ಸಿಂಧೂ ಅಥವಾ ಹರಪ್ಪಾ ನಾಗರೀಕತೆ ಮತ್ತು ಅದರ ಪ್ರಮುಖ ಲಕ್ಷಣಗಳು

I. ಪೀಠಿಕೆ:    ಸಾ.ಶ.ವ. 1921 ಕ್ಕೆ ಮುನ್ನ ಪ್ರಾಚೀನ ಭಾರತದ ಇತಿಹಾಸವು ಕೇವಲ ಸಾ.ಶ.ಪೂ. 1500 ಅಂದರೆ ವೈದಿಕ ಸಂಸ್ಕೃತಿಯ ಕಾಲಕ್ಕೆ ಸೀಮಿತಗೊಂಡಿತ್ತು. ಆದರೆ ಮೇಲಿನ ವರ್ಷದಲ್ಲಿ ಅವಿಭಜಿತ ಭಾರತದ ವಾಯುವ್ಯ ಭಾಗದಲ್ಲಿ ಸಾ.ಶ.ವ. 1904  ರಲ್ಲಿ ಲಾರ್ಡ್‌ ಕರ್ಜನ್‌  ಜಾರಿಗೆ ತಂದ ಪುರಾತತ್ವ ವಸ್ತುಗಳ ಸಂರಕ್ಷಣಾ ಕಾಯ್ದೆಯ ಅಡಿಯಲ್ಲಿ ಅಸ್ಥಿತ್ವಕ್ಕೆ ಬಂದ ಭಾರತೀಯ ಪುರಾತತ್ವ ಇಲಾಖೆಯ ನಿರ್ದೇಶಕರಾದ ಸರ್‌ ಜಾನ್‌ ಮಾರ್ಷಲ್‌ರವರ ನೇತೃತ್ವದಲ್ಲಿ ಡಾ. ದಯಾರಾಂ ಸಹಾನಿ ಮತ್ತು ಸಾ.ಶ.ವ. 1922 ರಲ್ಲಿ ಡಾ. ಆರ್.‌ ಡಿ. ಬ್ಯಾನರ್ಜಿಯವರು ನಡೆಸಿದ ಉತ್ಖನನಗಳು ಭಾರತದ ಇತಿಹಾಸವನ್ನು ಸು. ಸಾ.ಶ.ಪೂ. 3000 ವರ್ಷಗಳಷ್ಟು ಹಿಂದಕ್ಕೆ ಕೊಂಡೊಯ್ದಿತು. ಅಂದರೆ ಭಾರತದ ಇತಿಹಾಸವು ಅದುವರೆಗೂ ನಂಬಲಾಗಿದ್ದ ಸಾ.ಶ.ಪೂ. 1500 ವರ್ಷಗಳಿಗೆ ಬದಲು ಸಾ.ಶ.ಪೂ. 3,000 ವರ್ಷಗಳಷ್ಟು ಹಿಂದಕ್ಕೆ ಅಂದರೆ ಒಟ್ಟು 5000 ವರ್ಷಗಳಷ್ಟು ಪ್ರಾಚೀನತೆಯನ್ನು ಪಡೆಯಿತು. ಭಾರತದ ನಾಗರೀಕತೆಯ ತೊಟ್ಟಿಲು ಎನಿಸಿದ ಸಿಂಧೂ ನದಿ ಮತ್ತು ಅದರ ಉಪನದಿಗಳ ವಿಶಾಲವಾದ ಬಯಲಿನಲ್ಲಿ ಬೆಳೆದುಬಂದ ಈ ನಾಗರೀಕತೆಯು ಅದುವರೆಗೂ ಭೂಮಿಯಲ್ಲಿ ಹೂತುಹೋಗಿತ್ತು. ಇದರ ಅವಶೇಷಗಳನ್ನು ಮೊದಲು ಗಮನಿಸಿದವರು ಚಾರ್ಲ್ಸ್‌ ಮೇಸನ್‌ ಎಂಬ ಬ್ರಿಟೀಷ್‌ ವ್ಯಕ್ತಿ. ನಂತರ 1856 ರಲ್ಲಿ ವಾಯುವ್ಯ ಭಾರತದ ಸಿಂಧ್‌ ಪ್ರಾಂತ್ಯದ ಮೊಹೆಂಜೊ ದಾರೊ ಬಳಿ  ರೈಲ್ವೆ ಮಾರ್ಗದ ನಿರ್ಮಾಣದಲ್ಲಿ ತೊಡಗಿದ್ದ ತಂತ್ರಜ್ಞರಿಗೆ ಮಣ್ಣಿನ ದಿಬ್ಬಗಳನ್ನು ಅಗೆಯುತ್ತಿರುವಾಗ ಸುಟ್ಟ ಇಟ್ಟಿಗೆಗಳು ದೊರೆತವು. ಮುಂದೆ 1862 ರಲ್ಲಿ ಜನರಲ್‌ ಕನ್ನಿಂಗ್‌ ಹ್ಯಾಂರವರು ಇಲ್ಲಿ ಕೆಲವು ಸುಟ್ಟ ಇಟ್ಟಿಗೆಗಳು ಮತ್ತು ಮುದ್ರೆಗಳನ್ನು ಪತ್ತೆ ಹಚ್ಚಿದರು. ನಂತರ 1921 ಮತ್ತು 1922 ರಲ್ಲಿ ಸಂಶೋಧಕರಾದ ಸಹಾನಿ ಮತ್ತು ಬ್ಯಾನರ್ಜಿಯವರ ನೇತೃತ್ವದಲ್ಲಿ ನಡೆದ ಪೂರ್ಣಪ್ರಮಾಣದ ವ್ಯವಸ್ಥಿತ ಸಂಶೋಧನೆಗಳು ಈ ಬೃಹತ್‌ ನಾಗರೀಕತೆಯನ್ನು ಜಗತ್ತಿನ ಗಮನಕ್ಕೆ ತಂದವು. ಅಂದಿನಿಂದ ಇಂದಿನವರೆಗೂ ಅಂದರೆ ಸು. 100 ವರ್ಷಗಳು ಕಳೆದರೂ ಈ ನಾಗರೀಕತೆಯು ಐತಿಹಾಸಿಕ ಸಂಶೋಧಕರ ಕುತೂಹಲದ ನೆಲೆಯಾಗಿದ್ದು, ಇಂದಿಗೂ ಅಲ್ಲಿ ಸಂಶೋಧನೆಗಳು ನಡೆಯುತ್ತಿವೆ. ಅವಿಭಜಿತ ಭಾರತದ ಮಹಾರಷ್ಟ್ರ, ಗುಜರಾತ್‌, ರಾಜಸ್ತಾನ, ಉತ್ತರಪ್ರದೇಶ, ಹರ್ಯಾಣ, ಪಂಜಾಬ್‌, ಸಿಂಧ್‌, ಬಲೂಚೀಸ್ತಾನಒಳಗೊಂಡಂತೆ ಅಫ್ಘಾನೀಸ್ತಾನ ಮತ್ತು ಕಾಶ್ಮೀರದ ಗಡಿಗಳವರೆಗೆ ಇದರ ನೆಲೆಗಳು ಹರಡಿವೆ. ಪ್ರಾಚೀನ ನಾಗರೀಕತೆಗಳಲ್ಲೆಲ್ಲಾ ಅತ್ಯಂತ ವ್ಯವಸ್ಥಿತವಾದ ನಾಗರೀಕತೆ ಎಂದು ಇದನ್ನು ವಿದ್ವಾಂಸರು ಗುರ್ತಿಸಿದ್ದಾರೆ. ಹರಪ್ಪಾ ನಾಗರೀಕತೆಯು ಪೂರ್ವಹರಪ್ಪ, ಪ್ರಬುದ್ಧ ಹರಪ್ಪಾ ಮತ್ತು ನಂತರದ ಹರಪ್ಪ ಎಂಬ ಮೂರು ಹಂತಗಳಲ್ಲಿ ಅಸ್ಥಿತ್ವದಲ್ಲಿತ್ತು ಎಂಬುದು ವಿದ್ವಾಂಸರ ಅಭಿಪ್ರಾಯಮುದ್ರೆಗಳು, ಮಣಿಗಳು, ತೂಕದ ಸಾಧನಗಳು, ಕಲ್ಲಿನ ಆಯುಧಗಳು ಮತ್ತು ಸುಟ್ಟ ಇಟ್ಟಿಗೆಗಳಿಂದ ಕೂಡಿದ ಹರಪ್ಪಾ ಕಾಲಘಟ್ಟವನ್ನು ಪ್ರಬುದ್ಧ ಹರಪ್ಪಾ ಕಾಲವೆಂದು ಕರೆಯಲಾಗಿದೆ. ಇಂಗಾಲ ೧೪ರ ಪರೀಕ್ಷೆಯ ಪ್ರಕಾರ ಪ್ರಬುಧ್ಧ ಹರಪ್ಪ ನಾಗರೀಕತೆಯು ಸಾ...ಪೂ. 2900 ರಿಂದ 1800 ವರ್ಷಗಳ ನಡುವೆ ಇತ್ತೆಂದು ತಿಳಿದು ಬರುತ್ತದೆ. ಆಧುನಿಕ ಸಂಶೋಧನೆಗಳ ಪ್ರಕಾರ ಮೆಸಪಟೋಮಿಯದೊಂದಿಗಿನ ಿವರ ಸಂಬಂಧಗಳು ಮೇಲಿನ ಕಾಲವನ್ನು ದೃಢಪಡಿಸಿವೆ.

 

II. ವ್ಯಾಪ್ತಿ: ಹರಪ್ಪ ನಾಗರೀಕತೆಯು ಭಾರತದ ಪಂಜಾಬ್‌, ರಾಜಸ್ಥಾನ, ಗುಜರಾತ್‌, ಉತ್ತರಪ್ರದೇಶ, ಕಾಶ್ಮೀರ, ಪಾಕಿಸ್ತಾನದ ಸಿಂಧ್‌, ಬಲೂಚೀಸ್ತಾನ, ಅಫ್ಘಾನಿಸ್ತಾನ ಸೇರಿದಂತೆ ಒಟ್ಟು ೧೨,೯೯,೬೦೦ .ಕಿ.ಮೀ ಗಳಷ್ಟು ವಿಶಾಲ ವ್ಯಾಪ್ತಿಯನ್ನು ಹೊಂದಿದ್ದು, ತ್ರಿಕೋಣಾಕಾರದ ಭೂವ್ಯಾಪ್ತಿಯನ್ನು ಪಡೆದಿತ್ತು. ಅಂದರೆ  ನಾಗರೀಕತೆಯು ಉತ್ತರದಲ್ಲಿ ಜಮ್ಮುವಿನಿಂದ ದಕ್ಷಿಣದಲ್ಲಿ ನರ್ಮದಾ ನದಿ ಕಣಿವೆಯವರೆಗೆ ಮತ್ತು ಪಶ್ಚಿಮದಲ್ಲಿ ಬಲೂಚಿಸ್ತಾನದ ಮಕ್ರಾನ್ತೀರದಿಂದ ಪೂರ್ವದಲ್ಲಿ ಉತ್ತರಪ್ರದೇಶದ ಮೀರತ್ವರೆಗೆ ಹರಡಿಕೊಂಡಿತ್ತು.

 

III. ವಿವಿಧ ಹೆಸರುಗಳು: ಹರಪ್ಪಾ ಸಂಸ್ಕೃತಿ ಅಥವಾ ಹರಪ್ಪಾ ನಾಗರೀಕತೆ (ಪತ್ತೆ ಮಾಡಿದ ಮೊದಲ ನೆಲೆಯಾದ ಕಾರಣ), ಸಿಂಧೂ ನಾಗರೀಕತೆ (ಸಿಂಧೂ ನದಿಯ ಬಯಲಿನಲ್ಲಿ ಹುಟ್ಟಿ, ಬೆಳೆದು ಅವನತಿ ಹೊಂದಿದ ಕಾರಣ), ಇಂಡೋ-ಸುಮೇರಿಯನ್ ನಾಗರೀಕತೆ (ಸುಮೇರಿಯನ್‌ ನಾಗರೀಕತೆಯ ಕೆಲವು ಲಕ್ಷಣಗಳು ಕಂಡುಬಂದ ಕಾರಣ), ತಾಮ್ರಶಿಲಾಯುಗ ಸಂಸ್ಕೃತಿ (ಕಾಲಘಟ್ಟ ಮತ್ತು ಲಭ್ಯವಾದ ತಾಮ್ರದ ವಸ್ತುಗಳ ಕಾರಣ) & ಪೂರ್ವ ಆರ್ಯನ್ (ವೈದಿಕ) ಸಂಸ್ಕೃತಿ (ಅವರಿಗಿಂತ ಮೊದಲು ಅಸ್ತಿತ್ವದಲ್ಲಿದ್ದ ಕಾರಣ) ಎಂಬ ವಿವಿಧ ಹೆಸರುಗಳಿಂದ ಈ ಸಂಸ್ಕೃತಿಯನ್ನು ಕರೆಯಲಾಗಿದೆ.

 

IV. ನಿರ್ಮಾಪಕರು: ಈ ಸಂಸ್ಕೃತಿಯ ನಿರ್ಮಾಪಕರ ಬಗ್ಗೆ ವಿದ್ವಾಂಸರಲ್ಲಿ ಏಕಾಭಿಪ್ರಾಯವಿಲ್ಲ. ಆದರೆ, ಉತ್ಖನನಗಳ ಕಾಲಕ್ಕೆ ದೊರೆತ ಅಸ್ಥಿಪಂಜರಗಳ ಲಕ್ಷಣಗಳನ್ನು ಆಧರಿಸಿ- ಮೆಡಿಟರೇನಿಯನ್ನರು, ಪ್ರೋಟೊ ಆಸ್ಟ್ರೋಲಾಯ್ಡ್, ಆಲ್ಫೆನಾಯ್ಡ್ & ಮಂಗೋಲಾಯ್ಡ್ ವರ್ಗಕ್ಕೆ ಸೇರಿದ ಜನರು ಇದರ ನಿರ್ಮಾಪಕರು ಎಂಬ ಅಭಿಪ್ರಾಯಗಳು ವ್ಯಕ್ತಗೊಂಡಿವೆ. ಆದರೆ ಬಹುಸಂಖ್ಯಾತರು ಮೊದಲೆರಡು ವರ್ಗಕ್ಕೆ ಸೇರಿದವರೆನ್ನಲಾಗಿದೆ.

ಅ. ಹರಪ್ಪಾ ನಾಗರೀಕತೆಯ ನಿರ್ಮಾಪಕರ ಮೂಲದ ಕುರಿತ ಹೊಸ ಸಂಶೋಧನೆ:- ಪುಣೆಯ ಡೆಕನ್ ಕಾಲೇಜಿನ ಉಪಕುಲಪತಿಗಳೂ ಪ್ರಾಕ್ತನ ಶಾಸ್ತ್ರಜ್ಞರೂ ಆಗಿರುವ ಡಾ.ವಸಂತ ಶಿವರಾಮ ಶಿಂಧೆ ನೇತೃತ್ವದ ಸಂಶೋಧಕರ ತಂಡವೊಂದು 2015 ಮಾರ್ಚ್ 11 ರಂದು ರಾಖಿಗರಿಯಲ್ಲಿ ಇಬ್ಬರು ಪುರುಷರದ್ದು, ಒಂದು ಸ್ತ್ರೀಯದು ಮತ್ತು ಒಂದು ಮಗುವಿನದು ಸೇರಿ ಒಟ್ಟು ನಾಲ್ಕು ಮಾನವ ಅವಶೇಷಗಳನ್ನು ಪತ್ತೆ ಹಚ್ಚಿತ್ತು. ಸಿಂಧೂ ನದಿ ನಾಗರಿಕತೆಯ ಕಾಲದಲ್ಲಿ ಸ್ಮಶಾನವೊಂದರಲ್ಲಿ ಹೂಳಲಾಗಿದ್ದ ವ್ಯಕ್ತಿಗಳ ಪೈಕಿ ಒಂದರ ಪಳೆಯುಳಿಕೆಗಳಿಂದ ವಂಶವಾಹಿಗಳನ್ನು ಪತ್ತೆಹಚ್ಚಲು ವಿಜ್ಞಾನಿಗಳಿಗೆ ಸಾಧ್ಯವಾಗಿತ್ತು. ನಾಲ್ಕು ಅವಶೇಷಗಳ ಪೈಕಿ ವಂಶವಾಹಿ ದೊರೆತ ದೇಹ ಸ್ತ್ರೀ ದೇಹದ ಪಳೆಯುಳಿಕೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. ಅವರ ಸಂಶೋಧನೆಗಳು ತಿಳಿಸಿರುವಂತೆ ಈ ನಾಗರೀಕತೆಯ ನಿರ್ಮಾಪಕರು ಮಧ್ಯ ಏಷ್ಯಾದಿಂದ ವಲಸೆ ಬಂದ ಕೃಷಿಕ ಸಮುದಾಯದವರು ಎಂಬ ಅಭಿಪ್ರಾಯವನ್ನು ತಿರಸ್ಕರಿಸಿವೆ. ಕಾರಣ ರಾಖಿಗರಿಯಲ್ಲಿ ದೊರೆತ ಅಸ್ಥಿಪಂಜರಗಳಲ್ಲಿನ DNA ವಿಶ್ಲೇಷಣೆಯಲ್ಲಿ ಮಧ್ಯ ಏಷ್ಯಾದ ಜನರ DNA ಕುರುಹುಗಳು ಕಂಡುಬಂದಿಲ್ಲ. ಏಕೆಂದರೆ ರಾಖಿಗರಿ ಪಳೆಯುಳಿಕೆಯ ವಂಶವಾಹಿಗಳನ್ನು ತುರ್ಕ್ಮೆನಿಸ್ತಾನದ ಗೋನುರ್ ಮತ್ತು ಪೂರ್ವ ಇರಾನಿನ ಶಹರ್--ಶೋಕ್ತಾ ಎಂಬಲ್ಲಿ ದೊರೆತ 523 ಪಳೆಯುಳಿಕೆಗಳ ವಂಶವಾಹಿಗಳೊಂದಿಗೆ ವಿಶ್ಲೇಷಣೆ ನಡೆಸಲಾಗಿದೆ. 523 ಜನರ ವಂಶವಾಹಿಗಳ ಪೈಕಿ 11 ಜನರ ವಂಶವಾಹಿಗಳು ರಾಖಿಗರಿ ವಂಶವಾಹಿಯೊಂದಿಗೆ ತಾಳೆಯಾಗಿವೆ. ಅವುಗಳನ್ನು ಮತ್ತಷ್ಟು ಅಧ್ಯಯನಕ್ಕೆ ಒಳಪಡಿಸಿದಾಗ 11 ವಂಶವಾಹಿಗಳು ಭಾರತದಿಂದಲೇ ವಲಸೆ ಹೋದ ಸಿಂಧೂ ನಾಗರಿಕತೆಯ ಜನರಿಗೆ ಸೇರಿವೆ ಎಂದು ತಿಳಿದು ಬಂದಿದೆ. 11 ಜನರು ಮತ್ತು ರಾಖಿಗರಿ ವ್ಯಕ್ತಿಯ ವಂಶವಾಹಿಗಳನ್ನು ಸೇರಿ 12 ಜನರ ವಂಶವಾಹಿಗಳನ್ನು ತಳಿ ವಿಜ್ಞಾನಿಗಳು IVC Cline (ಸಿಂಧೂ ಕಣಿವೆ ನಾಗರಿಕತೆಯ ಶ್ರೇಣಿ) ಎಂದು ಕರೆದಿದ್ದಾರೆ. ವಿಜ್ಞಾನಿಗಳಾದ ಡೇವಿಡ್ ರೀಷ್, ಪ್ರಿಯಾಂಕಾ ಮೂರ್ಜಾನಿ, ನಿಕ್ ಪ್ಯಾಟರ್ಸನ್, ವಾಗೀಶ್ ಎಂ ನರಸಿಂಹನ್, ನೀರಾಜ್ ರಾಯ್ ಮೊದಲಾದವರು ಈ ತಂಡದಲ್ಲಿದ್ದರು.

