ವಿಜಯನಗರ ಕಾಲದ ಸಾಹಿತ್ಯದ ಕೊಡುಗೆಗಳು

ಸೂಚನೆ: ಇಲ್ಲಿನ ವಿವರಗಳನ್ನು ವಿವಿಧ ಅಂತರ್ಜಾಲದ ಪುಟಗಳಿಂದ ಸಂಗ್ರಹಿಸಿ, ಸಂಕಲಿಸಿ ಕೇವಲ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಇಲ್ಲಿ ನೀಡಲಾಗಿದೆ.


ವಿಜಯನಗರದ ಕಾಲದಲ್ಲಿ ಪಂಡಿತರಿಗೆ. ಕವಿಗಳಿಗೆ ರಾಜಾಶ್ರಯ, ಹೆಚ್ಚು ಮನ್ನಣೆ, ಪ್ರೋತ್ಸಾಹ ದೊರೆತುದರ ಫಲವಾಗಿ ಸಾಹಿತ್ಯಕೃಷಿ ವಿಪುಲವಾಗಿ ನಡೆಯಿತು. ಕಾಲದಲ್ಲಿ ಕನ್ನಡ, ಸಂಸ್ಕೃತಹಾಗೂ ತೆಲುಗು ಭಾಷೆಗಳ ಕೃತಿಗಳು ರಚಿತವಾದುವು. ಸ್ವತಂತ್ರ ಕೃತಿಗಳ ರಚನೆ ಸಂಖ್ಯಾದೃಷ್ಟಿಯಿಂದ ಕಡಿಮೆ ಎಂದು ಹೇಳಬಹುದಾದರೂ ವ್ಯಾಖ್ಯಾನಗ್ರಂಥಗಳು ಗಣನೀಯ ಸಂಖ್ಯೆಯಲ್ಲಿ ಕಂಡುಬರುತ್ತವೆ. ಮೌಲ್ಯದ ದೃಷ್ಟಿಯಿಂದ ಹೆಚ್ಚಿನ ಪುರಸ್ಕಾರ ಸಲ್ಲದಿದ್ದರೂ ಸಾಹಿತ್ಯ ಬೆಳೆವಣಿಗೆಯ ದೃಷ್ಟಿಯಿಂದ ಗಮನಾರ್ಹ ಸಾಧನೆ ಕಾಲದಲ್ಲಾಗಿದೆ ಎನ್ನಬಹುದು.

ಬಾಹುಬಲಿ (ಸು. 1352) ಮತ್ತು ಮಧುರ (ಸು. 1385) - ಕವಿಗಳು 15ನೆಯ ತೀರ್ಥಂಕರನಾದ ಧರ್ಮನಾಥನ ಜೀವನವನ್ನು ಕುರಿತಂತೆ ಸಾಂಪ್ರದಾಯಿಕ ಚಂಪೂ ಶೈಲಿಯಲ್ಲಿ ಕಾವ್ಯವನ್ನು ರಚಿಸಿದ್ದಾರೆ. ಮಂಗರಸ (ಸು. 1508) ನೇಮಿಜಿನೇಶ ಸಂಗತಿ ಮುಂತಾದ ಐದು ಕೃತಿಗಳನ್ನು ರಚಿಸಿದ್ದಾನೆ. ಪಿರಿಯಾಪಟ್ಟಣದ ದೊಡ್ಡಯ್ಯ (ಸು. 1550) ಚಂದ್ರಪ್ರಭಚರಿತೆ ಎಂಬ ಕಾವ್ಯವನ್ನು ರಚಿಸಿದ್ದಾನೆ. ರತ್ನಾಕರವರ್ಣಿ (ಸು. 1557) ಕಾಲದ ದೊಡ್ಡ ಕವಿ. ಈತನ ಭರತೇಶವೈಭವ ಎಂಬತ್ತು ಸಂಧಿಗಳನ್ನೂ ಹತ್ತುಸಾವಿರ ಸಾಂಗತ್ಯ ಪದ್ಯಗಳನ್ನೂ ಉಳ್ಳ ದೀರ್ಘಕಾವ್ಯ. ಸಾಳ್ವ (ಸು. 1550) ಎಂಬ ಕವಿ ಬರೆದ ಭಾರತ ಸಾಳ್ವಭಾರತ ಎಂದೇ ಹೆಸರಾಗಿದೆ. ರಸರತ್ನಾಕರ, ವೈದ್ಯಸಾಂಗತ್ಯ, ಶಾರದಾವಿಲಾಸಗಳು ಈತನ ಇತರೆ ಕೃತಿಗಳು. ಕಾಲದ ಮೂವರು ಕವಿಗಳು ಜೀವಂಧರಚರಿತೆಯನ್ನು ಕಾವ್ಯಕ್ಕಾಗಿ ಬಳಸಿಕೊಂಡಿದ್ದಾರೆ. ಭಾಸ್ಕರ (ಸು. 1424) ರಚಿಸಿರುವ ಜೀವಂಧರಚರಿತೆ ಸಾಲಿನಲ್ಲಿ ಗಮನಾರ್ಹ ಕೃತಿ. ತೆರಕಣಾಂಬಿ ಬೊಮ್ಮರಸ (ಸು. 1485). ಕೋಟೇಶ್ವರ (ಸು. 1500) ಎಂಬ ಕವಿಗಳು ಕ್ರಮವಾಗಿ ಜೀವಂಧರಸಾಂಗತ್ಯ, ಜೀವಂಧರಷಟ್ಪದಿ ಎಂಬ ಕಾವ್ಯಗಳನ್ನು ರಚಿಸಿದ್ದಾರೆ. ಕಲ್ಯಾಣಕೀರ್ತಿಯ (ಸು. 1439) ಜ್ಞಾನಚಂದ್ರಾಭ್ಯುದಯ ಮತ್ತು ಕಾಮನ ಕಥೆ ಗಮನಾರ್ಹ ವಾದವು. ತೆರಕಣಾಂಬಿ ಬೊಮ್ಮರಸನ ಸನತ್ಕುಮಾರನ ಕಥೆ ಮತ್ತು ಬಾಹುಬಲಿಯ (ಸು. 1560) ನಾಗಕುಮಾರನ ಕಥೆ, ಶ್ರುತಕೀರ್ತಿಯ (ಸು. 1567) ವಿಜಯಕುಮಾರಿಯ ಕಥೆ-ಇವು ಹಳೆಯ ಮಾದರಿಗಳನ್ನು ಅನುಸರಿಸಿ ರಚಿತವಾದ ಕೃತಿಗಳು.

ವ್ಯಾಖ್ಯಾನ ಕೃತಿಗಳು ಕನ್ನಡದಲ್ಲಿ ವಿರಳವಾದರೂ 1359ರಲ್ಲಿ ಕೇಶವರ್ಣಿಯು (ಸು. 1359) ನೇಮಿಚಂದ್ರನ ಗೊಮ್ಮಟಸಾರದ ಮೇಲೂ ಅಮಿತಗತಿಯ ಶ್ರಾವಕಾಚಾರದ ಮೇಲೂ ಬರೆದ ವಿವರಣಾತ್ಮಕ ಟೀಕೆಗಳು ಗಮನಾರ್ಹವಾದುವು. ವಿದ್ಯಾನಾಥ (ಸು. 1455) ತನ್ನ ಸಂಸ್ಕೃತ ಗ್ರಂಥವಾದ ಪ್ರಾಯಶ್ಚಿತ್ತಕ್ಕೆ ತಾನೇ ಟೀಕೆಯನ್ನು ರಚಿಸಿದ್ದಾನೆ. ಧರ್ಮಶರ್ಮಾಭ್ಯುದಯದ ಟೀಕೆಯನ್ನು ಬರೆದ ಯಶಃಕೀರ್ತಿಯನ್ನೂ (ಸು. 1500) ಇಲ್ಲಿ ಹೆಸರಿಸಬಹುದು.

ಯಾವ ನಿರ್ದಿಷ್ಟವಾದ ಕಥನಮೌಲ್ಯವನ್ನೂ ಹೊಂದದೆ ಕೇವಲ ತತ್ತ್ವ ಮತ್ತು ಜೈನ ನೀತಿನಿಯಮಗಳನ್ನು ಪ್ರತಿಪಾದಿಸುವ ಮಿಶ್ರಕಾವ್ಯಗ ಳೆಂದು ಗುರುತಿಸಬಹುದಾದ ಕೃತಿಗಳಲ್ಲಿ ಆಯತವರ್ಮನ (ಸು. 1400) ರತ್ನಕರಂಡಕ, ಚಂದ್ರಕೀರ್ತಿಯ (ಸು. 1400) ಪರಮಾಗಮಸಾರ, ಕಲ್ಯಾಣಕೀರ್ತಿ ಮತ್ತು ವಿಜಯಣ್ಣರ ಅನುಪ್ರೇಕ್ಷೆ, ನೇಮಣ್ಣನ (ಸು. 1559) ಜ್ಞಾನಭಾಸ್ಕರಚರಿತ್ರೆ ಇವುಗಳನ್ನು ಹೆಸರಿಸಬಹುದು. ಮಧುರನ ಗೊಮ್ಮಟಸ್ತುತಿ, ಕಲ್ಯಾಣ ಕೀರ್ತಿಯ ಜಿನಸ್ತುತಿ ಇವು ಭಕ್ತಿಪರವಾದ ಜಿನಸ್ತುತಿಗಳಾಗಿವೆ.

