಳವ ಇಂದ್ರನ ವಶವಾಯಿತು. ೯೧೬ ರಲ್ಲಿ ಅವನ ಸೈನ್ಯ ಕಾಲ್ಪಿ ಬಳಿ ಯಮುನಾ ನದಿ ದಾಟಿ ರಾಜಧಾನಿ ಕನೋಜದ ಮೇಲೆ ದಾಳಿ ಮಾಡಿತು. ಮಹಿಪಾಲ ರಾಜಧಾನಿಯಿಂದ ಪಲಾಯನ ಮಾಡಿದನು. ಆದರೆ ರಾಷ್ಟ್ರಕೂಟರ  ಸೇನಾಪತಿ ನರಸಿಂಹನು ಅವನ ಬೆನ್ನಟ್ಟಿದನು. ನರಸಿಂಹನು ಮಹಿಪಾಲನಿಗೆ ವಿಶ್ರಮಿಸಲೂ ಸಹಾ ಅವಕಾಶ ನೀಡದೆ ಕಾಡಿದನು. ಗದಾಯುದ್ಧದಲ್ಲಿ ಇದರ ವರ್ಣನೆ ಇದೆ

ಇಂದ್ರನು ಉತ್ತರದಿಂದ ಮರಳಿದ ನಂತರ ವೆಂಗಿಯ ರಾಜಕೀಯದಲ್ಲಿ ಹಸ್ತಕ್ಷೇಪ ಮಾಡಬೇಕಾಯಿತು. ವಿಜಯಾದಿತ್ಯನ ವಿರುದ್ಧ ೨ನೆ ಯುದ್ಧಮಲ್ಲನಿಗೆ ನೆರವು ನೀಡಿ ಅವನನ್ನು ಅಧಿಕಾರಕ್ಕೆ ತಂದನು

ಪ್ರಭೂತವರ್ಷ, ನಿತ್ಯವರ್ಷ, ರಟ್ಟಕಂದರ್ಪ, ರಾಜಮಾರ್ತಾಂಡ, ಕೀರ್ತಿನಾರಾಯಣ, ಶ್ರೀವಲ್ಲಭ ಎಂಬುವು ಇವನ ಬಿರುದುಗಳು.

ಇಂದ್ರನಿಗೆ ಇಬ್ಬರು ಮಕ್ಕಳಿದ್ದರು. ಅವರುಗಳೆಂದರೆ, ೨ನೆ ಅಮೋಘವರ್ಷ ಮತ್ತು ೪ನೆ ಗೋವಿಂದ

ಇಂದ್ರನ ನಂತರ ೯೨೯ರಲ್ಲಿ ೨ನೆ ಅಮೋಘವರ್ಷ ಅಧಿಕಾರಕ್ಕೆ ಬಂದನು. ಆದರೆ ೪ನೆ ಗೋವಿಂದ ಅಧಿಕಾರಕ್ಕಾಗಿ ಅವನನ್ನು ಕೊಲ್ಲಿಸಿ ತಾನು ಪಟ್ಟಕ್ಕೆ ಬಂದನು

 

೪ನೆ ಗೋವಿಂದ ೯೩೦ ೩೬

ಇವನು ಅಣ್ಣನ ಕೊಲೆ ಮಾಡಿಸಿ ಅಧಿಕಾರಕ್ಕೆ ಬಂದವನಾದ್ದರಿಂದ ಜನಪ್ರಿಯನಾಗಿರಲಿಲ್ಲ. ಭ್ರಷ್ಟ ಮತ್ತು ವಿಲಾಸಿಯಾದ ಕಾರಣ ಪ್ರಮುಖ ಸಾಮಂತರು ಅವನ ವಿರೋದಿಗಳಾದರು. ಚೇದಿ ರಾಜ, ವೇಮುಲವಾಡದ ಚಾಲುಕ್ಯರ ಇಮ್ಮಡಿ ಅರಿಕೇಸರಿ  ಮತ್ತು ಗಂಗರ ಬೂತುಗ  ಅವರಲ್ಲಿ ಪ್ರಮುಖರು. ಅವರೆಲ್ಲರೂ ೩ನೆ ಅಮೋಘವರ್ಷನನ್ನು ಅಧಿಕಾರಕ್ಕೆ ತರಲು ಪ್ರಯತ್ನ ನಡೆಸಿದರು ಮತ್ತು ಸಾಮಂತರು ಮತ್ತು ರಾಜಪ್ರಮುಖರ ನಿರ್ಣಯದಂತೆ ೩ನೆ ಅಮೋಘವರ್ಷ ಅಧಿಕಾರಕ್ಕೆ ಬಂದನು. ಇವನು ಜಗತ್ತುಂಗನ ಮಗ

