Part 10 ಉಣ್ಣುವ ಬಾಯಿಗೆ ದುಡಿಯುವ ಕೈಗಳ ಅಲೆದಾಟ!
ಮೈಸೂರಿನ ವಿಶೇಷ ಶಿಕ್ಷಕ ತರಬೇತಿ ಮುಗಿಸಿ ಊರಿಗೆ ಮರಳಿದ
ನಂತರ ಹಾಸ್ಟೆಲ್ಲಿನಿಂದ ತಂದಿದ್ದ ನನ್ನ ಬ್ಯಾಗು ಮತ್ತು ಸೂಟ್ಕೇಸುಗಳನ್ನು ಆಗ ಪದವಿ ತರಗತಿಗಳಲ್ಲಿ
ಓದುತ್ತಿದ್ದ ನನ್ನ ತಂಗಿ (ಮಾಲತಿ, ನನಗಿಂತ ಎರಡೂವರೆ ವರ್ಷಕ್ಕೆ ಚಿಕ್ಕವಳು) ಮರುದಿನವಿರಬಹುದು, ಮನೆಯ
ಮುಂದಿನ ಅಂಗಳದಲ್ಲಿಟ್ಟು ಅದರಲ್ಲಿನ ಬಟ್ಟೆ, ನೋಟ್ಸುಗಳು ಹಾಗೂ ಇನ್ನಿತರೆ ಎಲ್ಲಾ ವಸ್ತುಗಳನ್ನು ಬಿಸಿಲಿಗೆ
ಹಾಕಿ ಚೆನ್ನಾಗಿ ಒಣಗಿಸಿದಳು. ಏಕೆಂದರೆ BCM ಹಾಸ್ಟೆಲ್ಲಿನಲ್ಲಿ ನಮ್ಮೊಂದಿಗಿದ್ದು ದಿನವೂ ರಾತ್ರಿ
ನಮ್ಮ ರಕ್ತ ಹೀರುತ್ತಿದ್ದ ತಿಗಣೆಗಳು ಬಾಡಿಗೆಯ ನಾಡಹೆಂಚಿನ ನಮ್ಮ ಮನೆಯೊಳಗೆ ಸೇರಿಕೊಳ್ಳದಿರಲಿ ಎಂಬುದು
ಅವಳ ಕಾಳಜಿ. ಮನೆಗೆ ಬಂದಾಗ ಒಮ್ಮೆ ಸ್ನಾನ ಮಾಡಿ ಬರಿಯ ಟವೆಲ್ ಸುತ್ತಿಕೊಂಡು ಮುಂದಿನ ಕೋಣೆಯಲ್ಲಿ
ನಿಂತಿದ್ದ ನನ್ನ ಬೆನ್ನನ್ನೊಮ್ಮೆ ಪರಿಶೀಲಿಸಿದ ತಂಗಿ ಅಲ್ಲಿನ ಕಪ್ಪು ಕಲೆಗಳನ್ನು ಗಮನಿಸಿದಳು. ಬಹುಶಃ
ಅವು ತಿಗಣೆಗಳ ಕಡಿತದಿಂದಾದುವು ಎಂಬುದು ಅವರ ಅಭಿಪ್ರಾಯವಾಗಿತ್ತು. ಕೆಲದಿನಗಳ ಮನೆ ವಾಸ್ತವ್ಯದ ನಂತರ
ನನಗೆ ಮುಂದಿನ ಚಿಂತೆ ಬೆನ್ನು ಹತ್ತಿತು. ಆಯಿತಲ್ಲ, ಹದಿನೆಂಟಕ್ಕೆ ಆಘಾತದಂತೆರಗಿದ್ದ ಅಂಧತ್ವವನ್ನು
ಮೆಟ್ಟಿ ಓಡಾಡುವುದನ್ನು ಕಲಿತದ್ದು, ದೃಷ್ಟಿಯಿಲ್ಲದಿದ್ದರೂ PUC ಯಲ್ಲಿ 72% ಪಡೆದದ್ದು, ಮತ್ತೆ ಒಂದು
ವರ್ಷ ವ್ಯಯಿಸಿ ಬ್ರೈಲ್ ಓದು-ಬರಹ ಕಲಿತದ್ದು ಮತ್ತು ದೂರದ ಮೈಸೂರಿಗೆ ಹೋಗಿ ಶಿಕ್ಷಕ ತರಬೇತಿಯನ್ನು
ಪಡೆದದ್ದು; ಇನ್ನು ಮುಂದಿನದು ಸಂಪಾದನೆಯ ಮಾರ್ಗ. ಅದೇ ನನ್ನ ಚಿಂತೆ! ನನಗಾಗಲೇ 22 ವರ್ಷ ನಡೆಯುತ್ತಿತ್ತು.