 

V. ಪ್ರಮುಖ ಉತ್ಖನನಗಳು: ಈ ನಾಗರೀಕತೆಯು ಹರಡಿದ್ದ  ವಿಶಾಲ ವ್ಯಾಪ್ತಿಯಲ್ಲಿ ನಡೆಸಿದ ಉತ್ಖನನಗಳಿಂದ ಬೆಳಕಿಗೆ ಬಂದ ಪ್ರಮುಖ ನೆಲೆಗಳು, ಅವುಗಳು ಇರುವ ಸ್ಥಳ, ಸಂಶೋಧಕರು  ಮತ್ತು  ಕಂಡುಬಂದ ಅವಶೇಷಗಳ ಕೆಲವು ವಿವರಗಳನ್ನು ಮುಂದೆ ಕೊಡಲಾಗಿದೆ:-

. ಹರಪ್ಪ: ೧೯೨೧ ರಲ್ಲಿ ಸಂಶೋಧಕರು: ದಯಾರಾಂ ಸಹಾನಿ. ಮಾಂಟ್ ಗೊಮರಿ ಜಿಲ್ಲೆ. ಪಂಜಾಬ್. ಪ್ರಸ್ತುತ ಪಾಕಿಸ್ತಾನದಲ್ಲಿದೆ. ಅತೀ ದೊಡ್ಡ ನಿವೇಶನ. ಸು. ಮೈಲಿಗಳ ಸುತ್ತಳತೆ. ರಾವಿ ನದಿಯ ದಂಡೆಯಲ್ಲಿದೆ. ಉಗ್ರಾಣ, ಕಾರ್ಮಿಕ ವಸತಿಗೃಹಗಳು, ಎತ್ತಿನ ಗಾಡಿಯ ಮತ್ತು ನಾಯಿ ಜಿಂಕೆಯನ್ನು ಬೇಟೆ ಆಡುತ್ತಿರುವ ಮುದ್ರೆಗಳು.

2. ಮೊಹೆಂಜೊದಾರೊ: ಮೊಹೆಂಜೊದಾರೊ ಪದಕ್ಕೆ ಸಿಂಧ್ ಭಾಷೆಯಲ್ಲಿ ಸತ್ತವರ ದಿಬ್ಬ ಎಂಬರ್ಥವಿದೆ. ೧೯೨೨ – R.D ಬ್ಯಾನರ್ಜಿ. ಸಿಂದೂ ನದಿ ದಂಡೆಯಲ್ಲಿದೆ. ಏಳು ಬಾರಿ ಪುನರ್‌ನಿರ್ಮಾಣಗೊಂಡಿರುವ ಕುರುಹುಗಳು. ಪಾಕಿಸ್ತಾನದ ಲಾರ್ಕಾನ್ ಜಿಲ್ಲೆ, ಸಿಂಧ್ ಪ್ರಾಂತ್ಯ. ಬೃಹತ್ ಈಜುಕೊಳ, ಸಭಾಭವನ, ಸಾರ್ವಜನಿಕ ಉಗ್ರಾಣ, ಗಡ್ಡಧಾರಿ ಮನುಷ್ಯನ ಮೂರ್ತಿ (ಮೆದು ಕಲ್ಲಿನಿಂದ), ನೃತ್ಯಭಂಗಿಯ ಕಂಚಿನ ಶಿಲ್ಪ, ಕಂಚಿನ ಎಮ್ಮೆ, ಟಗರು, & ಪಶುಪತಿ ಮುದ್ರೆ.

3. ಕಾಲಿಬಂಗನ್: ೧೯೫೧ ರಲ್ಲಿ. ಗಂಗಾನಗರ ಜಿಲ್ಲೆ, ರಾಜಸ್ಥಾನ. ಸಂಶೋಧಕರು A. ಘೋಷ್.  ಗಗ್ಗರ್ ನದಿ ದಂಡೆಯಲ್ಲಿದೆ.  ಮಣ್ಣಿನ ಕೋಟೆ, ಯಜ್ಞಕುಂಡಗಳು, ಜಿಂಕೆ, ಒಂಟೆ & ದನಗಳ ಮೂಳೆಗಳು. ʼಕಾಲಿಬಂಗನ್ ಎಂದರೆ ಕಪ್ಪು ಬಳೆʼ ಎಂದರ್ಥ.

4. ಲೋಥಾಲ್: ಕ್ಯಾಂಬೆ ತೀರ, ಗುಜರಾತ್; ೧೯೫೯ ರಲ್ಲಿ.: S.R. ರಾವ್ ಸಂಶೋಧಕರು. ಹಡಗು ಕಟ್ಟೆ. ಅಗ್ನಿಕುಂಡಗಳು & ಸ್ತ್ರೀ-ಪುರುಷರ ಜೋಡಿ ಸಮಾಧಿಗಳು. ಮೆಸಪಟೋಮಿಯಾದೊಂದಿಗೆ ವ್ಯಾಪಾರ ಸಂಪರ್ಕ.

5. ಚಾನ್ಹುದಾರೊ: ಸಿಂಧ್ ನದಿಯ ಎಡದಂಡೆ; ಪಾಕಿಸ್ತಾನ. ಮೊಹೆಂಜೊದಾರೊದಿಂದ ೧೬೯ ಕಿ.ಮೀ ದೂರ. ಸತ್ತವರ ದಿಬ್ಬ ಎಂದೂ ಅರ್ಥ. ಸಂಶೋಧಕರು  - N.G. ಮಜೂಮ್ ದಾರ್. ಬೊಂಬೆ, ಆಟಿಕೆಗಳು, ಕಿವಿಯುಂಗುರ, ಮಾತೃದೇವತೆ, ಕಂಚು & ತಾಮ್ರದ ಉಪಕರಣಗಳು.

