ಶಿವಾಜಿ ಮತ್ತು ಮರಾಠರು: ಕೆಲವು ಟಿಪ್ಪಣಿಗಳು

[ಪ್ರಸ್ತುತ ಲೇಖನವನ್ನು ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ನಿರ್ವಹಿಸುತ್ತಿರುವ “ಕಣಜ” ಎಂಬ ಮಾಹಿತಿ ಕೋಶದ ಪುಟಗಳಿಂದ ಸಂಗ್ರಹಿಸಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಇಲ್ಲಿ ಒದಗಿಸಲಾಗಿದೆ.]

   ಮೊಗಲ್ ಸಾಮ್ರಾಜ್ಯದ ಕೊನೆಯ ಅರಸರು ಕೇವಲ ಹೆಸರಿಗೆ ಮಾತ್ರ ಚಕ್ರವರ್ತಿಗಳಾಗಿದ್ದರು. ೧೭ನೆಯ ಶತಮಾನದ ಮಧ್ಯಭಾಗದಲ್ಲಿ ಮರಾಠ ನಾಯಕರು ಬಲಶಾಲಿಗಳಾಗಿ ಹೊರಹೊಮ್ಮಿ ಸಾರ್ವಭೌಮತೆಗಾಗಿ ಬ್ರಿಟಿಷರಿಗೆ ಪ್ರಬಲ ಸ್ಪರ್ಧೆಯನ್ನು ಕೊಟ್ಟಿದ್ದುದು ಇತಿಹಾಸ.

   ಇಂದಿನ ಭಾರತ ಗಣರಾಜ್ಯದಲ್ಲಿ ಕಂಡುಬರುವ ಮುಂಬಯಿ, ಕೊಂಕಣ, ಖಾಂದೇಶ್, ಬೀರಾರ್, ಮಧ್ಯಪ್ರದೇಶದ ಕೆಲವು ಭಾಗ, ಹೈದರಾಬಾದಿನ / ರಷ್ಟು ಭಾಗಗಳು ಹಿಂದೆ ಮರಾಠವಾಡ್ ಎಂದು ಕರೆಯಲ್ಪಡುತ್ತಿತ್ತು. ಇಲ್ಲಿ ವಾಸಿಸುವ ಜನರು ಆಡುವ ಭಾಷೆ ಮರಾಠಿಯಾಗಿತ್ತು. ಮರಾಠ ಸಾಮ್ರಾಜ್ಯದ ಸ್ಥಾಪನೆಯ ಯಶಸ್ಸು (ಶ್ರೇಯಸ್ಸು) ಒಬ್ಬ ವ್ಯಕ್ತಿಗೆ ಸಲ್ಲತಕ್ಕದ್ದಲ್ಲ. ಬದಲಿಗೆ ಇಡೀ ಮರಾಠಾ ಸಮುದಾಯಕ್ಕೆ ಸಲ್ಲಬೇಕಾಗಿದೆ. ಇವರ ಒಗ್ಗಟ್ಟಿನ ಹಿಂದೆ ಅವರು ಆಡುವ ಭಾಷೆ, ಸಾಹಿತ್ಯ, ಮರಾಠ ಮಾತೃಭೂಮಿಯ ಕಲ್ಪನೆ ಪ್ರೇರಕವಾದ ಅಂಶವಾಗಿದ್ದವು. ಮರಾಠರು ತಮ್ಮಲ್ಲಿ ಮರಾಠ ರಾಷ್ಟ್ರೀಯತೆಯನ್ನು ಬೆಳೆಸಿಕೊಳ್ಳುವ ಸಂದರ್ಭದಲ್ಲಿ ಇಸ್ಲಾಂ ಸಮುದಾಯಕ್ಕೆ ಸೇರಿದ ಆಳುವ ಮನೆತನದವರು  ಭಾರತದ ಬಹುತೇಕ  ಪ್ರದೇಶಗಳಲ್ಲಿ ಆಡಳಿತ ನಡೆಸುತ್ತಿದ್ದರು. ಹಿನ್ನೆಲೆಯಲ್ಲಿ ಉದಯಗೊಂಡ ಮರಾಠ ಸಾಮ್ರಾಜ್ಯವು ಮೊಗಲರು ಮತ್ತು ಆದಿಲ್‌ ಶಾಹಿಗಳು ಹಾಗೂ ಮತ್ತಿತರ ಯೂರೋಪಿಯನ್‌ ಶಕ್ತಿಗಳ ವಿರುದ್ಧ ಹೋರಾಡಿ ಅವರಿಗೆ ಸರಿಸಮವಾಗಿ ತಲೆ ಎತ್ತಿ ನಿಂತು ಶಿವಾಜಿಯ ನಾಯಕತ್ವದಲ್ಲಿ ಒಂದು ಪ್ರಬಲ ಶಕ್ತಿಯಾಗಿ ಬೆಳೆಯಿತು. ಮೊಗಲರನ್ನು ಎದುರಿಸಿ ತದನಂತರ ತಮ್ಮ ಸಾಮ್ರಾಜ್ಯದ ಛಾಪನ್ನು ಉತ್ತರ ಭಾರತದವರೆಗೂ ವಿಸ್ತರಿಸಿ, ಪ್ರಬಲಶಕ್ತಿಯಾಗಿ ಮೆರೆದ ಮರಾಠನಾಡು ಭಾರತದ ಇತಿಹಾಸದಲ್ಲಿ ಒಂದು ಬಹುಮುಖ್ಯವಾದ ಅಧ್ಯಾಯವಾಗಿದೆ.

   ಮರಾಠ ಸಾಮ್ರಾಜ್ಯದ ಉದಯ ಕೇವಲ ಒಂದು ಆಕಸ್ಮಿಕ ಘಟನೆಯಾಗಿರದೆ ಭೌಗೋಳಿಕ ಅಂಶಗಳು, ಸಂತ ಜನರ ಬೋಧನೆ, ರಾಜಕೀಯ ಸಂಕಲ್ಪಗಳ ಮೂರ್ತರೂಪ ಎಂದರೆ ತಪ್ಪಾಗಲಾರದು. ಅನೇಕ ಪ್ರೇರಕ ಅಂಶಗಳು ಮರಾಠರು ರಾಜಕೀಯ ಶಕ್ತಿಯಾಗಿ ಹೊರಹೊಮ್ಮಿ ಬರಲು ಕಾರಣವಾಗಿದೆ. ಪ್ರಾಕೃತಿಕವಾಗಿ ಮರಾಠ ರಾಜ್ಯ ಉತ್ತರದಿಂದ ದಕ್ಷಿಣಕ್ಕೆ ಪಶ್ಚಿಮಘಟ್ಟಗಳಿಂದಲೂ, ಪೂರ್ವದಿಂದ ಪಶ್ಚಿಮದತ್ತ ವಿಂದ್ಯಾ ಮತ್ತು ಸಾತ್ಪುರ ಘಟ್ಟಗಳಿಂದ ಆವೃತವಾಗಿದೆ. ಇವೆರಡರ ಹೊರತಾಗಿ ಸಣ್ಣಪುಟ್ಟ ಪರ್ವತ ಶ್ರೇಣಿಗಳು ಹವಾಗುಣ ಮತ್ತು ಜನರ ಸ್ವಾಭಾವಿಕ ಜೀವನದ ಮೇಲೆ ತನ್ನ ಪರಿಣಾಮವನ್ನು ಬೀರಿದೆ ಮತ್ತು ಜನರನ್ನು ಕಷ್ಟ ಕಾರ್ಪಣ್ಯಗಳಿಗೆ ಒಡ್ಡಿ ಶ್ರಮಜೀವಿಗಳನ್ನಾಗಿ ಪರಿವರ್ತಿಸಿ ಯಾವ ಕಷ್ಟ ಬಂದರೂ ಧೈರ್ಯವಾಗಿ ಎದುರಿಸುವ ಎದೆಗಾರಿಕೆಯನ್ನು ಸೃಷ್ಟಿಸಿದೆ ಎಂಬ ಮಾತು ಇಂದಿಗೂ ಸಕಾಲಿಕವಾಗಿದ.ೆ

   ಮೈದಾನ ಮತ್ತು ಬೆಟ್ಟ-ಗುಡ್ಡಗಳಿಂದ ಆವೃತವಾಗಿರುವ ನೆಲಭಾಗವನ್ನು ಹೊಂದಿರುವ ಕಾರಣ ಮರಾಠರು ತಮ್ಮ ಕೋಟೆ ಕೊತ್ತಲಗಳನ್ನು ಬೆಟ್ಟ-ಗುಡ್ಡಗಳ ತುದಿಯಲ್ಲಿ ಕಟ್ಟಬೇಕಾದ ಪ್ರಮೇಯ ಬಂದರೂ ಅದು ಅವರಿಗೆ ವರದಾನವಾಗಿ ಪರಿಣಮಿಸಿದೆ. ಕೋಟೆಗಳಲ್ಲಿ ಅತ್ಯಂತ ಅಭೇದ್ಯವಾದ ಮತ್ತು ಉಚ್ಚಸ್ಥಾಯಿಯ ಕೋಟೆಯೆಂದರೆ ಪರ್ವತದುರ್ಗ. ಮರಾಠರು ಇಂತಹ ಪರ್ವತ ದುರ್ಗಗಳನ್ನು ಹೊಂದಿರುವ ಕಾರಣ ಮೊಗಲರ ದಾಳಿಯನ್ನು ಸಮರ್ಥ ರೀತಿಯಲ್ಲಿ ಎದುರಿಸಿ ಸದೆಬಡಿಯಲು ಸಾಧ್ಯವಾಯಿತು. ಬೆಟ್ಟ-ಗುಡ್ಡಗಳ ತಪ್ಪಲು ಪ್ರದೇಶ ಮರಾಠರಿಗೆ ಎಲ್ಲ ರೀತಿಯ ರಕ್ಷಣೆಯನ್ನು ಕೊಟ್ಟಿತು. ಕಾರಣದಿಂದಲೇ ಪರಕೀಯ ವೈರಿಗಳಿಗೆ ಮರಾಠರನ್ನು ಎದುರಿಸುವುದು ಕಷ್ಟಸಾಧ್ಯದ ಕೆಲಸವಾಗಿತ್ತು. ಒಂದು ವೇಳೆ ಪ್ರಯತ್ನಿಸಿದರೂ ನಿರರ್ಥಕವಾಗಿತ್ತು. ಕಾರಣ ಹೊರಗಿನವರ ಆಹಾರ ಸಾಮಗ್ರಿಗಳನ್ನು, ಯುದ್ದಕ್ಕೆ ಬೇಕಾದ ಸಲಕರಣೆಗಳನ್ನು ಸಕಾಲಕ್ಕೆ ತಲುಪಿಸುವುದು, ತಮ್ಮ  ಸೈನ್ಯವನ್ನು ತಮಗೆ ಗೊತ್ತಿರದ ಪ್ರದೇಶದಲ್ಲಿ ಮುನ್ನಡೆಸುವುದು ಅಸಾಧ್ಯವಾಗಿತ್ತು. ಪ್ರಸ್ಥಭೂಮಿಯಲ್ಲೇ ಹುಟ್ಟಿ ಬೆಳೆದ ಮರಾಠರು ಎಲ್ಲ ಪ್ರಾಕೃತಿಕ ಅಂಶಗಳಿಗೆ ಒಗ್ಗಿ ಹೋಗಿರುವ ಕಾರಣದಿಂದಾಗಿಗೆರಿಲ್ಲಾ ಯುದ್ದ ವಿಧಾನವನ್ನುಬಳಸಿ ವೈರಿಗಳನ್ನು ಸದೆಬಡಿಯಲು ಸಾಧ್ಯವಾಯಿತು. ಿದರಿಂದ ಭಾರತದ ಮಧ್ಯಭಾಗದಲ್ಲಿ ತಮ್ಮ ಸಾಮ್ರಾಜ್ಯವನ್ನು ಇತರ ಸಮಕಾಲೀನ ಶಕ್ತಿಗಳಿಗೆ ಸಮಾನವಾಗಿ ಹುಟ್ಟುಹಾಕಲು ಮರಾಠರಿಗೆ ಹೆಚ್ಚು ತೊಂದರೆಯಾಗಲಿಲ್ಲ. ಇನ್ನೂ ಮುಖ್ಯವಾಗಿ ತಿಳಿಯಬೇಕಾದ ಅಂಶವೆಂದರೆ ಮರಾಠರು ಯಾವ ರೀತಿಯಲ್ಲಿಯೂ ಆರ್ಥಿಕ ಅಸಮಾನತೆಯಿಂದ ಶೋಷಣೆಗೆ ಒಳಗಾದವರಲ್ಲ. ಎಲ್ಲ ಸಮಾಜದಲ್ಲಿ ಕಂಡುಬರುವ  ಶ್ರೀಮಂತ ಬಡತನ ಸಂಬಂಧ, ಬಡವರ ಶೋಷಣೆ ಇಲ್ಲಿ ಕಂಡುಬರುವುದಿಲ್ಲ. ಮರಾಠರು ಕರ್ಮ ಜೀವಿಗಳಾಗಿದ್ದುದರಿಂದ ಶ್ರೀಮಂತಿಕೆಯನ್ನು ಅನುಭವಿಸಿದವರಾಗಿರಲಿಲ್ಲ. ಇದರಿಂದಾಗಿ ಅವರು ತಮ್ಮಲ್ಲಿ ಆರ್ಥಿಕ ಸಮಾನತೆಯನ್ನು  ಕಂಡುಕೊಳ್ಳಲು ಸಾಧ್ಯವಾಯಿತು. ಸಮಾಜದಲ್ಲಿ ಶ್ರೀಮಂತ-ಬಡತನ ವರ್ಗೀಕರಣ ಕಂಡುಬರುವುದಿಲ್ಲ. ಎಲ್ಲ ಅಂಶಗಳಿಂದಾಗಿ ಮರಾಠರು ತಮ್ಮಲ್ಲಿ ಒಗ್ಗಟ್ಟು ಮತ್ತು ಆತ್ಮಾಭಿಮಾನವನ್ನು ಬೆಳೆಸಿಕೊಳ್ಳಲು ಸಾಧ್ಯವಾಯಿತು. ಅವರು ಪರಿಶ್ರಮಿಗಳಾಗಿದ್ದು ಮೋಜು-ವಿಲಾಸದ ಜೀವನವನ್ನು ತಮ್ಮದಾಗಿಸಿಕೊಂಡಿರಲಿಲ್ಲ.