ಇನ್ನು ಮನೆಯ ಏಕೈಕ ದುಡಿಮೆಗಾರ ನನ್ನಪ್ಪನನ್ನು ಖರ್ಚಿಗಾಗಿ ಹಣ ಕೇಳುವುದು ನನ್ನಿಂದ ಅಸಾಧ್ಯದ ಮಾತಾಗಿತ್ತು.
ಏಕೆಂದರೆ, ಇನ್ನೂ ಪದವಿ ಓದುತ್ತಿದ್ದ ತಂಗಿ ಮನೆಯಲ್ಲಿದ್ದಳು, ಮದುವೆ ಮಾಡಿದ್ದರೂ ಅಪ್ಪನ ಮನೆಯನ್ನೇ
ಆಶ್ರಯಿಸಿದ್ದ ಅಕ್ಕ ಮತ್ತು ಭಾವ, ಒಂದು ವರ್ಷದ ಹಿಂದಷ್ಟೇ ಹೊಸಜೀವನಕ್ಕೆ ಕಾಲಿಟ್ಟಿದ್ದ ಅಣ್ಣ ದೂರದ
ಶಿವಮೊಗ್ಗದಲ್ಲಿ ಕೇವಲ ಎರಡು ಸಾವಿರಗಳಿಗೆ ಮೀರದ ಸಂಬಳಕ್ಕೆ ಡ್ರೈವರ್, ಅಡಿಕೆ ಮಂಡಿಯ ಗುಮಾಸ್ತ,
ಜೊತೆಗೆ ಅವನ ಸಾಹುಕಾರ ಕಟ್ಟಿಸುತ್ತಿದ್ದ ಮನೆಯ ಉಸ್ತುವಾರಿ ನೋಡಿಕೊಳ್ಳುವ ಎಲ್ಲಾ ಕೆಲಸಗಳನ್ನೂ ಮಾಡುತ್ತಿದ್ದ.
ಅಪ್ಪನಿಗಾಗಲೇ 55-56ರ ವಯಸ್ಸು. ಇನ್ನೆರಡು ವರ್ಷಗಳಿಗೆ ಅವರಿಗೆ ನಿವೃತ್ತಿಯ ವಯಸ್ಸು ಸಮೀಪಿಸುತ್ತಿತ್ತು.
ಅವರಿನ್ನೂ ಬೆಳೆದು ನಿಂತಿದ್ದ ಕಿರಿಯ ಮಗಳ ಮದುವೆ ಮತ್ತು ಕಣ್ಣು ಕಾಣದ ನನ್ನ ಜೀವನಕ್ಕೊಂದು ದಾರಿ
ಮಾಡುವುದರ ಜೊತೆಗೆ ಮನೆಯಲ್ಲಿದ್ದ ಹಿರಿಯ ಮಗಳು ಮತ್ತು ಅಳಿಯರಿಗೆ ಏನು ಮಾಡಬೇಕು ಎನ್ನುವ ಚಿಂತೆಯ
ಜೊತೆಗೆ ಸರಿಯಾದ ದುಡಿಮೆಯ ಮಾರ್ಗವಿಲ್ಲದ, ಅದಾಗಲೇ ಕೆಲವು ಸದ್ಗುಣಗಳ ಸಂಪನ್ನನಾಗಿದ್ದ ಹಿರಿಯ ಮಗನ
ಭವಿಷ್ಯದ ಪ್ರಶ್ನೆಯು ಕಾಡುತ್ತಿತ್ತು. ಬಹುಶಃ ಇದೇ ಆಸು-ಪಾಸಿನಲ್ಲಿ ಅವರಿಗೆ ಸಕ್ಕರೆ ಕಾಯಿಲೆ ಮತ್ತು
ರಕ್ತದೊತ್ತಡದ ಮೊದಲ ಲಕ್ಷಣಗಳು ಕಾಣಿಸಿಕೊಂಡದ್ದು ಎಂಬುದು ನನ್ನ ನೆನಪು.
