ನೊಳಂಬರ ವಾಸ್ತು-ಶಿಲ್ಪ
ಕರ್ನಾಟಕದ ವಾಸ್ತುಶಿಲ್ಪ ಪರಂಪರೆಯಲ್ಲಿ ನೊಳಂಬರ ಕಾಲ ಒಂದು ಮುಖ್ಯವಾದ ಘಟ್ಟ. 8ನೆಯ ಶತಮಾನದಿಂದ 11ನೆಯ ಶತಮಾನದವರೆಗೆ ಕರ್ನಾಟಕದ ಆಗ್ನೇಯ ಭಾಗದಲ್ಲಿ ಆಳಿದ ನೊಳಂಬರು ವಾಸ್ತುಶಿಲ್ಪದ ಬೆಳವಣಿಗೆಗೆ ಬಹಳ ಮಟ್ಟಿಗೆ ನೆರವಾದರು. ಬಾದಾಮಿ ಚಾಳುಕ್ಯರು ಅನಂತರ ಈ ಭಾಗದಲ್ಲಿ ಕಲೆಯನ್ನು ಊರ್ಜಿತಗೊಳಿಸಿದ ಕೀರ್ತಿ ಇವರಿಗೆ ಸಲ್ಲಬೇಕು. ಇವರ ಕಲೆಯ ವಿಶೇಷ ಗುಣವೆಂದರೆ ಚಾಲುಕ್ಯ ಮತ್ತು ಪಲ್ಲವ ಶೈಲಿಗಳ ಉತ್ತಮ ಸಂಯೋಜನೆ. ಮೂಲತಃ ಪಲ್ಲವರಾದ ನೊಳಂಬರು ಈ ಎರಡೂ ಶೈಲಿಗಳ ಉತ್ತಮ ಅಂಶಗಳನ್ನು ತಮ್ಮದೇ ಆದ ರೀತಿಯಲ್ಲಿ ಸಂಯೋಜಿಸಿ ಹೊಸ ಹೊಸ ರೂಪಗಳನ್ನು ನಿರೂಪಿಸಿ ತಮ್ಮ ಶೈಲಿಗೆ ವಿಶಿಷ್ಟ ಸ್ಥಾನವನ್ನು ಗಳಿಸಿಕೊಂಡರು.
ಚಾಳುಕ್ಯರ ಅನಂತರ ಆಳಿದ ನೊಳಂಬರು ತಮ್ಮ ಶಿಲ್ಪಗಳಿಗೆ ಹಿಂದಿನ ಶಿಲ್ಪಗಳಿಗಿಂತ ಹೆಚ್ಚಿನ ಅಲಂಕರಣ ನೀಡಿದರು. ಆದರೆ ಇವರ ಶಿಲ್ಪಗಳು ಇವರ ಅನಂತರ ಆಳಿದ ಹೊಯ್ಸಳ ಅಥವಾ ಕಲ್ಯಾಣಿ ಚಾಳುಕ್ಯರ ಶಿಲ್ಪಗಳಷ್ಟು ಅಲಂಕೃತವಲ್ಲ. ಆದರೂ ಇವು ನೋಡಲು ಬಹಳ ರಮಣೀಯ. ಇವುಗಳ ರೂಪಣೆಯಲ್ಲಿ ಲಾಲಿತ್ಯವೂ ರಮ್ಯತೆಯೂ ಎದ್ದು ಕಾಣುತ್ತವೆ. ಇವರ ಶಿಲ್ಪಗಳ ಮತ್ತೊಂದು ವೈಶಿಷ್ಟ್ಯವೆಂದರೆ ಮನಮೋಹಕ ನಿಲುವು. ಮುಗ್ಧಸೌಂದರ್ಯ ಹಾಗೂ ಆಕರ್ಷಕ ಅಂಗಸೌಷ್ಠವ. ಇವರ ಶಿಲ್ಪಶೈಲಿಯ ಮೇರುಕೃತಿಯೆಂದರೆ, ಈಗ ಮದ್ರಾಸ್ ವಸ್ತುಸಂಗ್ರಹಾಲಯದಲ್ಲಿರುವ ಉಮಾಮಹೇಶ್ವರ ವಿಗ್ರಹ. ಸುಖಾಸೀನನಾಗಿ ಕುಳಿತಿರುವ ನಾಲ್ಕು ಕೈಗಳುಳ್ಳ ಶಿವ, ಆತನ ಪಕ್ಕದಲ್ಲಿ ಆಸೀನಳಾದ ಉಮಾ ಇವರ ಮೂರ್ತಿಗಳು ಮೇಲೆ ಹೇಳಿರುವ ಗುಣಗಳ ಪ್ರತೀಕವಾಗಿವೆ. ಇದನ್ನು ಸರಿಗಟ್ಟುವಂಥ ಶಿಲ್ಪಗಳು ಕರ್ನಾಟಕದಲ್ಲಿ ಬಹು ವಿರಳ, ಇದೇ ವಸ್ತುಸಂಗ್ರಹಾಲಯದಲ್ಲಿರುವ ದಕ್ಷಿಣಾಮೂರ್ತಿ, ಸೂರ್ಯ, ಪೃಷ್ಟಸ್ವಸ್ತಿಕ ಭಂಗಿಯಲ್ಲಿ ನರ್ತಿಸುತ್ತಿರುವ ನಟರಾಜ, ಕಾಳಿ ಮುಂತಾದ ಅನೇಕ ಶಿಲ್ಪಗಳು ಇವರ ಕಲಾಪ್ರೌಢಿಮೆಯ ಉದಾಹರಣೆಗಳು.
