ನೊಳಂಬ-ಪಲ್ಲವರು - ರಾಜಕೀಯ ಇತಿಹಾಸ
ಪೀಠಿಕೆ:- ಕರ್ನಾಟಕದ ಈಗಿನ ಚಿತ್ರದುರ್ಗ ಜಿಲ್ಲೆ ಮತ್ತು ಅದರ ಸುತ್ತ ಮುತ್ತಣ ಪ್ರದೇಶವನ್ನೊಳಗೊಂಡಿದ್ದ ನೊಳಂಬಳಿಗೆ ಸಾಸಿರ ಎಂಬ ಪ್ರಾಂತ್ಯದ ಅಧಿಪತಿಗಳಾಗಿ 8ನೆಯ ಶತಮಾನದಲ್ಲಿ ಆಳ್ವಿಕೆಯನ್ನಾರಂಭಿಸಿ, ಮುಂದಿನ ಎರಡು ಶತಮಾನಗಳಲ್ಲಿ ಪ್ರಾಬಲ್ಯಗಳಿಸಿ, ಈಗಿನ ಚಿತ್ರದುರ್ಗ, ತುಮಕೂರು, ಕೋಲಾರ, ಬೆಂಗಳೂರು, ಜಿಲ್ಲೆಗಳನ್ನೂ ನೆರೆಯ ಅನಂತಪುರ, ಚಿತ್ತೂರು, ಧರ್ಮಪುರಿ ಜಿಲ್ಲೆಗಳನ್ನೂ ಒಳಗೊಂಡಿದ್ದ ನೊಳಂಬವಾಡಿ 32000 ಪ್ರಾಂತ್ಯದ ಪ್ರಭುಗಳಾಗಿ 11ನೆಯ ಶತಮಾನದ ಮಧ್ಯದವರೆಗೆ ಆಳ್ವಿಕೆ ನಡೆಸಿದ ಸಾಮಂತ ರಾಜರ ಮನೆತನ.
ಶಾಸನಗಳು: ನೊಳಂಬರ ಶಾಸನಗಳು ಕರ್ನಾಟಕದ ಬಳ್ಳಾರಿ, ಚಿತ್ರದುರ್ಗ, ಕೋಲಾರ, ತುಮಕೂರು, ಬೆಂಗಳೂರು ಜಿಲ್ಲೆಗಳಲ್ಲೂ ಆಂಧ್ರಪ್ರದೇಶದ ಅನಂತಪುರ, ಚಿತ್ತೂರು ಜಿಲ್ಲೆಗಳಲ್ಲೂ ತಮಿಳು ನಾಡಿನ ಧರ್ಮಪುರಿ ಜಿಲ್ಲೆಯಲ್ಲೂ ದೊರೆತಿವೆ. ಇವರ ಶಾಸನಗಳು ಸು. 800-1100ರ ಕಾಲಕ್ಕೆ ಸೇರಿದವು. ಇವರ ಶಾಸನಗಳ ಭಾಷೆ ಮುಖ್ಯವಾಗಿ ಸಮಕಾಲೀನ ಕನ್ನಡ. ಸಂಸ್ಕೃತ ಮತ್ತು ಕನ್ನಡ ಬೆರೆಕೆ ಇರುವ ಶಾಸನಗಳೂ ವಿರಳವಲ್ಲ. ಇವುಗಳಲ್ಲಿ ಗದ್ಯ, ಪದ್ಯ, ಮತ್ತು ಇವೆರಡರ ಮಿಶ್ರಣ ಇರುತ್ತವೆ. ಎಲ್ಲ ಶಾಸನಗಳೂ ಸಮಕಾಲೀನ ಕನ್ನಡ-ತೆಲುಗು ಲಿಪಿಯಲ್ಲಿ ಬರೆಯಲ್ಪಟ್ಟಿವೆ. ತಾವು ಪಲ್ಲವ ವಂಶಜರೆಂದು ನೊಳಂಬರು ಹೇಳಿಕೊಂಡರೂ ಇವರ ಶಾಸನವಾವುದೂ ತಮಿಳಿನಲ್ಲಿರದಿರುವುದು ಗಮನಿಸಬೇಕಾದ ಸಂಗತಿ. ಇವರ ಶಾಸನಗಳನ್ನು ಕಲ್ಲಿನ ಚಪ್ಪಡಿಗಳ ಮೇಲೆ, ಕಂಬಗಳ ಮೇಲೆ ಮತ್ತು ದೇವಾಲಯದ ತಳಪಾದಿಯೇ ಮುಂತಾದ ಸ್ಥಳಗಳಲ್ಲಿ ಕೊರೆಯಲಾಗಿದೆ. ಕೂಟಶಾಸನವೆಂದು ಪರಿಗಣಿಸಲಾದ ತಾಮ್ರದ ಶಾಸನವೊಂದನ್ನು ಬಿಟ್ಟರೆ ಇವರ ಯಾವ ತಾಮ್ರ ಶಾಸನವೂ ಇದುವರೆಗೆ ದೊರೆತಿಲ್ಲ.
