ರಾಷ್ಟ್ರಕೂಟರ ಆಡಳಿತ ಪದ್ಧತಿ:-

ಎ. ಎಸ್.‌ ಆಲ್ಟೇಕರ್‌ ಅವರ ಅಭಿಪ್ರಾಯ:- “ವಿಶಾಲ ಸಾಮ್ರಾಜ್ಯಕ್ಕೆ ಸುಭದ್ರವಾದ ಆಡಳಿತ ಒದಗಿಸಿದ್ದರು”

ಪ್ರಾಚೀನ ಭಾರತದ ಇತಿಹಾಸದಲ್ಲಿ ಅಷ್ಟು ವಿಶಾಲ ಸಾಮ್ರಾಜ್ಯಕ್ಕೆ ವ್ಯವಸ್ಥಿತವಾದ ಆಡಳಿತವನ್ನು ಒದಗಿಸಿದ ಇನ್ನೊಂದು ಮನೆತನವಿರಲಿಲ್ಲ. ಅವರದು ಸುಭದ್ರವಾದ ಆಡಳಿತ ವ್ಯವಸ್ಥೆಯಾಗಿದ್ದು, ಸಾಮಂತರು ಮತ್ತು ಮಾಂಡಲೀಕರ ಮೇಲೆ ಪ್ರಬಲ ಹಿಡಿತ ಹೊಂದಿದ್ದರು. ಅಲ್ಲದೇ ಸೇನೆ, ಹಣಕಾಸು, ಗೂಢಾಚಾರ ಇವೇ ಮೊದಲಾದ ಕ್ಷೇತ್ರಗಳಲ್ಲಿ ದಕ್ಷವಾದ ಆಡಳಿತ ವ್ಯವಸ್ಥೆ ರೂಪುಗೊಂಡಿತ್ತು. ಅವರ ಆಡಳಿತದ ಪರಿಚಯವನ್ನು ಈ ಕೆಳಗಿನಂತೆ ಮಾಡಿಕೊಳ್ಳಬಹುದು.

 

ಆಡಳಿತವನ್ನು ಮೂರು ವಿಭಾಗಗಳಾಗಿ ಅಧ್ಯಯನ ಮಾಡಬಹುದು. ಅವುಗಳೆಂದರೆ:- ಕೇಂದ್ರಾಡಳಿತ, ಪ್ರಾಂತ್ಯಾಡಳಿತ ಮತ್ತು ಗ್ರಾಮಾಡಳಿತ

 

