ಯಲಬುರ್ಗದ ಸಿಂದರು
11-13ನೆಯ ಶತಮಾನಗಳಲ್ಲಿ ಎರಂಬರಗೆಯನ್ನು (ಈಗಿನ ಎಲಬುರ್ಗಿ) ರಾಜಧಾನಿಯನ್ನಾಗಿ ಮಾಡಿಕೊಂಡು ಕಿಸುಕಾಡು 70, ಬಾಗಡಗೆ 70, ಕೆಳವಡಿ 30, ನರೆಯಂಗಲ್ಲು 12, ಕರಿವಿಡಿ 30 ಮುಂತಾದ ಪ್ರದೇಶಗಳನ್ನು ಆಳಿದ ಒಂದು ಮಾಂಡಲಿಕ ಮನೆತನ. ಸಿಂದರ ಒಂದು ಶಾಖೆ.
ಇವರ ಶಾಸನಗಳಲ್ಲಿ ಮೂಲ ಪುರುಷನ ಹೆಸರನ್ನು ಹೇಳದೆ ಆಚುಗಿ (I), ನಾಕ, ಸಿಂಗ (I) ದಾಸ, ದಾಮ, ಚಾವುಂಡ (I) ಮತ್ತು ಚಾವ ಎಂಬ ಏಳು ಜನ ಸಹೋದರರಿಂದ ಇವರ ವಂಶವೃಕ್ಷ ಪ್ರಾರಂಭವಾಗುತ್ತದೆ. ಬಾಗಡಗೆಯ ಸಿಂದರ ವಂಶಕ್ಕೆ ಸೇರಿದ ನಾಗಾದಿತ್ಯನೇ ಈ ಏಳು ಜನ ಸಹೋದರರ ತಂದೆಯಿರಬೇಕೆಂದು ಕೆಲವರ ಅಭಿಮತ.
ಈ ಶಾಖೆಯ ಮೊದಲ ದೊರೆ ಒಂದನೆಯ ಆಚುಗಿ. ಇವನು ಕಲ್ಯಾಣದ ಚಾಳುಕ್ಯರ (6ನೆಯ ವಿಕ್ರಮಾದಿತ್ಯನ) ಸಾಮಂತನಾಗಿದ್ದ. ಒಂದನೆಯ ಆಚುಗಿಯ ಮಗ ಬಮ್ಮರಸ. ಈತ 1083ರಲ್ಲಿ 6ನೆಯ ವಿಕ್ರಮಾದಿತ್ಯನ ಅಧೀನದಲ್ಲಿ ಕಿಸುಕಾಡು 70 ಮತ್ತು ನರೆಯಂಗಲ್ಲು 12 ಪ್ರದೇಶಗಳನ್ನು ಆಳುತ್ತಿದ್ದ. ಈತನಿಗೆ ಮಕ್ಕಳಿಲ್ಲದ ಕಾರಣ ಈತನ ಚಿಕ್ಕಪ್ಪನಾದ ಒಂದನೆ ಸಿಂಗನ ಮಗನಾಗಿದ್ದ
ಆಚುಗಿ II ಸು. 1100ರಲ್ಲಿ ಅಧಿಕಾರಕ್ಕೆ ಬಂದ. ಆದರೆ, ಬಹುಶಃ ಆಚುಗಿ ಇನ್ನೂ ಅಪ್ರಾಪ್ತವಯಸ್ಕನಾಗಿದ್ದ ಕಾರಣ ಕಿಸುಕಾಡು 70 ಮತ್ತು ಕರಿವಿಡಿ 30 ಪ್ರದೇಶಗಳನ್ನು ಕೆಲಕಾಲ ಅವರರಸನೆಂಬ ಮಹಾಮಂಡಲೇಶ್ವರ ಆಳಿದ. ಚಾಳುಕ್ಯ ಆರನೆಯ ವಿಕ್ರಮಾದಿತ್ಯನ ಕೊನೆಗಾಲದಲ್ಲಿ ಹೊಯ್ಸಳರು, ಗೋವೆಯ ಕದಂಬರು, ಕರಹಾಡದ ಶಿಲಾಹಾರರು ಮತ್ತು ಉಚ್ಚಂಗಿಯ ಪಾಂಡ್ಯರು ಚಾಳುಕ್ಯ ರಾಜ್ಯದ ಮೇಲೆ ಯುದ್ಧಗಳನ್ನು ಪ್ರಾರಂಭಿಸಿದಾಗ ಉಂಟಾದ ಕಷ್ಟಕರ ಪರಿಸ್ಥಿತಿಯಲ್ಲಿ ಚಾಳುಕ್ಯ ರಾಜ್ಯವನ್ನು ಕಾಪಾಡಿದ ಕೀರ್ತಿ ಎರಡನೆಯ ಆಚುಗಿಯದು. ಮೊಟ್ಟ ಮೊದಲು ಆಚುಗಿ ಹೊಯ್ಸಳರನ್ನು ಸೋಲಿಸಿ, ಅನಂತರ ಗೋವೆಗೆ ನುಗ್ಗಿ ಉಪ್ಪಿನಕಟ್ಟೆಯನ್ನು ಸುಟ್ಟುಹಾಕಿ ಎರಡನೆಯ ಜಯಕೇಶಿ ಸ್ವತಂತ್ರನಾಗದಂತೆ ಮಾಡಿ, ಉಚ್ಚಂಗಿಯ ಪಾಂಡ್ಯರಾಜ ತ್ರಿಭುವನಮಲ್ಲನನ್ನು ಸದೆಬಡಿದು, ಶಿಲಾಹಾರ ಭೋಜನನ್ನು ಸೋಲಿಸಿ ಹಿಂದಿರುಗಿದ. ಇದರಿಂದ ಸಂತೋಷಗೊಂಡ ವಿಕ್ರಮಾದಿತ್ಯ ಇವನಿಗೆ ತ್ರಿಭುವನಮಲ್ಲ ಕೇಸರಿ ಎಂಬ ಬಿರುದನ್ನು ಕೊಟ್ಟ. ಸಿಂದವಂಶದ ಅನೇಕ ಶಾಸನಗಳು ಆಚುಗಿಯ ಈ ಎಲ್ಲ ವಿಜಯಗಳನ್ನೂ ಕೊಂಡಾಡುತ್ತವೆ. ಈ ವಿಜಯಗಳ ಜೊತೆಗೆ, ಆಚುಗಿಯು ಜಗ್ಗು ಎಂಬುವನನ್ನು ಸೋಲಿಸಿದನೆಂದು ತಿಳಿದುಬರುತ್ತದೆ. ಈ ವಿಜಯಗಳಲ್ಲಿ ಇವನ ಮಗ ಒಂದನೆಯ ಪೆರ್ಮಾಡಿಯೂ ಭಾಗಿಯಾಗಿದ್ದ. ಆಚುಗಿಗೆ ಮಹಾದೇವಿ ಮತ್ತು ಚಂದಲದೇವಿ ಎಂಬ ಇಬ್ಬರು ಪತ್ನಿಯರು. ಒಂದನೆಯ ಪೆರ್ಮಾಡಿ, ಎರಡನೆಯ ಚಾವುಂಡ ಎಂಬ ಇಬ್ಬರು ಪುತ್ರರೂ ಇದ್ದರು. ಪೆರ್ಮಾಡಿ ಮಹಾದೇವಿಯ ಮಗ, ಚಾವುಂಡ ಚಂದಲದೇವಿಯ ಮಗ.