ನೊಳಂಬರ ಎಲ್ಲ ಶಾಸನಗಳನ್ನೂ ಕಲೆಹಾಕಿದರೆ ಸುಮಾರು 200 ಆಗಬಹುದು, ಇವುಗಳಲ್ಲಿ ಬಹುಸಂಖ್ಯೆಯವು ವೀರಗಲ್ಲುಗಳು, ಉಳಿದವು ಸಣ್ಣ ಸಣ್ಣ ದಾನದತ್ತಿಗಳನ್ನೋ, ಕೆರೆ ದೇವಾಲಯ ಇತ್ಯಾದಿಗಳನ್ನು ಕಟ್ಟಿಸಿದ ವಿವರಗಳನ್ನೋ ನೀಡುತ್ತವೆ. ಚಾರಿತ್ರಿಕ ವಿವರಗಳನ್ನು ಹೆಚ್ಚಾಗಿ ಕೊಡುವ ಶಾಸನಗಳು ಬೆರಳೆಣಿಕೆಗೆ ಸಿಗುವಷ್ಟು ಮಾತ್ರ. ಇವರ ಶಾಸನಗಳಲ್ಲಿ ಕಾಲವನ್ನು ತಿಳಿಸಲು ಶಕವರ್ಷ ಮತ್ತು ಆಯಾ ರಾಜರುಗಳ ಆಳ್ವಿಕೆಯ ವರ್ಷ ಎರಡನ್ನೂ ಉಪಯೋಗಿಸಲಾಗಿದೆ.
ನೊಳಂಬರ ಶಾಸನಗಳಲ್ಲೆಲ್ಲ ಅತ್ಯಂತ ಮುಖ್ಯವಾದದ್ದೆಂದರೆ ಹೇಮಾವತಿಯ ಸ್ತಂಭಶಾಸನ. ಇದು ನೊಳಂಬರ ಹುಟ್ಟು ಮತ್ತು ಅವರ ವಂಶವೃಕ್ಷದ ಮೊದಲರ್ಧ ಭಾಗವನ್ನು ನಿರೂಪಿಸುತ್ತದೆ. ಇವರ ವಂಶವೃಕ್ಷವನ್ನು ತಿಳಿಯಲು ಅನುಕೂಲವಾದ ಇತರ ಮುಖ್ಯ ಶಾಸನಗಳೆಂದರೆ ಕಂಬದೂರು, ಕರ್ಷನಪಲ್ಲಿ, ನೆಲಪಲ್ಲಿ, ಆವನಿ, ಬರಗೂರು ಮತ್ತು ಧರ್ಮಪುರಿಗಳಲ್ಲಿರುವ ಶಾಸನಗಳು. ನೊಳಂಬರ ಶಾಸನಗಳು ಅವರ ಕಾಲದ ರಾಜಕೀಯ, ಚಾರಿತ್ರಿಕ ಮತ್ತು
ಸಾಮಾಜಿಕ ಅರಿವು ಮೂಡಿಸುವುದಕ್ಕೆ ಸಹಕಾರಿಯಾಗಿರುವುವಲ್ಲದೆ ಇವರ ವೀರಗಲ್ಲುಗಳು ನೊಳಂಬರ ಶಿಲ್ಪಕಲಾಚಾತುರ್ಯಕ್ಕೆ ಉತ್ತಮ ನಿದರ್ಶನಗಳಾಗಿಯೂ ಇವೆ. ಇದಕ್ಕೆ ಉದಾಹರಣೆಗಳು ಬೆಂಗಳೂರು ವಸ್ತುಸಂಗ್ರಹಾಲಯದಲ್ಲಿರುವ ಬೇಗೂರಿನ ವೀರಗಲ್ಲು ಮತ್ತು ಹೇಮಾವತಿಯ ವೀರಗಲ್ಲು. ಮೊದಲನೆಯ ತುಂಬೇಪಾಡಿಯಲ್ಲಿ ಅಯ್ಯಪ ದೇವನಿಗೂ ಪೂರ್ವಚಾಳುಕ್ಯವೀರ ಮಹೇಂದ್ರನಿಗೂ ನಡೆದ ಘೋರ ಕದನದ ಇಡೀ ದೃಶ್ಯವನ್ನೇ ಚಿತ್ರಿಸುತ್ತದೆ. ಗಜ, ಅಶ್ವ, ಪದಾತಿ ದಳಗಳ ಹಣಾಹಣಿ ಯುದ್ದದ ದೃಶ್ಯ, ಪೆಟ್ಟುತಿಂದು ಬಿದ್ದಿರುವ ಸೈನಿಕರು, ವಿವಿಧ ಆಯುಧಗಳು, ಇತ್ಯಾದಿ ಸಕಲ ಸಮರ ವಿವರಗಳನ್ನು ಕೊಡುವ ಈ ವೀರಗಲ್ಲು ಇಡೀ ಯುದ್ಧವೇ ಮತ್ತೊಮ್ಮೆ ಕಣ್ಣುಂದೆ ನಡೆಯುತ್ತಿದೆಯೆಂಬ ಭಾವನೆಯನ್ನು ತರುತ್ತದೆ. ಈಗ ಮದ್ರಾಸ್ ವಸ್ತು ಸಂಗ್ರಹಾಲಯದಲ್ಲಿರುವ ಹೇಮಾವತಿಯ ವೀರಗಲ್ಲು ಗಜಯುದ್ಧಕ್ಕೆ ಸಾಕ್ಷಿ. ಎದುರು ಬದುರಾಗಿ ನುಗ್ಗುತ್ತಿರುವ ಆನೆಗಳು. ಅವುಗಳ ಮೇಲೆ ಅಂಬಾರಿಗಳಲ್ಲಿ ಕುಳಿತಿರುವ ವೀರರು, ಆನೆಗಳ ಬಗೆಬಗೆಯ ವಸ್ತ್ರಾಲಂಕರಣಗಳು ಎಲ್ಲವನ್ನೂ ಬಹಳ ನವಿರಾಗಿ ಬಿಡಿಸಲಾಗಿದೆ. ಕೆಳಭಾಗದಲ್ಲಿ ಬಾಣಗಳು ನಾಟಿಕೊಂಡು ಕೆಳಗೆ ಬಿದ್ದಿರುವ ವೀರರ ದೇಹಗಳು ಚಿತ್ರಿತವಾಗಿವೆ. ಕೇವಲ ಒಂದು ಸಣ್ಣ ಚೌಕಟ್ಟಿನಲ್ಲಿ ಇಡೀ ಘೋರ ಯುದ್ಧದ ಚಿತ್ರವನ್ನು ಶಿಲ್ಪಿ ಬಿಜ್ಜಯ್ಯ ನೀಡಿದ್ದಾನೆ.
ನೊಳಂಬರು ತಲಕಾಡಿನ ಗಂಗರು, ರಾಷ್ಟ್ರಕೂಟರು ಮತ್ತು ಕಲ್ಯಾಣದ ಚಾಳುಕ್ಯರಿಗೆ ಸ್ವಲ್ಪಕಾಲ ಅಧೀನರಾಗಿದ್ದರು. ಕದಂಬ, ಗಂಗ ಮತ್ತು ಕಲ್ಯಾಣ ಚಾಳುಕ್ಯರೊಂದಿಗೆ ಇವರು ವಿವಾಹ ಸಂಬಂಧ ಬೆಳೆಸಿದ್ದರು. ಬಾಣರು, ವೈದುಂಬರು, ಚೋಳರು ಮುಂತಾದವರಿಗೂ ಇವರಿಗೂ ರಾಜಕೀಯ ಸಂಬಂಧವಿತ್ತು. ನದಿಯ ಲಾಂಛನ ಹೊಂದಿದ್ದ ಇವರ ರಾಜಧಾನಿ ಪೆಂಜೀರು ಅಥವಾ ಹೆಂಜೇರು. ಆಂಧ್ರ ಪದೇಶದ ಅನಂತಪುರ ಜಿಲ್ಲೆಯ ಹೇಮಾವತಿಯೇ ಇದೆಂದು ಗುರುತಿಸಲಾಗಿದೆ.