ಕೇಂದ್ರಾಡಳಿತ:-

ರಾಜ: ರಾಜನೇ ಸಾಮ್ರಾಜ್ಯದ ಸರ್ವೋಚ್ಛ ಅಧಿಕಾರಿಯಾಗಿದ್ದನು. ಆಡಳಿತದ ಎಲ್ಲಾ ಅಧಿಕಾರಸೂತ್ರಗಳೂ ಅವನಲ್ಲೇ ಕೇಂದ್ರೀಕೃತವಾಗಿದ್ದರಿಂದ ಅವನ ಅಧಿಕಾರಕ್ಕೆ ಮಿತಿಯೇ ಇರಲಿಲ್ಲ. ಆದರೂ ಅವರು ನಿರಂಕುಶರಾಗಿರಲಿಲ್ಲ ಮತ್ತು  ಪ್ರಜಾಹಿತಕ್ಕೆ ತಕ್ಕ ಆಡಳಿತ ನಡೆಸುವುದು ರಾಷ್ಟ್ರಕೂಟ ಅರಸರ ಗುರಿಯಾಗಿತ್ತು. ಏಕೆಂದರೆ, ಧರ್ಮ ಮತ್ತು ಶಾಸ್ತ್ರಗಳಿಗೆ ಅನುಗುಣವಾಗಿ ಆಡಳಿತ ನಡೆಯುತ್ತಿತ್ತು. ಅಲ್ಲದೇ ಧಾರ್ಮಿಕ ವಿಧಿಗಳು, ಮಂತ್ರಾಲೋಚನ ಸಭೆ ಮತ್ತು ಸ್ವಯಂ ಆಡಳಿತ ಹೊಂದಿದ್ದ ಸ್ಥಳೀಯ ಆಡಳಿತ ಘಟಕಗಳು ಚಕ್ರವರ್ತಿಯ ನಿಯಂತ್ರಕಗಳಾಗಿದ್ದವು. ರಾಜ್ಯದ ಆಡಳಿತಾತ್ಮಕ ಸಮಸ್ಯೆಗಳಿಗೆ ಮಂತ್ರಾಲೋಚನೆಯ ಮೂಲಕ ಪರಿಹಾರ ಕಂಡುಕೊಳ್ಳಲಾಗುತ್ತಿತ್ತು. ಮಂತ್ರಿಗಳು, ಪುರೋಹಿತರು, ಸಾಮಂತರು, ಯುವರಾಜರು, ದಂಡನಾಯಕರು ಮತ್ತು ಭಂಡಾರಿಗಳು ಮಂತ್ರಾಲೋಚನೆಯ ಸದಸ್ಯರಾಗಿದ್ದರು. ಪ್ರಜಾಯೋಗಕ್ಷೇಮ ತಿಳಿಯಲು ರಾಜನು ರಾಜ್ಯದಲ್ಲಿ ಆಗಾಗ ಪ್ರವಾಸ ಕೈಗೊಳ್ಳುತ್ತಿದ್ದನು. ರಾಷ್ಟ್ರಕೂಟರ  ಆಸ್ಥಾನವು ವೈಭವೋಪೇತವಾಗಿದ್ದು, ವಿವಿಧ ಅಧಿಕಾರಿಗಳು, ವಿದ್ವಾಂಸರು, ಕವಿಗಳು ಮತ್ತು ಸೇವಕರಿಂದ ಕೂಡಿರುತ್ತಿತ್ತು

 

ರಾಜತ್ವ ಮತ್ತು ಅಧಿಕಾರ ಹಸ್ತಾಂತರ:- ಇವರದು ರಾಜಪ್ರಭುತ್ವವಾದ್ದರಿಂದ ವಂಶಪಾರಂಪರ್ಯ ಅಧಿಕಾರ ವ್ಯವಸ್ಥೆ ರೂಢಿಯಲ್ಲಿತ್ತು. ಜ್ಯೇಷ್ಠತೆಯ ಅನುಸಾರ ಅಂದರೆ ರಾಜನ ಹಿರಿಯ ಮಗನಿಗೆ ಅಧಿಕಾರ ಹಸ್ತಾಂತರವಾಗುತ್ತಿತ್ತು. ಕೆಲವೊಮ್ಮೆ ಅರ್ಹರಿಗೆ ಯುವರಾಜ ಪಟ್ಟ ಲಭಿಸುತ್ತಿತ್ತು; ಮೂರನೇ ಗೋವಿಂದನನ್ನು ದೃವನು ಸ್ತಂಭನ ಬದಲು ಯುವರಾಜನಾಗಿ ನೇಮಿಸಿದ್ದನ್ನು ಇಲ್ಲಿ ಉದಾಹರಿಸಬಹುದು. ಪುತ್ರಸಂತಾನವಿಲ್ಲದ ಅಥವಾ ಅಪ್ರಾಪ್ತರಾಗಿದ್ದ ಪಕ್ಷದಲ್ಲಿ ರಾಜನ ಸೋದರ ಅಥವಾ ದಾಯಾದಿಗಳು ಅಧಿಕಾರಕ್ಕೆ ಬರುತ್ತಿದ್ದರು. ಇದಕ್ಕೆ ರಾಜಪ್ರಮುಖರ ಹಾಗೂ ಪ್ರಜೆಗಳ ಅನುಮತಿ ಮತ್ತು ಬೆಂಬಲ ಬೇಕಾಗಿತ್ತು. ಉದಾ:- ನಾಲ್ಕನೆ ಗೋವಿಂದನು ಅದಕ್ಷ ಮತ್ತು ವಿಲಾಸಿಯಾದ ಕಾರನ ಮೂರನೇ ಅಮೋಘವರ್ಷನು ಗುರು-ಹಿರಿಯರ ನಿರ್ಣಯದಂತೆ ಅಧಿಕಾರಕ್ಕೆ ಬಂದನು. ಇವನು ಎರಡನೆ ಕೃಷ್ಣನ ಮೊಮ್ಮೊಗ ಅಂದರೆ ಜಗತ್ತುಂಗನ ಮಗನಾಗಿದ್ದು, ಮೂರನೆ ಇಂದ್ರನ ಮಲಸೋದರನಾಗಿದ್ದನು.

