ಹೊಯ್ಸಳ ವಾಸ್ತುಶಿಲ್ಪದ ಅಧ್ಯಯನ ಸಾಮಗ್ರಿ
ಸೂಚನೆ: ಈ ಅಧ್ಯಯನ ಸಾಮಗ್ರಿಯಲ್ಲಿನ ವಿವರಗಳನ್ನು ಮೈಸೂರು ವಿಶ್ವವಿದ್ಯಾಲಯ ವಿಶ್ವಕೋಶದ ಅಂತರ್ಜಾಲದ ಪುಟಗಳಿಂದ ಸಂಗ್ರಹಿಸಿ ಇಲ್ಲಿ ವಿದ್ಯಾರ್ಥಿಗಳ ಅಭ್ಯಾಸಕ್ಕಾಗಿ ನೀಡಲಾಗಿದೆ.
ಮಧ್ಯಕಾಲೀನ ಭಾರತೀಯ ವಾಸ್ತು-ಶಿಲ್ಪ ಕ್ಷೇತ್ರದಲ್ಲಿ 11 ರಿಂದ
13ನೆಯ ಶತಮಾನದ ಕೊನೆಯ ವರೆಗೆ
ಅಸ್ತಿತ್ವದಲ್ಲಿದ್ದ ಹೊಯ್ಸಳ ಶೈಲಿ ನೋಡುಗರ
ಮನಸ್ಸನ್ನು ಸೆರೆಹಿಡಿದಿಡುವ, ಮರೆಯಲಾಗದಂಥ ದೃಶ್ಯಗಳನ್ನು ನಿರ್ಮಿಸುವ ತನ್ನ ಗುಣಗಳಿಂದ
ಒಂದು ವಿಶಿಷ್ಟ ಸ್ಥಾನವನ್ನು ಗಳಿಸಿಕೊಂಡಿದೆ.
ಆ ಕಾಲಕ್ಕೂ ಮೊದಲಿನ
ಭುವನೇಶ್ವರದ ರಾಜರಾಣಿ ಮಂದಿರದ ಅದ್ಭುತ
ರಮ್ಯತೆ, ಖಜುರಾಹೊದಲ್ಲಿರುವ ಕಂದಾರಿಯ ಮಹಾದೇವ ಮಂದಿರದಲ್ಲಿ
ಕಾಣುವ ಅಂತಸ್ಸತ್ತ್ವ, ಎಲ್ಲೋರದ ಕೈಲಾಸ ದೇವಾಲಯದ
ಭವ್ಯತೆ-ಇವೆಲ್ಲ ಗುಣಗಳನ್ನು ಸಮನ್ವಯಗೊಳಿಸಿಕೊಂಡಿರುವುದರೊಂದಿಗೆ
ವಾಸ್ತು ಮತ್ತು ಮೂರ್ತಿಶಿಲ್ಪ ವಿಧಾನಗಳ
ಸುಗಮ ಸಮ್ಮಿಳನ ಇಲ್ಲಿದೆ.
ಹೊಯ್ಸಳ ಕಟ್ಟಡಗಳನ್ನು ಔತ್ತರೇಯ-ದಾಕ್ಷಿಣಾತ್ಯ ಶೈಲಿಗಳ
ಮಧ್ಯವರ್ತಿ ಎಂದು ಹೇಳಲಾಗಿದ್ದರೂ ಔತ್ತರೇಯ
ಶೈಲಿಯ ಲಕ್ಷಣಗಳು ವಿರಳವಾಗಿವೆ. ಅದರ
ವಾಸ್ತು ಅಲಂಕರಣ ವಿಧಾನದಲ್ಲೂ ಶಿಖರದ
ಕೆಲವಂಶಗಳಲ್ಲೂ ಕೆಲವು ಔತ್ತರೇಯ ಲಕ್ಷಣಗಳು
ಕಂಡುಬರುತ್ತವೆ. ಆದರೆ ಹೊಯ್ಸಳ ರಾಜ್ಯದ
ಪರಿಸರದಲ್ಲಿ ರೂಢಿಯಲ್ಲಿದ್ದ ದಾಕ್ಷಿಣಾತ್ಯ ಶೈಲಿಯ ಪ್ರಭಾವ ಹೆಚ್ಚು
ಸ್ಪಷ್ಟವಾಗಿದೆ. ಹೊಯ್ಸಳ ರೂವಾರಿಗಳು [ಶಿಲ್ಪಿಗಳು]
ವಾಸ್ತುಶಿಲ್ಪ ಕ್ಷೇತ್ರದಲ್ಲಿ ಔತ್ತರೇಯ-ದಾಕ್ಷಿಣಾತ್ಯ ವಾಸ್ತುಶೈಲಿಗಳ
ಪ್ರಮುಖ ಲಕ್ಷಣಗಳನ್ನು ತಮ್ಮ ಕಾಲದ ನಿರ್ಮಾಣಗಳಲ್ಲಿ
ಅಳವಡಿಸಿಕೊಂಡರೂ ಅವಕ್ಕೆ ತಮ್ಮ ಪ್ರತಿಭಾಶಕ್ತಿಯ
ದ್ಯೋತಕವಾಗಿ ಹೊಸ ರೂಪವನ್ನು ಕೊಟ್ಟು
ಶೈಲಿಯ ಸೊಬಗನ್ನು ದ್ವಿಗುಣಗೊಳಿಸಿದ್ದಾರೆ. ಹೊಯ್ಸಳ
ಶೈಲಿ ಇತರ ಶೈಲಿಗಳ ಪ್ರಧಾನ
ಲಕ್ಷಣಗಳ ಒಗ್ಗೂಡಿಕೆಗೆ ಸೀಮಿತವಾಗಿ ನಿಲ್ಲದೆ ಅವುಗಳ
ಸಮಗ್ರ ಸಂಯೋಜನೆಯನ್ನು ಸಾಧಿಸುವುದರೊಂದಿಗೆ ಕೆಲವು ಹೊಸ ವಿಶಿಷ್ಟ
ಅಂಶಗಳನ್ನೂ ಸೃಷ್ಟಿಸಿತು.
ಹೊಯ್ಸಳ ಶೈಲಿಯ ಉಗಮಕ್ಕೆ ದಕ್ಷಿಣ
ಭಾರತದ ಚೋಳ-ಪಾಂಡ್ಯ ವಾಸ್ತುಶೈಲಿಯೂ
ದಖನ್ನಿನ ಕಲ್ಯಾಣ ಚಾಳುಕ್ಯ ಶೈಲಿಯೂ
ಮೈಸೂರು ಪ್ರದೇಶದಲ್ಲೇ ಬಳಕೆಯಲ್ಲಿದ್ದ ಗಂಗ, ನೊಳಂಬ ಕಟ್ಟಡಗಳೂ
ಸ್ಫೂರ್ತಿಯನ್ನೊದಗಿಸಿದವು. ಹೊಯ್ಸಳ ವಾಸ್ತುಶಿಲ್ಪಿಗಳು ಇವುಗಳಲ್ಲಿ
ಯಾವೊಂದು ಪದ್ಧತಿಯ ಅನುಕರಣೆ ಮಾಡುವುದರಿಂದಲೂ
ತೃಪ್ತರಾಗಲಿಲ್ಲ; ಬದಲಿಗೆ ಅವೆಲ್ಲವುಗಳ ಅಂಶಗಳನ್ನು ಅಳವಡಿಸಿಕೊಂಡರೂ ಅಪೂರ್ವ
ಪ್ರಯೋಗಪರರಾಗಿ ಹೊಸ ಪದ್ಧತಿಯೊಂದರ ಸೃಷ್ಟಿಯತ್ತ
ದಿಟ್ಟ ಹೆಜ್ಜೆಯನ್ನಿಟ್ಟರು. ಅವರ ವಿಶಿಷ್ಟ ಗುಣಗಳೆಂದರೆ
ಸರಳತೆಯನ್ನು ತಿರಸ್ಕರಿಸಿದುದು, ಅನುಕರಣೆಯ ಮಾರ್ಗವನ್ನು ತ್ಯಜಿಸಿದುದು;
ಮತ್ತು ಅಲಂಕರಣಶೀಲ ಸೂಕ್ಷ್ಮಕೆತ್ತನೆಗಳನ್ನು ಸೃಷ್ಟಿಸುವ
ಮೂಲಕ ಇತರ ಶೈಲಿಗಳಲ್ಲಿ ರೂಢಿಯಲ್ಲಿದ್ದ
ಸುಂದರ ವಾಸ್ತುರೂಪಗಳನ್ನು ಭವ್ಯಕಲಾಭಾಂಡಾರಗಳಾಗಿ ಪರಿವರ್ತಿಸಿದುದು.
ಇಲ್ಲಿ ಪ್ರಸ್ತಾಪಿಸಬೇಕಾದ ಒಂದು ಮುಖ್ಯ ಅಂಶವೆಂದರೆ
ಅನೇಕ ಕಲಾ ಇತಿಹಾಸಕಾರರು ಹೊಯ್ಸಳರಿಗಿಂತ
ಹಿಂದೆ ಆಳಿದ ಚಾಳುಕ್ಯ ಮತ್ತು
ಹೊಯ್ಸಳ ಶೈಲಿಗಳನ್ನು ಅವಿಭಾಜ್ಯವೆಂದು ಪರಿಗಣಿಸಿರುವುದು. ಫರ್ಗ್ಯೂಸನ್, ವಿನ್ಸೆಂಟ್ ಸ್ಮಿತ್ ಅಂಥವರಲ್ಲಿ
ಪ್ರಮುಖರು. ಪರ್ಸಿ ಬ್ರೌನ್ ಸಹ
ಈ ದೃಷ್ಟಿಯಿಂದ ಹೊರತಾದವರಲ್ಲ.
ಚಾಳುಕ್ಯ ಶೈಲಿ ಅವರ ಸಾಮಂತರಾಗಿದ್ದ
ಹೊಯ್ಸಳ ದೊರೆಗಳ ಆಶ್ರಯದಲ್ಲಿ ಪರಿಪಕ್ವತೆಯನ್ನು
ಸಾಧಿಸಿತೆಂದು ಅವರು ಹೇಳಿದ್ದಾರೆ. ಮುಂದುವರಿದು,
ಈ ಶೈಲಿ ಬಾಗಲಕೋಟೆ
ಜಿಲ್ಲೆಯ ಬಾದಾಮಿ, ಐಹೊಳೆ, ಪಟ್ಟದಕಲ್ಲುಗಳಲ್ಲಿ ಉಗಮವಾಯಿತೆಂದೂ
ಸುದೀರ್ಘವಿಕಾಸದ ಕೊನೆಯ ನಿದರ್ಶನಗಳನ್ನು ಹೊಯ್ಸಳ
ರಾಜ್ಯದಲ್ಲಿ 12-13ನೆಯ ಶತಮಾನಗಳಲ್ಲಿ ಕಾಣಬಹುದೆಂದೂ
ಅಭಿಪ್ರಾಯಪಟ್ಟಿದ್ದಾರೆ. ಈ ಅಭಿಪ್ರಾಯ
ಒಂದು ಸೀಮಿತಘಟ್ಟದವರೆಗೆ ನಿಜವಾದರೂ ಹೊಯ್ಸಳ ಶೈಲಿಯಲ್ಲಿ
ಕೆಲವಾರು ಮೂಲಭೂತ ಹೊಸ ಅಂಶಗಳು
ಬಳಕೆಗೆ ಬಂದು ಅದನ್ನು ಒಂದು
ಪ್ರತ್ಯೇಕ ಶೈಲಿಯೆಂದು ಪರಿಗಣಿಸಲು ಸಾಧನಗಳಾಗಿವೆ.