ಇತಿಹಾಸ:-
ಮೂಲ:- ನೊಳಂಬರು ತಮ್ಮನ್ನು ಪಲ್ಲವ ಮೂಲದವರು ಎಂದು ಶಾಸನಗಳಲ್ಲಿ ಗುರುತಿಸಿಕೊಂಡಿದ್ದಾರೆ. ಪಲ್ಲವರು ಮೂಲತಃ ಕರ್ಣಾಟಾಂದ್ರ ಸೀಮೆಯವರು , ಶಾತವಾಹನರ ಸಾಮಂತರಾಗಿ ವೆಂಗಿಮಂಡಳದ ಬಾಗಗಳಲ್ಲಿ ಅಧಿಪತ್ಯ ಹೊಂದಿದ್ದವರು. ಯಾವಾಗ ಪಲ್ಲವರು ಚಾಳುಕ್ಯರಿಂದ ಸೋಲುಂಡು ತಮಿಳುನಾಡಿನ ದಕ್ಷಿಣಕ್ಕೆ ತಳ್ಳಲ್ಪಟ್ಟರೋ ಆಗ ವೆಂಗಿಮಂಡಳ ಹಾಗು ಇಂದಿನ ಹೈದ್ರಾಬಾದ್ ಕರ್ಣಾಟಕದ ಭೂಬಾಗಗಳಲ್ಲಿ ಉಳಿದುಕೊಂಡ ಕೆಲ ಸಾಮಂತರು ಕಾಳಾಮುಖ ಯತಿಗಳ ಆಶೀರ್ವಾದದಿಂದ ಪುನಃ ರಾಜ್ಯಕಟ್ಟುವ ಕಾರ್ಯವನ್ನು ಮುಂದುವರಿಸಿದರು. ಆ ಪಲ್ಲವ ಮೂಲದವರೇ ನೊಳಂಬರು. ನೊಳಂಬ ಪದಕ್ಕೆ ಶ್ರೇಷ್ಠ ,ಅಗ್ರಮಾನ್ಯ , ಮುನ್ನುಗ್ಗುವ ವೀರ ಎಂದೆಲ್ಲಾ ಅರ್ಥಗಳಿವೆ. ನೊಳಂಬರು ಮೂಲತಃ ಕುಱುಂಬರು ಅಂದರೆ ಬೆಟ್ಟಗುಡ್ಡದಲ್ಲಿ ಪಶುಪಾಲನೆ ಮಾಡಿಕೊಂಡಿದ್ದ ಪಶುಪಾಲಕರು. ನಂತರ ಇವರು ಬೆಟ್ಟಗಳ ತಪ್ಪಲಿನಲ್ಲಿ ವ್ಯವಸಾಯ ಆರಂಬಿಸಿದ ಕುಡು ಒಕ್ಕಲಿಗರು. ನೊಳಂಬರ ಶಿವಯೋಗಿ ಸಿದ್ಧರಾಮೇಶ್ವರರು ಸಹ ಕುಡುಒಕ್ಕಲಿಗ ಮುದ್ದೇಗೌಡನ ಮನೆತನದವರು. ಹೀಗೆ ಕುಡುಒಕ್ಕಲಿಗರಾದ ಕುಱುಂಬ ಗೌಡರೇ ನೊಳಂಬರು. ಪಲ್ಲವ ಸಾಮ್ರಾಜ್ಯವನ್ನು ಕಟ್ಟಿದವರು ಕುಱುಂಬ ಗೌಡರು ಎಂದು ಹಲವೆಡೆ ಉಲ್ಲೇಖಗಳಿವೆ.
ಈಶ್ವರ ವಂಶಜನಾದ ಕಂಚೀಪತಿ ಎಂದು ಶಾಸನವೊಂದರಲ್ಲಿ ವರ್ಣಿತನಾಗಿರುವ ತ್ರಿಣಯನ ಪಲ್ಲವ ಎಂಬುವನು ನೊಳಂಬರ ಮೂಲಪುರುಷ. ಇವನ ವಂಶದಲ್ಲಿ ಹುಟ್ಟಿದವನು ಮಂಗಳ ನೊಳಂಬಾಧಿ ರಾಜ (ಸು. 730-ಸು. 775). ಹೇಮಾವತಿ ಶಾಸನದ ಪ್ರಕಾರ ಇವನು ಕಿರಾತ ನೃಪತಿಯನ್ನು ಜಯಿಸಿದ; ಕರ್ಣಾಟರಿಂದ ಸ್ತುತ್ಯನಾದವನೀತ. ಇವನ ಅನಂತರ ಪಟ್ಟಕ್ಕೆ ಬಂದವನು ಇವನ ಮಗ ಸಿಂಹಪೋತ (ಸು. 775-ಸು. 805). ಕಲಿ ನೊಳಂಬಾಧಿ ರಾಜನೆನಿಸಿಕೊಂಡಿದ್ದ ಈತ ಶ್ರೀಪುರುಷನ ಮಗನೂ ಶಿವಮಾರನ ಸಹೋದರನೂ ಆದ ದುಗ್ಗಮಾರನ ಮೇಲೆ ದಂಡೆತ್ತಿಹೋದ. ಶ್ರೀಪುರುಷನ ಅನಂತರ ಗಂಗ ಸಿಂಹಾಸನಕ್ಕಾಗಿ ನಡೆದ ಸ್ಪರ್ಧೆಯಲ್ಲಿ ಇವನು ಶಿವಮಾರನ ಪರವಾಗಿ ದುಗ್ಗಮಾರನ ಮೇಲೆ ದಂಡೆತ್ತಿಹೋಗಿರಬಹುದೆಂದು ಊಹಿಸಬಹುದು. ಎರಡನೆಯ ಶಿವಮಾರನನ್ನು ರಾಷ್ಟ್ರಕೂಟ ಧ್ರುವ ಸೋಲಿಸಿದಾಗ ನೊಳಂಬರು ಗಂಗರ ಆಶ್ರಯವನ್ನು ಬಿಟ್ಟು ರಾಷ್ಟ್ರಕೂಟರ ಸಾಮಂತರಾದರು. ಸಿಂಹಪೋತನ ಮಗ ಚಾರುಪೊನ್ನೇರ ಪರಮೇಶ್ವರ ಪಲ್ಲವಾಧಿರಾಜ (ಸು. 805-ಸು. 830). ಇವನು ರಾಷ್ಟ್ರಕೂಟ 3ನೆಯ ಗೋವಿಂದನ ಸಾಮಂತನಾಗಿದ್ದ. ನೊಳಂಬಳಿಗೆ ಸಾಸಿರ ಮುಂತಾದ ಪ್ರಾಂತ್ಯಗಳು ಇವನ ಅಧೀನದಲ್ಲಿದ್ದುವು.