   ಸಂತರುಗಳ ಧಾರ್ಮಿಕ ಬೋಧನೆಗಳ ಪರಿಣಾಮದಿಂದ ೧೫ನೆಯ ಮತ್ತು ೧೬ನೆಯ ಶತಮಾನದಲ್ಲಿ ಮರಾಠರು ತಮ್ಮಲ್ಲಿ ಸಾಮಾಜಿಕ ಮತ್ತು ಧಾರ್ಮಿಕ ಜಾಗೃತಿಯನ್ನು ಬೆಳೆಸಿಕೊಂಡರು. ಸಂತರುಗಳಾದ ಸಮರ್ಥ ರಾಮದಾಸ, ತುಕಾರಾಮ, ವಾಮನ ಪಂಡಿತ, ಏಕನಾಥರವರು ಕೇವಲ ಸಾಮಾಜಿಕ ಮತ್ತು ಧಾರ್ಮಿಕ ಜಾಗೃತಿಯನ್ನು ಮೂಡಿಸಿದರಲ್ಲದೆ ಸಾಮಾಜಿಕ ಸಮಾನತೆಯನ್ನೂ ಜನರಲ್ಲಿ ತುಂಬಿದರು. ಅವರು ತಮ್ಮ ಬೋಧನೆಗಳಲ್ಲಿ ಜಾತಿಪದ್ಧತಿ, ಬ್ರಾಹ್ಮಣರ  ಶ್ರೇಷ್ಠತೆ, ಸಾಮಾಜಿಕ ನ್ಯೂನ್ಯತೆಗಳ ವಿರುದ್ಧ ಜನರಲ್ಲಿ ತಿಳುವಳಿಕೆ ಮೂಡಿಸಿ , ಒಗ್ಗಟ್ಟು ಮತ್ತು ಸಾಮಾಜಿಕ ಸಾಮರಸ್ಯವನ್ನು ಬೆಳೆಸುವಲ್ಲಿ ಸಫಲರಾದರು.

   ಮಹಾರಾಷ್ಟ್ರ ಪ್ರಾಂತ್ಯವು ಅನೇಕ ಸಂಸ್ಕೃತಿಗಳನ್ನು ಪ್ರತಿಬಿಂಬಿಸುವ ಜನಸಂಖ್ಯೆಯನ್ನು ಹೊಂದಿರುವ ರಾಜ್ಯವಾಗಿತ್ತು. ಅಲ್ಲಿನ ಜನಸಂಖ್ಯೆಯನ್ನು ಗಣನೆಗೆ ತೆಗೆದುಕೊಂಡಾಗ ಆರ್ಯ ಮೂಲದವರು ಹಾಗು ಬುಡಕಟ್ಟು ಜನಾಂಗಕ್ಕೆ ಸೇರಿದ ಬಿಲ್, ಕೋಲಿ ಮತ್ತು ರಾನೋಜಿಗಳು ಸರಿಸಮವಾಗಿ ಪ್ರತಿನಿಧಿಸಿಕೊಂಡಿದ್ದು ಕಂಡುಬರುತ್ತದೆ. ಪ್ರಾಯಶಃ ಕಾರಣದಿಂದಾಗಿಯೇ ಮಹಾರಾಷ್ಟ್ರಕ್ಕೆ ಸೇರಿದ ಜನರು ತಮ್ಮಲ್ಲಿ ಐಕ್ಯಮತ್ಯವನ್ನು ಮತ್ತು ಸಾಮಾಜಿಕ ಸಮತೂಕ ಸ್ಥಿತಿಯನ್ನು ಕಾಪಾಡಿಕೊಂಡು ಬರಲು ಸಾಧ್ಯವಾಯಿತು. ಪ್ರಾಂತ್ಯಗಳು ಪಂಚಾಯತ್ ರಾಜ್ಯವ್ಯವಸ್ಥೆ ಮತ್ತು ಪ್ರಾಂತೀಯ ಸ್ವಾಯತ್ತೆ ಇರುವ ಸರಕಾರಗಳನ್ನು ಹೊಂದಿತ್ತು. ಯಾವುದೇ ಮಧ್ಯವರ್ತಿಗಳನ್ನು ಹೊಂದಿರದ, ನೇರವಾಗಿ ಸರಕಾರಕ್ಕೆ ತೆರಿಗೆಯನ್ನು ಸಂದಾಯ ಮಾಡುವ, ರೈತವಾರಿ ಮಾದರಿಯನ್ನು ಹೋಲುವ ಕಂದಾಯ ವ್ಯವಸ್ಥೆ ಜಾರಿಯಲ್ಲಿತ್ತು.

   ಸುಮಾರು ೧೫ ಮತ್ತು ೧೭ನೆಯ ಶತಮಾನದ ದಕ್ಷಿಣ ಭಾರತದಲ್ಲಿ ಹಿಂದುಗಳು ಮತ್ತು ಮುಸ್ಲಿಮರು ಸರಿಸಮಾನವಾಗಿ ಅಧಿಕಾರ ಸೂತ್ರವನ್ನು ಹೊಂದಿದ್ದರು. ರೀತಿಯಾಗಿ ಅಧಿಕಾರವು ಸರಿಸಮನಾಗಿ ಹಂಚಿಕೊಂಡಿದ್ದ ಕಾರಣದಿಂದಾಗಿ ಮರಾಠರು ತಮ್ಮ ಅಧಿಕಾರವನ್ನು ಸ್ಥಾಪನೆ ಮಾಡಲು ಸಾಧ್ಯವಾಯಿತು. ಗ್ರಾಂಡ್ ಢಪ್ ಹೇಳುವಂತೆಶಿವಾಜಿಯು ಅಧಿಕಾರಕ್ಕೆ ಬರುವ ಮೊದಲೇ ಮರಾಠ ಕುಟುಂಬಗಳು ಅತ್ಯಂತ ಪ್ರಭಾವಶಾಲಿಯಾಗಿದ್ದು ದಕ್ಷಿಣ ಭಾರತದ ರಾಜಕೀಯದಲ್ಲಿ ತನ್ನ ಛಾಪನ್ನು ಬೀರಿದ್ದವುಎಂದು ತಿಳಿದು ಬರುತ್ತದೆ. ಶಿವಾಜಿಯ ತಂದೆಯಾದ ಷಹಾಜಿ ಬೋನ್ಸ್ಲೆ   ಕೂಡಾ ಮರಾಠ ಕುಟುಂಬಗಳಲ್ಲಿ ಒಂದಾದ ಬೋನ್ಸ್ಲೆಮನೆತನಕ್ಕೆ ಸೇರಿದ ವ್ಯಕ್ತಿಯಾಗಿದ್ದು, ಅಹಮದ್ ನಗರದಲ್ಲಿ ತನ್ನ ಸೇವೆಯನ್ನು ಆರಂಭಿಸಿ ನಂತರ ಬಿಜಾಪುರ ಸುಲ್ತಾನನ ಸೇವೆಗೆ ಸೇರಿ ಅಲ್ಲಿ ಕೂಡಾ ನವಾಬನ ವಿಶ್ವಾಸಕ್ಕೆ ಪಾತ್ರನಾಗಿದ್ದ. ದೆಹಲಿಯ ಚಕ್ರವರ್ತಿಯಾದ ಔರಂಗಜೇಬನ ಅಸಾಮರ್ಥ್ಯದಿಂದಾಗಿ ದಖ್ಖನಿನ ಆಡಳಿತ ಅವನ ಕೈ ತಪ್ಪಿಹೋಯಿತು. ಅದನ್ನು ಮರುಸ್ಥಾಪಿಸಲು ಪ್ರಯತ್ನಿಸಿದಾಗ ರೋಷಗೊಂಡ ಮರಾಠರು ತಮ್ಮ ಉಳಿವಿಗಾಗಿ ಒಟ್ಟು ಸೇರಿ ಮೊಗಲರ ವಿರುದ್ಧ ಸಮರವನ್ನು ಹೂಡಿದರು. ಬಹಮನಿ ಸುಲ್ತಾನರು ಮತ್ತು ಅವರ ನಂತರ ಅಹಮ್ಮದ್ ನಗರ ಮತ್ತು ಬಿಜಾಪುರದ ಸುಲ್ತಾನರುಗಳು ಮರಾಠ ಪ್ರಾಂತ್ಯದಲ್ಲಿ ಆಡಳಿತ ಮಾಡಿದ್ದರೆ ಅದು ಕೇವಲ ಪಶ್ಚಿಮ ಮಹಾರಾಷ್ಟ್ರ ಮತ್ತು ಕೊಂಕಣ ಪ್ರಾಂತ್ಯಕ್ಕೆ ಮಾತ್ರ ಸೀಮಿತವಾಗಿತ್ತು.

   ಮರಾಠರು ದಖ್ಖನ್ನಿನ ಸುಲ್ತಾನರ ಕೈಕೆಳಗೆ ಉನ್ನತ ಸ್ಥಾನಮಾನಗಳನ್ನು ಅಲಂಕರಿಸಿದ್ದರು. ಅನೇಕರು ಸೈನಿಕರಾಗಿ, ಇನ್ನು ಕೆಲವರು ಜಾಗೀರುದಾರರಾಗಿ ಮತ್ತು ಹಲವರು ಆಡಳಿತದ ಇತರ ವಿಭಾಗಗಳಲ್ಲಿ ಪ್ರಮುಖ ಸ್ಥಾನ-ಮಾನಗಳನ್ನು ಹೊಂದಿದ್ದು ಆಡಳಿತ ಮತ್ತು ಸೈನಿಕ ಕಾರ್ಯಾಚರಣೆ, ಯುದ್ಧ ತಂತ್ರಗಳನ್ನು ಅರಿಯಲು ಬಹಳ ಸಹಕಾರಿಯಾಗಿತ್ತು. ಇಂಥಹ ಅವಕಾಶಗಳನ್ನು ಸದುಪಯೋಗ ಮಾಡಿಕೊಂಡ ಕಾರಣದಿಂದಾಗಿ  ಉನ್ನತ ಸ್ಥಾನಮಾನಗಳೊಂದಿಗೆ ವಿಪುಲ ಸಂಪತ್ತನ್ನು ಗಳಿಸಲು ಸಾಧ್ಯವಾಯಿತು. ವಿದೇಶಿಯರ ದಾಳಿಯ ಭಯ ಜಾಸ್ತಿಯಾದಾಗ ದಖ್ಖನಿಯ ಮುಸ್ಲಿಮ್ ಸುಲ್ತಾನರು ತಮ್ಮ ರಕ್ಷಣೆಗೋಸ್ಕರ ಮರಾಠರ ಮೇಲೆ ಅವಲಂಬಿಸಬೇಕಾಯಿತು. ೧೭ನೆಯ ಶತಮಾನದಲ್ಲಿ ದಖ್ಖನಿನ ಪ್ರಾಂತ್ಯಗಳಲ್ಲಿ ಮರಾಠರು ಮಿಲಿಟರಿ ಮತ್ತು ಪೌರಾಡಳಿತದಲ್ಲಿ ಪ್ರಭಾವಶಾಲಿಗಳಾಗಿದ್ದ  ಕಾರಣ ಕಂದಾಯ ಆಡಳಿತವನ್ನು ಕೂಡಾ ಅವರಿಗೇ ವಹಿಸುವಂತಾಯಿತು. ಕಂದಾಯ ವ್ಯವಸ್ಥೆಯನ್ನು ತಮ್ಮ ಕೈಗೆ ತೆಗೆದುಕೊಂಡ ಮರಾಠರು ಪರ್ಶಿಯನ್ ಮತ್ತು ಉರ್ದು ಭಾಷೆಯ ಬದಲಾಗಿ ಪ್ರಾಂತೀಯ  ಭಾಷೆಗಳಲ್ಲಿ ದಾಖಲೆ ಪತ್ರಗಳನ್ನು ಸಂರಕ್ಷಣೆ ಮಾಡುವುದರ ಮೂಲಕ ವಿದೇಶಿ ಪ್ರಭಾವ ಕಡಿಮೆಯಾಗಿ ಮರಾಠರ ದೇಶಿಯ ಪ್ರಭಾವ ದ್ವಿಗುಣಗೊಂಡಿತು.