ಮೊದಲಿಗೆ ಚಾಳುಕ್ಯ ಸಾಮಂತರಾಗಿದ್ದ ಹೊಯ್ಸಳರು
12ನೆಯ ಶತಮಾನದ ಪೂರ್ವಾರ್ಧದಲ್ಲಿ ಸ್ವತಂತ್ರರಾದ
ಅನಂತರ ಚಾಳುಕ್ಯ ಸಾಮ್ರಾಜ್ಯದ ಸಾಂಸ್ಕೃತಿಕ
ಸಂಸ್ಥೆಗಳಿಗೆ ಉತ್ತರಾಧಿಕಾರಿಗಳಾಗಿ
ಆ ಸಂಸ್ಕೃತಿ & ಪರಂಪರೆಯನ್ನು ಸ್ವೀಕರಿಸಿದರು. ಅದರ
ಫಲವಾಗಿ ಚಾಳುಕ್ಯ-ಹೊಯ್ಸಳ ವಾಸ್ತುಶೈಲಿಗಳಲ್ಲಿ
ಹಲವಾರು ಸಾಮ್ಯಗಳು ಎದ್ದುಕಾಣುತ್ತವೆ. ಎರಡು
ಶೈಲಿಯ ದೇವಾಲಯಗಳ ಬಾಗಿಲುವಾಡಗಳನ್ನು ಸುಂದರ
ಕೆತ್ತನೆಗಳಿಂದ ಅಲಂಕರಿಸಲಾಗಿರುತ್ತದೆ. ಹೂಬಳ್ಳಿಗಳು, ಲತಾಗುಲ್ಮಗಳು [ಬಳ್ಳಿಗಳ ಗುಂಪು], ಅವುಗಳ ಮಧ್ಯೆ ಸೂಕ್ಷ್ಮಪ್ರಾಣಿಪಕ್ಷಿಗಳು,
ವಿರಳವಾಗಿ ದೇವಗಣ-ಮಾನವಗಣದ ಕೆತ್ತನೆಗಳು-ಇವುಗಳಿಂದಲೂ ಜ್ಯಾಮಿತೀಯ ವಿನ್ಯಾಸಗಳಿಂದಲೂ ಈ
ಅಲಂಕರಣಗಳನ್ನು ಮಾಡಲಾಗಿರುತ್ತದೆ. ಎರಡು ಶೈಲಿಯ ದೇವಾಲಯಗ
ಳಲ್ಲೂ ಕಡೆತ ಯಂತ್ರದ (ಲೇತ್)
ಮೇಲೆ ತಯಾರಿಸಿದ ವೈವಿಧ್ಯಪೂರ್ಣ ಕಂಬಗಳನ್ನು
ಬಳಸಲಾಗಿದೆ. ದೇವಾಲಯದ ಒಳಭಾಗಕ್ಕೆ ಸಾಕಷ್ಟು
ಗಾಳಿ ಬೆಳಕುಗಳನ್ನು ಪೂರೈಸುವ ಸಲುವಾಗಿ ಮುಖಮಂಟಪದ
ಗೋಡೆಗಳ ಮೇಲ್ಭಾಗದಲ್ಲಿ ಉಪಯೋಗಿಸಿರುವ ಕಲ್ಲಿನ ಜಾಲಂಧ್ರಗಳನ್ನು ಇವೆರಡು
ಶೈಲಿಗಳ ಕಟ್ಟಡಗಳಲ್ಲೂ ಕಾಣಬಹುದು. ಆದರೆ ಈ
ಸಾಮ್ಯಗಳೊಂದಿಗೆ [ಹೋಲಿಕೆಗಳು]
ಹಲವಾರು ವೈಶಿಷ್ಟ್ಯಪೂರ್ಣ ಆವಿಷ್ಕರಣಗಳನ್ನು ಹೊಯ್ಸಳ ಕಟ್ಟಡಗಳಲ್ಲಿ ಕಾಣಬಹುದಾಗಿದೆ
ಮತ್ತು ಆ ಶೈಲಿಗೆ
ಅವು ಪ್ರತ್ಯೇಕ ಅಸ್ತಿತ್ವವನ್ನು
ನೀಡುತ್ತವೆ. ಈ ದೇವಾಲಯಗಳ
ವಿವಿಧ ವಾಸ್ತು ಲಕ್ಷಣಗಳ ವಿಶ್ಲೇಷಣಾತ್ಮಕ
ಅಧ್ಯಯನದಿಂದ ಈ ಪ್ರಾದೇಶಿಕ
ಶೈಲಿಯ ನಿರೂಪಣೆಯಲ್ಲಿ ಕಂಡುಬರುವ ಅಮಿತ ಉತ್ಸಾಹ
ಮತ್ತು ನೆರೆಹೊರೆಯ ವಾಸ್ತುಶೈಲಿಯ ಅಂಶಗಳ
ಸಮ್ಮಿಲನ, ಅದರ ಫಲವಾಗಿ ಹೊಯ್ಸಳ
ಶೈಲಿಯಲ್ಲಿ ಕಂಡುಬರುವ ಆವಿಷ್ಕಾರಗಳನ್ನು ಗುರುತಿಸ
ಬಹುದಾಗಿದೆ. ಈ ನವಶೈಲಿಯಲ್ಲಿ
ಪರಿಸರದ ಪ್ರಭಾವ ಪ್ರತಿಬಿಂಬಿಸುತ್ತಿ ದ್ದರೂ
ಹೊಯ್ಸಳ ಶಿಲ್ಪಿಗಳ ಸೃಜನಶೀಲತೆಗೆ ಸಾಕ್ಷಿಯಾಗಿದೆ.
ಮೃದುಶಿಲೆಯ ಬಳಕೆ:-
ಹೊಸ ಶೈಲಿಯ ನಿರ್ಮಾಣದತ್ತ ಕಾಣುವ ಮೊದಲ ದಿಟ್ಟ
ಹೆಜ್ಜೆ ಕಟ್ಟಡ ನಿರ್ಮಾಣಕ್ಕೆ ಅವರು
ಬಳಸಿದ ಕಲ್ಲು. ದಕ್ಷಿಣ ಭಾರತದಲ್ಲೂ
ಮೈಸೂರು ಪ್ರಾಂತದಲ್ಲೂ ಆವರೆಗೂ ಕಣಶಿಲೆಯನ್ನು (ಗ್ರಾನೈಟ್)
ಕಟ್ಟಡಗಳಿಗೆ ಬಳಸಲಾಗುತ್ತಿತ್ತು. ಕಣಶಿಲೆ ಬಹಳ ಪೆಡಸಾಗಿರುವುದರಿಂದ
ಅದರ ದೊಡ್ಡ ಪ್ರಮಾಣದ
ದಿಮ್ಮಿಗಳನ್ನು ಬಳಸಿ ಬೃಹತ್ಪ್ರಮಾಣದ ಕಟ್ಟಡಗಳನ್ನು
ಕಟ್ಟಬಹುದಾಗಿತ್ತು. ಈ ರೀತಿಯ
ದೇವಾಲಯಗಳು ಚೋಳ-ಪಾಂಡ್ಯ ಶೈಲಿಗಳಲ್ಲಿ
ಕಾಣಬರುತ್ತವೆ. ಪಲ್ಲವ-ಚೋಳ-ಪಾಂಡ್ಯ
ದೇವಾಲಯಗಳ ಶಿಲ್ಪಗಳು ಒಟ್ಟಾರೆ ಮೋಹಕವಾಗಿದ್ದರೂ
ಕಣಶಿಲೆಯ ಪೆಡಸುತನದಿಂದ ಸೂಕ್ಷ್ಮವಾದ ಕುಸುರಿಕೆತ್ತನೆಗಳನ್ನು ಕಾಣಲಾಗುವುದಿಲ್ಲ. ಕೆಲವು ಪ್ರಾದೇಶಿಕ ವ್ಯತ್ಯಾಸಗಳನ್ನು
ಬಿಟ್ಟರೆ ಗಂಗ-ನೊಳಂಬ ಕಟ್ಟಡಗಳು
ಕಣಶಿಲೆಯಲ್ಲಿ ನಿರ್ಮಿತವಾದವು. ಆದುದರಿಂದ ಸೂಕ್ಷ್ಮ ಕೆತ್ತನೆಗಳಿಗೆ
ಅವಕಾಶವಿರಲಿಲ್ಲ. ಚಾಳುಕ್ಯ ಶೈಲಿಯ ಮೊದಲ
ಮಂದಿರಗಳು ಚಾಳುಕ್ಯ ಪ್ರದೇಶದಲ್ಲಿ ವಿಪುಲವಾಗಿ
ದೊರಕುವ, ಕಣಶಿಲೆಗಿಂತ ಮೃದುವಾದ ಕೆಂಪು ಮರಳ್ಗಲ್ಲಿನಲ್ಲೂ
ಅನಂತರದವು ಒಂದು ರೀತಿಯ ಕಪ್ಪುಶಿಲೆ
ಯಲ್ಲೂ ನಿರ್ಮಿತವಾಗಿವೆ. ಕಲ್ಲಿನ ಮೃದುತ್ವದ ಕಾರಣದಿಂದ
ದ್ರಾವಿಡ ರೀತಿಯ ಬೃಹತ್ಪ್ರಮಾಣದ ಕಟ್ಟಡಗಳನ್ನು
ಇವುಗಳಲ್ಲಿ ಕಟ್ಟುವುದು ಸಾಧ್ಯವಿರಲಿಲ್ಲವಾದರೂ ದಕ್ಷಿಣದ
ದೇವಾಲಯಗಳಿಗಿಂತಲೂ ಸೂಕ್ಷ್ಮವೂ ಮನೋಜ್ಞವೂ ಆದ
ಕೆತ್ತನೆಯ ಕೆಲಸ ಸ್ವಲ್ಪಮಟ್ಟಿಗೆ ಸಾಧ್ಯವಾಯಿತು.
ಹೊಯ್ಸಳ ಶಿಲ್ಪಿಗಳು ತಮ್ಮ ಪ್ರದೇಶದಲ್ಲಿ
ದೊರಕುತ್ತಿದ್ದ ನಸುಹಸಿರು ಅಥವಾ ಕಪ್ಪು-ನೀಲಿ ಛಾಯೆಯುಳ್ಳ ಬಳಪದ
ಕಲ್ಲನ್ನು ತಮ್ಮ ಕಟ್ಟಡಗಳಿಗೆ ಉಪಯೋಗಿಸಲಾರಂಭಿಸಿದರು.
ಮೃದುಶಿಲೆಯ ವೈಶಿಷ್ಟ್ಯತೆ:-
ಈ ಕಲ್ಲಿನ ವೈಶಿಷ್ಟ್ಯವೆಂದರೆ ಹೊಸದಾಗಿ ಗಣಿಯಿಂದ ಕತ್ತರಿಸಿ
ತೆಗೆದಾಗ ಅದು ಬಹಳ ಮೃದುವಾಗಿದ್ದು
ಬಿಸಿಲುಗಾಳಿಗಳ ಪ್ರಭಾವದಿಂದ ಕ್ರಮೇಣ ತನ್ನೊಳಗಿನ ತೇವವನ್ನು
ಕಳೆದುಕೊಂಡು ಗಟ್ಟಿಯಾಗುವುದು; ಬಹಳ ಸೂಕ್ಷ್ಮ ಕಣಗಳನ್ನೊಳಗೊಂಡಿದ್ದು
ಹೆಚ್ಚು ಸಾಂದ್ರವಾಗಿರುವುದು. ಆದುದರಿಂದ ಆ ಕಲ್ಲಿನಲ್ಲಿ
ಬಹಳ ನಯವಾದ ಹಾಗೂ
ಸೂಕ್ಷ್ಮವಾದ ಕೆತ್ತನೆಗಳನ್ನು ಮಾಡುವುದು ಸಾಧ್ಯ. ಈ
ಮೃದುಮಾಧ್ಯಮದ ಪೂರ್ಣ ಉಪಯೋಗ ಪಡೆದುಕೊಂಡ
ವಾಸ್ತುಶಿಲ್ಪಿಗಳು ಕೇವಲ ಕಲ್ಲಿನ ಕೆಲಸಗಾರರಂತೆ
ತಮ್ಮ ಕಟ್ಟಡಗಳನ್ನು ನಿರ್ಮಿಸಲಿಲ್ಲ. ಶ್ರೀಗಂಧ ಮತ್ತು ದಂತದ
ಕೆತ್ತನೆಗಾರರ ನಯಗಾರಿಕೆಯನ್ನೂ ಚಿನ್ನದ ಕೆಲಸಗಾರರ ಸೂಕ್ಷ್ಮಕುಸುರಿ
ಕೆಲಸದ ಕೌಶಲ್ಯವನ್ನೂ ಚಿತ್ರಗಾರರ ಭಾವ ನಿರೂಪಣಾಚಾತುರ್ಯವನ್ನೂ
ತಮ್ಮ ಕಟ್ಟಡಗಳಲ್ಲಿ ಪ್ರತಿಬಿಂಬಿಸಿದ್ದಾರೆ. ಒಂದೇ ಮಾತಿನಲ್ಲಿ ಹೇಳುವುದಾದರೆ
ಹೊಯ್ಸಳ ಶೈಲಿಯ ಕಟ್ಟಡ ನಿರ್ಮಾಣದಲ್ಲಿ
ವಾಸ್ತುಶಿಲ್ಪಿಯ ಕೈಚಳಕಕ್ಕಿಂತಲೂ ಮೂರ್ತಿಶಿಲ್ಪಿಯ ಅನುಪಮ ಕಲಾವಂತಿಕೆ ಕಾಣಬರುತ್ತದೆ.
ಹೊಯ್ಸಳ ವಾಸ್ತುಶೈಲಿಯ
ವಿಶಿಷ್ಟ ಲಕ್ಷಣಗಳನ್ನು ಈ ದೇವಾಲಯಗಳಲ್ಲಿ
ಕಂಡುಬರುವ ನಕ್ಷತ್ರಾಕಾರದ ತಲವಿನ್ಯಾಸ, ಜಗತಿ, ಭಿತ್ತಿ ಅಲಂಕರಣ,
ಶಿಖರ ಮತ್ತು ಕಂಬಗಳ ರೂಪಗಳಿಂದ
ಗುರುತಿಸಬಹುದಾಗಿದೆ.
