ಹೊಯ್ಸಳರ ಕಾಲದ ಧರ್ಮ ಮತ್ತು ಸಾಹಿತ್ಯದ ಕೊಡುಗೆಗಳು

   ರಾಜ್ಯದಲ್ಲಿ ಧಾರ್ಮಿಕ ಸಹಿಷ್ಣುತೆ ನೆಲಸಿತ್ತು. ಸರ್ವಧರ್ಮಗಳಿಗೂ ಸಮಾನ ಪೋಷಣೆ ಪ್ರೋತ್ಸಾಹ ದೊರೆಯಿತು. ವಿಭಿನ್ನ ಧರ್ಮಗಳಿಗೆ ಸೇರಿದವರು ವಿವಾಹವಾಗಿ ಸಹಬಾಳ್ವೆ ನಡೆಸಿದ ದೃಷ್ಟಾಂತ ಕಾಲದಲ್ಲಿ ಕಾಣಸಿಗುತ್ತದೆ. ಚಂದ್ರಮೌಳಿ ಎಂಬ ಅಧಿಕಾರಿ ಶೈವ, ಆದರೆ ಇವನ ಪತ್ನಿ ಅಚ್ಚಿಯಕ್ಕ ಜೈನಧರ್ಮಾವಲಂಬಿ. ಬ್ರಾಹ್ಮಣರಿಗೆ, ಜೈನಗುರುಗಳಿಗೆ, ಶ್ರೀವೈಷ್ಣವ ಆಚಾರ್ಯರಿಗೆ ಪೂಜ್ಯಸ್ಥಾನವಿತ್ತು. ತಮಿಳು ವಿದ್ವಾಂಸರು ಹೊಯ್ಸಳನಾಡಿಗೆ ಬಂದು ವೈಷ್ಣವ ಧರ್ಮಪ್ರಸಾರದಲ್ಲಿ ನಿರತರಾದರು. ಆಗಾಗ ಧಾರ್ಮಿಕ ವಿಷಯಗಳಲ್ಲಿ ಚರ್ಚಾಸಭೆಗಳು ನಡೆಯುತ್ತಿದ್ದುವು. ಅರಸರ ಬಿರುದುಗಳಲ್ಲಿ ಚತುಸ್ಸಮಯಸಮುದ್ಧರಣ ಎಂಬುದೂ ಒಂದು.

ದಾನಧರ್ಮ ಕಾರ್ಯಗಳು ನಡೆಯುತ್ತಿದ್ದವು. ದೇವಾಲಯ, ಬಸದಿ, ಕೆರೆಕಟ್ಟೆಗಳನ್ನು ಕಟ್ಟಿಸುವುದು ಹಾಗೂ ಜೀರ್ಣೋದ್ಧಾರ ಮಾಡಿಸುವುದು, ದೇವತಾಪೂಜೆ ನೈವೇದ್ಯಾದಿ ಸೇವೆಗಳಿಗೆ ಭೂದಾನ, ಧನದಾನ ನೀಡುವುದು ಪುಣ್ಯಕಾರ್ಯಗಳೆನಿಸಿದ್ದುವು. ಕಾಡನ್ನು ಕಡಿದು ಊರು, ಕೆರೆಗಳನ್ನು ನಿರ್ಮಿಸಿದ ನಿದರ್ಶನಗಳುಂಟು. ವೇದಾಧ್ಯಯನ, ಲಲಿತಕಲೆಗ ಳಿಗೆ ಪ್ರೋತ್ಸಾಹ ದೊರೆಯಿತು. ರಾಜನೂ ಅಧಿಕಾರಿಗಳೂ ವ್ಯಾಪಾರಿಗಳೂ ಖಾಸಗಿ ವ್ಯಕ್ತಿಗಳೂ ಧರ್ಮಕಾರ್ಯನಿರತರಾಗಿದ್ದನ್ನು ಕಾಲದಲ್ಲಿ ಕಾಣುತ್ತೇವೆ.