   ಮಹಾದೇವ ಗೋವಿಂದ ರಾನಡೆ ಹೇಳುವ ಹಾಗೆಧರ್ಮ ಮತ್ತು ರಾಜಕೀಯದ ಪ್ರಭಾವ ಬಹಳವಾಗಿ ಬೇರೂರಿತ್ತು. ಇದರಿಂದಾಗಿ ಶಿವಾಜಿಯ ಧರ್ಮಗುರು ರಾಮದಾಸರು ಆತನ ಮಗನಾದ ಸಾಂಬಾಜಿಯಲ್ಲಿ ಮಹಾರಾಷ್ಟ್ರ ಧರ್ಮವನ್ನು ಪ್ರಚಾರ ಮಾಡುವಂತೆ ಪ್ರೇರೆಪಿಸಿದ್ದನ್ನು ನಾವು ನೆನಪಿಸಿಕೊಳ್ಳಬೇಕು.” ರಾಮದಾಸರು ಹೇಳುವಮಹಾರಾಷ್ಟ್ರ ಧರ್ಮಕೇವಲ ಸಂಕುಚಿತ ಅರ್ಥವುಳ್ಳ ಧರ್ಮವಾಗಿರದೆ ಜಾತಿ-ಮತ-ಪಂಥಗಳಿಂದ ಹೊರತುಪಡಿಸಿದ, ಹೆಂಗಸರ ಸ್ಥಾನಮಾನದ ಪರಿಕಲ್ಪನೆಯನ್ನು  ಕಂಡ, ಭಕ್ತಿಮಾರ್ಗವನ್ನು ಅನುಸರಿಸುವ, ಬಹುದೇವರ ಆರಾಧನೆಯನ್ನು ಖಂಡಿಸುವ ಧರ್ಮವಾಗಿದೆ. ಪ್ರಾಯಶಃ ಎಲ್ಲ ಭಕ್ತಿಪಂಥದ ನಾಯಕರುಗಳು ಇದನ್ನು ಪ್ರಚಾರ ಮಾಡಿದ್ದಾರೆ. ಮಹಾರಾಷ್ಟ್ರ ಧರ್ಮವು ಮಾದರಿ ರಾಜ್ಯದ ಕಲ್ಪನೆ, ಅಧರ್ಮದ ವಿರುದ್ಧ ಹೋರಾಡುವ ಮತ್ತು ಧರ್ಮವನ್ನು ಕಾಪಾಡುವ ಪ್ರಜ್ಞೆಯನ್ನು ಜನರಲ್ಲಿ  ಮೂಡಿಸಿದ್ದಲ್ಲದೆ ಹೊಸ ರಾಷ್ಟ್ರೀಯ ಪ್ರೇಮವನ್ನು ಮರಾಠರಲ್ಲಿ ಮೂಡಿಸಿತು. ಇದು ದಖ್ಖನಿನ ಸುಲ್ತಾನರು ಮೊಗಲರ ವಿರುದ್ಧ ಹೋರಾಡುವ ಯುದ್ಧಕ್ಕೆ ಮರಾಠರು ಕೊಡುವ ರಾಜಕೀಯ ಮತ್ತು ಆಡಳಿತಾತ್ಮಕ ಬೆಂಬಲದ ಧಾರ್ಮಿಕ ಹಿನ್ನೆಲೆಯಾಗಿದೆ. ಇದು ಮರಾಠ ಜನರಿಗೆ ಮೊಗಲರ ವಿರುದ್ಧ ಹೂಡುವ ಸಮರ, ಜಾತಿಪದ್ಧತಿಯ ವಿರೋಧ ಮತ್ತು ಬ್ರಾಹ್ಮಣ ಪ್ರಭಾವವನ್ನು ತಡೆಗಟ್ಟುವ ಸಾಮಾಜಿಕ ಅಡಿಪಾಯವನ್ನು ಹಾಕಿ ಕೊಟ್ಟಿತು.

   ಸುಮಾರು ೧೭ನೆಯ ಶತಮಾನದಲ್ಲಿ ಮೊಗಲ್ ಸಾಮ್ರಾಜ್ಯದ ಪ್ರಭಾವದಿಂದಾಗಿ ದಖ್ಖನ್ನಿನ ರಾಜ್ಯಗಳಾದ ಖಾಂದೇಶ, ಅಹಮ್ಮದ್ ನಗರಗಳು ತಮ್ಮ ಅಸ್ತಿತ್ವವನ್ನು ಕಳೆದುಕೊಂಡವು. ಮೊಗಲರು ದಖ್ಖನಿನಲ್ಲಿ ಹೊಸದಾಗಿ ಗಳಿಸಿದ ಪ್ರದೇಶಗಳಲ್ಲಿ ಆಡಳಿತವನ್ನು ನೋಡಿಕೊಳ್ಳಲು ತಮ್ಮದೇ ಅಧಿಕಾರಿಗಳನ್ನು ನೇಮಕ ಮಾಡಿದರು. ಇಲ್ಲಿಯವರೆಗೆ ದಖ್ಖನ್ನಿನ ಸುಲ್ತಾನರುಗಳಡಿಯಲ್ಲಿ ವಿಶೇಷ ಸ್ಥಾನಮಾನಗಳನ್ನು ಅಲಂಕರಿಸಿದ್ದ ಮರಾಠರಲ್ಲಿ ಇದು ಆತಂಕವನ್ನು ತುಂಬುವ ವಿಷಯವಾಗಿತ್ತು. ಉತ್ತರ ಭಾರತದಲ್ಲಿ ಪ್ರಬಲರಾಗಿದ್ದ ಮೊಗಲರು ಆಡಳಿತಾರೂಢರಾದಲ್ಲಿ ತಮ್ಮ ಸ್ಥಾನಮಾನಗಳು ಕೈ ತಪ್ಪಬಹುದೆಂದು ಮರಾಠ ನಾಯಕರು ತಿಳಿದರು. ಇದರಿಂದಾಗಿ ಅವರಿಗೆ ಸ್ವತಂತ್ರ ಮರಾಠ ರಾಜ್ಯವನ್ನು ಸ್ಥಾಪಿಸುವ ನಿರ್ಧಾರವನ್ನು ತೆಗೆದುಕೊಳ್ಳುವ ಅನಿವಾರ್ಯತೆ ಉಂಟಾಯಿತು. ಹರಿದು ಹಂಚಿ ಹೋದ ಮರಾಠ ನಾಯಕರನ್ನು ಒಟ್ಟು ಸೇರಿಸಿ ಒಂದೇ ಧ್ಯೇಯಕ್ಕಾಗಿ ಹೋರಾಡುವ ಜವಾಬ್ದಾರಿಯನ್ನು ಹೊತ್ತು ಯಶಸ್ವಿಯಾದ ಮರಾಠ ನಾಯಕರಲ್ಲಿ ಛತ್ರಪತಿ ಶಿವಾಜಿ ಮಹಾರಾಜ ಪ್ರಮುಖನಾಗಿದ್ದಾನೆ.

   ಶಿವಾಜಿಯ ರಾಜಕೀಯ ಯಾತ್ರೆ ೧೬೪೬ರಲ್ಲಿ ಬಿಜಾಪುರದ ಸುಲ್ತಾನರ ಅಧೀನದಲ್ಲಿದ್ದ ತೋರಣಕೋಟೆಯನ್ನು ವಶಪಡಿಸಿಕೊಳ್ಳುವುದರ ಮೂಲಕ ಪ್ರಾರಂಭವಾಯಿತು. ನಂತರ ಚಾಕನ್ಕೋಟೆಯನ್ನು ಅವರಿಂದ ಕಸಿದುಕೊಂಡನು. ಕೊಂಡಾನಕೋಟೆಯು ಕೂಡ ಶಿವಾಜಿಯ ಕೈವಶವಾಯಿತು. ೧೬೪೮ರಲ್ಲಿ ಶಿವಾಜಿಯು ಮೊಗಲ್ ರಾಜಕುಮಾರ ಮತ್ತು ದಖ್ಖನಿನ ರಾಜ್ಯಪಾಲನಾದ ಮುರಾದನೊಂದಿಗೆ ಸಂಧಾನ ನಡೆಸಿ, ತನ್ನ ತಂದೆಯಾದ ಷಹಾಜಿ ಬೋನ್ಸ್ಲೆಯನ್ನು ಬಿಜಾಪುರದ ಸುಲ್ತಾನನ ವಶದಿಂದ ಬಿಡಿಸಲು, ಚಕ್ರವರ್ತಿ ಷಹಜಾನನ ಮಧ್ಯಸ್ಥಿಕೆಯನ್ನು ಅಪೇಕ್ಷಿಸಿದನಾದರೂ ಷಹಜಾನನು ಅದಕ್ಕೆ ಸಮ್ಮತಿಸಲಿಲ್ಲ. ಇದರಿಂದಾಗಿ ತನ್ನ ತಂದೆಯ ಬಿಡುಗಡೆಗೋಸ್ಕರ ಕೆಲವು ವರ್ಷ ತನ್ನ ಮಿಲಿಟರಿ ಕಾರ್ಯಚರಣೆಯನ್ನು ನಿಲ್ಲಿಸಬೇಕಾಗಿ ಬಂದಿತು. ೧೬೫೦ರಲ್ಲಿ ಜಾವಳಿ ಪ್ರಾಂತ್ಯವನ್ನು ಚಂದ್ರಕಾಂತ ಮೋರೆಯನ್ನು ಕೊಲ್ಲಿಸಿ ವಶಪಡಿಸಿಕೊಂಡನು. ಚಂದ್ರಕಾಂತ ಮೋರೆಯು ಪ್ರಾಂತ್ಯವನ್ನು ಬಿಜಾಪುರದ ಸುಲ್ತಾನನಿಂದ ಪಡೆದುಕೊಂಡಿದ್ದನು. ರಾಜಕೀಯ ಮತ್ತು ಮಿಲಿಟರಿ ಕಾರಣಗಳಿಗೋಸ್ಕರ ಮೋರೆಯ ಅಧಿಕಾರವನ್ನು ಅಂತ್ಯಗೊಳಿಸುವ ದೃಷ್ಟಿಯಿಂದ ಶಿವಾಜಿಯು ರೀತಿಯಾಗಿ ವರ್ತಿಸಿದನು. ನಂತರದ ಕೆಲವು ತಿಂಗಳುಗಳಲ್ಲಿ ಪ್ರತಾಪಘಡ ಕೋಟೆಯನ್ನು ಕಟ್ಟಿಸಿ ರಾಯಘಡದ ಪರ್ವತ ದುರ್ಗವನ್ನು ಕೂಡಾ ತನ್ನ ವಶಕ್ಕೆ ತೆಗೆದುಕೊಂಡನು.

   ೧೬೫೬ರಲ್ಲಿ ಮಹಮ್ಮದ್ ಆದಿಲ್ಷಾನ ಮರಣಾನಂತರ ಶಿವಾಜಿಯು ೧೬೫೭ರಲ್ಲಿ ಮೊಗಲರೊಂದಿಗೆ ಸಂಧಿಯನ್ನು ಮಾಡಿಕೊಂಡು ಬಿಜಾಪುರ-ಮರಾಠ ನಡುವಿನ ಸಂಬಂಧಕ್ಕೆ ಹೊಸ ತಿರುವನ್ನು ಕೊಟ್ಟನು. ನಂತರ ಶಿವಾಜಿಯು ಪಶ್ಚಿಮಘಟ್ಟವನ್ನು ದಾಟಿ ಕೊಂಕಣ ಪ್ರದೇಶವನ್ನು ಕೂಡಾ ಆಕ್ರಮಿಸಿದನು. ಅನಂತರ ತನ್ನ ಗಮನವನ್ನು  ಬಿಜಾಪುರದ ಪ್ರಮುಖ ಗಣ್ಯನಾದ ಮುಲ್ಲಾ ಅಹಮ್ಮದನು ಹೊಂದಿರುವ ಶ್ರೀಮಂತ ನಗರವಾದ ಕಲ್ಯಾಣ ಮತ್ತು ಭೀವಂಡಿಯನ್ನು ವಶಕ್ಕೆ ತೆಗೆದುಕೊಂಡು ಅದನ್ನು ನೌಕಾ ದಳ ಮತ್ತು ಬಂದರು ಪಟ್ಟಣವಾಗಿ ಪರಿವರ್ತಿಸಿದನು. ಜಿಂಜೀರ ಪ್ರಾಂತ್ಯದ ಅಭಿಸೀನಿಯರು ಅನುಭವಿಸುತ್ತಿದ್ದ ಕೊಲಾಬ ಪ್ರಾಂತ್ಯವನ್ನು ಕೂಡಾ ತನ್ನ ವಶಕ್ಕೆ ತೆಗೆದುಕೊಂಡನು. ನಂತರ ಪೋರ್ಚುಗೀಸ್ ಪ್ರಾಂತ್ಯವಾದ ದಾಮನ್ನನ್ನು ಲೂಟಿ ಮಾಡಿ ಅಸೈ ಬಂದರನ್ನು ಕೂಡಾ ವಶಪಡಿಸಿಕೊಂಡನು. ಪೋರ್ಚುಗೀಸರು ಶಿವಾಜಿಯೊಂದಿಗೆ ಸಂಧಿಯನ್ನು ಮಾಡಿಕೊಂಡು ವರ್ಷಂಪ್ರತಿ ಕಪ್ಪ ಕಾಣಿಕೆಯನ್ನು ಕೊಡುವ ಭರವಸೆಯನ್ನು ಕೊಟ್ಟರು. ರೀತಿಯಾಗಿ ೧೬೫೯ರ ಹೊತ್ತಿಗೆ ಶಿವಾಜಿಯು ಅತ್ಯಂತ ಪ್ರಬಲವಾದ ನಾಯಕನಾಗಿ ಹೊರಹೊಮ್ಮಿ ಬಿಜಾಪುರದ ಸುಲ್ತಾನನಾದ ಆಲಿ ಆದಿಲ್ ಷಾ II ನಿಗೆ (೧೬೫೭-೮೦) ತಲೆನೋವಾದನು.

