ಕದಂಬರ ಆಡಳಿತ ಪದ್ಧತಿ ಮತ್ತು ಸಾಂಸ್ಕೃತಿಕ ಕೊಡುಗೆಗಳು

ಆಡಳಿತ ಪದ್ಧತಿ:  ಮೊಟ್ಟಮೊದಲ ಬಾರಿಗೆ ಕನ್ನಡದ ನೆಲದಲ್ಲಿ ಸ್ವತಂತ್ರ ರಾಜಮನೆತನವೊಂದನ್ನು ಸ್ಥಾಪಿಸಿದ ಕದಂಬರ ಕೀರ್ತಿಯು ಅವರು ತಮ್ಮ ಮುಂದಿನ ಮನೆತನಗಳಿಗೆ ಮಾದರಿಯಾಗಿರುವಂತೆ ಆಡಳಿತ ಪದ್ಧತಿಯೊಂದನ್ನು ರೂಢಿಸುವ ಮೂಲಕ ಇಮ್ಮಡಿಗೊಂಡಿತು.   ಕದಂಬರ ಆಡಳಿತ ಪದ್ಧತಿಯನ್ನು ಕೇಂದ್ರಾಡಳಿತ ಮತ್ತು ಪ್ರಾಂತ್ಯಾಡಳಿತ ಎಂದು ಎರಡು ವಿಭಾಗಗಳಲ್ಲಿ ಅಧ್ಯಯನ ಮಾಡಬಹುದು.

ಕೇಂದ್ರಾಡಳಿತ: ಶಾತವಾಹನರ ನಂತರ ಅಧಿಕಾರಕ್ಕೆ ಬಂದ ಇವರು ಅವರ ಪದ್ಧತಿಯನ್ನು ಕೆಲವು ಮಾರ್ಪಾಡುಗಳೊಂದಿಗೆ ಮುಂದುವರಿಸಿದರು. ರಾಜಪ್ರಭುತ್ವ ಅಸ್ಥಿತ್ವದಲ್ಲಿತ್ತು. ಅವರು ಧರ್ಮಾಡಳಿತ ನಡೆಸುತ್ತಿದ್ದರು. ಪ್ರಜಾರಂಜನೆಯೇ ಆಡಳಿತದ ಪ್ರಮುಖ ಉದ್ದೇಶವಾಗಿತ್ತು. ಆಡಳಿತದಲ್ಲಿ ತರಬೇತಿ ನೀಡುವ ಸಲುವಾಗಿ ಯುವರಾಜರನ್ನು ಮಾಂಡಲೀಕರನ್ನಾಗಿ  ನೇಮಕ ಮಾಡುತ್ತಿದ್ದರು.ತಂದೆಯ ಮರಣಾನಂತರ ಅವನ  ಜೇಷ್ಠಪುತ್ರನಿಗೆ ಸಿಂಹಾಸನ ಲಭ್ಯವಾಗುತ್ತಿತ್ತು. ಕದಂಬ ಅರಸರು ಮತ್ತು ಯುವರಾಜರು ಶಾಸ್ತ್ರಗಳ ಅಧ್ಯಯನ ಮಾಡುತ್ತಿದ್ದರು. ಅವರದು ನಿರಂಕುಶ ಆಡಳಿತವಾಗಿರಲಿಲ್ಲ. ಆಡಳಿತದಲ್ಲಿ ಪ್ರಜಾಭಿಪ್ರಾಯಕ್ಕೆ ಮನ್ನಣೆ ನೀಡಲಾಗುತ್ತಿತ್ತು. ಆಡಳಿತಕ್ಕೆ ಮಂತ್ರಿಗಳ ಸಲಹೆ ಪಡೆಯಲಾಗುತ್ತಿತ್ತು. ಯುದ್ಧಗಳಲ್ಲಿ ಸೇನೆಯ ಮುನ್ನಡೆ ಮತ್ತು ರಕ್ಷಣೆಯ ಕಾರ್ಯಗಳು ರಾಜನಿಂದ ನಿರ್ವಹಿಸಲ್ಪಡುತ್ತಿದ್ದವು.