ಅಧಿಕಾರಿಗಳೂ ಪ್ರಜೆಗಳೂ ಅರಸನಿಗೆ ನಿಷ್ಠರಾಗಿದ್ದರು. ಅರಸನಿಗಾಗಿ ರಾಜ್ಯಕ್ಕಾಗಿ ತಮ್ಮ ಪ್ರಾಣವನ್ನು ಬಲಿಗೊಡಲು ಸಾಮಾನ್ಯ ಪ್ರಜೆಯೂ ಹಿಂಜರಿಯುತ್ತಿರಲಿಲ್ಲ. ಆತ್ಮಬಲಿಯ ಹಲವು ಪ್ರಕಾರಗಳು ಕಾಲದಲ್ಲಿ ಪ್ರಚಲಿತವಿದ್ದವು. ಗರುಡ ಪದ್ಧತಿ ವಿಶೇಷ ಗಮನಾರ್ಹ. ಯುದ್ಧದಲ್ಲಿ ಮೃತರಾದವರ, ಗರುಡರಾಗಿದ್ದವರ ಕುಟುಂಬಗಳಿಗೆ ದಾನ ನೀಡಲಾಗು ತ್ತಿತ್ತು. ಸತಿಪದ್ಧತಿ ಜಾರಿಯಲ್ಲಿತ್ತು. ರಾಜ್ಯದ ಅನೇಕ ಭಾಗಗಳಲ್ಲಿ ಗೋಗ್ರಹಣ ಪದೇ ಪದೇ ನಡೆಯುತ್ತಿದ್ದುವು. ತುರುಗಳ್ಳರು ಅಕ್ಕಪಕ್ಕದ ಊರಿನವರಾಗಿರಬಹುದು, ಇಲ್ಲವೆ ಇತರರಾಗಿರಬಹುದು. ಊರ ರಕ್ಷಣೆಗೆ ಗೋರಕ್ಷಣೆಗೆ ನಿಂತು ಹೋರಾಡಿ ಮರಣಹೊಂದಿದ ವೀರನ ಕುಟುಂಬಗಳಿಗೆ ಭೂಮಿಯನ್ನು, ಹಣವನ್ನು ದಾನ ನೀಡಿದ್ದನ್ನು ಕಾಣುತ್ತೇವೆ. ಆಗಾಗ ಗಡಿವಿವಾದಗಳ ಸಂಬಂಧದಲ್ಲಿ ಹೋರಾಟಗಳು ನಡೆಯುತ್ತಿದ್ದುವು.


ಸಾಹಿತ್ಯ ಮತ್ತು ಲಲಿತಕಲೆ : ಸಾಮಾಜಿಕ ನೆಮ್ಮದಿ ನೆಲೆಯೂರಿದ್ದ ಹೊಯ್ಸಳ ಯುಗ ಸಾಹಿತ್ಯ, ಕಲೆ ಇವುಗಳ ಸಂವರ್ಧನೆಯ ಕಾಲವಾಗಿತ್ತು. ಹೊಯ್ಸಳ ಅರಸರು ಬೇರೆ ಸಂತತಿಯ ಕೆಲವು ರಾಜರು ಹೇಳಿಕೊಂಡಿರು ವಂತೆ ತಾವೇ ಗ್ರಂಥರಚನೆಗೆ ಕೈಹಾಕದಿದ್ದರೂ ಕವಿಗಳಿಗೂ ದಾರ್ಶನಿಕರಿಗೂ ವಿಶೇಷ ಪ್ರೋತ್ಸಾಹ ನೀಡಿದರು. ಇವರ ಕಾಲದಲ್ಲಿ ಧರ್ಮ, ದರ್ಶನ, ಪುರಾಣ, ಗಣಿತ, ವೈದ್ಯ, ವ್ಯಾಕರಣ ಮೊದಲಾದ ಶಾಸ್ತ್ರಗ್ರಂಥಗಳಲ್ಲದೆ ಹಲವು ಕಾವ್ಯಗಳೂ ಚಂಪೂ, ರಗಳೆ, ಷಟ್ಪದಿ, ನಾಟಕ, ದ್ವಿಪದಿ, ವಚನ ಮೊದಲಾದ ಪ್ರಕಾರಗಳಲ್ಲಿ ಸಂಸ್ಕø, ಪ್ರಾಕೃತ, ಕನ್ನಡ ಭಾಷೆಗಳಲ್ಲಿ ರಚಿತವಾದವು. ಹೊಯ್ಸಳರ ಕಾಲದಲ್ಲಿ ರಚಿತವಾದ ಕನ್ನಡ ಮತ್ತು ಸಂಸ್ಕೃತ ಸಾಹಿತ್ಯ ಗ್ರಂಥಗಳು ತತ್ಕಾಲೀನ ಸಾಮಾಜಿಕ ಸ್ಥಿತಿಗತಿಗಳು, ನಂಬಿಕೆ ಮತ್ತು ನಡುವಳಿಕೆಗಳಿಗೆ ಸಂಬಂಧಿಸಿದಂತೆ ಮಾಹಿತಿಯನ್ನು ಒದಗಿಸುತ್ತವೆ.

