ವಿದೇಶೀಯರು ಕಂಡಂತೆ ವಿಜಯನಗರ

  •    ಸುಮಾರು ಇನ್ನೂರು ವರ್ಷಗಳಿಗೂ ಹೆಚ್ಚು ಕಾಲ ವೈಭವದಿಂದ ಮೆರೆದ ವಿಜಯನಗರಕ್ಕೆ ಮತ್ತು ಅಲ್ಲಿನ ಅರಸರ ಆಸ್ಥಾನಕ್ಕೆ ಅನೇಕ ವಿದೇಶೀ ಯಾತ್ರಿಕರು, ವ್ಯಾಪಾರಿಗಳು ಭೇಟಿ ನೀಡಿದ್ದರು. ಹಾಗೆ ಭೇಟಿ ನೀಡಿದ್ದ ಅವರುಗಳು ಇಲ್ಲಿ ತಾವು ಕಂಡು-ಕೇಳಿದ್ದ ವಿವರಗಳನ್ನು ತಮ್ಮ ಭಾಷೆಗಳಲ್ಲಿ ದಾಖಲಿಸಿದ್ದಾರೆ. ಅವರ ಬರವಣಿಗೆಗಳು ತದನಂತರದಲ್ಲಿ ಬೇರೆ-ಬೇರೆ ಭಾಷೆಗಳಿಗೆ ಭಾಷಾಂತರಗೊಂಡು ಇಂದು ನಮ್ಮ ಅಧ್ಯಯನಕ್ಕೆ ಲಭ್ಯವಿವೆ. ಅವರು ನೀಡಿದ್ದ ವಿವರಗಳು ನಮಗಿಂದು ವಿಜಯನಗರದ ಗತ ವೈಭವವನ್ನು ಅರ್ತಮಾಡಿಕೊಳ್ಳಲು ಸಹಾಯಕವಾಗಿದ್ದರೂ ಅವುಗಳಲ್ಲಿ ಕೆಲವು ದೋಷಗಳಿರುತ್ತವೆ. ಅಂತಹ ದೋಷಗಳನ್ನು ಇತಿಹಾಸಕಾರನು ಇತರ ಮೂಲಗಳಿಂದ ಪರಿಶೀಲಿಸಿ ಸತ್ಯಸಂಗತಿಯನ್ನು ದಾಖಲಿಸಬೇಕಾಗುತ್ತದೆ. ಈ ಕೆಳಗೆ ವಿಜಯನಗರಕ್ಕೆ ಭೇಟಿ ನೀಡಿದ್ದ ವಿವಿದ ಯಾತ್ರಿಕರು-ವ್ಯಾಪಾರಿಗಳ ವಿವರಗಳು, ಅವರು ಭೇಟಿ ನೀಡಿದ್ದ ರಾಜರ ಕಾಲ ಮತ್ತು ವಿಜಯನಗರದ ವರ್ಣನೆಗಳನ್ನು ನೀಡಲಾಗಿದೆ.


ಸೂಚನೆ: ಇಲ್ಲಿನ ವಿವರಗಳನ್ನು ವಿವಿದ ಅಂತರ್ಜಾಲದ ಪುಟಗಳಿಂದ ಸಂಗ್ರಹಿಸಿ, ಸಂಕಲಿಸಿ ಇಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನೀಡಲಾಗಿದೆ.


  • ಇಟಲಿಯಿಂದ ಬಂದ ನಿಕೊಲೊ ಡಿ ಕೊಂಟೆ (1420-21) ಒಬ್ಬ ಯಾತ್ರಿಕನಾಗಿದ್ದನು. ಈತ ವೆನಿಸ್ ನಗರದ ಗಣ್ಯ ಮನೆತನಕ್ಕೆ ಸೇರಿದ್ದ, ಡಮಾಸ್ಕಸ್ ನಲ್ಲಿ ನೆಲಸಿದ ವರ್ತಕ. ಅರಬ್ಬೀ ಭಾಷೆ ಕಲಿತ ಈತ ಆರುನೂರು ವರ್ತಕರ ತಂಡದೊಡನೆ ಪ್ರವಾಸ ಹೊರಟು ಭಾರತಕ್ಕೂ ಬಂದಿದ್ದ. ಇಲ್ಲಿದ್ದಾಗ ವಿಜಯನಗರಕ್ಕೆ ಬಂದಿದ್ದ. ಆಗ ಆಳುತ್ತಿದ್ದ ಅರಸ ಇಮ್ಮಡಿ ದೇವರಾಯ. ಕೊಂಟೆ ಸು. 1440ರಲ್ಲಿ ವೆನಿಸ್ಗೆ ಹಿಂದಿರುಗಿದ ಅನಂತರ ಇಟಲಿಯ ಪೋಪನ ಆದೇಶದ ಮೇರೆಗೆ ತನ್ನ ಪ್ರವಾಸವನ್ನು ಪೋಪನ ಕಾರ್ಯದರ್ಶಿ ಪೊಡ್ಜಿಯೋ ಬ್ರಟ್ಟೆಯೋಲಿನಿ ಎಂಬಾತನಿಗೆ ಹೇಳಿದ. ಆತ ಇದನ್ನು ಲ್ಯಾಟಿನ್ ಭಾಷೆಯಲ್ಲಿ ಬರೆದುಕೊಂಡ. ಬಳಿಕ ಅದು ಪೋರ್ಚುಗೀಸ್ ಭಾಷೆಗೂ ದುಮೇಸಿಯೋ ಎಂಬವರಿಂದ ಇಟಾಲಿಯನ್ ಭಾಷೆಗೂ ಕೊನೆಗೆ ಮೇಜರ್ ಎಂಬಾತನಿಂದ ಆಂಗ್ಲ ಭಾಷೆಗೂ ಭಾಷಾಂತರಗೊಂಡಿತು.
  • ಈತನ ಮಾತಿನಲ್ಲಿ ವಿಜಯನಗರ ಬಿಜೆನೆಗಾಲಿಯ ಎಂದಾಗಿದೆ. ನಗರದ ಸುತ್ತಳತೆ ಅರವತ್ತು ಮೈಲುಗಳು. ಸುತ್ತ ಕಟ್ಟಿರುವ ಕೋಟೆ ಪರ್ವತಗಳಷ್ಟು ಎತ್ತರವಾಗಿದೆ. ತೊಂಬತ್ತುಸಾವಿರ ಶಸ್ತ್ರಾಸ್ತ್ರಪ್ರವೀಣರು ಇಲ್ಲಿದ್ದಾರೆ. ಭಾರತದ ಎಲ್ಲ ರಾಜರಿಗಿಂತ ಬಲಾಢ್ಯನಾದ ಇಲ್ಲಿಯ ರಾಜನಿಗೆ 12,000 ಜನ ಹೆಂಡತಿಯರಿದ್ದಾರೆ. ಇವರಲ್ಲಿ 4,000 ಜನ ಅರಸ ಹೋದಲೆಲ್ಲ ಕಾಲ್ನಡಿಗೆಯಲ್ಲಿ, ಇನ್ನು 4,000 ಜನ ಕುದುರೆಗಳ ಮೇಲೂ ಇತರರು ಪಲ್ಲಕ್ಕಿಗಳಲ್ಲೂ ಹೋಗುತ್ತಾರೆ. ಇವರಲ್ಲಿ ಎರಡು-ಮೂರು ಸಾವಿರ ಜನ ಅರಸ ಸತ್ತಾಗ ಆತ್ಮಸಂತೋಷದಿಂದ ಪ್ರಾಣತ್ಯಾಗ ಮಾಡುತ್ತಾರೆ. ರಾಜಧಾನಿಯಲ್ಲಿ ಮೂರು ದೊಡ್ಡ ಹಬ್ಬಗಳನ್ನು (ಬಹುಶಃ ಯುಗಾದಿ, ದೀಪಾವಳಿ ಮತ್ತು ನವರಾತ್ರಿ) ಆಚರಿಸುತ್ತಾರೆ. ಮದುವೆ ಗಳನ್ನು ಬಹಳ ವೈಭವದಿಂದ ಮಾಡುತ್ತಾರೆ ಎಂದೆಲ್ಲ ಬರೆದಿಟ್ಟಿದ್ದಾನೆ.