 

ಯುವರಾಜ ಪದ್ಧತಿ:- ಹಿರಿಯ ಮಗನಿಗೆ ಸಿಂಹಾಸನ ಲಭಿಸುತ್ತಿತ್ತು. ಮುಂದಿನ ರಾಜನಾಗುವ ಅರ್ಹತೆಗಾಗಿ ಆಡಳಿತದ ತರಬೇತಿ ನೀಡಲು ಮತ್ತು ಅಧಿಕಾರಕ್ಕಾಗಿ ನಡೆಯುತ್ತಿದ್ದ ಅಂತಃಕಲಹಗಳನ್ನು ತಡೆಯಲು ಯುವರಾಜರ ನೇಮಕ ಮಾಡಲಾಗುತ್ತಿತ್ತು. ಯುವರಾಜನಿಗೆ ಅಮಾತ್ಯ ಮಂಡಳಿಯ ಸದಸ್ಯತ್ವವಿತ್ತು. ಅವರು ರಾಜನ ಗೈರುಹಾಜರಿಯಲ್ಲಿ ರಾಜಧಾನಿಯ ಕಾರ್ಯಗಳನ್ನು ನಿರ್ವಹಿಸುತ್ತಿದ್ದರು. ಇನ್ನುಳಿದ ರಾಜಕುಮಾರರು ಮಾಂಡಲೀಕರಾಗಿ ನೇಮಕವಾಗುತ್ತಿದ್ದರು. ಆದರೆ, ಎಲ್ಲರಿಗೂ ಯೋಗ್ಯ ಶಿಕ್ಷಣ ಮತ್ತು ಯುದ್ಧ ತರಬೇತಿ ನೀಡಲಾಗುತ್ತಿತ್ತು

 

ರಾಣಿಯರ ಸ್ಥಾನ-ಮಾನಗಳು:- ರಾಣಿಯರಿಗೂ ಆಡಳಿತದಲ್ಲಿ ಕೆಲವು ಅದಿಕಾರಗಳಿದ್ದವು. ಚಂದ್ರೋಬಲಬ್ಬೆ ಮಾಂಡಲೀಕನೊಬ್ಬನಿಗೆ ಆದೇಶ ನೀಡಿದ ಮಾಹಿತಿ ಶಾಸನಗಳಲ್ಲಿ ಲಭ್ಯವಾಗಿದೆ. ಅಂತೆಯೇ ಶೀಲ ಭಟ್ಟಾರಿಕೆ ಧೃವನೊಡನೆ ಚರ್ಚಿಸದೇ ಬ್ರಾಹ್ಮಣರಿಗೆ ಅಗ್ರಹಾರ ದಾನ ನೀಡಿದ ಮಾಹಿತಿಗಳು ಶಾಸನಗಳಲ್ಲಿ ಲಭ್ಯವಿವೆ.

 ಮಂತ್ರಿ ಪರಿಷತ್:-‌ ಆಡಳಿತದ ಸಲಹೆ ಮತ್ತು ಸಹಕಾರಕ್ಕಾಗಿ ಅಸ್ಥಿತ್ವದಲ್ಲಿತ್ತು. ಇವರಿಗೆ ಅಮಾತ್ಯರೆಂದೂ ಹೆಸರು. ಇವರ ಸಂಖ್ಯೆ ಮತ್ತು ಕಾರ್ಯಗಳ ಬಗ್ಗೆ ನಿಖರ ಮಾಹಿತಿ ಲಭ್ಯವಿಲ್ಲ A.S. ಆಲ್ಟೇಕರ್‌ರವರ ಪ್ರಕಾರ ೨೦ ಮಂತ್ರಿಗಳಿದ್ದರು

   ಶಾಸನಗಳಲ್ಲಿ ಉಲ್ಲೇಖಿಸಿರುವಂತೆ ಪ್ರಧಾನಾಮಾತ್ಯ, ಮಹಾಸಂಧಿವಿಗ್ರಹಿಕ, ಧರ್ಮಾಧಿಪತಿ, ಸೇನಾಧಿಪತಿ, ಯುವರಾಜ, ಪುರೋಹಿತ, ಕೋಶಾಧಿಪತಿ, ನ್ಯಾಯಾಧೀಶ, ದೂತ ಎಂಬ ಮಂತ್ರಿಗಳು ಇದ್ದರು.

   ಮಂತ್ರಿ ಪದವಿ ಅನುವಂಶೀಕವಾಗಿತ್ತು. ಆದರೆ, ಕೆಲವೊಮ್ಮೆ ದಕ್ಷತೆ ಆಧಾರದಲ್ಲಿ ನೇಮಕ ನಡೆಯುತ್ತಿತ್ತು. ಸಮರ್ಥ ಸಾಮಂತರು ಮಂತ್ರಿಮಂಡಲಕ್ಕೆ ನೇಮಕವಾಗುತ್ತಿದ್ದರು.

 

ಕಾರ್ಯಾಲಯ:-

ಪ್ರತಿ ವಿಭಾಗದ ಕಾರ್ಯಾಲಯವು ರಾಜಧಾನಿಯಲ್ಲಿ ಇರುತ್ತಿತ್ತು. ಪ್ರತಿಯೊಂದು ಕಛೇರಿಗೂ ಒಬ್ಬ ಅಧ್ಯಕ್ಷನಿರುತ್ತಿದ್ದನು. ಅಧ್ಯಕ್ಷನಿಗೆ ಅನೇಕ ಸಹಾಯಕರು ಇರುತ್ತಿದ್ದರು. ರಾಜ್ಯವ್ಯವಹಾರಗಳ ದಾಖಲೆಗಳು ಲೇಖನಾಧ್ಯಕ್ಷನ ವಶದಲ್ಲಿರುತ್ತಿದ್ದವು. ಇವರುಗಳಲ್ಲದೇ ಲೇಖಕ, ದೂತ, ಯುಕ್ತ, ಆಯುಕ್ತ, ಮನೆವರ್ಗೆಡೆ, ಶ್ರೀಕರಣಿ, ಅಕ್ಷಪಟಲಾಧ್ಯಕ್ಷರು ಇದ್ದರು

 

