ಗುಲಾಮಿ ಸಂತತಿಯ ಸ್ಥಾಪಕ: ಕುತುಬ್‌ ಉದ್ ದೀನ್‌ ಐಬಕ್

ಪೀಠಿಕೆ: ಏಳನೆ ಶತಮಾನದಲ್ಲಿ ಮಹಮ್ಮದ್‌ ಪೈಗಂಬರನು ಅರೆಬಿಯಾದಲ್ಲಿ ಇಸ್ಲಾಂ ಸ್ಥಾಪಿಸಿದನು. ಅವನ ಮರಣದ ನಂತರ ಏಳಿಗೆಗೆ ಬಂದ ಖಲೀಫರು ಮಧ್ಯ ಏಷ್ಯಾದ ಾಚೆಗೆ ಇಸ್ಲಾಂ ಪ್ರಚಾರಕ್ಕಾಗಿ ರಾಜ್ಯ ವಿಸ್ತರಣೆಯಲ್ಲಿ ತೊಡಗಿದರು. ಎಂಟನೆ ಶತಮಾನದಲ್ಲಿ ಸಿಂಧದ ಮೇಲೆ ನಡೆಸಿದ ಅರಬ್ಬರ ಆರಂಭಿಕ ದಾಳಿಗಳನ್ನು ಇಲ್ಲಿನ ಹಿಂದೂ ಅರಸರು ಯಶಸ್ವೀಯಾಗಿ ಹಿಮ್ಮೆಟ್ಟಿಸಿದರು. ನಂತರದಲ್ಲಿ, ಮಹಮದ್‌ ಬಿನ್‌ ಖಾಸಿಂ ಸಿಂಧ್‌ನ್ನು ಗೆದ್ದ ನಂತರ ಇಲ್ಲಿ ಅವರ ರಾಜ್ಯ ಸ್ಥಾಪನೆಗೊಂಡಿತು. ಆದರೆ, ಇಲ್ಲಿನ ಸಂಸ್ಕೃತಿ-ಪರಂಪರೆಗಳಿಗೆ ಶರಣಾದ ಅರಬ್ಬರು ಬೆರಗಾಗಿ ಇಲ್ಲಿಯವರೇ ಆದರು. ತದನಂತರ ಸಾ.ಶ.ವ. 1000 ದಿಂದ 1027 ರವರೆಗೆ ನಡೆದ ಘಸ್ನಿ ಮಹಮ್ಮದ್ದನ ದಾಳಿಗಳಿಂದ ಇಲ್ಲಿನ ಅಪಾರ ಸಂಪತ್ತು ಘಸ್ನಿಗೆ ಹರಿದುಹೋಯಿತು. ಘಸ್ನಿ ಮನೆತನದ ಪತನಾನಂತರ ಘೋರ್‌ ಪ್ರಾಂತ್ಯದಲ್ಲಿ ಏಳಿಗೆಗೆ ಬಂದ ಘೋರ್‌ ಸಂತತಿಯ ಮಹಮದ್‌ ಘೋರಿಯು ಸಾ.ಶ.ವ. 1175 ರಿಂದ 1205 ರವರೆಗೆ ನಡೆಸಿದ ಯುದ್ದಗಳಲ್ಲಿ ಜಯಗಳಿಸಿ ಭಾರತದಲ್ಲಿ ಶಾಶ್ವತವಾದ ಮುಸ್ಲಿಂ ಆಳ್ವಿಕೆಯನ್ನು ಸ್ಥಾಪಿಸಿದನು. ಆದರೆ ಇವನು ಆರಂಭದಲ್ಲಿ ಗುಜರಾತಿನ ಚಾಲುಕ್ಯರ ರಾಣಿ ನಾಯಕಿದೇವಿಯಿಂದ ಕಯದರ ಯುದ್ಧದಲ್ಲಿ 1178 ರಲ್ಲಿ ಮತ್ತು ಮೊದಲ ತರೈನ್‌ ಯುದ್ಧದಲ್ಲಿ 1191 ರಲ್ಲಿ ಚೌಹಾಣ್‌ ದೊರೆ ಪೃಥ್ವಿರಾಜನಿಂದ ಸೋಲು ಅನುಭವಿಸಿದ್ದನು ಎಂಬುದು ಗಮನಾರ್ಹ. ಘೋರಿಯು ಸಾ.ಶ.