   ಮೊಗಲರಿಂದ ತಾತ್ಕಾಲಿಕವಾಗಿ ಸ್ವಾತಂತ್ರವನ್ನು ಪಡೆದ ಆಲಿ ಆದಿಲ್ ಷಾ II ಶಿವಾಜಿಯನ್ನು ಕೊಲ್ಲಲು ಅಫಝಲ್ಖಾನನನ್ನು ನಿಯೋಜಿಸಿದನು. ಆದರೆ ೧೦,೦೦೦ ಸಮರ ಯೋಧರನ್ನು ಹೊಂದಿದ್ದ ಅಫಝಲ್ಖಾನನು ಶಿವಾಜಿಯ ಉತ್ಕೃಷ್ಟ ಸೈನ್ಯದ ವಿರುದ್ಧ ಹೋರಾಡುವ ಎದೆಗಾರಿಕೆಯನ್ನು ಹೊಂದಿರಲಿಲ್ಲ. ಅದಲ್ಲದೆ ಬಿಜಾಪುರದ ಕುಲೀನರು ಗುಡ್ಡಗಾಡು ಪ್ರದೇಶದಲ್ಲಿ ಹೋರಾಡುವ ತರಬೇತಿಯನ್ನು ಹೊಂದಿರದ ಕಾರಣದಿಂದಾಗಿ ನೇರ ಯುದ್ಧಕ್ಕೆ ಹಿಂದೇಟು ಹಾಕುತ್ತಿದ್ದರು. ಆದಿಲ್‌ ಶಾಹಿಗಳು ಮೊಗಲರೊಡನೆ ಹೋರಾಡಿ ತನ್ನ ಎಲ್ಲ ಬಂಡವಾಳವನ್ನು ಕಳೆದುಕೊಂಡಿದ್ದುದೂ ರೀತಿಯ ಹಿಂಜರಿಕೆಗೆ ಇನ್ನೊಂದು ಕಾರಣವಾಗಿತ್ತು. ಎಲ್ಲ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಮಿತ್ರತ್ವದ ಸೋಗನ್ನು ಹೂಡಿ ಶಿವಾಜಿಯನ್ನು ಮೋಸದಿಂದ ಕೊಲ್ಲುವ ತಂತ್ರವನ್ನು ಅಫಝಲ್ ಖಾನನು ಹೂಡಿದನು. ತಂತ್ರದ ಮೇರೆಗೆ ಪತ್ರದ ಮುಖೇನ ಶಿವಾಜಿಯನ್ನು ಕ್ಷಮಿಸುವ ಮತ್ತು ಮಿತ್ರತ್ವವನ್ನು ಬೆಳೆಸುವ ಅಪೇಕ್ಷೆಯನ್ನು ವ್ಯಕ್ತಪಡಿಸಿದನು. ಗುಪ್ತಚಾರರ ಮೂಲಕ ಅಫಝಲ್ ಖಾನನ ಹಿಂದಿನ ಚರಿತ್ರೆಯನ್ನು ತಿಳಿದ ಶಿವಾಜಿ, ತನ್ನ ಭದ್ರತೆಗೋಸ್ಕರ ಎಲ್ಲ ಮುನ್ನೆಚ್ಚರಿಕೆಯನ್ನು ತೆಗೆದುಕೊಂಡು ಅಫಝಲ್ಖಾನನ ಕುತಂತ್ರ ಫಲಕಾರಿಯಾಗದಂತೆ ನೋಡಿಕೊಂಡು ವ್ಯಾಘ್ರನಖದ ಮೂಲಕ ಅವನ ಹೊಟ್ಟೆಯನ್ನು ಸೀಳಿ ಕೊಂದನು. ಆನಂತರ ಶಿವಾಜಿ ಕೊಲ್ಲಾಪುರ, ಪನ್ಹಾಲ್ ಕೋಟೆ, ರತ್ನಗಿರಿ ಮತ್ತು ರಜಾಪೂರ ಪ್ರಾಂತ್ಯಗಳನ್ನು ಕೂಡಾ ತನ್ನ ಅಧೀನಕ್ಕೆ ತೆಗೆದುಕೊಂಡನು.

      ಅತ್ತ ೧೬೫೮-೧೬೫೯ರಲ್ಲಿ ದೆಹಲಿಯಲ್ಲಿ ಷಹಜಾನನ ಪದಚ್ಯುತಿಯ ನಂತರ ಸಿಂಹಾಸನಕ್ಕಾಗಿ ಔರಂಗಜೇಬ ಮತ್ತು ಅವರ ಸಹೋದರರಲ್ಲಿ ಜಗಳ ಪ್ರಾರಂಭವಾಗಿತ್ತು. ಹಾಗಾಗಿ ಔರಂಗಜೇಬನು ತನ್ನ ಗಮನವನ್ನು ದೆಹಲಿಗೆ ಕೇಂದ್ರಿಕರಿಸಿದನು. ಸಂದರ್ಭದಲ್ಲಿ ತನ್ನ ಸೋದರ ಮಾವನಾದ ಶಹಿಸ್ತಾಖಾನನನ್ನು ದಖ್ಖನಿನ ರಾಜ್ಯಪಾಲನಾಗಿ ನೇಮಿಸಿ ಶಿವಾಜಿಯನ್ನು ಸೋಲಿಸುವ ಪ್ರಯತ್ನವನ್ನು ಮುಂದುವರಿಸಿದನು. ಶಹಿಸ್ತಾಖಾನನು ಶಿವಾಜಿಯ ವಿರುದ್ಧ ಹೂಡುವ ಯುದ್ಧದಲ್ಲಿ ಬಿಜಾಪುರದ ಸಹಾಯವನ್ನು ಪಡೆಯುವುದರಲ್ಲಿ ಸಫಲನಾದನು. ೧೬೬೦ರ ಹೊತ್ತಿಗೆ ಬಿಜಾಪುರದ ಸಹಾಯದಿಂದ ಶಹಿಸ್ತಾಖಾನನು ಪೂನಾ ಪ್ರಾಂತ್ಯವನ್ನು ಆಕ್ರಮಿಸಿ ಚಾಕನ್ಕೋಟೆಯನ್ನು ಕೂಡಾ ವಶಪಡಿಸಿಕೊಂಡನು. ಪನ್ಹಾಲ್ ಕೂಡಾ ಶಿವಾಜಿಯ ಕೈ ತಪ್ಪಿ ಹೋಯಿತು. ೧೬೬೧-೧೬೬೩ರ ನಡುವೆ ಶಿವಾಜಿ ರತ್ನಗಿರಿ ಪ್ರಾಂತ್ಯವನ್ನು ವಶಪಡಿಸಿಕೊಂಡರೂ ಉತ್ತರ ಕೊಂಕಣ ಪ್ರಾಂತ್ಯದಲ್ಲಿ ಮೊಗಲರು ತಮ್ಮ ಕಪಿಮುಷ್ಟಿಯನ್ನು ಹೊಂದಿದ್ದರು. ೧೬೬೩ರಲ್ಲಿ ಶಿವಾಜಿಯು ಪೂನಾದಲ್ಲಿದ್ದ ತನ್ನ ಬಾಲ್ಯದ ಅರಮನೆಯಲ್ಲಿ ಬೀಡು ಬಿಟ್ಟಿದ್ದ  ಶಹಿಸ್ತಾಖಾನನ ಮೇಲೆ ದಾಳಿ ಮಾಡಿ ಅವನ ಮಗನನ್ನು ಕೊಂದನು. ಕಾಳಗದಲ್ಲಿ ಶಹಿಸ್ತಾಖಾನನು ತನ್ನ ಕೈ ಬೆರಳುಗಳನ್ನು ಕಳೆದುಕೊಂಡನು. ಘಟನೆಯ ನಂತರ ಔರಂಗಜೇಬನು ದಖ್ಖನಿಗೆ ಹೊಸ ರಾಜ್ಯಪಾಲನನ್ನು ನೇಮಿಸಿ ಶಹಿಸ್ತಾಖಾನನನ್ನು ಬಂಗಾಳ ಪ್ರಾಂತ್ಯಕ್ಕೆ ವರ್ಗಾಯಿಸಿದನು. ರಾಜಕುಮಾರ ಮೂಆಸಮ್ಮನು ೧೬೬೪ರಲ್ಲಿ ಹೊಸ ರಾಜ್ಯಪಾಲನಾಗಿ  ನಿಯುಕ್ತಿಗೊಳಿಸಲ್ಪಟ್ಟನು.

      ೧೬೬೪ರಲ್ಲಿ ಶ್ರೀಮಂತ ವ್ಯಾಪಾರಿ ಪಟ್ಟಣ ಮತ್ತು ಅರಬೀಸ್ತಾನದ ಪವಿತ್ರ ಪ್ರದೇಶಗಳಿಗೆ ಹೋಗುವ ಮುಖ್ಯ ದ್ವಾರವೆಂದೇ ಕರೆಯಲ್ಪಡುವ ಸೂರತ್ ಪ್ರಾಂತ್ಯದ ಮೇಲೆ ದಾಳಿ ಮಾಡಿ ಒಂದು ಕೋಟಿಗೂ ಹೆಚ್ಚು ಹಣವನ್ನು ಲೂಡಿ ಮಾಡಿದನು. ಇದೇ ವರ್ಷದಲ್ಲಿ ಕೊಂಡಾಣ ಪ್ರಾಂತ್ಯವನ್ನು ಮೊಗಲರ ದಾಳಿಯಿಂದ ರಕ್ಷಿಸಿ ಅಹಮ್ಮದ್ ನಗರವನ್ನು ಕೊಳ್ಳೆ ಹೊಡೆದನು.

      ಇದರಿಂದಾಗಿ ಶಿವಾಜಿಯನ್ನು ಸದೆಬಡಿಯುವ ಪ್ರಯತ್ನದ ಇನ್ನೊಂದು ಘಟ್ಟದಲ್ಲಿ ಔರಂಜೇಬನು ಅಂಬರ್ ರಾಜನಾದ ಜೈಸಿಂಗನನ್ನು (೧೬೬೫ ರಲ್ಲಿ) ನೇಮಿಸಿದನು. ಜೈಸಿಂಗನು ಶಿವಾಜಿಯ ಸಾಮರ್ಥ್ಯವನ್ನು ಅಲ್ಲಗಳೆಯದೆ ಜಾಗರೂಕತೆಯಿಂದ ಕಾರ್ಯತತ್ಪರನಾದನು. ಶಿವಾಜಿಯೊಂದಿಗೆ ನೇರ ಯುದ್ಧವನ್ನು ಹೂಡುವ ಮೊದಲು ಬಿಜಾಪುರದ ಸುಲ್ತಾನನೊಂದಿಗೆ ಸಂಧಿಯನ್ನೂ, ಪೋರ್ಚುಗೀಸರ ಸಹಾಯದ ಅಪೇಕ್ಷೆಯಿಂದ ಅವರೊಂದಿಗೆ ಒಪ್ಪಂದವನ್ನು ಮಾಡಿಕೊಳ್ಳಲು ಮುಂದಾದನು. ಹಾಗೆಯೇ ಕರ್ನಾಟಕದ ಜಮೀನ್ದಾರರೊಂದಿಗೆ ಮತ್ತು ಕಲ್ಯಾಣದ ಉತ್ತರದಲ್ಲಿರುವ ಕೋಲಿ ಪ್ರಾಂತ್ಯದ ಮುಖ್ಯಸ್ಥರೊಂದಿಗೆ ಸ್ನೇಹ ಸಂಬಂಧಗಳನ್ನು ಬೆಳೆಸಿ ಶಿವಾಜಿಯ ವಿರುದ್ಧ ನಡೆಯುವ ಯುದ್ಧದಲ್ಲಿ ಸಹಾಯವನ್ನು ಮಾಡುವ ಭರವಸೆಯನ್ನು ಅವರಿಂದ ಪಡೆದನು.