ನನ್ನೊಂದಿಗೆ ತರಬೇತಿಯಲ್ಲಿದ್ದ ಸಹಪಾಠಿಗಳಲ್ಲಿ ಕೆಲವರು
ಆ ಮೊದಲೇ ಅಂಧರಿಗಾಗಿ ಸೇವೆ ಸಲ್ಲಿಸುತ್ತಿದ್ದ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಗಳಿಂದ ಶಿಕ್ಷಕ ತರಬೇತಿಗೆ
ನಿಯೋಜನೆಗೊಂಡು ಬಂದವರಿದ್ದರು. ಅವರುಗಳಿಗೆ ಊರಿಗೆ ಮರಳಿದ ನಂತರ ಕೆಲಸ ಹುಡುಕುವ ಚಿಂತೆಯಿರಲಿಲ್ಲ.
ಇನ್ನು ನಮ್ಮ ಅಂತಿಮ ಪರೀಕ್ಷೆಗಳು ನಡೆಯುವಾಗಲೇ ಮಂಜುಳಾ ಮೇರ್ವಾಡೆ ಎನ್ನುವ ಸಹಪಾಠಿಯೊಬ್ಬರಿಗೆ ಸರ್ಕಾರಿ
ಪ್ರೌಢಶಾಲೆಯ ಸಂಗೀತ ಶಿಕ್ಷಕರಾಗಿ ನೇಮಕಾತಿಗೊಂಡ ಆಯ್ಕೆ ಪಟ್ಟಿಯೂ ಪ್ರಕಟವಾಗಿತ್ತು. ಮಿತ್ರರ ನೌಕರಿ
ಭದ್ರತೆಯ ಇಂತಹ ಸಂಗತಿಗಳನ್ನು ಕೇಳಿ ನಾನೂ ಆದಷ್ಟು ಬೇಗನೇ ಎಲ್ಲಿಯಾದರೂ ಸರಿ, ಎಷ್ಟೇ ಸಂಬಳಕ್ಕಾದರೂ
ಸರಿ ಒಟ್ಟಿನಲ್ಲಿ ಕೆಲಸವೊಂದನ್ನು ಹುಡುಕಿಕೊಳ್ಳಬೇಕು ಎಂಬ ಆಲೋಚನೆ ನನ್ನ ಮನಸ್ಸಿನಲ್ಲಿ ಮೂಡುತ್ತಿತ್ತು.
