Penetration of Europeans Part 2; ಡಚ್ಚರು, ಆಂಗ್ಲರು ಮತ್ತು ಫ್ರೆಂಚರು.

ಇತರೆ ಯೂರೋಪಿಯನ್ನರ ಆಗಮನ- ಡಚ್ಚರು, ಆಂಗ್ಲರು & ಫ್ರೆಂಚರು.

ಡಚ್ಚರು – 1596-1792

ರಾಜಧಾನಿ: ಪುಲಿಕಾಟ್

   ಪೋರ್ಚುಗೀಸರ ನಂತರ ಭಾರತಕ್ಕೆ ಬಂದವರಲ್ಲಿ ಡಚ್ಚರು ಎರಡನೆಯವರು. ಅವರು 1587 ರಲ್ಲಿ ಸ್ಪೇನಿನಿಂದ ಸ್ವತಂತ್ರಗೊಂಡ ನಂತರ ಭಾರತದ ಕಡೆಗೆ ಗಮನ ಹರಿಸಿದರು. ಭಾರತದೊಂದಿಗೆ ವ್ಯಾಪಾರ ನಡೆಸಲು 1592 ರಲ್ಲಿ ಒಂದು ವರ್ತಕರ ಸಂಘವನ್ನು ಕಟ್ಟಿಕೊಂಡರು. 1596 ರಲ್ಲಿ ಕಾರ್ಲೇನಿಯಸ್ ಹೌಟ್ಮನ್‌ ಎಂಬುವನು ಜಾವಾಕ್ಕೆ ಬಂದು ಅಪಾರ ಬೆಲೆಬಾಳುವ ವ್ಯಾಪಾರಿ ವಸ್ತುಗಳೊಂದಿಗೆ ಸ್ವದೇಶಕ್ಕೆ ಹಿಂತಿರುಗಿದನು. ಇದರಿಂದ ಪ್ರೇರಿತಗೊಂಡ ಡಚ್ಚರು ಅನೇಕ ವ್ಯಾಪಾರಿ ಕಂಪೆನಿಗಳನ್ನು ಆರಂಭಿಸಿದರು; ಮುಂದೆ ಮಾರ್ಚ್‌ 1602 ರಲ್ಲಿ ಅವನ್ನೆಲ್ಲಾ ಒಗ್ಗೂಡಿಸಿ “ಡಚ್‌ ಈಸ್ಟ್‌ ಇಂಡಿಯ ಕಂಪೆನಿ” ಎಂಬ ಬೃಹತ್‌ ಕಂಪೆನಿಯನ್ನು ಸ್ಥಾಪಿಸಿ ಸರ್ಕಾರದಿಂದ ವ್ಯಾಪಾರದ ಅನುಮತಿ ಪಡೆದರು. ಅನುಮತಿಯ ಮುಖ್ಯಾಂಶಗಳೆಂದರೆ,

1.     ಭಾರತದಲ್ಲಿ ವ್ಯಾಪಾರದ ಕೋಠಿಗಳನ್ನು ನಿರ್ಮಿಸುವುದು.

2.     ಒಪ್ಪಂದಗಳನ್ನು ಮಾಡಿಕೊಳ್ಳುವುದು.

3.     ಯುದ್ಧಗಳನ್ನು ಮಾಡುವುದು.

4.     ಪ್ರದೇಶಗಳನ್ನು ಗೆಲ್ಲುವುದು ಇತ್ಯಾದಿ.