ಮಂತ್ರಿಗಳು:- ರಾಜನಿಗೆ ಆಡಳಿತದಲ್ಲಿ ನೆರವಾಗಲು ಪಂಚಪ್ರಧಾನರೆಂಬ ಮಂತ್ರಿಗಳಿದ್ದರು. ಅವರುಗಳೆಂದರೆ, ಪ್ರಧಾನ, ಮನೆವೆರ್ಗೆಡೆ, ಪ್ರಮುಖಪಾಲ, ತಂತ್ರಪಾಲ & ಸಭಾಕಾರ್ಯ ಸಚಿವ ಎಂದು ಡಾ. ಮೋರಿಸ್ ಅವರು ಅಭಿಪ್ರಾಯಪಟ್ಟಿದ್ದಾರೆ.‌

ಅಲ್ಲದೇ ಕೋಶಾಧಿಕಾರಿ, ದೇಶಾಮಾತ್ಯ, ರಹಸ್ಯಾಧಿಕೃತ, ಸರ್ವಕಾರ್ಯಕರ್ತ, ಭೋಜಕ, ಆಯುಕ್ತರೆಂಬ ಅಧಿಕಾರಿಗಳ ಉಲ್ಲೇಖ ಶಾಸನಗಳಲ್ಲಿ ಕಂಡುಬಂದಿದೆ. ಧರ್ಮಾಧ್ಯಕ್ಷನೆಂಬ ಪ್ರಧಾನ ನ್ಯಾಯಾಧೀಶ ಇದ್ದನು. ರಾಜನೇ ಇವರ ಗುಣ-ನಡತೆ ಅವಲಂಬಿಸಿ ನೇಮಕ ಮಾಡಿಕೊಳ್ಳುತ್ತಿದ್ದನು. ಮಂತ್ರಿಗಳ ಅಭಿಪ್ರಾಯಗಳಿಗೆ ರಾಜಮಣ್ಣಣೆ ಇತ್ತು.


ಪ್ರಾಂತ್ಯಾಡಳಿತ:- ರಾಜ್ಯವನ್ನು ಮಂಡಲ ಅಥವಾ ದೇಶ, ವಿಷಯ ಅಥವಾ ನಾಡು, ಕಂಪಣ, ಮಹಾಗ್ರಾಮ & ದಶಗ್ರಾಮಗಳಾಗಿ ವಿಭಜನೆ ಮಾಡಲಾಗಿತ್ತು. ಮಂಡಲಗಳಿಗೆ ಯುವರಾಜರನ್ನು ಆಡಳಿತಾಧಿಕಾರಿಗಳನ್ನಾಗಿ ನೇಮಕ ಮಾಡಲಾಗುತ್ತಿತ್ತು. ಮಂಡಲಾಧಿಕಾರಿಗಳು ಸೇನೆಯ ನಿರ್ವಹಣೆ ಮಾಡಬೇಕಿತ್ತು. ಕಂಪಣಗಳ ಅಧಿಕಾರಿಗಳನ್ನು ಮನ್ನೆಯರು ಎನ್ನುತ್ತಿದ್ದರು. ಬನವಾಸಿ, ಹಲಸಿ, ತ್ರಿಪರ್ವತ ಮತ್ತು ಉಚ್ಚಂಗಿಗಳು ಪ್ರಾದೇಶಿಕ ರಾಜಧಾನಿಗಳಾಗಿದ್ದವು. ಪಂಚಮುಖಿಯವರು ೯ ವಿಷಯಗಳ ಹೆಸರು ಪಟ್ಟಿ ಮಾಡಿದ್ದಾರೆ. ಗ್ರಾಮಾಡಳಿತದ ಜವಾಬ್ದಾರಿ ಗಾವುಂಡನಿಗೆ ಸೇರಿತ್ತು. ಪಟ್ಟಣಸ್ವಾಮಿಯು ನಗರಗಳ ಆಡಳಿತ ನೋಡಿಕೊಳ್ಳುತ್ತಿದ್ದನು. ಅಗ್ರಹಾರಗಳ ಆಡಳಿತ ಮಹಾಜನರಿಗೆ ಸೇರಿತ್ತು. ಕೆಲವು ಸಾಮಂತರು ಇದ್ದು, ಅವರು ಕೇಂದ್ರದ ಅಧೀನರಾಗಿದ್ದರು. ಅವರನ್ನು ಮಹಾಮಂಡಲೇಶ್ವರರೆಂದು ಕರೆಯಲಾಗುತ್ತಿತ್ತು.


