ಸವದತ್ತಿಯ ರಟ್ಟರು
ಸುಮಾರು 10 - 13ನೆಯ ಶತಮಾನಗಳಲ್ಲಿ, ಕರ್ನಾಟಕದ ಇಂದಿನ ಬೆಳಗಾವಿ ಜಿಲ್ಲೆ ಮತ್ತು ಅದರ ಸುತ್ತಲಿನ ಕೆಲವು ಪ್ರದೇಶಗಳನ್ನು ಒಳಗೊಂಡಿದ್ದ ಕುಹುಂಡಿ ಮಂಡಲವನ್ನು ಆಳುತ್ತಿದ್ದ ಸಾಮಂತ ರಾಜಮನೆತನ. ಈ ವಂಶದವರ ರಾಜಧಾನಿ ಮೊದಲು ಬೆಳಗಾವಿ ಜಿಲ್ಲೆಯ ಸವದತ್ತಿ, ಅನಂತರ ವೇಣುಗ್ರಾಮ (ಬೆಳಗಾವಿ). ಇವರು ತಮ್ಮ ಕೆಲವು ಶಾಸನಗಳಲ್ಲಿ, ಪ್ರಾಯಶಃ ಘನತೆಯನ್ನು ಹೆಚ್ಚಿಸಿಕೊಳ್ಳಲು, ತಾವು ರಾಷ್ಟ್ರಕೂಟ ಮುಮ್ಮಡಿ ಕೃಷ್ಣನ ಸಂತತಿಯವರೆಂದು ಹೇಳಿಕೊಂಡಿದ್ದಾರೆ. ಆದರೆ ಶಾಸನಗಳಲ್ಲಿ ಈ ವಂಶದ ಹೆಸರು ರಾಷ್ಟ್ರಕೂಟ ಎಂದೂ ಎಲ್ಲೂ ಇಲ್ಲದೆ ರಟ್ಟ ಎಂದೇ ಸಂಬೋಧಿತವಾಗಿದೆ.
ಮೂಲ ಮತ್ತು ಸ್ಥಾಪಕರು:- ರಟ್ಟ ರಾಜ್ಯಸ್ಥಾಪನೆ ಮತ್ತು ಮೂಲ ಪುರುಷರ ವಿಷಯವಾಗಿ ಏನೂ ತಿಳಿದಿಲ್ಲ. ಇದರ ಒಂದು ಶಾಖೆಯ ಆಳ್ವಿಕೆ ಮೈಳಾಪತೀರ್ಥನೆಂಬ ಜೈನ ಗುರುವಿನಿಂದ ಸ್ಥಾಪಿತವಾದ ಕಾರೇಯ ಪಂಥದ ಅನುಯಾಯಿಯೂ ಮೇಡನ ಮಗನೂ ಆದ ಪೃಥ್ವೀರಾಮನಿಂದ ಪ್ರಾರಂಭವಾಯಿತೆಂದು ತಿಳಿದು ಬರುತ್ತದೆ. ನಂತರ
ಕಂಡುಬರುವ ಶಾಂತಿವರ್ಮ ಕಲ್ಯಾಣ ಚಾಳುಕ್ಯ ವಂಶದ ಮೊದಲನೆಯ ತೈಲನ ಸಾಮಂತನಾಗಿದ್ದ. ಇವನ ಮಗ ಕತ್ತ ಅಥವಾ ಮೊದಲನೆಯ ಕಾರ್ತವೀರ್ಯ ಸು. 975 -
1000). 980 ರ ಇವನ ಮೊಟ್ಟ ಮೊದಲನೆಯ ಶಾಸನದಲ್ಲಿ ಇವನು ಚಾಳುಕ್ಯ ಇಮ್ಮಡಿ ತೈಲನ ಸಾಮಂತನಾಗಿ ಕುಹುಂಡಿ 3000 ಪ್ರಾಂತ್ಯವನ್ನು ಆಳುತ್ತಿದ್ದನೆಂದು ಹೇಳಿದೆ. ಇವನೇ ಈ ವಂಶದ ನಿಜವಾದ ಸ್ಥಾಪಕ.
ಕಾರ್ತವೀರ್ಯನ ಅನಂತರ ಇವನ ಮೊದಲನೆಯ ಮಗ ದಾಯಿಮ ಮತ್ತು ಇನ್ನೊಬ್ಬ ಮಗ ಕಣ್ಣ ಕ್ರಮವಾಗಿ ಆಳಿದರು. ಅನಂತರ ಶಾಸನದಲ್ಲಿ ದಾಯಿಮನನ್ನು “ರಟ್ಟರ ಮೇರು” ಎಂದು ವರ್ಣಿಸಿರುವುದು ಗಮನಾರ್ಹ.