ಡಚ್ಚರ ಏಳಿಗೆ: ಭಾರತದಲ್ಲಿನ ವ್ಯಾಪಾರಿ ವಸ್ತುಗಳಿಂದ ಆಕರ್ಷಿತರಾದ ಡಚ್ಚರು 1604 ರಲ್ಲಿ ಕಲ್ಲಿಕೋಟೆ, 1605 ರಲ್ಲಿ ಮಚಲೀಪಟ್ಟಣ, 1610 ರಲ್ಲಿ ಪುಲಿಕಾಟ್‌, 1616 ಸೂರತ್‌, 1645 ಕಾರೈಕಲ್‌, ಚಿನ್ಸುರ 1653 ರಲ್ಲಿ, 1658 ರಲ್ಲಿ ನಾಗಪಟ್ಟಣ & ಬಾಲಾಸೂರ್‌, 1663 ರಲ್ಲಿ ಪಾಟ್ನಾ, ಅಹಮದಾಬಾದ್‌, ಕೊಚ್ಚಿನ್‌ & ಕ್ವಿಲಾನ್‌ ಗಳಲ್ಲಿ ಅಲ್ಲದೇ ಖಾಸಿಂಬಜಾರ್‌, ಬ್ರೋಚ್‌ & ಟುಟಿಕಾರಿನ್‌ ಗಳಲ್ಲಿ ತಮ್ಮ ವ್ಯಾಪಾರದ ಕೇಂದ್ರಗಳನ್ನು ತೆರೆದರು. ಅಲ್ಲದೇ ಭಾರತದ ಹೊರಗೂ ಅಂದರೆ ದೂರ ಪ್ರಾಚ್ಯದಲ್ಲಿ ತಮ್ಮ ಅಧಿಕಾರ ವಿಸ್ತರಿಸಿದರು. 1605 ರಲ್ಲಿ ಪೋರ್ಚುಗೀಸರಿಂದ ಅಂಬೋಯ್ನಾವನ್ನು ಗೆದ್ದುಕೊಂಡರು. 1619 ರಲ್ಲಿ ಜಕಾರ್ತಾ, 1639 ರಲ್ಲಿ ಗೋವಾ, 1640 ರಲ್ಲಿ ಮಲಕ್ಕಾ ಮತ್ತು 1658 ರಲ್ಲಿ ಸಿಲೋನ್‌ ಗಳನ್ನು ಗೆದ್ದುಕೊಂಡರು. ಪೈಪೋಟಿ ನೀಡುತ್ತಿದ್ದ ಆಂಗ್ಲರನ್ನು ಆಗ್ನೇಯ ಏಷ್ಯಾದ ಅಂಬೋಯ್ನಾ ಬಳಿ ಕ್ರೂರವಾಗಿ ದಂಡಿಸಿದರು, 1623ರಲ್ಲಿ. ಇದರಿಂದ 1669 ವೇಳೆಗೆ ಡಚ್ಚರು ಭಾರತ ಮತ್ತು ದೂರಪ್ರಾಚ್ಯಗಳಲ್ಲಿ ಪ್ರಬಲ ಶಕ್ತಿಯಾಗಿ ಬೆಳೆದರು. ಆಗ ಅವರ ಬಳಿ 130 ವ್ಯಾಪಾರಿ ಹಡಗುಗಳು & 10,000 ಸೈನಿಕರಿದ್ದರು.

ಡಚ್ಚರ ಪತನ: ಆದರೆ ಅವರು ಭಾರತದಲ್ಲಿ ಬಹಳ ಕಾಲ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲಿಲ್ಲ. ಇದಕ್ಕೆ ಕಾರಣಗಳೆಂದರೆ,

1.     ಅವರು ಭಾರತಕ್ಕಿಂತ ಹೆಚ್ಚಾಗಿ ತಮ್ಮ ಗಮನವನ್ನು ಈಸ್ಟ್‌ ಇಂಡೀಸ್‌ ದ್ವೀಪಗಳತ್ತ (ಆಗ್ನೇಯ ಏಷ್ಯಾದ ದ್ವೀಪಗಳು) ಹರಿಸಿದರು.

2.     ಕಡಿಮೆ ವೇತನದ ಕಾರಣ ಡಚ್‌ ಕಂಪೆನಿಯ ಅಧಿಕಾರಿಗಳಲ್ಲಿ ಭ್ರಷ್ಟಾಚಾರ ಬೆಳೆಯಿತು.

3.     ಅಧಿಕಾರಿಗಳು ಸ್ವಂತ ವ್ಯಾಪಾರದತ್ತ ಹೆಚ್ಚಿನ ಗಮನ ಹರಿಸತೊಡಗಿದರು.

4.     ಕಡಿಮೆ ಸಂಖ್ಯೆಯ ಸೈನ್ಯ ಮತ್ತು ದುರ್ಬಲ ನೌಕಾಪಡೆ.

5.     ಸಂಪನ್ಮೂಲಗಳ ಕೊರತೆ: ಹಾಲೆಂಡ್‌ ಒಂದು ಚಿಕ್ಕರಾಷ್ಟ್ರ. ಅದರ ಬಳಿ ಭಾರತದಂತಹ ಬೃಹತ್‌ ರಾಷ್ಟ್ರವನ್ನು ಗೆಲ್ಲುವಷ್ಟು ಜನ, ಸೈನ್ಯ & ಸಂಪತ್ತು ಇರಲಿಲ್ಲ.