ನ್ಯಾಯಾಡಳಿತ:- ಅರಸನೇ ಸರ್ವೋಚ್ಛ ನ್ಯಾಯಾಧೀಶನಾಗಿದ್ದನು. ರಾಜನು ಧರ್ಮಾದ್ಯಕ್ಷನ ನೆರವಿನೊಂದಿಗೆ ಮಹತ್ತರವಾದ ಪ್ರಕರಣಗಳಲ್ಲಿ ಮಾತ್ರ ತೀರ್ಪು ನೀಡುತ್ತಿದ್ದನು. ಶಿಕ್ಷೆಗಳು ಕಠಿಣವಾಗಿರಲಿಲ್ಲ. ಮರಣದಂಡನೆ ಇರಲಿಲ್ಲ. ಸೆರೆವಾಸ, ದಂಡ, ಅಗ್ನಿಪರೀಕ್ಷೆಗಳು ಇದ್ದವು. ಹಿಂಸಾಪರಾಧಕ್ಕೆ ೩ ಗದ್ಯಾಣದ ದಂಡ ವಿಧಿಸಲಾಗುತ್ತಿತ್ತು. ಕೊಲೆ ಅಪರಾಧಕ್ಕೆ ೧೦೦ ಗದ್ಯಾಣಗಳ ದಂಡ ವಿಧಿಸಿ ಅದನ್ನು ಸಂತ್ರಸ್ತರಿಗೆ ನೀಡಲಾಗುತ್ತಿತ್ತು ಮತ್ತು ೫೦ ಗದ್ಯಾಣಗಳ ದಂಡ ವಿಧಿಸಿ ಖಜಾನೆಗೆ ತುಂಬಲಾಗುತ್ತಿತ್ತು.


ಕಂದಾಯಾಡಳಿತ:- ಭೂಕಂದಾಯವೇ ಪ್ರಮುಖ ಆದಾಯದ ಮೂಲವಾಗಿತ್ತು. ೧/೬ ರಷ್ಟು ಭೂತೆರಿಗೆ ಇದ್ದು, ಅದು ರೈತರಿಗೆ ಭಾರವಾಗಿರಲಿಲ್ಲ. ಪೆರ್ಜುಂಕ ಎಂಬ ಹೇರುಗಳ ತೆರಿಗೆ, ಬೆಳ್ಗೊಡೆ ಎಂಬ ಮಾರಾಟ ತೆರಿಗೆ, ಪಣ್ಣಯ ಎಂಬ ಪೇಟೆ ಸುಂಕ ಅಥವಾ ವೀಳ್ಯದೆಲೆ ಸುಂಕ ಎಂಬ ತೆರಿಗೆಗಳು ಶಾಸನಗಳಲ್ಲಿ ಕಂಡುಬಂದಿವೆ . ಕಿರುಕುಳವೆಂಬ ಸಾಗಾಣಿಕೆ ತೆರಿಗೆ ಇದ್ದ ಬಗ್ಗೆ ಉಲ್ಲೇಖಗಳಿವೆ. ವೃತ್ತಿ ನಿರತರಿಗೆ ವೃತ್ತಿ ತೆರಿಗೆ ವಿಧಿಸಲಾಗುತ್ತಿತ್ತು. ಯುದ್ಧಲೂಟಿ & ಕಪ್ಪಕಾಣಿಕೆಗಳು ಆದಾಯದ ಇತರೆ ಮೂಲಗಳಾಗಿದ್ದವು. ಪದ್ಮಟಂಕವೆಂಬ ಚಿನ್ನದ ನಾಣ್ಯ ಚಲಾವಣೆಯಲ್ಲಿತ್ತು.


ಸೇನಾಡಳಿತ:- ಸೇನಾಧಿಪತಿ, ಜನದಶ, ದಂಡನಾಯಕ, ನಾಯಕರೆಂಬ ಸೇನಾಧಿಕಾರಿಗಳು ಇದ್ದರು. ಚತುರಂಗ ಬಲವಿತ್ತು.ಪಲ್ಲವರೊಂದಿಗಿನ ನಿರಂತರ ಯುದ್ಧಗಳ ಕಾರಣ ಸ್ಥಾಯಿ ಸೈನ್ಯ ಅಸ್ಥಿತ್ವದಲ್ಲಿತ್ತು. ಅದರಲ್ಲಿ ಅಶ್ವಪಡೆ ಮುಖ್ಯವಾಗಿತ್ತು. ಕದಂಬರ ಸೇನೆಯು ಕೂಟಯುದ್ಧದಲ್ಲಿ ನೈಪುಣ್ಯತೆ ಹೊಂದಿತ್ತು.