ಮೇಲೆ ಹೇಳಿದ ಶಿಲ್ಪಗಳಲ್ಲದೆ ಇವರ ರಾಜಧಾನಿಯಾಗಿದ್ದ ಹೇಮಾವತಿಯಲ್ಲಿರುವ ಮಾತೃಕೆಯರ ಬಿಡಿ ಹಾಗೂ ಸಾಲುಶಿಲ್ಪಗಳು, ಸೂರ್ಯ, ವಿಷ್ಣು, ಶಿವ, ಕಾಳಿ, ಆಲಿಂಗನ ಚಂದ್ರಶೇಖರಮೂರ್ತಿ ಇತ್ಯಾದಿ ವಿಗ್ರಹಗಳು ನೊಳಂಬರ ಕಾಲದ ಕಲಾಕೌಶಲವನ್ನು ಪ್ರದರ್ಶಿಸುತ್ತವೆ.
ನೊಳಂಬರ ಶಿಲ್ಪಿಗಳು ಜಾಲಂಧ್ರಗಳ ನಿರ್ಮಾಣದಲ್ಲಿ ಅದ್ವಿತೀಯರೆನಿಸಿದ್ದರು. ಸುಂದರವಾಗಿ ಬಳುಕುವ ಬಳ್ಳಿಗಳ ಚಿತ್ರಣವುಳ್ಳ ಜಾಲಂಧ್ರಗಳು ಮತ್ತು ದೇವತಾಶಿಲ್ಪಗಳುಳ್ಳ ಜಾಲಂಧ್ರಗಳು ಇವರ ಕಲೆಯ ವೈಶಿಷ್ಟ್ಯ. ಹೇಮಾವತಿಯ ದೊಡ್ಡೇಶ್ವರ ದೇವಾಲಯದಲ್ಲಿರುವ ಗಂಗಾ, ಮಿಥುನ, ಕಾರ್ತಿಕೇಯ, ಬ್ರಹ್ಮ, ವಿಷ್ಣು ಇತ್ಯಾದಿ ಶಿಲ್ಪಗಳನ್ನು ಹೊಂದಿರುವ ಜಾಲಂಧ್ರಗಳು ಅಂದಿನ ಶಿಲ್ಪಿಗಳ ಕಲಾನೈಪುಣ್ಯಕ್ಕೆ ಸಾಕ್ಷಿಯಾಗಿವೆ. ಈ ಜಾಲಂಧ್ರಗಳ ಆಕರ್ಷಣೆಗೆ ಉತ್ತಮ ನಿದರ್ಶನವೆಂದರೆ ತಂಜಾವೂರಿನ ಬೃಹದೇಶ್ವರ ದೇವಾಲಯದ ನವರಂಗದಲ್ಲಿರುವ ಹಸಿರುಕಲ್ಲಿನ ಜಾಲಂಧ್ರ. ನೊಳಂಬರ ಜಾಲಂಧ್ರಗಳ ಸೌಂದರ್ಯಕ್ಕೆ ಮಾರುಹೋದ ರಾಜೇಂದ್ರಚೋಳ ತನ್ನ ನೊಳಂಬವಾಡಿ ವಿಜಯದ ಸಂಕೇತವಾಗಿ ಇದನ್ನು ತಂಜಾವೂರಿಗೆ ಕೊಂಡೊಯ್ದು ಬೃಹದೀಶ್ವರ ದೇವಾಲಯದಲ್ಲಿ ಸ್ಥಾಪಿಸಿದನು.