ಕಾಲದಲ್ಲಿ ವೀರಶೈವ ಪುರಾಣಗಳ ಕೃಷಿ ವಿಪುಲವಾಗಿ ನಡೆದಿದೆ. ಇದಕ್ಕೆ ಜಕ್ಕಣಾಚಾರ್ಯ ಹಾಗೂ ಲಕ್ಕಣದಂಡೇಶರಂಥ ಕೆಲವು ಸೇನಾಧಿ ಪತಿಗಳ ಪೋಷಣೆ, ಅಲ್ಲದೆ ತೋಂಟದ ಸಿದ್ಧಲಿಂಗಯತಿಗಳ ಮಾರ್ಗದ ರ್ಶನವೂ ಕಾರಣವೆನ್ನಬಹುದು. ವೀರಶೈವ ಪುರಾಣ ಸಾಹಿತ್ಯವನ್ನು ಅರವತ್ತುಮೂರು ಪುರಾತನರ, ಬಸವಾದಿ ತತ್ಸಮಕಾಲೀನರಾದ ನೂತನ ಪುರಾತನರ, ಆಧುನಿಕ ಶರಣರ ಮತ್ತು ವೀರಶೈವ ಧರ್ಮಕ್ಕೆ ಸಂಬಂಧಿ üಸಿದ ವಿವಿಧ ಕಥೆಗಳ ಸಾರಸಂಗ್ರಹಗಳೆಂದು ವಿಂಗಡಿಸಬಹುದು.

ನಂಜುಂಡನ (ಸು. 1525) ಕುಮಾರರಾಮಸಾಂಗತ್ಯ ಕಲ್ಪಿತ ಹಾಗೂ ಸಾಹಸ ಕಥನಗಳೊಡನೆ ಬೆರೆತ ಮಹತ್ತ್ವದ ಐತಿಹಾಸಿಕ ಕೃತಿಯಾಗಿದ್ದು ಸಾಂಗತ್ಯಗ್ರಂಥಗಳಲ್ಲಿ ಉನ್ನತ ಸ್ಥಾನ ಪಡೆದಿದೆ. ಓದುವಗಿರಿಯ (ಸು. 1525) ಮತ್ತು ಬೊಂಬೆಯ ಲಕ್ಕ (ಸು. 1538) ಇಬ್ಬರೂ ರಾಘ ವಾಂಕ ನಿರೂಪಿಸಿದ್ದ ಹರಿಶ್ಚಂದ್ರನ ಕಥೆಯನ್ನು ವಸ್ತುವನ್ನಾಗಿಟ್ಟುಕೊಂಡು ಹಾಡುಗಬ್ಬವಾದ ಸಾಂಗತ್ಯದಲ್ಲಿ ಕೃತಿಗಳನ್ನು ರಚಿಸಿದರು. ಓದುವಗಿರಿಯ ಸಾನಂದಗಣೇಶಸಾಂಗತ್ಯ ಎಂಬ ಇನ್ನೊಂದು ಕೃತಿಯನ್ನು ರಚಿಸಿದ್ದಾನೆ. ರಾಮರಸ ವಿರೂಪಾಕ್ಷ (ಸು.1538) ಹರಿಶ್ಚಂದ್ರಸಾಂಗತ್ಯ ಎಂಬ ಕೃತಿಯನ್ನು ರಚಿಸಿದ್ದಾನೆ. ವೀರಭದ್ರರಾಜನ (ಸು. 1530) ವೀರಭದ್ರ ವಿಜಯ, ಗುರುಲಿಂಗವಿಭುವಿನ (ಸು. 1550) ಭಿಕ್ಷಾಟನಚರಿತೆ, ಬಸವಪುರಾಣದಲ್ಲಿ ಉಕ್ತವಾಗಿದ್ದ ಕಥೆಯನ್ನಾಧರಿಸಿ ರಚಿತವಾದ ಮಲ್ಲಿಕಾರ್ಜನನ (ಸು. 1485) ಶ್ವೇತನ ಸಾಂಗತ್ಯ-ಇವು ಹೆಸರಿಸತಕ್ಕವು. ಅರವತ್ತುಮೂರು ಪುರಾತನರಲ್ಲಿ ಒಬ್ಬನಾದ ಸುಂದರನಂಬಿಯ ಕಥೆಯನ್ನು (ನಂಬಿಯಣ್ಣನ ರಗಳೆ) ಮೊಟ್ಟಮೊದಲಿಗೆ ತಿಳಿಯಾದ ಹಾಗೂ ನಯವಾದ ಹಾಸ್ಯದಿಂದ ಕನ್ನಡದಲ್ಲಿ ಹೇಳಿದವನು ಹರಿಹರ. ಇದೇ ಕಥೆಯನ್ನು ಬೊಮ್ಮರಸ (ಸು. 1450) ಮತ್ತೆ ಹೊಸದಾಗಿ ರಚಿಸಿ ಅದನ್ನು ಸೌಂದರಪುರಾಣವೆಂದು ಕರೆದಿದ್ದಾನೆ. ಸುರಂಗಕವಿ (1500) ತ್ರಿಷಷ್ಟಿಪುರಾತನರ ಚರಿತ್ರೆಯನ್ನು ಚಂಪೂವಿನಲ್ಲಿ ಬರೆದಿದ್ದಾನೆ. ಇದೇ ವಸ್ತುವನ್ನು ಬಳಸಿಕೊಂಡಿರುವ ಕೃತಿಗಳೆಂದರೆ ಗುಬ್ಬಿಯ ಮಲ್ಲಣಾರ್ಯನ (ಸು. 1513) ಭಾವಚಿಂತಾರತ್ನ ಮತ್ತು ಲಿಂಗಕವಿಯ ಚೋಳರಾಜ ಸಾಂಗತ್ಯ. ಮೊದಲನೆಯದು ತಮಿಳಿನ ಅಕ್ಷರವೊಂದರಿಂದ ಸ್ಫೂರ್ತಿಪಡೆದದ್ದು. ಪಂಚಾಕ್ಷರೀ ಮಹಿಮೆಯನ್ನು ಮೆರೆಯುವುದೇ ಕಥೆಯ ಮುಖ್ಯ ಆಶಯ. ವಿರುಪರಾಜ (ಸು. 1519) ಮತ್ತು ಚೇರಮ (ಸು. 1526) ಇಬ್ಬರೂ ಅರವತ್ತುಮೂರು ಪುರಾತನ ರಲ್ಲಿ ಒಬ್ಬನಾದ ಚೇರಮನ ಕಥೆಯನ್ನು ಕಾವ್ಯದ ವಸ್ತುವನ್ನಾಗಿ ಆರಿಸಿ ಕೊಂಡಿದ್ದಾರೆ.

ಬಸವಣ್ಣನವರ ಜೀವನವನ್ನು ಕುರಿತಂತೆ ರಚಿತವಾದ ಗ್ರಂಥಗಳಲ್ಲಿ ಭೀಮಕವಿಯ (ಸು. 1369) ಬಸವಪುರಾಣ ಬಹುಮುಖ್ಯವಾದದ್ದು. ಇದರಲ್ಲಿ ಬಸವಚಾರಿತ್ರದ ಜೊತೆಗೆ ಶೈವಪುರಾತನರ ಹಾಗೂ ಬಸವೇಶ್ವರರ ಸಮಕಾಲೀನರ ಕಥೆಗಳಿವೆ. ಲಕ್ಕಣ್ಣದಂಡೇಶನ (ಸು. 1428) ಶಿವತತ್ತ್ವಚಿಂತಾಮಣಿ, ಇವನ ಅನುಯಾಯಿ ಸಿಂಗಿರಾಜನ (ಸು. 1510) ಅಮಲಬಸವಚಾರಿತ್ರ (ಸಿಂಗರಾಜ ಪುರಾಣ), ಕೆರೆಯ ಪದ್ಮರಸನಿಗೆ ಸಂಬಂಧಿಸಿದ ಪದ್ಮಣಾಂಕನ (ಸು. 1385) ಪದ್ಮರಾಜಪುರಾಣ, ಅಲ್ಲಮಪ್ರಭುವಿಗೆ ಸಂಬಂಧಿಸಿದ ಚಾಮರಸನ (ಸು. 1430) ಪ್ರಭುಲಿಂಗಲೀಲೆ, ವಿರಕ್ತ ತೋಂಟದಾರ್ಯನ (ಸು. 1560) ಪಾಲ್ಕುರಿಕೆ ಸೋಮೇಶ್ವರನ ಪುರಾಣ-ಇವು ಶಿವಶರಣರಿಗೆ ಸಂಬಂಧಿಸಿದ ಕೃತಿಗಳು.

ಹರಿಹರನ ಅನಂತರ ಅಕ್ಕಮಹಾದೇವಿಯ ಜೀವನಚರಿತ್ರೆಯನ್ನು ಬರೆದ ಚೆನ್ನಬಸವಾಂಕನ (ಸು. 1550) ಮಹಾದೇವಿಯಕ್ಕಪುರಾಣ, ತೋಂಟದ ಸಿದ್ಧಲಿಂಗಯತಿಯ ಮಹಾಮಹಿಮೆಗಳನ್ನು ಪ್ರಶಂಸಿಸುವ ಸಿದ್ಧೇಶ್ವರಪುರಾಣ ಮತ್ತು ತೋಂಟದ ಸಿದ್ಧೇಶ್ವರ ಪುರಾಣವೆಂದು ಅಂಕಿತವಾದ ಶಾಂತೇಶನ (ಸು. 1561) ಕೃತಿಗಳು, ಗುಬ್ಬಿಯ ಮಲ್ಲಣಾ ರ್ಯನ (ಸು. 1513) ವೀರಶೈವಾಮೃತ ಮಹಾಪುರಾಣ ಷಟ್ಪದಿ ಛಂದಸ್ಸಿನಲ್ಲಿರುವ ಕೃತಿಗಳು ಕಾಲದಲ್ಲಿ ಬೆಳಕು ಕಂಡವು. ವಚನಕಾರ ರಲ್ಲಿ ತೋಂಟದ ಸಿದ್ಧಲಿಂಗಯತಿ, ಜಕ್ಕಣಾರ್ಯ ಮೊದಲಾದವರು ಕೃತಿಗಳ ಜೊತೆಗೆ ಕೆಲವು ವಚನಗಳನ್ನು ಬರೆದಿದ್ದಾರೆ. ದಿಸೆಯಲ್ಲಿ ಶೂನ್ಯಸಂಪಾದನೆಯನ್ನು ಶ್ರೇಷ್ಠಗ್ರಂಥವೆಂದು ಪರಿಗಣಿಸಬಹುದು.