ನಕ್ಷತ್ರಾಕಾರದ
ತಲವಿನ್ಯಾಸ : ಹೊಯ್ಸಳ ದೇವಾಲಯ ವಿಮಾನಗಳ
ತಲವಿನ್ಯಾಸ ಮುಂಚಾಚುವ ಮತ್ತು ಹಿನ್ಸರಿಯುವ ಕೋನಗಳಿಂದ ಒಡಗೂಡಿದ
ಗೋಡೆಯ ಹೊರಭಾಗದಿಂದ ಕೂಡಿರುತ್ತದೆ. ಒಂದೇ ಕೇಂದ್ರವುಳ್ಳ ಸಮಚೌಕೋನಗಳನ್ನು
ಒಂದು ಅಕ್ಷದ ಮೇಲೆ ಸುತ್ತುವುದರಿಂದ
ಬೇರೆ ಬೇರೆ ದಿಕ್ಕುಗಳಿಗೆ ಸರಿಹೊಂದುವಂತೆ
ಉಂಟಾಗುವ ಕೋನಗಳು ಈ ನಕ್ಷತ್ರಾಕಾರದ
ಬಾಹುಗಳಾಗಿರುತ್ತವೆ. ಈ ರೀತಿಯ
ಜೋಡಣೆಯಿಂದ 8, 12, 16 ಮುಂತಾಗಿ ಎಷ್ಟು ಕೋನಗಳನ್ನು
ಬೇಕಾದರೂ ನಿರ್ಮಿಸಿಕೊಳ್ಳಬಹುದು. ನಕ್ಷತ್ರಾಕಾರದ ಈ ತಲವಿನ್ಯಾಸವನ್ನು
ಜಗತಿ ಅಥವಾ ಉಪಪೀಠದಿಂದ ವಿಮಾನದ
ತುದಿಯಲ್ಲಿರುವ ಶಿಖರದ ಮೇಲಿನ ಕಲಶದ
ವರೆಗೂ ಕೊಂಡೊಯ್ಯಲಾ ಗಿರುತ್ತದೆ. ಆದುದರಿಂದ ಹೊಯ್ಸಳ ಮಂದಿರಗಳ
ನಕ್ಷತ್ರಾಕಾರದ ವಿನ್ಯಾಸವನ್ನು ಅಷ್ಟಭದ್ರ ವಿನ್ಯಾಸವೆಂದು ಕರೆಯಲಾಗಿದೆ.
ಜಗತಿ ಅಥವಾ ಉಪಪೀಠ : ಎರಡನೆಯದಾಗಿ
ಹೊಯ್ಸಳ ದೇವಾಲಯಗಳನ್ನು ಸಾಮಾನ್ಯವಾಗಿ ಭೂಮಟ್ಟದಿಂದ ಸು. 5 ಅಡಿಗಳೆತ್ತರದ, ದೇವಾಲಯದ
ಪ್ರಮಾಣಕ್ಕಿಂತಲೂ ಹೆಚ್ಚು ವಿಸ್ತಾರವಾದ ಜಗತಿಯ
ಮೇಲೆ ನಿರ್ಮಿಸಲಾಗಿರುತ್ತದೆ. ಕಟ್ಟಡ ನಿರ್ಮಾಣಕ್ಕೆ ಉಪಯೋಗಿಸಿದ
ಮೃದುವಾದ ಬಳಪದ ಕಲ್ಲಿನಲ್ಲಿ ಎತ್ತರವಾದ
ಗೋಡೆಗಳನ್ನು ನಿರ್ಮಿಸಲಾಗುತ್ತಿರಲಿಲ್ಲ. ಆದುದರಿಂದ ಹೊಯ್ಸಳ ಗುಡಿಗಳೂ
ಅವುಗಳ ಶಿಖರಗಳೂ ಮಟ್ಟಸವಾಗಿರುತ್ತಿದ್ದುವು. ಈ ಗಿಡ್ಡಾದ
ಮಂದಿರಗಳಿಗೆ ಭವ್ಯತೆಯನ್ನೂ ಎತ್ತರದ ಭಾವನೆಯನ್ನೂ ಒದಗಿಸಲು
ಈ ಜಗತಿಗಳು ಸಹಾಯಕವಾಗುತ್ತಿದ್ದುವು.
ಹೊಯ್ಸಳ ಗುಡಿಗಳ ಒಳಭಾಗದಲ್ಲಿ ಪ್ರದಕ್ಷಿಣ
ಮಾರ್ಗವಿರುತ್ತಿರಲಿಲ್ಲ. ಗುಡಿಗೆ ಬಂದ ಭಕ್ತರು
ಗೋಡೆಗಳ ಹೊರಮೈ ಮೇಲೆ ರೂಪಿಸಲಾಗಿದ್ದ
ಅಪೂರ್ವ ಸೌಂದರ್ಯಯುತ ದೇವದೇವಿಯರ ಪ್ರತಿಮೆಗಳನ್ನೂ ಪೌರಾಣಿಕ
ಘಟನೆಗಳನ್ನೂ ನೋಡಿ ಸವಿಯುತ್ತ ದೇವಾಲಯದ
ಸುತ್ತ ಪ್ರದಕ್ಷಿಣೆ ಮಾಡಲು ದೇವಾಲಯದ ಉದ್ದಗಲಗಳಿಗಿಂತಲೂ
ವಿಶಾಲವಾಗಿದ್ದ ಈ ಜಗತಿ
ಅವಕಾಶ ಮಾಡಿಕೊಡುತ್ತಿತ್ತು. ಜಗತಿ ಸಹ ಅದರ
ಮೇಲಿನ ರೀತಿಯಲ್ಲಿ ನಕ್ಷತ್ರಾಕಾರದಲ್ಲಿ ಇರುತ್ತಿತ್ತು.
ಜಗತಿಯ ಒಂದೊಂದು ಕೋನದಲ್ಲೂ ಸಿಂಹ,
ಆನೆ ಮುಂತಾದ ಪ್ರಾಣಿಗಳು
ಜಗತಿಯ ಕೋನಗಳನ್ನು ಎತ್ತಿಹಿಡಿದಿರುವಂತೆ ನಿರೂಪಿಸಲಾಗಿರುತ್ತದೆ.
ಭಿತ್ತಿ ಅಲಂಕರಣ : ನಕ್ಷತ್ರಾಕಾರದ ಜಗತಿ ಮತ್ತು ಗೋಡೆಗಳು
ದೇವಾಲಯಕ್ಕೆ ಎತ್ತರದ ಭಾವನೆಯನ್ನು ಒದಗಿಸದಿದ್ದರೂ
ಗೋಡೆಗಳ ಕೆಳಗಿನ ಅರ್ಧವನ್ನು ಒಂದರಮೇಲೊಂದರಂತೆ
ಪೇರಿಸಿದ ಆರೆಂಟು ಸಮತಟ್ಟಾದ ಪಟ್ಟಿಕೆಗಳನ್ನಾಗಿ
ವಿಭಾಗಿಸಿರುವುದರಿಂದಲೂ ಶಿಖರದಲ್ಲೂ ಇದೇ ರೀತಿಯ
ಸಮತಲದ ಅಂತಸ್ತುಗಳಿರುವುದರಿಂದಲೂ ದೇವಾಲಯಕ್ಕೆ ಎತ್ತರದ ಭಾವನೆಯನ್ನು ಕೊಡುತ್ತವೆ.
ವಿಮಾನ ಭಾಗದ ಗೋಡೆಯನ್ನು ಮೂರು
ಭಾಗಗಳನ್ನಾಗಿಯೂ ಮಂಟಪದ ಗೋಡೆಗಳನ್ನು ಎರಡು
ಭಾಗಗಳನ್ನಾಗಿಯೂ ವಿಂಗಡಿಸಿರುತ್ತಾರೆ. ವಿಮಾನ ಮತ್ತು ಮಂಟಪ,
ಅಂದರೆ ಒಟ್ಟು ದೇವಾಲಯದ ಸುತ್ತಲೂ
ಗೋಡೆಯ ಕೆಳಭಾಗದಲ್ಲಿ ಮುಂಚಾಚಿದ ಪಟ್ಟಿಕೆಗಳ ಮೇಲೆ
ಆನೆ, ಕುದುರೆಸವಾರರು, ಲತಾತೋರಣ, ಸಿಂಹಮುಖ, ಮತ್ತೆ
ಲತಾತೋರಣಗಳು, ಅದರ ಮೇಲೆ ಕಣ್ಣಿನ
ಎತ್ತರದಲ್ಲಿರುವ ಪಟ್ಟಿಕೆಗಳಲ್ಲಿ ರಾಮಾಯಣ, ಮಹಾಭಾರತ, ಭಾಗವತ
ಮತ್ತಿತರ ಪೌರಾಣಿಕ ಕಥೆಗಳು ಮತ್ತು
ವಿರಳವಾಗಿಯಾದರೂ ಕೆಲವು ಸಾಮಾಜಿಕ ಮತ್ತು
ಧಾರ್ಮಿಕ ಜೀವನಗಳನ್ನು ನಿರೂಪಿಸಿರುವ ಮಾನವರ ಚಿತ್ರಗಳನ್ನೂ ಬಿಡಿಸಲಾಗಿರುತ್ತದೆ.
ಅವಕ್ಕೂ ಮೇಲಿನಪಟ್ಟಿಕೆಗಳಲ್ಲಿ ಯಾಳಿ ಅಥವಾ ಮಕರಗಳು
ಮತ್ತು ಎಲ್ಲಕ್ಕೂ ಮೇಲಿನ ಸಾಲುಗಳಲ್ಲಿ
ಹಂಸಗಳ ಚಿತ್ರಣವಿರುತ್ತವೆ. ಎಲ್ಲ ದೇವಾಲಯಗಳಲ್ಲೂ ಈ
ಚಿತ್ರಪಟ್ಟಿಕೆಗಳು ಇದೇ ಅನುಕ್ರಮದಲ್ಲಿರುವುದಿಲ್ಲ. ಆದರೆ ಚಿತ್ರಪಟ್ಟಿಕೆಗಳು
ಸಾಮಾನ್ಯವಾಗಿ ಎಲ್ಲ ಮುಖ್ಯದೇವಾಲಯಗಳಲ್ಲೂ ಇರುತ್ತವೆ.
ಮುಂಭಾಗದ ಮಂಟಪದ ಗೋಡೆಗಳಲ್ಲಿ ಈ
ಚಿತ್ರಪಟ್ಟಿಕೆಗಳ ಮೇಲಿನ ಭಾಗದಲ್ಲಿ ವಿಶಾಲವಾದ
ಅಂಕಣ ಚಿತ್ರಫಲಕಗಳೋ ಜಾಲಂಧ್ರಗಳೋ ಇರುತ್ತವೆ. ಕಲ್ಲುಚಪ್ಪಡಿಗಳಲ್ಲಿ ಮಾಡಿದ
ಈ ಜಾಲಂಧ್ರಗಳ ಮೇಲೂ
ಹೊಯ್ಸಳ ಶಿಲ್ಪಿಗಳು ಹಲವು ರೀತಿಯ
ನಕ್ಷೆಗಳನ್ನು-ಹೂವು, ಬಳ್ಳಿ, ಜ್ಯಾಮಿತಿಕ
ವಿನ್ಯಾಸಗಳನ್ನು-ಬಿಡಿಸಿ ಜಾಲಂಧ್ರಗಳ ಸೌಂದರ್ಯವನ್ನು
ಹೆಚ್ಚಿಸಿರುತ್ತಾರೆ. ಅಂಕಣ ಚಿತ್ರಫಲಕಗಳ ಮೇಲೆ
ರಾಜರ ದರ್ಬಾರು, ಪೌರಾಣಿಕ ಘಟನೆಗಳ
ನಿರೂಪಣೆ, ಶಿವ, ವಿಷ್ಣು ಮುಂತಾದ
ಅಧಿದೇವತೆಗಳ ಮತ್ತು ಅವರ ಪರಿವಾರ
ದೇವತೆಗಳ ಚಿತ್ರಣಗಳನ್ನು ಕೆತ್ತಿ ಅವುಗಳ ಅಲಂಕರಣದೊಂದಿಗೆ
ಭಕ್ತಜನರಿಗೆ ಉಪಯುಕ್ತವಾದ ಧಾರ್ಮಿಕ ಪರಿಸರವನ್ನು ನಿರ್ಮಿಸಿರುತ್ತಾರೆ.