ಇವರ ಶಿಲ್ಪಗಳಲ್ಲಿ ನಂದಿಯ ಶಿಲ್ಪಗಳೂ ಮುಖ್ಯವಾದವು. ಇವರ ಕಾಲದ ನಂದಿಯ ವಿಗ್ರಹಗಳು ಹೆಚ್ಚಿನ ಮಟ್ಟಿಗೆ ಚಾಳುಕ್ಯರ ನಂದಿಗಳನ್ನು ಹೋಲುತ್ತವೆ. ನೊಳಂಬರು ಮೂಲತಃ ಶೈವರಾದುದರಿಂದ ಇವರ ಎಲ್ಲ ದೇವಾಲಯಗಳಲ್ಲೂ ನಂದಿಯ ಶಿಲ್ಪಗಳನ್ನು ಕಾಣಬಹುದು. ಸುಂದರವಾದ ಮೈಮಾಟ, ದೇಹಶಕ್ತಿ ಹಾಗು ಓಜಸ್ಸಿನಿಂದ ಕೂಡಿರುವ ಈ ಶಿಲ್ಪಗಳು ಘಂಟಾಹಾರ, ಗೆಜ್ಜೆಹಾರ, ಹಣೆಪಟ್ಟಿ, ಕುಚ್ಚು ಇತ್ಯಾದಿ ಅಲಂಕರಣಗಳಿಂದ ಕೂಡಿವೆ.
ವಾಸ್ತುವಿನ ಭಾಗವಾದರೂ ಶಿಲ್ಪದ ಸಾಲಿಗೇ ಸೇರಿಸಬಹುದಾದ ನೊಳಂಬರ ಕಲೆಯ ಇನ್ನೊಂದು ಅಂಶವೆಂದರೆ ಇವರ ದೇವಾಲಯದ ಕಂಬಗಳು. ಮೂಲತಃ ಚಾಳುಕ್ಯರ ಸ್ತಂಭಗಳಿಂದ ಬಂದಿವೆಯೆಂದು ಹೇಳಬಹುದಾದರೂ ಈ ಕಂಬಗಳ ಮಧ್ಯ ಭಾಗ ಚಾಳುಕ್ಯರವುಗಳಿಗಿಂತ ಭಿನ್ನ. ನೊಳಂಬರ ಕಂಬಗಳಲ್ಲಿ ಈ ಭಾಗದಲ್ಲಿ ಹೆಚ್ಚಿನ ಅಲಂಕರಣವನ್ನು ಕಾಣಬಹುದು. ಸುಂದರವಾದ ಮುತ್ತಿನ ಮಾಲೆಗಳೂ ಅವುಗಳ ಮಧ್ಯಭಾಗದಲ್ಲಿ ಸಣ್ಣ ಸಣ್ಣ ಶಿಲ್ಪಗಳೂ ಮೇಲ್ಬಾಗದಲ್ಲಿ ಕೀರ್ತಿಮುಖಗಳೂ ಇವುಗಳ ಮೇಲೆ ಲತಾಪಟ್ಟಿಕೆ ಇತ್ಯಾದಿ ಅಲಂಕರಣಗಳೂ ಇವೆಲ್ಲದರ ಮೇಲ್ಬಾಗದಲ್ಲಿ ನಾಲ್ಕು ಮೂಲೆಗಳಲ್ಲಿ ಕುಳಿತಿರುವ ಸಣ್ಣ ಸಣ್ಣ ಸಿಂಹಗಳ ವಿಗ್ರಹಗಳೂ ನೊಳಂಬರ ಶೈಲಿಯ ಕಂಬಗಳ ವಿಶಿಷ್ಟ ಲಕ್ಷಣಗಳು. ಪ್ರಾಯಶಃ ಈ ಸಿಂಹಗಳು ಪಲ್ಲವರ ಕಂಬಗಳಲ್ಲಿ ವಿಶೇಷವಾಗಿ ಹಾಗೂ ಬೃಹತ್ತಾಗಿ ಕಾಣಬರುವ ಸಿಂಹಗಳ ಸೂಕ್ಷ್ಮ ಪ್ರತಿ ರೂಪಗಳಾಗಿದ್ದು ನೊಳಂಬರ ಕಲೆಯ ಮೇಲೆ ಪಲ್ಲವರ ಶೈಲಿಯ ಪ್ರಭಾವವಿರಬಹುದೆಂದು ಹೇಳಬಹುದು.