ವ. 1205 ರಲ್ಲಿ ಪಾಕಿಸ್ತಾನದ ದಮಯಕ್‌ ಬಳಿ ಕೊಲೆಗೀಡಾದಾಗ (ಕೋಕಾರರು ಅಥವಾ ಇಸ್ಮಾಯಿಲಿ ಮುಸ್ಲಿಂರಿಂದ ಎಂಬುದು ವಿದ್ವಾಂಸರ ಅಭಿಪ್ರಾಯ) ಅವನ ಪ್ರಾಂತ್ಯಾಧಿಕಾರಿಗಳಾಗಿದ್ದ ಗುಲಾಮರು ಸ್ವತಂತ್ರರಾಗಿ ಆಳತೊಡಗಿದರು. ಅವರಲ್ಲಿ ತಾಜುದ್ದೀನ್‌ ಎಲ್ಡೂಜ್‌ ಘಸ್ನಿಯಲ್ಲೂ, ನಾಸಿರುದ್ದೀನ್‌ ಕುಬಾಚ ಸಿಂಧ್‌ನಲ್ಲೂ ಮತ್ತು ಐಬಕ್‌ ಲಾಹೋರ್‌-ದೆಹಲಿಗಳಲ್ಲೂ ಆಳತೊಡಗಿದರು. ಹೀಗೆ ಅರಬ್ಬರು ಮತ್ತು ಗಸ್ನಿಯಿಂದ ಆರಂಭಗೊಂಡ ಇಸ್ಲಾಂ ದಾಳಿಗಳು ಘೋರಿಯು ಭಾರತದಲ್ಲಿ ರಾಜ್ಯ ಸ್ಥಾಪನೆಯೊಂದಿಗೆ ಹೊಸ ಅಧ್ಯಾಯವೊಂದಕ್ಕೆ ಮುನ್ನುಡಿ ಬರೆಯಿತು. ಗುಲಾಮಿ ಸಂತತಿಯ ಸ್ಥಾಪನೆ:- ಈ ಸಂತತಿಯು ಸಾ.ಶ.ವ. 1206 ರಿಂದ 1290ರ ವರೆಗೆ ಸುಮಾರು 84 ವರ್ಷಗಳ ಕಾಲ ದೆಹಲಿ ಗದ್ದುಗೆಯನ್ನು ಅಲಂಕರಿಸಿತ್ತು. ಈ ಮನೆತನದಲ್ಲಿ ಆಳ್ವಿಕೆ ನಡೆಸಿದ ಸುಲ್ತಾನರ ಹೆಸರು ಮತ್ತು ಕಾಲಾನುಕ್ರಮಣಿಕೆ ಕೆಳಕಂಡಂತಿದೆ:- I. ಗುಲಾಮಿ (ಮಾಮೆಲುಕ್) ಸಂತತಿ 1. ಕುತುಬ್ಉದ್-ದೀನ್ ಐಬಕ್ - ಸಾ.ಶ.ವ. 1206- 1210 2. ಅರಾಮ್‌ ಶಾ – ಸಾ.ಶ.ವ. 1210-1211 (8 months only) 3. ಶಂಶ್-ಉದ್ -ದೀನ್‌ ಇಲ್ತಮಷ್‌ - ಸಾ.ಶ.ವ. 1211-1236 4. ರಜಿಯಾ ಬೇಗಂ - ಸಾ.ಶ.ವ. 1236- 1240 5. ಮುಯಿಜ್‌-ಉದ್‌-ದೀನ್‌ ಬಹ್ರಾಮ್‌ ಶಾ – ಸಸ (1240 – 1242) 6. ಅಲಾ-ಉದ್-ದೀನ್‌ ಮಸೂದ್‌ ಶಾ – ಸಾ.ಶ.ವ. (1242 – 1246) 7. ನಾಸಿರುದ್ದೀನ್‌ ಮಹಮ್ಮದ್‌ - ಸಾ.ಶ.ವ. 1246-1266 8. ಘಿಯಾಸ್-ಉದ್-ದೀನ್ ಬಲ್ಬನ್‌ - ಸಾ.ಶ.ವ. 1266-1287 9. ಕೈಕುಬಾದ್‌ - ಸಾ.ಶ.ವ. 1287-1290 ಸ್ಥಾಪಕ:- ಇದರ ಸ್ಥಾಪಕನೆನಿಸಿದವನು ಕುತುಬ್‌ ಉದ್‌ ದೀನ್‌ ಐಬಕ್. ಮಧ್ಯ ಏಷ್ಯಾದ ನಿಶಾಪುರದ ವ್ಯಾಪಾರಿಯೊಬ್ಬನಿಂದ ಗುಲಾಮನಾಗಿ ಮಹಮದ್‌ ಘೋರಿಯಿಂದ ಕೊಂಡುಕೊಳ್ಳಲ್ಪಟ್ಟವನು. ನಂತರ ಹಂತ-ಹಂತವಾಗಿ ಉನ್ನತ ಸ್ಥಾನಕ್ಕೇರಿದನು.  