ಕರ್ನಾಟಕದ ಪ್ರಮುಖ ಶಾಸನಗಳು
ಅಶೋಕನ ಬಂಡೆ ಶಾಸನಗಳು
ಚಕ್ರವರ್ತಿ ಅಶೋಕನ ಬಂಡೆ ಶಾಸನಗಳು ದೊರೆತಿರುವ ಮುಖ್ಯವಾದ
ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ಅಶೊಕನು ಕ್ರಿಸ್ತಪೂರ್ವ 272-232 ರ ಅವಧಿಯಲ್ಲಿ ರಾಜ್ಯಭಾರ ಮಾಡಿದನು.
ಅವನು ಮೌರ್ಯವಂಶದ ಮೂರನೆಯ ದೊರೆ. ಅವನ ಸಾಮ್ರಾಜ್ಯದ ದಕ್ಷಿಣದ ಗಡಿಗೆರೆಗಳನ್ನು ಈ ಶಾಸನಗಳು ಸೂಚಿಸುತ್ತವೆ.
ಕರ್ನಾಟಕದಲ್ಲಿರುವ ಅಶೋಕನ ಶಾಸನಗಳು, ಚಿತ್ರದುರ್ಗ ಜಿಲ್ಲೆಯ ಬ್ರಹ್ಮಗಿರಿ, ಸಿದ್ದಾಪುರ ಮತ್ತು ಜಟಿಂಗ
ರಾಮೇಶ್ವರ, ಕೊಪ್ಪಳ ಜಿಲ್ಲೆಯ ಕೊಪ್ಪಳ, ಬಳ್ಳಾರಿ ಜಿಲ್ಲೆಯ ನಿಟ್ಟೂರು ಮತ್ತು ಉದೆಗೊಳ ಹಾಗೂ ರಾಯಚೂರು
ಜಿಲ್ಲೆಯ ಮಸ್ಕಿಗಳಲ್ಲಿ ನಿಕ್ಷಿಪ್ತವಾಗಿವೆ. ಕರ್ನಾಟಕದಲ್ಲಿ ಒಟ್ಟು ಹನ್ನೊಂದು ಇಂತಹ ಶಾಸನಗಳು ದೊರಕಿವೆ.
ಅವೆಲ್ಲವನ್ನೂ ಪ್ರಾಕೃತ ಭಾಷೆ ಮತ್ತು ಬ್ರಾಹ್ಮೀ ಲಿಪಿಯಲ್ಲಿ ಬರೆಯಲಾಗಿದೆ. ನೇರವಾಗಿ, ಅಶೋಕನ ಹೆಸರನ್ನು
ಹೇಳುವ ಶಾಸನಗಳು ಇಡೀ ದೇಶದಲ್ಲಿ ಎರಡೇ ಎರಡು. ಅವುಗಳಲ್ಲಿ ಒಂದು ಮಸ್ಕಿಯ ಶಾಸನ. ಉಳಿದ ಶಾಸನಗಳಲ್ಲಿ
ಅವನನ್ನು ‘ದೇವಾನಾಂ ಪ್ರಿಯ’ ಎಂದು ಕರೆಯಲಾಗಿದೆ. ಕೊಪ್ಪಳದ ಶಾಸನಗಳು, ಗವಿಮಠ
ಮತ್ತು ಪಾಲ್ಕಿಗುಂಡು ಎಂಬ ಗುಡ್ಡಗಳಲ್ಲಿಯೂ ಸಿದ್ದಾಪುರದ ಶಾಸನವು ಎಮ್ಮೆತಮ್ಮನ ಗುಂಡು ಎಂಬ ಸ್ಥಳದಲ್ಲಿಯೂ
ದೊರೆತಿವೆ.
ಬೌದ್ಧಧರ್ಮದ ತತ್ವಗಳನ್ನು ಪ್ರಸಾರ ಮಾಡುವುದು ಮತ್ತು ಚಕ್ರವರ್ತಿ
ಅಶೋಕನ ಅನುಭವಗಳನ್ನು ಹಂಚಿಕೊಳ್ಳುವುದು ಈ ಶಾಸನಗಳ ಮುಖ್ಯ ಉದ್ದೇಶಗಳು. ಅವು ತಮಗೆ ಸಮಕಾಲೀನವಾದ ಜೀವನದ
ವಿವರಗಳನ್ನು ಕೊಡುವುದರಿಂದ ಮತ್ತು ಅಶೋಕನು ಎದುರಿಸಿದ ಮಾನಸಿಕ ಸಂಘರ್ಷಗಳಿಗೆ ಕನ್ನಡಿ ಹಿಡಿಯುವುದರಿಂದ,
ಬಹಳ ಮಹತ್ವದ ದಾಖಲೆಗಳಾಗಿವೆ. ಒಬ್ಬ ವ್ಯಕ್ತಿಯು ತನ್ನ ಹಿರಿಯರು, ಬಂಧುಗಳು ಮತ್ತು ಮಿತ್ರರೊಡನೆ ವ್ಯವಹರಿಸುವಾಗ
ಅನುಸರಿಸಬೇಕಾದ ಅನೇಕ ವಿಧಿ ನಿಷೇಧಗಳನ್ನು ವಿವರಿಸುವುದರಿಂದಲೂ ಈ ಶಾಸನಗಳು ಮಹತ್ವದ ಸಾಂಸ್ಕೃತಿಕ
ದಾಖಲೆಗಳಾಗಿವೆ. ಕರ್ನಾಟಕದಲ್ಲಿರುವ ಅಶೋಕನ ಶಾಸನಗಳನ್ನು ಕುರಿತು ಪ್ರಸಿದ್ಧ ಇತಿಹಾಸಜ್ಞರಾದ ರೊಮಿಲಾ
ಥಾಪರ್ ಅವರು ವ್ಯಕ್ತಪಡಿಸಿರುವ ಅಭಿಪ್ರಾಯಗಳು ಬಹಳ ಮುಖ್ಯವಾಗಿವೆ. ಅವುಗಳ ಒಂದು ಭಾಗವನ್ನು ಇಲ್ಲಿ ನೀಡಲಾಗಿದೆ :
“ಕರ್ನಾಟಕದಲ್ಲಿ ಬಂಡೆಗಳ ಮೇಲ್ಮೈಯಲ್ಲಿ ಕೆತ್ತಿರುವ ಅಶೋಕನ ಶಾಸನಗಳು
ಅನೇಕ ದೊರಕಿವೆ. ಏಕೆಂದರೆ, ಅದು ಬಂಗಾರವು ದೊರೆಯುವ ಪ್ರದೇಶವಾಗಿದ್ದು, ಅಲ್ಲಿ ಮೌರ್ಯಸಾಮ್ರಾಟರು
ಗಣಿಗಾರಿಕೆ ಮಾಡಿದಂತೆ ತೋರುತ್ತದೆ. ಕುತೂಹಲಕಾರಿಯಾದ ಸಂಗತಿಯೆಂದರೆ, ಇದು ದ್ರಾವಿಡ ಪ್ರದೇಶ. ಇಲ್ಲಿ
ಇದಕ್ಕೆ ಮೊದಲು ಯಾವುದೇ ಲಿಪಿಯನ್ನು ಬಳಸುತ್ತಿರಲಿಲ್ಲ. ಆದರೆ, ಇಲ್ಲಿನ ಎಲ್ಲ ಶಾಸನಗಳೂ ಪ್ರಾಕೃತಭಾಷೆ
ಮತ್ತು ಬ್ರಾಹ್ಮೀ ಲಿಪಿಯಲ್ಲಿ ರಚಿತವಾಗಿವೆ. ಪ್ರಾಕೃತವಾದರೋ ಉತ್ತರ ಭಾರತದ ಇಂಡೋ ಆರ್ಯನ್ ಭಾಷೆ.