ರಾಮಚಂದ್ರಚರಿತ ಪುರಾಣದ (ಪಂಪರಾಮಾಯಣ) ಕರ್ತೃವಾದ ನಾಗಚಂದ್ರ ಹೊಯ್ಸಳ ಅರಸ ಒಂದನೆಯ ಬಲ್ಲಾಳ ಅಥವಾ ವಿಷ್ಣುವರ್ಧನನ ಆಸ್ಥಾನದಲ್ಲಿದ್ದನೆಂದು ತಿಳಿದುಬಂದಿದೆ. ಈತ ಕಲ್ಯಾಣ ಚಾಳುಕ್ಯ ಇಮ್ಮಡಿ ಸೋಮೇಶ್ವರನ ಆಸ್ಥಾನದಲ್ಲಿದ್ದಿರಬೇಕೆಂದೂ ಒಂದು ಅಭಿಪ್ರಾಯ ಇದೆ. ನಾಗಚಂದ್ರನಿಗೆ ಅಭಿನವಪಂಪನೆಂಬ ಹೆಸರಿದೆ. ಕಂತಿಯೆಂಬ ಕವಯಿತ್ರಿಯೊಬ್ಬಳಿದ್ದಳೆಂದೂ ಅವಳು ನಾಗಚಂದ್ರನ ಸಮಕಾಲೀನಳಾಗಿದ್ದಿರಬೇಕೆಂದೂ ಪ್ರತೀತಿ ಇದೆ. ಹರಿಹರ ಮತ್ತು ರಾಘವಾಂಕ ಕವಿಗಳು ಒಂದನೆಯ ನರಸಿಂಹನ (1142-73) ಸಮಕಾಲೀನರಾಗಿದ್ದಿರಬೇಕೆಂದು ಊಹೆ.