೩ನೆ ಅಮೋಘವರ್ಷ: ೯೩೬ ೩೯

ಇವನಿಗೆ ಲೌಕಿಕ ಜೀವನಕ್ಕಿಂತ ಪಾರಮಾರ್ಥ ಜೀವನದಲ್ಲಿ ಹೆಚ್ಚು ಆಸಕ್ತಿ ಇದ್ದಿತು. ಆದ್ದರಿಂದ ಆಡಳಿತವೆಲ್ಲಾ ರಾಜಕುಮಾರ ಕೃಷ್ಣನ ಕೈಯಲ್ಲಿತ್ತು. ೯೩೯ ರಲ್ಲಿ ತಂದೆಯ ಮರಣದ ನಂತರ ಕೃಷ್ಣನು ಅಧಿಕಾರಕ್ಕೆ ಬಂದನು

 

೩ನೆ ಕೃಷ್ಣ - ಕಾಲ ೯೩೯ ೬೭

ಇವನು ರಾಷ್ಟ್ರಕೂಟರ ಕೊನೆಯ ಶ್ರೇಷ್ಠ ಅರಸ. ಪರಾಕ್ರಮಿ, ವೀರಯೋಧ, ಸಾಹಿತ್ಯದ ಉದಾರ ಪೋಷಕ. ಇವನು ರಾಚಮಲ್ಲನಿಂದ ಗಂಗರ ೨ನೆ ಬೂತುಗನಿಗೆ ಅಧಿಕಾರ ಕೊಡಿಸಿದ. ಮುಂದೆ ಬೂತುಗನ ನೆರವಿನಿಂದ ಚೋಳರ ಮೇಲೆ ಯುದ್ಧ ಮಾಡಿದನು.

ಈ ದಿಗ್ವಿಜಯದಲ್ಲಿ ಕಂಚಿ, ತಂಜಾವೂರುಗಳ ಮೇಲೆ ವಿಜಯ ಸಾಧಿಸಿದನು. ಅದರ ನೆನಪಿಗಾಗಿ ಕಂಚಿಕೊಂಡ ಬಿರುದು ಧಾರಣೆ ಮಾಡಿದನು.

ಇವನು ೯೪೯ ರಲ್ಲಿ ತಕ್ಕೋಳಂ ಬಳಿ ೩ನೆ ಪರಾಂತಕ ಚೋಳನ ಸೇನೆಯೊಂದಿಗೆ ಭೀಕರ ಯುದ್ಧ ಮಾಡಬೇಕಾಯಿತು. ಆದರೆ ಈ ಯುದ್ಧದಲ್ಲಿ ಚೋಳರಿಗೆ ಸೋಲು ಉಂಟಾಯಿತು. ಚೋಳ ಸೇನೆಯ ನೇತೃತ್ವ ವಹಿಸಿದ್ದ ಅವರ  ಯುವರಾಜ ರಾಜಾದಿತ್ಯನನ್ನು ಬೂತುಗನು ಕೊಂದು ಹಾಕಿದನು. ಇದರಿಂದ ಸಂಪ್ರೀತನಾದ ಕೃಷ್ಣನು ಬೂತುಗನಿಗೆ ಬನವಾಸಿ, ಬೆಳುವಲ, ಬಾಗೇವಾಡಿ, ಕಿಸುನಾಡುಗಳ ರಾಜ್ಯಪಾಲತ್ವ ದಯಪಾಲಿಸಿದನು

ನಂತರ ಪಾಂಡ್ಯರು ಮತ್ತು ಚೇರರನ್ನು ಸೋಲಿಸಿ ರಾಮೇಶ್ವರದವರೆಗೆ ದಿಗ್ವಿಜಯ ಮುಂದುವರೆಸಿ ಅಲ್ಲಿ ವಿಜಯಸ್ತಂಭ ಸ್ಥಾಪನೆ ಮಾಡಿದನು. ಅಲ್ಲದೇ ಕೃಷ್ಣೇಶ್ವರ ದೇವಾಲಯದ ನಿರ್ಮಾಣ ಸಹ ಮಾಡಿಸಿದನು.