ಹೀಗಾಗಿ ಅಧಿಕಾರಿಗಳು ಶಾಸನಗಳನ್ನು ಪ್ರಾಕೃತದಲ್ಲಿ ಓದಿ ಹೇಳಿ, ಅನಂತರ ಅವುಗಳನ್ನು ಸ್ಥಳೀಯ ಸಮುದಾಯದ
ಭಾಷೆಗಳಿಗೆ ಅನುವಾದಿಸಿ ಹೇಳಬೇಕಾಗುತ್ತಿತ್ತು. ವಾಯುವ್ಯ ಭಾರತದಲ್ಲಿ, ಇಂತಹುದೇ ಶಾಸನಗಳನ್ನು ಗ್ರೀಕ್
ಮತ್ತು ಅರಮಾಯಿಕ್ ಭಾಷೆಗಳಿಗೆ ಅನುವಾದಿಸಲಾಗಿತ್ತು. ಅಂತಹುದೇನೂ ಇಲ್ಲಿ ನಡೆಯಲಿಲ್ಲ. ಇಲ್ಲಿ, ಸ್ಥಳೀಯವಾದ
ಲಿಪಿಯೂ ಇರಲಿಲ್ಲವೆನ್ನುವುದು ಇದಕ್ಕೆ ಕಾರಣವಾಗಿರಬಹುದು. ಪ್ರಾಯಶಃ ರಾಜಕೀಯವಾದ ಪರಿಗಣನೆಯಲ್ಲಿ ಈ
ಪ್ರದೇಶಕ್ಕೆ ಹೆಚ್ಚಿನ ಮಹತ್ವವೂ ಇರಲಿಲ್ಲವೇನೋ. ಏಕೆಂದರೆ ಇಲ್ಲಿ ಸಣ್ಣಪುಟ್ಟ ಪಾಳೆಪಟ್ಟುಗಳಿದ್ದವೇ
ಹೊರತು ದೊಡ್ಡ ರಾಜ್ಯಗಳಿರಲಿಲ್ಲ. ಮೌಖಿಕತೆಯನ್ನು ಮೂಲನೆಲೆಯಾಗಿ ಹೊಂದಿದ್ದ ಸಮಾಜದಲ್ಲಿ, ಸಾಕ್ಷರತೆಯನ್ನೇ
ಅಧಿಕಾರದ ಚಿನ್ಹೆಯಾಗಿ ಸ್ಥಾಪಿಸುವುದೂ ಇದರ ಉದ್ದೇಶವಾಗಿರಬಹುದು. ಪ್ರಾಯಶಃ ಈ ಶಾಸನಗಳನ್ನೂ ಇದೇ ನೆಲೆಯಲ್ಲಿ
ನೋಡಲಾಗುತ್ತಿತ್ತು“
ಆತಕೂರು ಶಾಸನ
ಕ್ರಿ.ಶ.950 ರಲ್ಲಿ ಸ್ಥಾಪನೆಯಾದ ಆತಕೂರು ಶಾಸನವು, ಕನ್ನಡಭಾಷೆಯ
ಶಾಸನಗಳ ಸಮುದಾಯದಲ್ಲಿಯೇ ಅನನ್ಯವಾದುದು. ಅದು ದಕ್ಷಿಣ ಕರ್ನಾಟಕದ ಮಂಡ್ಯ ಜಿಲ್ಲೆಯ ಆತಕೂರು ಎಂಬ ಹಳ್ಳಿಯಲ್ಲಿ
ದೊರಕಿತು. ಈಗ ಅದನ್ನು ಬೆಂಗಳೂರಿನ ಸರ್ಕಾರೀ ವಸ್ತುಸಂಗ್ರಹಾಲಯದಲ್ಲಿ ಪ್ರದರ್ಶಿಸಲಾಗಿದೆ. ಈ ಶಾಸನವನ್ನು
ರಾಷ್ಟ್ರಕೂಟ ರಾಜವಂಶಕ್ಕೆ ಸೇರಿದ ಕನ್ನರದೇವನ (ಮೂರನೆಯ ಕೃಷ್ಣ) ಆಳ್ವಿಕೆಯಲ್ಲಿ ಸ್ಥಾಪಿಸಲಾಯಿತು.
ಕಾಳಿ ಎಂಬ ನಾಯಿಯ ಪರಾಕ್ರಮವನ್ನು ಪ್ರಶಂಸೆ ಮಾಡುವ ದಾಖಲೆ, ಎನ್ನುವುದು ಇದರ ವಿಶೇಷ.
ಬೂತುಗನೆಂಬ ರಾಜನು,
ಮನಲಾರ ಎನ್ನುವವನ ನೆರವಿನಿಂದ ಚೋಳ ರಾಜನಾದ ರಾಜಾದಿತ್ಯನನ್ನು ಕೊಲ್ಲುತ್ತಾನೆ. ಕೃತಜ್ಞನಾದ ರಾಜನು,
ಮನಲಾರನಿಗೆ ಅವನು ಬಯಸಿದ ವಸ್ತುವನ್ನು ನೀಡುವ ಆಶ್ವಾಸನೆ ಕೊಡುತ್ತಾನೆ. ಮನಲಾರನು ತನ್ನ ಪರಾಕ್ರಮಕ್ಕೆ
ಪ್ರತಿಯಾಗಿ ಕಾಳಿ ಎಂಬ ನಾಯಿಯನ್ನು ಕೊಡಬೇಕೆಂದು ಕೇಳಿಕೊಳ್ಳುತ್ತಾನೆ. ರಾಜನು ಅವನ ಕೋರಿಕೆಯನ್ನು
ಈಡೇರಿಸುತ್ತಾನೆ. ಸ್ವಲ್ಪ ಕಾಲದ ನಂತರ ಕಾಳಿಯು ಕಾಡುಹಂದಿಯ ಸಂಗಡ ಹೋರಾಡುವಾಗ ಸತ್ತುಹೋಗುತ್ತದೆ.
ಮನಲಾರನಿಗೆ ಬಹಳ ದುಃಖವಾಗುತ್ತದೆ.
ಕಾಳಿಯ ಪರಾಕ್ರಮ
ಮತ್ತು ನಿಷ್ಠೆಗಳ ಸ್ಮಾರಕವಾಗಿ, ಮನಲಾರನು ಒಂದು ವೀರಗಲ್ಲನ್ನು ನಿಲ್ಲಿಸುತ್ತಾನೆ. ಅದರಲ್ಲಿ ಆ ಹೋರಾಟದ
ಪ್ರಸ್ತಾಪವಿದೆ. ಆ ಸ್ಥಳದಲ್ಲಿ ಎಡೆಬಿಡದೆ ಪೂಜೆಗಳನ್ನು ನಡೆಸಲು ಅಗತ್ಯವಾದ ದತ್ತಿಯನ್ನು ಕೂಡ ಮನಲಾರನು
ನೀಡುತ್ತಾನೆ.
ಈ ಶಾಸನವು ಬೂತುಗನು
ಮನಲಾರನಿಗೆ ನೀಡಿದ ಕೊಡುಗೆಗಳನ್ನೂ ಅಂತೆಯೇ ಮನಲಾರನು ಆ ವೀರಗಲ್ಲಿನ ಸಂರಕ್ಷಣೆಗೆಂದು ನೀಡಿದ ದಾನಗಳನ್ನೂ
ನಿರೂಪಿಸುತ್ತದೆ. ಒಂದು ನಾಯಿಯನ್ನು ಗೌರವಿಸಲೆಂದು ಶಾಸನವನ್ನೇ ನಿರ್ಮಿಸಿದ ಈ ಘಟನೆಯು, ರಾಷ್ಟ್ರಕೂಟರು
ಮತ್ತು ಚೋಳರ ನಡುವೆ ಇನ್ನೊಂದು ಯುದ್ಧಕ್ಕೆ ಕಾರಣವಾಗುತ್ತದೆ.