6.     ಯೂರೋಪಿನ ರಾಜಕೀಯದಲ್ಲಿ ಹೆಚ್ಚು ಸಕ್ರೀಯರಾಗಿದ್ದುದು.    P.E ರಾಬರ್ಟ್ಸ್‌  “ಭಾರತದಲ್ಲಿನ ಡಚ್ಚರ ಶಕ್ತಿಯು ಯೂರೋಪಿನ ಯುದ್ಧರಂಗದಲ್ಲಿಯೇ ಹೆಚ್ಚು ಕ್ಷೀಣಿಸಿತು.”

7.     ನಂತರದಲ್ಲಿ ಪ್ರಬಲರಾದ ಬ್ರಿಟಿಷರ ಮುಂದೆ ಡಚ್ಚರು ಸೆಣಸದಾದರು. 1759 ರಲ್ಲಿ ಬಿದ್ರಾ ಕದನದಲ್ಲಿ ಅವರು ಕ್ಲೈವನಿಂದ ಸೋತು ಶರಣಾಗತರಾದರು.

 

ಬ್ರಿಟೀಷರು 1600-1947

ರಾಜಧಾನಿ: ಕಲ್ಕತ್ತಾ‌

   ಬ್ರಿಟೀಷರು ತಡವಾಗಿ ಭಾರತಕ್ಕೆ ಬಂದರೂ ಸ್ಥಿರವಾಗಿ ನೆಲೆ ನಿಂತರು. 1587 ರಲ್ಲಿ ಆಂಗ್ಲರ ನೌಕಾಪಡೆಯು ಸ್ಪೇನಿನ ಪ್ರಬಲ ನೌಕಾಪಡೆ ಸ್ಪ್ಯಾನಿಶ್‌ ಆರ್ಮೆಡಾವನ್ನು ಸೋಲಿಸಿದ ನಂತರ ಅವರು ಭಾರತದತ್ತ ತಮ್ಮ ಗಮನ ಹರಿಸಿದರು. ಆಂಗ್ಲರು ಭಾರತದೊಂದಿಗೆ ವ್ಯಾಪಾರ ಚಟುವಟಿಕೆಗಳನ್ನು ಆರಂಭಿಸಲು ಕಾರಣಗಳೆಂದರೆ, ಭಾರತದೊಂದಿಗಿನ ವ್ಯಾಪಾರದಿಂದ ವೃದ್ಧಿಸಿದ ಪೋರ್ಚುಗೀಸರ ಶ್ರೀಮಂತಿಕೆ, ಇಂಗ್ಲೆಂಡಿನಲ್ಲಿ ಭಾರತದ ವಸ್ತುಗಳಿಗೆ ಇದ್ದ ಅತಿಯಾದ ಬೇಡಿಕೆ & ಸ್ಪ್ಯಾನಿಶ್‌ ಆರ್ಮೆಡಾವನ್ನು ಸೋಲಿಸಿದ್ದು. 1600 ರಲ್ಲಿ ವರ್ತಕರ ಕಂಪೆನಿಯು ಆರಂಭವಾದರೂ ಅಲ್ಲಿನ ರಾಣಿಯು ಡಿಸೆಂಬರ್‌ 31 ರಂದು ಅವರಿಗೆ ಪೌರ್ವಾತ್ಯ ರಾಷ್ಟ್ರಗಳೊಂದಿಗೆ ವ್ಯಾಪಾರ ಮಾಡಲು ಅನುಮತಿ (ಸನ್ನದು ಅಥವಾ ಚಾರ್ಟರ್‌) ನೀಡಿದಳು. ಅದು 15  ವರ್ಷಗಳಿಗೆ ಸೀಮಿತವಾಗಿತ್ತು. 