ಸುಮಾರು 820ರಲ್ಲಿ ನೊಳಂಬರು ಪಶ್ಚಿಮದ ಗಂಗರ ಸಾಮಂತರಾದರೆಂದು ಕಾಣುತ್ತದೆ. ಚಾರುಪೊನ್ನೇರನ ಮಗ ಪೊಳಲ್ಚೋರನಿಗೆ ಗಂಗರಾಜ 1ನೆಯ ರಾಚಮಲ್ಲನ ಮಗಳು, ನೀತಿಮಾರ್ಗನ ತಂಗಿ, ಚಾಯಬ್ಬೆಯನ್ನು ಕೊಟ್ಟು ವಿವಾಹವಾಯಿತು. 1ನೆಯ ಪೊಳಲ್ಚೋರ ಕೋಲಾರ, ಬೆಂಗಳೂರು ಮತ್ತು ಚಿತ್ತೂರು ಜಿಲ್ಲೆಯ ಭಾಗಗಳನ್ನೊಳಗೊಂಡ ಗಂಗರು ಸಾಸಿರ ಪ್ರಾಂತ್ಯವನ್ನು ಸು. 830-ಸು. 875ರಲ್ಲಿ ಗಂಗನೀತಿಮಾರ್ಗನ ಅಧೀನದಲ್ಲಿ ಆಳುತ್ತಿದ್ದನೆಂಬುದಾಗಿ ಶಾಸನವೊಂದರಿಂದ ತಿಳಿಯುತ್ತದೆ. 810ರಲ್ಲಿ ಮಹಾಬಲಿ ಬಾಣರ ವಶದಲ್ಲಿದ್ದ ಈ ಪ್ರಾಂತ್ಯ 1ನೆಯ ರಾಚಮಲ್ಲನ ಕಾಲದಲ್ಲಿನೊಳಂಬರಿಗೆ ಸೇರಿತು. ಪೊಳೆಲ್ಚೋರನ ಕಾಲದಲ್ಲಿ ನೊಳಂಬರ ರಾಜ್ಯ ನೊಳಂಬಳಿಗೆ ಸಾಸಿರ, ಗಂಗರು ಸಾಸಿರ ಇವುಗಳೇ ಅಲ್ಲದೆ ಇನ್ನೂ ಹಲವು ಪ್ರದೇಶಗಳಿಗೆ ವಿಸ್ತರಿಸಿತು. 1ನೆಯ ನೀತಿಮಾರ್ಗನ ಹಿಂದೂಪುರ ಶಾಸನದಲ್ಲಿ (853) ಉಲ್ಲೇಖಿತನಾಗಿರುವ ನೊಳಂಬ ರಾಜ ಪೊಳೆಲ್ಚೋರನೇ ಇರಬಹುದೆಂದು ಊಹಿಸಲಾಗಿದೆ. ಈ ನೊಳಂಬ ರಾಜನ ರಾಜ್ಯ ಕಂಚಿಯವರೆಗೂ ವಿಸ್ತರಿಸಿತ್ತೆಂದು ಆ ಶಾಸನದಲ್ಲಿ ಹೇಳಿದೆ. ನಂದಿಯ ಭೋಗನಂದೀಶ್ವರ ದೇವಾಲಯದ ಗೋಪುರದ ಜೀರ್ಣೋದ್ಧಾರವಾದದ್ದೂ ಅನಂತಪುರ ಜಿಲ್ಲೆಯ ಕಂಬದೂರಿನ ಬೆಳ್ದುಗೊಂಡೆಯ ಕೆರೆಯ ನಿರ್ಮಾಣವಾದದ್ದೂ ಈತನ ಕಾಲದಲ್ಲಿ.