ನೊಳಂಬರ ಶೈಲಿಯ ಕಂಬಗಳೂ ಜಾಲಂಧ್ರಗಳಂತೆ ಚೋಳರ ಗಮನವನ್ನು ಆಕರ್ಷಿಸಿದವು. ತಂಜಾವೂರಿಗೆ ಏಳು ಮೈಲಿ ದೂರದಲ್ಲಿರುವ ತಿರುವೈಯಾರ್‍ನ ಅಪ್ಪಾರ್ ಸ್ವಾಮಿ ದೇವಾಲಯದ ವರಾಂಡದ ನೊಳಂಬ ಶೈಲಿಯ ಕಂಬಗಳು ಕಲಾಪ್ರೇಮಿ ರಾಜೇಂದ್ರ ಚೋಳ ನೊಳಂಬವಾಡಿಯ ದಿಗ್ವಿಜಯದ ಸಂಕೇತವಾಗಿ ಕೊಂಡೊಯ್ದ ಸ್ಮಾರಕಗಳು. ಸಂಪೂರ್ಣವಾಗಿ ವಿಭಿನ್ನವಾದ ಪರಿಸರದಲ್ಲಿ ನಿಂತಿರುವ ಈ ಕಂಬಗಳು ನೊಳಂಬ ಶೈಲಿಯ ಕಂಬಗಳ ಶ್ರೇಷ್ಠ ಕೌಶಲಕ್ಕೆ ಮತ್ತು ಸೌಂದರ್ಯಕ್ಕೆ ಮೂಕಸಾಕ್ಷಿಗಳಾಗಿವೆ.
ನೊಳಂಬರ ವಾಸ್ತುಶಿಲ್ಪದಲ್ಲಿ ಅಂಥ ಗಮನಾರ್ಹವಾದ ಬದಲಾವಣೆಯಾಗಲಿ ಹೊಸತನವಾಗಲಿ ಕಾಣಬರುವುದಿಲ್ಲ. ಸಮಕಾಲೀನ ದೇವಾಲಯಗಳಂತೆಯೇ ಇವನ್ನೂ ನಿರ್ಮಿಸಲಾಗುತ್ತಿತ್ತು. ಇವರ ದೇವಾಲಯಗಳು ಈಗ ಆಂಧ್ರ ಪ್ರದೇಶದ ಹೇಮಾವತಿ, ಕರ್ನಾಟಕದ ಆವನಿ, ನಂದಿ ಮತು ತಮಿಳುನಾಡಿನ ಧರ್ಮಪುರಿಯಲ್ಲಿ ಕಾಣಬಹುದು. ಇವರ ಮುಖ್ಯ ದೇವಾಲಯಗಳು ಹೇಮಾವತಿಯ ದೊಡ್ಡೇಶ್ವರ, ಅಕ್ಕ-ತಂಗಿ, ವಿರೂಪಾಕ್ಷ, ಮಲ್ಲೇಶ್ವರ, ಅವನಿಯ ಲಕ್ಪ್ಷ್ಮಣೇಶ್ವರ, ಭರತೇಶ್ವರ, ನಂದಿಯ ಭೋಗನಂದಿ, ಅರುಣಾಚಲೇಶ್ವರ ಮತ್ತು ಧರ್ಮಪುರಿಯ ಕಾಮಾಕ್ಷಿಯಮ್ಮ ಮತ್ತು ಮಲ್ಲಿಕಾರ್ಜುನ.
ಇವರ ಎಲ್ಲ ದೇವಾಲಯಗಳ ತಳವಿನ್ಯಾಸ ಒಂದೇ ರೀತಿಯದು. ಇದರಲ್ಲಿ ಒಂದು ಚತುರಸ್ರ ಗರ್ಭಗೃಹ, ಅರ್ಧಮಂಟಪ ಮತ್ತು ನವರಂಗವೂ ದೇವಾಲಯದ ಮುಂಭಾಗದಲ್ಲಿ ಪ್ರತ್ಯೇಕವಾಗಿ ಒಂದು ನಂದಿಮಂಟಪವೂ ಇರುತ್ತವೆ.
ದೇವಾಲಯವನ್ನು ಸಾಕಷ್ಟು ಎತ್ತರವಾದ ಮತ್ತು ವಿವಿಧ ರೀತಿಯ ಅಚ್ಚು ಪಟ್ಟಿಗಳಿಂದ ಕೂಡಿದ ತಳಪಾದಿಯ ಮೇಲೆ ಕಟ್ಟಿರುತ್ತಾರೆ. ಗೋಡೆ ಸಾಧಾರಣವಾಗಿ ಸರಳವಾಗಿದ್ದು ಮಧ್ಯೆ ಅರೆಗಂಬಗಳಿಂದ ಕೂಡಿರುತ್ತದೆ. ಅಲ್ಲಲ್ಲಿ ಜಾಲಂಧ್ರಗಳು ಇರುತ್ತವೆ. ಗರ್ಭಗೃಹದ ಮೇಲೆ ದ್ರಾವಿಡ ಶೈಲಿಯ ವಿಮಾನವನ್ನು ಇವರು ಕಟ್ಟುತ್ತಿದ್ದರು. ಆದರೆ ನಂದಿಯ ದೇವಾಲಯಗಳನ್ನು ಬಿಟ್ಟರೆ ಉಳಿದ ಯಾವ ಕಡೆಯಲ್ಲೂ ಮೂಲವಿಮಾನ ಉಳಿದಿಲ್ಲ.