1608 ರಲ್ಲಿ ಕ್ಯಾಪ್ಟನ್‌ ಹಾಕಿನ್ಸ್‌ ಎಂಬುವನು ಜಹಾಂಗೀರನ ಆಸ್ಥಾನಕ್ಕೆ ಭೇಟಿ ನೀಡಿ ವ್ಯಾಪಾರದ ಅನುಮತಿಗೆ ಯತ್ನಿಸಿದನು. ಆದರೆ, ಆಗ ಪ್ರಬಲರಾಗಿದ್ದ ಪೋರ್ಚುಗೀಸರ ವಿರೋಧದಿಂದ ಅದು ಫಲಿಸಲಿಲ್ಲ. ಮುಂದೆ 1612 ರಲ್ಲಿ ಥಾಮಸ್‌ ಬೆಸ್ಟ್‌ ಎಂಬ ಬ್ರಿಟೀಷ್‌ ನಾವಿಕ ಸ್ವಾಲಿ ನೌಕಾಕದನದಲ್ಲಿ ಪೋರ್ಚುಗೀಸರನ್ನು ಸೋಲಿಸಿದನು. ಇದರಿಂದ ಮೊಗಲರ ಆಸ್ಥಾನದಲ್ಲಿ ಆಂಗ್ಲರ ಪ್ರಭಾವ ಹೆಚ್ಚತೊಡಗಿತು. 1613 ರಲ್ಲಿ ಆಳ್ಡ್‌ ವರ್ತ್‌  ಎಂಬುವನು ಸೂರತ್ತಿನಲ್ಲಿ ಮೊದಲ ಬ್ರಿಟೀಷರ ವ್ಯಾಪಾರದ ಮಳಿಗೆಯನ್ನು ಆರಂಭಿಸಿದನು. 1615 ರಲ್ಲಿ ಸರ್‌ ಥಾಮಸ್‌ ರೋ ಎಂಬಾತನು ಇಂಗ್ಲೆಂಡಿನ ದೊರೆ ಒಂದನೇ ಚಾರ್ಲ್ಸ್‌ ನ ಪ್ರತಿನಿಧಿಯಾಗಿ ಜಹಾಂಗೀರನ ಆಸ್ಥಾನಕ್ಕೆ ಭೇಟಿ ನೀಡಿ ಮೂರು ವರ್ಷಗಳ ಕಾಲ ಅಲ್ಲಿದ್ದು ಮತ್ತಷ್ಟು ರಿಯಾಯಿತಿಗಳನ್ನು ಆಂಗ್ಲರಿಗೆ ಜಹಾಂಗೀರನಿಂದ ಕೊಡಿಸುವಲ್ಲಿ ಯಶಸ್ವಿಯಾದನು. ಪರಿಣಾಮ, ಅಹಮದಾಬಾದ್‌, ಆಗ್ರಾ & ಬ್ರೋಚ್‌ ಗಳಲ್ಲಿ ಅವರ ವ್ಯಾಪಾರಿ ಕೋಠಿಗಳು ಆರಂಭವಾದವು. ನೀಲಿಬೆಳೆ ಹೆಚ್ಚಿದ್ದ ಬಿಯಾನಾದಲ್ಲೂ 1619 ರಲ್ಲಿ ತಮ್ಮ ಕೇಂದ್ರ ಆರಂಭಿಸಿದರು.

ದಕ್ಷಿಣಪೂರ್ವ ಕರಾವಳಿಯಲ್ಲಿ ವಿಸ್ತರಣೆ: 1626 ರಲ್ಲಿ ಆರ್ಮಗಾವ್‌ ನಲ್ಲಿ ಒಂದು ವ್ಯಾಪಾರಿಕೇಂದ್ರ ಆರಂಭವಾಯಿತು. 1632 ರಲ್ಲಿ ಗೋಲ್ಕೊಂಡಾದ ನವಾಬನು ವಾರ್ಷಿಕ 500 ಪಗೋಡಾಗಳ ಸುಂಕ ಪಡೆದು ತನ್ನ ರಾಜ್ಯದಲ್ಲಿ ವ್ಯಾಪಾರದ ಅನುಮತಿ ನೀಡಿದನು. ಮರುವರ್ಷವೇ ಕಾರ್ಟ್‌ ರೈಟ್‌ ಎಂಬುವನು ಒರಿಸ್ಸಾದ ಹರಿಹರಪುರ & ಬಾಲಾಸೂರ್‌ ಗಳಲ್ಲಿ ಕೋಠಿಗಳನ್ನು ಆರಂಭಿಸಿದನು.