ಇಮ್ಮಡಿ ವೀರಬಲ್ಲಾಳನ ಕಾಲದ ಸುಪ್ರಸಿದ್ಧ ಕವಿಗಳು ಅನೇಕ ಗ್ರಂಥಗಳನ್ನು ರಚಿಸಿದ್ದಾರೆ. ಯಶೋಧರಚರಿತೆ ಮತ್ತು ಅನಂತನಾಥಪುರಾಣ ಎಂಬ ಪ್ರಸಿದ್ಧ ಗ್ರಂಥಗಳನ್ನು ರಚಿಸಿದ ಜನ್ನ ಇವನ ಆಸ್ಥಾನಕವಿ. ವೀರಬಲ್ಲಾಳ ಇವನಿಗೆ ಕವಿಚಕ್ರವರ್ತಿ ಎಂಬ ಬಿರುದನ್ನು ನೀಡಿ ಗೌರವಿಸಿದ್ದನು. ಇವನ ಕಾಲದಲ್ಲಿ ಕೆರೆಯ ಪದ್ಮರಸ ದೀಕ್ಷಾಬೋಧೆಯನ್ನೂ ನೇಮಿಚಂದ್ರ ನೇಮಿನಾಥಪುರಾಣವನ್ನೂ ಆಚಣ್ಣ ವರ್ಧಮಾನಪುರಾಣವನ್ನೂ ರಚಿಸಿದರು. ಮತ್ತೊಬ್ಬ ಪ್ರಸಿದ್ಧ ವಿದ್ವಾಂಸನೂ ಕವಿಯೂ ಆದ ರಾಜಾದಿತ್ಯ ಕ್ಷೇತ್ರಗಣಿತ, ವ್ಯವಹಾರಗಣಿತ ಮತ್ತು ಲೀಲಾವತಿ ಎಂಬ ಗ್ರಂಥಗಳನ್ನು ರಚಿಸಿದ. ಕನ್ನಡದಲ್ಲಿ ಮೊಟ್ಟಮೊದಲ ನೆಯ ಬ್ರಾಹ್ಮಣ ಕವಿಯೆಂದು ಪ್ರಖ್ಯಾತನಾಗಿರುವ ಜಗನ್ನಾಥವಿಜಯ ಕಾವ್ಯದ ಕರ್ತೃ ರುದ್ರಭಟ್ಟನ ಪೋಷಕ ವೀರಬಲ್ಲಾಳನ ಸಚಿವ ಚಂದ್ರಮೌಳಿ. ಕಬ್ಬಿಗರಕಾವ ಗ್ರಂಥದ ಕರ್ತೃವಾದ ಆಂಡಯ್ಯ ಬಲ್ಲಾಳನ ಸಮಕಾಲೀನ. ಅಲ್ಲದೆ ವೀರಬಲ್ಲಾಳನ ಸಚಿವರಾದ ಬೂಚಿರಾಜ ಮತ್ತು ಚಂದ್ರಮೌಳಿ ಇವರು ಕನ್ನಡ ಮತ್ತು ಸಂಸ್ಕೃತ ಭಾಷೆಗಳೆರಡರಲ್ಲೂ ಗದ್ಯಪದ್ಯಗಳನ್ನು ರಚಿಸಿದರೆಂದು ತಿಳಿದುಬರುತ್ತದೆ. ಅರಸೀಕೆರೆ ತಾಲ್ಲೂಕಿನ ಅನೇಕ ಶಾಸನಗಳನ್ನು ಉತ್ಕೃಷ್ಟ ಭಾಷೆಯಲ್ಲಿ ರಚಿಸಿರುವ ತ್ರಿವಿಕ್ರಮಪಂಡಿತ ಉದ್ದಾಮ ಕವಿಯಾಗಿದ್ದನೆಂದು ತಿಳಿಯುತ್ತದೆ. ಆದರೆ ಇವನು ರಚಿಸಿದ ಗ್ರಂಥಗಳು ಇದುವರೆಗೂ ದೊರೆತಿಲ್ಲ. ನರಸಿಂಹನ ಅಮಾತ್ಯ ಪೋಲಾಳ್ವದಂಡನಾಯಕ ಹರಿಚರಿತ ಎಂಬ ಗ್ರಂಥವನ್ನು ರಚಿಸಿದ. ಸೋಮನಾಥ ಮತ್ತು ಚಿದಾನಂದರು ಕಾಲದ ಇತರ ಮುಖ್ಯರು. ಜನ್ನನ ಸಹೋದರಿಯ ಗಂಡನಾದ ಮಲ್ಲಿಕಾರ್ಜುನ ಸೂಕ್ತಿಸುಧಾರ್ಣವ ಎಂಬ ಗ್ರಂಥವನ್ನು ರಚಿಸಿದ. ಮಲ್ಲಿಕಾರ್ಜುನನ ಸುತನಾದ ಕೇಶಿರಾಜ ಸುಪ್ರಸಿದ್ಧ ಶಬ್ದಮಣಿದರ್ಪಣದ ಕರ್ತೃ.

ಹೊಯ್ಸಳರ ಕಾಲದಲ್ಲಿ ಸಂಸ್ಕೃತ ಭಾಷೆಯಲ್ಲೂ ಅನೇಕ ಗ್ರಂಥಗಳು ರಚನೆಯಾದವು. ರಾಮಾನುಜಾಚಾರ್ಯ ಮತ್ತು ಅವರ ಅನುಯಾಯಿಗ ಳಿಂದ ವೈಷ್ಣವಪಂಥವನ್ನು ಪ್ರತಿಪಾದಿಸುವ ಗ್ರಂಥಗಳು ರಚಿಸಲ್ಪಟ್ಟವು. ತಲೆಮಾರುಗಳ ಪರ್ಯಂತ ಹೊಯ್ಸಳ ಆಸ್ಥಾನದಲ್ಲಿದ್ದು ವಿದ್ಯಾಚಕ್ರವರ್ತಿಗ ಳೆಂದು ಪ್ರಸಿದ್ಧರಾಗಿದ್ದ ಮನೆತನದ ಕವಿಗಳನೇಕರು ಸಂಸ್ಕೃತದಲ್ಲಿ ಗ್ರಂಥಗಳನ್ನು ರಚಿಸಿದರು. ಎರಡನೆಯ ವೀರಬಲ್ಲಾಳನ ಸಮಕಾಲೀನ ನಾಗಿದ್ದ ಒಂದನೆಯ ವಿದ್ಯಾಚಕ್ರವರ್ತಿ ಅನೇಕ ಶಾಸನಗಳನ್ನು ರಚಿಸಿದ್ದಾನೆ. ಒಂದನೆಯ ವಿದ್ಯಾಚಕ್ರವರ್ತಿಯ ಮಗನಾದ ವೈದ್ಯನಾಥ ಎರಡನೆಯ ನರಸಿಂಹನ ಆಸ್ಥಾನದಲ್ಲಿದ್ದ. ವೈದ್ಯನಾಥನ ಮಗನಾದ ಎರಡನೆಯ ವಿದ್ಯಾಚಕ್ರವರ್ತಿ ಎರಡನೆಯ ನರಸಿಂಹನ ಮತ್ತು ಸೋಮೇಶ್ವರನ ಸಮಕಾಲೀನನಾಗಿದ್ದು ಗದ್ಯಕರ್ಣಾಮೃತ ಎಂಬ ಗ್ರಂಥವನ್ನು ರಚಿಸಿದ. ಎರಡನೆಯ ವಿದ್ಯಾಚಕ್ರವರ್ತಿಯ ಮೊಮ್ಮಗನಾದ ಮೂರನೆಯ ವಿದ್ಯಾಚಕ್ರವರ್ತಿ ರುಕ್ಮಿಣಿ ಕಲ್ಯಾಣ ಎಂಬ ಕಾವ್ಯವನ್ನು ರಚಿಸಿದ.