ದೇವಾಲಯದ ಒಳಭಾಗದಲ್ಲಿ ಮೇಲೆ ಹೇಳಿದ ರೀತಿಯ ಕಂಬಗಳನ್ನು ಕಾಣಬಹುದು. ಹೇಮಾವತಿಯ ದೊಡ್ಡೇಶ್ವರ ದೇವಾಲಯವೊಂದನ್ನು ಬಿಟ್ಟರೆ ಉಳಿದೆಲ್ಲ ದೇವಾಲಯಗಳಲ್ಲೂ ನವರಂಗದಲ್ಲಿ ನಾಲ್ಕು ಕಂಬಗಳಿವೆ. ಅರ್ಧಮಂಟಪದಲ್ಲೂ ಎರಡು ಅಥವಾ ನಾಲ್ಕು ಕಂಬಗಳನ್ನು ಕಾಣಬಹುದು. ಇವರ ಎಲ್ಲ ದೇವಾಲಯಗಳೂ ಶಿವನವಾದ್ದರಿಂದ ಗರ್ಭಗುಡಿಯಲ್ಲಿ ಲಿಂಗ ಮತ್ತು ದೇವಾಲಯದ ಮುಂದುಗಡೆ ನಂದಿಮಂಟಪವನ್ನು ಕಾಣಬಹುದು.
ನವರಂಗದ ದ್ವಾರ ಮತ್ತು ಗರ್ಭಗುಡಿಯ ದ್ವಾರಗಳಲ್ಲಿ ಹೆಚ್ಚಿಗೆ ಅಲಂಕರಣವಿದ್ದು, ಇವು ಬಾದಾಮಿ ಚಾಳುಕ್ಯರ ದ್ವಾರಗಳಿಗಿಂತ ಹೆಚ್ಚು ಆಕರ್ಷಕವಾಗಿವೆ. ಸಾಮಾನ್ಯವಾಗಿ ಬಾಗಿಲು ಕಂಬಗಳ ಮೇಲೆ ಸುಂದರವಾದ ಬಳ್ಳಿಗಳ, ಹಾರಗಳ, ಅರೆಗಂಬಗಳ ಕೆತ್ತನೆಯಿರುತ್ತದೆ. ಕೆಳಭಾಗದಲ್ಲಿ ದ್ವಾರಪಾಲಕರು, ನಿಧಿಗಳು ಮತ್ತು ಗಂಗಾ ಯಮುನಾ ಶಿಲ್ಪಗಳು ಇರುತ್ತವೆ. ಮೇಲಿನ ತೊಲೆಯ ಮಧ್ಯಭಾಗದಲ್ಲಿ ಗಜಲಕ್ಷ್ಮಿ ಮತ್ತು ಮಂಗಳ ಚಿಹ್ನೆಗಳ ಚಿತ್ರಣವಿದ್ದು ಇದರ ಮೇಲ್ಬಾಗದಲ್ಲಿ ಸುಂದರವಾದ ಕಪೋತವಿರುತ್ತದೆ. ದ್ವಾರದ ಭಾಗವನ್ನು ಸಾಮಾನ್ಯವಾಗಿ ಕಪ್ಪು ಅಥವಾ ಹಸಿರು ಕಲ್ಲಿನಿಂದ ಮಾಡಿರುವುದರಿಂದ ಸುಂದರವಾದ ಮತ್ತು ನವಿರಾದ ಕೆತ್ತನೆಗಳನ್ನು ಇಲ್ಲಿ ಕಾಣಬಹುದು.