ಐಬಕನು ಘೋರಿಯ ಗುಲಾಮನಾಗಿದ್ದರೂ, 1208 ರಲ್ಲಿ ಘೋರಿಯ ಉತ್ತರಾದಿಕಾರಿಯಾಗಿದ್ದ ಘಿಯಾಸುದ್ದೀನ್‌ ಮಹಮ್ಮದ್‌ ಕುತುಬ್‌ ಉದ್‌ ದೀನ್‌ ಐಬಕನನ್ನು ದಾಸ್ಯದಿಂದ ಬಿಡುಗಡೆ ಮಾಡಿದನು. ಆದರೆ, ಐಬಕನು ಸೇರಿದಂತೆ ಈ ಸಂತತಿಯಲ್ಲಿದ್ದ ಅನೇಕ ಸುಲ್ತಾನರು ಸ್ವತಂತ್ರ ತಂದೆ-ತಾಯಿಗಳಿಗೆ ಜನಿಸಿ, ಕಾರಣಾಂತರಗಳಿಂದ ಗುಲಾಮರಾದವರು. ಎಂತಲೇ ಅವರನ್ನು ಮಾಮೆಲುಕ್‌ ಅಥವಾ ಮ್ಯಾಮ್ಲುಕ್‌ ಎಂದು ಕರೆಯುವುದುಂಟು. ಮಾಮೆಲುಕ್‌ ಅಥವಾ ಮ್ಯಾಮ್ಲುಕ್ ಎಂದರೆ ಸ್ವತಂತ್ರ ತಂದೆ-ತಾಯಿಗಳಿಗೆ ಜನಿಸಿ ನಂತರ ಗುಲಾಮರಾದವರು ಎಂದರ್ಥ. ಕಾರಣ ಈ ಸಂತತಿಯನ್ನು “ಮಾಮೆಲುಕ್‌ ಅಥವಾ ಮ್ಯಾಮ್ಲುಕ್” ಸಂತತಿ ಎಂದು ಕರೆಯುವುದೂ ಉಂಟು. ಐಬಕನು ಘೋರಿಯ ಮರಣದ ಮೂರು ತಿಂಗಳ ನಂತರ ಸಾ.ಶ.ವ. 1206, ಜೂನ್‌ 24 ರಲ್ಲಿ ಪಟ್ಟಕ್ಕಕ್ಕೆ ಬಂದನು. ಅದಕ್ಕೆ ಮುನ್ನ ಅವನು ಅಮೀರ್‌ ಇ ಅಖರ್‌  ಅಂದರೆ  ಅಶ್ವಶಾಲೆಯ ಮೇಲ್ವಿಚಾರಕನಾಗಿದ್ದು, ನಂತರ ಸೇನೆಯ ಮುಖಂಡನಾದನು. ಘೋರಿಯ ಅನೇಕ ಯುದ್ಧಗಳಲ್ಲಿ ಅವನಿಗೆ ನಿಷ್ಠನಾಗಿ ಸಹಕರಿಸಿದನು. ಅವನ ಪಟ್ಟದ ಕಾಲಕ್ಕೆ ಮಲಿಕ್‌ ಮತ್ತು ಸಿಪಾಹ್‌ ಸಲಾರ್‌ ಎಂಬ ಬಿರುದುಗಳು ಮಾತ್ರ ಇದ್ದವು. ಅವನು ಸುಲ್ತಾನನಾದರೂ ತಾಂತ್ರಿಕವಾಗಿ ಇನ್ನೂ ಗುಲಾಮಗಿರಿಯಿಂದ ಬಿಡುಗಡೆ ಹೊಂದಿರದ ಕಾರಣ ಕುತ್ಬಾ ಮತ್ತು ನಾಣ್ಯ ಚಲಾವಣೆ ಇರಲಿಲ್ಲ. ಸಾ.ಶ.ವ. 1208 ರಲ್ಲಿ ಘೋರಿಯ ಪ್ರತಿನಿಧಿ ಘಿಯಾಸುದ್ದೀನ್‌ ಐಬಕನಿಗೆ ದಾಸ್ಯದಿಂದ ಬಿಡುಗಡೆ ನೀಡಿದನು.  ಸಾಧನೆಗಳು: ದೆಹಲಿಯ ಸುಲ್ತಾನನಾಗುವ ಮುನ್ನಿನ ಕಾಲದಲ್ಲಿ:- ಸಾ.ಶ.