ನನ್ನ ಇದೇ ಹಂಬಲದಿಂದಲೇ ಕರ್ನಾಟಕದ ವಿವಿಧ ಮೂಲೆಗಳಲ್ಲಿದ್ದ ಸಂಘ-ಸಂಸ್ಥೆಗಳ ವಿವರಗಳು ಮತ್ತು ಅಲ್ಲಿ
ಶಿಕ್ಷಕರ ಕೆಲಸ ಖಾಲಿ ಇದೆಯೇ ಎಂಬುದರ ಬಗ್ಗೆ ಮಾಹಿತಿ ಸಂಗ್ರಹಿಸತೊಡಗಿದೆ. ಈ ನಡುವೆ ಕೆಲವು ಮಿತ್ರರಿಗೆ
ತರಬೇತಿಯ ನಂತರ ಕೆಲಸಗಳು ಸಿಕ್ಕವು ಎನ್ನುವ ಸುದ್ದಿಗಳು ಆಗೀಗ ಪತ್ರಗಳು ಮತ್ತು ದೂರವಾಣಿಗಳ ಮೂಲಕ ತಿಳಿಯುತ್ತಿದ್ದವು. ಈ ನಡುವೆ ನಮ್ಮ ತರಬೇತಿ
ಪರೀಕ್ಷೆಗಳ ಫಲಿತಾಂಶ ಪ್ರಕಟವಾಗಿ ಅದರ ಸುದ್ದಿ ಬಹುಶಃ ಅಂಚೆ ಮೂಲಕ ತಿಳಿಯಿತು. ನಾನು ಆ ವರ್ಷದ ಫಲಿತಾಂಶದಲ್ಲಿ
ಎಲ್ಲರಿಗಿಂತ ಹೆಚ್ಚು ಅಂಕಗಳನ್ನು ಪಡೆದು ಉತ್ತೀರ್ಣನಾಗಿದ್ದೆ. ಅದು ನನ್ನ ಹತ್ತು ತಿಂಗಳ ನಿರಂತರ
ಶ್ರದ್ಧಾಪೂರ್ವಕ ಶ್ರಮದ ಫಲವಾಗಿತ್ತು. ಮನೆಯಲ್ಲಿ ಎಲ್ಲರಿಗೂ ಖುಷಿಯೋ, ಖುಷಿ! ಅಪ್ಪನಂತೂ ನಮ್ಮ ಬೀದಿಯ
ಹಲವು ಮನೆಗಳಿಗೆ ಸಿಹಿ ಸಹಾ ಹಂಚಿದ್ದರು. ಆದರೆ ನನ್ನ ಕೆಲಸದ ಹಂಬಲ ಮಾತ್ರ ಹಾಗೆಯೇ ಉಳಿದಿತ್ತು.
ಮೈಸೂರಿನ ತರಬೇತಿಯ ಅಂಕಪಟ್ಟಿ ಮತ್ತು ಪ್ರಮಾಣ ಪತ್ರಗಳು
ಬಂದಿರುವ ಬಗ್ಗೆ ಸುದ್ದಿ ತಿಳಿದ ನಾನು ಎರಡನೇ ಸಲ ಅಪ್ಪನೊಂದಿಗೆ ಮೈಸೂರಿಗೆ ಹೋಗಿದ್ದೆ. ಈ ಸಲ ಅರಿಯದೂರಿಗಲ್ಲ,
ಹತ್ತು ತಿಂಗಳು ಕಳೆದು ಪರಿಚಿತಗೊಂಡ ನಗರಿಗೆ! ನಮ್ಮ ತರಬೇತಿ ಕೇಂದ್ರಕ್ಕೆ ಸ್ವತಂತ್ರ ಕಟ್ಟಡ ಬಂದಿತ್ತು
ಆ ವೇಳೆಗೆ. ನನಗೆ ತರಬೇತಿ ನೀಡಿದ್ದ ಗೀತಾ ಮೇಡಂ ಮತ್ತು ಆನಂದ್ ಸರ್ ಇನ್ನೂ ಅಲ್ಲಿಯೇ ಉಪನ್ಯಾಸಕರಾಗಿದ್ದರು.