   ಜೈಸಿಂಗನ ಪ್ರಥಮ ದಾಳಿ ಪುರಂದರ ಕೋಟೆಯ ಮೇಲೆ ನಡೆಯಿತು. ಅನೇಕ ತಿಂಗಳು ನಡೆದ ಯುದ್ಧದಲ್ಲಿ ಶಿವಾಜಿಯು ಒಪ್ಪಂದಕ್ಕೆ ಬರಬೇಕಾದ ಪರಿಸ್ಥಿತಿ ಬಂದೊದಗಿತು. ಪುರಂದರ ಕೋಟೆ ಒಪ್ಪಂದದ (೧೬೬೫) ಪ್ರಕಾರ ಶಿವಾಜಿಯು ತನ್ನ ಅಧೀನದಲ್ಲಿದ್ದ ೨೩ ಕೋಟೆಗಳನ್ನು ಮೊಗಲರಿಗೆ ಒಪ್ಪಿಸುವ ಒಪ್ಪಂದವನ್ನು ಮಾಡಿಕೊಂಡನು. ಒಂದು ವೇಳೆ ಶಿವಾಜಿಯು ಮೊಗಲ್ ಸಾರ್ವಭೌಮತೆಯನ್ನು ಒಪ್ಪಿಕೊಳ್ಳುವುದಾದರೆ ಮತ್ತು ಚಕ್ರವರ್ತಿಗೆ ತನ್ನ ಸೇವೆಯನ್ನು ಕೊಡುವುದಾದರೆ, ೨೩ ಕೋಟೆಗಳಲ್ಲಿ ರಾಯಘಡವನ್ನು ಸೇರಿಸಿ ೧೨  ಕೋಟೆಗಳನ್ನು  ವಾಪಸ್ಸು ಕೊಡುವ  ಮತ್ತು ಶಿವಾಜಿಯ ಬದಲಿಗೆ ಆತನ ಮಗನು ಮೊಗಲ್ ದರ್ಬಾರದಲ್ಲಿ  ಪ್ರತಿನಿಧಿಸುವ ಭರವಸೆಯನ್ನು ಜೈಸಿಂಗನು ಮುಂದಿಟ್ಟನು. ಹಾಗೆ ಒಂದು ವೇಳೆ ಮೊಗಲರು ಬಿಜಾಪುರದ ಮೇಲೆ ದಾಳಿ ಮಾಡುವುದಾದಲ್ಲಿ ಶಿವಾಜಿಯು ತನ್ನ ಸ್ವಂತ ಸೈನ್ಯದ ಸಹಾಯದಿಂದ ಬಿಜಾಪುರದ ಮೇಲೆ ದಾಳಿ ಮಾಡಬೇಕೆನ್ನುವ ಷರತ್ತುಗಳನ್ನು ಹೊಂದಿದ ಒಪ್ಪಂದಕ್ಕೆ ಒಪ್ಪಿಗೆಯನ್ನು ಕೊಡಬೇಕಾಯಿತು. ಆದರೆ ಬಿಜಾಪುರದ ಕೋಟೆಯ ಮೇಲೆ ನಡೆಯುವ ದಾಳಿಯು ಸುಲಭದ್ದಾಗಿರಲಿಲ್ಲ. ಜೈಸಿಂಗನು ಪಶ್ಚಿಮ ಬಿಜಾಪುರದ ದಾಳಿಯ ನೇತೃತ್ವವನ್ನು ಶಿವಾಜಿಗೆ ವಹಿಸಿ ತಾನು ಪರಿಂದಾ ಪ್ರಾಂತ್ಯದ ಕಡೆ ಪ್ರಯಾಣ ಬೆಳೆಸಿದನು. ಆದರೆ ಶಿವಾಜಿಯು ಪನ್ಹಾಲ್‌(೧೬೬೬) ಪ್ರಾಂತ್ಯವನ್ನು ಪಡೆಯುವುದರಲ್ಲಿ ವಿಫಲನಾದನು. ಇದಕ್ಕೆ ಸೇನಾಧಿಕಾರಿ (ಸರ್--ಲಕ್ಷರ್) ನೇತಾಜಿ ಪಾಲೇಕರನು ತನ್ನ ಸೈನ್ಯದೊಂದಿಗೆ ಸಕಾಲಕ್ಕೆ ಬರದಿದ್ದುದು ಮುಖ್ಯ ಕಾರಣವಾಗಿತ್ತು. ನೇತಾಜಿ ಪಾಲೇಕರನು ಮೊದಲು ಬಿಜಾಪುರದ ಸುಲ್ತಾನನಿಂದ ಲಂಚ ಪಡೆದು ಮೊಗಲರ ವಿರುದ್ಧ ಹೋರಾಡಿದನಾದರೂ, ನಂತರ ಜೈಸಿಂಗನಿಂದ ಮನ್ಸಬ್ದಾರಿ ಮತ್ತು ಜಾಗೀರನ್ನು ಪಡೆಯುವ ಭರವಸೆಯೊಂದಿಗೆ ಮೊಗಲ್ ಪಕ್ಷಕ್ಕೆ ಸೇರಿದನು. ಘಟನೆಯ ನಂತರ ಶಿವಾಜಿ ಮೊಗಲರೊಂದಿಗಿನ ಒಡಂಬಡಿಕೆಯನ್ನು ಮುರಿದು  ಹಾಕಬಹುದೆಂಬ ವಿಷಯವನ್ನು ಗಮನದಲ್ಲಿಟ್ಟುಕೊಂಡು, ಶಿವಾಜಿಯನ್ನು ದಖ್ಖನಿನಿಂದ ಮೊಗಲ್ ಚಕ್ರವರ್ತಿಯೊಂದಿಗೆ ನೇರ ಮಾತುಕತೆಯನ್ನು ನಡೆಸಿಕೊಡುವೆನೆಂಬ ಭರವಸೆಯೊಂದಿಗೆ ಆಗ್ರಾಕ್ಕೆ ಕಳುಹಿಸಿಕೊಡುವುದರಲ್ಲಿ ಕಾರ್ಯತತ್ಪರನಾದನು.

   ೧೬೬೬ರಲ್ಲಿ ಶಿವಾಜಿಯು ತನ್ನ ಮಗನಾದ ಸಾಂಬಾಜಿ ಮತ್ತು ಇತರ ಜನ ಉನ್ನತ ಅಧಿಕಾರಿಗಳು ಹಾಗೂ ಸಣ್ಣ ಪಹರೆಪಡೆಯೊಂದಿಗೆ ಆಗ್ರಾಕ್ಕೆ ಪ್ರಯಾಣ ಬೆಳೆಸಿದನು. ಆದರೆ ಮೊಗಲ್ ಚಕ್ರವರ್ತಿ ಔರಂಗಜೇಬನ ನಿರ್ಲಕ್ಷ್ಯವನ್ನು ಕಂಡ ಶಿವಾಜಿ ಇದನ್ನು ಕಟುವಾಗಿ ವಿರೋಧಿಸಿ ಮಾರನೇದಿನ ತಾನು ಖುದ್ದಾಗಿ ದರ್ಬಾರಕ್ಕೆ ಹೋಗುವ ಬದಲಾಗಿ ತನ್ನ ಮಗನಾದ ಸಾಂಬಾಜಿಯನ್ನು ಕಳುಹಿಸಿಕೊಟ್ಟನು. ಜೈಸಿಂಗನ ವಿರೋಧಿ ಬಣಕ್ಕೆ ಸೇರಿದ ಮತ್ತು ಶಿವಾಜಿಯ ಕೈಯಲ್ಲಿ ಅಪಜಯವನ್ನು ಕಂಡುಕೊಂಡ ಮೊಗಲ್ ಕುಲೀನರು ಚಕ್ರವರ್ತಿಯೊಂದಿಗೆ ಮಾತುಕತೆ ನಡೆಸಿ ಶಿವಾಜಿಯನ್ನು ಕೊಲ್ಲುವ ಸಂಚನ್ನು ಹೂಡಿದರು. ಆದರೆ ಶಿವಾಜಿಯ ಜೀವ ರಕ್ಷಣೆಯ ಜವಾಬ್ದಾರಿ ಹೊತ್ತ ರಾಮಸಿಂಗನ ವಿರೋಧದಿಂದ ಪ್ರಯತ್ನ ಸಫಲವಾಗಲಿಲ್ಲ. ನಂತರ ಔರಂಗಜೇಬನು ಶಿವಾಜಿಯನ್ನು ಆಫ್ಘಾನಿಸ್ತಾನದ ಯುಸೂಫ್ಜೈ ಮತ್ತು ಅಫ್ರಿದಿ ದಂಗೆಕೋರರ ವಿರುದ್ಧ ಹೋರಾಡುವ ಸೈನ್ಯದ ನೇತೃತ್ವವನ್ನು ಕೊಟ್ಟು, ತನ್ನ ಸಹಚರರ ಮೂಲಕ ಕೊಲ್ಲುವ ಯೋಜನೆ ಹೂಡಿದವನಾದರೂ ಅದು ಕೂಡಾ ಫಲಕಾರಿಯಾಗಲಿಲ್ಲ. ತದನಂತರ ಚಕ್ರವರ್ತಿಯು ಶಿವಾಜಿಯನ್ನು ಬಂಧಿಸಿ ಗೃಹಬಂಧನದಲ್ಲಿರಿಸಿದನು. ಆದರೆ ಶಿವಾಜಿಯು ತನ್ನ ಚಾಕಚಕ್ಯತೆಯಿಂದ ಅಸೌಖ್ಯ ಗೊಂಡವನಂತೆ ನಟಿಸಿ ತನ್ನ ರೋಗಶಮನಗೊಳ್ಳಲು ಬ್ರಾಹ್ಮಣರ ಆಶೀರ್ವಾದ ಪಡೆಯುವ ನಿಟ್ಟಿನಲ್ಲಿ ಮಿಠಾಯಿ ಬುಟ್ಟಿಗಳನ್ನು ಕಳುಹಿಸಿಕೊಡಲು ಪ್ರಾರಂಭಿಸಿ, ಒಂದು ದಿನ ತಾನು ತನ್ನ ಮಗನ ಜೊತೆ ಮಿಠಾಯಿ ಬುಟ್ಟಿಯಲ್ಲಿ ಅವಿತುಕೊಂಡು ಸುರಕ್ಷಿತವಾಗಿ ರಾಯಘಡ ತಲುಪಿದಾಗ ಆತನ ವೇಷವನ್ನು  ಕಂಡ ಜೀಜಾಬಾಯಿ ಕೂಡಾ ಆತನನ್ನು ಗುರುತು ಹಿಡಿಯುವಲ್ಲಿ ವಿಫಲವಾದಳು.

   ಇದೇ ವೇಳೆಗೆ ಪರ್ಶಿಯನ್ ದಾಳಿಯ ಭಯ ಮತ್ತು ಪೇಶಾವರದಲ್ಲಿ ಯೂಸೂಫ್ಜೈಗಳ ಬೆಳವಣಿಗೆ ಔರಂಗಜೇಬನನ್ನು ಕಂಗೆಡಿಸಿ ತನ್ನ ಎಲ್ಲ ಗಮನವನ್ನು ಉತ್ತರ ಪಶ್ಚಿಮ [ವಾಯುವ್ಯ] ಪ್ರಾಂತ್ಯಗಳತ್ತ ಕೇಂದ್ರೀಕರಿಸುವಂತೆ ಮಾಡಿತು. ಸಮಯದಲ್ಲಿ ಶಿವಾಜಿಯು ತನ್ನ ಆಡಳಿತವನ್ನು ಬಲಪಡಿಸುವ ನಿಟ್ಟಿನಲ್ಲಿ ಶಾಂತಿಯನ್ನು ಬಯಸಿದ್ದ. ಹಾಗಾಗಿ ಮೊಗಲ್ ಸಾಮ್ರಾಜ್ಯದ ದಖ್ಖನಿನ ರಾಜ್ಯಪಾಲನಾದ ಮೂಅಸಮ್ಮನೊಂದಿಗೆ ರಾಜಿ ಮಾಡಿಕೊಂಡ ಪರಿಣಾಮವಾಗಿ ೧೬೬೭-೧೬೬೯ರ ನಡುವೆ ಯಾವುದೇ ರೀತಿಯ ಘರ್ಷಣೆಗಳು ಸಂಭವಿಸಲಿಲ್ಲ. ಚಕ್ರವರ್ತಿಯಾದ ಔರಂಗಜೇಬನು ಶಿವಾಜಿಯನ್ನುರಾಜಾಎಂದು ಕರೆಯಲು ಸಮ್ಮತಿಸಿದನು. ಪ್ರಾಯಶಃ ಇದರಿಂದಾಗಿ ಇಂಗ್ಲಿಷ್ ಕಂಪನಿಯ ೧೬೬೮-೧೬೬೯ರ ದಾಖಲೆಗಳಲ್ಲಿ ಶಿವಾಜಿಯನ್ನುಔರಂಗಜೇಬನು ಹೇಳಿದ ಕೆಲಸವನ್ನು ಮಾಡುವ ಮತ್ತು ಅವನ ಆಜ್ಞೆಯನ್ನು ಪಾಲಿಸುವ ಸಾಮಂತಎಂದು ತಪ್ಪಾಗಿ ಗ್ರಹಿಸಲಾಗಿದೆ ಎನ್ನುವ ಅಭಿಪ್ರಾಯವೂ ಇದೆ.