ಮದ್ರಾಸ್‌ ಸ್ಥಾಪನೆ 1639: ಫ್ರಾನ್ಸಿಸ್‌ ಡೇ ಎಂಬ ಆಂಗ್ಲನು ವಿಜಯನಗರದ ಚಂದ್ರಗಿರಿಯ ಅರಸನಿಂದ 1200 ರೂಪಾಯಿಗಳಿಗೆ ಸಮುದ್ರದ ದಡದಲ್ಲಿ ಒಂದು ನಿವೇಶನವನ್ನು ಖರೀದಿಸಿ ಅಲ್ಲಿದ್ದ ಮರಳಿನ ದಿಬ್ಬಗಳನ್ನು ಸಮಗೊಳಿಸಿ ಸೇಂಟ್‌ ಜಾರ್ಜ್‌ ಕೋಟೆಯನ್ನು ಕಟ್ಟಿದನು. ಇದೇ ಮುಂದೆ 1684ರ ವೇಳೆಗೆ ದೊಡ್ಡ ನಗರವಾಗಿ ಬೆಳೆಯಿತು. 1688 ರಲ್ಲಿ ಅಲ್ಲಿನ ಆಡಳಿತಕ್ಕಾಗಿ ಸ್ಥಳೀಯ ಆಡಳಿತ ಘಟಕವೊಂದನ್ನು ಆರಂಭಿಸಲಾಯಿತು. ಇದರಿಂದ ಅದು ಬ್ರಿಟೀಷರ ಪೂರ್ವದ ನೆಲೆಗಳ ಕೇಂದ್ರವಾಗಿ ಅಂದರೆ ರಾಜಧಾನಿಯಾಗಿ ಬೆಳೆಯಿತು. 1750 ರ ವೇಳೆಗೆ ಮದ್ರಾಸಿನಲ್ಲಿ ಸುಮಾರು ಮೂರು ಲಕ್ಷದಷ್ಟು ಜನಸಂಖ್ಯೆ ಇದ್ದಿತು.

ಬಾಂಬೆ ಸ್ಥಾಪನೆ: ಇದು ಮೊದಲು ಕೇವಲ ಕೆಲವೇ ಮೀನುಗಾರರ ಕುಟುಂಬಗಳಿದ್ದ ಸಣ್ಣ ಹಳ್ಳಿಯಾಗಿತ್ತು. ಇದನ್ನು ಪೋರ್ಚುಗೀಸರು ಇಂಗ್ಲೇಂಡಿನ ರಾಜಕುಮಾರ ಎರಡನೆ ಚಾರ್ಲ್ಸ್‌ ನು ಪೋರ್ಚುಗೀಸರ ರಾಜಕುಮಾರಿ ಕ್ಯಾಥರಿನ್‌ ಳನ್ನು ವಿವಾಹವಾದಾಗ ಉಡುಗೊರೆಯಾಗಿ ನೀಡಿದ್ದನು. 1668 ರಲ್ಲಿ ಎರಡನೆ ಚಾರ್ಲ್ಸ್‌ ನು ಇದನ್ನು ಬ್ರಿಟೀಷ್‌ ವ್ಯಾಪಾರಿ ಕಂಪೆನಿಗೆ ವಾರ್ಷಿಕ ಹತ್ತು ಪೌಂಡುಗಳ ದೇಣಿಗೆ ಪಡೆದು ಗುತ್ತಿಗೆ ನೀಡಿದನು. ಇದು 1687ರ ವೇಳೆಗೆ ದೊಡ್ಡ ನಗರವಾಗಿ ಬೆಳೆಯಿತು. ಹಂತ-ಹಂತವಾಗಿ ಇಲ್ಲಿ ವ್ಯಾಪಾರಿ ಮಳಿಗೆಗಳು, ಕೋಟೆಗಳನ್ನು ಕಟ್ಟಲಾಯಿತು. 1744ರ ವೇಳೆಗೆ ಅಲ್ಲಿನ ಜನಸಂಖ್ಯೆ ಎಪ್ಪತ್ತು ಸಾವಿರವನ್ನು ದಾಟಿತು.