  •  
  • ಅಬ್ದುಲ್ ರಜಾಕ್ ಎಂಬಾತ ಇದೇ ಸುಮಾರಿನಲ್ಲಿ ಭಾರತದಲ್ಲಿ ಪ್ರವಾಸಮಾಡಿದ ಪರ್ಷಿಯ ದೇಶದ ಯಾತ್ರಿಕ. ಈತ 1441ರಲ್ಲಿ ಹಖ್ಷಾನ ರಾಯಭಾರಿಯಾಗಿ ವಿಜಯನಗರಕ್ಕೆ ಬಂದ. ಕಲ್ಲಿಕೋಟೆಯಲ್ಲಿ ಇಳಿದು ಅಲ್ಲಿನ ಜಾಮೊರಿನ್ನನ್ನು ಕಂಡು ಅನಂತರ ಮಂಗಳೂರು ಮಾರ್ಗವಾಗಿ ವಿಜಯನಗರಕ್ಕೆ ಬಂದ. ಈತ ಭಾರತದಲ್ಲಿ ಸುಮಾರು ಎರಡು ವರ್ಷಗಳ ಕಾಲ ಇದ್ದು 1443ರಲ್ಲಿ ಹೊನ್ನಾವರದಲ್ಲಿ ಹಡಗನ್ನು ಹತ್ತಿ ಓರ್ಮುಜ್ಗೆ ಹಿಂದಿರುಗಿದ. ಈತ ತನ್ನ ಪ್ರವಾಸಕಥನ ಮತ್ಲ ಅಸ್ ಸದೈನ್ ಎಂಬ ಗ್ರಂಥದಲ್ಲಿ ವಿಜಯನಗರದ ಬಗೆಗೆ ಹೀಗೆ ಬರೆದಿದ್ದಾನೆ:
  • ಬಿಜನಗರ ಬಹಳ ದೊಡ್ಡ ಜನಸಂಖ್ಯೆಯ ಊರು. ರಾಜ್ಯ ಸಿಂಹಳ ಗಡಿಯಿಂದ ಕಲ್ಬೆರ್ಗದ ಕೊಟ್ಟಕೊನೆಯವರೆಗೆ, ಬಂಗಾಲದಿಂದ ಮಲಬಾರ್ ಕೊನೆಯವರೆಗೆ ಸಾವಿರ ಫರ್ಲಾಂಗ್‌ಗಳಷ್ಟು ವಿಸ್ತರಿಸಿದೆ. ಮುನ್ನೂರು ಬಂದರುಗಳಿವೆ. ಸೈನ್ಯದಲ್ಲಿ 11ಲಕ್ಷ ಯೋಧರಿದ್ದಾರೆ. ಸಾವಿರಕ್ಕೂ ಹೆಚ್ಚಿನ ಪೆಡಂಭೂತಗಳಂತಹ ಆನೆಗಳಿವೆ. ರಾಯನಂತಹ ಶ್ರೇಷ್ಠ ದೊರೆ ಹಿಂದುಸ್ಥಾನದಲ್ಲಿ ಎಲ್ಲಿ ಹುಡುಕಿದರೂ ಸಿಕ್ಕುವುದಿಲ್ಲ. ಬಿಜನಗರದಂತಹ ನಗರವನ್ನು ಕಣ್ಣು ಕಂಡಿಲ್ಲ, ಕಿವಿ ಕೇಳಿಲ್ಲ; ನಗರವನ್ನು ಏಳು ದುರ್ಗಗಳೂ ಏಳುಕೋಟೆಗಳೂ ಒಂದನ್ನೊಂದು ಆವರಿಸಿಕೊಂಡಿವೆ. ಅಂಗಡಿಬೀದಿಗಳು ಬಹು ಉದ್ದ ವಾಗಿಯೂ ಅಗಲವಾಗಿಯೂ ಇವೆ. ಬೀದಿಗಳಲ್ಲೆಲ್ಲ ಗುಲಾಬಿ ಹೂವಿನ ವಾಸನೆ. ಜನಗಳು ಗುಲಾಬಿ ಹೂಗಳಿಲ್ಲದೆ ಬದುಕುವಂತೆಯೇ ಇಲ್ಲ. ರತ್ನಪಡಿ ವ್ಯಾಪಾರಿಗಳು ಅಂಗಡಿಬೀದಿಗಳಲ್ಲಿ ಬಹಿರಂಗವಾಗಿ ವಜ್ರವೈಡೂರ್ಯಗಳನ್ನೂ ಮುತ್ತುಗಳನ್ನೂ ಮಾರುತ್ತಾರೆ. ರಾಜನನ್ನು ಸ್ವತಃ ಕಂಡ ರಜಾಕ್ ಆತನ ವರ್ಣನೆಯನ್ನು ಮಾಡಿದ್ದಾನೆ. ಆಗ ಅರಮನೆಯಲ್ಲಿ ಅರಸನ ಹತ್ಯೆಗಾಗಿ ನಡೆಯಿತೆನ್ನಲಾದ ಘಟನೆಯ ವಿವರಗಳನ್ನೂ ನೀಡಿದ್ದಾನೆ. ಮಹಾನವಮಿಯ ದಿನ ರಾಜನ ದರ್ಬಾರಿನ ವರ್ಣನೆಯೂ ಇದೆ.