ಸಾಮಾಜಿಕ ಸ್ಥಿತಿ-ಗತಿಗಳು:- ಅಂದಿನ ಸಮಾಜದಲ್ಲಿ ವರ್ಣಾಶ್ರಮ ಪದ್ಧತಿ ಜಾರಿಯಲ್ಲಿತ್ತು. ಪಿತೃಪ್ರಧಾನವಾದ  ಅವಿಭಕ್ತ ಕುಟುಂಬ ಪದ್ಧತಿ ಜಾರಿಯಲ್ಲಿತ್ತು. ಆಸ್ತಿ ಗಂಡುಮಕ್ಕಳಿಗೆ ಲಭಿಸುತ್ತಿತ್ತು; ಗಂಡು ಸಂತಾನವಿಲ್ಲವಾದಲ್ಲಿ ಹೆಣ್ಣುಮಕ್ಕಳಿಗೆ ಲಭಿಸುತ್ತಿತ್ತು. ಅಂದಿನ ಸಮಾಜದಲ್ಲಿ ಸತಿಪದ್ಧತಿ ರೂಢಿಯಲ್ಲಿತ್ತು. ಗೋತ್ರವಿವಾಹಗಳು ಜಾರಿಗೆ ಬಂದವು. ಸಮಾಜದಲ್ಲಿ ಮಃಇಳೆಯರಿಗೆ ಉತ್ತಮ ಸ್ಥಾನ-ಮಾನಗಳು ಇದ್ದವು. ಜನಸಾಮಾನ್ಯರಲ್ಲಿ ಏಕಪತ್ನಿತ್ವ ಜನಪ್ರಿಯವಾಗಿತ್ತು. ಬಹುಪತ್ನಿತ್ವ ರಾಜವಂಶೀಯರಲ್ಲಿ ರೂಢಿಯಲ್ಲಿತ್ತು. ಮಾಂಸಾಹಾರ ಮತ್ತು ಶಾಖಾಹಾರಗಳು ರೂಢಿಯಲ್ಲಿದ್ದವು. ಆ ಕಾಲದ ಜನರು ಆಭರಣ ಪ್ರಿಯರಾಗಿದ್ದು, ವಿವಿಧ ಆಭರಣಗಳು ಬಳಕೆಯಲ್ಲಿದ್ದವು. ಮನರಂಜನೆಗೆ ವಿವಿಧ ಮಾಧ್ಯಮಗಳು ರೂಢಿಯಲ್ಲಿದ್ದವು. ಸಮಾಜದಲ್ಲಿ ವಿವಿಧ ವೃತ್ತಿಯವರು ಇದ್ದರು.


ಆರ್ಥಿಕ ಸ್ಥಿತಿ:- ಕೃಷಿ ಪ್ರಧಾನ ಸಮಾಜವಾಗಿತ್ತು. ವಿವಿಧ ಗೃಹ ಕೈಗಾರಿಕೆಗಳು ಅಸ್ಥಿತ್ವದಲ್ಲಿದ್ದವು. ವೃತ್ತಿನಿರತರು ಶ್ರೇಣಿಗಳನ್ನು ಹೊಂದಿದ್ದರು. ಪ್ರಸಿದ್ಧ ನಗರಗಳು ಇದ್ದವು. ಅರಬ್ಬರೊಂದಿಗೆ ವಿದೇಶೀ ವ್ಯಾಪಾರವಿತ್ತು. ಗೋವಾ, ಮಂಗಳೂರು, ಹೊನ್ನಾವರ, ಭಟ್ಕಳಗಳು ಅಂದಿನ ಬಂದರು ನಗರಗಳಾಗಿದ್ದವು. ರೋಮನ್ನರೊಂದಿಗೆ ವ್ಯಾಪಾರ ಸಂಬಂಧವಿತ್ತು. ಪದ್ಮಟಂಕ, ದ್ರಮ್ಮ, ಪಣ ಮತ್ತು ಗದ್ಯಾಣಗಳೆಂಬ ನಾಣ್ಯಗಳು ಚಲಾವಣೆಯಲ್ಲಿದ್ದವು. ಪದ್ಮಟಂಕ ೫೨ ಗ್ರೈನ್‌ ತೂಕ ಹೊಂದಿತ್ತು.