ಕಲ್ಕತ್ತಾ ಸ್ಥಾಪನೆ: ಬಂಗಾಳದಲ್ಲಿನ ಹತ್ತಿ, ಸಕ್ಕರೆ, ಪೆಟ್ಲುಪ್ಪುಗಳು ಆಂಗ್ಲರ ಗಮನವನ್ನು ಅತ್ತ ಸೆಳೆದವು. ಶಹಜಹಾನನಿಂದ ಅನುಮತಿ ಪಡೆದ ಅವರು 1651 ರಲ್ಲಿ ಹೂಗ್ಲಿಯಲ್ಲಿ ವ್ಯಾಪಾರಕೇಂದ್ರವನ್ನು ತೆರೆದರು. 1688 ರಲ್ಲಿ ಔರಂಗಜೇಬನ ಪ್ರತಿನಿಧಿಯಾಗಿದ್ದ ಬಂಗಾಳದ ಗವರ್ನರ್‌ ಷಯಿಸ್ತಾಖಾನನು ಬ್ರಿಟೀಷರನ್ನು ಸೋಲಿಸಿ ಅವರ ನೌಕೆಗಳನ್ನು ಸೆರೆ ಹಿಡಿದನು. ಸದ್ವರ್ತನೆಯ ಕರಾರು ಮತ್ತು ವಾರ್ಷಿಕ 1.5 ಲಕ್ಷ ಪಡೆದು ಔರಂಗಜೇಬನು ಬಂಗಾಳದಲ್ಲಿ ಬ್ರಿಟೀಷರಿಗೆ ವ್ಯಾಪಾರದ ಅನುಮತಿ ನೀಡಿದನು. ಮುಂದೆ ಖಾಸಿಂಬಜಾರ್ ಮತ್ತು ಪಾಟ್ನಾಗಳಲ್ಲಿ ಕೇಂದ್ರಗಳನ್ನು ಆರಂಭಿಸಿದರು. 1698 ರಲ್ಲಿ ಹೂಗ್ಲಿನದಿ ದಂಡೆಯಲ್ಲಿದ್ದ ಶತಾನುತಿ ಅಥವಾ ಸೂತನತಿ, ಕಾಳಿಘಾಟ್‌ & ಗೋವಿಂದಪುರಗಳನ್ನು ಜಮೀನುದಾರರಿಂದ ಕೊಂಡುಕೊಂಡು ಅವುಗಳ ಸುತ್ತಲೂ ಕೋಟೆ ಕಟ್ಟಿದರು. ಅದೇ ಪ್ರಖ್ಯಾತ ಪೋರ್ಟ್‌ ವಿಲಿಯಂ ಕೋಟೆ. ಇದು ಮುಂದೆ 1911ರ ವರೆಗೆ ಅವರ ರಾಜಧಾನಿಯಾಗಿತ್ತು.

ಜಾನ್‌ ಸರ್ಮನ್‌ ನಿಯೋಗ: ಔರಂಗಜೇಬನ ಮರಣಾನಂತರ 1717 ರಲ್ಲಿ ಜಾನ್‌ ಸರ್ಮನ್‌ ನಿಯೋಗ ಮೊಗಲರ ಬಾದಶಹ ಫರುಕ್ಸಿಯಾರ್‌ ನ ಆಸ್ಥಾನಕ್ಕೆ ಭೇಟಿ ನೀಡಿ ವ್ಯಾಪಾರದ ರಿಯಾಯಿತಿಗಳನ್ನು ಬೇಡಿದನು. ಆ ವೇಳೆ ಫರೂಕ್ಸಿಯಾರನ ಕಾಯಿಲೆಯನ್ನು ನಿಯೋಗದಲ್ಲಿದ್ದ ವೈದ್ಯ ವಿಲಿಯಂ ಹ್ಯಾಮಿಲ್ಟನ್ನನು ಗುಣಪಡಿಸಿದ ಕಾರಣ ಸಂತುಷ್ಟಗೊಂಡ ಬಾದಶಹಾನು ಅವರಿಗೆ ಮೂರು ಫರ್ಮಾನು ಅಂದರೆ ಆದೇಶಗಳನ್ನು ನೀಡಿದನು. ಕೇವಲ ವಾರ್ಷಿಕ ಮೂರು ಸಾವಿರಗಳಿಗೆ ಬಂಗಾಳದಲ್ಲಿ ಮುಕ್ತ ವ್ಯಾಪಾರದ ಅನುಮತಿ, ಮುಂಬೈ ಟಂಕಸಾಲೆಯಿಂದ ಕಂಪೆನಿ ನಾಣ್ಯ ಹೊರಡಿಸುವ ಅನುಮತಿ & ಹೈದ್ರಾಬಾದ್‌ ಮತ್ತು ಸೂರತ್ತುಗಳಲ್ಲೂ ಸಹ ಸುಂಕರಹಿತ ವ್ಯಾಪಾರದ ಅನುಮತಿ ನೀಡಿದನು. ಫರೂಕ್ಸಿಯಾರನ ಈ ಫರ್ಮಾನುಗಳನ್ನು ಓರ್ಮ್‌ ಎಂಬ ಆಂಗ್ಲ ವಿದ್ವಾಂಸರು “ಕಂಪೆನಿಯ ಮ್ಯಾಗ್ನಾಕಾರ್ಟ್”‌ ಎಂದು ಕರೆದಿದ್ದಾರೆ.