ಲಲಿತಕಲೆ:-  ಸಾಹಿತ್ಯರಂಗದಲ್ಲಿ ಹೊಯ್ಸಳರ ಕಾಲ ವೈಭವಯುತವಾಗಿದ್ದಂತೆ ಚಿತ್ರಕಲೆ, ಸಂಗೀತ ಮತ್ತು ನೃತ್ಯಗಳಲ್ಲೂ ಅವರ ಕಾಲದ ಸಂಸ್ಕೃತಿ ಅಭಿವ್ಯಕ್ತವಾಗಿದೆ. ಲಲಿತಕಲೆಗೆ ಸಂಬಂಧಿಸಿದಂತೆ ಹೊಯ್ಸಳರ ಕಾಲದ ಹೆಚ್ಚು ಮಾಹಿತಿ ದೊರೆಯುವುದಿಲ್ಲ. ಶಿಲ್ಪಕಲೆ ಮತ್ತು ಶಾಸನಗಳಿಂದ ದೊರೆಯುವ ಆಧಾರಗಳು ಹೊಯ್ಸಳರ ಕಾಲದ ಲಲಿತಕಲೆಯ ಬೆಳವಣಿಗೆಯನ್ನು ರೂಪಿಸಿಕೊಳ್ಳಲು ಸಹಕಾರಿಯಾಗಿವೆ. ಹೊಯ್ಸಳರ ಕಾಲದಲ್ಲಿ ನಿರ್ಮಾಣವಾದ ಸುಂದರ ದೇವಮಂದಿರಗಳು ವಿವಿಧ ಭಂಗಿಯ ನೃತ್ಯ ಮತ್ತು ಸೂಕ್ಷ್ಮ ಕೆತ್ತನೆಯ ಶಿಲ್ಪಗಳಿಂದಲಂಕೃತವಾಗಿವೆ. ಅನೇಕ ಶಿಲ್ಪಾಕೃತಿಗಳು ವೀಣೆ, ಕೋಲು, ತಾಳ, ಮದ್ದಲೆ ಮತ್ತು ಇತರ ತಂತೀವಾದ್ಯಗಳ ಸಹಿತವಾಗಿ ಕೆತ್ತಲ್ಪಟ್ಟಿವೆ. ಹೊಯ್ಸಳರ ಕಾಲದಲ್ಲಿ ಜನರು ಸಂಗೀತ ಮತ್ತು ನೃತ್ಯದಲ್ಲಿ ಹೊಂದಿದ್ದ ಅಭಿರುಚಿಯನ್ನು ಗುರುತಿಸಿಕೊಳ್ಳಲು ಶಿಲ್ಪಕಲೆ ಹೆಚ್ಚುಮಟ್ಟಿಗೆ ಸಹಕಾರಿಯಾಗುತ್ತದೆ. ಹೊಯ್ಸಳರ ಕಾಲದ ಚಿತ್ರಕಲೆಗೆ ಸಂಬಂಧಿಸಿದಂತೆ ಹೆಚ್ಚು ಮಾಹಿತಿ ದೊರೆಯುವುದಿಲ್ಲ. ಆದರೆ ಬಣ್ಣದ ತಯಾರಿಕೆ ಮತ್ತು ಚಿತ್ರಲೇಪನದಲ್ಲಿ ನುರಿತ ಕಲಾವಿದರಿದ್ದರು. ಬಣ್ಣಬಣ್ಣದ ಬಟ್ಟೆಯ ತಯಾರಿಕೆಯನ್ನೆ ಕಸುಬನ್ನಾಗಿ ಹೊಂದಿದ್ದ ಜನರು ಸಲ್ಲಿಸಬೇಕಾಗಿದ್ದ ಬಣ್ಣಿಗೆ ಎಂಬ ತೆರಿಗೆಯನ್ನು ಕುರಿತು ಹಲವು ಶಾಸನಗಳಲ್ಲಿ ಮಾಹಿತಿ ದೊರೆಯುತ್ತದೆ. ಹಲವು ದೇವಾಲಯಗಳಲ್ಲಿ ಭಿತ್ತಿಚಿತ್ರಗಳಿದ್ದುವೆಂದು ತಿಳಿದುಬರುತ್ತದೆ. ಬೇಲೂರು ಮತ್ತು ಹಳೇಬೀಡಿನ ದೇವಾಲಯಗಳ ಶಿಲ್ಪಗಳು ಬಣ್ಣಗಳಿಂದ ಅಲಂಕೃತವಾಗಿದ್ದವೆಂದೂ ದೇವಾಲಯಗಳ ಬಣ್ಣದ ಮೆರುಗನ್ನು ಮಳೆ, ಗಾಳಿ, ಬಿಸಿಲುಗಳಿಂದ ರಕ್ಷಿಸಲು ಮೇಣದ ಬಟ್ಟೆಯನ್ನು ಉಪಯೋಗಿಸಲಾಗುತ್ತಿತ್ತೆಂದೂ ಹಳೇಬೀಡಿನ ಪುರಾತನ ಚರಿತೆಯಿಂದ ತಿಳಿದುಬರುತ್ತದೆ. ಅನೇಕ ಕವಿಗಳು ಚಿತ್ರಕಲೆಯಲ್ಲಿ ಪರಿಣತರಾದ ಕಲಾವಿದರ ಹೆಸರುಗಳನ್ನು ಸ್ಮರಿಸಿರುವರು. ರಾಜಧಾನಿ ಮತ್ತು ಇತರ ಮುಖ್ಯ ಪಟ್ಟಣಗಳಲ್ಲೂ ದೇವಾಲಯಗಳಲ್ಲೂ ನೃತ್ಯಕ್ಕಾಗಿಯೆ ಸಜ್ಜಾದ ಹಜಾರಗಳಿದ್ದು ಅವುಗಳ ಗೋಡೆಗಳು ಬಣ್ಣಗಳಿಂದ ಬಿಡಿಸಿದ್ದ ನೃತ್ಯಭಂಗಿಯ ಚಿತ್ರಕಲೆಗಳಿಂದ ಕೂಡಿದ್ದವೆಂದು ತಿಳಿದುಬರುತ್ತದೆ.