ಧರ್ಮ:- ಕದಂಬರು ವೈದಿಕ ಮತಾವಲಂಬಿಗಳು. ಆದರೂ ಪರಧರ್ಮ ಸಹಿಷ್ಣುಗಳಾಗಿದ್ದರು. ಶೈವ ಮತ್ತು ವೈಷ್ಣವ ದೇವತೆಗಳ ಆರಾಧನೆ ರೂಢಿಯಲ್ಲಿತ್ತು. ಮಯೂರ ೧೪೪ ಗ್ರಾಮಗಳ ದಾನ ಮಾಡಿದ್ದನು. ಉತ್ತರದ ಅಹಿಚ್ಛತ್ರದಿಂದ ಬ್ರಾಹ್ಮಣರು ತುಳುನಾಡಿಗೆ ಬಂದಿದ್ದರು. ಪೂಜ್ಯಪಾದ, ನಿರವದ್ಯ ಮತ್ತು ಕುಮಾರದತ್ತರೆಂಬ ಜೈನ ಗುರುಗಳಿಗೆ ಆಶ್ರಯ ನೀಡಲಾಗಿತ್ತು. ಮೃಗೇಶ ವರ್ಮನಿಂದ ಹಲಸಿಯಲ್ಲಿ ಜೈನ ಬಸದಿ ನಿರ್ಮಾಣವಾಗಿದೆ. ಬನವಾಸಿ ಬೌದ್ಧರ ಕೇಂದ್ರವಾಗಿತ್ತು ಎಂದು ಹೂ-ಯೆನ್-ತ್ಸಾಂಗ್‌ ತನ್ನ ಬರವಣಿಗೆಗಳಲ್ಲಿ ವಿವರಣೆ ನೀಡಿದ್ದಾನೆ.


ಶಿಕ್ಷಣ:- ಕದಂಬರು ಪ್ರಾಚೀನ ಶಿಕ್ಷಣ ಪದ್ಧತಿಯನ್ನು ಆರಂಭಿಸಿದರು. ಗುರುಕುಲ ಪದ್ಧತಿ ರೂಢಿಯಲ್ಲಿತ್ತು. ಘಟಿಕೆಗಳು, ಅಗ್ರಹಾರಗಳು, ಬ್ರಹ್ಮಪುರಿಗಳು ಶಿಕ್ಷಣದ ಕೇಂದ್ರಗಳಾಗಿದ್ದವು. ಬಳ್ಳಿಗಾವಿ, ತಾಳಗುಂದ ಮತ್ತು ಬನವಾಸಿಗಳು ಪ್ರಮುಖ ಶಿಕ್ಷಣದ ಕೇಂದ್ರಗಳಾಗಿದ್ದವು. ಉಚಿತ ಶಿಕ್ಷಣ ನೀಡಲಾಗುತ್ತಿತ್ತು. ವೇದಾಧ್ಯಯನ ಕಲಿಕೆಯ ಪ್ರಮುಖ ವಿಷಯವಾಗಿತ್ತು. ಶಿಕ್ಷಣ ಮುಗಿದ ನಂತರ ಏರ್ಪಡಿಸುತ್ತಿದ್ದ ವಾದಗಳಲ್ಲಿ ಗೆದ್ದವರಿಗೆ ಘಟಿಕಸಾಹಸಿ ಎಂಬ ಬಿರುದು ನೀಡಲಾಗುತ್ತಿತ್ತು. ಶಿಕ್ಷಣ ಸಂಸ್ಥೆಗಳಿಗೆ ದಾನ-ದತ್ತಿಗಳು ಕೊಡಲ್ಪಡುತ್ತಿದ್ದವು.