‌6. ಬನವಾಲಿ: ಹಿಸ್ಸಾರ್ ಜಿಲ್ಲೆ, ಹರ್ಯಾಣ. ಬೊಂಬೆ, ಜೇಡಿ ಣ್ಣಿ ಆಟಿಕೆಗಳು, ಅರಳಿ ಎಲೆ ಗಾತ್ರದ ಕಿವಿಯುಂಗುರ, ಮಾತೃದೇವತೆಯ ವಿಗ್ರಹ.

7. ಸರ್‌ಗೊಡ್ಡಾ: ಗುಜರಾತ್; ೧೯೭೯ ಸಂಶೋಧಕರು - ಡಾ. ಜೋಶಿ. ಕೋಟೆ ಅವಶೇಷಗಳು, ರಕ್ಷಣಾ ಕೊಠಡಿಗಳು & ಚೌಕಾಕಾರದ ಬುರುಜುಗಳು.

8. ರೋಜಡಿ: ರಾಜಕೋಟೆ ಬಳಿ. ಗುಜರಾತ್. ಸಂಶೋಧಕರುಪೋಸಲ್ ಮತ್ತು ಪಾಂಡ್ಯ. ೧೯೭೯ ರಲ್ಲಿ. ಗ್ರಾಮಜೀವನ ಕಂಡುಬರುವ ಏಕೈಕ ನೆಲೆ.

9. ರಾಖಿಗಿರಿ: ಹರ್ಯಾಣ; ೧೯೯೭ ರಲ್ಲಿ ಉತ್ಖನನ. ಪ್ರಸ್ತುತ ಭಾರತದಲ್ಲಿರುವ ಸಿಂಧೂ ನಾಗರೀಕತೆಯ ನೆಲೆಗಳಲ್ಲೆಲ್ಲಾ ಅತಿ ದೊಡ್ಡದು. ಸ್ತ್ರೀಯರ ಸಮಾಧಿ ಅವಶೇಷಗಳು.

10. ಸುಕ್ತಜೆಂಡಾರ್: ಅರಬ್ಬೀ ಸಮುದ್ರದ ತೀರ. ಬಂದರು ಪ್ರದೇಶ. ಸಂಶೋಧಕರುಡೇಲ್ಸ್. ೧೯೬೨ ರಲ್ಲಿ. ಕಲ್ಲು & ಜೇಡಿ ಮಣ್ಣಿನಿಂದ ಕಟ್ಟಿದ ಬೃಹತ್ ಕೋಟೆಗೋಡೆ.

11. ಬಾಲ್ ಕೋಟ್: ಬಂದರು ನೆಲೆ. ಕರಾಚಿ ಬಳಿ, ಪಾಕಿಸ್ತಾನ. ಸಂಶೋಧಕರು – G.F. ಡೇಲ್ಸ್. ೧೯೬೩ ರಲ್ಲಿ. ಸುಟ್ಟ ಇಟ್ಟಿಗೆಗಳು.

12. ಕೋಟ್ ಡಿಜಿ: ಕರಾಚಿ ಬಳಿ; ಪಾಕಿಸ್ತಾನ. ಸಂಶೋಧಕರು – F.A. ಖಾನ್; ೧೯೫೪-೫೫ ರಲ್ಲಿ. ಹರಪ್ಪಾ ಪೂರ್ವದ ಅವಶೇಷಗಳು.

13. ರೂಪರ್: ಅಂಬಾಲ ಜಿಲ್ಲೆ; ಪಂಜಾಬ್. ಸಂಶೋಧಕರು – Y/D. ಶರ್ಮ; ೧೯೫೩. ಮಡಕೆ ಅವಶೇಷಗಳು.

14. ರಂಗಪುರ: ಗುಜರಾತ್. ಕಾಥೇವಾಡ ಜಿಲ್ಲೆ. ಸಂಶೋಧಕರು ಎಸ್.‌ ಆರ್.‌ ರಾವ್. ವರ್ಷ: 1953-54.

VI. ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು:- ಈ ನಾಗರೀಕತೆಯ ಉತ್ಖನನಗಳಲ್ಲಿನ  ಅವಶೇಷಗಳನ್ನು ಆಧರಿಸಿ ವಿದ್ವಾಂಸರು ಸಿಂಧೂ ನಾಗರೀಕತೆಯ ವಿವಿಧ ಲಕ್ಷಣಗಳನ್ನು ಗುರುತಿಸಿದ್ದಾರೆ. ಪ್ರಮುಖ ಲಕ್ಷಣಗಳು ಕೆಳಗಿನಂತಿವೆ.

1. ನಗರ ಯೋಜನೆ: ಇದು ನಾಗರೀಕತೆಯ ಪ್ರಮುಖ ಲಕ್ಷಣಗಳಲ್ಲೊಂದು. ಪ್ರತಿ ನಗರವನ್ನು ಎರಡು ವಿಭಾಗಗಳಾಗಿ ವಿಂಗಡಿಸಿದ್ದು, ಕೇಂದ್ರ ಭಾಗದಲ್ಲಿ ಆಡಳಿತ ಮತ್ತು ಧಾರ್ಮಿಕ ಕಟ್ಟಡಗಳು ನಿರ್ಮಾಣಗೊಂಡಿದ್ದರೆ, ಅದರ ಹೊರವಲಯದಲ್ಲಿ ವಾಸಸ್ಥಾನಗಳು ಇದ್ದವು.

ಹರಪ್ಪಾ ಮತ್ತು ಮೊಹೆಂಜೊ-ದಾರೊ ನಗರಗಳಲ್ಲಿ ಮುಖ್ಯ ಕಟ್ಟಡಗಳಿಗೆ ರಕ್ಷಣಾಗೋಡೆಗಳಿದ್ದು, ಕಾಲಿಬಂಗನ್ನಗರದಲ್ಲಿ ಎರಡೂ ವಲಯಗಳಿಗೂ ರಕ್ಷಣಾಗೋಡೆಗಳನ್ನು ನಿರ್ಮಿಸಲಾಗಿದೆ. ಸಾಮಾನ್ಯವಾಗಿ ನಗರಗಳು ನೇರ ಅಥವಾ ಸಮಾನಾಂತರ ಚತುರ್ಭುಜಗಳ ಆಕೃತಿಯಲ್ಲಿ ನಿರ್ಮಾಣಗೊಂಡಿರುತ್ತಿದ್ದವು. ಸುಟ್ಟ ಮತ್ತು ಅರೆಸುಟ್ಟ ಇಟ್ಟಿಗೆಗಳನ್ನು ನಗರಗಳ ನಿರ್ಮಾಣಕ್ಕೆ ಬಳಸಿದ್ದನ್ನು ಗಮನಿಸಿದರೆ ಇವರಿಗೆ ಇಟ್ಟಿಗೆ ತಯಾರಿಕೆಯ ಕೌಶಲ್ಯ ತಿಳಿದಿತ್ತು ಎಂಬುದು ಸ್ಪಷ್ಟವಾಗುತ್ತದೆಮೊಹೆಂಜೊದಾರೊದಲ್ಲಿನ ಮುಖ್ಯನಗರದ ಭಾಗದಲ್ಲಿರುವ ಬೃಹತ್ಈಜುಕೊಳವು ಅತ್ಯಂತ ಆಕರ್ಷಕವಾದ ರಚನೆಯಾಗಿದೆ. ಇದನ್ನು ಧಾರ್ಮಿಕ ಸಮಾರಂಭಗಳ ಸಂದರ್ಭದಲ್ಲಿ ಪವಿತ್ರಸ್ನಾನ ಮಾಡುವ ಸಲುವಾಗಿ ಬಳಸಲಾಗುತ್ತಿದ್ದಿತು ಎಂದು ಊಹಿಸಲಾಗಿದೆ. ಈಜುಕೊಳವು ಸು 40 ಅಡಿ ಉದ್ದ, 23 ಅಡಿ ಅಗಲ ಮತ್ತು 8 ಅಡಿಗಳಷ್ಟು ಆಳವಿದೆ. ಇದರ ಉತ್ತರ ಮತ್ತು ದಕ್ಷಿಣದ ಮೂಲೆಗಳಲ್ಲಿ ಮೆಟ್ಟಿಲುಗಳಿವೆ. ನೀರನ್ನು ತುಂಬಿಸಲು ಮತ್ತು ಹೊರ ಹಾಕಲು ವ್ಯವಸ್ಥೆಗಳಿವೆ. ಈಜುಕೊಳದ ಪಶ್ಚಿಮಕ್ಕೆ ವಿಶಾಲವಾದ ಉಗ್ರಾಣದ ಅವಶೇಷಗಳು ಕಂಡುಬಂದಿವೆ. ಇದರ ಮತ್ತೊಂದು ಪಕ್ಕದಲ್ಲಿರುವ ದೊಡ್ಡ ಕಟ್ಟಡದ ಅವಶೇಷಗಳು ಉನ್ನತಾಧಿಕಾರಿಯ ನಿವಾಸವಿರಬಹುದೆಂದು ಗುರ್ತಿಸಲಾಗಿದೆ. ಇಲ್ಲಿನ ಮತ್ತೊಂದು ಪ್ರಮುಖ ರಚನೆಯೆಂದರೆ ಬೃಹತ್ಸಭಾಭವನದಂತಹ ಕಟ್ಟಡ.