ಮುಂದೆ ಇವನು ಉತ್ತರದ ದಂಡಯಾತ್ರೆಗಳನ್ನು ಕೈಗೊಂಡನು. ಈ ವೇಳೆ ಬೂತುಗನ ಮಗ ೨ನೆ ಮಾರಸಿಂಹನು ಸೇನೆಯ ನೇತೃತ್ವ ವಹಿಸಿದ್ದ. ಮಾಳವ ವಶಪಡಿಸಿಕೊಳ್ಳಲಾಯಿತು. ಗುರ್ಜರರ ಪ್ರದೇಶಗಳನ್ನು ವಶಪಡಿಸಿಕೊಂಡ ಮಾರಸಿಂಹನಿಗೆ ಗೂರ್ಜರಾಜಾಧಿರಾಜ ೆಂಬ ಬಿರುದು ನೀಡಲಾಯಿತು. ಪಾರಮಾರರ ಸೀಯುಕ ಹರ್ಷನು ಸಹಾ  ಸೋತು ಶರಣಾಗತನಾದನು. ಇದರಿಂದ ಪಾರಮಾರರು ಮತ್ತು ಪ್ರತಿಹಾರರು ಇವರ ಸಾಮಂತರಾದರು

ಕೃಷ್ಣನು ವೆಂಗಿ ರಾಜಕೀಯದಲ್ಲಿ ರಾಜನಿರ್ಮಾಪಕನ ಪಾತ್ರ ವಹಿಸಿದ್ದನು. ೯೫೬ ರಲ್ಲಿ ತನ್ನ ಸಹಾಯ ಯಾಚಿಸಿದ ಇಮ್ಮಡಿ ಯುದ್ಧ ಮಲ್ಲನ ಮಗ ಪಾಡಪನನ್ನು ಪಟ್ಟಕ್ಕೆ ತಂದನು. ಪಟ್ಟ ಕಳೆದುಕೊಂಡ ೨ನೆ ಅಮ್ಮರಾಜನು ಕಳಿಂಗಕ್ಕೆ ಪಲಾಯನ ಮಾಡಿದನು.

ಅಕಾಲವರ್ಷ, ವಲ್ಲಭನರೇಂದ್ರ, ಪೃಥ್ವಿವಲ್ಲಭ ಎಂಬುವು ಇವನ ಬಿರುದುಗಳು.

 

ಕೊಟ್ಟಿಗ ೯೬೭ ೯೭೨

ಕೃಷ್ಣನ ಮಕ್ಕಳು ಅವನಿಗೂ ಮೊದಲೇ ಮರಣ ಹೊಂದಿದ್ದರು ಮತ್ತು ಮೊಮ್ಮೊಗ ಇಂದ್ರ ಇನ್ನೂ ಅಪ್ರಾಪ್ತನಾಗಿದ್ದ ಕಾರಣ ಅವನ ಸೋದರ ಕೊಟ್ಟಿಗ ಅಧಿಕಾರಕ್ಕೆ ಬಂದನು

ಕೊಟ್ಟಿಗನು ಅಸಮರ್ಥ ಮತ್ತು  ವಯೋವೃದ್ಧನಾಗಿದ್ದ. ಇದರಿಂದಾಗಿ ಸಾಮಂತರು ಅವಿಧೇಯತೆ ತೋರಿ ಸ್ವಾತಂತ್ರ್ಯ ಘೋಷಣೆ ಮಾಡಿಕೊಂಡರು.

ಹಿಂದೆ ಕೃಷ್ಣನಿಂದ ಸೋತ ಪಾರಮಾರರ ಸೀಯೂಕ ಹರ್ಷನು ತನ್ನ ಸೇಡು ತೀರಿಸಿಕೊಳ್ಳಲು ೯೭೨ ರಲ್ಲಿ ರಾಜಧಾನಿಯ ಮೇಲೆ ಧಾಳಿ ಮಾಡಿ  ನಾಶಗೈಯ್ಯತೊಡಗಿದನು. ಈ ವೇಳೆ ರಾಷ್ಟ್ರಕೂಟರ ಸಾಮಂತರಾರು ಕೊಟ್ಟಿಗನ ನೆರವಿಗೆ ಬರಲಿಲ್ಲ. ದೂರದ ಗಂಗರ ಮಾರಸಿಂಹನು ನೆರವಿಗೆ ಬಂದರೂ ಕಾಲ ಮೀರಿತ್ತು. ಕೊಟ್ಟಿಗನು ರಾಜಧಾನಿಯ ಪತನ ಕಣ್ಣಾರೆ ಕಂಡು ಗತಿಸಿದನು