ವಿಮಾನದ ಹೊರಗೋಡೆಗಳ ಮೇಲೆ ಕೆಳಭಾಗದಲ್ಲಿ
ಮಂಟಪದ ಗೋಡೆಗಳ ಮೇಲಿರುವಂತೆ ಅಡ್ಡ
ಚಿತ್ರ ಪಟ್ಟಿಕೆಗಳಿರುತ್ತವೆ. ಅವುಗಳ ಮೇಲೆ ತಮ್ಮ
ಶಿಲ್ಪರಚನಾಚಾತುರ್ಯಕ್ಕೆ ಸಾಕ್ಷಿಗಳಾದ ದೇವದೇವತೆಗಳ ದೊಡ್ಡ ಪ್ರಮಾಣದ-2ರಿಂದ
3 ಅಡಿಗಳೆತ್ತರದ-ವಿಗ್ರಹಗಳನ್ನು ಕಡೆಯಲಾಗಿರು ತ್ತದೆ. ಒಂದೊಂದು ಗುಂಪಿನ
ವಿಗ್ರಹಗಳಿಗೂ ಪ್ರತ್ಯೇಕವಾದ ಗೂಡು ಅಥವಾ ಫಲಕಗಳೂ
ಪ್ರಭಾವಳಿ ಆಕಾರದ ಲತಾತೋರಣಗಳೂ ಇರುತ್ತವೆ.
ಕೆಲವು ಬಾರಿ ಈ ದೇವದೇವಿಯರು,
ಪೌರಾಣಿಕ ವ್ಯಕ್ತಿಗಳು, ಲತಾಕುಂಜದೊಳಗೆ ಇದ್ದಾರೇನೋ ಎಂಬ ಕಲ್ಪನೆ
ಉಂಟಾಗುತ್ತದೆ. ಈ ಒಂದೊಂದು
ವಿಗ್ರಹವೂ ಗೋಡೆಯ ಅಂಗವಾಗಿರುವಂತೆ ಭಾಸವಾಗುವ
ಬದಲು ತಮ್ಮದೇ ಆದ ಸಣ್ಣ
ಗುಡಿಗಳಲ್ಲಿರುವಂತೆ ತೋರುತ್ತದೆ. ನಕ್ಷತ್ರಾಕಾರದ ಹಿಂದೆ ಮುಂದೆ ಸರಿದಂತಿರುವ
ಗೋಡೆಯ ವಿನ್ಯಾಸದಿಂದ ಕೆಲವು ವಿಗ್ರಹಗಳ ಮೇಲೆ
ಹೆಚ್ಚಿನ ಬೆಳಕೂ ಮತ್ತೆ ಕೆಲವು
ವಿಗ್ರಹಗಳ ಮೇಲೆ ನೆರಳೂ ಬೀಳುತ್ತದೆ.
ಈ ನೆರಳು-ಬೆಳಕುಗಳ
ಪ್ರಭಾವ ವಿಗ್ರಹಗಳ ಸರಸ-ಸೌಮ್ಯ
ಅಥವಾ ರುದ್ರ-ಬೀಭತ್ಸ ಭಾವಗಳ
ಮೇಲೆ ಆಗುವಂತೆ ಅವುಗಳ ಸ್ಥಳನಿರ್ದೇಶನ
ಮಾಡಿರುವುದು ಶಿಲ್ಪಿಗಳ ಕಲ್ಪನಾಶಕ್ತಿಯ ಸಾಕ್ಷ್ಯಗಳಾಗಿವೆ.
ಮೂರನೆಯ ಮತ್ತು
ಎಲ್ಲಕ್ಕೂ ಮೇಲಿನ ವಿಭಾಗದಲ್ಲಿ ಅರೆಗಂಬ,
ಕಲಶ ಮತ್ತು ಶಿಖರಗಳ
ವಿನ್ಯಾಸಗಳನ್ನು ಕೆತ್ತಲಾಗುತ್ತದೆ. ದ್ರಾವಿಡ ಗುಡಿಗಳ ಹೊರಗೋಡೆಗಳ
ಮೇಲಿರುವ ಈ ಅರೆಗಂಬ-ಗೂಡುಗಳು ಆ ಗುಡಿಗಳ
ವಾಸ್ತುವಿನ್ಯಾಸದಲ್ಲಿ ಪ್ರಮುಖ ಲಕ್ಷಣಗಳಾಗಿವೆ; ಹೊಯ್ಸಳ
ಗುಡಿಗಳಲ್ಲಿ ಅವು ಸೂರಿನ ಕೆಳಗೆ
ಮಟ್ಟಸವಾಗಿದ್ದು ತಮ್ಮ ಪ್ರಾಮುಖ್ಯವನ್ನು ಕಳೆದುಕೊಂಡಿವೆ.
ಭಿತ್ತಿಯ ಮೇಲಿನ ಚಿಕ್ಕ ಚಿಕ್ಕ
ಅಲಂಕರಣ ಶಿಖರಗಳ ವಿನ್ಯಾಸಗಳಲ್ಲಿ ಹೊಯ್ಸಳ
ಶೈಲಿಯ ಶಿಖರ ಪ್ರಭೇದಗಳನ್ನೆಲ್ಲ ಕಾಣಬಹುದು.
ವಿಮಾನದ ಮೇಲಿನ ಶಿಖರಗಳು : ಹೊಯ್ಸಳ
ದೇವಾಲಯಗಳಲ್ಲಿ ಎದ್ದು ಕಾಣುವ ವಿಭಾಗವೆಂದರೆ
ಶಿಖರ. ದೇವಾಲಯ ನಿರ್ಮಾಣಕ್ಕೆ ಉಪಯೋಗಿಸಿದ
ಮೃದುವಾದ ಕಲ್ಲು ಮತ್ತು ಅದರಿಂದ
ಉಂಟಾದ ಅಭದ್ರತೆಯ ಫಲವಾಗಿ ಬಹುಮಟ್ಟಿನ
ದೇವಾಲಯಗಳಲ್ಲಿ ಶಿಖರಗಳು ಕಣ್ಮರೆಯಾಗಿಹೋಗಿವೆ. ದೊಡ್ಡಗದ್ದವಳ್ಳಿ,
ಸೋಮನಾಥಪುರ, ಭದ್ರಾವತಿ, ನುಗ್ಗೇಹಳ್ಳಿ ಮುಂತಾದ
ಸ್ಥಳಗಳಲ್ಲಿರುವ ದೇವಾಲಯಗಳ ಮೇಲೆ ಉಳಿದುಬಂದಿರುವ
ಶಿಖರಗಳಿಂದಲೂ ಹೊರಗೋಡೆಗಳ ಮೇಲಿನ ಚಿತ್ರಪಟ್ಟಿಕೆಗಳಲ್ಲಿ
ಕೆತ್ತಲಾದ ಶಿಖರಗಳ ಅವಗಾಹನೆಯಿಂದಲೂ ಈ
ಶಿಖರಗಳ ಆಕಾರ-ವಿನ್ಯಾಸಗಳನ್ನು ಅಭ್ಯಸಿಸಬಹುದಾಗಿದೆ.
ವಿಮಾನದ ಕೆಳಭಾಗದ ಗೋಡೆಗಳಿಂದ ಶಿಖರಭಾಗವನ್ನು
ಅಗಲವಾದ ಸೂರುಗಳಿಂದ ಪ್ರತ್ಯೇಕಿಸಿದರೂ ನಕ್ಷತ್ರಾಕಾರದ
ವಿನ್ಯಾಸವನ್ನು ಶಿಖರಾಗ್ರದವರೆಗೂ ಕೊಂಡೊಯ್ಯಲಾಗಿರುತ್ತದೆ. ಶಿಖರದ ಊಧ್ರ್ವತ್ವದ ಭಾವನೆಯನ್ನು
ಸಮತಟ್ಟಾದ ಅಂತಸ್ತುಗಳು ಸ್ವಲ್ಪಮಟ್ಟಿಗೆ ಕಡಿಮೆ ಮಾಡುತ್ತವೆ. ಕ್ರಮೇಣ
ಸಣ್ಣದಾಗುತ್ತಿರುವ ಅಂತಸ್ತುಗಳು ಶಿಖರದ ಮನೋಜ್ಞ ಸೌಂದರ್ಯವನ್ನು
ಹೆಚ್ಚಿಸುತ್ತವೆ. ಶಿಖರದ ತುದಿಯಲ್ಲಿ ಛತ್ರಾಕಾರದ
ಕಲಶವಿರುತ್ತದೆ. ಶಿಖರದ ಮೇಲಿರುವ ಉದ್ದ
ಮತ್ತು ಅಡ್ಡಪಟ್ಟಿಕೆಗಳ ಮೇಲೆ ವೈವಿಧ್ಯಮಯವಾದ ಸೂಕ್ಷ್ಮ
ಪ್ರಮಾಣದ ಗುಡಿಗಳನ್ನೂ ಗೂಡುಗಳನ್ನೂ ಕೆತ್ತಲಾಗಿರುತ್ತದೆ. ಶಿಖರದ ಈ ಅಡ್ಡ
ಪಟ್ಟಿಕೆಗಳು ಮುಂಚಾಚಿಕೊಂಡು ತಮ್ಮ ಕೆಳಗಿನ ಮತ್ತು
ಮೇಲಣ ಪಟ್ಟಿಕೆಗಳಿಂದ ತುಸು ಅಂತರಗಳನ್ನು ಹೊಂದಿರುವುದರಿಂದ
ಪ್ರತಿಯೊಂದೂ ಪ್ರತ್ಯೇಕವಾಗಿರುವಂತೆ ಭಾಸವಾಗುತ್ತದೆ. ಒಟ್ಟಿನಲ್ಲಿ ಈ ರೀತಿಯ
ಶಿಖರಗಳು ಮಟ್ಟಸವಾಗಿರುವುದರಿಂದ ಎದ್ದುಕಾಣುವುದಿಲ್ಲವಾದರೂ ಅವುಗಳ ಮೇಲಿನ ಕೆತ್ತನೆಗಳ
ಭವ್ಯತೆಯಿಂದ ನೋಡುಗರ ಗಮನವನ್ನು ತಮ್ಮಲ್ಲಿ
ಹಿಡಿದಿಡುವ ಶಕ್ತಿಯನ್ನು ಪಡೆದಿರುತ್ತವೆ. ಶಿಖರದ ಮೆಟ್ಟಿಲುಮೆಟ್ಟಿಲಾದ ಅಂತಸ್ತುಗಳ
ಮೇಲೆ ಸಿಂಹಮುಖಗಳು, ಲತೆಗಳು ಮತ್ತು ದೇವತಾವಿಗ್ರಹಗಳನ್ನು
ಸುಂದರವಾಗಿ ಕೆತ್ತಲಾಗಿದೆ. ಛತ್ರಾಕಾರದ ಕಲಶದ ಕಲ್ಲಿನ
ಮೇಲೆ ಅಮೃತಕಲಶ, ಶಲಾಕೆ ಮತ್ತು
ಪ್ರಾಸಾದ ಪುರುಷಮೂರ್ತಿಗಳನ್ನು ಕಡೆದಿರುತ್ತಾರೆ. ಸುಕನಾಸಿಯ ಚಾವಣಿಯ ಮೇಲಕ್ಕೆ
ಪಸರಿಸಿರುವ ಶಿಖರದ ಮುಂಚಾಚಿನ ಮೇಲೆ
ಹೊಯ್ಸಳ ಲಾಂಛನವಾದ ಸಳ ಹುಲಿಯನ್ನು
ಕೊಲ್ಲುತ್ತಿರುವುದನ್ನು ನಿರೂಪಿಸುವ ಶಿಲ್ಪವಿರುತ್ತದೆ. ಕಟ್ಟಡಕ್ಕೆ
ಉಪಯೋಗಿಸುವ ಮೃದುಕಲ್ಲಿನ ಗೋಡೆಗಳು ದ್ರಾವಿಡ ರೀತಿಯ
ಬೃಹತ್ ಶಿಖರಗಳ ಭಾರವನ್ನು ಹೊರಲು
ಅಸಮರ್ಥವಾಗಿದ್ದುದರಿಂದ ಸಣ್ಣವಾದರೂ ಸುಂದರ ಕೆತ್ತನೆಗಳಿಂದ
ಅಲಂಕೃತವಾದ ಈ ಶಿಖರಗಳು
ಇಡೀ ದೇವಾಲಯ ಭಾಗದಲ್ಲಿ
ಕಲಾ ದೃಷ್ಟಿಯಿಂದ ಗಮನಾರ್ಹ
ಅಂಗಗಳಾಗಿರುತ್ತವೆ.