ಶಾಸನದ ಪೂರ್ಣಪಾಠ
ಸ್ವ ಸ(ಶ)ಕ[ನೃಪ
ಕಾಲಾತೀತ ಸಂವತ್ಸರ ಸ(ಶ)ತಙ್ಗಳ್ ಎಣ್ಟುನೂಱ್ ಎೞ್ಪತ್ತೆರಡನೆಯ ಶೌ(ಸೌ)ಮ್ಯಮ್ ಎಂಬ ಸಂವತ್ಸರಮ್ ಪ್ರವರ್ತ್ತಿಸೆ
ಸ್ವಸ್ತಿ ಅಮೋಘವರಿಷದೇವ ಶ್ರೀಪೃಥುವಿವಲ್ಲs ಪರಮೇಶ್ವರ ಪರಮ ಭಟ್ಟಾರಕ ಪಾದಪಂಕಜಭ್ರಮರಂ ನೃಪತ್ರಿಣೇತ್ರನ್
ಆನೆವೆಡಂಗಂ ವನಗಜಮಲ್ಲಂ ಕಚ್ಚೆಗಂ ಕ್ರಿ(ಕೃ)ಷ್ಣರಾಜಂ ಶ್ರೀಮತ್ ಕನ್ನರದೇವಂ..... ೞು(?) ವಜಂ ಚೋಳರಾಜಾದಿತ್ಯನ
ಮೇಲೆ [ಬ]ನ್ದು ತಕ್ಕೋಲಡೊಳ್ ಕಾದಿ ಕೊಂದು ಬಿಜಯಂ ಗೆಯ್ಯುತ್ತಿೞ್ದು ಸ್ವ[ಸ್ತ] [ಸ]ತ್ಯವಾಕ್ಯ ಕೊಂಗುಣಿವರ್ಮ್ಮ
ಧರ್ಮ್ಮಮಹಾರಾಜಾಧಿರಾಜಂ ಕೋಳಾಲಪುರವರೇಶ್ವರಂ ನನ್ದಗಿರಿನಾಥಂ ಶ್ರೀಮತ್ ಪೆರ್ಮ್ಮಾನಡಿಗಳ್ ನನೆಯಗಂಗ
ಜಯ[ದ್ ಉ]ತ್ತರಂಗ ಗಂಗ [ಗಾಂ]ಗೇಯ ಗಂಗ ನಾರಾಯಣ ತನ್ ಆಳು ಸ್ವಸ್ತಿ ಸಕಲಲೋಕ ಪರಿತಾಪವಿಹತ [ಪ್ರ]ಭಾವತಾರಿ[ತ]
ಗಂಗ ಪ್ರಭಾವೋದರ ಸಾಗರವಂಶ ವಳಭಿಪುರವರೇಶ್ವರನ್ ಉದಾರ ಭಗೀರಥನ್ ಇಱವಬೆಡೆಂUಂ ಸಾ[ಗರ] ತ್ರಿಣೇತ್ರಂ
ಸೆಣಸೆ ಮೂಗರಿವೊಂ ಕದನೈಕ ಸೂ(ಶೂ)ದ್ರಕಂ ಬೂತುಗನ್ ಅಂಕಕಾರಂ ಶ್ರೀಮತ್ ಮಣಲತರತ[ಂಗ]ನುವರದೊಳ ಮೆಚ್ಚಿ
ಬೇಡಿಕೊಳ್ಳ್ ಎನ್ದೊಡೆ ದಯೆಯ ಮೆಱೆವೊ(ಳ್) ಎಂಬ ಕಾಳಿಯಂ ದಯೆಗೆಯ್ಯ್ ಎಂದು ಕೊಣ್ಡನಾ ನಾಯ[ಂ] ಕೇೞಲೆನಾಡ
ಬೆಳತೂರ ಪಡುವಣ ದೆಸೆಯ ಮೊಱದಿಯೊಳ್ ಪಿರಿ[ದು ಪ]ಂಡಿಗೆ ವಿಟ್ಟೊಡೆ ಪಂಡಿಯುಂ ನಾಯುಂ ಒಡ ಸತ್ತುವದರ್ಕ್ಕೆಯ್
ಅತ್ತುಕೂರೊಳ್ ಚಲ್ಲೇಶ್ವರದ ಮುಂದೆ ಕಲ್ಲನ್ ನಡಿಸಿ ಪಿರಿಯ ಕೆಱೆಯ ಕೆಳಗೆ ಮಳ್ತಿಕಾಳಂಗದೊಳ್ ಇರ್ಕ್ಕ(ರ್ಖ)ಂಡುಗ
ಮಣ್ಣ[ಂ] ಕೊಟ್ಟರ್ ಆ ಮಣ್ಣನ್ ಒಕ್ಕಲ್ ನಾಡನ್ ಆಳ್ವ್ವೆಂನ್ ಊರನ ಆಳ್ವೊರ್ ಈ ಮಣ್ಣನ್ ಅೞದೊನ್ ಆ ನಾಯ
ಗೆಯ್ದ ಪಾಪಮ[ಂ] ಕೊಂಡೊಂನ್ ಆ ಸ್ಥಾನಮನ್ ಆಳ್ವ ಗೊರವನ್ ಆ ಕಲ್ಲಂ ಪೂಜಿಸದ್ ಉಣ್ಡರ್ ಅಪ್ಪೊಡೆ ನಾಯ
ಗೆಯ್ದ ಪಾಪಮಂ ಕೊಣ್ಡ[ನ್] ಓಂ ಊಱದ್ ಇದಿರಾಂತ ಚೋಳ ಚತುರಂಗಬಲಂಗಳನ್ ಅಟ್ಟಿ ಮುಟ್ಟಿ ತಳ್ತ್ ಇಱವೆಡೆಗ
ಓರ್ವರ್ ಅಪ್ಪೊಡಂ ಇದಿರ್ಚ್ಚುವ ಗಣ್ಡರನ್ ಆಂಪೆವ್ ಎನ್ದು ಪೊಟ್ಟಾಳಿಸುವ ಬೀ(ವೀ)ರರಂ ನೆಱೆಯೆ ಕೋಣೆ(ಣ)ಮೆ
ಚೋಳನೆ ಸ(ಶ)ಕ್ತಿಯಾಗೆ ತಳ್ತ್ ಇಱದುದನ್ ಆವೆ(ಮೆ) ಕಂಣ್ಡೆವ ಎನೆ ಮೆಚ್ಚದೊರ್ ಆರ್ ಸ್ಸಾಗರ ತ್ರಣೇತ್ರಂ
ನರಪತಿ ಬೆನ್ನೊಳ್ ಇೞದೊನ್ ಇದಿರ್ ಆಂತುದು ವೈರಿಸಮೂದಂ ಇಲ್ಲಿ ಮಚ್ಚರಿಸುವರ್ ಎಲ್ಲರುಂ ಸೆರಗುವಾಳ್ದಪೋರ್
ಇಂತಿರೆನ್ ಎನ್ದು ಸಿಂಗದ್ ಅಂತಿರೆ ಹರಿ ಬೀ(ವೀ)ರಲಕ್ಷ್ಮಿ ನೆರವಾಗಿರೆ ಚೋೞ[] ಕೋಟೆಯ್ ಎಂಬ ಸಿಂಧುರದ
ಶಿರಾಗ್ರಮಂ ಬಿರಿಯೆ ಪಾಯಿದಂ ಕಂದನೈಕ ಸೂ(ಶೂ)ದ್ರಕಂ ಓಂ ಸ್ವಸ್ತಿ ಶ್ರೀ ಎಱೆಯಪನ ಮಗಂ ರಾಚಮಲ್ಲನಂ
ಬೂತುಗಂ ಕಾದಿ ಕೊನ್ದು ತೊಂಬತ್ತಱು ಸಾಸಿರಮುಮಂ ಆಳುತ್ತಿರೆ ಕನ್ನರದೇವ[ಂ] ಚೋಳನಂ ಕಾದುವನ್ದು ಬೂತುಗಂ
ರಜಾದಿತ್ಯನಂ ಬಿಸುಗೆಯೆ ಕಳ್ಳನಾಗಿ ಗುರಿಗ್ ಇಱದು ಕಾದಿ ಕೊಂದು ಬನವಸೆ ಪನಿಚ್ನಾರ್ಛಾಸಿರಮುಂ ಬೆಳ್ವೊಲ
ಮೂನೂರುಂ ಪುರಿಗೆಱೆ ಕಿಸುಕಾಡ್ ಎಳ್ಪತ್ತುಂ ಬಾಘೆನಾಡ್ ಎಳ್ಪತ್ತುವ(ಮ)ಂ ಬೂತುಗಂಗೆ ಕನ್ನರದೇವಂ ಮೆಚ್ಚುಗೊಟ್ಟಂ
ಬೂತುಗನುಂ ಮಣಲರತನ ಮುಂದೆ ನಿಂದ ಇಱದುದರ್ಕ್ಕೆ ಮೆಚ್ಚಿ ಆತುಕೂರ್ ಪನ್ನೆರಡುಂ ಬೆಳ್ವೊಲದ ಕೋಟೆಯೂರುಮಂ
ಬಾಳ್ಗ[ಂ] [ಮೆ]ಚ್ಚುಗೊಟ್ಟಂ ಮಙ್ಗಳ ಮಹಾಶ್ರೀ
ಬಾದಾಮಿ ಶಾಸನ (ಕಪ್ಪೆ ಅರಭಟ್ಟನ ಶಾಸನ)
ಕ್ರಿ.ಶ. 7ನೆಯ
ಶತಮಾನದ ಬಾದಾಮಿ ಶಾಸನವು ಅನೇಕ ಕಾರಣಗಳಿಗಾಗಿ ಮುಖ್ಯವಾಗಿದೆ. ಇದು ಕರ್ನಾಟಕದ ಅಜ್ಞಾತ ವೀರನೊಬ್ಬನ
ಗುಣಗಳನ್ನು ಮುಕ್ತವಾಗಿ ವಿವರಿಸುತ್ತದೆ. ಇದು ಕನ್ನಡ ಮತ್ತು ಸಂಸ್ಕೃತಗಳಲ್ಲಿ ರಚಿತವಾಗಿರುವ ದ್ವಿಭಾಷಾ
ಶಾಸನ. ಆದರೆ, ಕಪ್ಪೆ ಅರಭಟ್ಟನನ್ನು ಕುರಿತ ಪದ್ಯಗಳೆಲ್ಲವೂ ಕನ್ನಡದಲ್ಲಿ ಮತ್ತು ಆ ಭಾಷೆಯ ಅತ್ಯಂತ
ಹಳೆಯ ಛಂದೋರೂಪಗಳಲ್ಲಿ ಒಂದಾದ ತ್ರಿಪದಿಯಲ್ಲಿ ರಚಿತವಾಗಿವೆ. ತ್ರಿಪದಿಯು ದ್ರಾವಿಡ ಮೂಲಗಳಿಂದ ಒಡಮೂಡಿರುವ
ಸಂಭವವಿದೆ. ಈ ಶಾಸನವು ಕನ್ನಡದಲ್ಲಿ ಸಿಕ್ಕಿರುವ ಮೊಟ್ಟಮೊದಲ ತ್ರಿಪದಿಗಳನ್ನು ಒಳಗೊಂಡಿದೆ.