ಕಾಲದಲ್ಲಿ ಕೆಲವರು ಸಂಸ್ಕೃತ ಗ್ರಂಥಗಳಿಗೆ ವ್ಯಾಖ್ಯಾನಗಳನ್ನು ಬರೆದಿರುವುದಲ್ಲದೆ ಕನ್ನಡ ಕೃತಿಗಳಿಗೂ ವ್ಯಾಖ್ಯಾನಗಳನ್ನು ರಚಿಸಿರುವು ದುಂಟು. ಅವುಗಳಲ್ಲಿ ಗುರುದೇವನಿಂದ (ಸು. 1530) ವ್ಯಾಖ್ಯಾನಿತವಾದ ಸಂಸ್ಕೃತಸ್ತೋತ್ರ, ಭಟ್ಟಭಾಸ್ಕರನ ಯಜುರ್ವೇದ ಭಾಷ್ಯದ ಮೇಲಿನ ಗುರುನಂಜನ (ಸು. 1500) ಕನ್ನಡ ವ್ಯಾಖ್ಯಾನ, ಸಾರಸ್ವತ ವ್ಯಾಕರಣಕ್ಕೆ ಬರೆದ ಚನ್ನವೀರನ ವ್ಯಾಖ್ಯಾನ ಇವುಗಳ ಜೊತೆಗೆ ಶ್ರೀಧರಾಂಕ (ಸು. 1550) ಮತ್ತು ಸಾನಂದ ಶಿವಯೋಗಿ (ಸು. 1480) ಇವರ ಬೃಹದ್ವ್ಯಾಖ್ಯಾನಗಳು ಪ್ರಮುಖವಾದವು. ಮಗ್ಗೆಯ ಮಾಯಿದೇವನ ಶತಕತ್ರಯಕ್ಕೆ ವಿರಕ್ತತೋಂಟದಾರ್ಯ ವ್ಯಾಖ್ಯಾನ ರಚಿಸಿದ್ದಾನೆ.

ವಿಜಯನಗರದ ರಾಜ ಮನೆತನಕ್ಕೆ ಸೇರಿದ ದೇಪರಾಜ (ಸು. 1410) ಸೊಬಗಿನ ಸೋನೆ ಮತ್ತು ಅಮರುಕ ಎಂಬೆರಡು ಕೃತಿಗಳನ್ನು ರಚಿಸಿದ್ದಾನೆ. ಸೊಬಗಿನ ಸೋನೆ ಮೊತ್ತಮೊದಲ ಸಾಂಗತ್ಯಕೃತಿ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಅಮರುಕ ಸಂಸ್ಕೃತ ಗ್ರಂಥದ ಅನುವಾದ.

ಕಾಲದಲ್ಲಿ ವೈಷ್ಣವಧರ್ಮ ಜನಸಾಮಾನ್ಯರ ಮೇಲೆ ಪ್ರಭಾವ ಬೀರಿತು. ಈವರೆಗೂ ದೇವಭಾಷೆ ಎಂದು ತಿಳಿದಿದ್ದ ಸಂಸ್ಕೃತದಲ್ಲಿಯೆ ಕೃತಿಗಳನ್ನು ರಚಿಸುತ್ತಿದ್ದ ಬ್ರಾಹ್ಮಣ ಕವಿಗಳು ದೇಶೀಸಾಹಿತ್ಯದ ಕೃಷಿಗೆ ಕೈಹಾಕಿದರು. ಪವಿತ್ರಗ್ರಂಥಗಳೆನಿಸಿದ ಮಹಾಭಾರತ, ರಾಮಾಯಣ ಮತ್ತು ಭಾಗವತಗಳನ್ನು ದೇಶಭಾಷೆಗಳಿಗೆ ಅನುವಾದ ಮಾಡುವುದರಲ್ಲಿ ನಿರತರಾದರು.

ಕಾಲದ ಮಹತ್ತ್ವದ ಕವಿಗಳಲ್ಲಿ ಕುಮಾರವ್ಯಾಸನದು (ಸು. 1430) ದೊಡ್ಡ ಹೆಸರು. ಈತ ಮಹಾಭಾರತದ ಕಥೆಯನ್ನು ಬಳಸಿ ಕೊಂಡು ಜನಸಾಮಾನ್ಯರಿಗೆ ಮೆಚ್ಚಿಗೆಯಾಗುವಂತೆ ಸರಳವಾಗಿ ಭಾಮಿನೀ ಷಟ್ಪದಿಯಲ್ಲಿ ಕರ್ಣಾಟ ಭಾರತ ಕಥಾಮಂಜರಿ ಎಂಬ ಮಹಾಕಾವ್ಯವನ್ನು ರಚಿಸಿದ. ಇದು ಗದುಗಿನ ಭಾರತ, ಕುಮಾರವ್ಯಾಸ ಭಾರತ ಎಂಬ ಹೆಸರುಗಳಲ್ಲಿ ಪ್ರಸಿದ್ಧವಾಗಿದೆ. ಮಹಾಭಾರತದ ಕೊನೆಯ ಎಂಟು ಪರ್ವಗಳ ಕಥೆಯನ್ನು ಕೃಷ್ಣದೇವರಾಯನ ಆಸ್ಥಾನದಲ್ಲಿದ್ದ ತಿಮ್ಮಣ್ಣ ಎಂಬ ಕವಿ ಕನ್ನಡಕ್ಕೆ ತಂದಿದ್ದಾನೆ. ಚಾಯಣ ಎಂಬ ಹೆಸರಿನಿಂದ ಸುಕುಮಾರಭಾರತಿ (ಸು. 1550) ರಚಿಸಿದ ಮಹಾಭಾರತದ ಅನುವಾದ ವೊಂದಿದ್ದು ಅದು ಪೂರ್ಣವಾಗಿ ಲಭ್ಯವಾಗಿಲ್ಲ. ರಾಮಾಯಣಕ್ಕೆ ಸಂಬಂಧಿ ಸಿದ ಕೃತಿಗಳಲ್ಲಿ ಕುಮಾರವಾಲ್ಮೀಕಿಯ (ಸು. 1550) ತೊರವೆ ರಾಮಾಯಣ ಬಹುಪ್ರಖ್ಯಾತವಾದುದು. ಇದೇ ಕಾಲದಲ್ಲಿ ಬತ್ತಲೇಶ್ವರನಿಂದ ರಚಿತವಾದ ಕೌಶಿಕರಾಮಾಯಣವೂ ಗಮನಾರ್ಹವಾದ ಕೃತಿ.

ಕಾಲದ ಅನೇಕ ಕವಿಗಳು ಭಾಗವತವನ್ನು ಕನ್ನಡಕ್ಕೆ ತಂದರು. ನಾರಾಯಣ (ಸು. 1450) ಭಾಗವತವನ್ನು ಗದ್ಯಕ್ಕೆ ಭಾವಾನುವಾದ ಮಾಡಿರುವಂತೆ ತಿಳಿದುಬರುತ್ತದೆಯಾದರೂ ಕೃತಿ ಲಭ್ಯವಿಲ್ಲ. ನಿತ್ಯಾತ್ಮಶುಕ ನೆಂದು ಪ್ರಸಿದ್ಧನಾದ ಸದಾನಂದಯೋಗಿ (ಸು. 1530) ಭಾಗವತವನ್ನು ಪದ್ಯದಲ್ಲಿ ರಚಿಸಿದ್ದಾನೆ. ಕೃತಿಯಲ್ಲಿ ಅನೇಕ ಪ್ರಕ್ಷೇಪಗಳಿವೆ ಎಂಬುದು ವಿದ್ವಾಂಸರ ಅಭಿಮತ.

ಕಾಲದ ಹರಿದಾಸರಲ್ಲಿ ಕನಕದಾಸರದು ದೊಡ್ಡ ಹೆಸರು. ಇವರು ಪದಗಳ ಜೊತೆಗೆ ನಳಚರಿತ್ರೆ, ಮೋಹನತರಂಗಿಣಿ, ರಾಮಧಾನ್ಯ ಚರಿತ್ರೆ, ಹರಿಭಕ್ತಿಸಾರ ಎಂಬ ಕೃತಿಗಳನ್ನು ರಚಿಸಿದ್ದಾರೆ. ಕನಕದಾಸರಲ್ಲದೆ ಶ್ರೀಪಾದರಾಯರು (ಸು. 1500), ವ್ಯಾಸರಾಯರು (ಸು. 1520) ಮತ್ತು ಪುರಂದರದಾಸರು (ಸು. 1540) ಮೊದಲಾದವರು ಹರಿಸರ್ವೋ ತ್ತಮತ್ವವನ್ನೂ ವಿಷ್ಣುಮಹಿಮೆಯನ್ನೂ ಕುರಿತಂತೆ ಕೀರ್ತನೆಗಳನ್ನು ರಚಿಸಿದ್ದಾರೆ. ಇವು ದಾಸರ ಪದಗಳೆಂದೇ ಪ್ರಸಿದ್ಧವಾಗಿವೆ.

ಕಾಲದ ಅನೇಕ ಶತಕಗ್ರಂಥಗಳು ರಚಿತವಾದವು. ಮಗ್ಗೆಯ ಮಾಯಿದೇವ (ಸು. 1430) ಪ್ರಾರಂಭದ ಶತಕಕಾರ. ಚಂದ್ರ (ಸು. 1430), ಗುಮ್ಮಟಾರ್ಯ (ಸು. 1500), ಸಿರಿನಾಮಧೇಯ (ಸು. 1560), ಚನ್ನಮಲ್ಲಿಕಾರ್ಜುನ (ಸು. 1560) ಮೊದಲಾದವರು ಶತಕಗಳನ್ನು ರಚಿಸಿದ್ದಾರೆ.