  •  
  • ಕೃಷ್ಣದೇವರಾಯನ ಕಾಲದಲ್ಲಿ ಅನೇಕರು ಯಾತ್ರಾರ್ಥಿಗಳಾಗಿ ವಿಜಯನಗರಕ್ಕೆ ಬಂದಿದ್ದರು. ಅವರಲ್ಲಿ ಪೋರ್ಚುಗೀಸರಾದ ಬಾರ್ಬೋಸ ಮತ್ತು ಡೊಮಿಂಗೊ ಪೇಯಿಸ್ ಪ್ರಮುಖರು. ಬಾರ್ಬೋಸ ಬಹುಮಟ್ಟಿಗೆ ಪೀಡ್ರೋ ಅಲ್ವಾರಿಸ್ ಕಾಟ್ರರ್ಲ್ ನೌಕಾಪಡೆಯೊಡನೆ ಸು. 1500ರಲ್ಲಿ ಭಾರತಕ್ಕೆ ಬಂದಂತೆ ತೋರುತ್ತದೆ. ಇಲ್ಲಿ ಮಲಯಾಳ ಭಾಷೆಯನ್ನು ಚೆನ್ನಾಗಿ ಕಲಿತ ಈತ ಆಲ್ಬುಕರ್ಕ್ ದುಭಾಷಿಯಾಗಿ ಕಣ್ಣಾನೂರು ಮತ್ತು ಕೊಚ್ಚಿನ್ಗಳ ಅರಸರೊಡನೆ ಮಾತುಕತೆ ನಡೆಸಿದ್ದ. ಇಲ್ಲಿ ಈತನಿಗೆ ಕೆಲಸದಲ್ಲಿ ಬಡ್ತಿ ಸಿಕ್ಕದ ಕಾರಣ ನಿರಾಶನಾಗಿ 1519ರಲ್ಲಿ ಮರುಪ್ರಯಾಣ ಮಾಡಿದ. ಈತ 1521ರಲ್ಲಿ ಫಿಲಿಪೀನ್ಸ್ ಸೆಬುದ್ವೀಪಕ್ಕೆ ಬಂದಾಗ ಅಲ್ಲಿಯ ರಾಜನಿಂದ ಕೊಲ್ಲಿಸಲ್ಪಟ್ಟ. ಸು. 1515 ವೇಳೆಗೆ ಈತ ಪೋರ್ಚುಗೀಸ್ ಭಾಷೆಯಲ್ಲಿ ಬರೆದಿಟ್ಟ ಪ್ರವಾಸಕಥನವನ್ನು 1563ರಲ್ಲಿ ರಾಮುಸ್ಸಿಬೋ ಇಟಲಿ ಭಾಷೆಗೆ ಅನುವಾದಿಸಿದ. ಶತಮಾನದ ಆರಂಭದಲ್ಲಿ ಮಾನ್ಸೆಲ್ ಲಾಂಗ್ವರ್ತ್ ಡೇಮ್ಸ್ ಎಂಬಾತ ನೂ 1867ರಲ್ಲಿ ಹೆನ್ರಿ ಸ್ಟಾನ್ಲಿ ಎಂಬಾತನೂ ನೇರವಾಗಿ ಆಂಗ್ಲಭಾಷೆಗೆ ಅನುವಾದಿಸಿ ಪ್ರಕಟಿಸಿದರು. ಈತ ಹಿಂದುಗಳನ್ನು ಜಂಟೈಲ್ಗಳೆಂದೂ ಮಹಮ್ಮದೀಯರನ್ನು ಮೂರ್ರೆಂದೂ ಕರೆದಿದ್ದಾನೆ. ವಿಜಯನಗರವನ್ನು ನರಸಿಂಗ ಮಹಾರಾಜ್ಯ ಎಂದೂ ಹೆಸರಿಸಿದ. ಈತ ರಾಜ್ಯ ಶ್ರೀಮಂತಿಕೆ ಯಿಂದ ಕೂಡಿದ್ದು ಧನಧಾನ್ಯಗಳಿಂದ ಕೂಡಿದ ನಗರಗಳೂ ಪಟ್ಟಣಗಳೂ ಇಲ್ಲಿವೆ; ಬೇಕಾದಷ್ಟು ವ್ಯಾಪಾರ, ರಫ್ತು ಆಮದುಗಳೂ ಇಲ್ಲಿ ನಡೆಯುತ್ತವೆ ಎಂದಿದ್ದಾನೆ. ಉತ್ತರಕನ್ನಡ ಜಿಲ್ಲೆಯ ಹೊನ್ನಾವರ, ಮಿರ್ಜಾನ್, ಭಟ್ಕಳ, ದಕ್ಷಿಣ ಕನ್ನಡ ಜಿಲ್ಲೆಯ ಮಯಮೂರು (ಬೈಂದೂರು), ಬಾರಕೂರು, ಬಸರೂರು ಮುಂತಾದ ಊರುಗಳ ವರ್ಣನೆಯನ್ನು ಇವನ ಬರಹದಲ್ಲಿ ಕಾಣಬಹುದು. ಬಿಜನಗರ್ ರಾಜ್ಯದ ಒಳನಾಡಿನ ದೊಡ್ಡ ನಗರ. ರಾಜ ಇಲ್ಲಿ ವಾಸಿಸುತ್ತಾನೆ. ಇವನನ್ನು ರಾಹೆನಿ (ರಾಯ) ಎಂದು ಕರೆಯುತ್ತಾರೆ. ಇಲ್ಲಿಗೆ ತಾಮ್ರ, ಪಾದರಸ, ಸಿಂಧೂರ, ಕೇಸರಿ, ಗುಲಾಬಿ, ಅತ್ತರು, ಅಫೀಮು ಇತ್ಯಾದಿಗಳು ಬರುತ್ತವೆ. ಅಗಾಧವಾಗಿ ಮೆಣಸನ್ನು ಉಪಯೋಗಿಸುತ್ತಾರೆ. ಪರ್ದೊ (ಪ್ರತಾಪ?) ಎಂಬ ನಾಣ್ಯ ಚಲಾವಣೆಯಲ್ಲಿದೆ. ರಾಜ ಆಡಳಿತವನ್ನು ರಾಜ್ಯಪಾಲರಿಗೆ ವಹಿಸಿ ತಾನು ರಾಜಧಾನಿಯಲ್ಲಿ ಸುಖವಾಗಿರುತ್ತಾನೆ. ಅರಮನೆಯ ಊಳಿಗಕ್ಕೆ ರಾಜ್ಯದಲ್ಲೆಲ್ಲ ಆರಿಸಿದ ರೂಪವತಿಯರನ್ನು ನೇಮಿಸಿಕೊಳ್ಳುತ್ತಾರೆ. ರಾಜನ ಅಶ್ವದಳ, ಕಾಲುದಳಗಳಿಗೆ ಹತ್ತು ಲಕ್ಷ ಜನರಿದ್ದಾರೆ. ಯುದ್ಧಕ್ಕೆ ಹೋದಾಗ ಸೈನಿಕರ ಸಂಖ್ಯೆಗನುಗುಣವಾಗಿ ಸ್ತ್ರೀಯರನ್ನು ಕಳಿಸುತ್ತಾರೆ. ಬ್ರಾಹ್ಮಣರನ್ನು ಜನ ಗೌರವಿಸುತ್ತಾರೆ, ಇವೇ ಮುಂತಾದ ಅಂದಿನ ಸಮಾಜದ ವಿವರಗಳು ಈತನ ಬರವಣಿಗೆಗಳಿಂದ ಲಭಿಸುತ್ತವೆ.