ಕಂಬಗಳು :
ಹೊಯ್ಸಳ ದೇವಾಲಯಗಳ ಕಂಬಗಳು ಸಹ
ವಿಶಿಷ್ಟವಾದವು. ಅವು ಸಾಮಾನ್ಯವಾಗಿ ದ್ರಾವಿಡ
ರೀತಿಯ ಕಂಬಗಳ ಮತ್ತು ಚೌಕೋನ
ಆಕಾರದ ಬೋದಿಗೆಗಳ ಅನುಕರಣೆಯಾಗಿದ್ದರೂ ಚಾಳುಕ್ಯ
ದೇವಾಲಯಗಳ ಕಂಬಗಳ ಪ್ರಭಾವಕ್ಕೊಳಗಾಗಿ ಕಡೆತಯಂತ್ರದ
ಮೇಲೆ ತಿರುಗಿಸಲಾಗಿರುವುದರಿಂದ ತಮ್ಮದೇ ಆದ ವೈಶಿಷ್ಟ್ಯವನ್ನು
ಹೊಂದಿವೆ. ಹೊಯ್ಸಳ ಕಾಲದ ಶಿಲ್ಪಿಗಳು
ಬಳಪದ ಕಲ್ಲಿನಲ್ಲಿ ಮೊದಲಿಗೆ ದಿಮ್ಮಿಗಳನ್ನು ಬೇಕಾದ
ಆಕಾರ-ಪ್ರಮಾಣಗಳಿಗೆ ಕಡೆದು ಅನಂತರ ಚಕ್ರಗಳ
ಮೇಲೆ ದಿಮ್ಮಿಗಳನ್ನು ನೆಟ್ಟಗೆ ನಿಲ್ಲಿಸಿ ತಿರುಗಿಸುತ್ತ
ಉಕ್ಕಿನ ಉಳಿಗಳ ಸಹಾಯದಿಂದ ದಿಮ್ಮಿಗಳ
ಮೇಲೆ ಉಂಗುರಾಕಾರದ ಮತ್ತು ಇತರ ವಿನ್ಯಾಸಗಳನ್ನು
ಬಿಡಿಸುತ್ತಿದ್ದರು. ಒಂದೇ ಕಲ್ಲಿನ ಈ
ಕಂಬಗಳ ತಳಭಾಗ ಚದುರವಾಗೂ ಮಧ್ಯಭಾಗ
ಬುಡಮೇಲು ಮಾಡಿದ ಘಂಟೆ ಅಥವಾ
ಕಮಲದ ಆಕಾರದಲ್ಲೂ ಅಗ್ರಭಾಗ ಗ್ರೀವದ
ಮೇಲೆ ಚಕ್ರಾಕಾರದಲ್ಲೂ ಇರುತ್ತವೆ. ಕೆಲವು ವೇಳೆ
ಈ ಅಗ್ರಭಾಗದ ಚಕ್ರ
ಎರಡೆರಡು ಬಾರಿ ಇದ್ದು ಅವುಗಳ
ನಡುವೆ ಕಮಲದ ಆಕಾರದ ಒಂದು
ಅಂಗವಿರುತ್ತದೆ. ಅದರ ಮೇಲೆ ವಿವಿಧ
ಅಲಂಕರಣಗಳುಳ್ಳ ಚೌಕನಾದ ಬೋದಿಗೆಗಳು ಚಾವಣಿಯ
ದೂಲಗಳಿಗೆ ಆಧಾರವಾಗಿರುತ್ತವೆ. ನವರಂಗದ ಕಂಬಗಳ ಮತ್ತು
ಹೊರಗೋಡೆಯ ಅರೆಗಂಬಗಳ ಮೇಲೆ ಈ
ಬೋದಿಗೆ ಮತ್ತು ದೂಲಗಳ ನಡುವೆ
ಮುಂಬಾಗಿದಂತೆ ನಿಲ್ಲಿಸಲಾದ ಸಾಲಭಂಜಿಕಾ ಅಥವಾ ಮದನಿಕಾ
ವಿಗ್ರಹಗಳೂ ಇರುವುದುಂಟು. ಈ ಕಂಬಗಳ
ಮೇಲ್ಭಾಗದಲ್ಲಿ ವಿವಿಧ ಸುಂದರ ಕೆತ್ತನೆಗಳನ್ನು
ಮಾಡಲಾಗಿರುತ್ತದೆ. ಸಾಮಾನ್ಯವಾಗಿ ಒಂದು ದೇವಾಲಯದೊಳಗಿನ ಕಂಬಗಳು
ಅಲಂಕರಣ ವೈವಿಧ್ಯದಿಂದ ಒಂದರಂತೆ ಮತ್ತೊಂದು ಇರುವುದಿಲ್ಲ.
ನವರಂಗದ ನಾಲ್ಕು ಕಂಬಗಳಲ್ಲಿ ಶಿಲ್ಪಿಗಳು
ತಮ್ಮ ಚಾತುರ್ಯದ ಪರಮಾವಧಿಯನ್ನು ಪ್ರದರ್ಶಿಸುತ್ತಾರೆ
ಎಂದರೆ ಉತ್ಪ್ರೇಕ್ಷೆಯೇನಲ್ಲ. ಸಾಮಾನ್ಯವಾಗಿ ಕಂಬದ ಇಡೀ ಮೇಲ್ಮೈ
ಕೆತ್ತನೆಗಳಿಂದ ತುಂಬಿದ್ದರೂ ಎಲ್ಲಿಯಾದರೂ ಅಲ್ಪ ಸ್ವಲ್ಪ ಬಿಡಿಸ್ಥಳವಿದ್ದುದೇ
ಆದರೆ ಆ ಭಾಗಕ್ಕೆ
ಕೊಟ್ಟಿರುವ ಹೊಳಪಿನಿಂದ ಕನ್ನಡಿಯ ಬೆಳಕು
ಪ್ರತಿಫಲಿಸುತ್ತದೆ. ಕೆಲವು ಕಂಬಗಳ ಮಧ್ಯಭಾಗವನ್ನು
ಹೊಳಪು ಮಾಡುವುದಕ್ಕಾಗಿಯೇ ಕೆತ್ತನೆಗಳಿಲ್ಲದೆ ತೆರವಾಗಿ ಬಿಟ್ಟಿರುತ್ತಾರೆ.
ಮೇಲೆ ಹೇಳಿದ ಲಕ್ಷಣಗಳಲ್ಲಿ ಕೆಲವನ್ನು
ಉತ್ತರ ಕರ್ನಾಟಕ ಪ್ರದೇಶದ ಆದಿಕಾಲದ
ಬಾದಾಮಿ ಚಳುಕ್ಯರ ಕೆಲವು ದೇವಾಲಯಗಳಲ್ಲೂ
ಸೇವುಣರ ಕಾಲದ ಕೆಲವು ಹೇಮಾದ್ರಿಪಂಥದ
ಗುಡಿಗಳಲ್ಲೂ ಬಿಡಿಬಿಡಿಯಾಗಿ ಕಾಣಬಹುದಾಗಿದ್ದು ಹೊಯ್ಸಳ ವಾಸ್ತುಶಿಲ್ಪಿಗಳು ಈ
ಲಕ್ಷಣಗಳನ್ನು ಹೊಸದಾಗಿ ಕಂಡುಹಿಡಿದರೆಂದು ಹೇಳಲು
ಸಾಧ್ಯವಿಲ್ಲ. ಆದರೆ ಮೇಲಿನ ಎಲ್ಲ
ಅಂಶಗಳನ್ನು ಮೃದುವಾದ ಬಳಪದ ಕಲ್ಲಿನಲ್ಲಿ
ನಿರ್ಮಿಸಿದ ತಮ್ಮ ದೇವಾಲಯಗಳಲ್ಲಿ ಸಮನ್ವಯಗೊಳಿಸಿ
ಅಳವಡಿಸಿಕೊಂಡಿರುವುದಲ್ಲದೆ ಈ ಅಂಶಗಳಿಗೆ
ತಮ್ಮ ನೈಪುಣ್ಯದಿಂದ ಹೊಸರೂಪ ಕೊಟ್ಟಿರುವುದು ಅವರ
ರಚನಾಕೌಶಲಕ್ಕೆ ಉತ್ತಮ ನಿದರ್ಶನ. ಡೊಂಕುಡೊಂಕಾದ
ಗೋಡೆಗಳ ವಿನ್ಯಾಸದಿಂದ ದೊರಕಿದ ಹೆಚ್ಚು ಪ್ರದೇಶದ
ಪ್ರತಿಯೊಂದು ಅಂಗುಲವನ್ನು ತಮ್ಮ ಅಮೋಘ ಕೆತ್ತನೆಗಳಿಗೆ
ಉಪಯೋಗಿಸಿಕೊಂಡು ದೇವಾಲಯವನ್ನು ಒಂದು ವಾಸ್ತುನಿರ್ಮಾಣವೆನ್ನು ವುದಕ್ಕಿಂತಲೂ
ಕಲೆಯ ಪ್ರದರ್ಶನಾಲಯವೆಂಬಂತೆ ಮಾಡಿರುವುದೇ ಹೊಯ್ಸಳ ಶಿಲ್ಪಿಗಳ ಅನುಪಮ
ಕಾಣಿಕೆ ಎಂದು ಹೇಳಬಹುದು. ಬೇಲೂರು,
ಹಳೇಬೀಡು ದೇವಾಲಯಗಳ ಬಾಗಿಲುಗಳ ಮೇಲಿನ
ಮಕರ ತೋರಣಗಳಲ್ಲಿ ಕಾಣುವ
ಸೂಕ್ಷ್ಮತರವಾದ ಕೆತ್ತನೆ ಅಕ್ಕಸಾಲಿಗರ ಕುಸುರಿ
ಕೆಲಸವನ್ನೂ ಮೀರಿಸುವಂಥದು. ಬೇಲೂರು ದೇವಾಲಯದ ಕೆಲವು
ಕಂಬಗಳ ಮೇಲಿನ ಸೂಕ್ಷ್ಮಕೆತ್ತನೆಗಳು ರೂವಾರಿಗಳ
ಕಲಾಪ್ರೌಢಿಮೆಯ ಅಪೂರ್ವ ನಿದರ್ಶನಗಳು. ಶಿಲಾಬಾಲಿಕೆಯರೆಂದು
ಪ್ರಸಿದ್ಧವಾಗಿರುವ ಸಾಲಭಂಜಿಕೆಗಳು-ಅದರಲ್ಲೂ ಬೇಲೂರಿನ ಚೆನ್ನಕೇಶವ
ದೇವಾಲಯದ ನವರಂಗದ ಕಂಬಗಳ ಮೇಲಿರುವ
ನಾಲ್ಕು ವಿಗ್ರಹಗಳು ಹೊಯ್ಸಳ ಶಿಲ್ಪಿಗಳನ್ನು
ಅಮರಕೀರ್ತಿಭಾಜನರನ್ನಾಗಿಸಿವೆ.
ಹೊಯ್ಸಳ ಶೈಲಿಯ ಪರಿಪಕ್ವ ಗುಡಿಗಳಲ್ಲಿ
ವಿಮಾನ, ಸುಕನಾಸಿ, ನವರಂಗ ಮತ್ತು
ಮುಖಮಂಟಪಗಳು ಮುಖ್ಯಭಾಗಗಳಾಗಿರುತ್ತವೆ. ಇವಿಷ್ಟು ಭೂಮಟ್ಟದಿಂದ ಸು.5
ಅಡಿಗಳೆತ್ತರದ ಮತ್ತು ದೇವಾಲಯದ ವಿಸ್ತೀರ್ಣಕ್ಕಿಂತ
ವಿಶಾಲವಾದ ಜಗತಿಯ ಮೇಲೆ ಇರುತ್ತವೆ.
ಗರ್ಭಗುಡಿ ಅಥವಾ ವಿಮಾನ ನಕ್ಷತ್ರಾಕಾರದ
ತಲವಿನ್ಯಾಸದ ಮೇಲೆ ಚತುರಸ್ರವಾಗಿರು ತ್ತದೆ.
ಅದರ ಮಧ್ಯದಲ್ಲಿರುವ ಪಿಂಡಿಕೆಯ
ಮೇಲೆ ಪ್ರಭಾವಳಿ, ಲತಾತೋರಣ ಮತ್ತು
ಕೀರ್ತಿಮುಖಗಳಿಂದೊಡಗೂಡಿದ ಮೂಲವಿಗ್ರಹ ವಿರುತ್ತದೆ. ಅಭಿಷೇಕಜಲ
ಎಡಭಾಗದಿಂದ ಹರಿದುಹೋಗಿ ಹೊರ ಅಂಗಳದಲ್ಲಿರುವ
ತೀರ್ಥದ ಹೊಂಡವನ್ನು ಸೇರಲು ಸೂಕ್ತವಾದ
ವ್ಯವಸ್ಥೆ ಮಾಡಲಾಗಿರುತ್ತದೆ. ಹೊಯ್ಸಳ ದೇವಾಲಯಗಳಲ್ಲಿ ಒಂದು,
ಎರಡು, ಮೂರು, ನಾಲ್ಕು ಅಥವಾ
ಐದು ಗರ್ಭಗುಡಿಗಳಿರುವುದುಂಟು. ಅನುಕ್ರಮವಾಗಿ
ಅವನ್ನು ಏಕಕೂಟ, ದ್ವಿಕೂಟ, ತ್ರಿಕೂಟ,
ಚತುಷ್ಕೂಟ ಮತ್ತು ಪಂಚಕೂಟ ಮಂದಿರಗಳೆಂದು
ಕರೆಯಲಾಗುತ್ತದೆ. ಪ್ರತಿಯೊಂದು ಗರ್ಭಗುಡಿಗೂ ಪ್ರತ್ಯೇಕ ಸುಕನಾಸಿ ಇರುತ್ತದೆ.