ಪೊಳಲ್ಚೋರನ ಮಗ ಮಹೇಂದ್ರ (ಸು. 875-ಸು, 897). ನೊಳಂಬಾಧಿರಾಜ ತ್ರಿಭುವನವೀರ ಎನಿಸಿಕೊಂಡ ಈತ ಗಂಗವಂಶದ ಜಾಯಬ್ಬೆಯಲ್ಲಿ ಜನಿಸಿದವ. ಇವನು 2ನೆಯ ರಾಜಮಲ್ಲನ ಅಧೀನನಾಗಿ ಗಂಗರು ಸಾಸಿರದ ಆಳ್ವಿಕೆಯನ್ನಾರಂಭಿಸಿದ. ಇವನ ಹೆಂಡತಿ ಗಾಮಬ್ಬೆ ಗಂಗವಂಶದವಳು. ಗಂಗರುಸಾಸಿರ ಪ್ರಾಂತ್ಯಕ್ಕಾಗಿ ಬಾಣರು ಇವನ ಕಾಲದಲ್ಲೂ ಹೋರಾಟ ಮುಂದುವರಿಸಿದರು. ಗಂಗ ರಾಚಮಲ್ಲ ಮತ್ತು ತೆಲುಗು ಚೋಳದೊರೆ ಮಹೇಂದ್ರ ವಿಕ್ರಮರು ಇವನ ನೆರವಿಗೆ ನಿಂತರು. ಇದರಿಂದ ಇವನು ಬಾಣ ದೊರೆ ವಿದ್ಯಾಧರನನ್ನು ಹಲವು ಕಡೆ ಸೋಲಿಸಿದ;
ಮಹಾಬಲಿಕುಲವಿಧ್ವಂಸಕನೆಂಬ ಬಿರುದು ತಳೆದ. ಇವನ ಆಳ್ವಿಕೆ ಪುಲಿನಾಡಿಗೆ ವಿಸ್ತರಿಸಿತು. ಕೊನೆಗೆ ಇವನು ತನ್ನ ಸಾರ್ವಭೌಮರಾಗಿದ್ದ ಗಂಗರೊಂದಿಗೂ ಯುದ್ಧಕ್ಕೆ ಎಳಸಿದ. ರಾಜ್ಯಾಕಾಂಕ್ಷೆ ಇವನಿಗೆ ಪ್ರಬಲವಾಗಿತ್ತು. ಗಂಗರ ರಾಜ್ಯದ ಹಲವು ಭಾಗಗಳನ್ನು ಇವನು ವಶಪಡಿಸಿಕೊಂಡಿರಬೇಕೆಂದು ಕಾಣುತ್ತದೆ. ತಲಕಾಡಿಗೆ ಸುಮಾರು 40 ಕಿಮೀ. ದೂರದ ತಾಯಲೂರಿನಲ್ಲಿರುವ ಶಾಸನದ ಮಾಹಿತಿಯಿಂದ ಹೀಗೆಂದು ಊಹಿಸಬಹುದು. ಇನ್ನೊಂದು ಶಾಸನದಲ್ಲಿ ಇವನನ್ನು ಗಂಗಮಂಡಲ 96000ದ ಅಧಿಪತಿಯೆಂದು ಹೇಳಲಾಗಿದೆ. ಆದರೆ ಗಂಗ ರಾಜಮಲ್ಲನ ಮಗ ಎರೆಯಪ್ಪ ಇವನನ್ನು ಸೋಲಿಸಿದ. ಎರೆಯಪ್ಪ ಇವನನ್ನು ಯುದ್ಧದಲ್ಲಿ ಕೊಂದು ಮಹೇಂದ್ರಾಂತಕನೆಂಬ ಬಿರುದು ತಳೆದನೆಂದು ಶಿವಮೊಗ್ಗೆ ಬಳಿಯ ಹುಂಚದ ಶಾಸನ ತಿಳಿಸುತ್ತದೆ. ಮಹೇಂದ್ರನ ಕಾಲದಲ್ಲಿ ನೊಳಂಬರ ರಾಜ್ಯದ ವಿಸ್ತಾರ ಗರಿಷ್ಠ ಸ್ಥಿತಿ ಮುಟ್ಟಿತ್ತು.