ಹರಪ್ಪಾದಲ್ಲಿ ನಿರ್ದಿಷ್ಟ ಸಂಖ್ಯೆಯ ಉಗ್ರಾಣಗಳು ಆರು ಸಂಖ್ಯೆಯ ಎರಡು ಸಾಲುಗಳಲ್ಲಿ ಕಂಡುಬಂದಿದ್ದು, ನಡುವೆ ವಿಶಾಲವಾದ ಜಾಗವನ್ನು ಬಿಡಲಾಗಿದೆ. ಕಾಲಿಬಂಗನ್ಮತ್ತು ಲೋಥಾಲ್ಗಳಲ್ಲಿನ ಬಹುಮುಖ್ಯವಾದ ಅನ್ವೇಷಣೆಗಳೆಂದರೆ ಅಗ್ನಿಕುಂಡಗಳು.

ಹೊರವಲಯದ ನಗರವು ಪೂರ್ವ-ಪಶ್ಚಿಮ ಮತ್ತು ಉತ್ತರ-ದಕ್ಷಿಣವಾಗಿ ಹರಡಿಕೊಂಡಿದ್ದು, ಮುಖ್ಯರಸ್ತೆ ಮತ್ತು ಉಪರಸ್ತೆಗಳು ನೇರವಾಗಿದ್ದು, ಲಂಬಕೋನಗಳಲ್ಲಿ ಸಂಧಿಸುವಂತೆ ನಿರ್ಮಾಣವಾಗಿರುವ ಕಾರಣ ಚದುರಂಗದ ಹಾಸಿನಂತೆ ಕಾಣುತ್ತವೆ. ಆಯಾತಾಕಾರದ ನಗರ ಯೋಜನೆಯು ನಾಗರೀಕತೆಯ ವಿಶಿಷ್ಟ ರಚನೆಯಾಗಿದೆ.

ಮುಖ್ಯರಸ್ತೆಗಳು ಮೇಲುಹೊದಿಕೆಗಳಿಂದ ಕೂಡಿರುವ ಒಳಚರಂಡಿಗಳಿಂದ ಕೂಡಿದ್ದು, ಚರಂಡಿಗಳಿಗೆ ನಿಯಮಿತವಾದ ಅಂತರದಲ್ಲಿ ಸುಟ್ಟ ಮಣ್ಣಿನ ಮಡಕೆಗಳಂತಹ ರಚನೆಗಳಿರುವ ಆಳುಗುಂಡಿಗಳನ್ನು ನಿರ್ಮಿಸಲಾಗಿದೆ.

ಬೇರೆ-ಬೇರೆ ಗಾತ್ರದ ಮನೆಗಳು ಇಲ್ಲಿನ ನಗರಗಳಲ್ಲಿ ವಿವಿಧ ಆರ್ಥಿಕ ಅಂತಸ್ತುಳ್ಳ ಜನರಿದ್ದರೆಂದು ತಿಳಿಸುತ್ತವೆ. ಹರಪ್ಪಾ ಮತ್ತು ಮೊಹೆಂಜೋದಾರೊಗಳಲ್ಲಿ ಸಮಾಂತರ ಸಾಲುಗಳಲ್ಲಿ ನಿರ್ಮಿಸಿರುವ ಎರಡು ಕೋಣೆಗಳ ಮನೆಗಳು ಬಡಜನರಿಂದ ಉಪಯೋಗಿಸಲ್ಪಡುತ್ತಿದ್ದವು ಮತ್ತು ದೊಡ್ಡ ಗಾತ್ರದ ಮನೆಗಳು ಹೆಚ್ಚು ಕೋಣೆಗಳಿಂದ ಕೂಡಿದ್ದುಶ್ರೀಮಂತರಿಂದ ಬಳಸಲ್ಪಡುತ್ತಿದ್ದವು ಎನ್ನಲಾಗಿದೆ. ಪ್ರತಿ ಮನೆಯು ಪ್ರತ್ಯೇಕ ನೀರಿನ ಬಾವಿ ಮತ್ತು ಶೌಚಾಲಯಗಳಿಂದ ಕೂಡಿವೆ.

ಮನೆಯ ಶೌಚಾಲಯಗಳು ಕೊಳವೆಗಳ ಮೂಲಕ ಮುಖ್ಯರಸ್ತೆಯ ಒಳಚರಂಡಿಗಳಿಗೆ ಸಂಪರ್ಕಿಸಲ್ಪಟ್ಟಿವೆ. ಒಳಚರಂಡಿ ವ್ಯವಸ್ಥೆಯು ನಾಗರೀಕತೆಯ ಬಹುಮುಖ್ಯ ಸಾಧನೆಯಾಗಿದ್ದು, ನಾಗರೀಕ ಆಡಳಿತ ವ್ಯವಸ್ಥೆಯ ಅಸ್ಥಿತ್ವದ ಬಗ್ಗೆ ಪುರಾವೆ ಒದಗಿಸುತ್ತದೆ.

ಮನೆಗಳು ಕಲ್ಲುಗಳ ಬದಲು ಸುಟ್ಟ ಅಥವಾ ಕಚ್ಚಾ ಇಟ್ಟಿಗೆಗಳಿಂದ ನಿರ್ಮಿಸಲ್ಪಟ್ಟಿದ್ದವು. ಶೌಚಾಲಯಗಳು ಮತ್ತು ಒಳಚರಂಡಿಗಳು ಪಕ್ಕಾ ಅಥವಾ ಸುಟ್ಟ ಇಟ್ಟಿಗೆಗಳಿಂದ ನಿರ್ಮಿಸಿದ್ದು ನೀರು ನಿರೋಧಕವಾದ ಜಿಪ್ಸಂ ಅನ್ನು ಇದಕ್ಕೆ ಬಳಸಲಾಗಿದೆ.

 

2. ಕೃಷಿ:  ಹರಪ್ಪನ್ಜನರು ಗೋಧಿ ಮತ್ತು ಬಾರ್ಲಿಗಳಂತಹ ಧಾನ್ಯಗಳು, ಬಟಾಣಿ, ಎಳ್ಳು ಮತ್ತು ಸಾಸಿವೆಯಂತಹ ಎಣ್ಣೆ ಬೆಳೆಗಳನ್ನು ಬೆಳೆಯುತ್ತಿದ್ದರು. ಲೋಥಾಲ್ಮತ್ತು ರಂಗಪುರಗಳಲ್ಲಿ ಸಾ... ೧೮೦೦ ವರ್ಷಗಳಷ್ಟು ಹಿಂದಿನ ಬತ್ತದ ಅವಶೇಷಗಳು ಕಂಡುಬಂದಿವೆ. ಹತ್ತಿಯ ಬಳಕೆ ಇವರಿಗೆ ತಿಳಿದಿತ್ತು ಮತ್ತು ಇದು ಅತ್ಯಂತ ಪ್ರಾಚೀನ ಕುರುಹಾಗಿದೆ. ಪಂಜಾಬ್ಮತ್ತು ಸಿಂಧ್ಪ್ರಾಂತ್ಯಗಳಲ್ಲಿನ ನದಿ ಪ್ರವಾಹಗಳು ನೀರಾವರಿಗಾಗಿ ಬಳಸಲ್ಪಡುತ್ತಿದ್ದವು. ಮರದ ನೇಗಿಲಿನಂತಹ  ಸಾಧನದಿಂದ ಉಳುಮೆ ಮಾಡಿದ ಕುರುಹುಗಳು ಕಂಡುಬಂದಿವೆ.

ಅ. ಪಶುಪಾಲನೆ:- ಕೃಷಿಯ ಜೊತೆಗೆ ಪಶುಪಾಲನೆಯೂ ಮುಖ್ಯ ಕಸುಬಾಗಿತ್ತು. ಕುರಿ & ಆಡುಗಳ ಜೊತೆಗೆ ಡುಬ್ಬದ ಗೂಳಿ, ಎಮ್ಮೆ ಮತ್ತು ಆನೆಗಳು ಸಾಕುಪ್ರಾಣಿಗಳಾಗಿದ್ದವು. ಒಂಟೆ ತಿಳಿದಿದ್ದರೂ ಅದು ಅಪರೂಪವಾಗಿತ್ತು. ಆದರೆ ಇವರಿಗೆ ಕುದುರೆ ತಿಳಿದಿರಲಿಲ್ಲ.