ಏಕಕೂಟ ಮತ್ತು ತ್ರಿಕೂಟ ಗುಡಿಗಳಲ್ಲಿ
ಒಂದೇ ನವರಂಗದೊಡನೆ ಸುಕನಾಸಿಗಳು ಸೇರುತ್ತವೆ. ಕೆಲವು ದ್ವಿಕೂಟಾಚಲಗಳಲ್ಲಿ ಪ್ರತ್ಯೇಕ
ನವರಂಗ ಭುವನೇಶ್ವರಿ ಗಳು ಇರುತ್ತವೆ. ಚತುಷ್ಕೂಟ
ಮತ್ತು ಪಂಚಕೂಟ ಮಂದಿರಗಳಲ್ಲಿ ಸಾಮಾನ್ಯವಾಗಿ
ಒಂದಕ್ಕಿಂತ ಹೆಚ್ಚು ನವರಂಗಗಳಿರುತ್ತವೆ.
ಸುಕನಾಸಿ ಗರ್ಭಗುಡಿಗೂ ರಂಗಮಂಟಪಕ್ಕೂ ನಡುವೆ ಉತ್ಸವ ವಿಗ್ರಹಗಳನ್ನಿಡಲು
ಉಪಯೋಗಿಸುವ ಸ್ಥಾನ, ಅದರ ದ್ವಾರಬಂಧದ
ಮೇಲೆ ಗಜಲಕ್ಷ್ಮಿ ಅಥವಾ ಬೇರೆ
ವಿಗ್ರಹಗಳು, ಪಕ್ಕಗಳಲ್ಲಿ ದ್ವಾರಪಾಲಕರು, ಲತಾಪಟ್ಟಿಕೆಗಳು ಇರುತ್ತವೆ. ಅದರ ಮುಂದಿನ
ಭಾಗವೇ ನವರಂಗ. ನವರಂಗದ ಮಧ್ಯಭಾಗದ
ನಾಲ್ಕು ಕಂಬಗಳು ಚಾವಣಿಯ ಭುವನೇಶ್ವರಿಗೆ
ಆಧಾರಗಳಾಗಿರುತ್ತವೆ. ಭುವನೇಶ್ವರಿಯ ಎಂಟು ಮೂಲೆಗಳಲ್ಲಿ ದಿಕ್ಪಾಲಕರ
ಮೂರ್ತಿಗಳಿರುತ್ತವೆ. ಮಧ್ಯ ಅಂಕಣದ ಚಾವಣಿ
ಮಗುಚಿಹಾಕಿದ ಕಮಲದಾಕಾರದಲ್ಲಿರುತ್ತದೆ. ಅದರ ದಳಗಳ ಮೇಲೆ
ಸಂದರ್ಭೋಚಿತವಾದ ದೇವತಾಮೂರ್ತಿಗಳ ಪೌರಾಣಿಕ ಘಟನೆಗಳ ಕೆತ್ತನೆಗಳಿರುತ್ತವೆ.
ಪುಷ್ಪದ ಕೇಸರ ನೇತಾಡುತ್ತಿರುವ ತುಂಡು
ಕಂಬವನ್ನು ಹೋಲುತ್ತಿದ್ದು ಅದರ ತುದಿಯಲ್ಲಿ ನರಸಿಂಹ,
ನಟರಾಜ ಮುಂತಾದ ಮೂರ್ತಿಗಳನ್ನು ಕೆತ್ತಲಾಗಿರುತ್ತದೆ.
ನವರಂಗ ಪ್ರಧಾನ ದೇವತಾಪೂಜಾಕಾಲದಲ್ಲಿ ಸಂಗೀತ,
ನೃತ್ಯ ಮುಂತಾದ ಕಲಾಸೇವೆಗಾಗಿ ಉಪಯೋಗಿಸುತ್ತಿದ್ದ
ಸ್ಥಳ. ಅಂತೆಯೇ ಶಿಲ್ಪಿ ಅದರ
ಮೇಲಿನ ಭುವನೇಶ್ವರಿಯ ಕೆತ್ತನೆಯಲ್ಲಿ ತನ್ನ ಪ್ರತಿಭೆಯನ್ನು ಪ್ರದರ್ಶಿಸುವ
ಪ್ರಯತ್ನ ನಡೆಸಿರುತ್ತಾನೆ. ಈ ದೃಷ್ಟಿಯಲ್ಲಿ
ನೋಡಿದರೆ ಬೇಲೂರಿನ ಚೆನ್ನಕೇಶವ ಗುಡಿಯ
ಭುವನೇಶ್ವರಿಯ ಸೊಬಗು ಅನುಪಮವಾದುದು. ಅದರ
ಮುಂಭಾಗದ ಮಂಟಪ ಕೆಲವೆಡೆ ಮೊದಲಿಗೆ
ತೆರೆದಿರುತಿದ್ದಿತು. ಕಾಲಕ್ರಮದಲ್ಲಿ ಅಲ್ಲೂ ಚಾವಣಿಯ ವರೆಗೆ
ಗೋಡೆಗಳನ್ನು ನಿರ್ಮಿಸಿದುದ ರಿಂದ ದೇವಾಲಯದ ಒಳಭಾಗಕ್ಕೆ
ಗಾಳಿ ಬೆಳಕುಗಳ ಆವಶ್ಯಕತೆಯನ್ನು ಪೂರೈಸುವ
ಸಲುವಾಗಿ ಗೋಡೆಯ ಮೇಲರ್ಧಭಾಗದಲ್ಲಿ ಚಿತ್ರರಂಜಿತವಾದ
ಜಾಲಂಧ್ರಗಳನ್ನು ಸೇರಿಸುವ ಪರಿಪಾಠ ಕಾಣುತ್ತದೆ.
ಭಕ್ತಾದಿಗಳು ದೇವರಸೇವೆ ಮತ್ತು ದರ್ಶನಮಾಡಲು
ಈ ಮಂಟಪದಲ್ಲಿ ಕೂಡುತ್ತಿದ್ದರು.
ಕೆಲವು ಹೊಯ್ಸಳ ದೇವಾಲಯಗಳಲ್ಲಿ ಎರಡೆರಡು
ಚಾವಣಿಗಳಿರುತ್ತಿದ್ದು ಅವುಗಳ ನಡುವಣ ಅಂತಸ್ತಿನಲ್ಲಿ
ದೇವಾಲಯದ ಬೆಲೆಬಾಳುವ ವಸ್ತುಗಳನ್ನು ಶೇಖರಿಸಿಡಲಾಗುತ್ತಿತ್ತು.
ದೇವಾಲಯದ ಹೊರಗಿನ ಪ್ರಾಂಗಣದಲ್ಲಿ ಬಲಿಪೀಠ.
ಗರುಡ ಅಥವಾ ನಂದಿಪೀಠ, ಧ್ವಜಸ್ತಂಭ
ಮುಂತಾದ ಮೂಲವಿಗ್ರಹದ ನೇರ ನೋಟಕ್ಕೆ ಬೀಳುವಂತೆ
ಇರುತ್ತವೆ. ದೇವಾಲಯಗಳ ವಿಸ್ತಾರ ಹೆಚ್ಚುತ್ತಹೋದಂತೆ
ಪ್ರಾಂಗಣದಲ್ಲಿ ದೇವಿ, ಪರಿವಾರದೇವತೆಗಳು, ಸಪ್ತಮಾತೃಕೆಯರು,
ನವಗ್ರಹಗಳು ಮೊದಲಾದವರಿಗೆ ಗುಡಿಗಳನ್ನೂ ಹೊರಪ್ರಾಕಾರದ ಗೋಡೆಗಳಿಗೆ ಹೊಂದಿಕೊಂಡಿರುವ ಕಂಬಗಳಿಂದ
ಕೂಡಿದ ಕೈಸಾಲೆಯ ಹಿಂಬದಿಯಲ್ಲಿ ಯಾಗಶಾಲೆ,
ಪಾಠಶಾಲೆ, ಉತ್ಸವ ವಾಹನಗಳ ಮಂಟಪ
ಮುಂತಾದುವನ್ನೂ ಪ್ರಾಂಗಣದ ಒಂದೆಡೆ ಕಲ್ಯಾಣಮಂಟಪ,
ಈಶಾನ್ಯಮೂಲೆಯಲ್ಲಿ ಕಲ್ಯಾಣಿ ಅಥವಾ ದೇವಾಲಯದ
ಕೊಳಗಳನ್ನೂ ನಿರ್ಮಿಸುವ ಪರಿಪಾಠ ರೂಢಿಗೆ
ಬಂತು.
ಈ ಎಲ್ಲ ವಿಷಯಗಳಿಂದ ತಿಳಿದು
ಬರುವಂತೆ ಹೊಯ್ಸಳ ದೇವಾಲಯಗಳು ದ್ರಾವಿಡ
ಶೈಲಿಯ ತಳಹದಿಯ ಮೇಲೆ ಆಧಾರಿತವಾಗಿದ್ದರೂ
ಹೊಯ್ಸಳ ವಾಸ್ತುಶಿಲ್ಪಿಗಳ ಸೃಜನಶೀಲ ಕೈಗಳಲ್ಲಿ ಅವು
ತಮ್ಮದೇ ಆದ ವೈಶಿಷ್ಟ್ಯಗಳನ್ನು
ಪಡೆದುಕೊಂಡವು. ದ್ರಾವಿಡ ವಾಸ್ತುಲಕ್ಷಣಗಳನ್ನು ತಮ್ಮ
ಭಾವನೆಗಳಿಗೆ ಸರಿಹೊಂದುವಂತೆ ಮಾರ್ಪಡಿಸಿಕೊಂಡು ಈ ಶಿಲ್ಪಿಗಳು
ಕಟ್ಟಡ ನಿರ್ಮಾಣ ಮಾಡಿದ್ದಾರೆ. ಈ
ಭಾವನೆಗಳು ಮತ್ತು ತತ್ಫಲವಾದ ಮಾರ್ಪಾಡುಗಳು
ವಾಸ್ತುಶಿಲ್ಪಿಯ ದೃಷ್ಟಿಕೋನಕ್ಕೆ ಸರಿ ಹೊಂದುವುಗಳಾಗಿಲ್ಲದೆ ಕಲಾಕಾರನ
ದೃಷ್ಟಿಕೋನಕ್ಕೆ ಸರಿಹೊಂದುವಂಥವು. ಪರ್ಸಿಬ್ರೌನನ ಮಾತುಗಳಲ್ಲಿ ಹೇಳುವುದಾದರೆ ಹೊಯ್ಸಳ ದೇವಾಲಯಗಳು ವಾಸ್ತುನಿರ್ಮಾಣಗಳೆನ್ನುವುದಕ್ಕಿಂತ
ಪ್ರಯೋಗಾತ್ಮಕ ಕಲಾಮಂದಿರಗಳಾಗಿವೆ. ದೇವಾಲಯದ ಹೊರಗೋಡೆಗಳ ಮೇಲಿನ
ವಿಗ್ರಹಗಳು ಒಂದೊಂದೂ ತಮ್ಮದೇ ಆದ
ಪ್ರತ್ಯೇಕ ಸನ್ನಿವೇಶವನ್ನು ಪ್ರತಿನಿಧಿಸುತ್ತವೆ. ಅವು ದಂತದ ಕೆಲಸಗಾರರು
ನಿರ್ಮಿಸುವ ದೇವತಾಮೂರ್ತಿಗಳ ಪ್ರತ್ಯೇಕ ಸಂಪುಟಗಳನ್ನು ಕಲ್ಲಿನಲ್ಲಿ
ದೊಡ್ಡ ಆಕಾರದಲ್ಲಿ ಪುನರಾವರ್ತನೆ ಮಾಡಿದಂತೆ
ಭಾಸವಾಗುತ್ತದೆ. ಗೋಡೆಗಳ ಮೇಲೆ ಅಲಂಕರಣಕ್ಕಾಗಿ
ಕೆತ್ತಿದ ಜೋತಾಡುತ್ತಿರುವ ಸರಪಳಿಗಳು, ಸೂರುಗಳ ತಳಭಾಗದಲ್ಲಿ
ತಿರುಪುಮೊಳೆ-ತಿರುಪುಗಟ್ಟಿಗಳನ್ನು ಹೋಲುವ ಕೆತ್ತನೆಗಳು ಇವೆಲ್ಲ
ಲೋಹಗಾರಿಕೆಯ ಕೆಲಸವನ್ನು ಹೋಲುತ್ತವೆ. ಪ್ರತಿಮೆಗಳ
ದೇಹದ ಅಡಿಯಿಂದ ಮುಡಿಯ ವರೆಗೂ
ತೋರಿಸಿರುವ ಆಭರಣಗಳ ವೈವಿಧ್ಯ, ನಯಗಾರಿಕೆ
ಚಿನ್ನದ ಕುಸುರಿ ಕೆಲಸವನ್ನು ಪ್ರತಿನಿಧಿಸುತ್ತದೆ.