ಸಾಮಂತರು:- Fudel Lards

ಸಾಮ್ರಾಜ್ಯವು ಸಾಮಂತರಿಂದ ಕೂಡಿದ್ದ ವಿಶಾಲ ವ್ಯವಸ್ಥೆಯಾಗಿತ್ತು. ಸಾಮಂತರು ತಮ್ಮ ಅಧೀನಕ್ಕೆ ಒಳಪಟ್ಟ ಪ್ರದೇಶಗಳಲ್ಲಿ ಸ್ವತಂತ್ರರಾಗಿ ಆಳ್ವಿಕೆ ಮಾಡುತ್ತಿದ್ದರು. ಆದರೆ ಅವರ ಮೇಲೆ ಚಕ್ರವರ್ತಿಯ ನಿಯಂತ್ರಣವಿರುತ್ತಿತ್ತು. ತಮ್ಮ ಪ್ರಾಂತ್ಯಗಳ ಆಂತರಿಕ ಆಡಳಿತದಲ್ಲಿ ಸ್ವತಂತ್ರರಾಗಿದ್ದರು ಮತ್ತು ಆಡಳಿತದ ಸಹಾಯಕ್ಕಾಗಿ ಕೇಂದ್ರದಲ್ಲಿರುವಂತೆ ಇವರಿಗೂ ಸಹ ಪ್ರತ್ಯೇಕ ಅಧಿಕಾರಿ ವರ್ಗವಿತ್ತು. ಇವರು ಮಾಂಡಲೀಕ ಮತ್ತು ಪ್ರಾಂತ್ಯಾಧಿಪತಿ ಎಂಬ ಬಿರುದುಗಳಿಗೆ ಪಾತ್ರರು. ಇವರು ವಾರ್ಷಿಕ ಕಪ್ಪಕಾಣಿಕೆ, ಕರೆದಾಗ ರಾಜಧಾನಿಗೆ ಭೇಟಿ, ಯುದ್ಧಕಾಲದಲ್ಲಿ ಸೇನೆಯ ಪೂರೈಕೆ ಮಾಡುತ್ತಿದ್ದರು. ಬಂಡೆದ್ದ ಸಾಮಂತರನ್ನು ಶಿಕ್ಷಿಸಲಾಗುತ್ತಿತ್ತು

 

ಮಾಂಡಲೀಕರು:-. ಕೇಂದ್ರದ ನೇರ ನಿಯಂತ್ರಣಕ್ಕೆ ಒಳಪಟ್ಟ ಆಡಳಿತಗಾರರೇ ಮಾಂಡಲೀಕರು. ಇವರು ತಮ್ಮ ವ್ಯಾಪ್ತಿಯ ಹಣಕಾಸು, ಸೈನಿಕ ಮತ್ತು ಪೌರರಕ್ಷಣೆಯ ಜವಾಬ್ದಾರಿ ಹೊಂದಿದ್ದರು. ಕೇಂದ್ರದ ಆದೇಶಾನುಸಾರ ತೆರಿಗೆ ಮತ್ತು  ಸೇನೆಯ ನಿರ್ವಹಣೆ ಇವರ ಜವಾಬ್ದಾರಿಗಳಾಗಿದ್ದವು

 

ಸೇನಾಡಳಿತ:-

   ವಿಶಾಲ ರಾಜ್ಯದ ನಿರ್ವಹಣೆಗೆ ಸ್ಥಾಯಿ ಸೈನ್ಯವಿತ್ತು. ಇವರ ಸೇನೆಯು ಶಿಸ್ತು ಮತ್ತು ದಕ್ಷತೆಗೆ ಖ್ಯಾತವಾಗಿತ್ತು. ಉತ್ತರ ಮತ್ತು ದಕ್ಷಿಣ ಭಾರತದ ದಿಗ್ವಿಜಯಗಳು ಇಂತಹ ಬಲಿಷ್ಠ ಸೇನೆಯಿಂದ ಸಾಧ್ಯವಾಯಿತು. ಪದಾತಿ, ಅಶ್ವ, ಗಜ ಮತ್ತು ರಥ ಪಡೆಗಳಿಂದ ಕೂಡಿದ ಚತುರಂಗ ಬಲವಿತ್ತು.  ಸೇನೆಯ ಪ್ರತಿ ವಿಭಾಗಕ್ಕೂ ಒಬ್ಬ ದಂಡನಾಯಕ ಅಥವಾ ಸೇನಾಪತಿ ಇದ್ದನು