ಅನಂತರ ಇವನ ಮಗ ಅಯ್ಯಪ್ಪದೇವ (ಸು. 897-ಸು. 934)ರಾಜ್ಯವಾಳಿದ. ಇವನು ಗಾಮಬ್ಬೆಯಲ್ಲಿ ಜನಿಸಿದವನು. ನೊಳಿಪಯ್ಯ ಎಂಬ ಹೆಸರೂ ಇವನದೇ ಎಂದು ಹೇಳಲಾಗಿದೆ. ಇವನು 2ನೆಯ ರಾಜಮಲ್ಲನೊಂದಿಗೆ ಯುದ್ಧಮಾಡಿದ. ಕಲಿಕಟ್ಟೆಯಲ್ಲಿ ನಡೆದ ಕದನದ ಅನಂತರ ಇವನು ಬಹುಶಃ ಗಂಗರ ಸಾಮಂತನಾಗಿ ನೊಳಂಬವಾಡಿ 3200ದ ಆಳ್ವಿಕೆ ನಡೆಸಿದ. ಇವನು ಪೂರ್ವ ಚಾಳುಕ್ಯರ ಅಂದರೆ ವೆಂಗಿಯ ಚಾಳುಕ್ಯರ 1ನೆಯ ಅಮ್ಮಣರಾಯನನ್ನು ಸೋಲಿಸಿದನೆಂದೂ ಮತ್ತು
931ರಲ್ಲಿ ರಾಷ್ಟ್ರಕೂಟ 4ನೆಯ ಗೋವಿಂದನ ಅಧೀನದಲ್ಲಿ ಮಾಸವಾಡಿ ಮತ್ತು ಕೋಗಳಿಗಳನ್ನಾಳುತ್ತಿದ್ದನೆಂದೂ ಶಾಸನಗಳು ತಿಳಿಸುತ್ತವೆ. ಎರೆಯಪ್ಪನ ಪರವಾಗಿ ಪೂರ್ವ ಚಾಳುಕ್ಯ ವೀರ ಮಹೇಂದ್ರನೊಂದಿಗೆ (2ನೆಯ ಭೀಮ) ನಡೆದ ಹೋರಾಟದಲ್ಲಿ ಅಯ್ಯಪ್ಪದೇವ ಮಡಿದ.
ಇವನ ಅನಂತರ ಮಗ ಅಣ್ಣಿಗ (ಸು. 932-940)ಪಟ್ಟಕ್ಕೆ ಬಂದ. ಅಣ್ಣಿಗನನ್ನು ಬೀರನೊಳಂಬ, ಅಣ್ಣಯ್ಯ ಎಂದೂ ಕರೆಯಲಾಗಿದೆ. ಗಂಗವಂಶದ ಪೊಲ್ಲಬ್ಬರಸಿ ಇವನ ತಾಯಿ. ಚಾಲುಕ್ಯ ಅತ್ತಿಯಬ್ಬರಸಿಯೊಂದಿಗೆ ಇವನ ವಿವಾಹವಾಗಿತ್ತು. ಇವನ ಕಾಲದಲ್ಲಿ ನೊಳಂಬರಿಗೂ ಪಶ್ಚಿಮಗಂಗರಿಗೂ ನಡುವೆ ವಿರಸ ಉಂಟಾಯಿತು. 3ನೆಯ ರಾಜಮಲ್ಲನ ವಿರುದ್ಧ ಕೊತ್ತಮಂಗಲ ಕದನದಲ್ಲಿ ಇವನು ಪರಾಜಯ ಹೊಂದಿದ. ಅನಂತರ ರಾಷ್ಟ್ರಕೂಟ 3ನೆಯ ಕೃಷ್ಣ ಗಂಗವಾಡಿಯ ಮೇಲೆ ನಡೆಸಿದ ದಂಡಯಾತ್ರೆಯಲ್ಲಿ ಅಣ್ಣಿಗನೂ ಸೋತ.
ಇವನ ನಂತರ ಆಳ್ವಿಕೆ ನಡೆಸಿದವನು ಅಣ್ಣಿಗನ ತಮ್ಮ ಇರಿವನೊಳಂಬ ದಿಲೀಪ (ಸು. 940-ಸು. 968). ಇವನು ರಾಷ್ಟ್ರಕೂಟರ ಸಾಮಂತನಾಗಿದ್ದ. ನೊಳಿಪಯ್ಯ ಎಂಬುದು ಇವನ ಇನ್ನೊಂದು ಹೆಸರು. ಇವನಿಗೆ ಹಲವು ಬಿರುದುಗಳಿದ್ದವು.
ಇವನ ಅನಂತರ ಇವನ ಹಿರಿಯ ಮಗ ಛಲದಂಕಕಾರ ನನ್ನಿನೊಳಂಬ ಆಳಿದ (ಸು. 968-ಸು. 970). ಇವನ ಮಗ ನನ್ನಿ 2ನೆಯ ಪೊಳಲ್ಚೋರ. ಇವನು ಸ್ವತಂತ್ರವಾಗಿ ರಾಜ್ಯವಾಳಿರಲಾರನೆಂದು ಕಾಣುತ್ತದೆ. ಇವನು ಅಕಾಲಮೃತ್ಯುವಿಗೆ ತುತ್ತಾಗಿದ್ದಿರಬಹುದು. 2ನೆಯ ಮಾರಸಿಂಹನೊಂದಿಗೆ ನಡೆದ ಯುದ್ದದಲ್ಲಿ ಪೊಳಲ್ಚೋರ ಮಡಿದಿರಬೇಕು. ಈತನ ಪತ್ನಿ ಕದಂಬ ವಂಶದ ದೀವಾಂಬಿಕೆ. ಈಕೆ ತನ್ನ ಗಂಡನ ಹೆಸರಿನಲ್ಲಿ ಪೊಳಲ್ಚೋರಮಂಗಲ ಎಂಬ ಆಗ್ರಹಾರ ಕಟ್ಟಿಸಿದಳೆಂದು ಕಂಬದೂರಿನ ಶಾಸನ ತಿಳಿಸುತ್ತದೆ.
