ಅಧ್ಯಾಯ 2: ಕರ್ನಾಟಕದಲ್ಲಿ ಆರಂಭಿಕ ರಾಜಮನೆತನಗಳು - ಕರ್ನಾಟಕದಲ್ಲಿ ಮೌರ್ಯರು

  ಲಿಖಿತ ದಾಖಲೆಗಳು ಲಭ್ಯವಾದ ನಂತರದ ಕಾಲವನ್ನು ಇತಿಹಾಸದ ಆರಂಭ ಕಾಲ ಅಥವಾ ಐತಿಹಾಸಿಕ ಕಾಲ ಎಂದು ಕರೆಯುವರು. ಕರ್ನಾಟಕದಲ್ಲಿ ಈ ಕಾಲಘಟ್ಟವು ಅಶೋಕನ ಶಾಸನಗಳಿಗಿಂತ ಎರಡು ಶತಮಾನಗಳ ಹಿಂದೆಯೇ ಆರಂಭವಾಗಿದೆ. ಅಂದರೆ ಸು. ಸಾ.ಶ.ಪೂ 500 . ರಷ್ಟು ಹಿಂದಿನ ಸಾಹಿತ್ಯದ ತುಣುಕುಗಳು ಲಭ್ಯವಾಗಿವೆ. ಕರ್ನಾಟಕದ ಅಶೋಕನ ಶಾಸನಗಳ ಕಾಲವು ಸಾ.ಶ.ಪೂ 259-58 ಎಂದು ಗುರ್ತಿಸಲಾಗಿದೆ. ಚಿತ್ರದುರ್ಗ ಜಿಲ್ಲೆಯ ಅವನ ಶಾಸನಗಳು ಮೌರ್ಯರ ದಕ್ಷಿಣ ಗಡಿಯನ್ನು ತಿಳಿಸುತ್ತವೆ. (ಬ್ರಹ್ಮಗಿರಿ, ಅಶೋಕ ಸಿದ್ದಾಪುರ & ಜಟಿಂಗ ರಾಮೇಶ್ವರ) ಇಸಿಲ ಎಂಬುದು ಈ ಪ್ರಾಂತ್ಯಕ್ಕಿದ್ದ ಅಂದಿನ ಹೆಸರು. ಸುವರ್ಣಗಿರಿ ಅದರ ರಾಜಧಾನಿ; ಅಂದರೆ ಇಂದಿನ ಕೊಪ್ಪಳ ಜಿಲ್ಲೆಯ ಕನಕಗಿರಿ ಎಂದು ನಂಬಲಾಗಿದೆ. ಸು. ಸಾ.ಶ.ವ. 1500 ವರ್ಷಗಳಷ್ಟು ಹಿಂದಿನ ಕನ್ನಡ ಕೃತಿ ʼಸಿಂಗಿರಾಜ ಪುರಾಣʼ ದಲ್ಲಿ ಪಟ್ಟದಕಲ್ಲು ಕುರಿತು ಮಾಹಿತಿ ನೀಡುವಾಗ ಇದು ನಂದರ ಆಳ್ವಿಕೆಗೆ ಒಳಪಟ್ಟಿತ್ತು ಎಂಬ ಉಲ್ಲೇಖವಿದೆ. ಅದಕ್ಕೂ ಹಿಂದೆ 11ನೆ ಶತಮಾನದ ಕೆಲವು ದಾಖಲೆಗಳ ಪ್ರಕಾರ ನಂದರು ಕುಂತಳದಲ್ಲೂ (ಬನವಾಸಿ) ಅಧಿಕಾರ ಹೊಂದಿದ್ದ ಬಗ್ಗೆ ಮಾಹಿತಿ ಲಭ್ಯವಾಗುತ್ತದೆ. ಕಾರಣ ಚಿತ್ರದುರ್ಗ ಮತ್ತು ಅದರ ಮೇಲಣ ಪ್ರದೇಶಗಳು ಮೌರ್ಯರು ಮತ್ತು ಅವರಿಗೂ ಹಿಂದೆ ನಂದರ ಆಳ್ವಿಕೆಗೆ ಒಳಪಟ್ಟಿತ್ತು ಎಂಬುದು ಇದರಿಂದ ದೃಢವಾಗುತ್ತದೆ. ಏಕೆಂದರೆ ಮೌರ್ಯರು ಇಡೀ ನಂದ ಸಾಮ್ರಾಜ್ಯವನ್ನು ಗೆದ್ದಿದ್ದರಿಂದ ಅವರ ನಂತರ ಅಧಿಕಾರಕ್ಕೆ ಬಂದ ಮೌರ್ಯರ ಅಧೀನಕ್ಕೆ ಈ ಭಾಗಗಳು ಒಳಪಟ್ಟಿರಬೇಕು. ಅಲ್ಲದೇ, ಇಡೀ ಉತ್ತರ ಭಾರತವನ್ನು ಚಂದ್ರಗುಪ್ತ ಮೌರ್ಯನು ಜಯಿಸಿದ್ದರಿಂದ  ಅವನ ನಂತರ ಅಧಿಕಾರಕ್ಕೆ ಬಂದ ಬಿಂದುಸಾರನು ದಕ್ಷಿಣದ ಮೇಲೆ ಗೆಲುವು ಸಾಧಿಸಿರಬಹುದು ಎಂಬುದು ವಿ. ಎ. ಸ್ಮಿತ್‌ ಅವರ ಅಭಿಪ್ರಾಯ. ಟಿಬೆಟ್‌ ಇತಿಹಾಸಕಾರ ತಾರಾನಾಥ ಮತ್ತು ತಮಿಳು ಕವಿ ಮುಮುಲುನಾರ್‌ ಬಿಂದುಸಾರನು ಪ್ರಾಂತ್ಯಾಕ್ರಮಣ ನಡೆಸಿದ ಬಗ್ಗೆ ಮಾಹಿತಿ ನೀಡುತ್ತಾರೆ. ಜೊತೆಗೆ ಶಿಕಾರಿಪುರದ 12ನೆ ಶತಮಾನದ ಶಾಸನದಂತೆ ಕುಂತಳವು (ಭೀಮಾ-ವೇದಾವತಿ ನದಿಗಳ ನಡುವಣ ಪ್ರದೇಶ) ಮೌರ್ಯರ ಆಡಳಿತಕ್ಕೆ ಸೇರಿತ್ತು ಎಂಬ ಮಾಹಿತಿ ನೀಡುತ್ತದೆ.