   ಯುದ್ಧಗಳಲ್ಲಿ ರಾಜನೇ ಸೇನೆಯ ನೇತೃತ್ವ ವಹಿಸುತ್ತಿದ್ದನು. ಸೋತವರನ್ನು ಗೌರವದಿಂದ ನಡೆಸಿಕೊಳ್ಳಲಾಗುತ್ತಿತ್ತು. ಕೊಲ್ಲುವ, ಪದಚ್ಯುತಗೊಳಿಸುವ ಅಥವಾ ರಾಜ್ಯ ಕಿತ್ತುಕೊಳ್ಳುವ ಪದ್ಧತಿಗಳು ಇರಲಿಲ್ಲ. ಸೋತವರಿಂದ ಕೇವಲ ಕಪ್ಪಕಾಣಿಕೆಗಳನ್ನು ಪಡೆಯುತ್ತಿದ್ದರು

   ಬಹುತೇಕ ಕನ್ನಡಿಗರಿಂದಲೇ ಕೂಡಿದ್ದ ಸೇನೆಯ ಪ್ರತಾಪದ ವರ್ಣನೆ ಅನೇಕ ವಿದ್ವಾಂಸರಿಂದ ಆಗಿರುವುದು ಕಂಡುಬರುತ್ತದೆ. ಅವರಲ್ಲಿ ರಾಜಶೇಖರ ಮತ್ತು ಅಲ್‌ ಮಸೂದಿಯರು ಪ್ರಮುಖರು. ಕರ್ನಾಟಕ ಬಲಂ ಅಚಿಂತ್ಯಂ, ಅಜೇಯಂ ಅನ್ಯೈ ಎಂದು ಶಾಸನಗಳಲ್ಲಿ ವರ್ಣಿಸಲಾಗಿದೆ. ನೆರೆ ರಾಜ್ಯಗಳವರು ರಾಷ್ಟ್ರಕೂಟರ ಸೈನಿಕರಿಗೆ ತಮ್ಮ ಸೇನೆ ಸೇರಲು ಆಮಿಷಗಳನ್ನು ಒಡ್ಡುವ ಮೂಲಕ ಆಹ್ವಾನವೀಯುತ್ತಿದ್ದರು

 

ಹಣಕಾಸು ಆಡಳಿತ:- ಆದಾಯದ ಮೂಲಗಳು: ಭೂಕಂದಾಯ ಪ್ರಮುಖ ಮೂಲ. ಒಟ್ಟು ಉತ್ಪನ್ನದ ೧/೬ ರಷ್ಟು ಭೂಕಂದಾಯ ನಿಗದಿಯಾಗುತ್ತಿತ್ತು. ಭೂಕಂದಾಯವು ಧಾನ್ಯದ ರೂಪದಲ್ಲಿ ವಸೂಲಿಯಾಗುತ್ತಿತ್ತು. ತೆರಿಗೆಯ ಪ್ರಮಾಣ ಪ್ರದೇಶಗಳಿಗನುಸಾರವಾಗಿ ಭಿನ್ನವಾಗಿತ್ತು. ನಿಯಮಿತ ಭೂಮಾಪನ ಜಾರಿಯಲ್ಲಿತ್ತು. ದಾನ-ದತ್ತಿ ಭೂಮಿಗಳು ತೆರಿಗೆಯಿಂದ ಮುಕ್ತವಾಗಿದ್ದವು. ತೆರಿಗೆ ಸಂಗ್ರಹಕ್ಕೆ ನಿಯುಕ್ತರಾದ ಅಧಿಕಾರಿಗಳಿದ್ದರು

 

ನಾಣ್ಯಗಳು:- ಇವರ ಕಾಲದಲ್ಲಿ ಚಿನ್ನ ಮತ್ತು ಬೆಳ್ಳಿಯ ನಾಣ್ಯಗಳು ಚಲಾವಣೆಯಲ್ಲಿದ್ದವು. ಸುವರ್ಣ, ಹೊನ್ನು, ಪಣ, ದ್ರಮ್ಮ, ಗದ್ಯಾಣ, ಕಾಸು, ಕಳಂಜು, ಮಂಜಿತಿ ಮತ್ತು ಅಕ್ಕಂ          ಎಂಬ ನಾಣ್ಯಗಳಿದ್ದವು