ನೊಳಂಬರ ದೇವಾಲಯದಲ್ಲಿ ಶಿಲ್ಪಾಲಂಕರಣ ಕಡಿಮೆಯಲ್ಲದಿದ್ದರೂ ಹೆಚ್ಚೆಂದು ಮಾತ್ರ ಹೇಳಲಾಗದು. ಹೊರಭಾಗದಲ್ಲಿ ಅಧಿಷ್ಠಾನದ ಅಚ್ಚುಪಟ್ಟಿಯ ಮೇಲೆ ಮತ್ತು ಗೋಡೆಯ ಮೇಲ್ಬಾಗದಲ್ಲಿರುವ ತೊಲೆಯ ಹೊರಭಾಗದಲ್ಲಿ ಅಷ್ಟೇನೂ ಆಕರ್ಷಕವಲ್ಲದ ಚಿತ್ರಪಟ್ಟಿಕೆಯಿದೆ. ದೇವಾಲಯದ ಗೋಡೆ ಸರಳವಾಗಿದ್ದರೂ ಕಂಬಗಳು ಅತ್ಯಂತ ಸೂಕ್ಷ್ಮ ಹಾಗೂ ನವಿರಾದ ಕೆತ್ತನೆಯಿಂದ ಕೂಡಿವೆ. ಸಾಮಾನ್ಯವಾಗಿ ಇವರ ಎಲ್ಲ ದೇವಾಲಯಗಳಲ್ಲೂ ನವರಂಗದ ಚಾವಣಿಯ ಮಧ್ಯಅಂಕಣದಲ್ಲಿ ಅಷ್ಟದಿಕ್ಪಾಲಕರು ಸುತ್ತು ವರೆದ ಶಿವಪಾರ್ವತಿ ಅಥವಾ ನಟರಾಜ ಶಿಲ್ಪವಿರುತ್ತದೆ. ನೊಳಂಬರ ದೇವಾಲಯಗಳಲ್ಲೆಲ್ಲ ಅತ್ಯಂತ ಸುಸ್ಥಿತಿಯಲ್ಲಿರುವುದೂ ದೊಡ್ಡದೂ ಆದ ದೇವಾಲಯವೆಂದರೆ ಹೇಮಾವತಿಯ ದೊಡ್ಡೇಶ್ವರ ದೇವಾಲಯ. ಸುಮಾರು 24ಮೀ. ಉದ್ದ, ಸುಮಾರು 13 ಮೀ. ಅಗಲವಾದ, ಗ್ರಾನೈಟ್ ಕಲ್ಲಿನ ಈ ದೇವಾಲಯದ ವಿಮಾನ ಬಿದ್ದುಹೋಗಿದೆ. ಈ ದೇವಾಲಯನೊಳಂಬರ ವಾಸ್ತುಶಿಲ್ಪ ಶೈಲಿಗೆ ಒಂದು ಉತ್ತಮ ಉದಾಹರಣೆ. ಗರ್ಭಗೃಹ, 4 ಕಂಬಗಳಿರುವ ಅರ್ಧಮಂಟಪ, ಮತ್ತು 16 ಕಂಬಗಳಿರುವ ನವರಂಗ, ಸೂಕ್ಷ್ಮವಾದ ಕೆತ್ತನೆಗಳುಳ್ಳ ದೇವಾಲಯದ ಕಂಬಗಳು ಮತ್ತು ಗಂಗಾ, ಮಿಥುನ, ಕಾರ್ತಿಕೇಯ, ಬ್ರಹ್ಮ, ವಿಷ್ಣು ಮತ್ತು ಲತಾಪಟ್ಟಿಕೆಗಳಿರುವ ಜಾಲಂಧ್ರಗಳು-ಇವು ಈ ದೇವಾಲಯದ ವೈಶಿಷ್ಟ್ಯ. ಗರ್ಭಗೃಹದ ಮತ್ತು ನವರಂಗದ ದ್ವಾರಗಳು ಸೂಕ್ಷ್ಮ ಕೆತ್ತನೆಗಳಿಂದ ಕೂಡಿವೆ. ದೇವಾಲಯದ ಮುಂಭಾಗದಲ್ಲಿ ಒಂದು ನಂದಿಮಂಟಪವಿದ್ದು ಅದರೊಳಗೆ ನೊಳಂಬರ ಕಾಲದ ದೊಡ್ಡ ನಂದಿಯ ವಿಗ್ರಹವಿದೆ.
ಹೇಮಾವತಿಯ ಇತರ ದೇವಾಲಯಗಳೆಂದರೆ ವಿರೂಪಾಕ್ಷ ಮತ್ತು ಮಲ್ಲೇಶ್ವರ. ಇವುಗಳ ಗೋಡೆಗಳ ಹೊರಭಾಗ ಪೂರ್ಣವಾಗಿ ದುರಸ್ತಾಗಿದೆ. ಈ ಎರಡೂ ದೇವಾಲಯಗಳು ಸುಂದರವಾದ ಕಂಬಗಳಿಗೆ ಮತ್ತು ಬಾಗಿಲುವಾಡಗಳಿಗೆ ಪ್ರಸಿದ್ಧವಾಗಿವೆ.