 

3.  ಆರ್ಥಿಕತೆ:  ಹರಪ್ಪಾ ಜನರು ವ್ಯಾಪಾರ ಮತ್ತು ವಾಣಿಜ್ಯ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಕೊಂಡಿದ್ದರು. ಲಬ್ಯ ಅವಶೇಷಗಳಿಂದ ಒಳನಾಡು ಮತ್ತು ಸಮುದ್ರದ ಮೂಲಕ ನಡೆಯುತ್ತಿದ್ದ ವಿದೇಶೀ ವ್ಯಾಪಾರ ಅಸ್ಥಿತ್ವದಲ್ಲಿತ್ತು. ಟೆರ್ರಾಕೋಟಾ ಆಟಿಕೆಗಳಲ್ಲಿ ಕಂಡುಬಂದಿರುವ ಹಡಗುಗಳು ಮತ್ತು ಲೋಥಾಲ್ನಲ್ಲಿರುವ ವಿಶಾಲವಾದ ಹಡಗುಕಟ್ಟೆ ಇದಕ್ಕೆ ಸಾಕ್ಷಿಯಾಗಿದೆ. ನಾಣ್ಯಗಳ ಬಳಕೆ ಇದ್ದ ಬಗ್ಗೆ ಸಾಕ್ಷ್ಯಗಳು ಲಭ್ಯವಿಲ್ಲದ ಕಾರಣ ವಿನಿಮಯ ಪದ್ಧತಿಯು ವ್ಯಾಪಾರದಲ್ಲಿ ಬಳಕೆಯಲ್ಲಿದ್ದಿರಬೇಕು.

ಸ್ಥಳೀಯವಾಗಿ ಸಿಗದಿದ್ದ ತಾಮ್ರ & ಚಿನ್ನ (ದಕ್ಷಿಣ ಭಾರತ, ಅರೇಬಿಯಾ, ಬಲೂಚೀಸ್ಥಾನ, ಅಫ್ಘಾನಿಸ್ಥಾನ ಮತ್ತು ಪರ್ಷಿಯಾಗಳಿಂದ), ಬೆಳ್ಳಿ (ಅಫ್ಘಾನಿಸ್ಥಾನ ಮತ್ತು ಇರಾನ್ಗಳಿಂದ) ಆಮದು ಮಾಡಿಕೊಳ್ಳುತ್ತಿದ್ದರು. ವ್ಯಾಪಾರಿ ವಸ್ತುಗಳ ಮೇಲೆ ಮುದ್ರೆ ಹಾಕಲು ಬಳಸುತ್ತಿದ್ದ ಮುದ್ರೆಗಳು ಮತ್ತು ವ್ಯಾಪಾರಿಗಳು ಬಳಸುತ್ತಿದ್ದ ಇನ್ನಿತರ ವಸ್ತುಗಳು ಮೆಸಪಟೋಮಿಯಾದಲ್ಲಿ ಕಂಡುಬಂದಿವೆ.

ಮೆಸಪಟೋಮಿಯಾದಲ್ಲಿನ ಬರವಣಿಗೆಗಳಲ್ಲಿ  ಅಲ್ಲಿನ ಜನರು ವಿದೇಶೀ   ವ್ಯಾಪಾರ ನಡೆಸುತ್ತಿದ್ದ ಬಗ್ಗೆ ಮಾಹಿತಿ ನೀಡಿವೆ ಮತ್ತು ಭಾರತದ ಸೌರಾಷ್ಟ್ರ ಮತ್ತು ಮಹಾರಾಷ್ಟ್ರಗಳ ಭಾಗಗಳನ್ನು ಅವರು ಮೆಲುಹಾ ಎಂದು ಕರೆಯುತ್ತಿದ್ದರು.

ಇವರ ಪ್ರಮುಖ ರಫ್ತು ವಸ್ತುಗಳೆಂದರೆ, ಕೃಷಿ ಉತ್ಪನ್ನಗಳು, ಸಿದ್ಧವಸ್ತುಗಳು ಅಂದರೆ ಹತ್ತಿಯ ಉತ್ಪನ್ನಗಳು, ಮಣಿಗಳು, ಮಡಕೆಗಳು, ಕಪ್ಪೆಚಿಪ್ಪಿನ ಉತ್ಪನ್ನಗಳು ಮತ್ತು ಮೂಳೆಗಳಿಂದ ತಯಾರಿಸಿದ ಉತ್ಪನ್ನಗಳು.

 

4. ಅಳತೆ ಮತ್ತು ತೂಕದ ಮಾಪಕಗಳು:  ಅಳತೆ ಮತ್ತು ತೂಕಗಳಲ್ಲಿ ಇವರು ಹೆಚ್ಚಿನ ಪರಿಣತಿ ಸಾಧಿಸಿದ್ದರು. > ಸಣ್ಣ ಮತ್ತು ದೊಡ್ಡ ಗಾತ್ರದ ವಸ್ತುಗಳನ್ನು ತೂಕ ಮಾಡಲು ಪ್ರತ್ಯೇಕ ತೂಕದ ಬೊಟ್ಟು ಅಥವಾ ಕಲ್ಲುಗಳನ್ನು ಬಳಸುತ್ತಿದ್ದರು. ಸಣ್ಣ ಪ್ರಮಾಣದ ಅಳತೆ ಮಾಡುವಾಗ ತೂಕದ ಮೂಲಮಾನಗಳು ದ್ವಿಮಾನ ಪದ್ಧತಿಯಂತೆ 1, 2, 4, 8, 16, 32 ರಿಂದ 64 ಮತ್ತು 160 ವರೆಗೆ ಎಣಿಕೆ ಮಾಡಲಾಗುತ್ತಿತ್ತು ನಂತರ 160, 320, 640, 1,600, 3,200 ಇತ್ಯಾದಿಗಳಂತೆ ದ್ವಿಗುಣವಾಗುತ್ತಿದ್ದವು.

 

5. ಕರಕುಶಲ ಕಲೆ:  ಹರಪ್ಪಾ ಜನರು ಮಾಡುತ್ತಿದ್ದ ಕಸುಬುಗಳಲ್ಲಿ ಹತ್ತಿ ಮತ್ತು ಉಣ್ಣೆಯಿಂದ ನೂಲು ತೆಗೆಯುವುದು, ನೇಯುವುದು, ಕುಂಬಾರಿಕೆ, ಮಣಿಗಳ ತಯಾರಿಕೆ ಮತ್ತು ಮುದ್ರೆಗಳ ತಯಾರಿಕೆಯಂತಹ ವಿಭಿನ್ನ ವೃತ್ತಿಗಳಿಂದ ಕೂಡಿತ್ತು. ಲೋಹಗಾರಿಕೆಯಲ್ಲಿ ಅವರು ಹೆಚ್ಚು ಪರಿಣತಿ ಸಾದಿಸಿದ್ದರು. ಅವರು ಉತ್ತಮವಾದ ಚಿನ್ನದ ಆಭರಣಗಳನ್ನು ತಯಾರಿಸುವುದರ ಜೊತೆಗೆ ಕಂಚಿನ ಉಪಕರಣಗಳಲ್ಲದೆ ಖಡ್ಗಗಳು, ಉಳಿಗಳು ಮತ್ತು ಚಾಕುಗಳನ್ನು ವಿವಿಧ ಲೋಹಗಳಿಂದ ತಯಾರಿಸಿದ್ದರು. ಮೊಹೆಂಜೊದಾರೊದಲ್ಲಿನ ಗಡ್ಡಧಾರಿಯಾದ ಮನುಷ್ಯನ ಮೂರ್ತಿಯು ಅವರ ಕಲೆಗಾರಿಕೆಗೆ ಪ್ರಸಿದ್ಧವಾಗಿದೆ. ನೃತ್ಯಭಂಗಿಯ ಕಂಚಿನ ಶಿಲ್ಪವು ಸಹಾ ಅವರ ವಿಗ್ರಹ ತಯಾರಿಕೆಯ ಕೌಶಲ್ಯವನ್ನು ಬಿಂಬಿಸುತ್ತದೆ.

 

6. ವಿಜ್ಞಾನ:  ಹರಪ್ಪಾ ಜನರು ಗಣಿಗಾರಿಕೆ, ಲೋಹದ ಕೆಲಸ ಮತ್ತು ಕಟ್ಟಡ ನಿರ್ಮಾಣದಲ್ಲಿ ವಿಶೇಷ ಪರಿಣತಿ ಸಾಧಿಸಿದ್ದರು. ಅವರು ವಿವಿಧ ಅಂತಸ್ತುಗಳ ಮನೆಗಳನ್ನು ನಿರ್ಮಾಣ ಮಾಡಿರುವುದೇ ಇದಕ್ಕೆ ಸಾಕ್ಷಿಯಾಗಿದೆ. ಅವರು ಇಂದಿನವರು ನೀರು ನಿರೋಧಕದಂತೆ ಬಳಸುವ ಸಿಮೆಂಟ್ರೀತಿಯ ಜಿಪ್ಸಂ ಬಳಕೆ ಕಲಿತಿದ್ದರು. ಅಲ್ಲದೇ ದೀರ್ಘಕಾಲಿಕವಾಗಿ ಉಳಿಯಬಲ್ಲ ಬಣ್ಣಗಳ ತಯಾರಿಕೆಯೂ ಅವರಿಗೆ ತಿಳಿದಿತ್ತು. ಕೆಲವು ಶವಗಳಲ್ಲಿನ ತಲೆಬುರುಡೆಗಳಲ್ಲಿ ಕೊರೆದಿರುವ ರಂಧ್ರಗಳು ಬಹುಶಃ ಶಸ್ತ್ರಚಿಕಿತ್ಸೆಗೆ ಮಾಡಿರಬಹುದಾದವುಗಳು ಎಂಬುದು ವಿದ್ವಾಂಸರ ಅಭಿಪ್ರಾಯವಾಗಿದೆ.