ಮೂರನೆ ತಂಡದ ತರಬೇತಿ ಅದಾಗಲೇ ಆರಂಭವಾಗಿ ತರಗತಿಗಳು ನಡೆಯುತ್ತಿದ್ದವು. ಕೇಂದ್ರಕ್ಕೆ ಸಿಹಿಯೊಂದಿಗೇ
ಹೋಗಿದ್ದೆವು. ಸಿಹಿ ಹಂಚಿಕೆಯ ಸಂಭ್ರಮಾಚರಣೆಯ ನಂತರ ನನಗೆ ನೂತನ ತರಬೇತಿ ತಂಡದ ಸದಸ್ಯರೊಂದಿಗೆ ನನ್ನ
ತರಬೇತಿ ಅನುಭವಗಳನ್ನು ಹಂಚಿಕೊಳ್ಳಲು ಅವಕಾಶ ದೊರೆಯಿತು. ಕೆಲವರು ಪ್ರಶ್ನೊತ್ತರದಲ್ಲಿಯೂ ತೊಡಗಿದರು
ಎಂಬುದು ಈಗಿನ ಅರೆ-ಬರೆ ನೆನಪು ನನಗೆ. ಆ ಸಂದರ್ಭದಲ್ಲಿಯೇ ಶ್ರೀ ವೀರಕ್ಯಾತಯ್ಯ ಎಂಬುವರು (ಜನಪ್ರಿಯವಾಗಿ
VK ಎಂದೇ ಇಂದಿಗೂ ನಮ್ಮ ಅಂಧ ಸಮುದಾಯದಲ್ಲಿ ಪರಿಚಿತರು) ಬೆಂಗಳೂರಿನ KWAB ಸಂಸ್ತೆಯಲ್ಲಿ ಕೆಲಸ ಖಾಲಿ
ಇರುವ ಬಗ್ಗೆ ಮತ್ತು ಶ್ರೀ ಬಸವಣ್ಣೆಪ್ಪ ಬಾಳಿ ಎಂಬುವರು ಹಾಸನದ ಕರ್ನಾಟಕ ಅಂಧರ ಒಕ್ಕೂಟದವರು ನಡೆಸುವ
ಅಂಧರ ಶಾಲೆಯಲ್ಲಿ ಖಾಲಿ ಇರುವ ಅಂದಶಿಕ್ಷಕರ ನೇಮಕಾತಿಗೆ ಅರ್ಜಿ ಆಹ್ವಾನಿಸಿರುವ ಮಾಹಿತಿ ತಿಳಿಸಿದರು.
ಎರಡನೆಯ ಸಂಸ್ಥೆಗೆ ಸರ್ಕಾರದ ಅನುದಾನವಿದ್ದು, ಸಂಬಳವೂ ಅಂದಿಗೆ ಆಕರ್ಷಕ ಎಂಬುದನ್ನು ಮನಗಂಡು ಮೈಸೂರಿನಿಂದ
ನೇರವಾಗಿ ಹಾಸನಕ್ಕೆ ಅಪ್ಪನೊಂದಿಗೆ ಪಯಣ ಬೆಳೆಸಿದೆ. ನನ್ನ ಬಳಿಯಿದ್ದ ದಾಖಲಾತಿಗಳನ್ನು ಒಟ್ಟುಗೂಡಿಸಿ,
ನಿಗದಿತ ಅರ್ಜಿ ಪಡೆದು ಕೆಲಸಕ್ಕೆ ಅರ್ಜಿ ಹಾಕಿ ಊರಿಗೆ ಮರಳುವ ಮುನ್ನ ಹಿಂದೆ ನನ್ನ ತಂದೆ ೭೦ರ ದಶಕದಲ್ಲಿ
ಗುತ್ತಿಗೆ ನೌಕರರಾಗಿದ್ದ ಸಮಯದಲ್ಲಿ ಅವರಿಗೆ ಮೇಲಾಧಿಕಾರಿಯಾಗಿದ್ದು ಅತ್ಯಂತ ಆತ್ಮೀಯರಾಗಿದ್ದ ಶ್ರೀ
ಲಕ್ಷ್ಮೇಗೌಡರ ಮನೆಯ ವಿಳಾಸವನ್ನು ಹುಡುಕಿಕೊಂಡು ವಿದ್ಯಾನಗರಕ್ಕೆ ಕಾಲ್ನಡಿಗೆಯಲ್ಲಿಯೇ ಹೋದದ್ದಾಯಿತು.
ಆದರೆ, ಮನೆಯಲ್ಲಿ ಯಾರೂ ಇಲ್ಲದೇ ಬೀಗ ಹಾಕಿದ್ದನ್ನು ನೋಡಿಕೊಂಡು ವಾಪಾಸ್ಸು ಊರಿನ ಬಸ್ಸು ಹತ್ತಿದ್ದಾಯಿತು.