ಲೌಕಿಕ ವಿದ್ಯಾಶಾಸ್ತ್ರಗಳಾದ, ಪಶುವೈದ್ಯ, ಅಶ್ವವೈದ್ಯ, ಅಲಂಕಾರ, ನಿಘಂಟು ಜ್ಯೋತಿಷ, ಕಾಮಶಾಸ್ತ್ರ, ಪಾಕಶಾಸ್ತ್ರಗಳಿಗೆ ಸಂಬಂಧಿಸಿದ ಅನೇಕ ಗ್ರಂಥಗಳೂ ಕಾಲದಲ್ಲಿ ರಚಿತವಾಗಿವೆ. ಶ್ರೀಧರದೇವನ (ಸು. 1500) ವೈದ್ಯಾಮೃತ, ಸಾಳ್ವನ (ಸು. 1550) ವೈದ್ಯಸಾಂಗತ್ಯ, ಮಂಗರಾಜನ (ಸು. 1360) ಖಗೇಂದ್ರ ಮಣಿದರ್ಪಣ ವೈದ್ಯಶಾಸ್ತ್ರಕ್ಕೆ ಸಂಬಂಧಿಸಿದ ಗ್ರಂಥಗಳು. ಅಭಿನವ ಚಂದ್ರ (ಸು. 1400) ಮತ್ತು ಬಾಚರಸ (ಸು. 1500) ಅಶ್ವಶಾಸ್ತ್ರಕ್ಕೆ ಸಂಬಂಧಿಸಿದ ಗ್ರಂಥಗಳನ್ನು ರಚಿಸಿದ್ದಾರೆ.

ಅಲಂಕಾರಶಾಸ್ತ್ರವನ್ನು ಕುರಿತಂತೆ ಸಾಳ್ವನ ರಸರತ್ನಾಕರ ಮತ್ತು ಶಾರದಾವಿಲಾಸ, ಈಶ್ವರಕವಿಯ (ಸು. 1550) ಕವಿಜಿಹ್ವಾಬಂಧನ, ದಂಡಿಯ ಕಾವ್ಯಾದರ್ಶದ ಅಕ್ಷರಶಃ ಭಾಷಾಂತರವಾದ ಮಾಧವನ (ಸು. 1500) ಮಾಧವಾಲಂಕಾರಗಳು ಪ್ರಮುಖವಾದುವು. ಅಭಿನವ ಮಂಗರಾಜನ (ಸು. 1308) ಮಂಗಾಭಿಧಾನ, ಬೊಮ್ಮರಸನ (ಸು. 1450) ಚತುರಾಸ್ಯನಿಘಂಟು, ಲಿಂಗಮಂತ್ರಿಯ (ಸು. 1530) ಕಬ್ಬಿಗರ ಕೈಪಿಡಿ, ವಿರಕ್ತತೋಂಟದಾರ್ಯನ (ಸು. 1560) ಕರ್ಣಾಟಕಶಬ್ದಮಂಜ ರಿ-ಇವು ನಿಘಂಟುಗಳು. ಶುಭಚಂದ್ರನ ನರಪಿಂಗಲಿ, ಲಕ್ಷ್ಮಣಾಂಕನ ಶಕುನಸಾರ, ಚಾಕರಾಜನ ಶಕುನಪ್ರಪಂಚ, ಗಂಗಾಧರನ (ಸು. 1550) ರಟ್ಟಜಾತಕಗಳು ಜ್ಯೋತಿಷ ಹಾಗೂ ಶಕುನಗಳನ್ನು ಕುರಿತ ಗ್ರಂಥಗಳು. ಕಲ್ಲರಸನ (ಸು. 1450) ಜನವಶ್ಯ ಕಾಮಶಾಸ್ತ್ರಕ್ಕೆ ಸಂಬಂಧಿಸಿದ ಕೃತಿ. ಮೂರನೆಯ ಮಂಗರಸನ (ಸು. 1508) ಸೂಪಶಾಸ್ತ್ರ ಪಾಕಶಾಸ್ತ್ರಕ್ಕೆ ಸಂಬಂಧಿಸಿದ ಪ್ರಸಿದ್ಧ ಕೃತಿ.

ಸಂಸ್ಕೃತ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಕಾಲದ ಉತ್ತಮ ಕೃತಿ ಎಂದರೆ ವೇದಾರ್ಥ ಪ್ರಕಾಶ. ವೇದಗಳಿಗೆ ಸ್ಪಷ್ಟವಾದ ಸರಳವಾದ ವ್ಯಾಖ್ಯಾನ ಬರೆಯುವ ಕಾರ್ಯವನ್ನು ಸಾಯಣರಿಗೆ ವಹಿಸಲಾಯಿತು. ಅವರು ಪಂಚಾಗ್ನಿಮಾಧವ, ನರಹರಿ ಸೋಮಯಾಜಿ, ನಾರಾಯಣ ವಾಜಪೇಯಿ, ನಾಗಾಭರಣ, ವಾಮನಭಟ್ಟ ಮೊದಲಾದವರ ನೆರವಿನಿಂದ ವೇದಗಳಿಗೆ ಭಾಷ್ಯಗಳನ್ನು ರಚಿಸಿದರು. ಯಜ್ಞಗಳಲ್ಲಿ ನಡೆಸುವ ಕರ್ಮಕ್ರಮಗಳನ್ನು ವಿವರಿಸುವ ಯಜ್ಞತಂತ್ರಸುಧಾನಿಧಿ ಎಂಬ ಕೈಪಿಡಿ ಇಮ್ಮಡಿ ಹರಿಹರನ ಕಾಲದಲ್ಲಿ ರಚಿತವಾಯಿತು. ಅದೇ ರೀತಿ ಚೌಂಡಪಾರ್ಯ (ಸು. 1404) ವೈದಿಕ ಕರ್ಮತಂತ್ರಗಳಿಗೆ ಸಂಬಂಧಿಸಿದಂತೆ ಪ್ರಯೋಗರತ್ನಮಾಲಾ ಅಥವಾ ಆಪಸ್ತಂಭ ಅಧ್ವರ ತಂತ್ರವ್ಯಾಖ್ಯಾ ಎಂಬ ಕೃತಿಯನ್ನು ರಚಿಸಿದ. ಪರಾಶರಮಾಧವೀಯವು ಪರಾಶರಸ್ಮøತಿಗೆ ವಿದ್ಯಾರಣ್ಯರು ರಚಿಸಿದ ವ್ಯಾಖ್ಯಾನ. ಬುಕ್ಕರಾಜನ ಅಪೇಕ್ಷೆಯ ಪ್ರಕಾರ ಸಾಯಣರು ಪುರುಷಾರ್ಥ ಸುಧಾನಿಧಿಯನ್ನು ರಚಿಸಿದರು. ದೇವಣಭಟ್ಟ (ಸು. 1445) ಧರ್ಮಶಾಸ್ತ್ರಕ್ಕೆ ಸ್ಮøತಿಚಂದ್ರಿಕೆಯನ್ನು ಬರೆದ. ಅಂಥದೇ ಇನ್ನೊಂದು ಗ್ರಂಥ ಸ್ಮøತಿಕೌಸ್ತುಭ. ಇದರ ಕರ್ತೃ ನರಹರಿ. ಮಾಧವ ಮಂತ್ರಿ ಸೂತಸಂಹಿತೆಯ ವ್ಯಾಖ್ಯಾನವನ್ನು ರಚಿಸಿ ಅದನ್ನು ತಾತ್ಪರ್ಯ ದೀಪಿಕಾ ಎಂದು ಕರೆದ. ಕೃಷ್ಣದೇವರಾಯನ ಪ್ರೇರಣೆಯಿಂದ ಈಶ್ವರದೀಕ್ಷಿತ ರಾಮಾಯಣದ ಮೇಲೆ ಎರಡು ವ್ಯಾಖ್ಯಾನಗಳನ್ನು ಬರೆದ.

ವ್ಯಾಸರಾಯರ ಸಮಕಾಲೀನನಾದ ವರದರಾಜಾಚಾರ್ಯ ಆನಂದತೀ ರ್ಥರ ಮಹಾಭಾರತ ತಾತ್ಪರ್ಯನಿರ್ಣಯಕ್ಕೆ ವರದರಾಜೀಯ ಎಂಬ ವ್ಯಾಖ್ಯಾನವನ್ನು ಬರೆದಿದ್ದಾನೆ. ಉಡುಪಿಯ ಪೇಜಾವರ ಮಠಾಧಿಪತಿ ಯಾದ ವಿಜಯಧ್ವಜತೀರ್ಥರು (1378-1439) ಭಾಗವತಕ್ಕೆ ವ್ಯಾಖ್ಯಾನವನ್ನು ರಚಿಸಿದರು. ಶಂಕರವಿಜಯ ಮತ್ತು ರಾಜಕಾಲನಿರ್ಣಯ ಎಂಬೆರಡು ಗ್ರಂಥಗಳನ್ನೂ ವಿದ್ಯಾರಣ್ಯರು ರಚಿಸಿರುವರೆಂಬ ಅಭಿಪ್ರಾಯವಿದೆ. ಇವು ಕ್ರಮವಾಗಿ ಅದ್ವೈತಾಚಾರ್ಯರಾದ ಶಂಕರರ ಜೀವನ ಚರಿತ್ರೆಯನ್ನೂ ವಿಜಯನಗರ ಚರಿತ್ರೆಯನ್ನೂ ನಿರೂಪಿಸುತ್ತವೆ. ಸಾಯಣರ ಸೋದರರಲ್ಲೊಬ್ಬನಾದ ಭೋಗನಾಥ ಉದಾಹರಣಮಾಲಾ, ರಾಮೋಲ್ಲಾಸ, ತ್ರಿಪುರವಿಜಯ, ಶೃಂಗಾರಮಂಜರಿ, ಮಹಾಗಣಪತಿಸ್ತವ ಮತ್ತು ಗೌರೀನಾಥಾಷ್ಟಕಗಳೆಂಬ ಆರು ಕೃತಿಗಳನ್ನು ರಚಿಸಿರುವುದಾಗಿ ತಿಳಿದುಬರುತ್ತದೆ. ಆದರೆ ಕೃತಿಗಳು ಉಪಲಬ್ಧವಿಲ್ಲ.

ಗಂಗಾದೇವಿ, ಕಾಮಾಕ್ಷಿ, ತಿರುಮಲಾಂಬಾ ಎಂಬ ಸ್ತ್ರೀಯರು ಸಂಸ್ಕೃತ ಸಾಹಿತ್ಯಕ್ಕೆ ಅಮೂಲ್ಯವಾದ ಸೇವೆ ಸಲ್ಲಿಸಿದ್ದಾರೆ. ಗಂಗಾದೇವಿಯ ಮಧುರಾ ವಿಜಯಮ್ ಅಥವಾ ವೀರಕಂಪಣರಾಯಚರಿತೆ ಎಂಬ ಕಾವ್ಯ ಆಕೆಯ ಪತಿಯಾದ ಕಂಪಣರಾಯನ ವಿಜಯಯಾತ್ರೆಯನ್ನು ಸರಳ ಸುಂದರ ಶೈಲಿಯಲ್ಲಿ ನಿರೂಪಿಸಿದೆ. ವೇದಾಂತದೇಶಿಕರೆನಿಸಿದ ವೆಂಕಟನಾಥರ ಹಂಸಸಂದೇಶ, ಪಾದುಕಾಸಹಸ್ರಗಳು, ಮಾಧವನ ನರಕಾಸುರವಿಜಯ, ಗಂಗಾಧರನ ಗಂಗದಾಸಪ್ರತಾಪವಿಲಾಸ, ಸಾಳುವ ನರಸಿಂಹ ರಚಿಸಿದನೆನ್ನ ಲಾದ ರಾಮಾಭ್ಯುದಯ, ಕೃಷ್ಣದೇವರಾಯ ಸ್ವತಃ ರಚಿಸಿದನೆನ್ನಲಾದ ಸತ್ಯವಧೂಪ್ರೀಣನ, ಸಕಲಕಥಾಸಾರಸಂಗ್ರಹ, ರಸಮಂಜರಿ ಮತ್ತು ಜ್ಞಾನಚಿಂತಾಮಣಿ ಎಂಬ ಕಾವ್ಯಗಳು, ಇವನ ಆಸ್ಥಾನದಲ್ಲಿದ್ದ ದಿವಾಕರನ ಭಾರತಾಮೃತ, ಅಭಿನವಕಾಮಾಕ್ಷಿಯ ಅಭಿನವರಾಮಾಭ್ಯುದಯ, ತಿರುಮಲಾಂಬೆಯ ವರದಾಂಬಿಕಾ ಪರಿಣಯ ಎಂಬ ಚಂಪೂಕಾವ್ಯ, ಸ್ವಯಂಭೂವಿನ ಮಗನೂ ಎರಡನೆಯ ರಾಜನಾಥನ ಸೋದರಪುತ್ರನೂ ಆದ ಶಿವಸೂರ್ಯನ ಪಾಂಡವಾಭ್ಯುದಯ, ಡಿಂಡಿಮ ವಂಶದ ಮೂರನೆಯ ರಾಜನಾಥನ ಅಚ್ಯುತರಾಯಾಭ್ಯುದಯ, ಎರಡನೆಯ ಅರುಣಗಿರಿನಾಥನ ಸೋದರ ಪುತ್ರನಾದ ಸ್ವಯಂಭೂನಾಥನ ಕೃಷ್ಣವಿಲಾಸ ಮೊದಲಾದ ಕೃತಿಗಳು ಇಲ್ಲಿ ಉಲ್ಲೇಖನೀಯ.

ಸೋದೆಮಠದ ಪೀಠಾಧಿಪತಿಗಳಾಗಿದ್ದ ವಾದಿರಾಜರು 16ನೆಯ ಶತಮಾನದ ಕಡೆಯ ಭಾಗದಲ್ಲಿ ರುಕ್ಮಿಣೀಶವಿಜಯ, ತೀರ್ಥಪ್ರಬಂಧ ಎಂಬ ಗ್ರಂಥಗಳನ್ನು ರಚಿಸಿದ್ದಾರೆ. ವಾದಿರಾಜರ ಶಿಷ್ಯನಾದ ನರಹರಿ, ಶ್ರೀಹರ್ಷನ ನೈಷಧ ಮಹಾಕಾವ್ಯದ ವ್ಯಾಖ್ಯಾನವಾಗಿ ನೈಷಧದೀಪಿಕೆಯನ್ನು ಬರೆದಿದ್ದಾನೆ. ಶಂಕರಾಚಾರ್ಯರ ಸೌಂದರ್ಯಲಹರಿಗೆ ಅರುಣಗಿರಿನಾಥ ಬರೆದಿರುವ ವ್ಯಾಖ್ಯಾನ ಸಹ ಸ್ಮರಣೀಯ.

ಅನಂತಭಟ್ಟ (ಸು. 1500) ಭಾರತಚಂಪೂ ಕಾವ್ಯದ ಕರ್ತೃ. ಆತನ ಸೋದರ ಪುತ್ರನಾದ ಸೋಮನಾಥನ ವ್ಯಾಸಯೋಗೀಚರಿತವೆಂಬ ಚಂಪೂ ಗ್ರಂಥದಲ್ಲಿ ವ್ಯಾಸರಾಯರ ಜೀವನಚರಿತ್ರೆಯನ್ನು ನಿರೂಪಿಸಿದ್ದಾನೆ. ಮುಮ್ಮಡಿ ರಾಜನಾಥನು ಶ್ರೀಕೃಷ್ಣನ ಚರಿತ್ರೆಯನ್ನು ನಿರೂಪಿಸುವ ಭಾಗವತಚಂಪೂವನ್ನು ರಚಿಸಿ ದೊರೆ ಅಚ್ಯುತರಾಯನಿಗೆ ಅರ್ಪಿಸಿದ್ದಾನೆ. ಸ್ವಯಂಭೂನಾಥ ಶಂಕರಾನಂದ ಚಂಪೂವನ್ನು ರಚಿಸಿದ್ದಾನೆ. ಅವನ ಸೋದರ ಗುರುರಾಮ ಹರಿಶ್ಚಂದ್ರ ಚಂಪೂವಿನ (ಸು. 1610) ಕರ್ತೃ.

ಮಹಾನಾಟಕ ಸುಧಾನಿಧಿ ಎಂಬುದು ದೊರೆ ಪ್ರೌಢದೇವರಾಯನ (1424-46) ಕೃತಿ. ಕೃತಿಯ ಕರ್ತೃತ್ವದ ವಿಚಾರದಲ್ಲಿಯೂ ಭಿನ್ನಾಭಿ ಪ್ರಾಯವಿದೆ. ಕೃಷ್ಣದೇವರಾಯನ ಮಂತ್ರಿ ಸಾಳುವ ತಿಮ್ಮ ಅಗಸ್ತ್ಯರಚಿತ ಚಂಪೂ ಭಾರತಕ್ಕೆ ಮನೋಹರ ಎಂಬ ವ್ಯಾಖ್ಯಾನವನ್ನು ರಚಿಸಿದ. ಅಗಸ್ತ್ಯ ಓರಂಗಲ್ಲಿನ ಪ್ರತಾಪರುದ್ರನ ಆಸ್ಥಾನಕವಿಯಾಗಿದ್ದ ನೆಂದು ತಿಳಿದುಬರುತ್ತದೆ.

ವಾಮನಭಟ್ಟ ಬಾಣನು ಶೃಂಗಾರಭೂಷಣಬಾಣ ಎಂಬ ಲಘುನಾಟಕವನ್ನು ವಿರೂಪಾಕ್ಷನ ಉತ್ಸವಕಾಲದಲ್ಲಿ ಬರೆದ. ಇದು ಸಭಿಕರ ಮನರಂಜನೆಗೆ, ಪ್ರದರ್ಶಿಸುವುದಕ್ಕಾಗಿ ರಚಿಸಿದಂತೆ ತಿಳಿದುಬರುತ್ತದೆ. ಕೃಷ್ಣಮಿಶ್ರನ ಪ್ರಬೋಧಚಂದ್ರೋದಯದ ಮಾದರಿಯಲ್ಲಿ ವೆಂಕಟನಾಥ ಸಂಕಲ್ಪ ಸೂರ್ಯೋದಯವೆಂಬ ತಾತ್ತ್ವಿಕ ನಾಟಕವನ್ನು ರಚಿಸಿದ್ದಾನೆ.

ದೊರೆ ಕೃಷ್ಣದೇವರಾಯನ ಜಾಂಬವತೀಪರಿಣಯ ಮತ್ತು ಉಷಾಪರಿ ಣಯಗಳು, ಮಲ್ಲಿಕಾರ್ಜುನನ ಸತ್ಯಭಾಮಾಪರಿಣಯ, ಗುರುರಾಯನ ಸುಭದ್ರಾಧನಂಜಯ ಮತ್ತು ರತ್ನೇಶ್ವರಪ್ರಸಾದ ಇವು ನಾಟಕಗಳು. ನಾದಿಂಡ್ಳಗೋಪನು ಪ್ರಬೋಧಚಂದ್ರೋದಯ ಎಂಬ ನಾಟಕಕ್ಕೆ ವ್ಯಾಖ್ಯಾನವನ್ನು ಬರೆದಿದ್ದಾನೆ.