ಆವನಿಯ ಲಕ್ಷ್ಮಣೇಶ್ವರ ಮತ್ತು ಭರತೇಶ್ವರ ದೇವಾಲಯಗಳು ಪ್ರಾಯಶಃ 10ನೆಯ ಶತಮಾನದ ಅಂತ್ಯಭಾಗದಲ್ಲಿ ಎರಡನೆಯ ಪೊಳಲ್ಚೋರನ ಪತ್ನಿಯಾದ ದೀವಾಂಬಿಕೆಯಿಂದ ನಿರ್ಮಿತವಾದವು. ಇವುಗಳಲ್ಲಿ ಲಕ್ಷ್ಮಣೇಶ್ವರ ದೇವಾಲಯದಲ್ಲಿ ವಿವಿಧ ಅಚ್ಚುಪಟ್ಟಿಗಳಿಂದ ಕೂಡಿದ ತಳಪಾದಿಗೆ ಮತ್ತು ಅನೇಕ ವಾಸ್ತು ಮತ್ತು ಶಿಲ್ಪಗಳ ಅಲಂಕರಣಗಳಿಂದ ಕೂಡಿದ ಭಿತ್ತಿ ಗಮನಾರ್ಹವಾದವು. ಇಲ್ಲಿಯ ಗೋಡೆಯ ಗೂಡುಗಳಲ್ಲಿ ಸುಂದರವಾದ ಹಾಗೂ ಸಣ್ಣವಾದ ಮನುಷ್ಯರ ಮತ್ತು ದೇವತೆಗಳ ವಿಗ್ರಹಗಳನ್ನು ವಿವಿಧ ಭಂಗಿಗಳಲ್ಲಿ ಕೆತ್ತಲಾಗಿದೆ. ಜಾಲಂಧ್ರಗಳಲ್ಲಿ ನಟರಾಜ, ಮಹಿಷಾಸುರಮರ್ದಿನಿ, ವಿಷ್ಣು ಇತ್ಯಾದಿ ದೇವತೆಗಳ ವಿಗ್ರಹಗಳಿವೆ. ಭರತೇಶ್ವರ ದೇವಾಲಯ ಬಹಳಮಟ್ಟಿಗೆ ಪುನರ್‍ನಿರ್ಮಾಣವಾಗಿದೆ. ಆದರೂ ಸುಂದರವಾದ ಅಧಿಷ್ಠಾನ, ಅಚ್ಚುಪಟ್ಟಿಗಳು ಮತ್ತು ಇದರ ಮೇಲಿರುವ ದೀವಾಂಬಿಕೆಯ ಶಾಸನಗಳಿಂದಾಗಿ ಇದು ಮುಖ್ಯವಾದ ದೇವಾಲಯವೆನಿಸಿದೆ.
ನಂದಿಯಲ್ಲಿರುವ ಭೋಗನಂದೀಶ್ವರ ಮತ್ತು ಅರುಣಾಚಲೇಶ್ವರ ದೇವಾಲಯಗಳು ಶೈಲಿಯ ದೃಷ್ಟಿಯಿಂದ ನೊಳಂಬರ ಶೈಲಿಯ ಎಲ್ಲ ಗುಣಗಳನ್ನೂ ಮೈಗೂಡಿಸಿಕೊಂಡಿವೆಯೆಂದು ಹೇಳಬಹುದು. ಆದರೂ ಇವುಗಳ ಕರ್ತೃ ಯಾರು ಎಂಬ ವಿಷಯದಲ್ಲಿ ಏಕಾಭಿಪ್ರಾಯವಿಲ್ಲ. ನೊಳಂಬಾಧಿರಾಜನ ಕಾಲದಲ್ಲಿ ಇಲ್ಲಿಯ ಒಂದು ದೇವಾಲಯಕ್ಕೆ ಗೋಪುರವನ್ನು ಕಟ್ಟಲಾಯಿತೆಂದು ಶಾಸನವಿದೆ. ಇಲ್ಲಿಯ ದೇವಾಲಯಗಳು ನೊಳಂಬರು ದೇವಾಲಯದ ಗುಣಗಳನ್ನು ಹೊಂದಿದ್ದರೂ ಇವುಗಳ ವಿಶೇಷವೆಂದರೆ ಮೇಲೆ ಹೇಳಿದಂತೆ ಇಲ್ಲಿ ಮಾತ್ರ ನೊಳಂಬರ ಕಾಲದ ಮೂಲ ವಿಮಾನವನ್ನು ಕಾಣಬಹುದು.