ವ. 1193 ರಲ್ಲಿ ದೆಹಲಿ ವಶ; ಅದೇ ವರ್ಷ ಹಂಸಿ, ಮೀರತ್‌ ರಣತಂಬೋರ್‌ ಮತ್ತು ಅಲಿಗಢಗಳನ್ನು ಗೆದ್ದನು. ಸಾ.ಶ.ವ. 1194 ರಲ್ಲಿ ಘೋರಿ ನಡೆಸಿದ ಕನೋಜದ ಜಯಚಂದ್ರನ ವಿರುದ್ಧದ ಚಾಂದ್ವಾರ್ ಯುದ್ಧದಲ್ಲಿ ನೆರವು; ಘೋರಿಗೆ ಜಯ ಲಭಿಸಿತು. ಸಾ.ಶ.ವ. 1196 ರಲ್ಲಿ ಗುಜರಾತಿನ ಇಮ್ಮಡಿ ಭೀಮದೇವನ ವಿರುದ್ಧ ಗೆಲುವು ಮತ್ತು ಅನಿಲ್ವಾಡದ ಲೂಟಿ. ಸಾ.ಶ.ವ. 1200 ರಲ್ಲಿ ಇಕ್ತಿಯಾರುದ್ದೀನ್ ಮಹಮದ್ ಖಿಲ್ಜಿಯು ಬಿಹಾರ ಮತ್ತು ಬಂಗಾಳಗಳನ್ನು ಗೆದ್ದು ಘೋರಿಯ ಭಾರತದಲ್ಲಿನ ರಾಜ್ಯಕ್ಕೆ ಸೇರಿಸಿದನು. ಸಾ.ಶ.ವ. 1202 ರಲ್ಲಿ ಬುಂದೇಲಖಂಡದಲ್ಲಿದ್ದ ಖಾಲಿಂಜರ್‌ ಕೋಟೆಯನ್ನು ಗೆದ್ದನು. ನಂತರ ಮೆಹೋಬ ಮತ್ತು ಬದಾಯೂನ್‌ ನಗರಗಳನ್ನು ವಶಪಡಿಸಿಕೊಂಡನು. ಸುಲ್ತಾನನಾದ ನಂತರದ ಸಾಧನೆಗಳು:  ಘೋರಿಯ ಮರಣಾನಂತರದಲ್ಲಿ ತಾಜುದ್ದೀನ್‌ ಎಲ್ಡೂಜ್‌ ಮತ್ತು ನಾಸಿರುದ್ದೀನ್‌ ಕುಬಾಚರೊಂದಿಗೆ ನಡೆದ ಅಧಿಕಾರದ ಅಂತಃಕಲಹದಲ್ಲಿ ಭಾರತದಲ್ಲಿನ ಪ್ರದೇಶಗಳ ಮೇಲಿನ ಒಡೆತನವನ್ನು ಗಳಿಸಿಕೊಂಡನು. . ಜೊತೆಗೆ ಎಲ್ಡೂಜನ ಮಗಳನ್ನು ವಿವಾಹವಾಗಿದ್ದನು. ಕುಬಾಚನಿಗೆ ತನ್ನ ಮಗಳನ್ನು ಕೊಟ್ಟು ವೈವಾಹಿಕ ಸಂಬಂಧ ಬೆಳೆಸಿದ್ದನು. ಇಲ್ತಮಶನಿಗೂ ಸಹಾ ಮತ್ತೊಬ್ಬ ಮಗಳನ್ನು ಕೊಟ್ಟಿದ್ದನು. ಆದರೆ, ಎಲ್ಡೂಜ್‌ ತಾನೇ ಘೋರಿಯ ಉತ್ತರಾಧಿಕಾರಿ ಎಂದು, ಭಾರತದ ಒಡೆತನ ತನಗೇ ಸೇರಿದ್ದು ಎಂಬ ಭಾವನೆಯಿಂದ ಇಲ್ಲಿನ ಪ್ರದೇಶಗಳ ಮೇಲೆ 1209 ರಲ್ಲಿ ದಾಳಿ ನಡೆಸಿದ್ದನು. ಸಿಂಧದ ಮೇಲೆ ದಾಳಿ ನಡೆಸಿ ಐಬಕ್‌ನ ಅಳಿಯ ನಾಸಿರುದ್ದೀನ್‌ ಕುಬಾಚನನ್ನು ಅಲ್ಲಿಂದ ಹೊರಗಟ್ಟಿದನು. ಐಬಕ್‌ ಅವನನ್ನು ಸಿಂಧ್‌ನಿಂದ ಓಡಿಸಿದ್ದಲ್ಲದೇ ಅವನ ರಾಜಧಾನಿ ಘಸ್ನಿಯಿಂದ ಓಡಿಸಿ ೪೦ ದಿನಗಳ ಕಾಲ ಘಸ್ನಿ ನಗರವನ್ನು ತನ್ನ ವಶದಲ್ಲಿಟ್ಟುಕೊಂಡನು ಮರಣ:- ನವೆಂಬರ್‌ 1210 ರಲ್ಲಿ ಚೌಗಾನ್‌ ಆಟವಾಡುತ್ತಿದ್ದಾಗ ಕುದುರೆಯಿಂದ ಜಾರಿ ಬಿದ್ದು ಲಾಹೋರ್‌ನಲ್ಲಿ ಮರಣ ಹೊಂದಿದನು. ಅವನನ್ನು ಅಲ್ಲಿಯೇ ಸಮಾದಿ ಮಾಡಲಾಯಿತು.  ವ್ಯಕ್ತಿತ್ವದ ಮತ್ತು ಸಾಧನೆಗಳ ವಿಶ್ಲೇಷಣೆ:-:-  ಕುತುಬ್‌ನು ಗುಲಾಮನಾದರೂ ನಿಷ್ಠಾವಂತ ಮತ್ತು ಧೈರ್ಯಶಾಲಿಯಾಗಿದ್ದನು. ಕುರೂಪಿಯಾದರೂ ಉದಾರಿ. ಇವನಿಗೆ ಅವನ ದಾನಶೀಲತೆಯ ಕಾರಣದಿಂದ “ಲಾಕ್‌ಬಕ್ಷ್” ಎಂಬ ಬಿರುದಿತ್ತು. ಕಷ್ಟಸಹಿಷ್ಣುವಾಗಿದ್ದನು. ಗುಲಾಮ ಸ್ಥಾನದಿಂದ ಸುಲ್ತಾನನ ಪದವಿಗೆ ತನ್ನ ಸ್ವಸಾಮರ್ಥ್ಯದಿಂದಲೇ ಏರಿದವನು. ಸಂಪ್ರದಾಯಸ್ಥ ಮುಸ್ಲಿಂನಾಗಿದ್ದ ಇವನು ಪರಧರ್ಮಸಹಿಷ್ಣುವಲ್ಲ. ದೆಹಲಿಯಲ್ಲಿ ಕುವತ್‌ ಉಲ್‌ ಇಸ್ಲಾಂ  ಮತ್ತು ಅಜ್ಮೀರ್‌ನಲ್ಲಿ  ಕಟ್ಟಿಸಿದ ಆದಾ ದಿನ್‌ ಕಾ ಜೋಂಪ್ರ ಮಸೀದಿಗಳಿಗೆ ಜೈನ ಮತ್ತು ಹಿಂದೂ ದೇವಾಲಯಗಳ ಅವಶೇಷಗಳನ್ನು ಬಳಸಿದನು. ಭಾರತದಲ್ಲಿ ಶಾಶ್ವತ ಇಸ್ಲಾಂ ಆಡಳಿತವನ್ನು ಸಥಾಪಿಸುವಲ್ಲಿ ಘೋರಿಗೆ ಪ್ರಬಲ ಸಹಾಯಕನಾಗಿ ಪಾತ್ರ ನಿರ್ವಹಿಸಿದನು.    ಐಬಕನ ನಂತರ ಅದಕ್ಷನಾಗಿದ್ದ ಅರಾಮ್‌ ಶಾ ಎಂಬುವನು ಕೇವಲ ಎಂಟು ತಿಂಗಳ ಆಡಳಿತ ನಡೆಸಿದನು. ದೆಹಲಿ ಸರದಾರರ ಆಹ್ವಾನದ ಮೇರೆಗೆ ಐಬಕನ ಅಳಿಯನಾಗಿದ್ದ ಇಲ್ತಮಷ್‌ನು ದೆಹಲಿ ಬಳಿಯ ಜೂಡ್‌ ಮೈದಾನದಲ್ಲಿ ಆರಾಮ್‌ ಶಾನನ್ನು ಸೋಲಿಸಿ ದೆಹಲಿ ಸಿಂಹಾಸನವೇರಿದನು.


**********

Comments

Popular posts from this blog

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧

ಸಾಹಿತ್ಯಾಧಾರಗಳು - Literary Sources