ಒಟ್ಟಿನಲ್ಲಿ ಕಲಾಭಿಮಾನಿದೇವಿ ಸರಸ್ವತಿಯ ನೆಚ್ಚಿನ ಪುತ್ರರಾದ
ದಿವ್ಯಶಿಲ್ಪಿಗಳ ಹಾರ್ದಿಕ ನಿರ್ಮಾಣಗಳಾದ ಈ
ದೇವಮಂದಿರಗಳು ಮೂರ್ತಿಶಿಲ್ಪಿಗಳ ವಾಸ್ತುನಿರ್ಮಾಣವೇ ಹೊರತು ವಾಸ್ತುಶಿಲ್ಪಿಗಳಿಂದ ನಿರ್ಮಿತವಾದ
ಕಟ್ಟಡಗಳಲ್ಲ.
ಹೊಯ್ಸಳ ಶೈಲಿ ಎಂದು ಕರೆಯಬಹುದಾದ
ಈ ಎಲ್ಲ ವೈಶಿಷ್ಟ್ಯಗ
ಳನ್ನೂ ಉಳ್ಳ ಸು. 60 ದೇವಾಲಯಗಳು
ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಚಿತ್ರದುರ್ಗ, ತುಮಕೂರು,
ಮಂಡ್ಯ ಮತ್ತು ಮೈಸೂರು ಜಿಲ್ಲೆಗಳಲ್ಲಿ
ಉಳಿದು ಬಂದಿವೆ. ಇವುಗಳಲ್ಲಿ ಅತಿಪ್ರಾಚೀನವಾದುದು
ಬೇಲೂರಿನ ಚೆನ್ನಕೇಶವ ದೇವಾಲಯ (1117). ದೊಡ್ಡಗದ್ದವಳ್ಳಿಯ
ಲಕ್ಷ್ಮೀದೇವಾಲಯದಲ್ಲಿ (ಸು. 1113) ಈ ಶೈಲಿಯ
ಉಗಮದ ಸೂಚನೆಗಳು ಕಂಡುಬರುತ್ತವೆ. ಆದರೆ
ಪೂರ್ಣ ರೂಪಣೆ ಇಲ್ಲ. ಹಳೇಬೀಡು,
ಸೋಮನಾಥಪುರ, ಬಸರಾಳು, ನಾಗಮಂಗಲ, ಅರಸೀಕೆರೆ,
ಹರಿಹರ, ನಂದಿತಾವರೆ, ಅರಳಗುಪ್ಪೆ, ರಾಮನಾಥಪುರ, ಮರಲೆ, ಬೆಳ್ಳೂರು, ನಾಗಲಾಪುರ,
ನೊಣವಿನಕೆರೆ, ವಿಘ್ನಸಂತೆ, ನುಗ್ಗೇಹಳ್ಳಿ, ಹೊಸಹೊಳಲು, ಹಾರ್ನಹಳ್ಳಿ, ಹುಲ್ಲೇಕೆರೆ,
ಜಾವಗಲ್ಲು, ಬೆಳವಾಡಿ, ತುರುವೇಕೆರೆ, ಭದ್ರಾವತಿ,
ಜಿನನಾಥಪುರ ಮೊದಲಾದೆಡೆಗಳಲ್ಲಿ ಕಟ್ಟಿದ ಈ ವಿಶಿಷ್ಟ
ಹೊಯ್ಸಳ ಶೈಲಿಯ ದೇವಾಲಯಗಳು ಬೆಳಕಿಗೆ
ಬಂದಿವೆ. ಬೇಲೂರಿನಲ್ಲಿ ಸ್ಪಷ್ಟವಾಗಿ ರೂಪಿತವಾದ ಈ ಶೈಲಿ
ಸುಮಾರು ಎರಡು ಶತಮಾನಗಳ ವರೆಗೆ
ಮುಂದುವರಿಯಿತು. ತುಮಕೂರು ಜಿಲ್ಲೆಯ ವಿಘ್ನಸಂತೆಯಲ್ಲಿರುವ
ಲಕ್ಷ್ಮೀನರಸಿಂಹ ದೇವಾಲಯ (1286) ಪ್ರಾಯಶಃ ಈ ಶೈಲಿಯಲ್ಲಿ
ರಚಿತವಾದ ಕೊನೆಯ ಕಟ್ಟಡ.
ಒಟ್ಟಿನಲ್ಲಿ
ಹೊಯ್ಸಳ ಸಾಮ್ರಾಜ್ಯದ ಸುಮಾರು ಎರಡೂವರೆ ಶತಮಾನದ
ಅಸ್ತಿತ್ವದ ಅವಧಿಯಲ್ಲಿ ಕಟ್ಟಿದ 150ಕ್ಕೂ
ಹೆಚ್ಚಿನ ದೇವಾಲಯಗಳು ಈಗ ಉಳಿದಿರುವುವಲ್ಲದೆ
ಇನ್ನೂ ಅನೇಕ ದೇವಾಲಯ ಗಳು
ಆ ಕಾಲದಲ್ಲಿ ಕಟ್ಟಲಾಗಿದ್ದುವು
ಎಂಬುದಕ್ಕೆ ಶಾಸನಾಧಾರಗಳು ದೊರಕುತ್ತವೆ. ಈ ಅಸಂಖ್ಯಾತ
ದೇಗುಲಗಳ ಸೃಷ್ಟಿಗೆ ಆ ಕಾಲದಲ್ಲಿದ್ದ
ಶಾಂತ, ಸಮೃದ್ಧ ಸ್ಥಿತಿ ಮತ್ತು
ಧರ್ಮಶ್ರದ್ಧೆ ಮುಖ್ಯಕಾರಣ. ರಾಜರುಗಳೇ ಅಲ್ಲದೆ, ರಾಜವಂಶದ
ಇತರರು, ಸಾಮಂತರು, ವಣಿಕರು, ವಣಿಕಾ
ಸಂಘಗಳು, ವೃತ್ತಿಸಂಘಗಳು ಹಾಗೂ ಸಾಮಾನ್ಯರು ದೇವಾಲಯಗಳನ್ನು
ಕಟ್ಟಿಸಿರುವರಲ್ಲದೆ, ಅವುಗಳ ಜೀರ್ಣೋದ್ಧಾರ ಮತ್ತು
ಪೂಜಾದಿಗಳಿಗೂ ದತ್ತಿಗಳನ್ನು ನೀಡಿದ್ದಾರೆ. ಹೊಯ್ಸಳ ದೇವಾಲಯಗಳಲ್ಲಿ ಹೆಚ್ಚಿನವು
ಶೈವ ಮತ್ತು ವೈಷ್ಣವ
ಪಂಥಕ್ಕೆ ಸೇರಿದವು. ಇವಲ್ಲದೆ ಹಲವಾರು
ಜೈನಬಸದಿಗಳೂ ಈ ಕಾಲದಲ್ಲಿ
ಹುಟ್ಟಿದುವು.
ಹೊಯ್ಸಳರ ಕಾಲದ ಶಿಲ್ಪಗಳು ವಾಸ್ತುಕೃತಿಗಳಿಗೆ
ಹೊಂದಿಕೊಂಡಂತೆ ಅವುಗಳ ಅಲಂಕರಣಾರ್ಥವಾಗಿಯೇ ಮಾಡಿದವುಗಳಾಗಿವೆ.
ದೇವಾಲಯದ ಬಹುತೇಕ ಭಾಗಗಳನ್ನು ಶಿಲ್ಪಗಳಿಂದ
ತುಂಬುವ ಈ ಕಾಲದ
ವೈಶಿಷ್ಟ್ಯ ದಿಂದಾಗಿ ಹೆಚ್ಚಿನವು ಉಬ್ಬುಶಿಲ್ಪಗಳೂ
ಧಾರ್ಮಿಕ ರೀತಿಯವೂ ಆಗಿರುತ್ತವೆ. ಹೊರಭಿತ್ತಿಗಳಲ್ಲಿರುವ
ದೇವಶಿಲ್ಪಗಳು ಸಾಮಾನ್ಯವಾಗಿ ಪುರಾಣಗಳಲ್ಲಿ ಉಕ್ತವಾಗಿರುವ ಶೈವ ಅಥವಾ ವೈಷ್ಣವ
ಮೂರ್ತಿಗಳು ಅಥವಾ ಹಲವು ಕಥೆಗಳ
ನಿರೂಪಣೆಗಳು. ಅಪರೂಪವಾಗಿ ಪಂಚತಂತ್ರ ಮುಂತಾದೆಡೆಗಳಿಂದ
ಆಯ್ದ ಕಥೆಗಳನ್ನೂ ಶಿಲ್ಪಿಸುವುದುಂಟು. ಹಿಂದು
ದೇವಾಲಯಗಳಲ್ಲಿ ದೇವಶಿಲ್ಪಗಳ ಅಳವಡಿಕೆ ಹೆಚ್ಚು. ಆದರೆ
ಜೈನದೇವಾಲಯಗಳಲ್ಲಿ ಅದು ಅಷ್ಟಾಗಿ ಕಾಣುವುದಿಲ್ಲ.
ಗರ್ಭಗುಡಿಯಲ್ಲಿ ಸ್ಥಾಪಿತವಾಗುವ ಮೂರ್ತಿಗಳು ಪೂರ್ಣಶಿಲ್ಪಗಳಾದರೂ ಪ್ರಭಾವಳಿಯ
ಹಿನ್ನೆಲೆಯನ್ನು ಒದಗಿಸಿ ಇವನ್ನೂ ಹೆಚ್ಚುಕಡಿಮೆ
ಉಬ್ಬುಶಿಲ್ಪಗಳಂತೆಯೇ ರೂಪಿಸುವುದು ರೂಢಿ. ಹೊಯ್ಸಳ ಕಾಲದ
ಶಿಲ್ಪಗಳಲ್ಲಿ ಕಂಡುಬರುವ ಒಂದು ಮುಖ್ಯ
ಅಂಶ ಅಲಂಕರಣಕ್ಕೆ ಹೆಚ್ಚಿನ
ಗಮನ. ಶಿಲ್ಪಗಳಲ್ಲಿ ಆಭರಣಗಳು, ಉಡುಗೆಗಳು ಇತ್ಯಾದಿಗಳನ್ನು
ಬಹು ನವುರಾಗಿ, ವಿವರವಾಗಿ,
ಅಳವಡಿಸುವ ಪ್ರವೃತ್ತಿಯಿಂದಾಗಿ ಶಿಲ್ಪಗಳ ಅಂಗಾಂಗ ನಿರೂಪಣೆಯಲ್ಲಿ
ಸಹಜತೆಯಾಗಲೀ ವಿವಿಧ ಭಾವ ಪ್ರಕಟಣೆಯಾಗಲೀ
ಕಂಡುಬರುವುದಿಲ್ಲ. ಇವುಗಳನ್ನು ಕಲಾಸಿದ್ಧಿಗಳೆನ್ನುವುದಕ್ಕಿಂತಲೂ ಉತ್ತಮ ಕಸಬುದಾರರ
ನಿರೂಪಣೆಗಳೆನ್ನಬಹುದೆಂದು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಈ ಮಾತುಗಳು
ವಿಶೇಷವಾಗಿ ದೇವ, ಮಾನವ ಶಿಲ್ಪಗಳಿಗೇ
ಅನ್ವಯಿಸುತ್ತವೆ. ಹೊಯ್ಸಳ ಶಿಲ್ಪಿಗಳು ರಚಿಸಿರುವ
ಪ್ರಾಣಿ, ಲತೆ ಮುಂತಾದ ಶಿಲ್ಪಗಳಾದರೋ
ಬಹು ಸ್ವಾಭಾವಿಕವಾಗಿ, ಸಮಂಜಸವಾಗಿ
ಹಲವು ಬಾರಿ ಶಕ್ತಿಯುತವಾಗಿ ನಿರೂಪಿತವಾಗಿರುತ್ತವೆ.