 

7. ಸಿಂಧೂ ಲಿಪಿ: ಹರಪ್ಪಾ ಲಿಪಿಯು ಇದುವರೆಗೂ ನಿಶ್ಚಿತವಾಗಿ ಓದಲಾಗಿಲ್ಲವಾದರೂ ಅದು ಪರ್ಯಾಯ ಸಾಲುಗಳಲ್ಲಿ ಎಡದಿಂದ ಬಲಕ್ಕೆ ಮತ್ತು ಬಲದಿಂದ ಎಡಕ್ಕೆ ಬರೆಯುವಂತಹ ಲಿಪಿಯಾಗಿದೆ. ಅಕ್ಷರ ಮತ್ತು ಚಿತ್ರಗಳಿಂದ ಕೂಡಿರುವ ಅದನ್ನು ಕೆಲವು ವಿದ್ವಾಂಸರು ಚಿತ್ರಲಿಪಿ ಎಂದು ಕರೆದಿದ್ದಾರೆ. ಇದರ ಹಿಂದಿನ ಮತ್ತು ನಂತರದ ಲಿಪಿಗಳು ಪತ್ತೆಯಾಗಿರದ ಕಾರಣ ಇದರ ಅರ್ಥೈಸುವಿಕೆ ಇನ್ನೂ ಸಾದ್ಯವಾಗಿಲ್ಲ. ಹರಪ್ಪಾ ಲಿಪಿ ಕುರಿತಂತೆ ವಿದ್ವಾಂಸರ ಅಭಿಪ್ರಾಯಗಳು ಕೆಳಗಿನಂತಿವೆ:

ಅ. ಮಹಾದೇವನ್ – “ಹರಪ್ಪಾ ಲಿಪಿಯು ಸಂಕೇತಗಳಿಂದ ಕೂಡಿದ ದ್ರಾವಿಡ ಲಿಪಿಯಾಗಿದೆಎಂದಿದ್ದಾರೆ.

ಆ. ಎ. ಎಲ್. ಬಾಷ್ಯಂ – “ಪ್ರಾಚೀನ ಸುಮೇರಿಯನ್ ಲಿಪಿಯೊಂದಿಗೆ ಹೋಲಿಕೆ ಹೊಂದಿದೆಎಂದಿದ್ದಾರೆ.

ಇ. ಹೆರಾಸ್ & ಮಾರ್ಷಲ್ – “ ಭಾಷೆಯು ದ್ರಾವಿಡರ ಉಪಭಾಷೆ ತಮಿಳನ್ನು ಹೋಲುತ್ತದೆಎಂದಿದ್ದಾರೆ.

ಈ. ಲ್ಯಾಂಗ್ಡನ್, ಪ್ರಾಣನಾಥ & ಹಂಟರ್:- “ ಭಾಷೆಯು ಸಂಸ್ಕೃತ ಇಲ್ಲವೇ ಬ್ರಾಹ್ಮಿ ಲಿಪಿಯ ಮೂಲವಾಗಿರಬಹುದುಎಂದಿದ್ದಾರೆ.

ಉ. ಬಿ. ವಿ. ಸುಬ್ರಾಯಪ್ಪ – “ಇದೊಂದು ಅಂಕಸೂಚಕ ಭಾಷೆಯಾಗಿದೆ; ಭಾಷೆ ಸೂಚಕವಲ್ಲಎಂದಿದ್ದಾರೆ

ಆದರೆ ಪ್ರಸ್ತುತ ಲಿಪಿಯಲ್ಲಿನ ಬಹುಸಂಖ್ಯಾತ ಚಿತ್ರಬರವಣಿಗೆಗಳ ಕಾರಣ ಇದೊಂದು ಚಿತ್ರಲಿಪಿ ಎನ್ನಲಾಗಿದೆ

 

8.  ಶಿಕ್ಷಣ: ಕರಕುಶಲ ವಸ್ತುಗಳ ತಯಾರಿಕೆ, ಲಿಪಿಯ ಬಳಕೆ, ವಿದೇಶಿ ವ್ಯಾಪಾರ, ಅಳತೆ ಮತ್ತು ತೂಕದ ಸಾಧನಗಳ ಬಳಕೆಯನ್ನು ಗಮನಿಸಿದರೆ ಆ ಕಾಲದ ಜನರು ಪೀಳಿಗೆಯಿಂದ ಪೀಳಿಗೆಗೆ ತಮಗೆ ತಿಳಿದಿದ್ದ ಕಲೆ, ಲಿಪಿ ಮತ್ತಿತರ ಕೌಶಲ್ಯಗಳನ್ನು ವ್ಯವಸ್ಥಿತವಾಗಿ ಕಲಿಸುವುದರ ಮೂಲಕ ವರ್ಗಾಯಿಸುತ್ತಿದ್ದರು ಎಂಬುದು ಸ್ಪಷ್ಟವಾಗುತ್ತದೆ. ಆದರೆ ಶಿಕ್ಷಣಕ್ಕಾಗಿ ಯಾವ ರೀತಿಯ ಕಟ್ಟಡಗಳನ್ನು ಬಳಸುತ್ತಿದ್ದರು ಎಂಬುದು ನಿರ್ದಿಷ್ಟವಾಗಿ ತಿಳಿದು ಬಂದಿಲ್ಲ. ಸಾಮಾನ್ಯವಾಗಿ ಮನೆಗಳಲ್ಲಿಯೇ ಅವರ ಶಿಕ್ಷಣ ನಡೆಯುತ್ತಿತ್ತೆ ಎಂಬುದು ಜಿಜ್ಞಾಸೆಯ ಸಂಗತಿಯಾಗಿದೆ.

 

9. ಧರ್ಮ:  ಕಾಲಿಬಂಗನ್ನಲ್ಲಿ ಕಂಡುಬಂದಿರುವ ಅಗ್ನಿಕುಂಡಗಳ ಹೊರತು ಯಾವುದೇ ಮತ ಅಥವಾ ಧರ್ಮಕ್ಕೆ ಸೇರಿದ ದೇವತೆ, ಆಚರಣೆಯ ಕುರುಹುಗಳು ನಾಗರೀಕತೆಯ ಅವಶೇಷಗಳಲ್ಲಿ ಕಂಡುಬಂದಿಲ್ಲ. ಆದರೆ ವಿವಿಧ ಉತ್ಖನನಗಳಲ್ಲಿ ಕಂಡುಬಂದಿರುವ ಅವಶೇಷಗಳು ಪ್ರಸ್ತುತ ಹಿಂದೂಗಳು ಅನುಸರಿಸುವ ವಿವಿಧ ಧಾರ್ಮಿಕ ಆಚರಣೆಗಳನ್ನು ಅಂದರೆ, ಮಾತೃದೇವತೆಯ ಆರಾಧನೆ, ಲಿಂಗದ ಆರಾಧನೆ, ಪ್ರಾಣಿಪೂಜೆ ಮತ್ತು ಮರಗಳ ಆರಾಧನೆಯ ಬಗ್ಗೆ ಮಾಹಿತಿ ಒದಗಿಸುತ್ತವೆ. ಮಾತೃದೇವತೆಯು ಸ್ತ್ರೀದೇವತೆಗಳಲ್ಲಿ ಪ್ರಮುಖವಾಗಿದ್ದು, ಹರಪ್ಪಾದಲ್ಲಿನ ಒಂದು ಮುದ್ರೆಯಲ್ಲಿ ಸ್ತ್ರೀಯ ಗರ್ಭದಿಂದ ಗಿಡವೊಂದು ಬೆಳೆದಿರುವಂತೆ ಚಿತ್ರಿಸಿದ್ದು, ಅದು ಭೂಮಿಯ ಆರಾಧನೆಯನ್ನು ಸ್ತ್ರೀರೂಪದಲ್ಲಿ ಮಾಡುತ್ತಿದ್ದುದನ್ನು ಸೂಚಿಸುತ್ತದೆ. ಮಾತೃದೇವತೆಯ ಮಣ್ಣಿನ ಮೂರ್ತಿಗಳು ಕಂಡುಬಂದಿದ್ದು, ಅವರು ಮಾತೃದೇವತೆಯನ್ನು ಸಂತಾನ ಕರುಣಿಸುವ ದೇವತೆಯಾಗಿ ಆರಾಧಿಸುತ್ತಿದ್ದರು ಎನ್ನಲಾಗಿದೆ. ಧ್ಯಾನಾಸಕ್ತನಾಗಿ ಕುಳಿತ ಪುರುಷ ಚಿತ್ರವು ಮುದ್ರೆಯ ಮೇಲೆ ಕಂಡುಬಂದಿದ್ದು, ಅದರ ಸುತ್ತಲೂ ವಿವಿಧ ಪ್ರಾಣಿಗಳ ಚಿತ್ರಗಳನ್ನು ಕೆತ್ತಲಾಗಿದೆ. ಇದು ಪಶುಪತಿ ಶಿವನನ್ನು ಹೋಲುತ್ತದೆ. ಅಶ್ವತ್ಥ ವೃಕ್ಷವು ಅವರಿಗೆ ಪವಿತ್ರವಾಗಿದ್ದಿತು. ಅಂತೆಯೇ ಲಿಂಗರೂಪದ ವಿವಿಧ ರಚನೆಗಳು ನೆಲೆಗಳಲ್ಲಿ ಕಂಡುಬಂದಿವೆ.