ಕೊಟ್ಟಿಗನಿಗೆ ಮಕ್ಕಳಿರದ ಕಾರಣ ಅವನ ಸೋದರ ನಿರುಪಮನ ಮಗ ಕರ್ಕನು ಅಧಿಕಾರಕ್ಕೆ ಬಂದನು

ಇಮ್ಮಡಿ ಕರ್ಕ – ೯೭೨-೭೩

ಇವನು ರಾಷ್ಟ್ರಕೂಟರ  ಕೊನೆಯ ಅರಸ. ಇವನ ಕಾಲದಲ್ಲಿ ಅನೇಕ ಸಣ್ಣ-ಪುಟ್ಟ ಸಾಮಂತರು ಪ್ರಬಲಿಸಿದರು. ಗಂಗರ ಮಾರಸಿಂಹನು ೩ನೆ ಕೃಷ್ಣನ ಮೊಮ್ಮೊಗ ೪ನೆ ಇಂದ್ರನನ್ನು ಅಧಿಕಾರಕ್ಕೆ ತರಲು ಪ್ರಯತ್ನ ಮಾಡಿದ. ಇದರಿಂದ ರಾಜಧಾನಿಯು ಅಂತಃಕಲಹದ ಬೀಡಾಯಿತು. ಇದರ ಲಾಭ ಪಡೆದ ರಾಷ್ಟ್ರಕೂಟರ ಚಾಳುಕ್ಯ ಸಾಮಂತ ತೈಲಪನಿಂದ ರಾಜಧಾನಿಯ ಮುತ್ತಿಗೆ ಆರಂಭವಾಯಿತು. ಈ ವೇಳೆ ಕರ್ಕನು ರಾಜಧಾನಿಯಿಂದ ಪಲಾಯನ ಮಾಡಿದನು. ತೈಲಪನು ರಾಜಧಾನಿಯನ್ನು ವಶಪಡಿಸಿಕೊಂಡು ರಾಷ್ಟ್ರಕೂಟರ  ಮನೆತನದ ಅಂತ್ಯಕ್ಕೆ ಕಾರಣನಾದನು.

ಮುಂದೆ ಮಾರಸಿಂಹನು ೪ನೆ ಇಂದ್ರನನ್ನು ಮತ್ತೆ ಅಧಿಕಾರಕ್ಕೆ ತರಲು ಯತ್ನಿಸಿದನಾದರೂ ಚಾಲುಕ್ಯರ ಪ್ರಾಬಲ್ಯದಿಂದ ಅದು ಸಾಧ್ಯವಾಗಲಿಲ್ಲ. ಕಡೆಗೆ ೪ನೆ ಇಂದ್ರನು ಶ್ರವಣಬೆಳಗೊಳದಲ್ಲಿ ಸಲ್ಲೇಕನ ಕೈಗೊಂಡು ಮೃತನಾದನು. ಅಲ್ಲಿಗೆ ರಾಷ್ಟ್ರಕೂಟರ ಮನೆತನ ಸಂಪೂರ್ಣವಾಗಿ ನಶಿಸಿತು.

   ಸುಮಾರು ೨೨೦ ವರ್ಷಗಳ ಕಾಲ ಅತ್ಯಂತ ವೈಭವದಿಂದ ಮೆರೆದ ರಾಷ್ಟ್ರಕೂಟರ ಪತನವು ಅವರ ಮಾಂಡಲೀಕರಿಂದಲೇ ಆಯಿತು. ೭೫೩ ರಲ್ಲಿ ಬಾದಾಮಿಯ ಚಾಲುಕ್ಯರ ಸಾಮಂತನಾಗಿದ್ದ ರಾಷ್ಟ್ರಕೂಟರ ದಂತಿದುರ್ಗನು ಬಾದಾಮಿಯ ಚಾಲುಕ್ಯರ ೨ನೆ ಕೀರ್ತಿವರ್ಮನನ್ನು ಪದಚ್ಯುತನಾಗಿಸಿ ರಾಷ್ಟ್ರಕೂಟರ ಅಧಿಕಾರವನ್ನು ಸ್ಥಾಪಿಸಿದ್ದನು. ಮುಂದೆ ಅದೇ ಮನೆತನಕ್ಕೆ ಸೇರಿದ ಅವರ ಮಾಂಡಲೀಕನಾದ ಚಾಲುಕ್ಯರ ತೈಲಪನಿಂದಲೇ ರಾಷ್ಟ್ರಕೂಟರ ಮನೆತನವು ಕೊನೆಗೊಂಡುದು ಇತಿಹಾಸದ ವಿಪರ್ಯಾಸವೇ ಸರಿ.

ಪರಾಮರ್ಶನ ಗ್ರಂಥಗಳು: ಸಮಗ್ರ ಭಾರತದ ಇತಿಹಾಸ; ಫಾಲಾಕ್ಷ

            ಸಂಕ್ಷಿಪ್ತ ಕರ್ನಾಟಕದ ಇತಿಹಾಸ, ಸೂರ್ಯನಾಥ ಕಾಮತ್.

          ಕೆಲವು ಅಂತರ್ಜಾಲದ ಪುಟಗಳಿಂದ.

{-----------}

Comments

Popular posts from this blog

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಸಾಹಿತ್ಯಾಧಾರಗಳು - Literary Sources