ಊರಿಗೆ ಮರಳಿದ ನಂತರವೇ ನನಗೆ ಹೊಳೆದದ್ದು, ನಾನು
ಅರ್ಜಿ ನಮೂನೆಗೆ ಸಹಿ ಮಾಡಿಲ್ಲವೆಂಬುದು. ಮತ್ತೆ ಮರುದಿನವೇ ಆಗ ಮನೆಯಲ್ಲಿದ್ದ ಅಣ್ಣನೊಂದಿಗೆ ಕಡಿಮೆ
ಖರ್ಚಿನದೆಂದು ರೈಲು ಮೂಲಕ ಅರಸಿಕೆರೆ ಮಾರ್ಗದಲ್ಲಿ ಹಾಸನಕ್ಕೆ ಓಡಿದ್ದಾಯಿತು. ಆ ವೇಳೆ ಮಧ್ಯರಾತ್ರಿಯಲ್ಲಿ
ಅರಸಿಕೆರೆ ರೈಲು ನಿಲ್ದಾಣದಲ್ಲಿಳಿದ ನಾವು ಉಳಿದ ರಾತ್ರಿ ಕಳೆಯಲು ರೈಲ್ವೇ ಫ್ಲಾಟ್ ಫಾರಂನಲ್ಲಿ ಮಲಗಿದ್ದು
ನನಗಿನ್ನೂ ನೆನಪಿದೆ. ಆದರೆ ಆ ನೌಕರಿಯ ನೇಮಕಾತಿ ಏನಾಯಿತೊ, ಯಾರಿಗೆ ಸಿಕ್ಕಿತೊ ಎಂಬುದು ತಿಳಿಯಲೇ
ಇಲ್ಲ. ಏಕೆಂದರೆ ಕಾನೂನಿನ ತೊಡಕಿನ ಕಾರಣ ನೇಮಕಾತಿ ಪ್ರಕ್ರಿಯೆ ವಿಳಂಬವಾದುದಷ್ಟೇ ನನಗೆ ನೆನಪಿದೆ.
ಇನ್ನು ವೀರಕ್ಯಾತಯ್ಯನವರು ಹೇಳಿದ ಬೆಂಗಳೂರಿನ ಸಂಸ್ಥೆಗೆ ನಾನು ಕೆಲಸಕ್ಕೆ ಅರ್ಜಿ ಸಲ್ಲಿಸಿದ್ದು ಹೆಚ್ಚು
ಕಡಿಮೆ ಎರಡು ವರ್ಷಗಳ ನಂತರವೇ ಎನಿಸುತ್ತದೆ. ಅದರ ವಿವರ ಮುಂದಿನ ಸಂಚಿಕೆಗಳಲ್ಲಿ ಬರಬಹುದು.