   ಆದರೆ ಶಾಂತಿ ಒಪ್ಪಂದ ದೀರ್ಘಕಾಲ ಬಾಳಲಿಲ್ಲ. ಶಿವಾಜಿಯು ತಾನು ಕಳೆದುಕೊಂಡ ಕೋಟೆ ಕೊತ್ತಲಗಳನ್ನು ಮೊಗಲರಿಂದ ಮರು ವಶಪಡಿಸಿಕೊಳ್ಳುವ ದೃಢನಿರ್ಧಾರವನ್ನು ತೆಗೆದುಕೊಂಡಿದ್ದಔರಂಗಜೇಬನು ತನ್ನ ಮಗ ಮೂಆಸಮ್ಮನು ಶಿವಾಜಿಯೊಂದಿಗೆ ಸೇರಿ ತನ್ನ ದಾರಿಗೆ ಮುಳ್ಳಾಗಬಹುದೆಂಬ ಭಯದಿಂದ ಕಂಗೆಟ್ಟನು.

   ತನ್ನ ಆರ್ಥಿಕ ಮುಗ್ಗಟ್ಟಿನಿಂದಾಗಿ ಔರಂಗಜೇಬನು ದಖ್ಖನಿನ ಹೆಚ್ಚುವರಿ ಸೈನಿಕರನ್ನು ಕೆಲಸದಿಂದ ತೆಗೆದಾಗ ಶಿವಾಜಿಯು ಸೈನಿಕರನ್ನು ತನ್ನ ಸೇವೆಗೆ ಒಳಪಡಿಸಿ, ನಂತರ ೧೬೭೦ರಲ್ಲಿ ಮೊಗಲ್ ಪ್ರಾಂತ್ಯಗಳ ಮೇಲೆ ದಾಳಿ ನಡೆಸಿ ಕೊಳ್ಳೆ   ಹೊಡೆದು ತಾನು ಕಳೆದುಕೊಂಡ ಪುರಂದರ, ಕೊಂಡಾನ, ಮಹೊಲಿ  ಕೋಟೆಗಳನ್ನು ಮರು ವಶಪಡಿಸಿಕೊಂಡನು. ಸೂರತ್ ಕೋಟೆಯ ಮೇಲೆ ಮತ್ತೆ ದಾಳಿ ನಡೆಸಿ ಧಾರಾಳ ಸಂಪತ್ತನ್ನು ತನ್ನ ಖಜಾನೆಗೆ ತುಂಬಿಸಿಕೊಂಡನು. ೧೬೭೨ರಲ್ಲಿ ಖಾಂದೇಶ ಮತ್ತು ಬೇರಾರ್ ಪ್ರಾಂತ್ಯದಲ್ಲಿ ಮೊಗಲರ ಕೈಯಲ್ಲಿ ಸೋತ ಶಿವಾಜಿ ನಂತರ ಹುಟ್ಟೂರಾದ ಶಿವನೇರಿ ಕೋಟೆಯನ್ನು ಕೂಡಾ ಪಡೆಯುವುದರಲ್ಲಿ ವಿಫಲನಾದನು. ೧೬೭೪ರಲ್ಲಿ ಬಿಜಾಪುರದ ಅಸಹಾಯಕತೆಯನ್ನು ಉಪಯೋಗಿಸಿ ಪನ್ಹಾಲಪರೇಲಿ, ಸತಾರ ಪ್ರಾಂತ್ಯಗಳನ್ನು ಗೆದ್ದುಕೊಂಡು ಜೂನ್ , ೧೬೭೪ರಲ್ಲಿ ಶಿವಾಜಿಯುಛತ್ರಪತಿಎಂಬ ಬಿರುದನ್ನು ಪಡೆದುಕೊಂಡು, ರಾಯಘಡ ಕೋಟೆಯಲ್ಲಿ ಪಟ್ಟಾಭಿಷಿಕ್ತನಾಗಿ  ಮರಾಠ ಸಾಮ್ರಾಜ್ಯದ ಪ್ರಥಮ ಚಕ್ರವರ್ತಿ ಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ.

   ೧೬೭೪ರಲ್ಲಿ ಛತ್ರಪತಿಯೆಂದು ಪಟ್ಟಾಭಿಷಿಕ್ತನಾದರೂ ಬಿಜಾಪುರ ಮತ್ತು ಗೋಲ್ಕೊಂಡಾ ಸುಲ್ತಾನರ ರೀತಿಯಲ್ಲಿ ಸಾರ್ವಭೌಮನಾಗಿ ಸಮಾನತೆಯನ್ನು ಪ್ರತಿಪಾದಿಸಲು ಸಾಧ್ಯವಾಗಲಿಲ್ಲ. ಏಕೆಂದರೆ ಆದಿಲ್ ಷಾಹಿ ಸರಕಾರದ ದೃಷ್ಟಿಯಲ್ಲಿ ಶಿವಾಜಿಯು ಒಬ್ಬ ಸಾಮಂತ ಜಾಗೀರುದಾರನ ದಂಗೆಕೋರರ ಮಗ ಎಂದು ಹೇಳಲಾಗಿದೆ. ತನ್ನ ಪ್ರಜೆಗಳ ಸಮ್ಮುಖದಲ್ಲೇ ತಾನು ಸ್ವತಂತ್ರ ರಾಜ ಎಂಬುದನ್ನು ಪ್ರತಿಪಾದಿಸಲು ಆತನು  ವಿಫಲನಾಗಿದ್ದಾನೆ. ಇದಕ್ಕೆ ಅನೇಕ ಕಾರಣಗಳು ಉಂಟು. ಒಂದನೆಯದಾಗಿ ಹೇಳುವುದಾದರೆ ಹೆಚ್ಚಿನ ಮರಾಠ ಮನೆತನಗಳು ಭೋನ್ಸ್ಲೆಗಳ ವಿರೋಧಿಗಳಾಗಿದ್ದರು. ಭೋನ್ಸ್ಲೆಗಳನ್ನು ಕಂಡರೆ ಅಸೂಯೆ ಪಡುತ್ತಿದ್ದರು. ಶಿವಾಜಿಯು ಕೂಡಾ ಬೋನ್ಸ್ಲೆಮನೆತನಕ್ಕೆ ಸೇರಿದ್ದ  ಕಾರಣದಿಂದಾಗಿ ರೀತಿಯ ವಿಷಮ ಪರಿಸ್ಥಿತಿಯನ್ನು ಎದುರಿಸಬೇಕಾಗಿ ಬಂತು. ಹಾಗಾಗಿ ಅಂತಹ ಮರಾಠರು ಶಿವಾಜಿಯ  ಬದಲಾಗಿ ಬಿಜಾಪುರದ ಅಥವಾ ಮೊಗಲ್ ಚಕ್ರವರ್ತಿಗಳನ್ನು ತಮ್ಮ ಒಡೆಯರುಗಳು ಎಂದು ಭಾವಿಸಿ ತಾವು ಅವರ ಪ್ರಜೆಗಳೆಂದು ಹೇಳಿಕೊಳ್ಳುತ್ತಿದ್ದರು.

   ಇಷ್ಟಾದರೂ ಶಿವಾಜಿಯು ಅತ್ಯಂತ ವಿಸ್ತಾರವಾದ ಸಾಮ್ರಾಜ್ಯದ ಅಧಿಪತಿಯಾಗಿದ್ದನು. ಅವನ ಆಸ್ಥಾನದಲ್ಲಿ ಹಿಂದುಗಳು ಉನ್ನತ ಸ್ಥಾನಮಾನಗಳನ್ನು ಅಲಂಕರಿಸಿದ್ದರು. ಉರ್ದು ಮತ್ತು ಪರ್ಶಿಯನ್ ಭಾಷೆಯ ಬದಲಾಗಿ ಮರಾಠಿ ಭಾಷೆಯನ್ನು ಆಡಳಿತ ಭಾಷೆಯನ್ನಾಗಿ ಪರಿವರ್ತಿಸಿದ ಖ್ಯಾತಿ ಅವನದ್ದಾಗಿದೆ. ಸಂಸ್ಕೃತ ಭಾಷೆಯ ಪಾರಿಭಾಷಿಕ ಪದಗಳನ್ನು ಆಡಳಿತದಲ್ಲಿ ಅಳವಡಿಸಿಕೊಳ್ಳಲಾಯಿತು. ಆಡಳಿತದ ಅನುಕೂಲಕ್ಕೋಸ್ಕರರಾಜ್ಯ ವ್ಯವಹಾರ ಕೋಶಎಂಬ ಆಡಳಿತ ಪದಗಳನ್ನೊಳಗೊಂಡ ಗ್ರಂಥವನ್ನು ರಾಜನಾಥ ಪಂಡಿತ ಹನುಮಂತೆಯ ನೇತೃತ್ವದಲ್ಲಿ ಹೊರತರಲಾಯಿತು.

ಆಡಳಿತ ಸಂಘಟನೆ

   ದಾದಾಜಿ ಕೊಂಡದೇವನ ಕಾಲದಲ್ಲಿ ಜಾಗೀರಿನ ಆಡಳಿತವನ್ನು ನೋಡಿಕೊಳ್ಳಲು   ಜನ ಅಧಿಕಾರಿಗಳಿದ್ದರು. ಅವರೆಂದರೆ ಪೇಶ್ವೆ ಅಥವಾ ಮುಖ್ಯಪ್ರಧಾನ, ಮಜುಮ್ದಾರ್ ಅಥವಾ ಅಮಾತ್ಯ, ದಬೀರ್ ಅಥವಾ ಸುಮಂತ ಮತ್ತು ಸಬ್ನಿಸ್(ಅಥವಾ ಲೆಕ್ಕಪತ್ರ ಮೇಲ್ವಿಚಾರಕ). ಆದರೆ ೧೬೭೪ರಲ್ಲಿ ಪಟ್ಟಾಭಿಷಿಕ್ತಗೊಂಡ ನಂತರ ಜನ ಮಂತ್ರಿಗಳನ್ನೊಳಗೊಂಡ ಅಷ್ಟಪ್ರಧಾನರು ಎಂಬ ಜವಾಬ್ದಾರಿಯುತ ಮಂತ್ರಿಮಂಡಲದ ರಚನೆ ಮಾಡಿದ. ಶಿವಾಜಿಯ ಅಷ್ಟಪ್ರಧಾನರುಗಳು ಯಾರೆಂದರೆ,

ಅಷ್ಟ ಪ್ರಧಾನರು

. ಪೇಶ್ವೆ ಅಥವಾ ಪ್ರಧಾನಮಂತ್ರಿ ಅಥವಾ ಆಡಳಿತದ ಮೇಲ್ವಿಚಾರಕ,

. ಅಮಾತ್ಯ ಅಥವಾ ಹಣಕಾಸು ಮಂತ್ರಿ

. ಮಂತ್ರಿ ಅಥವಾ ರಾಜನ ದೈನಂದಿನ ಕೆಲಸಗಳ ಮತ್ತು ಕಾರ್ಯ ಕಲಾಪಗಳ ದಾಖಲೆಯ ಜವಾಬ್ದಾರಿ ಹೊತ್ತ ವ್ಯಕ್ತಿ.

. ಸುಮಂತ ಅಥವಾ ವಿದೇಶಾಂಗ ವ್ಯವಹಾರ ನೋಡಿಕೊಳ್ಳುವವ

5. ಸಚಿವ ಅಥವಾ ರಾಜನ ಪತ್ರವ್ಯವಹಾರಗಳ ಮೇಲ್ವಿಚಾರಕ

. ಪಂಡಿತರಾವ್ ಅಥವಾ ರಾಜಪುರೋಹಿತ,

. ಸೇನಾಪತಿ ಅಥವಾ ಪ್ರಧಾನ ದಂಡನಾಯಕ

. ನ್ಯಾಯಾಧೀಶ.

   ಅಷ್ಟಪ್ರಧಾನರುಗಳ ವೈಶಿಷ್ಟ್ಯವೆಂದರೆ ಇವರಿಗೆ ಆಧುನಿಕ ಕ್ಯಾಬಿನೆಟ್ ಸರಕಾರದ ರೀತಿಯಲ್ಲಿ ಸಾಮುದಾಯಿಕ ಜವಾಬ್ದಾರಿಗಳಿರಲಿಲ್ಲ. ಅದೇ ರೀತಿ ತಮ್ಮ ಖಾತೆಯಲ್ಲೇ ಸ್ವತಂತ್ರವಾಗಿ ವ್ಯವಹರಿಸುವ ಹಕ್ಕಿರಲಿಲ್ಲ. ಇವರನ್ನು ಮಂತ್ರಿಗಳೆಂದು ಹೇಳುವುದರ ಬದಲಾಗಿ ರಾಜನ  ಆಡಳಿತದಲ್ಲಿ ಸಹಕರಿಸಲು ನಿಯೋಜಿಸಲ್ಪಟ್ಟ ಕಾರ್ಯದರ್ಶಿಗಳೆಂದು ಹೇಳಿದರೆ ಉತ್ತಮ. ಅಮಾತ್ಯ ಮತ್ತು ಪಂಡಿತ್ರಾವ್ ರಾಜನ ಹಸ್ತಕ್ಷೇಪದಿಂದ ಮುಕ್ತರಾಗಿದ್ದರು. ಸೇನಾಪತಿಯನ್ನು ಮತ್ತು ಮಂತ್ರಿಯನ್ನು ಹೊರತುಪಡಿಸಿದರೆ ಉಳಿದ ಎಲ್ಲ ಪ್ರಧಾನರು ಬ್ರಾಹ್ಮಣರಾಗಿದ್ದರು. ಆದರೆ ಪ್ರಧಾನರ ಕೆಲಸ ವಂಶಪಾರಂಪರ್ಯವಾಗಿರಲಿಲ್ಲ.