ಕಪ್ಪೆ ಅರಭಟ್ಟನಿಗೂ
ಕಪ್ಪೆಗೂ ಯಾವ ಸಂಬಂಧವೂ ಇಲ್ಲ. ಈ ಪದವನ್ನು ಕಪ್ಪೆಯರ ಭಟ್ಟ(ತೀ.ನಂ.ಶ್ರೀ.) ಮತ್ತು ಕಪ್ಪಡಿ ಯರ ಭಟ್ಟ
(ಎಂ. ಎಂ. ಕಲಬುರ್ಗಿ) ಎಂಬುದಾಗಿ ಅರ್ಥೈಸಲಾಗಿದೆ. ಎರಡೂ ವಿವರಣೆಗಳು ಅವನ ವಂಶನಾಮದಿಂದ ಸ್ಫೂರ್ತಿ
ಪಡೆದಿವೆ.
ಈ ಶಾಸನದ ಅರ್ಥವನ್ನು
ಹೀಗೆ ಸಂಗ್ರಹಿಸಬಹುದು: ಅರಭಟ್ಟನನ್ನು ಒಳ್ಳೆಯ ಜನರು ಇಷ್ಟಪಡುತ್ತಾರೆ ಮತ್ತು ದುಷ್ಟರು ಅವನಿಗೆ ಹೆದರುತ್ತಾರೆ.
ಅವನು ತನ್ನ ಬಗ್ಗೆ ಸರಿಯಾಗಿ ನಡೆದುಕೊಳ್ಳುವವರಿಗೆ ತಾನೂ ಒಳ್ಳೆಯವನು. ಆದರೆ, ತನಗೆ ತೊಂದರೆ ಕೊಡುವವರಿಗೆ
ಅವನು ಅತ್ಯಂತ ಕ್ರೂರಿಯಾಗಿರುತ್ತಾನೆ. ಈ ಗುಣದಲ್ಲಿ ಅವನು ಸಾಕ್ಷಾತ್ ವಿಷ್ಣುವಿಗೆ ಸರಿಸಮಾನ. ತಮ್ಮ
ಪೂರ್ವಜನ್ಮದ ಕರ್ಮಗಳ ಪರಿಣಾಮವಾಗಿ ಕೆಟ್ಟ ಕೆಲಸಗಳಲ್ಲಿ ತೊಡಗಿಕೊಳ್ಳುವ ಜನರು ಇರುತ್ತಾರೆ. ಸ್ವಲ್ಪವೂ
ವಿಚಾರ ಮಾಡದ ಇಂತಹವರು, ಪಂಜರದಲ್ಲಿ ಸೆರೆಯಾಗಿರುವ ಸಿಂಹವನ್ನು ಹಿಂದೆ ಮುಂದೆ ನೋಡದೆ ಹೊರಗೆ
ಬಿಡುವ ಮೂರ್ಖರಂತೆ, ಸತ್ತು ನಾಶವಾಗುತ್ತಾರೆ.
ಈ ಶಾಸನವನ್ನು
ಬಾದಾಮಿ ಪಟ್ಟಣದ ಉತ್ತರ ಗುಡ್ಡದ ಒಂದು ಬದಿಯಲ್ಲಿ ನೆಲಮಟ್ಟದಿಂದ ಸುಮಾರು ಹತ್ತು ಹನ್ನೆರಡು ಅಡಿ ಎತ್ತರದಲ್ಲಿ
ಕಂಡರಿಸಲಾಗಿದೆ. ಊರಿನ ನೈರುತ್ಯ ಭಾಗದಲ್ಲಿರುವ ಕೃತಕವಾದ ಕೊಳಕ್ಕೆ ಇದು ಎದುರಾಗಿದೆ. ಈ ಶಾಸನವು
2 ಅಡಿ, 10 1/3 ಅಂಗುಲ ಅಗಲ ಮತ್ತು 3 ಅಡಿ 4 1/2 ಅಂಗುಲ ಎತ್ತರದ ಚದುರಳತೆಯ ಜಾಗದಲ್ಲಿ ಲಿಖಿತವಾಗಿದೆ.
ಶಾಸನದ ಅರ್ಥವು ಸ್ಪಷ್ಟವಾಗಿಲ್ಲ. ಆದರೆ ಅದು ಸ್ಥಳೀಯ ವೀರನೂ ಸಂತನೂ ಆದ ಕಪ್ಪೆ ಅರಭಟ್ಟನ ಗುಣವರ್ಣನವೆಂಬ
ಸಂಗತಿಯು ಸ್ಪಷ್ಟವಾಗಿದೆ. ಶಾಸನದ ಕೆಳಗೆ ಸುಮಾರು ವೃತ್ತಾಕಾರದ ಪ್ರದೇಶದೊಳಗೆ ಹತ್ತು ದಳಗಳಿರುವ ಕಮಲದಂತೆ
ಕಾಣುವ ಹೂವನ್ನು ಕೆತ್ತಲಾಗಿದೆ. ಅದರಿಂದ ಒಂದು ವಸ್ತ್ರ ವಿನ್ಯಾಸವು ನೇತಾಡುತ್ತಿರುವಂತೆ ಕೆತ್ತಲಾಗಿದೆ.
ಈ ಶಾಸನದಲ್ಲಿ
ಬಳಸಿರುವ ಕನ್ನಡವು ಪೂರ್ವದ ಹಳಗನ್ನಡವು ಹಳಗನ್ನಡವಾಗಿ ಪರಿವರ್ತನೆಯಾಗುತ್ತಿದ್ದ ಹಂತಕ್ಕೆ ಸೇರಿದ್ದು.
ಪದರಚನೆ ಮತ್ತು ವಾಕ್ಯರಚನೆಗೆ ಸಂಬಂಧಿಸಿದ ಕೆಲವು ಅಂಶಗಳು ಈ ಸಂಗತಿಯನ್ನು ಸ್ಪಷ್ಟಪಡಿಸುತ್ತವೆ.
ಹೀಗೆ ಬಾದಾಮಿಯ
ಶಾಸನವು ಭಾಷಾಶಾಸ್ತ್ರ, ಛಂದಸ್ಸು ಮತ್ತು ಸಾಹಿತ್ಯ ಎಂಬ ಮೂರು ನೆಲೆಗಳಿಂದಲೂ ಬಹಳ ಮುಖ್ಯವಾದುದು.
ಶಾಸನದ ಮೂಲಪಾಠ
ಕಪ್ಪೆ ಅರಭಟ್ಟನ್
ಶಿಷ್ಟಜನಪ್ರಿಯನ್
ಕಷ್ಟಜನವರ್ಜಿತನ್
ಕಲಿಯುಗ ವಿಪರೀತನ್
ವರನ್ತೇಜಸ್ವಿನೋ
ಮೃತ್ತ್ಯರ್‍ನತು ಮಾನಾವಖಣ್ಡನಂ
ಮೃತ್ತ್ಯುಸ್ತತ್ಕ್ಷಣಿಕೋ
ದುಃಖಮ್ ಮಾನಭಂಗನ್ ದಿನೇದಿನೇ
ಸಾಧುಗೆ ಸಾಧು
ಮಾಧೂರ್ಯ್ಯಂಗೆ ಮಾಧೂರ್ಯ್ಯಂ
ಬಾಧಿಪ್ಪ ಕಲಿಗೆ
ವಿಪರೀತನ್ ಮಾಧವನೀತನ್ ಪೆರನಲ್ಲ
ಒಳ್ಳಿತ್ತ ಕೆಯ್ವೊರ್
ಆರ್ ಪ್ಪೊಲ್ಲದುಮ್ ಅದರನ್ತೆ ಬಲ್ಲಿತ್ತು ಕಲಿಗೆ ವಿಪರೀತಾ ಪುರಾಕೃತಂ
ಇಲ್ಲಿ ಸನ್ಧಿಕ್ಕುಂ
ಅದು ಬಂದು ಕಟ್ಟಿದ ಸಿಂಘಮನ್ ಕೆಟ್ಟೊದ್ ಎಮಗೆನ್ದು ಬಿಟ್ಟವೊಲ್ ಕಲಿಗೆ ವಿ[]ರೀತ ಅಹಿತರ್ಕ್ಕಳ್ ಕೆಟ್ಟರ್
ಮೇಣ್ ಸತ್ತರ್ ಅವಿಚಾರಮ್.