ನೊಳಂಬ ವಾಸ್ತುಶಿಲ್ಪದ ಮತ್ತೊಂದು ಕೇಂದ್ರವೆಂದರೆ ತಮಿಳುನಾಡಿನ ಧರ್ಮಪುರಿ. ಇಲ್ಲಿಯ ಕಾಮಾಕ್ಷಿಯಮ್ಮ ಮತ್ತು ಮಲ್ಲಿಕಾರ್ಜುನ ದೇವಾಲಯಗಳು 10ನೆಯ ಶತಮಾನದವೆಂದು ಹೇಳಬಹುದು. ಒಂದೇ ವಿಧವಾದ ತಳವಿನ್ಯಾಸ ಹೊಂದಿರುವ ಈ ದೇವಾಲಯಗಳನ್ನು ಒಂದರ ಪಕ್ಕದಲ್ಲೊಂದು ಕಟ್ಟಲಾಗಿದೆ. ಇಲ್ಲಿಯ ಸುಂದರವಾದ ವಿವಿಧರೀತಿಯ ಲತಾಪಟ್ಟಿಕೆ ಮತ್ತು ಶಿಲ್ಪಾಲಂಕರಣವುಳ್ಳ ಕಂಬಗಳು, ನವರಂಗದ ಚಾವಣಿಯ ಅಷ್ಟದಿಕ್ಪಾಲಕರೊಡಗೂಡಿದ ನಟರಾಜ ಮತ್ತು ಶಿವಪಾರ್ವತಿಯರ ಶಿಲ್ಪಗಳು ಮತ್ತು ಗುಡಿಯ ಅಧಿಷ್ಠಾನದ ಅಚ್ಚುಪಟ್ಟಿಗಳು ಗಮನಾರ್ಹವಾದವು. ಕಾಮಾಕ್ಷಿಯಮ್ಮ ದೇವಾಲಯದಷ್ಟು ಸುಂದರವಾದ ಅಧಿಷ್ಠಾನವಿರುವ ದೇವಾಲಯ ನೊಳಂಬ ವಾಸ್ತುಶಿಲ್ಪದಲ್ಲೇ ದುರ್ಲಭ. ವಿವಿಧ ರೀತಿಯ ಅಲಂಕರಣಗಳುಳ್ಳ ಅಚ್ಚುಪಟ್ಟಿಗಳಿಂದ ಕೂಡಿದ ಅಧಿಷ್ಠಾನದ ತಳಭಾಗದಲ್ಲಿ ರಾಮಾಯಣದ ಉಬ್ಬುಸಾಲು ಶಿಲ್ಪವಿದೆ. ಇದರ ಮೇಲಣ ಚಪ್ಪಡಿಯನ್ನು ಸುತ್ತಲೂ ಅಲ್ಲಲ್ಲಿ ಆನೆಗಳು ಹೊತ್ತು ನಿಂತಿವೆ. ಇದರ ಮೇಲೆ ಅನುಕ್ರಮವಾಗಿ ಕಮಲದ ದಳ ಬಿಡಿಸಿದ ಅಚ್ಚುಪಟ್ಟಿ, ಅರೆಗೊಳವಿ ಅಥವಾ ಬಳ್ಳಿಯ ಸುರುಳಿಯ ಚಿತ್ರವಿರುವ ಕುಮುದದ ಅಚ್ಚುಪಟ್ಟಿ, ಇನ್ನೂ ಮೇಲೆ ವ್ಯಾಳ ಅಥವಾ ಇತರ ಕಾಲ್ಪನಿಕ ಜೀವಿಗಳ ಸಾಲುಶಿಲ್ಪ ಅದರ ಮೇಲೆ ಸ್ವಲ್ಪ ಭಾಗ ಕಪೋತ ಮತ್ತು ಸ್ವಲ್ಪಭಾಗ ಚೌಕಟ್ಟಾದ ಅಚ್ಚುಪಟ್ಟಿ ಇವೆ. ಇವುಗಳಿಂದ ಕೂಡಿದ ಈ ಅಧಿಷ್ಠಾನ ಚಾಳುಕ್ಯ-ಪಲ್ಲವ ಶೈಲಿಯ ಉಚಿತ ಸಮನ್ವಯದ ಪ್ರತೀಕವಾಗಿದೆ. ದೇವಾಲಯದ ಹೊರಗೋಡೆ ಸಂಪೂರ್ಣವಾಗಿ ಗಾರೆಯಿಂದ ಮುಚ್ಚಿಹೋಗಿರುವುದರಿಂದ ಇದರ ಮೂಲ ಸ್ವರೂಪವನ್ನು ಅರಿಯುವುದು ಅಸಾಧ್ಯ.
ಸೂಚನೆ: ಈ ಮಾಹಿತಿಯನ್ನು ಅಂತರ್ಜಾಲದ ಪುಟಗಳಿಂದ ಸಂಗ್ರಹಿಸಿ ಇಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನೀಡಲಾಗಿದೆ.
Comments
Post a Comment