ಅಲಂಕಾರ, ಸಂಗೀತ ಮತ್ತು ಇತರ ಶಾಸ್ತ್ರ ಗ್ರಂಥಗಳು ಕಾಲ ದಲ್ಲಿ ವಿಪುಲವಾಗಿ ರಚನೆಗೊಂಡವು. ಸಾಯಣರ ಅಲಂಕಾರಸುಧಾನಿಧಿಯ ಸಂಪೂರ್ಣ ಹಸ್ತಪ್ರತಿ ದೊರೆತಿಲ್ಲ. ಹತ್ತು ಉನ್ವೇಷ(ಅಧ್ಯಾಯ)ಗಳಿದ್ದಂತೆ ತೋರುವ ಇದರಲ್ಲಿ ಉತ್ತಮವಾಗಿರುವ ಉದಾಹರಣಾ ಪದ್ಯಗಳೆಲ್ಲವೂ ಭೋಗನಾಥನ ಉದಾಹರಣಮೂಲದಿಂದ ತೆಗೆದುಕೊಳ್ಳಲಾಗಿದ್ದು ಅವೆಲ್ಲವೂ ಸಾಯಣರ ಪ್ರಶಂಸಾಪರವಾದವೇ ಆಗಿವೆ. ಅಲಂಕಾರಶಾಸ್ತ್ರಕ್ಕೆ ಸಂಬಂಧಿಸಿದ ಇನ್ನೊಂದು ಗ್ರಂಥ ರಸಮಂಜರಿ ಕೃಷ್ಣದೇವರಾಯನದೆಂಬ ಪ್ರತೀತಿ ಇದೆ. ನರಹರಿಯೂ ಕಾವ್ಯಪ್ರಕಾಶಕ್ಕೆ ಒಂದು ವ್ಯಾಖ್ಯಾನವನ್ನು ಬರೆದಿದ್ದಾನೆ. ಸಾಳುವ ಗೋಪತಿಪ್ಪಭೂಪಾಲನು ವಾಮನನ ಕಾವ್ಯಾಲಂಕಾ ರಸೂತ್ರವೃತ್ತಿಗೆ ಕಾಮಧೇನು ಎಂಬ ವ್ಯಾಖ್ಯಾನವನ್ನು ಬರೆದಿದ್ದಾನೆ. ಕೃತಿ ಅಲಂಕಾರಶಾಸ್ತ್ರಕ್ಕೊಂದು ಪ್ರಮುಖ ಕೊಡುಗೆ.

ಸಂಗೀತಕ್ಕೆ ಸಂಬಂಧಿಸಿದ ವಿದ್ಯಾರಣ್ಯರೇ ರಚಿಸಿದರೆಂದು ಹೇಳುವ ಸಂಗೀತಸಾರ ಎಂಬ ಕೃತಿ, ಗೋಪತಿಪ್ಪಭೂಪಾಲನ ತಾಳದೀಪಿಕಾ ಮತ್ತು ದೇವಣ್ಣಭಟ್ಟನ (ಸು. 1445) ಸಂಗೀತಮುಕ್ತಾವಳೀ ಇವು ಸಂಗೀತಶಾಸ್ತ್ರಗ್ರಂಥಗಳು. ಕೃಷ್ಣದೇವರಾಯನ ಆಸ್ಥಾನದಲ್ಲಿ ನಾಟ್ಯಾ ಚಾರ್ಯನಾಗಿದ್ದು ಅಭಿನವಭರತನೆಂದು ಪ್ರಸಿದ್ಧಿಯನ್ನು ಪಡೆದಿದ್ದ ಲಕ್ಷ್ಮೀನಾರಾಯಣನು ಸಂಗೀತ ಸೂರ್ಯೋದಯವನ್ನೂ ಕಲ್ಲರಸನು ಶಾಙ್ರ್ಗದೇವನ ಸಂಗೀತರತ್ನಾಕರಕ್ಕೆ ಕಲಾನಿಧಿ ಎಂಬ ವ್ಯಾಖ್ಯಾನವನ್ನೂ ರಚಿಸಿದ್ದಾರೆ.

ಇಮ್ಮಡಿ ದೇವರಾಯನಿಂದ ರಚಿತವಾದ ರತಿರತ್ನಪ್ರದೀಪಿಕಾ ಕಾಮಶಾಸ್ತ್ರಕ್ಕೆ ಸಂಬಂಧಿಸಿದ ಕೃತಿ. ಇದರಲ್ಲಿ ಏಳು ಅಧ್ಯಾಯಗಳಿವೆ. ಕಾಮಶಾಸ್ತ್ರ ಮತ್ತು ಕಾಮಕಲೆ ಇದರ ವಸ್ತು. ಆಯುರ್ವೇದಸುಧಾನಿಧಿ ಸಾಯಣ ರಚಿತವಾದ ಒಂದು ವೈದ್ಯಗ್ರಂಥ. ಲಕ್ಷ್ಮಣಪಂಡಿತನೂ ವೈದ್ಯರಾಜವಲ್ಲಭ ಎಂಬ ವೈದ್ಯ ಗ್ರಂಥವನ್ನು ರಚಿಸಿದ್ದಾನೆ.

ಸಾಯಣರ ಧಾತುವೃತ್ತಿ ವ್ಯಾಕರಣಕ್ಕೆ ಸಂಬಂಧಿಸಿದ ಒಂದು ಗಮನಾರ್ಹ ಗ್ರಂಥ. ಇದು ಪಾಣಿನಿಯ ಧಾತುಪಾಠದ ಮೇಲಿನ ಒಂದು ವ್ಯಾಖ್ಯಾನ. ವಿದ್ಯಾರಣ್ಯರ ಕಾಲಮಾಧವ ಎಂಬ ಕೃತಿ ಕಾಲ, ಅದರ ಸ್ವಭಾವ, ಅದರ ವಿಭಾಗಗಳನ್ನು ಕುರಿತಂತೆ ವಿವರಣೆ ನೀಡುತ್ತದೆ. ವಿದ್ಯಾಮಾಧವಸೂರಿ (14ನೆಯ ಶತಮಾನ) ಎಂಬ ಖಗೋಳಶಾಸ್ತ್ರಜ್ಞ ಮುಹೂರ್ತದರ್ಶನ ಎಂಬ ಗ್ರಂಥದ ಕರ್ತೃ. ಇದೊಂದು ಜ್ಯೋತಿಷ ಗ್ರಂಥ. ಇದಕ್ಕೆ ವಿದ್ಯಾಮಾಧವೀಯ ಎಂಬ ಹೆಸರೂ ಇದೆ. ಇವನ ಮಗ ವಿಷ್ಣುಸೂರಿ (ಸು. 1363) ವಿದ್ಯಾಮಾಧವೀಯಕ್ಕೆ ಮುಹೂರ್ತ ದೀಪಿಕಾ ಎಂಬ ವಾಖ್ಯಾನವನ್ನು ಬರೆದಿದ್ದಾನೆ. ಲೊಲ್ಲ ಲಕ್ಷ್ಮೀಧರ ಜ್ಯೋತಿಷ ದರ್ಪಣದ ಒಂದು ಭಾಗವನ್ನು ರಚಿಸಿದ್ದಾನೆ. ಇದು ಖಗೋಳ ಶಾಸ್ತ್ರಕ್ಕೆ ಸಂಬಂಧಿಸಿದ ವಿಶ್ವಕೋಶ ಮಾದರಿಯ ಗ್ರಂಥವಾಗಿ. ಸರ್ವದರ್ಶನ ಸಂಗ್ರಹ ಎಂಬ ಕೃತಿಯ ಕರ್ತೃತ್ವದ ಬಗೆಗೆ ಭಿನ್ನಾಭಿಪ್ರಾಯವಿದ್ದರೂ ಇದು ವೇದಾಂತಕ್ಕೆ ಸಂಬಂಧಿಸಿದ ಉತ್ತಮ ಕೃತಿಯಾಗಿದ್ದು ಬಹುಶಃ ಸಾಯಣಕೃತ ಇರಬಹುದೆಂದು ನಂಬಲಾಗಿದೆ.