ಇವನ ತರುವಾಯ 2ನೆಯ ಮಹೇಂದ್ರ (ಸು. 977-ಸು. 981) ಆಳಿದ. ಗಂಗರಿಂದ ಸೋತ ನೊಳಂಬರು ಬಹುಶಃ ಕಲ್ಯಾಣದ ಚಾಳುಕ್ಯ 2ನೆಯ ತೈಲವನ ಸ್ನೇಹ ಬೆಳೆಸಿದ್ದಿರಬಹುದು. ಚಾಳುಕ್ಯರ ಬೆಂಬಲದಿಂದ ನೊಳಂಬರು ನೊಳಂಬವಾಡಿಯನ್ನೂ ಇತರ ಕೆಲವು ಪ್ರದೇಶಗಳನ್ನೂ ಪುನಃ ಪಡೆದುಕೊಂಡಿರಬೇಕು.
ಮಹೇಂದ್ರನ ಅನಂತರ ಅವನ ತಮ್ಮ ಇರಿವನೊಳಂಬ ಘಟೆಯಂಕಕಾರ (ಸು. 1010-ಸು. 1024) ಆಳಿದ. ಇವನು 3ನೆಯ ತೈಲಪನ ಮೊಮ್ಮಗಳೂ ವಿಕ್ರಮಾದಿತ್ಯನ ತಂಗಿಯೂ ಆದ ಮಹಾದೇವಿಯನ್ನು ಮದುವೆಯಾಗಿದ್ದ. ಚಾಳುಕ್ಯರೊಂದಿಗಿನ ರಾಜಕೀಯ ಹಾಗೂ ವಿವಾಹ ಸಂಬಂಧಗಳ ಮೂಲಕ ನೊಳಂಬರು ಅವರ
ಮಾಂಡಲಿಕರಾಗಿ ರಾಜ್ಯವಾಳಿದರು. ಆ ಕಾಲಕ್ಕೆ ಈಗಿನ ಬಳ್ಳಾರಿ ಜಿಲ್ಲೆಯ ತುಂಗಭದ್ರಾ ತೀರದ ಕಂಪಿಲಿ ಇವರ ರಾಜಧಾನಿಯಾಯಿತು. ಇವರು ತಮ್ಮ ಹೆಸರಿನ ಜೊತೆಗೆ ಆಯಾ ಕಾಲದ ಚಾಳುಕ್ಯ ದೊರೆಗಳ ಬಿರುದುಗಳನ್ನು ಸಹಾ
ಸೇರಿಸಿಕೊಳ್ಳತೊಡಗಿದರು.
ಇರಿವನೊಳಂಬನ ಅನಂತರ ಇವನ ಮಗ ಜಗದೇಕಮಲ್ಲ ನೊಳಂಬ ಪಲ್ಲವ ಪೆಮ್ಮಾನಡಿ ಉದಯಾದಿತ್ಯ ದೇವ (ಸು. 1024-ಸು. 1037) ಆಳಿದ. ಜಗದೇಕಮಲ್ಲನೊಳಂಬ ಉದಯಾದಿತ್ಯನ ಅನಂತರ ಅವನ ಮಗ ಜಗದೇಕಮಲ್ಲ ಇಮ್ಮಡಿನೊಳಂಬ ಆಳಿದ (ಸು. 1037-1044). ಇವನ ತರುವಾಯ ಇವನ ತಮ್ಮ ತ್ರೈಲೋಕ್ಯಮಲ್ಲ ನನ್ನಿನೊಳಂಬ ಆಳಿದ
(1044-1054). ಈತ ತ್ರೈಲೋಕ್ಯಮಲ್ಲ ಚಾಳುಕ್ಯ ಸೋಮೇಶ್ವರನ ಸಾಮಂತನಾಗಿದ್ದ. ಇವನು ತನ್ನ ಸ್ವಾಮಿಯ ಪರವಾಗಿ ಚೋಳರ ವಿರುದ್ಧ ಹೋರಾಡಿ 1054ರಲ್ಲಿ ಮಡಿದ. ಹೀಗೆ ಮೂಲ ನೊಳಂಬ ರಾಜವಂಶ ತ್ರೈಲೋಕ್ಯಮಲ್ಲ ನನ್ನಿನೊಳಂಬನೊಂದಿಗೆ ಮುಕ್ತಾಯಗೊಂಡಿತು.
Its good to go through your blog. very informative and educative. do you have information on Punnata? what was its area, who were its rulers etc?
ReplyDelete