  •  
  • ಡೊಮಿಂಗೊ ಪೇಯಿಸ್ ಕೃಷ್ಣದೇವರಾಯನ ಕಾಲದಲ್ಲಿ(1520) ವಿಜಯನಗರಕ್ಕೆ ಬಂದಿದ್ದ. ಇವನ ಬರಹಗಳು ವಿಜಯನಗರ ಸಾಮ್ರಾಜ್ಯದ ಇತಿಹಾಸಕ್ಕೆ ಬಹಳ ಉಪಯುಕ್ತವಾಗಿವೆ. ಈತನೂ ಅನಂತರ ಬಂದ ನ್ಯೂನಿಜನೂ ಪೋರ್ಚುಗೀಸರೇ. ಇಬ್ಬರೂ ಬರೆದಿಟ್ಟಿದ್ದನ್ನು ಡೇವಿಟ್ ಲೋಪ್ 1897ರಲ್ಲಿ ಡೋಸ್ ರೈಸ್-ದೆ-ಬಿಸ್ನಾಗ ಎಂಬ ಪುಸ್ತಕದಲ್ಲಿ ಪ್ರಕಟಿಸಿದ. ಇವರು ಬರೆದ ವೃತ್ತಾಂತಗಳನ್ನು ಗೋವಾದಿಂದ ಪೋರ್ಚು ಗಲ್ಗೆ ಕಳುಹಿಸಿದಾತನ ಹೆಸರು ಗೊತ್ತಿಲ್ಲ. ಆತ ಅದನ್ನು ಲಿಸ್ಬನ್ ಪ್ರಸಿದ್ಧ ಇತಿಹಾಸಕಾರನಾದ ಬರೂಷನಿಗೆ ಕಳಿಸಿದ. ಪೇಯಿಸ್ ಸಹ ವಿಜಯನಗರವನ್ನು ನರಸಿಂಗನ ರಾಜ್ಯವೆಂದು ಕರೆದಿದ್ದಾನೆ. ಇತರರಂತೆ ಈತನೂ ಇಲ್ಲಿಯ ರೇವುಪಟ್ಟಣಗಳಾದ ಅಂಕೋಲ, ಮಿರ್ಜಾನ್, ಹೊನ್ನಾವರ, ಭಟ್ಕಳ, ಮಂಗಳೂರು, ಬಸರೂರು, ಬಾರಕೂರುಗಳ ಪ್ರಸ್ತಾಪ ಮಾಡಿದ್ದಾನೆ. ಬಿಸ್ನಗರದ (ವಿಜಯನಗರ) ವರ್ಣನೆ ಇವನ ಬರಹದಲ್ಲಿದೆ. ರಾಜ ತನ್ನ ತಾಯಿಯ  ಹೆಸರಿನಲ್ಲಿ ಹೊಸ ನಗರವನ್ನು (ನಾಗಲಾಪುರ) ಕಟ್ಟಿಸಿದುದನ್ನು ತಿಳಿಸಿದ್ದಾನೆ. ಅರಸನನ್ನು ಸ್ವತಃ ಕಂಡಿದ್ದ ಈತ ಅವನನ್ನು ಸುಮಾರು ಎತ್ತರವಾಗಿದ್ದು ಲಕ್ಷಣವಾಗಿದ್ದಾನೆ; ಮೈ ಸ್ಥೂಲವಾಗಿದೆ ಎಂದು ಹೇಳಬಹುದು. ಮುಖದ ಮೇಲೆ ಸಿಡುಬಿನ ಕಲೆಗಳಿರುವಂತೆ ಕಾಣುತ್ತವೆ. ಹಸನ್ಮುಖನಾಗಿ ಉಲ್ಲಾಸದಿಂದಿರುತ್ತಾನೆ. ದೊರೆಯನ್ನು ಕಿಸ್ನರಾವ್ ಮಕಾಗಾವ್ (ಕೃಷ್ಣರಾಯ ಮಹಾರಾಯ) ರಾಜಾಧಿರಾಜ, ಮಹಾಮಂಡಲೇಶ್ವರ, ಮೂರು