ಕಣ್ಣನ ಮಗ ಎರಗ ಅಥವಾ ಎರೆಯಮ ಸು. 1030 – 47
ನಡುವೆ ಆಳಿದನು. ಇವನು ಚಾಳುಕ್ಯ ಎರಡನೆಯ ಜಯಸಿಂಹನ ಮಹಾಸಾಮಂತ. ರಟ್ಟಮಾರ್ತಾಂಡ, ರಟ್ಟನಾರಾಯಣ, ಸಿಂಗನಗರುಡ ಮುಂತಾದ ಇವನ ಬಿರುದುಗಳಿಂದ ಇವನು ಎರಡನೆಯ ಜಯಸಿಂಹನ ಯುದ್ಧಗಳಲ್ಲಿ ಸಹಾಯಕನಾಗಿ ತನ್ನ ಪ್ರಭಾವವನ್ನು ಬೆಳೆಯಿಸಿಕೊಳ್ಳುತ್ತಿದ್ದನೆಂದು ಹೇಳಬಹುದು.
ಎರಗನ ಮರಣಾನಂತರ ಇವನ ಸಹೋದರನಾದ ಅಂಕ (ಸು. 1047-64) ರಾಜನಾದ. ಇವನು ಚಾಳುಕ್ಯ ಒಂದನೆಯ ಸೋಮೇಶ್ವರನ ಸಾಮಂತ. ಇವನ ಕಾಲದಲ್ಲಿ ಚೋಳರು ಕೊಲ್ಲಾಪುರದವರೆಗೂ ನುಗ್ಗಿದರು.
ಅಂಕನ ಅನಂತರ ಇವನ ಅಣ್ಣನ ಮಗ ಸೇನ ಕೆಲಕಾಲ ಆಳಿದನು (ಸು.1064-66). ಅನಂತರ ಅವನ ಮಗ ಇಮ್ಮಡಿಕಣ್ಣ (ಕಣ್ಣಕೈರ) ಆಳಿದರು. ಇಮ್ಮಡಿ ಕಣ್ಣನೂ ಅವನ ಸಹೋದರ ಇಮ್ಮಡಿ ಕಾರ್ತವೀರ್ಯನೂ ಒಟ್ಟಿಗೆ ರಾಜ್ಯಭಾರ ಮಾಡುತ್ತಿದ್ದರೆಂದು ತಿಳಿದುಬರುತ್ತದೆ.
ಇಮ್ಮಡಿ ಕಣ್ಣನು ಕದಂಬ ದೊರೆ ಜಯಕೇಶಿಯೊಡನೆ ಸೇರಿ ಲಾಟರಾಜ್ಯದ ಮೇಲೆ ದಂಡೆತ್ತಿಹೋಗಿ ವಿಜಯಿಯಾದನೆಂದು ಊಹಿಸಲು ಅವಕಾಶವಿದೆ. ಇಮ್ಮಡಿ ಕಣ್ಣನ ಹಿಂದಿನವರೆಲ್ಲ ಸಾಮಂತರೆಂಬ ಬಿರುದನ್ನು ಹೊಂದಿದ್ದರೆ, ಇವನು ಮಹಾಮಂಡಲೇಶ್ವರ ಪದವಿಯನ್ನು ಸಂಪಾದಿಸಿದ ಮೊಟ್ಟಮೊದಲನೆಯ ರಟ್ಟರಾಜ. ಸು. 1068ರಲ್ಲಿ ಕಣ್ಣ ಮರಣ ಹೊಂದಿದ.
ಅನಂತರ ಸಹರಾಜನಾಗಿದ್ದ ಇವನ ತಮ್ಮ ಇಮ್ಮಡಿ ಕಾರ್ತವೀರ್ಯ ಮೊದಲು ಇಮ್ಮಡಿ ಸೋಮೇಶ್ವರ, ಅನಂತರ ಆರನೆಯ ವಿಕ್ರಮಾದಿತ್ಯರ ಆಶ್ರಯದಲ್ಲಿ ಆಳಿದ.
ಕಾರ್ತವೀರ್ಯನ ಮಗ ಇಮ್ಮಡಿ ಸೇನ (ಸು.