ಹೊಯ್ಸಳ ಶಿಲ್ಪಸೃಷ್ಟಿಯ ಮೋಡಿ ಬೆರಗುಗೊಳಿಸುವಂಥದು. ಒಂದೊಂದೇ
ಶಿಲ್ಪಗಳಲ್ಲಿರುವ ಕುಸುರಿಕೆಲಸ, ವೈವಿಧ್ಯಮಯ ವಿನ್ಯಾಸಗಳು ಹಾಗೂ
ಒಟ್ಟಾಗಿ ದೇವಾಲಯಗಳ ಮೇಲೆ ವ್ಯವಸ್ಥಿತ
ರೀತಿಯಲ್ಲಿ ಜೋಡಣೆಗೊಂಡಾಗ ಅವು ನೋಡುಗನ ಮೇಲೆ
ಉಂಟುಮಾಡುವ ಪ್ರಭಾವ ಮರೆಯಲಾಗದ ಅನುಭವವಾಗುತ್ತದೆ.
ಕಲಾನಿರ್ಮಾಣಗಳಲ್ಲಿ
ಅಮೋಘವೂ ಬಹಳ ಸುಂದರವೂ ಆದ
ಶಿಲಾಬಾಲಿಕೆಯರೆಂಬ ಅಭಿಧಾನದಿಂದ ಪ್ರಪಂಚಪ್ರಸಿದ್ಧವಾದ, ಕಲಾಇತಿಹಾಸಕಾರರಿಂದ ಅನುಪಮ ಕೃತಿಗಳೆಂದು ಹೊಗಳಿಸಿಕೊಂಡ
ಸಾಲಭಂಜಿಕೆ ಅಥವಾ ಮದನಿಕೆಯರ ವಿಗ್ರಹಗಳು
ಯಾವುದೇ ಕಾಲದ, ಯಾವುದೇ ದೇಶದ
ಶಿಲ್ಪಗಳ ಜೊತೆಯಲ್ಲಿಟ್ಟರೂ ಸ್ವಂತಿಕೆಯನ್ನೂ ಅಮರತ್ವವನ್ನೂ ಸಂಪಾದಿಸಿಕೊಳ್ಳಬಲ್ಲವು. ಕಂಬಗಳ ಅಗ್ರಭಾಗದಲ್ಲಿ ಬೋದಿಗೆ
ಮತ್ತು ಚಾವಣಿಗಳ ನಡುವೆ ಅಡ್ಡದೂಲಗಳಿಗೆ
ಆಧಾರವಾಗಿರು ವಂತೆ ಮುಂಬಾಗಿ ನಿಲ್ಲುವಂತೆ
ಜೋಡಿಸಿರುವ ಈ ಮೂರ್ತಿಗಳ
ನಿರೂಪಣೆಯಲ್ಲಿ ಕೇವಲ ಕೆತ್ತನೆಯ ಚಾತುರ್ಯ
ಮಾತ್ರವಲ್ಲ, ಭೂಮಟ್ಟದಿಂದ 10-15 ಅಡಿಗಳೆತ್ತರದಲ್ಲಿ ಸು. 30º ಕೋನದಲ್ಲಿ ಮುಂಬಾಗಿನಿಂತ
ಪ್ರತಿಮೆಗಳು ಕೆಳಗೆ ನಿಂತ ನೋಟಕರ
ದೃಷ್ಟಿಕೋನಗ ಳಿಂದ ತಮ್ಮ ಅಂಗಾಂಗಗಳ
ಪ್ರಮಾಣವನ್ನು ನೈಜವಾಗಿ ಕಾಣುವಂತೆ ಪ್ರದರ್ಶಿಸುತ್ತಿರುವ
ಹಾಗೆ ಶಿಲ್ಪಿ ಅವನ್ನು ರೂಪಿಸಿದ್ದಾನೆ.
ಅನೇಕ ರೀತಿಯ ಆಭರಣಗಳನ್ನು ದೇಹಾದ್ಯಂತ
ಧರಿಸಿಕೊಂಡು ಅರೆಬೆತ್ತಲೆಯಾದ ಈ ಸ್ತ್ರೀವಿಗ್ರಹಗಳಲ್ಲಿ
ಆಭರಣಗಳ ಹಿಂದಿನಿಂದ ಯೌವನಭರಿತ ಪ್ರೌಢತರುಣಿಯರ
ಸೌಂದರ್ಯದ ಹೊನಲು ಹೊರನುಗ್ಗಿ ಹರಿಯುತ್ತಿರು
ವಂತೆ ಕಾಣುತ್ತದೆ. ಸುಮಾರು ನೂರು ಸಂಖ್ಯೆಯ
ಹೊಯ್ಸಳ ದೇವಾಲಯಗಳ ಪೈಕಿ ಕೇವಲ
8-10 ಗುಡಿಗಳಲ್ಲಿ ಮಾತ್ರ ಈ ಮದನಿಕೆಯರನ್ನು
ಕಡೆದಿದ್ದಂತೆ ಕಾಣಬರುತ್ತದೆ. ಬಳ್ಳಿಗಾಮೆಯ ತ್ರಿಪುರಾಂತಕೇಶ್ವರ, ನಾಗಲಾಪುರದ ಚೆನ್ನಕೇಶವ ಮಂದಿರಗಳಲ್ಲಿ
ಮೊದಲಿಗೆ ಮದನಿಕಾ ವಿಗ್ರಹಗಳಿದ್ದರೂ ಈಗ
ಕಣ್ಮರೆಯಾಗಿವೆ. ಉಂಡಿಗನಹಾಳದ ಚಾಮುಂಡೇಶ್ವರಿ, ಮರಲೆಯ ಕೇಶವ, ಹಳೇಬೀಡಿನ
ಹೊಯ್ಸಳೇಶ್ವರ, ಕಿಕ್ಕೇರಿಯ ಬ್ರಹ್ಮೇಶ್ವರ ಮಂದಿರಗಳಲ್ಲಿ
ಕೆಲವು ವಿಗ್ರಹಗಳು ಇನ್ನೂ ಉಳಿದುಬಂದಿವೆ.
ಆದರೆ ಬೇಲೂರಿನ ಚೆನ್ನಕೇಶವ ದೇವಾಲಯದಲ್ಲಿ
ಮೊದಲು ಇದ್ದಿರಬಹುದಾದ 44ರಲ್ಲಿ 42 ಅಪೂರ್ವ ಸೌಂದರ್ಯನಿಧಿಗಳಾದ
ಶಿಲಾಬಾಲಿಕೆಯರು ಇನ್ನೂ ಉಳಿದು ಬಂದಿರುವುದು
ಮಹತ್ತ್ವದ ಸಂಗತಿ.
ಮದನಿಕಾವಿಗ್ರಹಗಳು
ಸಾಮಾನ್ಯವಾಗಿ ಸ್ತ್ರೀವಿಗ್ರಹಗಳು. ಬೇಲೂರಿನ ಚೆನ್ನಕೇಶವ ದೇವಾಲಯದಲ್ಲಿ
ಒಬ್ಬ ವೇಣುಲೋಲ ಮತ್ತು ಇಬ್ಬರು
ಮೃದಂಗ ವಾದಕರ ವಿಗ್ರಹಗಳು ಮಾತ್ರ
ಪುರುಷರಂತೆ ಕಂಡುಬಂದರೂ ಅವು ಸಹ
ಪುರುಷವೇಷಧಾರಿ ಸ್ತ್ರೀಮೂರ್ತಿಗಳೇ ಇರಬೇಕೆಂದೆನಿಸುತ್ತದೆ. ನವರಂಗದ ಕಂಬದ ಮೇಲಿನ
ಒಂದು ಮೂರ್ತಿ ಕಿರೀಟ ಧರಿಸಿದ್ದರೂ
ಹೊರವಲಯದ ಮೂರ್ತಿಗಳಲ್ಲಿ ವೇಣುಗಾಯಕ ಕೃಷ್ಣನಿರಬಹುದೆಂದು ಸೂಚಿಸಲಾಗಿದ್ದರೂ
ಕಪಾಲಪಂಕ್ತಿ ಭೂಷಿತವಾದ ಕಿರೀಟ ಧರಿಸಿ
ಎಡಗೈಯಲ್ಲಿ ಕಪಾಲದಂಡ ಹಿಡಿದ ಮೂರ್ತಿಯನ್ನು
ಭೈರವಿಯೆಂದು ಗುರುತಿಸಿದ್ದರೂ ವೀಣಾಪುಸ್ತಕಪಾಣಿಯನ್ನು ವಿದ್ಯಾಕಲಾಭೂಮಿಯ ಸರಸ್ವತಿಯಿರಬಹುದೆಂದುಊಹಿಸಿದ್ದರೂ ಎಲ್ಲ ವಿಗ್ರಹಗಳು ಕೆಲಬಾರಿ
ದೇವತಾರೂಪ ಧರಿಸಿರುವ ನೃತ್ಯಸಂಗೀತಮಗ್ನರಾದ ಮಾನಿನಿಯರೆಂಬುದು
ವಿದ್ವಾಂಸರ ಅಭಿಪ್ರಾಯ. ಶಿಲ್ಪಿ ತನ್ನ
ವಾಸ್ತುಕಾರ್ಯದಲ್ಲಿ ಕಂಬಗಳ ಭಾಗವಾಗಿ ಚಾವಣಿಗೆ
ಆಧಾರವೆಂಬ ನೆವದಿಂದ ಈ ಭುವನಮೋಹಕ
ಸುಂದರಿಯರ ಪ್ರತಿಮೆಗಳನ್ನು ಕಡೆಯುವುದರ ಮೂಲಕ ತನ್ನ
ಉನ್ನತ ಕೈಚಳಕದ ಪ್ರದರ್ಶನಕ್ಕೆ ಒಂದು
ಸದವಕಾಶ ಪಡೆದುಕೊಂಡಿದ್ದಾನೆ. ಅತಿಭಂಗ-ತ್ರಿಭಂಗ ಮುದ್ರೆಗಳಲ್ಲಿ
ಹಲವಿಧ ವ್ಯಾಪಾರಗಳಲ್ಲಿ ನಿರತರಾಗಿರುವ ಮದನಿಕೆಯರು, ಫಲಕಗಳ ಕೆಳಭಾಗದಲ್ಲಿ ಮದನಿಕೆಯರ
ವಿವಿಧ ಚಟುವಟಿಕೆಗಳಲ್ಲಿ ಸಹಾಯ ನೀಡುತ್ತಿರುವ ಸಣ್ಣ
ಪ್ರಮಾಣದಲ್ಲಿ ಕಡೆಯಲಾದ ಪರಿಚಾರಕವರ್ಗ, ಮದನಿಕೆಯರ
ತಲೆಯ ಮೇಲೆ ಕಮಾನಿನಂತೆ, ಲತಾತೋರಣಗಳಂತೆ,
ಅವರ ದೈವೀನಟನೆಗೆ ಪೂರಕವಾಗಿ
ಪ್ರಭಾವಳಿಯಂತೆ ಕಾಣುವ ವೃಕ್ಷಶಾಖೆಗಳು-ಹೀಗೆ
ಈ ಚಾಚುವಿಗ್ರಹ ಫಲಕಗಳ
ಭಾಗಗಳನ್ನು ವಿಶ್ಲೇಷಿಸಬಹುದಾಗಿದೆ.
ಈ ವಿಗ್ರಹಗಳ ಭಾವಗಳನ್ನು ವಿಶ್ಲೇಷಿಸುವಾಗ
ನವರಸಗಳ ನಿರೂಪಣೆಯನ್ನು ಅವುಗಳಲ್ಲಿ ಕಂಡವರಿದ್ದಾರೆ. ಒಂದೊಂದು
ಫಲಕದಲ್ಲೂ ಒಂದಕ್ಕಿಂತ ಹೆಚ್ಚು ರಸಗಳ
ನಿರೂಪಣೆ ಕಂಡುಬಂದರೂ ಶೃಂಗಾರರಸ ಪ್ರಧಾನವಾಗಿರುತ್ತದೆ.
ಸನ್ನಿವೇಶ, ವಿಶಿಷ್ಟಭಾವನಿರೂಪಣೆಗೆ ಹೊಂದುವಂತೆ ಶಿಲ್ಪಿಗಳು ವಿಗ್ರಹಗಳನ್ನು
ಮುಮ್ಮುಖವಾಗಿಯೋ ಪಾಶ್ರ್ವನೋಟಕವಾ ಗಿಯೋ ದೇಹದ ಕೆಳಭಾಗ
ಮುಮ್ಮುಖವಾಗಿಯೂ ಮೇಲ್ಭಾಗ ಪಾಶ್ರ್ವನೋಟಕವಾಗಿಯೂ ತೋರಿಸಿರುವುದರಿಂದ
ಪ್ರತಿಮೆಗಳು ನೈಸರ್ಗಿಕವಾಗಿವೆ ಮತ್ತು ದೇವತಾಮೂರ್ತಿ ನಿರೂಪಣೆಯಲ್ಲಿರುವ
ಪೆಡಸು ಕಂಡು ಬರುವುದಿಲ್ಲ.
**********
Comments
Post a Comment