ಕೆಲಸವಿಲ್ಲದೆ ಮನೆಯಲ್ಲಿ ಕೂತರೂ ಮನೆಯ ಕೆಲಸಗಳಲ್ಲಿ ಅಕ್ಕ,
ತಂಗಿ ಮತ್ತು ಅತ್ತಿಗೆಯರೊಂದಿಗೆ ಭಾಗವಹಿಸುತ್ತಿದ್ದುದು ನನಗೆ ಒಂದಷ್ಟು ಖುಷಿಯ ಕೆಲಸವಾಗಿತ್ತು. ಮನೆಗೆ
ಸೈಕಲ್ ಮೇಲೆ ನೀರು ತರುವುದು, ಅಂದರೆ ಅಕ್ಕ ಅಥವಾ ತಂಗಿ ಮಾರ್ಗದಶಿಸಿದಂತೆ ಆರು ಅಥವ ಎಂಟು ಕೊಡಗಳನ್ನು
ಇಳಿಯಬಿಟ್ಟ ಸೈಕಲ್ಲನ್ನು ತಳ್ಳಿಕೊಂಡು ಮನೆಗೆ ಬರುವುದು, ಅವರು ಬಟ್ಟೆ ತೊಳೆಯಲು ಊರಾಚೆಗಿನ ಬೋರ್ವೆಲ್
ಬಳಿಗೆ ಹೋದರೆ ಜೊತೆಯಲ್ಲಿದ್ದು ನೀರು ಪಂಪ್ ಮಾಡಿಕೊಡುವುದು, ಮನೆಯ ಮುಂದಿನ ಅಂಗಳದಲ್ಲಿ ಕುಳಿತು
ಸಣ್ಣ-ಪುಟ್ಟ ಕಟ್ಟಿಗೆಗಳನ್ನು ತುಂಡರಿಸುವುದು ಹೀಗೆ. . . ಮನಸ್ಸು ಮತ್ತು ಮೈಗಳನ್ನು ಸೋಮಾರಿಯಾಗಲು
ಬಿಡಲಿಲ್ಲ ನಾನು ಮತ್ತು ನನ್ನ ಮನೆಯವರು. ಇನ್ನು ನನ್ನ ತಂದೆ ಆ ವೇಳೆಗೆ ಕಡಲೇಗುದ್ದು ಎಂಬ ಗ್ರಾಮದಲ್ಲಿ
ಎರಡೆಕರೆಗಿಂತ ಕಡಿಮೆ ಜಮೀನನ್ನು ಖರೀದಿಸಿದ್ದರು. ಅಲ್ಲಿ ಬೆಳೆದು ನಿಂತಿದ್ದ ಮೆಕ್ಕೆಜೋಳದ ತೆನೆಗಳನ್ನು
ಕೂಲಿಯವರು ಮತ್ತು ಮನೆಯ ಸದಸ್ಯರ ಜೊತೆ ಎರಡು ಸಾಲುಗಳನ್ನು ಹಿಡಿದು ಮುರಿದು ಹಾಕಿದ್ದು, ಸೂರ್ಯಕಾಂತಿಯ
ತೆನೆಗಳನ್ನು ಬಡಿದು ಅದರಿಂದ ಬೀಜ ಬೇರ್ಪಡಿಸಿದ್ದು ಮತ್ತು ಹುರಳಿ ಬಳ್ಳಿಯ ಹೊಟ್ಟನ್ನು ಕಾಳು ಬೇರ್ಪಡಿಸಲು
ತೂರುವವರಿಗೆ ಬುಟ್ಟಿಗಳಲ್ಲಿ ತುಂಬಿಕೊಟ್ಟದ್ದು ಎಲ್ಲವೂ ಈಗಲೂ ನೆನಪಿದೆ. ಈ ಎಲ್ಲಾ ಕೆಲಸಗಳನ್ನು ಮಾಡುವಾಗ
ನನಗೆ ದೃಷ್ಟಿಯಿಲ್ಲವೆಂಬುದಾಗಲಿ, ಆ ಕೆಲಸ ನನ್ನಿಂದಾಗದು ಎಂಬ ಭಾವವಾಗಲಿ ನನಗೆ ಮತ್ತು ನನ್ನ ಮನೆಯವರಿಗೆ
ಎಂದಿಗೂ ಇರಲಿಲ್ಲ. ಸಹಾನುಭೂತಿಗಿಂತ ಸಹಚರಣೆ ಎಂಥವರನ್ನೂ ಸ್ವಾವಲಂಬಿಗಳನ್ನಾಗಿಸಬಲ್ಲದು. ತರಬೇತಿ
ಮುಗಿಸಿದ ಕೆಲ ತಿಂಗಳ ನಂತರ ನಮ್ಮದೇ ಜಿಲ್ಲೆಯ ಕೇಂದ್ರವಾಗಿದ್ದ ಚಿತ್ರದುರ್ಗದಲ್ಲಿ ನನ್ನ ಮೊದಲ ಕೆಲಸದ
ಅನುಭವಗಳನ್ನು ಮುಂದಿನ ಸಂಚಿಕೆಯಲ್ಲಿ ಮೂಡಿಸುತ್ತೇನೆ.