ಸಂಗೀತ ಮತ್ತು ನೃತ್ಯಗಳು ಹೆಚ್ಚು ಜನಪ್ರಿಯವಾಗಿದ್ದುವು. ಬೇಲೂರು, ಹಳೇಬೀಡು ಮತ್ತು ಸೋಮನಾಥಪುರ ದೇವಾಲಯದಲ್ಲಿ ಕೆತ್ತಿರುವ ನೃತ್ಯಕಲಾ ಶಿಲ್ಪಗಳು ರಸ, ರಾಗ ಮತ್ತು ವಿವಿಧ ಭಂಗಿಗಳಲ್ಲಿ ವಿರಾಜಿಸುತ್ತಿವೆ. ರಾಜಾಸ್ಥಾನಗಳು ಮತ್ತು ದೇವಾಲಯಗಳಲ್ಲಿ ಸರ್ವೇಸಾಮಾನ್ಯವಾಗಿ ನೃತ್ಯಕಲೆಯ ಏರ್ಪಾಟಿರುತ್ತಿತ್ತು. ಸಂಗೀತ ಮತ್ತು ನೃತ್ಯ ಧಾರ್ಮಿಕ ಜೀವನ ಮತ್ತು ಭಕ್ತಿಭಾವದ ಅಂಗವಾಗಿದ್ದುದರಿಂದ ಮುಖ್ಯ ದೇವಾಲಯಗಳಲ್ಲಿ ನರ್ತನಕ್ಕೆ ವ್ಯವಸ್ಥೆ ಮಾಡಿ ನರ್ತಕಿಯರ ಜೀವನಕ್ಕಾಗಿ ಭೂಮಿಯನ್ನು ಸರ್ವಮಾನ್ಯವಾಗಿ ನೀಡಲಾಗುತ್ತಿತ್ತು. ಮುಖ್ಯ ಪಟ್ಟಣಗಳಲ್ಲಿ ನೃತ್ಯಕ್ಕೇ ಮೀಸಲಾದ ದೊಡ್ಡಕಟ್ಟಡಗಳೂ ಇದ್ದವು. ಇಮ್ಮಡಿ ವೀರಬಲ್ಲಾಳನ ಕಾಲದಲ್ಲಿ ಪಟ್ಟಣಶೆಟ್ಟಿಯಾಗಿದ್ದ ನಾಗದೇವ ಎಂಬುವನು ಶ್ರವಣಬೆಳಗೊಳದಲ್ಲಿ ದೊಡ್ಡ ನೃತ್ಯಕಲಾಮಂದಿ ರವನ್ನು ಕಟ್ಟಿಸಿದನೆಂದು ಒಂದು ಶಾಸನದಿಂದ ತಿಳಿದುಬರುತ್ತದೆ.