ಸಾಹಿತ್ಯ:- ಪ್ರಾಕೃತ, ಸಂಸ್ಕೃತ ಮತ್ತು ಕನ್ನಡ ಭಾಷೆಗಳಲ್ಲಿ ಅಂದಿನ ಸಾಹಿತ್ಯ ಕೃತಿಗಳು ರಚನೆಗೊಂಡಿವೆ. ಶಾಸನಗಳು ಸಹಾ ಅದೇ ಭಾಷೆಗಳಲ್ಲಿ ಬರೆಸಲ್ಪಡುತ್ತಿದ್ದವು. ಪ್ರಾಕೃತ ಆಡಳಿತ ಭಾಷೆಯಾಗಿತ್ತು. ಆದರೆ ಕ್ರಮೇಣ ಕನ್ನಡ ಅದರ ಸ್ಥಾನ ಆವರಿಸಿತು. ಚಂದ್ರರಾಜನ ಮದನತಿಲಕ, ನಾಗವರ್ಮನ ಚಂದ್ರಚೂಡಾಮಣಿ ಮತ್ತು ಶಾಂತಿನಾಥನ ಸುಕುಮಾರ ಚರಿತೆಗಳು ಇವರ ಕಾಲದ ಮುಖ್ಯ ಕೃತಿಗಳು.

ಕಲೆ, ವಾಸ್ತು-ಶಿಲ್ಪ:- ಆರಂಭ ಕಾಲದ ದೇವಾಲಯಗಳ ರಚನೆ ಇವರ ಕಾಲದಲ್ಲಿ ಆರಂಭವಾಯಿತು. ಮೆಟ್ಟಿಲುಗಳಂತೆ ಮೇಲೆರುವ ಪಿರಮಿಡ್ಡು ಆಕಾರದ ಗೋಪುರಗಳ ರಚನೆ ಇವರ ಕಾಲದಲ್ಲಿತ್ತು ಎಂದು ಡಾ. ಮೋರಿಸ್‌ ಅಭಿಪ್ರಾಯಪಟ್ಟಿದ್ದಾರೆ. ದೇವಾಲಯಗಳನ್ನು ಕಲ್ಲಿನಲ್ಲಿ ನಿರ್ಮಿಸಲಾಗುತ್ತಿತ್ತು. ಜೈನ ಬಸದಿಗಳು, ಬೌದ್ಧ ಚೈತ್ಯ ಹಾಗೂ ವಿಹಾರಗಳ ನಿರ್ಮಾಣ ಮಾಡಲಾಗಿದೆ. ಅವುಗಳ ನಿರ್ಮಾಣಕ್ಕೆ ಗಟ್ಟಿ ಕಲ್ಲಿನ ಬಳಕೆ ಮಾಡಲಾಗಿದೆ. ಇವರ ದೇವಾಲಯಗಳಲ್ಲಿ ಶಿವನ ಲಿಂಗಗಳು ಹೆಚ್ಚು ಕಂಡುಬಂದಿವೆ. ಅವುಗಳ ನಿರ್ಮಾಣಕ್ಕೆ ಬಳಪದ ಕಲ್ಲಿನ ಬಳಕೆ ಮಾಡಲಾಗಿದೆ. ಕೆಲವು ಲಿಂಗಗಳ ಮೇಲೆ ಲಘುಶಾಸನಗಳು ಕಂಡುಬಂದಿವೆ. ತಾಳಗುಂದದ ಪ್ರಣವೇಶ್ವರ, ಬನವಾಸಿಯ ಮಧುಕೇಶ್ವರ, ಹಲಸಿಯ ಕಲ್ಲೇಶ್ವರ ದೇವಾಲಯಗಳು ಇವರ ಪ್ರಮುಖ ರಚನೆಗಳು. ಚಂದ್ರವಳ್ಳಿಯ ಅಂಕಳಿ ಮಠದ ಗುಹೆಯಲ್ಲಿ ಇವರ ಕಾಲದ ಚಿತ್ರಕಲೆಗಳು ಕಂಡುಬಂದಿವೆ. ಅಲ್ಲಿ ಸ್ವಾಭಾವಿಕ ಬಣ್ಣಗಳ ಬಳಕೆ ಮಾಡಲಾಗಿದೆ.

*****

Comments

Popular posts from this blog

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಸಾಹಿತ್ಯಾಧಾರಗಳು - Literary Sources