 

ಕಂದಾಯ ವ್ಯವಸ್ಥೆ:-   ಶಿವಾಜಿಯ ಕಂದಾಯ ವ್ಯವಸ್ಥೆ ಅಹಮ್ಮದ ನಗರದ ಪ್ರಧಾನ ಮಂತ್ರಿಯಾಗಿದ್ದ ಮಲಿಕ್ ಅಂಬರನ ಕಂದಾಯ ವ್ಯವಸ್ಥೆಯನ್ನು ಹೋಲುತ್ತಿತ್ತು. ಪ್ರಾರಂಭದಲ್ಲಿದ್ದ ಕಂದಾಯವನ್ನು ಒಟ್ಟು ಉತ್ಪನ್ನದ ೩೩%ದಿಂದ ೪೦%ಕ್ಕೆ ಏರಿಸಲಾಯಿತು. ಸಾಧ್ಯವಾದಷ್ಟು ಮಟ್ಟಿಗೆ ವಂಶಪಾರಂಪರ್ಯವಾಗಿ ಕಂದಾಯ ಅಧಿಕಾರಿಗಳಾದ ಪಟೇಲ, ಕುಲಕರ್ಣಿ, ದೇಶಮುಖ ಮತ್ತು ದೇಶಪಾಂಡೆಯವರ ಪ್ರಾಬಲ್ಯವನ್ನು ಮುರಿಯಲು ಪ್ರಯತ್ನಿಸಿದನು. ಅಧಿಕಾರಿಗಳು  ತಮ್ಮದೇ ಆದ ಸೈನ್ಯವನ್ನು ಇಟ್ಟುಕೊಂಡು ಜನರನ್ನು ಶೋಷಿಸುತ್ತಿದ್ದರು. ಶಿವಾಜಿಯು ಅವರನ್ನು ತನ್ನ ಹದ್ದುಬಸ್ತಿನಲ್ಲಿ ಇಡಲು ಎಲ್ಲ ರೀತಿಯ ಕ್ರಮಗಳನ್ನು ತೆಗೆದುಕೊಂಡನು. ಇವನ ಕಂದಾಯ ವ್ಯವಸ್ಥೆಯಲ್ಲಿ ಸರಕಾರ ಮತ್ತು ರೈತರ ನಡುವೆ ನೇರ ವ್ಯವಹಾರ ಇತ್ತು. ಆದರೂ ಅಧಿಕಾರಿಗಳ ಲಂಚಕೋರತನವನ್ನು ಸಂಪೂರ್ಣವಾಗಿ ಹತ್ತಿಕ್ಕಲು ಶಿವಾಜಿಗೆ ಸಾಧ್ಯವಾಗಲಿಲ್ಲ. ಸಂಬಳಕ್ಕೆ ಬದಲಾಗಿ ಬರುವ ಕಂದಾಯದಲ್ಲಿ ಒಂದು ಪಾಲನ್ನು ಅನುಭವಿಸುತ್ತಿದ್ದ ಕಂದಾಯ ಅಧಿಕಾರಿಗಳಾದ ಸಾರ್-ನೌಬತ್, ಮಜುಮ್ದಾರ್ ಮತ್ತು ಕಾರಕೂನರಿಗೆ ಪ್ರದೇಶದ  ಮೇಲೆ ಆಡಳಿತ ನಡೆಸುವ ಅಧಿಕಾರವನ್ನು ಕೊಟ್ಟಿರಲಿಲ್ಲ. ಹಾಗೆಯೇ ಮಿಲಿಟರಿ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡ ಅಧಿಕಾರಿಗಳಿಗೆ ಇಡೀ ಹಳ್ಳಿಯ ಮೇಲಿನ ಮಾಲೀಕತ್ವವನ್ನು ದಯಪಾಲಿಸಲಿಲ್ಲ.

ಸೇನಾಡಳಿತ: ಶಿವಾಜಿಯ ರಾಜ್ಯ ಒಂದು ಮಿಲಿಟರಿ ರಾಜ್ಯವಾಗಿದ್ದು  ಯಾವಾಗಲೂ ಯುದ್ಧದಲ್ಲಿ ನಿರತವಾಗಿತ್ತು. ರಾಜನೇ ಸ್ವತಃ ಸೇನಾನಾಯಕನಾಗಿದ್ದು ಪ್ರತಿಯೊಂದು ವಿಷಯದಲ್ಲಿ ತಾನೇ ಆಸಕ್ತಿ ವಹಿಸುತ್ತಿದ್ದನು. ಇವನ ಕೈ ಕೆಳಗೆ ಇರುವ ಸೇನಾಪತಿ ಸೈನ್ಯಾಡಳಿತವನ್ನು ನೋಡಿಕೊಳ್ಳುತ್ತಿದ್ದ. ವೈರಿಗಳನ್ನು ಧೈರ್ಯಗೆಡಿಸಿ ಹಿಮ್ಮೆಟ್ಟಿಸುವುದೇ ಅವನ ಮುಖ್ಯ ಉದ್ದೇಶವಾಗಿತ್ತು. ಇದಕ್ಕಾಗಿ ಅನೇಕ ಕೋಟೆ ಕೊತ್ತಲಗಳನ್ನು ಕಟ್ಟಿಸಿದನು. ಶಿವಾಜಿಯು ತಾನು ಸಾಯುವ ಹೊತ್ತಿಗೆ ರಾಜ್ಯದಲ್ಲಿ ೨೪೦ ಕೋಟೆಗಳನ್ನು ಹೊಂದಿದ್ದ. ಪ್ರತಿಯೊಂದು ಕೋಟೆಯು ಮೂರು ಜನ ಅಧಿಕಾರಿಗಳ ಕೈಯಲ್ಲಿತ್ತು. ಹವಾಲ್ದಾರರು ಮುಖ್ಯ ಅಧಿಕಾರಿಯಾಗಿದ್ದು ಕೋಟೆಯ ಬೀಗವನ್ನು ತನ್ನಲ್ಲಿರಿಸಿಕೊಳ್ಳುತ್ತಿದ್ದ. ಸಬ್ನೀಸ್ (ಲೆಕ್ಕಪತ್ರ ಮೇಲ್ವಿಚಾರಕ) ಮತ್ತು ಸರ್--ನೌಬತ್ (ಪಹರೆ) ಇತರೇ ಅಧಿಕಾರಿಗಳಾಗಿದ್ದರು. ಶಿವಾಜಿಯು ಕಾಲಾಳು ಸೈನ್ಯದ ಸೈನಿಕರನ್ನು ಸ್ವತಹ ಪರೀಕ್ಷಿಸಿ ಆಯ್ಕೆ ಮಾಡಿಕೊಳ್ಳುತ್ತಿದ್ದನು. ನಾಯಕ್, ಹವಲ್ದಾರ್, ಜಮಾಲ್ದಾರ್, ಹಜಾರಿ, ಸರ್--ನೌಬತ್ ಇತರ ಅಧಿಕಾರಿಗಳಾಗಿದ್ದರು. ಸಭಾಸದ್ ಬಖರ್ ಪ್ರಕಾರ ಶಿವಾಜಿಯ ಬಳಿ ಲಕ್ಷ ಕಾಲಾಳು, ೩೦೦೦ ಅಶ್ವಪಡೆ, ೩೦೦ ಒಂಟೆದಳ, ೧೨೬೦ ಗಜದಳಗಳನ್ನು ಹೊಂದಿದ್ದ. ಅಶ್ವದಳದಲ್ಲಿ ವಿಭಾಗಗಳಿದ್ದವು. ಬಾಗೀರ್, ಸರ್ಕಾರದಿಂದಲೇ ಪೋಷಿಸಲ್ಪಡುವ ಅಶ್ವದಳದ ಅಧಿಕಾರಿಯಾಗಿದ್ದರೆ, ಸಿಲ್ಲಾದಾರ್, ತಾನೇ ಸ್ವತಃ ಕುದುರೆಗಳನ್ನು ಹೊಂದಿ ಅದರ ಪೋಷಣೆಗೆ ಬೇಕಾದ ನೆರವನ್ನು ಸರ್ಕಾರದಿಂದ ಪಡೆಯುವ ಅಶ್ವಪಡೆಗೆ ಅಧಿಕಾರಿಯಾಗಿದ್ದಾನೆ.

ಶಿವಾಜಿಯ ನೌಕಾಪಡೆ ಹಡಗುಗಳನ್ನು ಮತ್ತು ಯುದ್ಧ ನೌಕೆಗಳನ್ನು ಹೊಂದಿತ್ತು. ಇದರ ಸಹಾಯದಿಂದಲೇ ಆತನು ಸಿದ್ಧಿಗಳೆಂಬ ಕಡಲುಗಳ್ಳರನ್ನು ಹತ್ತಿಕ್ಕಿದನು ಎಂಬ ಅಭಿಪ್ರಾಯವಿದೆ. ಶಿವಾಜಿಯ ನೌಕಾಬಲದ ಸಾಮರ್ಥ್ಯವು ೧೬೦ ಯುದ್ಧ ನೌಕೆಗಳನ್ನು  ಮೀರಿರಲಿಲ್ಲ. ಅದು ಇಂಗ್ಲೀಷರ ನೌಕಾಪಡೆಗಿಂತ ಕೆಳಮಟ್ಟದ್ದಾಗಿತ್ತು. ಸೈನಿಕರಿಗೆ ಜಹಗೀರಿನ ಬದಲಾಗಿ ವೇತನ ನೀಡಲಾಗುತ್ತಿತ್ತು. ಬೆಟ್ಟಗುಡ್ಡಗಳಲ್ಲಿ ಅವಿತು ಯುದ್ಧ ಮಾಡುವಗೆರಿಲ್ಲಾ ಯುದ್ಧತಂತ್ರವು ಮರಾಠ ಸೈನ್ಯದ ವಿಶಿಷ್ಟ ತಂತ್ರವಾಗಿತ್ತು. ದಂಡಯಾತ್ರೆಯ ಕಾಲದಲ್ಲಿ ಸ್ತ್ರೀಯರನ್ನು ಸೈನ್ಯದೊಂದಿಗೆ ಕರೆದೊಯ್ಯುವುದು ಅವನ ಕಾಲದಲ್ಲಿ ನಿಷಿದ್ಧವಾಗಿತ್ತು.

ಔದಾರ್ಯ ಮತ್ತು ಧಾರ್ಮಿಕ ನೀತಿ: ಮುಸ್ಲಿಮ್ ವಿದ್ವಾಂಸ ಖಾಪಿಖಾನನ ಪ್ರಕಾರ ಯುದ್ಧದಲ್ಲಿ ಸೆರೆಸಿಕ್ಕ ಹಿಂದೂ ಅಥವಾ ಮುಸ್ಲಿಮ್ ಹೆಂಗಸರನ್ನು ತನ್ನ  ನಿಗಾದಲ್ಲಿರಿಸಿ ಅವರಿಗೆ ಯಾವ ರೀತಿಯ ತೊಂದರೆಯಾಗದಂತೆ ನೋಡಿಕೊಂಡು, ಅವರ ಹತ್ತಿರದ ಸಂಬಂಧಿಗಳಿಗೆ ಅವರನ್ನು ಒಪ್ಪಿಸುತ್ತಿದ್ದ. ಶಿವಾಜಿಯು ಕಾಲದ ನೈತಿಕತೆಯನ್ನು ಎತ್ತಿ ಹಿಡಿದ ವ್ಯಕ್ತಿತ್ವದ ಪ್ರತೀಕವಾಗಿದ್ದ. ಅವನು ಪವಿತ್ರ ಖುರಾನನ್ನು ಗೌರವಿಸುತ್ತಿದ್ದನು.