 

ಪ್ರಾಂತ್ಯಾಡಳಿತ:-

   ವಿಶಾಲ ಸಾಮ್ರಾಜ್ಯವನ್ನು ಆಡಳಿತದ ಅನುಕೂಲಕ್ಕಾಗಿ ಅನೇಕ ವಿಭಾಗಗಳಾಗಿ ವಿಭಜಿಸಿ ಆಡಳಿತ ನಡೆಸಲಾಗುತ್ತಿತ್ತು. ಇವರ ಕಾಲದ ಆಡಳಿತದ ವಿವಿಧ ಘಟಕಗಳನ್ನು ಈ ಕೆಳಗಿನಂತೆ ವಿವರಿಸಬಹುದು.

ರಾಷ್ಟ್ರ: ಇದು ಸಾಮ್ರಾಜ್ಯದ ಪ್ರಮುಖ ಘಟಕವಾಗಿತ್ತು. ರಾಷ್ಟ್ರಕ್ಕೆ ಮಂಡಲ ಅಥವಾ ಪ್ರಾಂತ್ಯ ಎಂಬ ಹೆಸರೂ ಇತ್ತು. ರಾಷ್ಟ್ರಪತಿ ಅದರ ಮುಖ್ಯಸ್ಥನಾಗಿದ್ದ್ನು. ರಾಜ್ಯಪಾಲ, ಪ್ರಾಂತ್ಯಾದಿಕಾರಿ ಅಥವಾ ಮಹಾಮಂಡಲೇಶ್ವರ ಎಂಬ ಇತರ ಹೆಸರುಗಳೂ ಅವನಿಗಿದ್ದವು. ಈ ಸ್ಥಾನಕ್ಕೆ ಯುವರಾಜ ಅಥವಾ ರಾಜನ ಸಂಬಂಧಿಗಳನ್ನು ನೇಮಿಸಲಾಗುತ್ತಿತ್ತು. ತೆರಿಗೆ ಸಂಗ್ರಹಣೆ, ಸೇನೆ ಸಂಘಟನೆ, ಶಾಂತಿ ಪರಿಪಾಲನೆ ಮತ್ತು ಪ್ರಜಾರಕ್ಷಣೆಗಳು ಅವನ ಜವಾಬ್ದಾರಿಗಳಾಗಿದ್ದವು. ಇವರ ಸಾಮ್ರಾಜ್ಯದಲ್ಲಿ ಲಾಟ, ಆಂಧ್ರ, ನೊಳಂಬವಾಡಿ ೩೨,೦೦೦, ಬನವಾಸಿ ೧೨,೦೦೦, ಹಲಸಿಗೆ ೧೨೦೦, ಕಲಹಾಡ ೪,೦೦೦, ಲಕ್ಕುಂಡಿ ೩,೦೦೦, ಎಡದೊರೆ ೩,೦೦೦, ಕೊಂಕಣ ೧,೦೦೦ ಪೂಣಕ ೧,೦೦೦, ಆಳಂದ ೧,೦೦೦, ಪಾನುಗಲ್ಲು ೫೦೦, ಕುಂದೂರು ೫೦೦, ಬೆಳುವಲ ೩೦೦ ಮತ್ತು ಪುಲಿಗೆರೆ ೩೦೦ ಎಂಬ ಪ್ರಾಂತ್ಯಗಳಿದ್ದವು

 

ವಿಷಯ: ರಾಷ್ಟ್ರವನ್ನು ಮತ್ತೆ ವಿಷಯ ಎಂಬ ಉಪವಿಭಾಗಗಳಾಗಿ ಮಾಡಲಾಗುತ್ತಿತ್ತು. ದೇಶ ಅಥವಾ ನಾಡು ಎಂಬ ಹೆಸರುಗಳೂ ಇದ್ದವು. ವಿಷಯಪತಿ ಅದರ ಮುಖ್ಯಸ್ಥನಾಗಿರುತ್ತಿದ್ದನು. ಅವನು ರಾಜ್ಯಪಾಲನಂತೆ ಕಾರ್ಯ ನಿರ್ವಹಿಸುತ್ತಿದ್ದನು