ಇಮ್ಮಡಿ ಆಚುಗಿಯ ಅನಂತರ ಪೆರ್ಮಾಡಿ ತನ್ನ ಮಲಸೋದರನಾದ ಎರಡನೆಯ ಚಾವುಂಡನೊಡನೆ ಅಧಿಕಾರ ಸೂತ್ರಗಳನ್ನು ನಿರ್ವಹಿಸಿದ. ಪೆರ್ಮಾಡಿ ಹಾಗೂ ಚಾವುಂಡರು ಚಾಳುಕ್ಯ ಎರಡನೆಯ ಜಗದೇಕಮಲ್ಲ ಮತ್ತು ಮೂರನೆಯ ತೈಲಪರ ಮಾಂಡಲಿಕರಾಗಿದ್ದರು. ಪೆರ್ಮಾಡಿಯು ಕುಲಶೇಖರನನ್ನು ಸೋಲಿಸಿ, ಚಟ್ಟನ ಶಿರಶ್ಛೇದನ ಮಾಡಿ, ಜಯಕೇಶಿಯ ಬೆನ್ನಟ್ಟಿ ಹೊಯ್ಸಳ ವಿಷ್ಣುವರ್ಧನನ ರಾಜ್ಯವನ್ನು ಕಸಿದನೆಂದು ಶಾಸನಗಳಲ್ಲಿ ವರ್ಣಿಸಲಾಗಿದೆ. ಇವನ ಸೋದರನಾಗಿದ್ದ ಇಮ್ಮಡಿ ಚಾವುಂಡ ಹೊಯ್ಸಳರನ್ನು ಸೋಲಿಸಿದುದಲ್ಲದೆ ಪಾಂಡ್ಯರ ಕಾಮದೇವನೊಡನೆಯೂ ಕಾದಿದನೆಂದು ಹೇಳಿದೆ. ಈ ಕಾಮದೇವ ಉಚ್ಚಂಗಿಯ ಪಾಂಡ್ಯ ಕುಲಕ್ಕೆ ಸೇರಿದವನು. ಇಮ್ಮಡಿ ಚಾವುಂಡನು ಕಳಚುರಿ ಬಿಜ್ಜಳನ ಇಬ್ಬರು ಮಕ್ಕಳಾದ ಲಕ್ಷ್ಮೀದೇವಿ ಮತ್ತು ಸಿರಿಯಾದೇವಿಯರನ್ನು ಮದುವೆಯಾಗಿದ್ದ. ಸಿರಿಯಾದೇವಿಗೆ ವೀರಬಿಜ್ಜಣ ಮತ್ತು ವೀರವಿಕ್ರಮ ಎಂಬ ಇಬ್ಬರು ಮಕ್ಕಳು.
ಆಚುಗಿ III ಮತ್ತು ಪೆರ್ಮಾಡಿ II ಇವರು ಚಾವುಂಡನ ಇನ್ನೊಬ್ಬ ಪತ್ನಿಯಾದ ದೇಮಲದೇವಿಯ ಗರ್ಭಸಂಜಾತರು. ಚಾವುಂಡನು ಕಳಚುರಿ ಬಿಜ್ಜಳನ ಸಾಮಂತಿಕೆಯನ್ನು ಒಪ್ಪಿದ್ದ. ಆದರೆ ಕಳಚುರಿಯರ ಅನಂತರ ಚಾವುಂಡನ ಮಕ್ಕಳು ಪುನಃ ಚಾಳುಕ್ಯ ನಾಲ್ಕನೆಯ ಸೋಮೇಶ್ವರನಿಗೆ ನಿಷ್ಠೆ ತೋರಿದರು. ವೀರಬಿಜ್ಜಣ ಮತ್ತು ವೀರವಿಕ್ರಮರು ಜೊತೆಯಾಗಿ ಆಳಿದುದೊಂದು ವಿಶೇಷ. ಚಾಳುಕ್ಯರ ಅನಂತರ ಸೇವುಣರು ಇವರನ್ನು ಸೋಲಿಸಲು ಯತ್ನಿಸಿ, ಹಲವು ವರ್ಷಗಳ ಬಳಿಕ ಯಶಸ್ವಿಯಾದರು. ಸಿಂದ ವಿಕ್ರಮಾದಿತ್ಯ 1229ರಲ್ಲಿ ಸೇವುಣ ಸಿಂಘಣನ ಸಾಮಂತನಾಗಿದ್ದ ಸಂಗತಿ ತಿಳಿದು ಬರುತ್ತದೆ.
Comments
Post a Comment