ಶಿವಾಜಿಯು ಬ್ರಾಹ್ಮಣರನ್ನು ಗೌರವಿಸುತ್ತಿದ್ದನು ಮತ್ತು ಅವನ ಕಾಲದಲ್ಲಿ ವೈದಿಕ ಧರ್ಮದ ಅಧ್ಯಯನಕ್ಕೆ ಪ್ರೋತ್ಸಾಹ ನೀಡಿದನು. ಸೈನ್ಯವನ್ನು ಸಂಘಟಿಸುವ ಮತ್ತು ಮೊಗಲ್ ಪ್ರಾಂತ್ಯಗಳ ಮೇಲೆ ದಾಳಿ ಮಾಡುವ ಅಧಿಕಾರವನ್ನು ಮತ್ತು ಜಯಿಸಿದ ಪ್ರಾಂತ್ಯಗಳನ್ನು ಆಯಾ ನಾಯಕನಿಗೆ ಜಹಗೀರಿನ ರೀತಿಯಲ್ಲಿ ಕೊಡುವ ವ್ಯವಸ್ಥೆಯನ್ನು ಜಾರಿಗೆ ತಂದನು.       ಶಿವಾಜಿಯ ಆಡಳಿತದಲ್ಲಿ ಸಾಧು ಸಂತರನ್ನು ಗೌರವ ಭಾವನೆಯಿಂದ  ನೋಡಿಕೊಳ್ಳಲಾಗುತ್ತಿತ್ತು. ತಾನು ಹಿಂದೂ ಧರ್ಮವನ್ನು ಪ್ರತಿಪಾದಿಸಿದರೂ ಕೂಡಾ ಶಿವಾಜಿಯು ಧರ್ಮಾಂಧತೆಯಿಂದ  ದೂರ ಉಳಿದಿದ್ದ. ಪರಧರ್ಮೀಯರನ್ನು ಗೌರವಿಸಿ ಅವರ ವಿಶ್ವಾಸ ಗಳಿಸುವಲ್ಲಿ ಸಫಲನಾಗಿದ್ದ. ಮುಸ್ಲಿಮ್ ಸಂತನಾದ ಕೆಳಸಿಯ ಬಾಬಾ ಯಾಕೂತ್ನನ್ನು ಗೌರವಾದರಗಳಿಂದ ನೋಡಿಕೊಳ್ಳುತ್ತಿದ್ದ. ರಾಯಘಡದ ಅರಮನೆಯ ಎದುರಲ್ಲೇ ಒಂದು ಮಸೀದಿಯನ್ನು ಕಟ್ಟಿಸಿ ತನ್ನಲ್ಲಿರುವ ಸಹಿಷ್ಣುತೆಯನ್ನು ಪ್ರಕಟಗೊಳಿಸಿದ್ದಾನೆ. ಅನೇಕ ಮುಸ್ಲಿಮರು ಉನ್ನತ ರಾಜಕೀಯ ಮತ್ತು ಮಿಲಿಟರಿ ಹುದ್ದೆಗಳನ್ನು ಅಲಂಕರಿಸಿದ್ದರು. ಸೂರತ್ ಮೇಲೆ ದಾಳಿ ಮಾಡಿದಾಗ ಕ್ರೈಸ್ತಪಾದ್ರಿಗಳಿಗೆ ಯಾವ ರೀತಿಯಲ್ಲೂ ತೊಂದರೆಯಾಗದಂತೆ ನೋಡಿಕೊಂಡಿದ್ದನು. ಶಿವಾಜಿಯು ಒಬ್ಬ ವ್ಯಕ್ತಿಯಲ್ಲಿರುವ ಪ್ರತಿಭೆಯನ್ನು ಗುರುತಿಸುವ ಸಾಮರ್ಥ್ಯವನ್ನು ಹೊಂದಿದ್ದು, ಒಳ್ಳೆಯ ವ್ಯಕ್ತಿಗಳನ್ನೇ ಅಧಿಕಾರಿಗಳಾಗಿ, ಸೇನಾಪತಿಯಾಗಿ, ರಾಜತಾಂತ್ರಿಕರಾಗಿ, ಆಡಳಿತಗಾರರಾಗಿ ನೇಮಿಸುತ್ತಿದ್ದನು. ರೀತಿಯಾಗಿ ಮರಾಠ ಆದರ್ಶವನ್ನು ಮರಾಠ ಜನರ ಬೆಂಬಲದಿಂದ ಎತ್ತಿ ಹಿಡಿದ ಖ್ಯಾತಿ ಶಿವಾಜಿಗೆ ಸಲ್ಲತಕ್ಕದ್ದು. ರಾಜಾ ರಣಜಿತ್ಸಿಂಗನ ಹಾಗೆ ತಾನೂ ಯಾವ ವಿದೇಶಿಯರ ಸಹಾಯವಿಲ್ಲದೆ ಆಡಳಿತ ಮಾಡಿದ ವ್ಯಕ್ತಿಯಾಗಿದ್ದಾನೆ. ಒಬ್ಬ ಸಣ್ಣ ಜಾಗೀರುದಾರನಾಗಿ ಆಡಳಿತವನ್ನು ಪ್ರಾರಂಭಿಸಿದ ಶಿವಾಜಿಯು ನಂತರ ಬಿಜಾಪುರ ಮತ್ತು ಮೊಗಲ್ ಚಕ್ರವರ್ತಿಗಳ ವಿರೋಧದ ಹೊರತಾಗಿಯೂ ತನ್ನ ಸಾಮ್ರಾಜ್ಯವನ್ನು ಸೃಷ್ಟಿ ಮಾಡಿದ ರೀತಿ ಗಮನಾರ್ಹವಾಗಿದೆ. ಅವನು ಯಾವತ್ತೂ ಧೈರ್ಯಗೆಡದೆ ವ್ಯಕ್ತಿಯಾಗಿದ್ದು ಆದರ್ಶ ರಾಜನೀತಿ ನಿಪುಣನಾಗಿ, ಸೂಕ್ತವಾದ ವ್ಯಕ್ತಿಗಳನ್ನೇ ತನ್ನ ವಿಶ್ವಾಸಕ್ಕೆ ತೆಗೆದುಕೊಂಡು, ಅವರ ಸಂಪೂರ್ಣ ಸಹಕಾರದೊಂದಿಗೆ ಛತ್ರಪತಿಯಾಗಿ ಮೆರೆದದ್ದು ಇತಿಹಾಸ. ಅವರ ಆದರ್ಶಗಳು ಅವನೊಂದಿಗೆ ಅಂತ್ಯಗೊಳ್ಳದೆ ನಂತರದ ಮರಾಠ ನಾಯಕರಿಗೆ ಸ್ಫೂರ್ತಿದಾಯಕವಾಗಿದ್ದವು. ಇದು ೧೮ನೆಯ ಶತಮಾನದಲ್ಲಿ ಮರಾಠರಿಗೆ ಅತ್ಯಂತ ಬೃಹತ್ ಮತ್ತು ಸದೃಢ ಸಾಮ್ರಾಜ್ಯವನ್ನು ಕಟ್ಟಲು ಪ್ರೇರಣೆ ನೀಡಿತು.

ಚೌತ್ ಮತ್ತು ಸರದೇಶ್ಮುಖಿ:    ಶಿವಾಜಿಯ ಕಾಲದಲ್ಲಿ ಹುಟ್ಟಿಕೊಂಡ ಇನ್ನೊಂದು ತೆರಿಗೆಯೆಂದರೆ ಚೌತ್ ಮತ್ತು ಸರದೇಶ್ಮುಖಿ. ಮಹಾರಾಷ್ಟ್ರವು ಗುಡ್ಡಗಾಡು ಪ್ರಾಂತ್ಯಗಳನ್ನು ಹೊಂದಿದ್ದ ಕಾರಣ ಹೆಚ್ಚು ಭೂಕಂದಾಯ ಸಂಗ್ರಹವಾಗುತ್ತಿರಲಿಲ್ಲ. ಆದಕಾರಣ ಶಿವಾಜಿಯು ಈ ತೆರಿಗೆಗಳನ್ನು ಸಂಗ್ರಹಿಸುವ ಪದ್ಧತಿಯನ್ನು ಜಾರಿಗೆ ತಂದನು. ಇವುಗಳ ಸ್ವರೂಪದ ಬಗ್ಗೆ ವಿದ್ವಾಂಸರಲ್ಲಿ ಭಿನ್ನಾಭಿಪ್ರಾಯಗಳಿವೆ. ರಾಣಡೆಯವರು ಹೇಳುವ ಪ್ರಕಾರಅದು ಮೂರನೆಯ ರಾಷ್ಟ್ರದ ದಾಳಿಯ ವಿರುದ್ಧ ಕೊಡುವ ರಕ್ಷಣೆಗೆ ಪ್ರತಿಯಾಗಿ ನೀಡಬೇಕಾದ ಒಂದು ವಿಧದ ತೆರಿಗೆಯಾಗಿತ್ತು.” ಜಾದುನಾಥ್ ಸರ್ಕಾರರ ಪ್ರಕಾರ ಚೌತ್ದರೋಡೆಯಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಸಂದಾಯ ಮಾಡುವ ಹಣಎಂದು ಹೇಳಿದರೆ, ಸೇನರ ಪ್ರಕಾರಸಾಮಂತರಿಂದ ಮತ್ತು ವಿರೋಧಿಗಳಿಂದ ಸೇನಾನಾಯಕನು ವಸೂಲಿ ಮಾಡುವ ಕಾಣಿಕೆಎಂದಿದ್ದಾರೆ. ಚೌತ್ ಒಟ್ಟು ಆದಾಯದ / ಭಾಗವಾಗಿದ್ದರೆ, ಸರ್ದೇಶ್ಮುಖಿ ೧೦% ರಷ್ಟು ಹೆಚ್ಚಿನ ತೆರಿಗೆಯಾಗಿತ್ತು.

 

ವಿಶ್ಲೇಷಣೆ: ಸಾಮ್ರಾಜ್ಯಶಾಹಿ ಚರಿತ್ರೆಕಾರ ವಿ.. ಸ್ಮಿತ್ ಶಿವಾಜಿಯನ್ನುಒಬ್ಬ ದರೋಡೆಕೋರ ಮತ್ತು ಅವನ ರಾಜ್ಯ ದರೋಡೆ ರಾಜ್ಯಎಂದು ಹೇಳಿದರೆ, ರಾಷ್ಟ್ರೀಯವಾದಿ ಚರಿತ್ರೆಕಾರ ಜಾದುನಾಥ್ ಸರ್ಕಾರ್ ಹೇಳುವಂತೆ ಮಧ್ಯಕಾಲೀನ ಯುಗದಲ್ಲಿಅದೊಂದು ಆದರ್ಶವಾಗಿತ್ತುಎಂದಿದ್ದಾರೆ. ಮಜುಮ್ದಾರರು ಹೇಳುವಂತೆ ಶಿವಾಜಿಯ ಆಡಳಿತ ಮಧ್ಯಕಾಲೀನ ರಾಜರುಗಳ ಆಡಳಿತ ವ್ಯವಸ್ಥೆಗಿಂತ ತೀರ ವಿಭಿನ್ನವಾಗಿತ್ತುಜಿ.ಎಸ್.ಸರ್ದೇಸಾಯಿ ಹೇಳುವ ಹಾಗೆ ಶಿವಾಜಿಯು ಅವನ ಕಾಲದ ಮತ್ತು ಆಧುನಿಕ ಕಾಲದ ಇತಿಹಾಸದಲ್ಲಿ ಅತ್ಯಂತ ಪರಿಣಾಮಕಾರಿ ವ್ಯಕ್ತಿ. ಒಬ್ಬಂಟಿಗನಾಗಿ ತನ್ನ ಹೋರಾಟವನ್ನು ಪ್ರಾರಂಭಿಸಿ ನಂತರ ಇತರರ ಸಹಾಯದಿಂದ ಸೈನ್ಯವನ್ನು ಕಟ್ಟಿ, ಮರಾಠ ಜನರಿಗಾಗಿ ಸ್ವತಂತ್ರ ರಾಜ್ಯವನ್ನು ಸ್ಥಾಪಿಸಿ ರಾಜ್ಯ ಕಟ್ಟುವ ಒಬ್ಬ ನಾಯಕನಾಗಿ ಮೆರೆದಿದ್ದಾನೆ. ಜಾದುನಾಥ್ ಸರ್ಕಾರ್ ಶಿವಾಜಿಯುಹಿಂದೂ ಜನಾಂಗ ಕಂಡುಕೊಂಡ ಕಡೆಯ ಪ್ರಭಾವಶಾಲಿ ಪ್ರವರ್ತಕ ಮತ್ತು ರಾಷ್ಟ್ರ ನಿರ್ಮಾತಎಂದು ಬಣ್ಣಿಸಿದ್ದಾರೆ.

ಪರಾಮರ್ಶನಗ್ರಂಥಗಳು

. ಮಜುಂದಾರ್ ಆರ್.ಸಿ.(ಸಂ.), ೧೯೬೫. ದಿ ಹಿಸ್ಟರಿ ಆಂಡ್ ಕಲ್ಚರ್ ಆಫ್ ಇಂಡಿಯನ್ ಪೀಪಲ್ದಿ ಮರಾಠಾ ಸುಪ್ರಿಮಸಿ, ಭಾರತೀಯ ವಿದ್ಯಾಭವನ ಸಂಪುಟಗಳು, ಸಂಪುಟ ಬಾಂಬೆ:ಭಾರತೀಯ ವಿದ್ಯಾಭವನ.

. ಸರ್ದೇಸಾಯಿ ಜಿ.ಎಸ್., ೧೯೪೯. ಮೇನ್ ಈವೇಂಟ್ಸ್ ಆಫ್ ಮರಾಠಾ ಹಿಸ್ಟರಿ, ಮುಂಬೈ.

. ಸೇನ್ ಎಸ್.ಎನ., ೧೯೭೭. ಅಡ್ಮಿ ನಿಸ್ಟ್ರೇಷನ್ ಸಿಸ್ಟಮ್ ಆಫ್ ದಿ ಮರಾಠಾಸ್, ಕಲ್ಕತ್ತಾ.

. ಸೇನ್ ಎಸ್.ಎನ್., ೧೯೭೯. ಮಿಲಿಟರಿ ಸಿಸ್ಟಮ್ ಆಫ್ ದಿ ಮರಾಠಾಸ್.


Comments

Popular posts from this blog

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಸಾಹಿತ್ಯಾಧಾರಗಳು - Literary Sources

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