ರಾಷ್ಟ್ರಕೂಟರ ಸಾಂಸ್ಕೃತಿಕ ಕೊಡುಗೆಗಳು
ರಾಷ್ಟ್ರಕೂಟರ ಶಿಲ್ಪಕಲೆ ಮತ್ತು ವಾಸ್ತುಶಿಲ್ಪ ರಾಷ್ಟ್ರಕೂಟರೆಂದ ಕೂಡಲೇ ಇಂದಿಗೂ ನಮ್ಮ ನೆನಪಿಗೆ ಬರುವುದೆಂದರೆ ಭಾರತದಲ್ಲಿ ಅಚ್ಚಳಿಯದೆ ಇರುವ ಅವರ ಶಿಲ್ಪಕಲೆ ಮತ್ತು ಕನ್ನಡ ಸಾಹಿತ್ಯ ಬೆಳವಣಿಗೆಗೆ ಅವರು ಸಲ್ಲಿಸಿರುವ ಸೇವೆ . ರಾಷ್ಟ್ರಕೂಟರ ಕಾಲ ಶಿಲ್ಪಕಲೆಗೆ ಪ್ರಸಿದ್ಧಿಯಾಗಿತ್ತು . ಎಲ್ಲೋರ , ಎಲಿಫೆಂಟಾ ದೇವಾಲಯಗಳು ಭಾರತದ ವಿಖ್ಯಾತ ದೇವಾಲಯಗಳು . ಇವುಗಳನ್ನು ಗುಹಾಂತರ ದೇವಾಲಯಗಳೆಂದು ಕರೆಯುವರು . ಪಶ್ಚಿಮ ಘಟ್ಟಗಳ ಪ್ರಕೃತಿ ಸೌಂದರ್ಯದ ಮಧ್ಯೆ ಬಂಡೆಯಲ್ಲಿ ಕೊರೆದಿರುವ ದೇವಾಲಯಗಳು ಇವು . ಆದ್ದರಿಂದ ಇವುಗಳಿಗೆ ಗುಹಾಲಯಗಳೆಂದು ಹೆಸರು . ಈ ದೇವಾಲಯಗಳ ವಿಶೇಷತೆ ಏನೆಂದರೆ ಒಂದೇ ಬಂಡೆಯನ್ನು ಕೊರೆದು ಕಂಬಗಳನ್ನೂ ಸಭಾಂಗಣವನ್ನೂ ದೇವರ ಮೂರ್ತಿಗಳನ್ನು ಕೆತ್ತಿದ್ದಾರೆ . ಬೇರೆ ಬೇರೆಯಾಗಿ ಕಲ್ಲುಗಳನ್ನು ತಂದು ಜೋಡಿಸಿ ಕಟ್ಟಿದ ಕಟ್ಟಡಗಳಲ್ಲ ಇವು . ಮಾನವನಿರ್ಮಿತ ಕಲಾಕೃತಿ ಎಷ್ಟು ಅದ್ಭುತವಾದುದು ಎಂಬುದಕ್ಕೆ ಈ ಗುಹಾಲಯಗಳು ಸಾಕ್ಷಿಯಾಗಿವೆ . ಎಲ್ಲೋರದ ದಶಾವತಾರ ಗುಹೆಯು ಆಶ್ಚರ್ಯಕರವಾಗಿ ಕೊರೆಯಲ್ಪಟ್ಟಿದೆ . ಒಂದೇ ಬಂಡೆಯಿಂದ ಕೊರೆದ ಎರಡು ಅಂತಸ್ತಿನ ದೇವಾಲಯವಿದು . ಕೆಳ ಅಂತಸ್ತಿನಲ್ಲಿ ಕಂಬಗಳಿಂದ ಕೂಡಿದ ವಿಶಾಲವಾದ ಸಭಾಂಗಣವಿದೆ . ಮಹಡಿಯಲ್ಲಿ ಸುಮಾರು ೫೪ ಕಂಬಗಳಿಂದ ಕೂಡಿದ ಇನ್ನೂ ವಿಶಾಲವಾದ ಮಂದಿರವಿದೆ . ಈ ಗುಹಾಲಯದಲ...