1094-1129). ಇವನು ಆರನೆಯ ವಿಕ್ರಮಾದಿತ್ಯನ ಮಗ ಯುವರಾಜ ಜಯಕರ್ಣನ ಆಶ್ರಯದಲ್ಲಿ ಆಳುತ್ತಿದ್ದ. ಹೊಯ್ಸಳರು, ಗೋವೆಯ ಕದಂಬರು, ಪಾಂಡ್ಯರು, ಶಿಲಾಹಾರರು ಮುಂತಾದವರು ಆರನೆಯ ವಿಕ್ರಮಾದಿತ್ಯನನ್ನು ಸೋಲಿಸಲು ಪ್ರಯತ್ನಗಳನ್ನು ಮಾಡುತ್ತಿದ್ದ ಸಮಯದಲ್ಲಿ ಇಮ್ಮಡಿ ಸೇನನು ದಂಡನಾಯಕ ಚಾಮುಂಡ ಮತ್ತು ಸಿಂದದೊರೆ ಆಚುಗಿ ಇವರೊಡನೆ ಸೇರಿ ಚಾಳುಕ್ಯರಿಗೆ ಸಹಾಯ ಮಾಡಿದ. ಇವನು ಕೆಲಕಾಲ ಮುಮ್ಮಡಿ ಸೋಮೇಶ್ವರನ ಅಧೀನನೂ ಆಗಿದ್ದಂತೆ ತೋರುತ್ತದೆ.
ಇಮ್ಮಡಿ ಸೇನನ ಅನಂತರ ಮುಮ್ಮಡಿ ಕಾರ್ತವೀರ್ಯ (ಸು. 1129-88) ರಾಜನಾದ. ಇವನ ಆಳ್ವಿಕೆಯ ಕಾಲದಲ್ಲಿ
ಏಳಿಗೆಗೆ ಬಂದ ಕಳಚುರಿಗಳು ಕಲ್ಯಾಣದ ಚಾಳುಕ್ಯರನ್ನು ಪದಚ್ಯುತರನ್ನಾಗಿಸಿ ತಮ್ಮ ಆಳ್ವಿಕೆ ಆರಂಭಿಸಿದರು. ಈ ಸಂದರ್ಭದಲ್ಲಿ ಇವನು
ಸ್ವತಂತ್ರನಾಗಲು ಹವಣಿಸಿದರೂ ಫಲಿಸದೆ ಕೊನೆಗೆ ಕಳಚೂರಿಗಳ ಸಾಮಂತನಾದ. ಮುಂದೆ
ಕಳಚುರಿಗಳ ಅವನತಿ ಪ್ರಾರಂಭವಾದಾಗ ಸ್ವಲ್ಪಕಾಲ ಮಹಾಮಂಡಳೇಶ್ವರ ಎಂದಷ್ಟೇ ಅಲ್ಲದೆ ಚಕ್ರವರ್ತಿ ಎಂಬ ಬಿರುದನ್ನೂ ಹೊತ್ತು ಸ್ವತಂತ್ರವಾಗಿ ಆಳಿದ. ಆದರೆ ಇವನು ಮುಂದೆ ಚಾಳುಕ್ಯ ನಾಲ್ವಡಿ ಸೋಮೆಶ್ವರನ ಕಾಲದಲ್ಲಿ ತನ್ನ ಸ್ವಾತಂತ್ರ್ಯವನ್ನು ಕಳೆದುಕೊಂಡಂತೆ ತೋರುತ್ತದೆ. ಇವನ ರಾಣಿ ಪದ್ಮಲದೇವಿ ಜೈನಧರ್ಮಕ್ಕೆ ವಿಶೇಷ ಪ್ರೋತ್ಸಾಹವನ್ನು ನೀಡಿದಳು.
ಮುಮ್ಮಡಿ ಕಾರ್ತವೀರ್ಯನ ಅನಂತರ ಒಂದನೆಯ ಲಕ್ಷ್ಮೀದೇವ (ಸು. 1188-99) ಮೊದಲು ಸಾಮಂತಪದವಿಯನ್ನು ಸಾಧಿಸಿಕೊಂಡು ಹೊಯ್ಸಳರಿಗೂ ಸೇವುಣರಿಗೂ ಕಾದಾಟಗಳು ನಡೆಯುತ್ತಿದ್ದ ಕಾಲದಲ್ಲಿ ಪುನಃ ಸ್ವತಂತ್ರನಾದ. ಅಷ್ಟೇ ಅಲ್ಲದೆ ಗೋವೆಯ ಕದಂಬರ ವಶದಲ್ಲಿದ್ದ ವೇಣುಗ್ರಾಮವನ್ನು ಅವರಿಂದ ಕಿತ್ತುಕೊಂಡು ತನ್ನ ರಾಜಧಾನಿಯನ್ನು ಸವದತ್ತಿಯಿಂದ ವೇಣುಗ್ರಾಮಕ್ಕೆ ಬದಲಾಯಿಸಿದ. ಲಕ್ಷ್ಮೀದೇವನಿಗೆ ಚಂದಲದೇವಿ ಎಂಬ ರಾಣಿಯಿಂದ ನಾಲ್ವಡಿ ಕಾರ್ತವೀರ್ಯ ಮತ್ತು ಮಲ್ಲಿಕಾರ್ಜುನ ಎಂಬ ಮಕ್ಕಳಿದ್ದರು. ತಮ್ಮ ತಂದೆಯ ಮರಣಾನಂತರ ಇವರಿಬ್ಬರೂ ರಾಜ, ಯುವರಾಜರಾಗಿ ಆಳಿದರು.