ಗಂಗಾಧರಂ ಶಾಸನ
ಕನ್ನಡದ ಮೊಟ್ಟಮೊದಲ ಹಿರಿಯ ಕವಿಯಾದ
ಪಂಪನ ಜೀವನಚರಿತ್ರೆಯನ್ನು ಮರುರೂಪಿಸುವುದರಲ್ಲಿ, ಗಂಗಾಧರಂ ಶಾಸನ ಅಥವಾ ಜಿನವಲ್ಲಭನ ಶಾಸನವು ಮಹತ್ವದ
ಪಾತ್ರವನ್ನು ವಹಿಸಿದೆ. ಈ ಶಾಸನವು ಆಂಧ್ರಪ್ರದೇಶದ ಕರೀಂ ನಗರ ಜಿಲ್ಲೆಯ, ಗಂಗಾಧರಂ ಮಂಡಲಕ್ಕೆ ಸೇರಿದ
ಕುರ್ಕ್ಯಾಲ ಎಂಬ ಹಳ್ಳಿಯಲ್ಲಿ ಒಂದು ಬೆಟ್ಟದ ಮೇಲೆ ಸಿಕ್ಕಿತು. ಪಿ.ವಿ. ಪರಬ್ರಹ್ಮ ಶಾಸ್ತ್ರಿಗಳು
1976 ರಲ್ಲಿ ಸಂಪಾದಿಸಿ, ಪ್ರಕಟಿಸಿದ ‘Inscriptions of Andhrapradesh, Kareem Nagar
DIstrict’ ಎಂಬ ಕೃತಿಯಲ್ಲಿ ಈ ಶಾಸನವನ್ನು ನೋಡಬಹುದು. ಇದನ್ನು ಸ್ಥಾಪಿಸಿದವನು ಪಂಪನ ತಮ್ಮನಾದ ಜಿನವಲ್ಲಭ.
ಇದರಲ್ಲಿ ಜಿನವಲ್ಲಭನನ್ನು ಕುರಿತು ಹೇರಳವಾದ ಮಾಹಿತಿ ಸಿಗುವುದಲ್ಲದೆ, ಪಂಪನನ್ನು ಕುರಿತಂತೆಯೂ ಮುಖ್ಯವಾದ
ಸಂಗತಿಗಳು ಗೊತ್ತಾಗುತ್ತವೆ.
ಜಿನವಲ್ಲಭನು ಪಾಂಡಿತ್ಯ ಮತ್ತು ಸಾಂಪತ್ತಿಕ
ಸ್ಥಿತಿಗತಿಗಳೆಂಬ ಎರಡು ನೆಲೆಗಳಲ್ಲಿಯೂ ಶ್ರೀಮಂತನಾಗಿದ್ದನು. ಅವನಿಗೆ ಸಂಗೀತ ಮತ್ತು ಗಮಕಗಳಲ್ಲಿ
ಪರಿಣತಿಯಿತ್ತು. ಅವನು ಅನೇಕ ಜೈನ ಬಸದಿಗಳು, ಕೊಳಗಳು ಮತ್ತು ಉದ್ಯಾನಗಳನ್ನು ನಿರ್ಮಿಸಿದ್ದನು. ಎಲ್ಲಕ್ಕಿಂತ
ಮುಖ್ಯವಾಗಿ ಪಂಪ ಮತ್ತು ಜಿನವಲ್ಲಭರಿಬ್ಬರೂ ಭೀಮಪ್ಪಯ್ಯ ಮತ್ತು ಅಬ್ಬಣಬ್ಬೆಯರ ಮಕ್ಕಳೆಂದು ಈ ಶಾಸನವು
ಸ್ಪಷ್ಟಪಡಿಸುತ್ತದೆ. ಅಬ್ಬಣಬ್ಬೆಯು ಉತ್ತರ ಕರ್ನಾಟಕದ ಅಣ್ಣಿಗೇರಿಯಿಂದ ಬಂದವಳೆಂಬ ಸಂಗತಿಯೂ ಇಲ್ಲಿಯೇ
ತಿಳಿಯುತ್ತದೆ. ಪಂಪನ ಆಶ್ರಯದಾತನಾದ ಅರಿಕೇಸರಿಯು, ಧರ್ಮಪುರಿ ಅಗ್ರಹಾರವನ್ನು ಪಂಪನಿಗೆ ದತ್ತಿಯಾಗಿ
ನೀಡಿದನೆಂಬ ವಿಷಯವನ್ನೂ ಈ ಶಾಸನದಲ್ಲಿ ಹೇಳಲಾಗಿದೆ.
ಗಂಗಾಧರಂ ಶಾಸನವು ಕನ್ನಡ, ಸಂಸ್ಕೃತ ಮತ್ತು
ತೆಲುಗುಗಳಲ್ಲಿ ರಚಿತವಾಗಿದೆ. ಇಲ್ಲಿರುವ ತೆಲುಗು ಕಂದಪದ್ಯಗಳು ಆ ಭಾಷೆಯಲ್ಲಿ ದೊರಕಿರುವ ಅತ್ಯಂತ
ಹಳೆಯ ಕಂದಪದ್ಯಗಳೆಂದು ಹೇಳಲಾಗಿದೆ. ಹೀಗೆ, ಈ ಶಾಸನವು ಒಂದಕ್ಕಿಂತ ಹೆಚ್ಚು ಕಾರಣಗಳಿಗಾಗಿ ಮುಖ್ಯವಾಗಿದೆ.
ಶಾಸನದ ಪಠ್ಯ :
ಓಂ ನಮಃ ಸಿದ್ಧೇಭ್ಯಃ ಸ್ವಸ್ತಿ ಸಮಸ್ತ ಸಕಳ
ಕಳಾಳಾಪ ಪ್ರವೀಣಂ ಭವ್ಯರತ್ನಾಕರ[ಂ] ಗುಣಪಕ್ಷಪಾತಿ ಬೆಂಗಿನಾಡ ಸಪ್ತಗಮ್ರಗಳೊಳಗಣ ವಂಗಿಪರ್ರ ಕಮ್ಮೆ
ಬ್ರಾಹ್ಮಣಂ ಜಮದಗ್ನಿ ಪಂಚಾರ್ಷೇಯಂ ಶ್ರೀವತ್ಸಗೋತ್ರಂ ಗುಂಡಿಕಱ್ರ ನಿಡುಂಗೊಣ್ಡೆಯ್ ಅಭಿಮಾನಚನ್ದ್ರನ
ಮರ್ಮ್ಮಂ ಭೀಮಪಯ್ಯನ ಬೆಳ್ವೊಲದ ಅಣ್ನಿಗೆರೆಯ ಜೋಯಿಸಸಿಂಘನ ಮರ್ಮ್ಮಳ್ ಅಬ್ಬಣಬ್ಬೆಯ ಮಗಂ ಕೊಣ್ಡಕುನ್ದೆಯ
ದೇಸಿಗಗಣದ ಪೊತ್ಥಗೆಯ ಬೞಯ ಪಣ್ಡರಂಗವಲ್ಲಿಯ ಜಯಣನ್ದಿಸಿದ್ಧಾನ್ತಭಟಾರರ ಗುಡ್ಡಂ ಜಿನವಲ್ಲಭಂ ಸಬ್ಬಿನಾಡ
ನಟ್ಟನಡುವಣ ಧರ್ಮ್ಮವುರದ್ ಉತ್ತರ ದಿಗ್ಭಾಗದ ವೃಷಭಗಿರಿಯೆಂಬ ಅನಾದಿ ಸಂಸಿದ್ಧ ತೀರ್ತ್ಥದ ದಕ್ಷಿಣದಿಶಾಭಾಗದಿ
ಈ ಸಿದ್ಧಶಿಲೆಯೊಳ್ ತಮ್ಮ ಕುಲದೈವಮ್ ಆದ್ಯನ್ತ ಜಿನಬಿಂಬಂಗಳುಮಂ ಚಕ್ರೇಶ್ವರಿಯುಮಂ ಪೆಱವು ಜಿನಪ್ರತಿಮೆಗಳುಮಂ
ತ್ರಿಭುವನತಿಲಕಮ್ ಎಂಬ ಬಸದಿಯುಮಂ ಕವಿತಾಗುಣಾರ್ಣ್ನವಮ್ gಎಂಬ ಕೆಱಯುಮಂ ಮದನವಿಳಾಸಮ್ ಎಂಬ ಬನಮುಮಂ
ಮಾಡಿಸಿದಂ ಭ್ರಾತದ್ಧರ್ಮ್ಮಪುರಂ ಪ್ರಯಾಮಕಿಮತೋ ಜೈನಾಭಿಷೇಕೋತ್ಸವ ಕ್ಷೀರಪ್ಲಾವಿತ ತುಂಗ ಶೃಂಗ ವೃಷಭಕ್ಷೆಣಿದ್ಧ್ರಮೀಕ್ಷಾಮಹೇ
ಯಾತ್ರಾಯಾತ ಸಮಸ್ತ ಭವ್ಯಜನತಾ ಸನ್ಮಾನ ದಾನೋದ್ಯತಂ ಪಂಪಾರ್ಯ್ಯಾನುಜಮತ್ರ ಭೀಮತನುಜಂ ಸಮಕ್ತ್ವರತ್ನಾಕರಂ