(ಮುಂದುವರಿಯುತ್ತದೆ)
Manjunath hiremath
ReplyDeleteSound mind in a sound body
ReplyDeleteSir ಜೀವನದಲ್ಲಿ ತುಂಬಾ ಕಷ್ಟದ ದಿನಗಳನ್ನು ನೀವು ಅನುಭವಿಸಿದ್ದೀರಿ. ಆದ್ರೆ ನಮಗೆ ನಿಮ್ಮಷ್ಟು ಕಷ್ಟದ ಅನುಭವ ಇಲ್ಲವಾದರೂ ಜೀವನ ಬೇಡವಾಗಿದೆ. ನಿಮ್ಮ ಮನದಾಳದ ಮಾತು ಕೇಳಿ ಬದುಕಿ ಏನಾದ್ರೂ ಸಾಧಿಸಬೇಕು ಅನ್ನೊ ಛಲ ಮೂಡಿದೆ. ನೀವು ಗ್ರೇಟ್ sir...🙏🙏
Deleteಶರಣು ಸರ್
ReplyDeleteGreat person in my life
ReplyDeleteನೀವು ಕುಟುಂಬದವರಿಗೆ ಕೆಲಸದಲ್ಲಿ ಸಹಾಯ ಮಾಡುವುದನ್ನು ಕೇಳಿದಾಗ ನಿಜಕ್ಕೂ ಆಶ್ಚರ್ಯವಾಯಿತು ಸರ್. ಈಗಿನ ದಿನಮಾನಗಳಲ್ಲಿ ದೈಹಿಕವಾಗಿ ಎಲ್ಲಾ ಸರಿಯಿದ್ದೂ ಕೂಡ ಕೆಲಸ ಮಾಡುವುದಕ್ಕೆ ನಮ್ಮ ಯುವ ಜನಾಂಗ ಹಿಂದೇಟು ಹಾಕಿ ಸೋಮಾರಿಗಳಾಗಿದ್ದಾರೆ.
ReplyDeleteReally you're great sir
ಎಲ್ಲೊ ದೂರದ ಕಣ್ಣಿಗೆ ಕಾಣದ ಸಾಧಕನ ಬಗ್ಗೆ ಓದುವುಕ್ಕು ಹಾಗೂ ಕಣ್ಣೆದುರಿಗೆ ಇರುವ ನಿಮ್ಮಂತ ಸಾಧಕರ ಬಗ್ಗೆ ಓದುವ ಭಾಗ್ಯ ದೊರೆತ ನಾವೇ ಧನ್ಯರು..🙏
ReplyDeleteReally great person in my life sir . ನೀವು ನನಗೆ ಸಿಕ್ಕಿದ್ದು ನನ್ನ ಪುಣ್ಯ ಸರ್ I miss you sir .
ReplyDeleteಏನೇ ಇದ್ರೂ ಇಲ್ಲಂದ್ರೂ ಆತ್ಮವಿಶ್ವಾಸ , positive thinking, ನಂಬಿಕೆ ಇದ್ರೆ ಎಲ್ಲ ಸಾಧಿಸಬಹುದು ಎಂಬುದಕ್ಕೆ ನೀವೇ ಒಂದು good example ನಮ್ಗೆ sir......
ReplyDeleteYou are the true inspiration to everyone achieve something in their life.
ReplyDeleteSuper sir nivu maneyarondige kelasamadalu mundagiddaralva great sir nivu igina yuvakaru somarigalaaguttiddare
ReplyDeleteMestre nimma jivanada sadhaneya kannadi.bereyavara sadhaneya jivanakke munnudi
ReplyDeleteನಿಮ್ಮೆಲ್ಲರ ಅಭಿಮಾನದ ನುಡಿಗಳಿಗೆ ಅನಂತ ಧನ್ಯವಾದಗಳು. . .
ReplyDelete