ಸಮುದ್ರಗಳಿಗೊಡೆಯ ಇತ್ಯಾದಿಯಾಗಿ ಹೊಗಳುತ್ತಾರೆ ಎಂದೆಲ್ಲ ವರ್ಣಿಸಿದ್ದಾನೆ. ನಗರದ ಜನಸಂಖ್ಯೆ ಹೇಳಲಸಾಧ್ಯವಾದುದೆಂದೂ ಆತ ನೋಡಿದಷ್ಟು ಭಾಗವೇ ರೋಮ್ ನಗರದಷ್ಟಿತ್ತೆಂದೂ ಹೇಳಿದ್ದಾನೆ. ಮಾರುಕಟ್ಟೆಯಲ್ಲಿ ಸಿಗುವ ಆಹಾರ ಸಾಮಗ್ರಿ, ತರಕಾರಿ ಹಾಗೂ ಮಾಂಸಗಳಿಗೆ ಅತಿ ಕಡಿಮೆ ಬೆಲೆಗಳನ್ನು ಸೂಚಿಸಿದ್ದಾನೆ. ದಸರ ಹಬ್ಬದ ಒಂಬತ್ತು ದಿನಗಳಲ್ಲಿ ನಡೆಯುವ ವೈಭವಗಳನ್ನು ವಿವರಿಸಿದ್ದಾನೆ. ದಸರೆಯ ಹಬ್ಬವನ್ನು ಅರಸನೂ ಪ್ರಜೆಗಳೂ ಸಂಭ್ರಮದಿಂದ ಆಚರಿಸುತ್ತಿದ್ದರು. ಅಂದು ಸಾಮಂತರು, ಅಧಿಕಾರಿಗಳು, ರಾಯಭಾರಿಗಳು, ಅರಸನಿಗೆ ಗೌರವ ಸಲ್ಲಿಸಿ ನಿಷ್ಠೆಯನ್ನು ತೋರಿಸುತ್ತಿದ್ದರು.
  •  
  • ಅಚ್ಯುತರಾಯನ ಕಾಲದಲ್ಲಿ ವಿಜಯನಗರಕ್ಕೆ ಬಂದ ಇನ್ನೊಬ್ಬ ಪೋರ್ಚುಗೀಸ್ ಯಾತ್ರಿಕ ನ್ಯೂನಿಜ್. ಈತ ವಿಜಯನಗರಕ್ಕೆ ಬಂದುದು ಸು. 1536-37ರಲ್ಲಿ. ವಿಜಯನಗರದ ಪೂರ್ವೇತಿಹಾಸವನ್ನು ತಿಳಿಸಿರುವುದು ಈತನ ಬರವಣಿಗೆಯ ವೈಶಿಷ್ಟ್ಯ. ಈತನ ಬರವಣಿಗೆ ಸಹ ಗೋವಾದ ಒಬ್ಬ ಅನಾಮಿಕನಿಂದ ಲಿಸ್ಬನ್ನಿನ ಬರ್ರೂಷನಿಗೆ ತಲುಪಿತು. ಆದರೆ ಅನಾಮಿಕ ಇದನ್ನು ಲಿಸ್ಬನ್ನಿಗೆ ಕಳುಹಿಸುವಾಗ ಕುದುರೆ ವ್ಯಾಪಾರಕೋಸ್ಕರ ವಿಜಯನಗರಕ್ಕೆ (ಬಿಸ್ನಗ) ಹೋಗಿದ್ದು ಮೂರು ವರ್ಷಗಳ ಕಾಲ ಅಲ್ಲಿದ್ದ ಫರ್ನಾಂವ್ ನ್ಯೂನಿಜನಿಂದ ಆತ ಬರೆದಿಟ್ಟಿದುದನ್ನು ಪಡೆದುಕೊಂಡು ಕಳಿಸುತ್ತಿರುವುದಾಗಿ ಬರೆದಿದ್ದಾನೆ. ನ್ಯೂನಿಜನಿಗೆ ಕುದುರೆ ವ್ಯಾಪಾರದಿಂದ ಏನೂ ಗಿಟ್ಟಲಿಲ್ಲವಂತೆ.