ಗೀತಂ ಗಾತುಮ್ ಅನೇಕ ಭೇದ ಸುಭಗಂ ಕಾವ್ಯಾನಿಸೋಚ್ಚಾವಚಂ ವಾಚಾವಾಚಯಿತುಂ ಪ್ರಿಯಾಣಿವದಿತುಂ ಸಾಧೂಪಕರ್ತ್ತುಂ
ಸತಂ ಬೋಗಾನ್ ಸೇವಿತುಮಂಗನಾರಮಯಿತುಂ ಪೂಜಾಂ ವಿಧಾತುಂ ಜಿನೇ ಜಾನೀತೇ ಜಿನವಲ್ಲಭಳ್ ಪರರ್ಮ ಇದಂ ಪಂಪಾಭಿದಾನಾನುಜಃ
ಅಜಸ್ರ ಜಿನವನ್ದನಾಗತ ಮುಈಶ್ವರ ಶ್ರಾವಕ ಪ್ರಜಾಸ್ತವರವ ಪ್ರತಿಧ್ವನಿತ ಶಬ್ದಕೋಳಾಹಳೈ[ಃ] ಅಧಿಷ್ಠಿತ
ದಿಗಂಬರೋ ವೃಷಭಶೈಲ ಏಷಸ್ವಯಂ ಪರಾಂ ವದತಿ ವಾಚಕಾಭರಣ ಕೀರ್ತ್ತಿಮಾಕಳ್ಪತಃ ಬಗೆಯಲಳುಂಬಮ್ ಈ ಬಗೆಯನ್
ಆರ್ಬ್ಬಗೆವೊರ್ಬ್ಬಗೆ ಗಾಸೆಯಲ್ತು ದಿಟ್ಟಿಗೆ ಪೊಲನಲ್ತು ನೀಳ್ದ ಸಱಯೊಳ ಜಿನಬಿಂಬಮನ್ ಈತನ್ ಈಗಳ್ ಎಂತು
ಆಗಱಸಿದಪ್ಪೊನ್ ಎನ್ದು ಬಗೆವನ್ನೆವರಂ ಜಿನಬಿಂಬಮ್ ಅಲ್ಲಿ ತೊಟ್ಟಗೆ ನೆಗಳ್ದಿೞ್ದುವೇಂ ಚರಿತಂ ಅಚ್ಚರಿಯೋ
ಜಿನವಲ್ಲಭೇನ್ದ್ರನಾ ಇದು ಕವಿತಾಗುಣಾರ್ಣ್ನವನ ಕೀರ್ತ್ತಿಯ ಮೂರ್ತ್ತಿವೊಲಾಗಿ ದಕ್ಷಿಣಾರ್ದ್ಧದ ವೃಷಭಾದ್ರಿಯಕ್ಕೆ
ವೃಷಭೇಶ್ವರಬಿಂಬ ಸನಾಥಮೆಂಬ್ ಅಲಂಪೊದವೆ ನಿಜದ್ವಿಜಾವಸಥ ಪರ್ವ್ವತಮಂ ಜಿನಚೈತ್ಯಮ್ ಆಗೆ ಮಾಡಿದ ಜಿನವಲ್ಲಭಂಗೆ
ಜಿನವಲ್ಲಭ್ನ್ ಅಪ್ಪುದುಮ್ ಒಂದು ಛೋದ್ಯಮೋ ಚದುರ ಮೈಮೆಯ ಸತ್ಕವಿತ್ವದ ಸನ್ದ ಪಂಪನ ತಮ್ಮನ್ ಓವ್ವದೆ
ಪೊಗೞ್ತೆಯೇ ಬಾಜಿಸಲ್ ಬರೆಯಲ್ ಕವಿತ್ವದ ತತ್ವದೊಳ್ ಪುದಿದು ನೇರ್ಪ್ಪಡೆ ಪೇೞಲ್ ಉರ್ವ್ವಿಗಪೂರ್ವ್ವಮ್
ಆ ಆಗಿರೆ ಬಲ್ಲೊನ್ ಅಪ್ಪುದರಿನ್ ಒರ್ವ್ವನೆ ವಾಗ್ವಧೂವರವಲ್ಲಭಂ ಜಿನವಲ್ಲಭಂ ವಿನುತ ಚಳುಕ್ಯವಂಶಪತಿ
ಮಿಕ್ಕರಿಕೇಸರಿ ಸನ್ದ ವಿಕ್ರಮಾರ್ಜ್ಜುನವಿಜಯಕ್ಕೆ ಧರ್ಮ್ಮವುರಂಮ್ ಎನ್ದು ಮದೀಯಮ್ ಇದೆನ್ದು ಕೀರ್ತ್ತಿಶಾಸನಮೆನೆ
ಕೊಟ್ಟ ಶಾಸನದ ಪಂಪನ ನಂಬಿದುದೊಂದು ಜೈನಶಾಸನದ ನೆಗೞ್ತೆಯಂ ವೃಷಭಪರ್ವ್ವತಮನ್ತದು ತಾನೆ ಪೇೞದೇ ಎಸಗಲ್ಗಾಳಿ
ಪುಗಲ್ ಪತಂಗಕಿರಣಂ ಸಾರಲ್ಮಿಗಂ ಪಾಱಲ್ ಆಗಸದೊಳ್ ಪಕ್ಕಿಗಳಲ್ಲಿ ಸಲ್ಲವೆನಿಸಿರ್ೞ್ದನ್ಯೋದಯಂ ಧರ್ಮ್ಮದೊಳ್
ಜಸಮಂ ಪೊಂಪುೞಮಾಡೆ ಮೆಚ್ಚಿ ಹರಿಗಂ ಪಂಪಂಗೆ ಗೊಟ್ಟಾ ದ್ವಿಜಾವಸಥ ಗ್ರಾಮಮದೇನ್ ನೆಗೞ್ತೆಯ ಕಳಾಪ ಗ್ರಾಮಮಂ
ಪೋಲ್ತುದೋ ಬರೆದುದೇ ತಾಂಬ್ರಶಾಸನಮಂ ಆದೇಯಮೇ ಧರ್ಮ್ಮವುರಂ ನೆಗೞ್ತೆವೆತ್ತರಿಗನ ಕೊಟ್ಟುದೇ ನೆಗೞ್ದ
ಪಂಪನ ಪೆತ್ತುದೇ ಪೇೞಮ್ ಎನ್ದು ನೀಮ್ಮರುಳೆ ಪಲರ್ಮ್ಮೆಯುಂ ಪಲಬರಂ ಬೆಸಗೊಳ್ಳದೆ ಪೋಗಿ ನೋಡ ಸುನ್ದರ
ವೃಷಭಾಚಲೋನ್ನತ ಶಿಳಾತಳದೊಳ್ ಬರೆದಕ್ಕರಂಗಳಂ ಜಿನಭವನಂಬುಲೆತ್ತಿಂಚುಟ ಜಿನಪೂಜಲ್ ಸೇಯುಚುನ್ನಿ ಜಿನಮುನುಲಕು
ನತ್ತಿನಯನ್ನದಾನಂ ಬೀವುಟಂ ಜಿನವಲ್ಲಭಂ ಬೋಲಂಗಲರೆ ಜಿನಧರ್ಮ್ಮಪರುಲ್ ದಿನಕರು ಸರಿವೆಲ್ಗುದುಮನಿ ಜಿನವಲ್ಲಭುನೊಟ್ಟನೆತ್ತು
ಜಿತಕವಿನನುಂ ಮನುಜುಲ್ಗಲರೇ ಧಾತ್ರಿಂ ವಿನಿತಿಚ್ಚುದುನನಿಯ ವೃತ್ತವಿಬುಧಕವೀನ್ದ್ರುಲ್ ಒಕ್ಕೊಕ್ಕಗುಣಂ
ಕಲ್ಗುದುರೊಕ್ಕೊಣ್ಡಿಗಾಕ್ ಒಕ್ಕಲಕ್ಕಲೇವೆವ್ವರಿಕಿಂ ಲೆಕ್ಕಿಂಪನ್ ಒಕ್ಕಿಲಕ್ಕಕು ಮಿಕ್ಕಿಲಿ ಗುಣಪಕ್ಷಪಾತಿ
ಗುಣಮಣಿಗಣಂಬುಲ್ ಎನ್ದು ಲೋಕಮೆಲ್ಲಂ ಪೊಗೞೆ ನೆಗೞ್ದ ಜಿನವಲ್ಲಭ ಸುಧರ್ಮ್ಮ ಸನ್ತತಿಯೊಳ್ ತೊಟ್ಟ ಗುಣಾವಳಿಯನ್
ಈ ವೃಷಭಗಿರಿಯ ಸಿದ್ಧಶಿಲೆಯೊಳ್ ಎಱೆಯಮ್ಮಂ ಟಂಕೋತ್ಕೀರ್ಣ್ನಮ್ ಮಾಡಿದಂ
ಹಲ್ಮಿಡಿ ಶಾಸನ
ಹಲ್ಮಿಡಿ ಶಾಸನವು ಕನ್ನಡ ಭಾಷೆಯಲ್ಲಿ
ಸಿಕ್ಕಿರುವ ಅತ್ಯಂತ ಹಳೆಯ ಶಾಸನ. ಇದರ ಕಾಲವು ಕ್ರಿ.ಶ. 450. ಇದು ಪ್ರಕಟವಾಗಿದ್ದು 1936 ರಲ್ಲಿ.