ಅ. ಶವಸಂಸ್ಕಾರ:  ಹರಪ್ಪಾ ಜನರು ವಿವಿಧ ರೀತಿಯ ಶವಸಂಸ್ಕಾರ ಪದ್ಧತಿಗಳನ್ನು ಬಳಸುತ್ತಿದ್ದರು. ಸಂಪೂರ್ಣವಾಗಿ ಶವವನ್ನು ಹೂಳುವುದು, ಸತ್ತವರ ದೇಹವನ್ನು ಪ್ರಾಣಿ ಅಥವಾ ಪಕ್ಷಿಗಳಿಗೆ ತಿನ್ನಲು ನೀಡಿ ನಂತರ ಉಳಿದ ಅಸ್ತಿಗಳನ್ನು ಹೂಳುವ ಭಾಗಶಃ ಶವಸಂಸ್ಕಾರ ಅವರಿಗೆ ತಿಳಿದಿತ್ತು. ಸಾಮಾನ್ಯವಾಗಿ ಶವಗಳನ್ನು ಉತ್ತರ-ದಕ್ಷಿಣವಾಗಿ ಹೂಳುತ್ತಿದ್ದರು. ಸಮಾದಿಗಳಲ್ಲಿ ಸತ್ತವರು ಬಳಸುತ್ತಿದ್ದ ವಸ್ತುಗಳು ಕಂಡುಬಂದಿರುವ ಕಾರಣ ಸಾವಿನ ನಂತರದ ಜೀವನ ಅಥವಾ ಪುನರ್ಜನ್ಮದಲ್ಲಿ ನೆಲೆಯ ಜನರಿಗೆ ನಂಬಿಕೆ ಇತ್ತೆಂದು ತಿಳಿದು ಬರುತ್ತದೆ. ಲೋಥಾಲ್ನಲ್ಲಿ ಸ್ತ್ರೀ-ಪುರುಷರಿಬ್ಬರನ್ನು ಒಂದೇ ಸಮಾದಿಯಲ್ಲಿ ಹೂತಿರುವುದು ಗಮನಾರ್ಹವಾಗಿದೆ.

 

VII. ಅವನತಿ: ಈ ನಾಗರೀಕತೆಯ ಅವನತಿ ಹೇಗೆ ಆಗಿರಬಹುದು ಎಂಬುದರ ಬಗ್ಗೆ ವಿದ್ವಾಂಸರಲ್ಲಿ ಏಕಾಭಿಪ್ರಾಯವಿಲ್ಲ. ಸಿಂಧೂ ನದಿ ಮತ್ತು ಅದರ ಉಪನದಿಗಳು ಪ್ರವಾಹಗಳಿಂದ ತುಂಬಿ ಹರಿಯುವಾಗ ಅವುಗಳ ಪಾತ್ರ ಬದಲಾವಣೆಯಿಂದ ಇಲ್ಲಿನ ನಗರಗಳು ನಾಶವಾಗಿರಬಹುದು ಇಲ್ಲವೇ ಭೂಕಂಪನಗಳಿಂದ ಸಂಪೂರ್ಣ ನಗರಗಳು ಒಮ್ಮೆಲೆ ಭೂಮಿಯೊಳಗೆ ಹೂತುಹೋಗಿರುವ ಸಾಧ್ಯತೆಗಳಿವೆ ಎಂಬುದು ಕೆಲ ವಿದ್ವಾಂಸರ ಅಭಿಪ್ರಾಯ. ಅಲ್ಲದೇ ಹರಪ್ಪಾ ಮತ್ತು ಮೊಹೆಂಜೊ-ದಾರೊ ನಗರಗಳಲ್ಲಿ ಅಸ್ತ-ವ್ಯಸ್ತವಾಗಿ ಬಿದ್ದಿರುವ ಅಸ್ಥಿಪಂಜರಗಳು ಮತ್ತು ಅವುಗಳ ಮೇಲೆ ಉಂಟಾಗಿರುವ ಶಸ್ತ್ರಾಸ್ತ್ರಗಳ ಏಟುಗಳ ಆಧಾರದಲ್ಲಿ ಮಾರ್ಟಿಮರ್ ವೀಲರ್ ಈ ನಾಗರೀಕತೆಯು ಪರಕೀಯರ ದಾಳಿಗಳಿಂದ ಆಗಿರಬಹುದು ಎಂದು ಅಭಿಪ್ರಾಯಪಡುತ್ತಾರೆ. ಇದಕ್ಕೆ ಪೂರಕವಾಗಿ ಋಗ್ವೇದದಲ್ಲಿ ಬರುವ ಪುರಂದರ ಎಂಬ ಪದವು ಇಂದ್ರನಿಗೆ ಬಳಕೆಯಾಗಿದ್ದು, ಅವನು ತನ್ನ ಆಯುಧಗಳಿಂದ ನಗರ ನಾಶ ಮಾಡಿದನೆಂಬ ಉಲ್ಲೇಖಗಳನ್ನು ಕೆಲವು ವಿದ್ವಾಂಸರು ನೀಡುತ್ತಾರೆ. ಅಮಲಾನಂದ ಘೋಷ್ ಎಂಬುವರು ಕಾಲಾಂತರದಲ್ಲಿ ಅಧಿಕ ಕೃಷಿ ಮತ್ತು ನಗರ ನಿರ್ಮಾಣದ ಸಲುವಾಗಿ ಸುತ್ತಲಿನ ಕಾಡು ನಾಶವಾದ ಕಾರಣದಿಂದಾಗಿ  ಬರ-ಕ್ಷಾಮಗಳಿಂದ ಅಂದರೆ ಜಲ-ವೈಜ್ಞಾನಿಕ ಬದಲಾವಣೆಗಳಿಂದ ಈ ನಾಗರೀಕತೆ ನಾಶವಾಗಿರಬಹುದು ಎಂದಿದ್ದಾರೆ.

 

VIII. ಉಪಸಂಹಾರ:- ಇಂದಿಗೆ ಸುಮಾರು ಐದು ಸಾವಿರ ವರ್ಷಗಳಿಗೂ ಹಿಂದೆ ಆಗಿ ಹೋದ ಸಿಂಧೂ ನಾಗರೀಕತೆಯು ಸಮಕಾಲೀನ ನಾಗರೀಕತೆಗಳಲ್ಲೆಲ್ಲಾ ಉತ್ಕೃಷ್ಟವಾದುದು ಎಂದು ಅದರ ಪ್ರಮುಖ ಲಕ್ಷಣಗಳ ಅಧ್ಯಯನದಿಂದ ಅರ್ಥ ಮಾಡಿಕೊಳ್ಳಬಹುದು. ಉತ್ಖನನದ ನೂರು ವರ್ಷಗಳ ನಂತರವೂ ಅದರ ಅವಶೇಷಗಳು ಸಂಶೋಧಕರಲ್ಲಿ ಕುತೂಹಲ ಮೂಡಿಸಿ ಹೊಸ ಸಂಶೋಧನೆಗಳಿಗೆ ಆಸಕ್ತಿ ಕೆರಳಿಸುತ್ತಿರುವುದು ಆ ನಾಗರೀಕತೆಯ ಮಹತ್ವವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದಿದೆ.


****

Comments

Popular posts from this blog

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧

ಸಾಹಿತ್ಯಾಧಾರಗಳು - Literary Sources