   ಏಳನೆ ಶತಮಾನದ ಶ್ರವಣಬೆಳಗೊಳದ ಶಾಸನಗಳ ಪ್ರಕಾರ ಮೌರ್ಯವಂಶ ಸ್ಥಾಪಕ ಚಂದ್ರಗುಪ್ತ ಮೌರ್ಯನು (ಪ್ರ..ಪು.ಸು. ೩೨೪-೩೦೦) ಗುರು ಭದ್ರಬಾಹುವಿನೊಂದಿಗೆ ಇಲ್ಲಿಗೆ ಬಂದು ನೆಲೆಸಿ ಸಲ್ಲೇಖನ ಕೈಗೊಂಡ ಬಗ್ಗೆ ಮಾಹಿತಿ ತಿಳಿಸುತ್ತವೆ. ಅವನು ವಾಸವಿದ್ದ ಬೆಟ್ಟಕ್ಕೆ ಚಂದ್ರಗಿರಿ ಎಂದು ಕರೆಯಲಾಗುತ್ತಿದ್ದು, ಅವನ ಹೆಸರಿನ ಒಂದು ಬಸದಿಯು ಅಲ್ಲಿದೆ. ಜಿನಸೇನನ ಹರಿವಂಶ ಮತ್ತು ಹರಿಸೇನನ ಬೃಹತ್‌ಕಥಾಕೋಶದಲ್ಲಿ ಇದರ ಉಲ್ಲೇಖಗಳಿವೆ. ಆದರೆ ಮಂ. ಗೋವಿಂದ ಪೈ ಅವರು ಇಲ್ಲಿಗೆ ಬಂದವನು ಮೌರ್ಯ ವಂಶದ ಸ್ಥಾಪಕನಲ್ಲ; ಬದಲಿಗೆ ಅಶೋಕನ ಉತ್ತರಾಧಿಕಾರಿಗಳಲ್ಲಿ ಒಬ್ಬನಾಗಿದ್ದ ಸಂಪ್ರತಿ ಚಂದ್ರಗುಪ್ತ ಎಂದು ಅಭಿಪ್ರಾಯಪಟ್ಟಿದ್ದಾರೆ. ಅಂತೆಯೇ ಆರ್.‌ ಶಾಮಾಶಾಸ್ತ್ರಿಗಳು ಇಲ್ಲಿಗೆ ಬಂಧ ಚಂದ್ರಗುಪ್ತನು ಗುಪ್ತರ ಎರಡನೇ ಚಂದ್ರಗುಪ್ತನಿರಬೇಕು ಎಂದಿದ್ದಾರೆ. ಆದರೆ, ಗುಪ್ತರು ವೈಷ್ಣವರಾದ ಕಾರಣ ಅವರ ಸಂತತಿಯ ಚಂದ್ರಗುಪ್ತನು ಇಲ್ಲಿಗೆ ಬಂದಿದ್ದನೆಂಬುದು ಜಿಜ್ಞಾಸೆಯ ವಿಷಯವಾಗುತ್ತದೆ. ಅಶೋಕನ 11 ಶಾಸನಗಳು ಕರ್ನಾಟಕದಲ್ಲಿ ದೊರೆತಿದ್ದು ಚಿತ್ರದುರ್ಗದ ಶಾಸನಗಳು ಅತ್ಯಂತ ದಕ್ಷಿಣದಲ್ಲಿ ದೊರೆತಿರುವ ಕಾರಣ ಈ ಭಾಗವು ಅಶೋಕನ ಆಳ್ವಿಕೆಗೆ ಒಳಪಟ್ಟಿದ್ದು ನಿರ್ವಿವಾದ. ಶ್ರೀಲಂಕಾದ ಬೌದ್ಧ ಕೃತಿ ಮಹಾವಂಶದಲ್ಲೂ ಅಶೋಕನು ವನವಾಸ (ಇಂದಿನ ಬನವಾಸಿ) ಕ್ಕೆ ತನ್ನ ಧರ್ಮಪ್ರಚಾರಕರನ್ನು ಕಳುಹಿಸಿದ್ದ ಬಗ್ಗೆ ಮಾಹಿತಿ ನೀಡುತ್ತದೆ. ಇದರಿಂದ ಶಾತವಾಹನರಿಗೂ ಮೊದಲು ಮೌರ್ಯರು ಕರ್ನಾಟಕದ ಭಾಗಗಳನ್ನು ಆಳುತ್ತಿದ್ದರೆಂದು ನಂಬಬಹುದು. ಇದಕ್ಕೆ ಪೂರಕವಾಗಿ ಕಲಬುರ್ಗಿ ಜಿಲ್ಲೆಯ ಸನ್ನತಿಯಲ್ಲಿ ಅವರ ಕಾಲದ ಸ್ಮಾರಕಗಳು ದೊರೆತಿವೆ. ಜೊತೆಗೆ ಕರ್ನಾಟಕದಲ್ಲಿ ದೊರೆತಿರುವ ಅಶೋಕನ ಶಾಸನಗಳು ಮಸ್ಕಿಯ ಬಳಿಯ ಸುವರ್ಣಗಿರಿ ಮತ್ತು ಬ್ರಹ್ಮಗಿರಿಯ ಬಳಿಯ ಇಸಿಲ ನಗರಗಳು ಆತನ ಪ್ರಾದೇಶಿಕ ಮುಖ್ಯ ನಗರಗಳಾಗಿದ್ದುವೆಂಬ ಅಂಶವನ್ನು ತಿಳಿಸುತ್ತವೆ. ಇದರಿಂದ ಕರ್ನಾಟಕದ ಬಹುಭಾಗ ಮೌರ್ಯ ಸಾಮ್ರಾಜ್ಯಕ್ಕೆ ಸೇರಿದ್ದಿತೆಂದು ತಿಳಿದುಬರುತ್ತದೆ. ಅಶೋಕನ ರಾಜ್ಯ ಕಂಚಿಯವರೆಗೂ ಹಬ್ಬಿದ್ದು ಇಡೀ ಕರ್ನಾಟಕ ಅದರಲ್ಲಿ ಸೇರಿತ್ತೆಂಬುದು ನೀಲಕಂಠಶಾಸ್ತ್ರಿಯವರ ಅಭಿಪ್ರಾಯ.