ಪ್ರಸಿದ್ಧ ಇತಿಹಾಸಜ್ಞರಾದ ಎಂ.ಎಚ್. ಕೃಷ್ಣ ಅವರು ಈ ಶಾಸನದ ಪಠ್ಯ ಮತ್ತು ವಿವರವಾದ ವಿಶ್ಲೇಷಣೆಯನ್ನು
ಪ್ರಕಟಿಸಿದರು.
ಈ ಶಾಸನವು ಹಾಸನ ಜಿಲ್ಲೆಯ ಬೇಲೂರಿನ ಸಮೀಪದಲ್ಲಿರುವ
ಹಲ್ಮಿಡಿ ಎಂಬ ಹಳ್ಳಿಯಲ್ಲಿ ಸಿಕ್ಕಿತು. ಈಗ ಇದನ್ನು ಕರ್ನಾಟಕ ಸರ್ಕಾರದ ಪುರಾತತ್ವ ಮತ್ತು ವಸ್ತುಸಂಗ್ರಹಾಲಯಗಳ
ಇಲಾಖೆಯ ನಿರ್ದೇಶಕರ ಕಚೇರಿಯ ಆವರಣದಲ್ಲಿ ಇಡಲಾಗಿದೆ.( ಮೈಸೂರು)
ಹಲ್ಮಿಡಿಯಲ್ಲಿ ಇದರ ಫೈಬರ್ ಗ್ಲಾಸ್ ನಕಲೊಂದನ್ನು
ಪ್ರತಿಷ್ಠಾಪಿಸಲಾಗಿದೆ.
ಶಾಸನಶಿಲೆಯು ನಾಲ್ಕು ಅಡಿ ಎತ್ತರ, ಒಂದು ಅಡಿ
ಅಗಲ ಮತ್ತು ಮುಕ್ಕಾಲು ಅಂಗುಲ ದಪ್ಪ ಇದೆ. ಈ ಶಾಸನದಲ್ಲಿ ಹದಿನಾರು ಸಾಲುಗಳಿವೆ. ಮೊದಲ ಸಾಲನ್ನು ಶಿಲೆಯ
ಮೇಲುಭಾಗದಲ್ಲಿ ಕುದುರೆ ಲಾಳದ ಆಕೃತಿಯಲ್ಲಿ ಕೆತ್ತಲಾಗಿದೆ. ನಂತರದ ಹದಿನಾಲ್ಕು ಸಾಲುಗಳು ಶಾಸನದ ಫಲಕದ
ಮೇಲೆ ಬರೆಯಲ್ಪಟ್ಟಿವೆ. ಕೊನೆಯ ಸಾಲನ್ನು, ಶಾಸನದ ಬಲ ಬದಿಯಲ್ಲಿ ಕೆಳಗಿನಿಂದ ಮೇಲೆ ಕೆತ್ತಲಾಗಿದೆ.
ಸುಮಾರು ಇಪ್ಪತ್ತು ಕಡೆ ಶಾಸನದ ಲಿಪಿಯನ್ನು ಸ್ಪಷ್ಟವಾಗಿ ಓದಲು ಕಷ್ಟವಾಗುತ್ತದೆ. ಆದರೂ ಅದನ್ನು ಚೆನ್ನಾಗಿ
ಸಂರಕ್ಷಣೆ ಮಾಡಲಾಗಿದೆಯೆಂದೇ ಹೇಳಬಹುದು.
ಮೊದಲ ಹದಿನೈದು ಸಾಲುಗಳ ಲಿಪಿಯು ಪಶ್ಚಿಮ ಘಟ್ಟಗಳ
ಗವಿಗಳಲ್ಲಿ ದೊರೆತಿರುವ ಗುಹಾಲಿಪಿಯನ್ನು ಅಂತೆಯೇ ಶಾತವಾಹನರ ಕಾಲದ ಶಾಸನಗಳ ಲಿಪಿಯನ್ನು ಹೋಲುತ್ತದೆ.
ಕದಂಬರ ಕಾಕುಸ್ಥವರ್ಮನ ತಾಳಗುಂದದ ಶಾಸನದ ಲಿಪಿಗೂ ಇದಕ್ಕೂ ಆಂಶಿಕವಾದ ಹೋಲಿಕೆಯಿದೆ. ಶಾಸನದಲ್ಲಿ ಅದರ
ಕಾಲವನ್ನು ತಿಳಿಸಿಲ್ಲ. ಆದರೂ ವಿದ್ವಾಂಸರು ಇದರ ಕಾಲವನ್ನು ಕ್ರಿ.ಶ. 450 ಎಂದು ತೀರ್ಮಾನಿಸಿದ್ದಾರೆ.
ಈ ನಿರ್ಣಯವು ಶಾಸನದಲ್ಲಿ ಪ್ರಸ್ತಾಪಿತವಾಗಿರುವ ಚಾರಿತ್ರಿಕ ವ್ಯಕ್ತಿಗಳು, ಅದರ ಭಾಷಿಕ ನೆಲೆಗಳು ಮುಂತಾದ
ಸಂಗತಿಗಳನ್ನು ಅವಲಂಬಿಸಿದೆ.
ಭಟಾರಿ ಎನ್ನುವವನ ಮಗನಾದ ವಿಜ ಅರಸನಿಗೆ ಹಲ್ಮಿಡಿ
ಮತ್ತು ಮೂಳುವಳ್ಳಿ ಎಂಬ ಹಳ್ಳಿಗಳನ್ನು ದಾನವಾಗಿ ಕೊಟ್ಟ ಸಂಗತಿಯನ್ನು ಈ ಶಾಸನವು ದಾಖಲೆ ಮಾಡುತ್ತದೆ.
ಈ ದಾನವನ್ನು ಬಾಣ ಮತ್ತು ಸೇಂದ್ರಿಕ ಎಂಬ ಪ್ರದೇಶಗಳ ವೀರರ ಸಮ್ಮುಖದಲ್ಲಿ ನೀಡಲಾಯಿತು. ಕದಂಬರಿಗೂ
ಕೇಕಯರಿಗೂ ನಡೆದ ಯುದ್ಧದಲ್ಲಿ ವಿಜ ಅರಸನು ತೋರಿಸಿದ ಪರಾಕ್ರಮಕ್ಕೆ ಪ್ರತಿಫಲವಾಗಿ ಈ ದಾನವನ್ನು ಕೊಟ್ಟಿದ್ದರು.