ನಾಲ್ವಡಿ ಕಾರ್ತವೀರ್ಯನೂ ಸ್ವತಂತ್ರನಾಗಿಯೇ ರಾಜ್ಯವಾಳಿದ (1199-1221). ಸು. 1210ರಲ್ಲಿ ಇವನ ಸಹೋದರನೂ ಯುವರಾಜನೂ ಆಗಿದ್ದ ಮಲ್ಲಿಕಾರ್ಜುನ ಅಕಾಲ ಮರಣಕ್ಕೆ ತುತ್ತಾದ.
ನಾಲ್ವಡಿ ಕಾರ್ತವೀರ್ಯನ ಮಗ ಇಮ್ಮಡಿ ಲಕ್ಷ್ಮೀದೇವ (1221-33) ಮುನಿಚಂದ್ರನೆಂಬ ಗುರುವಿನ ಸಹಾಯದಿಂದ ಸೇವುಣ ಸಿಂಘಣನೊಡನೆ ಯುದ್ಧ ಹೂಡಿದ. ಆದರೆ ಆ ಯುದ್ಧದಲ್ಲಿ ಪರಾಜಿತನಾದ. ಇದರಿಂದ ರಟ್ಟರ ಆಳ್ವಿಕೆಯೂ ಕೊನೆಗೊಂಡಿತು.
ಸಾಂಸ್ಕೃತಿಕ ಕೊಡುಗೆಗಳು:- ರಟ್ಟರು ಕರ್ನಾಟಕದ ರಾಜಕೀಯ ಚರಿತ್ರೆಯಲ್ಲಿ ಮಾತ್ರವಲ್ಲದೆ ಸಾಂಸ್ಕೃತಿಕ ಚರಿತ್ರೆಯಲ್ಲೂ ಖ್ಯಾತರಾಗಿದ್ದಾರೆ. ರಟ್ಟ ರಾಣಿಯರಲ್ಲಿ ಅನೇಕರು ಜೈನ ದೇವಾಲಯಗಳನ್ನು ಕಟ್ಟಿಸಿದರೆ ಮತ್ತೆ ಕೆಲವರು ಈಶ್ವರ ದೇವಸ್ಥಾನಗಳನ್ನು ಕಟ್ಟಿಸಿದರು. ಇವರು ಕನ್ನಡ ಸಾಹಿತ್ಯಕ್ಕೆ ವಿಶೇಷ ಪ್ರೋತ್ಸಾಹವನ್ನು ಕೊಟ್ಟರು. ಮೊದಲನೆಯ ಲಕ್ಷ್ಮೀದೇವನು ಕರ್ಣಪಾರ್ಯ ಮತ್ತು ನೇಮಿಚಂದ್ರ ಎಂಬ ಪ್ರಸಿದ್ಧ ಕನ್ನಡ ಲೇಖಕರ ಪೋಷಕನಾಗಿದ್ದರೆ, ಪಾಶ್ರ್ವನಾಥಪುರಾಣದ ಕರ್ತೃ ಪಾಶ್ರ್ವನಾಥ ಪಂಡಿತ ನಾಲ್ವಡಿ ಕಾರ್ತವೀರ್ಯನ ಆಶ್ರಯದಲ್ಲಿದ್ದ. ನಾಲ್ವಡಿ ಕಾರ್ತವೀರ್ಯನ ಕಾಲದಲ್ಲಿ ಬೆಳಗಾವಿ ಸಂಪದ್ಭರಿತ ನಗರವಾಗಿದ್ದು, ದೂರ ದೇಶದ ವ್ಯಾಪಾರಿಗಳೂ ಇಲ್ಲಿಗೆ ಬರುತ್ತಿದ್ದರೆಂಬುದಕ್ಕೆ ಉಲ್ಲೇಖಗಳಿವೆ.
Comments
Post a Comment