 

ಅಶೋಕನ ಶಾಸನಗಳು

   ಅಶೊಕನನ್ನು ಶಾಸನಗಳ ಪಿತಾಮಹ; ಶಿಲಾಶಾಸನಗಳ ರಾಜ; ಸ್ವಕಥನಗಾರ ಎಂದು ಕರೆಯಲಾಗಿದೆ. ಇದಕ್ಕೆ ಕಾರಣ ಪ್ರಾಚೀನ ಭಾರತದಲ್ಲಿ ದೊರೆತ ಶಾಸನಗಳಲ್ಲಿ ಇವನ ಶಾಸನಗಳೇ ಅಧಿಕ ಸಂಖ್ಯೆಯಲ್ಲಿ ದೊರೆತಿರುವುದು.

ಅಶೋಕ ತನ್ನ ಶಾಸನಗಳ ಮೂಲಕ ಪ್ರಜೆಗಳೊಂದಿಗೆ ಸಂಭಾಷಿಸಿದವನು

ಅವನು ತಾನು ನಂಬಿದ್ದ ಧ್ಯೇಯ, ಆದರ್ಶ & ಧರ್ಮಗಳಿಗೆ ಶಾಶ್ವತ ರೂಪ ಕೊಡಲು ಶಾಸನಗಳ ಕೆತ್ತನೆ ಮಾಡಿಸಿದ್ದಾನೆ ಎನ್ನಲಾಗಿದೆ.

ಅವು ಪ್ರಾಚೀನ ಭಾರತದ ಮತ್ತು ಮೌರ್ಯ ಸಾಮ್ರಾಜ್ಯದ ಶ್ರೇಷ್ಠ ಐತಿಹಾಸಿಕ ದಾಖಲೆಗಳು

ಅವನ ಶಾಸನಗಳು ಪಾಲಿ ಭಾಷೆಯಲ್ಲಿದ್ದು, ಬ್ರಾಃಮಿ & ಕರೋಷ್ಠಿ ಲಿಪಿಯಲ್ಲಿ ಬರೆಸಲ್ಪಟ್ಟಿವೆ

ಅಫ್ಘಾನಿಸ್ತಾನದಲ್ಲಿರುವ ಶಬಾಷ್‌ಗರ್ ಮತ್ತು ಮನ್‌ಶೇರಾ ಗಳಲ್ಲಿನ ಶಾಸನಗಳು ಅರಾಮಿಕ್‌ ಭಾಷೆ ಮತ್ತು ಕರೋಷ್ಠಿ ಲಿಪಿಯಲ್ಲಿವೆ.

ಕರೋಷ್ಠಿ ಲಿಪಿ ಬಲದಿಂದ ಎಡಕ್ಕೆ ಸಾಗುತ್ತದೆ. ಬ್ರಾಹ್ಮಿ ಇದಕ್ಕೆ ವಿರುದ್ಧವಾಗಿರುತ್ತದೆ

ಇವನ ಶಾಸನಗಳನ್ನು ೧೮೩೭ ರಲ್ಲಿ “ಜೇಮ್ಸ್‌ ಪ್ರಿನ್ಸೆಫ್”‌ ಮೊದಲ ಬಾರಿಗೆ ಓದಿದರು

ಶಾಸನಗಳ ವರ್ಗೀಕರಣ

ಪ್ರಮುಖವಾಗಿ ಆರು ವಿಧಗಳಾಗಿ ವಿಂಗಡಿಸಿದೆ. ಅವುಗಳೆಂದರೆ,

೧. ಶಿಲಾಶಾಸನಗಳು

೨. ಸ್ತಂಭ ಶಾಸನಗಳು

೩. ಗುಹಾ ಶಾಸನಗಳು

೪. ಲಘು ಶಾಸನಗಳು

೫. ಸ್ಮರಣಾರ್ಥ ಶಾಸನಗಳು

೬. ಕಳಿಂಗ ಶಾಸನಗಳು

 