  • ವಿಜಯನಗರದ ಅರಸರ ಹೆಸರುಗಳನ್ನು, ಇತರ ವಿವರಗಳನ್ನು ಕೊಡುವಲ್ಲಿ ನ್ಯೂನಿಜ್ ಎಡವಿದ್ದಾನೆ. ವಿಜಯನಗರದ ಮೊದಲ ಅರಸನನ್ನು ದೆಹೋರಾವ್ ಎಂದು ಕರೆದಿದ್ದಾನೆ. ವೈದಿಯಜುಗ (ವಿದ್ಯಾರಣ್ಯ) ಸ್ವಾಮಿಗಳು ಕಾಲವಾದ ಮೇಲೆ ಒಂದು ದೇವಸ್ಥಾನವನ್ನು ಆತ ಕಟ್ಟಿಸಿದ್ದಾನೆ. ಅನಂತರ ಪಟ್ಟಕ್ಕೆ ಬಂದ ಬುಕರಾವ್ ಕೈ ತಪ್ಪಿಹೋಗಿದ್ದ ರಾಜ್ಯಗಳನ್ನು ಗೆದ್ದುದಲ್ಲದೆ ಒರಿಯ ರಾಜ್ಯವನ್ನು ಗೆದ್ದನಂತೆ, ಬುಕರಾವ್ ಮಗ ಅಜರಾವ್ ಎಂದಿದ್ದಾನೆ. ಇವೆಲ್ಲ ಗೊಂದಲಮಯವಾದ ಬರಹಗಳು. ಆದರೆ ಸಮಕಾಲೀನ ಮತ್ತು ಅದಕ್ಕೆ ಸ್ವಲ್ಪ ಹಿಂದಿನ ಘಟನೆಗಳನ್ನು ಕುರಿತು ಬರೆಯುವಲ್ಲಿ ಈತ ಹೆಚ್ಚು ನಂಬಿಕೆಗೆ ಅರ್ಹನಾಗಿದ್ದಾನೆ. ಸಾಳುವ ನರಸಿಂಹನನ್ನು ನರಸಿಂಗುವಾ ಎಂದು ಕರೆದು ಬಿಸ್ನಾಗರ ರಾಜ್ಯವನ್ನು ನರಸಿಂಗುವಾ ರಾಜ್ಯವೆಂದಿದ್ದಾನೆ. ಕೃಷ್ಣದೇವರಾಯನ ದಂಡಯಾತ್ರೆಗಳ ವಿವರಗಳನ್ನು ನೀಡಿದ್ದಾನೆ. ಅಚ್ಯುತರಾಯ ಅನೀತಿ ಮತ್ತು ದಬ್ಬಾಳಿಕೆಗಳಿಗೆ ಕೈಹಾಕಿದನು, ಪ್ರಾಮಾಣಿಕತೆ ಎನ್ನುವುದೇ ಇರಲಿಲ್ಲ. ಈತನ ನಡತೆಯ ಬಗ್ಗೆ ಯಾರಿಗೂ ಗೌರವವಿಲ್ಲ. ತನ್ನ ರಾಜ್ಯಭಾರದ ವಿಚಾರದಲ್ಲಿ ಈತನಿಗೆ ಕಿಂಚಿತ್ತೂ ಆಸಕ್ತಿಯಿಲ್ಲ ಎಂದೂ ಹೇಳಿದ್ದಾನೆ. ಜೊತೆಗೆ ರಾಜ್ಯದಲ್ಲಿ ಪ್ರಜೆಗಳ ಆಚಾರ ವ್ಯವಹಾರಗಳು, ಸಾಮಾಜಿಕ ಪದ್ಧತಿಗಳು ಇತ್ಯಾದಿ ವಿಷಯಗಳನ್ನು ಸಹ ಬರೆದಿದ್ದಾನೆ.

**********


Comments

Popular posts from this blog

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಸಾಹಿತ್ಯಾಧಾರಗಳು - Literary Sources

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