ವಿದ್ಯಾರಣ್ಯರ ಗುರು ಭಾರತೀತೀರ್ಥರು ಬ್ರಹ್ಮಸೂತ್ರಗಳನ್ನು ಸಂಗ್ರಹಿಸಿ, ವೈಯಾಸಿಕ ನ್ಯಾಯಮಾಲಾ ಎಂಬ ಕೃತಿಯನ್ನೂ ಅದಕ್ಕೆ ಗದ್ಯದಲ್ಲಿ ವಿಸ್ತಾರ ಎಂಬ ವ್ಯಾಖ್ಯಾನವನ್ನೂ ರಚಿಸಿದ್ದಾರೆ. ಸರಳವಾದ ಶ್ಲೋಕಗಳಲ್ಲಿ ಪ್ರತಿಯೊಂದು ಅಧಿಕರಣದಲ್ಲಿ ಅಡಕವಾಗಿರುವ ವಿಷಯಗಳನ್ನು ಸಂಗ್ರಹಿಸಿರುವುದಲ್ಲದೆ, ವಿದ್ಯಾರಣ್ಯರು ಜೀವನ್ಮುಕ್ತಿವಿವೇಕ ಎಂಬ ಕೃತಿಯ ಕರ್ತೃ. ಭಾರತೀತೀರ್ಥರು ಹಾಗೂ ವಿದ್ಯಾರಣ್ಯರಿಬ್ಬರೂ ಸೇರಿ ಬರೆದಿರು ವಂತೆ ತೋರುವ ಪಂಚದಶಿ ಎಂಬ ಕೃತಿಯಲ್ಲಿ ಅದ್ವೈತವೇದಾಂತದ ಸಿದ್ಧಾಂತಗಳಿವೆ. ಜೀವನ್ಮುಕ್ತಿವಿವೇಕದಲ್ಲಿ ಜೀವನ್ಮುಕ್ತಿಯನ್ನು ಕುರಿತು ವಿವೇಚನೆ ಇದೆ. ಅದರೊಂದಿಗೆ ಪ್ರಾಸಂಗಿಕವಾಗಿ ಸಂನ್ಯಾಸ ಮತ್ತು ವಿದೇಹಮುಕ್ತಿಗಳ ವಿಷಯದ ಚರ್ಚೆಯನ್ನೂ ಮಾಡಲಾಗಿದೆ. ಅನುಭೂತಿ ಪ್ರಕಾಶದಲ್ಲಿ ವಿದ್ಯಾರಣ್ಯರು ಉಪನಿಷತ್ತುಗಳ ಉಪದೇಶವನ್ನು ಸಂಗ್ರಹವಾಗಿ ಹೇಳಿದ್ದಾರೆ. ವಿವರಣಪ್ರಮೇಯ ಸಂಗ್ರಹ ಕೂಡ ವಿದ್ಯಾರಣ್ಯರಚಿತ ಮತ್ತೊಂದು ಕೃತಿ. ಇದು ಪ್ರಕಾಶಾತ್ಮರ ಪಂಚಪಾದಿಕಾ ವಿವರಣದ ಸಂಗ್ರಹ ನಿರೂಪಣೆ. ಇಮ್ಮಡಿ ದೇವರಾಯನು ಬ್ರಹ್ಮಸೂತ್ರದ ಮೇಲೆ ಒಂದು ವೃತ್ತಿಯನ್ನೂ ನಾದಿಂಡ್ಳಗೋಪನು ಪ್ರಬೋಧ ಚಂದ್ರೋದಯಕ್ಕೆ ಚಂದ್ರಿಕಾ ಎಂಬ ವ್ಯಾಖ್ಯಾನವನ್ನೂ ಬರೆದಿದ್ದಾನೆ. ಸೇಶ್ವರಮೀಮಾಂಸಾ, ನ್ಯಾಯಸಿದ್ಧಾಂಜನ, ತತ್ತ್ವಮುಕುಟ ಕಲಾಪ, ತಾಳವಾಲಿಕ, ತಾತ್ಪರ್ಯ ಚಂದ್ರಿಕಾ-ಇವು ರಾಮಾನುಜರ ಶ್ರೀಭಾಷ್ಯ ಮತ್ತು ಗೀತಭಾಷ್ಯಗಳ ಮೇಲೆ ಶ್ರೀವೇದಾಂತದೇಶಿಕರು ರಚಿಸಿದ ವ್ಯಾಖ್ಯಾನಗಳು. ದ್ವೈತವೇದಾಂತಕ್ಕೆ ಸಂಬಂಧಿಸಿದಂತೆ ಅಕ್ಷೋಭ್ಯತೀರ್ಥರ ಮಧ್ವತತ್ತ್ವಸಾರಸಂಗ್ರಹ ಟೀಕಾಚಾರ್ಯರೆಂದು ಪ್ರಸಿದ್ಧರಾಗಿರುವ ಜಯತೀರ್ಥರ ಪ್ರಮಾಣಪದ್ಧತಿ, ದ್ವೈತದರ್ಶನದಲ್ಲಿ ಜ್ಞಾನಮೂಲಗಳೆಂದು ಅಂಗೀಕರಿಸಿರುವ ಪ್ರತ್ಯಕ್ಷ, ಅನುಮಾನ, ಆಗಮ ಎಂಬ ಪ್ರಮಾಣ ತ್ರಯಗಳನ್ನು ಕುರಿತಂತೆ ಕೃತಿಯನ್ನು ರಚಿಸಲಾಗಿದೆ. ವಾದಾವಳಿ ಮತ್ತು ಅಧ್ಯಾತ್ಮತರಂಗಿಣಿ ಇವುಗಳು, ಅವರದೇ ಆದ ಭಗವದ್ಗೀತೆಯ ಮೇಲಿನ ತತ್ತ್ವಪ್ರಕಾಶಿಕಾ, ಪ್ರಮೇಯ ದೀಪಿಕಾ ಮತ್ತು ಋಗ್ಭಾಷ್ಯಟೀಕಾಗಳು ಪ್ರಮುಖವಾದವು. ರಘೋತ್ತಮನ (ಸು. 1500) ಭಾವಬೋಧ ಎಂಬ ಕೃತಿ ಆನಂದತೀರ್ಥರ ನ್ಯಾಯವಿವರಣ ವಾಗ್ವಜ್ರದ ವ್ಯಾಖ್ಯಾನ. ಶ್ರೀಪಾದನು ವಾಗ್ವಜ್ರ ಎಂಬ ಕೃತಿಯನ್ನು ರಚಿಸಿದ್ದನೆಂಬ ಪ್ರತೀತಿ ಇದೆ.

ವ್ಯಾಸರಾಯರು (ಸು. 1447-1539) ತಾತ್ಪರ್ಯಚಂದ್ರಿಕಾ, ನ್ಯಾಯಾಮೃತ, ತರ್ಕತಾಂಡವ ಎಂಬ ಕೃತಿಗಳ ಕರ್ತೃ. ಜಯತೀರ್ಥರ ತತ್ತ್ವಪ್ರಕಾಶವೆಂಬ ಪ್ರಸಿದ್ಧ ವ್ಯಾಖ್ಯಾನದ ವ್ಯಾಖ್ಯಾನವಾದ ತಾತ್ಪರ್ಯ ಚಂದ್ರಿಕಾ. ತರ್ಕತಾಂಡವ ಎಂಬ ಕೃತಿ ನ್ಯಾಯ ವಾದಗಳಿಗೆ ಸಂಬಂಧಿ ಸಿದ್ದು. ವ್ಯಾಸರಾಯರ ಮತ್ತೊಂದು ಸ್ವತಂತ್ರ ಕೃತಿ ಭೇದೋಜ್ಜೀವನ.

ಮಾಧವಮಂತ್ರಿಯು ಶೈವಸಿದ್ಧಾಂತಕ್ಕೆ ಸಂಬಂಧಿಸಿದ ಶೈವಾಮ್ನಾಯ ಸಾರವೆಂದ ಸಂಕನಲ ಕೃತಿಯನ್ನು ಬರೆದಿದ್ದಾನೆ. ಸೋಸಲೆ ವೀರಣಾರಾಧ್ಯನ (15ನೆಯ ಶತಮಾನ) ಪಂಚರತ್ನ ಎಂಬ ಕೃತಿಗೆ ರೇವಣಾರಾಧ್ಯನು ವ್ಯಾಖ್ಯಾನ ಬರೆದಿದ್ದಾನೆ. ಪಾಲ್ಕುರಿಕೆ ಸೋಮನಾಥನು ಸೋಮನಾಥಭಾಷ್ಯ (ಬಸವರಾಜೀಯ) ಎಂಬ ಕೃತಿಯನ್ನು ರಚಿಸಿದ್ದಾನೆ. ಇದಲ್ಲದೆ ರುದ್ರಭಾಷ್ಯ ಅಷ್ಟಕ, ಪಂಚಕ, ನಮಸ್ಕಾರಗದ್ಯ, ಅಕ್ಷರಾಂಕಗದ್ಯ, ಬಸವೋದಾಹರಣ, ಚತುರ್ವೇದ ತಾತ್ಪರ್ಯಸಂಗ್ರಹ ಎಂಬ ಕೃತಿಗಳನ್ನೂ ರಚಿಸಿದ್ದಾನೆ. ಶಕ್ತಿವಿಶಿಷ್ಟಾದ್ವೈತಕ್ಕೆ ಸಂಬಂಧಿಸಿದ ಬ್ರಹ್ಮಸೂತ್ರಗಳನ್ನು ಕುರಿತು ಶ್ರೀಪತಿಪಂಡಿತನು ರಚಿಸಿರುವ ಶ್ರೀಕರಭಾಷ್ಯ ಅಪೂರ್ವ ಕೃತಿಗಳಲ್ಲೊಂದೆನಿಸಿದೆ. ಮಾಧವ ಸಂಕಲಿಸಿದ ಏಕಾಕ್ಷರ ರತ್ನಮಾಲಾ, ಇರುಗಪ್ಪದಂಡಾಧಿನಾಥನ ನಾನಾರ್ಥರತ್ನಮಾಲಾ, ವಾದಿರಾಜರ ಲಕ್ಷಾಭರಣ-ಇವು ಕಾಲದ ಕೆಲವು ನಿಘಂಟುಗಳು.

ಕಾಲದ ಕನ್ನಡ ಹಾಗೂ ಸಂಸ್ಕೃತ ಸಾಹಿತ್ಯಾಭಿವೃದ್ಧಿಯನ್ನು ಗಮನಿಸಿದಾಗ ತೆಲುಗು ಸಾಹಿತ್ಯಿಕ ಕೃತಿಗಳು ಕಡಿಮೆಯೆಂದೇ ಹೇಳ ಬಹುದು. ಆದರೂ ಕೆಲವು ಗಮನಾರ್ಹ ಕೃತಿಗಳೂ ಕಾಲದಲ್ಲಿ ರಚಿತವಾಗಿವೆ. ವ್ಯಾಸಭಾರತವನ್ನು ತೆಲುಗಿಗೆ ಅನುವಾದಿಸಿದ ಕವಿತ್ರಯರಲ್ಲಿ ಒಬ್ಬನಾದ ತಿಕ್ಕನನು ಹರಿಹರ ಅದ್ವೈತ ಮತ್ತು ಉತ್ತರ ರಾಮಾಯಣಗಳನ್ನು ರಚಿಸಿದ. ತೆಲುಗು ಭಾಷೆಯನ್ನು ಈತ ತನ್ನ ಕಾವ್ಯದಲ್ಲಿ ಸಮರ್ಥವಾಗಿ ಬಳಸಿಕೊಂಡಿದ್ದಾನೆ. ತೆಲುಗು ಸಾಹಿತ್ಯದಲ್ಲಿ ಮಹಾಕವಿ ಎಂದು ಗಣಿಸಲ್ಪಟ್ಟಿದ್ದಾನೆ. ಕವಿತ್ರಯರಲ್ಲಿ ಎರ್ರನ ಕಡೆಯವನು (ಸು. 14ನೆಯ ಶತಮಾನ). ಈತ ಮಹಾಭಾರತದ ಅರಣ್ಯಪರ್ವವನ್ನು ಪಾಂಡಿತ್ಯಪೂರ್ಣವಾಗಿ ಅನುವಾದಿಸಿ ಮಹಾಭಾರತ ಕಥೆಯನ್ನು ಪೂರ್ಣಗೊಳಿಸಿದ್ದಾನೆ. ಹರಿವಂಶಮು, ನೃಸಿಂಹ ಪುರಾಣಮು ಎಂಬ ಇನ್ನೆರಡು ಕೃತಿಗಳನ್ನೂ ಈತ ರಚಿಸಿದ್ದಾನೆ. ಪಾಲ್ಕುರಿಕೆ ಸೋಮನಾಥ ಕನ್ನಡಾಂಧ್ರಕವಿ ಎಂದು ಪ್ರಸಿದ್ಧನಾಗಿದ್ದಾನೆ. ಬಸವಪುರಾಣಮು ಮತ್ತು ಪಂಡಿತಾರಾಧ್ಯ ಚರಿತಮು ಎಂಬೆರಡು ಕೃತಿಗಳನ್ನೂ ದ್ವಿಪದಿ ಛಂದಸ್ಸಿನಲ್ಲಿ ರಚಿಸಿದ್ದಾನೆ. ಈತನ ಕೃತಿಗಳು ಕನ್ನಡ, ಸಂಸ್ಕೃತ, ತಮಿಳು ಭಾಷೆಗಳಿಗೆ ಅನುವಾದವಾಗಿವೆ.