ಕರ್ನಾಟಕದಲ್ಲಿ ಅಶೋಕನ ಶಾಸನಗಳು

ಚಿತ್ರದುರ್ಗ – ಬ್ರಹ್ಮಗಿರಿ, ಅಶೋಕ ಸಿದ್ಧಾಪುರ ಮತ್ತು ಜಟಿಂಗರಾಮೇಶ್ವರಗಳಲ್ಲಿ ತಲಾ ಒಂದು

ಕೊಪ್ಪಳ – ಗವಿಮಠ ಮತ್ತು ಪಾಲ್ಕಿಗೊಂಡುಗಳಲ್ಲಿ ತಲಾ ಒಂದು

ಬಳ್ಳಾರಿ – ಉದೇಗೊಳ ಮತ್ತು ನಿಟ್ಟೂರುಗಳಲ್ಲಿ ತಲಾ ಎರಡು

ರಾಯಚೂರು – ಮಸ್ಕಿಯಲ್ಲಿ ಒಂದು

ಗುಲ್ಬರ್ಗಾ – ಸನ್ನತಿಯಲ್ಲಿ ಒಂದು

   ಒಟ್ಟು ಹನ್ನೊಂದು ಶಾಸನಗಳು ದೊರೆತಿವೆ.

ದಕ್ಷಿಣದಲ್ಲಿ ಸುವರ್ಣಗಿರಿ, ಇಸಿಲ, ತೋಸಿಲ ಮತ್ತು ಸಂಪ ಎಂಬುವು ಅಶೋಕನ ಪ್ರಾಂತ್ಯಗಳಾಗಿದ್ದವು.

ಅಶೋಕನ ಶಾಸನಗಳ ಸಾರ

ಅವನ ಶಾಸನಗಳು ನೈತಿಕ ಮತ್ತು ಆಧ್ಯಾತ್ಮಿಕ ಆದರ್ಶಗಳಿಂದ ಕೂಡಿವೆ

ಮುಖ್ಯ ಬೋಧನೆಗಳು:

೧. ತಂದೆ-ತಾಯಿಯರ ನುಡಿ ಪಾಲನೆ

೨. ಗುರು-ಹಿರಿಯರಿಗೆ ಗೌರವ ತೋರುವುದು

೩. ಸತ್ಯವಾಕ್ಯ ನುಡಿಯುವುದು

೪. ಪ್ರಾಣಿಗಳ ಬಗ್ಗೆ ದಯೆ ತೋರುವುದು

೫. ಅಹಿಂಸೆಯನ್ನು ಪಾಲಿಸುವುದು

೬. ಸಹನೆ, ಸೋದರತೆ, ಅನುಕಂಪ ಮತ್ತು ಉದಾರತೆಗಳನ್ನು ಬೆಳೆಸಿಕೊಳ್ಳುವುದು

೭. ನೆರೆ-ಹೊರೆಯವರನ್ನು ಪ್ರೀತಿಯಿಂದ ಕಾಣುವುದು

ಅಶೋಕನ ಶಾಸನಗಳ ಮಹತ್ವ

೧. ಸಾಮ್ರಾಜ್ಯದ ವಿಸ್ತಾರ ತಿಳಿಸುತ್ತವೆ.

೨. ಧರ್ಮದ ಸಾರ ತಿಳಿಯಲು ನೆರವಾಗುತ್ತವೆ.

೩. ವಿದೇಶಗಳ ಸಂಬಂಧ ತಿಳಿಯಲು ನೆರವಾಗುತ್ತವೆ.

೪. ಆಡಳಿತದ ಬಗ್ಗೆ ಮಾಹಿತಿ ನೀಡುತ್ತವೆ.

೫. ಅಶೋಕನ ವ್ಯಕ್ತಿತ್ವ ತಿಳಿಯಲು ನೆರವಾಗುತ್ತವೆ.

೬. ಮೌರ್ಯರ ಕಲೆ-ಸಾಹಿತ್ಯ ತಿಳಿಯಲು ನೆರವಾಗುತ್ತವೆ.

*****

Comments

Popular posts from this blog

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಸಾಹಿತ್ಯಾಧಾರಗಳು - Literary Sources