    ಹೀಗೆ ಕೇವಲ ವ್ಯಾಪಾರದ ಉದ್ದೇಶದೊಂದಿಗೆ ಭಾರತಕ್ಕೆ ಬಂದ ಆಂಗ್ಲರು ಕ್ರಮೇಣ ಇಲ್ಲಿನ ರಾಜಕೀಯ ಪರಿಸ್ಥಿತಿಯ ಲಾಭ ಪಡೆದು ಹಂತ-ಹಂತವಾಗಿ ತಮ್ಮ ಅಧಿಕಾರ ಸ್ಥಾಪಿಸತೊಡಗಿದರು. ಕ್ಲೈವ್‌, ವೆಲ್ಲೆಸ್ಲಿ & ಡಾಲ್‌ ಹೌಸಿಯಂತಹ ಗವರ್ನರುಗಳು ಅನುಸರಿಸಿದ ನೀತಿಯಿಂದ ಇಡೀ ಭಾರತ 1857ರ ವೇಳೆಗೆ ಸಂಪೂರ್ಣವಾಗಿ ಬ್ರಿಟೀಷರ ವಶವಾಗಿತ್ತು.

 

ಫ್ರೆಂಚರು – 1664-1954

ರಾಜಧಾನಿ – ಪಾಂಡಿಚೇರಿ

   ಭಾರತ ಪ್ರವೇಶಿಸಿದ ಕೊನೆಯ ಯೂರೋಪಿಯನ್ನರೆಂದರೆ ಫ್ರೆಂಚರು. ಪ್ರಾನ್ಸಿನ ದೊರೆ 14ನೆ ಲೂಯಿ ಮತ್ತು ಅವನ ಅರ್ಥಸಚಿವ ಕೋಲ್ಬರ್ಟ್‌ ಫ್ರೆಂಚ್‌ ಈಸ್ಟ್‌ ಇಂಡಿಯ ಕಂಪೆನಿಯನ್ನು 1664 ರಲ್ಲಿ ಸ್ಥಾಪಿಸಿ ಭಾರತದೊಂದಿಗೆ ವ್ಯಾಪಾರ ವಹಿವಾಟುಗಳನ್ನು ಆರಂಭಿಸಿದರು. ಫ್ರಾನ್ಸಿಸ್‌ ಕೆರೋನನಿಂದ ಸೂರತ್ತಿನಲ್ಲಿ 1668 ರಲ್ಲಿ ಮೊದಲ ಫ್ರೆಂಚ್‌ ವ್ಯಾಪಾರ ಕೇಂದ್ರ ಆರಂಭವಾಯಿತು. 1669 ರಲ್ಲಿ ಗೋಲ್ಕೊಂಡಾದ ಸುಲ್ತಾನನಿಂದ ಅನುಮತಿ ಪಡೆದು ಮಚಲೀಪಟ್ಟಣದಲ್ಲಿ ಮತ್ತೊಂದು ಕೇಂದ್ರವನ್ನು ಆರಂಭಿಸಿದರು. 1672 ರಲ್ಲಿ ಮದ್ರಾಸ್‌  ಬಳಿಯ ಸೇಂಟ್‌ ಥೋಮ್‌ ಅನ್ನು ಫ್ರೆಂಚರು ವಶಪಡಿಸಿಕೊಂಡರು. ಬಂಗಾಳದ ಮೊಗಲ್‌ ಗವರ್ನರ್‌ ಷಯಿಸ್ತಾಖಾನನಿಂದ ಒಂದು ನಿವೇಶನವನ್ನು ಪಡೆದು ಅಲ್ಲಿ ತಮ್ಮ ಕೇಂದ್ರವನ್ನು ಆರಂಭಿಸಿದರು. ಆದರೆ ಫ್ರೆಂಚರ ನೆಲೆಗಳ ನಿಜವಾದ ಸ್ಥಾಪಕನೆಂದರೆ ಫ್ರಾಂಕೋಯಿನ್‌ ಮಾರ್ಟಿನ್‌. ಇವನು ವಿಜಾಪುರದ ಸುಲ್ತಾನನಿಂದ ವಾಲಿಕೊಂಡಪುರಂ ಎಂಬ ಸ್ಥಳವನ್ನು ದಾನವಾಗಿ ಪಡೆದು ಅಲ್ಲಿ ವ್ಯಾಪಾರದ ಕೋಠಿಯನ್ನು ತೆರೆದನು. ಅದೇ ಮುಂದೆ ಪಾಂಡಿಚೇರಿ ಆಯಿತು. ಮುಂದೆ ೧೬೯೦ ರಲ್ಲಿ ಬಂಗಾಳದ ನವಾಬ ಷಯಿಸ್ತಾಖಾನನಿಂದ ಅನುಮತಿ ಪಡೆದು ಚಂದ್ರಾನಾಗೋರ್‌ ನಲ್ಲಿ ಕೋಠಿಯೊಂದನ್ನು ತೆರೆದರು. ಮಾಹೆ 1725 & ಕಾರೈಕಲ್‌ 1739 ರಲ್ಲಿ ತಮ್ಮ ಕೇಂದ್ರಗಳನ್ನು ಆರಂಭಿಸಿದರು. ಯಾನಂ, ಬಾಲಾಸೂರ್‌,  ಖಾಸಿಂಬಜಾರ್‌ & ಹೂಗ್ಲಿಗಳು ಅವರ ಇತರ ವ್ಯಾಪಾರ ಕೇಂದ್ರಗಳು. ಮುಂದೆ ಫ್ರೆಂಚರ ಗವರ್ನರ್‌ ಆಗಿ ಬಂದ ಟ್ರೂಮನ್‌ ಮೊಗಲರಿಂದ ನಾಣ್ಯ ಟಂಕಿಸುವ ಅಧಿಕಾರ ಪಡೆದನು, 1739 ರಲ್ಲಿ. 1746 ರಲ್ಲಿ ಭಾರತದ ಫ್ರೆಂಚ್‌ ನೆಲೆಗಳ ಗವರ್ನರ್‌ ಆಗಿ ಬಂದ ಡೂಪ್ಲೆಯ ಮಹತ್ವಾಕಾಂಕ್ಷೆಗಳ ಕಾರಣ ಬ್ರಿಟೀಷರೊಂದಿಗೆ ಏರ್ಪಟ್ಟ ಸಂಘರ್ಷಗಳಲ್ಲಿ ಫ್ರೆಂಚರು ಸೋತು ಪಾಂಡಿಚೇರಿಗೆ ತಮ್ಮನ್ನು ಸೀಮಿತಗೊಳಿಸಿಕೊಂಡರು.

 

    ಹೀಗೆ ಕೇವಲ ವ್ಯಾಪಾರಕ್ಕಾಗಿ ಭಾರತಕ್ಕೆ ಬಂದ ಯೂರೋಪಿಯನ್ನರು ಕ್ರಮೇಣ ಇಲ್ಲಿನ ರಾಜಕೀಯ ಪರಿಸ್ಥಿತಿಗಳ ಲಾಭ ಪಡೆದು ಹಂತ-ಂತವಾಗಿ ತಮ್ಮ ರಾಜಕೀಯ ಅಧಿಕಾರ ಸ್ಥಾಪಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಬ್ರಿಟೀಷರು ಅಂತಿಮವಾಗಿ ಫ್ರೆಂಚರನ್ನು ಕರ್ನಾಟಿಕ್‌ ಯುದ್ಧಗಳಲ್ಲಿ ಪರಾಭವಗೊಳಿಸಿ ಭಾರತದಲ್ಲಿ ಸ್ಥಿರವಾಗಿ ನೆಲೆನಿಂತರು.

Comments

Popular posts from this blog

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಸಾಹಿತ್ಯಾಧಾರಗಳು - Literary Sources

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