ಈ ಹಳ್ಳಿಗಳಲ್ಲಿರುವ ಗದ್ದೆಗಳಲ್ಲಿ ಹತ್ತನೆಯ ಒಂದು ಭಾಗವನ್ನು ಬ್ರಾಹ್ಮಣರಿಗೆ ಕೊಡಬೇಕೆಂಬ ಸೂಚನೆಯನ್ನು
ಶಾಸನದ ಕೊನೆಯ ಭಾಗವು ದಾಖಲೆ ಮಾಡುತ್ತದೆ. ಆ ಬ್ರಾಹ್ಮಣರಿಗೆ ಭೂಕಂದಾಯವನ್ನು ಕೊಡುವುದರಿಂದಲೂ ವಿನಾಯಿತಿಯನ್ನು
ನೀಡಲಾಗಿತ್ತು.
ಸಂಸ್ಕೃತದಲ್ಲಿರುವ ಮೊದಲ ಸಾಲು ವಿಷ್ಣುವಿನ
ಪ್ರಾರ್ಥನೆಯಾಗಿದೆ. ಅದರ ಶೈಲಿಯು ಅಲಂಕಾರಭರಿತವೂ ಪಾಂಡಿತ್ಯಪೂರ್ಣವೂ ಆಗಿದೆ. ಶಾಸನದ ಮಿಕ್ಕ ಸಾಲುಗಳು
ಕನ್ನಡದಲ್ಲಿವೆ. ಆದರೆ, ಅವು ಕೂಡ ಸಂಸ್ಕೃತದಿಂದ ತೆಗೆದುಕೊಂಡ ಸಮಾಸಪದಗಳಿಂದ ನಿಬಿಡವಾಗಿವೆ. ಇಡೀ
ಶಾಸನದಲ್ಲಿ ಸುಮಾರು ಇಪ್ಪತ್ತೈದು ಕನ್ನಡ ಪದಗಳಿವೆ. ಇಲ್ಲಿನ ಭಾಷೆಯು ಕನ್ನಡದ ವಿಕಾಸದಲ್ಲಿ ಮೊದಲ
ಹಂತವೆಂದು ತಿಳಿಯಲಾದ ಪೂರ್ವದ ಹಳಗನ್ನಡದಲ್ಲಿದೆ. ಪ್ರಥಮಾ ವಿಭಕ್ತಿ ಪ್ರತ್ಯದ ದೀರ್ಘೀಕರಣ ಮತ್ತು
ಸಪ್ತಮೀ ವಿಭಕ್ತಿ ಪ್ರತ್ಯವಾಗಿ ‘ಉಳ್’ ಎಂಬ ರೂಪದ ಬಳಕೆಗಳು ಈ ಶಾಸನದ ಅನನ್ಯ ವ್ಯಾಕರಣರೂಪಗಳಲ್ಲಿ
ಕೆಲವು. ಇಲ್ಲಿ ಬಳಸಲಾಗಿರುವ ಕರ್ಮಣೀ ಪ್ರಯೋಗವು ಕ್ರಿ.ಶ. 450 ರಷ್ಟು ಹಿಂದೆಯೇ ಕನ್ನಡದ ಮೇಲೆ ಸಂಸ್ಕೃತದ
ಪ್ರಭಾವವು ಆಗಿತ್ತೆನ್ನುವುದಕ್ಕೆ ಪುರಾವೆಯಾಗಿದೆ.
ಈ ಶಾಸನದಲ್ಲಿರುವ ಕೆಲವು ಪದಗಳ ಖಚಿತವಾದ ಅರ್ಥದ
ಬಗ್ಗೆ ಒಮ್ಮತಕ್ಕೆ ಬರಲು ಸಾಧ್ಯವಾಗಿಲ್ಲ. ಆಗಿನ ಕಾಲದಲ್ಲಿ ಜಯಶಾಲಿಗಳೂ ಪರಾಕ್ರಮಿಗಳೂ ಆದ ಯೋಧರಿಗೆ
ಸೂಕ್ತವಾದ ದತ್ತಿಗಳನ್ನು ನೀಡುವ ಪದ್ಧತಿಯು ಇತ್ತೆಂದು ಇದರಿಂದ ತಿಳಿದು ಬರುತ್ತದೆ. ಇಂತಹ ಕೊಡುಗೆಯನ್ನು
ಹೋರಾಡಿ ಮೃತರಾದ ವೀರರ ಕುಟುಂಬವರ್ಗದವರಿಗೆ ಕೊಡುವ ಪದ್ಧತಿಯೂ ಇತ್ತು.
ಹೀಗೆ ಹಲ್ಮಿಡಿ ಶಾಸನವು ಕನ್ನಡದ ಸಂದರ್ಭದಲ್ಲಿ
ಬಹಳ ಮಹತ್ವದ ದಾಖಲೆಯಾಗಿದೆ.
ಮರೆತ ಮಾತು: ಈಚೆಗೆ ಡಾ. ಷ. ಶೆಟ್ಟರ್ ಅವರು
ಗಂಗ ರಾಜವಂಶಕ್ಕೆ ಸೇರಿದ ಕೊಂಗುಣಿವರ್ಮನ ಒಂದು ಶಾಸನವು, ಹಲ್ಮಿಡಿ ಶಾಸನಕ್ಕಿಂತ ಹಿಂದಿನದೆಂದು ಅಭಿಪ್ರಾಯ
ಪಟ್ಟಿದ್ದಾರೆ.
ಹಲ್ಮಿಡಿ ಶಾಸನದ ಪಠ್ಯ
ಜಯತಿ ಶ್ರೀ ಪರಿಷ್ವರ್ಙ್ಗ ಶ್ಯಾರ್ಙ್ಗ [ವ್ಯಾ]ನತಿರ್
ಅಚ್ಯುತಃ ದಾನಕ್ಷೆರ್ ಯುಗಾನ್ತಾಗ್ನಿಃ [ಶಿಷ್ಟಾನಾನ್ತು ಸುದರ್ಶನಃ ನಮಃ ಶ್ರೀಮತ್ ಕದಂಬಪನ್ ತ್ಯಾಗ
ಸಂಪನ್ನನ್ ಕಲಭೋg[ನಾ] ಅರಿ ಕಕುಸ್ಥಭಟ್ಟೋರನ್ ಆಳೆ ನರಿದಾವಿ[ಳೆ] ನಾಡುಳ್ ಮೃಗೇಶನಾಗೇನ್ದ್ರಾಭೀಳರ್
ಭ್ಭಟಹರಪ್ಪೋರ್ ಶ್ರೀ ಮೃಗೇಶ ನಾಗಾಹ್ವಯರ್ ಇರ್ವ್ವರಾ ಬಟರಿ ಕುಲಾಮಲ ವ್ಯೋಮತಾರಾಧಿನಾಥನ್ ಅಳಪ ಗಣ
ಪಶುಪತಿಯಾ ದಕ್ಷಿಣಾಪಥ ಬಹುಶತಹವನಾಹವದು[ಳ್] ಪಶುಪ್ರದಾನ ಶೌರ್ಯ್ಯೋದ್ಯಮ ಭರಿತೋ[ನ್ದಾನ]ಪಶುಪತಿಯೆನ್ದು
ಪೊಗೞೆಪ್ಪೊಟ್ಟಣ ಪಶುಪತಿ ನಾಮಧೇಯನ್ ಆಸರಕ್ಕೆಲ್ಲಭಟರಿಯಾ ಪ್ರೇಮಾಲಯಸುತನ್ಗೆ zಸೇನ್ದ್ರಕ ಬಣೋಭಯ ದೇಶದಾ
ವೀರಪುರುಷಸಮಕ್ಷದೆ ಕೇಕಯ ಪಲ್ಲವರಂ ಕಾದೆಱದು ಪೆತ್ತಜಯನಾ ವಿಜ ಅರಸಂಗೆ ಬಾಳ್ಗೞ್ಚು ಪಲ್ಮಡಿಉಂ ಮೂೞುವಳ್ಳಿಉಂ
ಕೊಟ್ಟಾರ್ ಬಟಾರಿ ಕುಲದೊನಳ ಕದಂಬನ್ ಕೞ್ದೋನ್ ಮಹಾಪಾತಕನ್ ಸ್ವಸ್ತಿ ಭಟ್ಟರ್ಗ್ಗೀಗೞ್ದೆ ಒಡ್ಡಲಿ ಆ
ಪತ್ತೊನ್ದಿ ವಿಟ್ಟಾರಕರ
ಸೂಚನೆ:- ಇಲ್ಲಿನ ವಿವರಗಳನ್ನು ವಿವಿಧ ಅಂತರ್ಜಾಲದ ಪುಟಗಳಿಂದ ಸಂಗ್ರಹಿಸಿದ್ದು, ಅಲ್ಪ ಬದಲಾವಣೆಗಳೊಂದಿಗೆ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಇಲ್ಲಿ ನೀಡಲಾಗಿದೆ.
**********
Comments
Post a Comment