ಶ್ರೀನಾಥ ಮತ್ತು ಪೋತನರ ಕಾಲವನ್ನು ತೆಲುಗು ಸಾಹಿತ್ಯದ ಪೌರಾಣಿಕ ಹಾಗೂ ಪ್ರಬಂಧ ಯುಗಗಳ ಸಂಧಿಕಾಲವೆಂದು ಗುರುತಿಸ ಬಹುದು. ಪ್ರಬಂಧವೆಂಬ ಹೊಸಕಾವ್ಯಪ್ರಕಾರ ಕೃಷ್ಣದೇವರಾಯನ ಕಾಲದಲ್ಲಿ ರೂಪುಗೊಂಡಿತು. ಕಾವ್ಯಪ್ರಕಾರಕ್ಕೆ ಅಸ್ತಿಭಾರವನ್ನು ಹಾಕಿದವರಲ್ಲಿ ಶ್ರೀನಾಥ ಮೊದಲಿಗ. ಶೃಂಗಾರನೈಷಧಂ ಎಂಬ ಹೆಸರುಳ್ಳ ಈತನ ಕೃತಿ ಹರ್ಷನ ನೈಷಧೀಯಚರಿತಂ ಎಂಬ ಕೃತಿಯ ಭಾಷಾಂತರ. ಭೀಮಕಂಡಮು ಮತ್ತು ಕಾಶೀಖಂಡಮು ಎಂಬೆರಡು ಕೃತಿಗಳು ತೀರ್ಥಕ್ಷೇತ್ರಗಳ ಸ್ಥಳಪುರಾಣ ಕಥೆಗಳನ್ನೊಳಗೊಂಡಿದೆ. ಕ್ರೀಡಾಭಿರಾಮ್ ಎಂಬ ನಾಟಕದ ಕರ್ತೃವೂ (ವೀಧಿನಾಟಕ) ಈತನೇ ಇರಬೇಕೆಂಬ ಅಭಿಪ್ರಾಯವಿದೆ. ಈತನ ಹರವಿಲಾಸಮು ಎಂಬ ಕೃತಿಯಲ್ಲಿ ಶಿವನಿಗೆ ಸಂಬಂಧಿಸಿದ ಅನೇಕ ಕಥೆಗಳಿವೆ. ಇದೇ ಕವಿಯ ಗಾಥಾಸಪ್ತಶತಿಯು ಪ್ರಾಕೃಕದ ಅನುವಾದಿತ ಕೃತಿಯಾಗಿದ್ದು ಉಪಲಬ್ಧವಿಲ್ಲ. ಈತನ ಪದ್ಯಗಳನ್ನು ತೆಲುಗಿನಲ್ಲಿ ಚಾಟುಪದ್ಯಗಳೆಂದು ಕರೆಯುತ್ತಾರೆ. ಪೋತನ ಶ್ರೀನಾಥನ ಸಮಕಾಲೀನ. ಈತನ ಭಾಗವತ ಚಿತ್ತಾಕರ್ಷಕವಾದ ಉಪಕಥೆ ಗಳಿಂದ ಕೂಡಿದೆ. ಈತನ ಗಜೇಂದ್ರಮೋಕ್ಷ, ಧ್ರುವಚರಿತ್ರೆ, ಪ್ರಹ್ಲಾದ ಕಥಾ ಹಾಗೂ ರುಕ್ಮಿಣೀಕಲ್ಯಾಣಗಳು ಪ್ರಸಿದ್ಧವಾದ ಉಪಾಖ್ಯಾನಗಳಾಗಿವೆ.

ಗೌರನ, ಜಕ್ಕನ, ಅನಂತಾಮಾತ್ಯ ಹಾಗೂ ಪಿನವೀರನ ಇವರು ಶ್ರೀನಾಥ ಹಾಗೂ ಪೋತನರ ಸಮಕಾಲೀನರಾದ ಇತರ ಕವಿಗಳು. ಕೃಷ್ಣದೇವರಾಯನ ಆಸ್ಥಾನದಲ್ಲಿ ಅಷ್ಟದಿಗ್ಗಜಗಳೆಂದು ಪ್ರಸಿದ್ಧರಾಗಿದ್ದ ಎಂಟು ಜನ ಕವಿಗಳಿದ್ದ ವಿಷಯ ಪ್ರಖ್ಯಾತವಾದುದು. ಕವಿಗಳ ಹೆಸರಿನ ಬಗೆಗೆ ವಿದ್ವಾಂಸರಲ್ಲಿ ಭಿನ್ನಾಭಿಪ್ರಾಯಗಳಿವೆ. ಕೃಷ್ಣದೇವರಾಯನ ಆಮುಕ್ತಮೌಲ್ಯದಾ ತೆಲುಗು ಪಂಚಮಹಾಕಾವ್ಯಗಳಲ್ಲಿ ಒಂದೆನಿಸಿದೆ. ಇದರಲ್ಲಿ ಗೋದಾದೇವಿ ಮತ್ತು ಶ್ರೀರಂಗನಾಥರಿಗೆ ಸಂಬಂಧಿಸಿದ ಕಥೆಯ ವರ್ಣನೆ ಇದೆ. ಕೃಷ್ಣದೇವರಾಯನ ಆಸ್ಥಾನಕವಿಗಳಲ್ಲೊಬ್ಬನಾದ ಪೆದ್ದನನ ಮನುಚರಿತಮು ಎಂಬ ಕೃತಿ, ಕೃಷ್ಣದೇವರಾಯನಿಗೆ ಅರ್ಪಿಸಲಾದ ನಂದಿ ತಿಮ್ಮಣ್ಣನ ಪಾರಿಜಾತಾಪಹರಣ, ಶಿವಭಕ್ತನೂ ಕೃಷ್ಣದೇವರಾಯನ ಆಸ್ಥಾನಕವಿಯೂ ಆಗಿದ್ದ ಧೂರ್ಜಟಿಯ ಶ್ರೀಕಾಳಹಸ್ತಿ ಮಾಹಾತ್ಮ್ಯಮು, ಕಾಳಹಸ್ತೀಶ್ವರಶತಕಮು ಎಂಬೆರಡು ಕೃತಿಗಳು, ಪಿಂಗಳಿ ಸೂರಣನ ಕಳಾಪೂರ್ಣೋದಯಮು, ಪ್ರಭಾವತೀ ಪ್ರದ್ಯುಮ್ನವು, ರಾಮರಾಜ ಭೂಪಣನ ಗೇಯಕಾವ್ಯವಾದ ವಸುಚರಿತ್ರ-ಇವು ತೆಲುಗು ಸಾಹಿತ್ಯಕ್ಕೆ ಕಾಲದ ಅಪೂರ್ವ ಕೊಡುಗೆಗಳು. ಹಾಸ್ಯಕವಿ ಎಂದು ಪ್ರಸಿದ್ಧನಾದ ತೆನಾಲಿ ರಾಮಕೃಷ್ಣನು ಪಾಂಡುರಂಗಮಾಹಾತ್ಮ್ಯಮು ಎಂಬ ಪಾಂಡಿತ್ಯ ಪೂರ್ಣ ಮಹಾಕಾವ್ಯವನ್ನು ರಚಿಸಿದ್ದಾನೆ. ಕೃಷ್ಣದೇವರಾಯನ ಕಾಲದಲ್ಲಿ ರಚಿತವಾದ ಕೃತಿಗಳಲ್ಲೆಲ್ಲ ಇದು ಉತ್ತಮ ಕೃತಿ ಎನಿಸಿದೆ. ಅಯ್ಯಲರಾಜು, ರಾಮಭದ್ರ, ಮಲ್ಲನ, ರಾಧಾ ಮಾಧವಕವಿ, ಕಂದುಕೂರಿ ರುದ್ರಕವಿ-ಇವರು ಕಾಲದ ಇನ್ನಿತರ ಕವಿಗಳು. ಆಟವೆಲದಿ ಎಂಬ ದೇಸೀ ಛಂದಸ್ಸಿನಲ್ಲಿ ರಚಿತವಾಗಿರುವ ವೇಮನನ ಪದ್ಯಗಳು ವಿಚಾರಪರಿಪ್ಲುತವಾಗಿವೆ. ನವುರಾದ ಭಾಷೆಯಲ್ಲಿ ಸಮಾಜವನ್ನು ವಿಡಂಬಿಸಿದ್ದಾನೆ. ಇವು ಸರ್ವಜ್ಞನ ತ್ರಿಪದಿಗಳನ್ನು ಹೋಲುತ್ತವೆ

Comments

Popular posts from this blog

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಸಾಹಿತ್ಯಾಧಾರಗಳು - Literary Sources

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