ಹೊಯ್ಸಳ ರಾಜರು ಸಂಗೀತ ಮತ್ತು ನೃತ್ಯಕ್ಕೆ ವಿಶೇಷ ಪ್ರೋತ್ಸಾಹ ನೀಡಿದ್ದರು. ವಿಷ್ಣುವರ್ಧನನ ಪಟ್ಟದ ರಾಣಿಯಾದ ಶಾಂತಲೆ ಸಂಗೀತ ಮತ್ತು ನೃತ್ಯದಲ್ಲಿ ವಿಶೇಷ ಅಭಿರುಚಿ ಮತ್ತು ಪರಿಣತಿಯನ್ನು ಪಡೆದಿದ್ದಳೆಂದು ಅನೇಕ ಶಾಸನಗಳಿಂದ ತಿಳಿದುಬರುತ್ತದೆ. ಶಾಂತಲದೇವಿಯನ್ನು ನಾಟ್ಯ ಸರಸ್ವತಿ ಎಂದು ಸಂಬೋಧಿಸಲಾಗಿದೆ. ಇಮ್ಮಡಿ ವೀರಬಲ್ಲಾಳ ಸಂಗೀತ ಮತ್ತು ನೃತ್ಯದಲ್ಲಿ ವಿಶೇಷ ಅಭಿರುಚಿ ಹೊಂದಿದ್ದು ಕಲಾವಿದರಿಗೆ ಪ್ರೋತ್ಸಾಹ ನೀಡಿದ. ಅವನಿಗೆ ಸಂಗೀತಪ್ರಸಂಗಭಂಗಿಸಂಗಿತಚತುರಭರತ ಎಂಬ ಬಿರುದಿತ್ತು. ಬಲ್ಲಾಳನ ರಾಣಿಯರಲ್ಲೊಬ್ಬಳಾದ ಬಮ್ಮಲದೇವಿ ಸಂಗೀತ ಮತ್ತು ನೃತ್ಯದಲ್ಲಿ ವಿಶೇಷ ಪರಿಣತಿ ಪಡೆದಿದ್ದು ಗೀತವಾದ್ಯನೃತ್ಯಸೂತ್ರಧಾರೆ ಎಂಬ ಬಿರುದನ್ನು ಪಡೆದಿದ್ದಳು. ಬಲ್ಲಾಳನ ಸಚಿವರಾದ ಚಂದ್ರಮೌಳಿ, ಕೇಶಿರಾಜ, ಅಮಿತಯ್ಯ ಮೊದಲಾದವರು ಸಂಗೀತ ಮತ್ತು ನಾಟಕಗಳಿಗೆ ವಿಶೇಷ ಪ್ರೋತ್ಸಾಹ ನೀಡುತ್ತಿದ್ದರೆಂದು ಶಾಸನಗಳಿಂದ ತಿಳಿದುಬರುತ್ತದೆ. ಸಂಗೀತ ಮತ್ತು ನೃತ್ಯಗಳಂತೆ ನಾಟಕ ಕಲೆಯಲ್ಲಿಯೂ ಜನರಿಗೆ ಅಭಿರುಚಿಯಿ ತ್ತೆಂದು ತಿಳಿದುಬರುತ್ತದೆ. ಕನ್ನಡ ನಾಡಿನಲ್ಲಿ ಇಂದಿಗೂ ಜನಜನಿತವಾ ಗಿರುವ ಕರಿಬಂಟಕಾಳಗ ಬಯಲಾಟ ಹೊಯ್ಸಳ ರಾಜನೊಬ್ಬನಿಗೆ ಸಂಬಂಧಿಸಿದುದೆಂದು ಹುಲ್ಲೂರು ಶ್ರೀನಿವಾಸ ಜೋಯಿಸರು ಪ್ರತಿಪಾದಿಸಿದ್ದಾರೆ. ಪ್ರಹಸನ ಮತ್ತು ಪ್ರವಚನಗಳನ್ನು ಕುರಿತಾದ ಉಲ್ಲೇಖಗಳು ಅನೇಕ ಶಾಸನಗಳಲ್ಲಿ ದೊರೆತರೂ ಪೂರ್ಣ ವಿವರಗಳು ಲಭ್ಯವಾಗಿಲ್ಲ. ಹೊಯ್ಸಳರ ಕಾಲದಲ್ಲಿ ಸಂಗೀತ ನೃತ್ಯ ನಾಟಕಗಳು ಹೆಚ್ಚು ಜನಪ್ರಿಯವಾಗಿದ್ದು ರಾಜರ ಮತ್ತು ಸಾರ್ವಜನಿಕರ ಪ್ರೋತ್ಸಾಹ ದಿಂದ ಪುರೋಭಿವೃದ್ಧಿಗೊಂಡಿದ್ದವು.

((-))((-))((-))((-))((-)) 

Comments

Popular posts from this blog

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧

ಸಾಹಿತ್ಯಾಧಾರಗಳು - Literary Sources