ಭುಕ್ತಿ:- ಇದು ವಿಷಯಕ್ಕಿಂತ ಕಿರು ವಿಭಾಗವಾಗಿತ್ತು. ಅದು ಇಂದಿನ ತಾಲ್ಲೂಕಿಗೆ ಸಮವೆಂದು ಭಾವಿಸಬಹುದು. ಹಲವು ಹಳ್ಳಿಗಳ ಸಮೂಹವೇ ಭುಕ್ತಿ ಎನಿಸಿಕೊಂಡಿತ್ತು. ಅವು ಸಾಮಾನ್ಯವಾಗಿ ೭೦ ರಿಂದ ೧೦೦ ಗ್ರಾಮಗಳನ್ನು ಹೊಂದಿರುತ್ತಿದ್ದವು. ಭೋಗಿಕ ಅಥವಾ ಭೋಗಪತಿ ಅದರ ಮುಖ್ಯಸ್ಥನಾಗಿದ್ದನು. ಇವುಗಳಿಗೆ ನಾಡು ಎಂಬ ಪರ್ಯಾಯ ನಾಮವೂ ಇತ್ತು.

 

ನಗರಾಡಳಿತ:- ಪುರಪತಿ, ನಗರಪತಿ ಅಥವಾ ಪಟ್ಟಣಸ್ವಾಮಿಗಳಿಂದ ನಗರಗಳ ಆಡಳಿತ ನಿರ್ವಹಣೆಯಾಗುತ್ತಿತ್ತು. ಅವನ ಸಹಾಯಕ್ಕೆ ನಗರಸಭೆ ಇರುತ್ತಿತ್ತು. ಅದರ ಸದಸ್ಯರನ್ನು ಮಹಾಜನರು ಎನ್ನುತ್ತಿದ್ದರು. ವಣಿಕ ಅಥವಾ ವೃತ್ತಿಸಂಘಗಳ ಪ್ರತಿನಿಧಿಗಳು ಅದರ ಸದಸ್ಯರಾಗುತ್ತಿದ್ದರು

 

ಅಗ್ರಹಾರಗಳು:- ಮಹಾಜನಸಭೆಗಳಿಂದ ಅಗ್ರಹಾರಗಳ ಆಡಳಿತ ನಿರ್ವಹಣೆ ಆಗುತ್ತಿತ್ತು. ಊರೊಡೆಯ ಅದರ ಮುಖ್ಯಸ್ಥನಾಗಿದ್ದನು.

 

ಗ್ರಾಮಗಳು: ಗ್ರಾಮಗಳೇ ಕೊನೆಯ  ಆಡಳಿತ ಘಟಕಗಳಾಗಿದ್ದವು. ಗಾವುಂಡ ಅಥವಾ ಊರಗೌಡರಿಂದ ಅದರ ಆಡಳಿತ ನಡೆಯುತ್ತಿತ್ತು. ಗ್ರಾಮಗಳಲ್ಲಿ ಗ್ರಾಮಸಭೆ ಇರುತ್ತಿತ್ತು. ಅದರ ಸದಸ್ಯರನ್ನು ಮಹತ್ತರ ಎಂದು ಕರೆಯುತ್ತಿದ್ದರು. ಗಾವುಂಡನ ಸಹಾಯಕ್ಕೆ ಸೇನಭೋವ ಇರುತ್ತಿದ್ದನು. ಗ್ರಾಮಗಳು ಪುಟ್ಟ ಗಣರಾಜ್ಯಗಳಂತೆ ಕಾರ್ಯ ನಿರ್ವಹಿಸುತ್ತಿದ್ದವು.

 

********** 

Comments

Popular posts from this blog

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಸಾಹಿತ್ಯಾಧಾರಗಳು - Literary Sources